|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ನಾಲ್ಕನೆಯ ಉಲ್ಲಾಸ

ಶ್ರೀವ್ಯಾಸರಾಜಯತಿಸಾರ್ವಭೌಮರು

೩೯. ಶ್ರೀರಂಗದ ವಿವಾದ ಪರಿಹಾರ

ಶ್ರೀರಂಗವು ದಕ್ಷಿಣಭಾರತದಲ್ಲಿ ಪ್ರಸಿದ್ಧವಾದ ಪವಿತ್ರ ಕ್ಷೇತ್ರಗಳಲ್ಲೊಂದು. ಆ ಪ್ರಾಂತ್ಯವು ಕನ್ನಡ ಸಾಮಾಜ್ಯದ ಸಾಮಂತ ರಾಜ್ಯವಾಗಿದ್ದು, ಕನ್ನಡನಾಡಿನ ಅಧಿಕಾರಕ್ಕೆ ಒಳಪಟ್ಟಿದ್ದು, ಮುಂದೆ ವಿಜಯನಗರದ ಪತನವಾದ ಮೇಲೆ ಮಧುರೆಯ ದೊರೆಗಳ ಆಡಳಿತಕ್ಕೆ ಸೇರಿತ್ತು. ಅದು ಈಗ ತಮಿಳುನಾಡಿನ ಒಂದು ಭಾಗವಾಗಿದೆ. ಕನ್ನಡನಾಡಿನಲ್ಲಿ ಆವಿರ್ಭವಿಸಿ ನಾಡನ್ನು ಪಾವನಗೊಳಿಸುತ್ತಾ ಮುಂದುವರೆದು ಕಾವೇರೀ ನದಿಯು ತಮಿಳುನಾಡನ್ನು ಪವಿತ್ರಗೊಳಿಸುತ್ತಾ ಶ್ರೀರಂಗದ ಸನಿಹದಲ್ಲಿ ಎರಡು ಭಾಗವಾಗಿ ಶ್ರೀರಂಗನಾಥನನ್ನು ಮಾಲಾಕಾರವಾಗಿ ಬಳಸಿ ಮತ್ತೆ ಒಂದಾಗಿ ಹರಿದು ಸಮುದ್ರ ಸೇರುವಳು. ಇಂತು ಪವಿತ್ರ ಕಾವೇರೀ ನದಿಯಿಂದ ರಾರಾಜಿಸುವ ಶ್ರೀರಂಗ ಕ್ಷೇತ್ರದ ಶ್ರೀರಂಗನಾಥನು ತಿರುಪತಿಯ ಶ್ರೀನಿವಾಸನಂತೆ ಸಕಲ ಭಕ್ತರ ಆರಾಧ್ಯದೈವವಾಗಿದ್ದಾನೆ.

ಶ್ರೀರಂಗವು ತಿರುಪತಿಯಂತೆ ಶ್ರೀವೈಷ್ಣವರಿಗೆ ಪ್ರಾಧಾನ್ಯವಿರುವ ಕ್ಷೇತ್ರವೆನಿಸಿದೆ. ಶ್ರೀರಂಗನಾಥನ ಆಲಯವನ್ನು ಬಳಸಿ ಅನೇಕ ಪ್ರಾಕಾರಗಳೂ, ಗೋಪುರಗಳೂ ರಾಜಿಸುತ್ತಿದ್ದು, ನಯನಮನೋಹರವಾಗಿ ಎಲ್ಲ ಭಕ್ತರನ್ನೂ ಆಕರ್ಷಿಸುವುದು. 

ಶ್ರೀರಂಗಕ್ಕೆ ಸುಮಾರು ನಾಲ್ಕು ಮೈಲಿ ದೂರದಲ್ಲಿ ಶ್ರೀಜಂಬುಕೇಶ್ವರ ಕ್ಷೇತ್ರವಿದೆ. ಅಲ್ಲಿ ಶ್ರೀಮಹಾರುದ್ರದೇವರು ವಿರಾಜಿಸುತ್ತಿದ್ದಾರೆ. ಈ ಕ್ಷೇತ್ರವಾ ಅತಿ ಪ್ರಾಚೀನವಾಗಿದ್ದು ಅಲ್ಲಿ ಶೈವರೇ ಹೆಚ್ಚಾಗಿ ನಡೆದುಕೊಳ್ಳುವುದರಿಂದ ಅದು ಶೈವಕ್ಷೇತ್ರವೆಂದು ಖ್ಯಾತಿಗಳಿಸಿದೆ. 

ಈ ಎರಡು ಕ್ಷೇತ್ರ ನಿವಾಸಿಗಳೂ, ಶ್ರೀವೈಷ್ಣವಮತೀಯರೂ ಮೊದಲಿನಿಂದಲೂ ಸ್ನೇಹ-ಸೌಹಾರ್ದಗಳಿಂದ ವರ್ತಿಸುತ್ತಾ, ಶಾಂತಿಯಿಂದ ಜೀವಿಸುತ್ತಾ ತಮ್ಮ ತಮ್ಮ ಆಧ್ಯಾತ್ಮ ಜೀವನವು ಸುಗಮವಾಗಿ ಜರುಗುವಂತೆ ಸಾಧನೆ ಮಾಡಿಕೊಳ್ಳುತ್ತಿದ್ದರು. ಇಂಥ ಸ್ನೇಹಕ್ಕೆ ಕೆಲ ಕಿಡಿಗೇಡಿಗಳ ಭಂಗ ತಂದು, ಅವರ ಕುತಂತ್ರದಿಂದಾಗಿ ಶ್ರೀವೈಷ್ಣವ-ಶೈವಮತೀಯರಲ್ಲಿ ವಾದ-ವಿವಾದ-ವಿದ್ವೇಷದ ಹೊಗೆಯಾಡಲಾರಂಭಿಸಿ ಬರಬರುತ್ತಾ ಅದು ಮಿತಿಮೀರಿ ಪರಸ್ಪರ ಹೊಡೆದಾಟ, ಹಿಂಸೆ, ಮನೆ-ಮನೆಗಳಿಗೆ ಬೆಂಕಿಹಚ್ಚುವಷ್ಟರ ಮಟ್ಟವನ್ನು ತಲುಪಿ ಆ ಪ್ರಾಂತ್ಯದಲ್ಲಿ ಜನರಿಗೆ ನೆಮ್ಮದಿಯೇ ಇಲ್ಲದಂತಾಗುವ ಪರಿಸ್ಥಿತಿಯುಂಟಾಯಿತು. ಶ್ರೀರಂಗನಾಥನ ಉತ್ಸವಕ್ಕೆ ಶೈವರೂ ಶ್ರೀಜಂಬುಕೇಶ್ವರನ ಉತ್ಸವಕ್ಕೆ ಶ್ರೀವೈಷ್ಣವರೂ ಅಡ್ಡಿಮಾಡಹತ್ತಿದರು. ಈ ದ್ವೇಷದ ಮೂಲಕಾರಣವಿಷ್ಟೇ; ಈ ಪ್ರಾಂತ್ಯಕ್ಕೆ “ಅತಿಪ್ರಾಚೀನ ಹಾಗೂ ಮೂಲ ಜಂಬುಕೇಶ್ವರ, ಅವನೇ ಶ್ರೀರಂಗ ಕ್ಷೇತ್ರಾಧಿಪತಿಯು. ಶ್ರೀವೈಷ್ಣವರು ಜಂಬುಕೇಶ್ವರನ ನೆಲವನ್ನು ಆಕ್ರಮಿಸಿಕೊಂಡಿದ್ದಾರೆ. ಶ್ರೀರಂಗವೆಲ್ಲಾ ಜಂಬುಕೇಶ್ವರನ ಸ್ವತ್ತಾದುದರಿಂದ ಅದೆಲ್ಲಾ ಅವನಿಗೇ ಸೇರಬೇಕು ಎಂದು ಶೈವರೂ, ಯುಗಯುಗಗಳಿಂದ ಶ್ರೀರಂಗವು ಶ್ರೀವಿಷ್ಣುಕ್ಷೇತ್ರವಾಗಿದೆ. ಈ ಕ್ಷೇತ್ರಕ್ಕೂ ಜಂಬುಕೇಶ್ವರನಿಗೂ ಸಂಬಂಧವೇ ಇಲ್ಲ, ಶೈವರು ಉಪದ್ವಾ ಪತನದಿಂದ ತಮ್ಮದಲ್ಲದ ಹಕ್ಕನ್ನು ಸಾಧಿಸಲು ಶ್ರೀರಂಗನಾಥನ ಎಲ್ಲೆಯನ್ನು ಅಲ್ಲಗಳೆಯುತ್ತಿದ್ದಾರೆ. ಶ್ರೀರಂಗವೆಲ್ಲಾ ರಂಗನಾಥನ ಸ್ವತ್ತು” ಎಂದು ಶ್ರೀವೈಷ್ಣವರೂ ಬಡಿದಾಡುತ್ತಿದ್ದುದೇ ಈ ದ್ವೇಷದ ಮೂಲ. 

ಹೀಗೆ ಆ ಪ್ರಾಂತ್ಯದಲ್ಲಿ ಪ್ರಾರಂಭವಾದ ಮತೀಯ ಕಲಹ, ವಿದ್ವೇಷಗಳು ಕ್ರಮೇಣ ಕನ್ನಡ ಸಾಮ್ರಾಜ್ಯದಲ್ಲೆಲ್ಲಾ ಹರಡಲಾರಂಭಿಸಿ, ಆಯಾ ಮತೀಯ ಅಭಿಮಾನಿಗಳು, ಆಯಾ ಪಕ್ಷಗಳನ್ನು ಸಮರ್ಥಿಸುತ್ತಾ ಬಂದದ್ದರಿಂದ ಇದೊಂದು ದೊಡ್ಡ ಸಮಸ್ಯೆಯೇ ಆಗಿ ಪರಿಣಮಿಸಿತು. ಹಿಂದೂಧರ್ಮ ಸ್ಥಾಪನೆ, ಸಕಲ ಮತಧರ್ಮಗಳಿಗೂ ಸಮಾನಾವಕಾಶ. ಗೌರವಗಳಿದ್ದ ಕನ್ನಡ ಸಾಮ್ರಾಜ್ಯದಲ್ಲಿ ಈ ಮತೀಯ ವಿದ್ವೇಷ ಬೆಳೆಯಲಾರಂಭಿಸಿದ್ದರಿಂದ ಸರ್ವಮತಸಹಿಷ್ಣುಗಳೂ, ಎಲ್ಲ ಧರ್ಮಗಳಿಗೆ ಆಶ್ರಯದಾತರೂ, ರಕ್ಷಕರೂ ಆಗಿದ್ದ ವಿಜಯನಗರದ ಸಾಮ್ರಾಟರು ಈ ವಿವಾದವನ್ನು ಬಗೆಹರಿಸುವುದು ಸಾಮ್ರಾಜ್ಯದ ಹಿತದೃಷ್ಟಿಯಿಂದ ಅತ್ಯವಶ್ಯವಾಗಿದ್ದುದರಿಂದ ಇದೆಲ್ಲವನ್ನೂ ಮನಗಂಡ ಸಾಮ್ರಾಟ್, ರಾಜರುಗಳು ಹಾಗೂ ಕ್ಷಮಾಧಿಪತಿಗಳೂ ಶ್ರೀರಂಗಕ್ಕೆ ಬರಬೇಕಾಯಿತು. 

ತುಳುವ ನರಸನಾಯನು ಶ್ರೀರಂಗಕ್ಕೆ ಬಂದಕೂಡಲೇ ಶ್ರೀರಂಗ, ಜಂಬುಕೇಶ್ವರದ ಪ್ರಮುಖ ಜನರನ್ನೂ, ಉಭಯ ದೇವಾಲಯಗಳ ಧರ್ಮದರ್ಶಿಗಳು, ಅರ್ಚಕರನ್ನೂ ಕರೆಯಿಸಿಕೊಂಡು ಅವರೊಡನೆ ಮಾತುಕತೆ ನಡೆಸಿದನು. ಅದರಿಂದ ಪ್ರಯೋಜನವಾಗದಿರಲು ಅವರೆಲ್ಲರನ್ನೂ ಕರೆದುಕೊಂಡು ಬಂದು ತಮ್ಮರಾಯ ಮತ್ತು ಶ್ರೀವ್ಯಾಸರಾಜರ ಭೇಟಿ ಮಾಡಿಸಿ, ಎಲ್ಲ ವಿಚಾರಗಳನ್ನೂ ವಿಜ್ಞಾಪಿಸಿ “ಮಹಾಪ್ರಭುಗಳು, ರಾಜಗುರುಗಳು ಈ ವಿವಾದವನ್ನು ಉಭಯರಿಗೂ ಸಮಾಧಾನವಾಗುವ ರೀತಿಯಲ್ಲಿ ಪರಿಹರಿಸಬೇಕು” ಎಂದು ಕೋರಿದನು. 

ಚಕ್ರವರ್ತಿಯ ಸಮಕ್ಷ ಶ್ರೀವ್ಯಾಸರಾಜರು ಉಭಯಮತೀಯರ, ಪುರಪ್ರಮುಖರ ಅಹವಾಲನ್ನು ಸಾವಧಾನವಾಗಿ ವಿಚಾರಿಸಿ, ಎಲ್ಲರನ್ನೂ ಕುರಿತು ಹೀಗೆ ಹೇಳಿದರು - “ಧರ್ಮಾಭಿಮಾನಿಗಳೇ, ನಿಮ್ಮೆಲ್ಲರ ಅಭಿಪ್ರಾಯವೂ ತಿಳಿಯಿತು. ನಿಮ್ಮಲ್ಲಿ ಉಂಟಾಗಿರುವ ಈ ಭಿನ್ನಾಭಿಪ್ರಾಯ, ವಾದ-ವಿವಾದಗಳಿಗೆ ಮೂಲವು ಉಭಯಕ್ಷೇತ್ರಗಳ ಎಲ್ಲೆಯನ್ನು ಕುರಿತಾಗಿದೆ. ಇದು ದೈತಾತ-ವಿಶಿಷ್ಟಾದ್ರೆತ ವಾದವಲ್ಲ.

ಆದ್ದರಿಂದ ಇದನ್ನು ಶಾಂತರೀತಿಯಿಂದ, ಪರಸ್ಪರ ಸಹಕಾರದಿಂದ ಪರಿಹರಿಸಿಕೊಳ್ಳಲು ಸಾಧ್ಯವಿದೆ. ನಿಮ್ಮ ಕಲಹವನ್ನು ಪರಿಹರಿಸಿ ಈ ಭಾಗದಲ್ಲಿ ಶಾಂತಿಸ್ಥಾಪನೆ ಮಾಡಲೆಂದು ಖುದ್ದಾಗಿ ಸಾರ್ವಭೌಮರೇ ಬಂದಿದ್ದಾರೆ. ಈ ಸಮಯದಲ್ಲಿ ನಿಮಗೆ ಮಾತ್ರವಲ್ಲ, ಸಮಗ್ರ ಹಿಂದೂ ಜನಾಂಗಕ್ಕೂ ನಾವುಕೆಲವು ಹಿತವಚನ ಹೇಳಬಯಸಿದ್ದೇವೆ. 

ಪುಣ್ಯಭೂಮಿಯಾದ ಭಾರತ ಅನಾದಿಕಾಲದಿಂದ ಧರ್ಮಭೂಮಿಯೆನಿಸಿ ಸಕಲ ಭಾರತೀಯರಿಗೂ ಪವಿತ್ರ ದೇಶವಾಗಿದೆ. ಆಧ್ಯಾತ್ಮ ತಳಹದಿಯುಳ್ಳ ನಮ್ಮ ದೇಶ ಜಗತ್ತಿಗೆ ಆದರ್ಶವಾಗಿದೆ. ವಿವಿಧ ವಿದ್ಯೆಗಳು, ವೇದ, ಉಪನಿಷತ್ತು, ಪುರಾಣ, ಗೀತಾದಿಶಾಸ್ತ್ರಗಳು ನಮಗೆ ಪವಿತ್ರ ಗ್ರಂಥಗಳಾಗಿವೆ. ಅವೆಲ್ಲದರ ಉಪದೇಶವೂ ಭಗವಂತನ ಸಾಕ್ಷಾತ್ಕಾರವೇ ಆಗಿದೆ. ಸದಾಚಾರಗಳ ದ್ವಾರಾ ಆಮ್ಮೋನ್ನತಿಗಾಗಿ ಸತ್ಯ, ಅಹಿಂಸೆ, ತಪಸ್ಸು, ಸ್ವಾಧ್ಯಾಯ ಸದ್ಧರ್ಮಾಚರಣೆಗಳಿಂದ ಸಾಧನೆ ಮಾಡಿಕೊಂಡು ಉದ್ಧತ ರಾಗುವುದೇ ಆಗಿದೆ. ಭಾರತದಲ್ಲಿ ಅನೇಕ ಮತ-ಧರ್ಮ-ತತ್ರೋಪಾಸಕರಿದ್ದಾರೆ. ಇವರೆಲ್ಲರೂ ವೇದಮತಾನುಯಾಯಿಗಳಾದರು. ಅನೇಕ ಮತಧರ್ಮ, ತತ್ವಗಳಿದ್ದರೂ ನಮ್ಮ ಪ್ರಾಚೀನರು ಸ್ನೇಹ-ಸೌಹಾರ್ದದಿಂದ ಜೀವಿಸುತ್ತಾ ತಮ್ಮ ತಮ್ಮ ಉನ್ನತಿಗಾಗಿ ಶ್ರಮಿಸುತ್ತಾ ಬಂದು, ಭಾರತವು ಸರ್ವಧರ್ಮ ಸಹಿಷ್ಣುತೆಗೆ ಜಗತ್ತಿನಲ್ಲಿ ಖ್ಯಾತಿ ಪಡೆಯುವಂತೆ ಮಾಡಿ ಅವರರಾಗಿದ್ದಾರೆ. ಮತ, ಧರ್ಮ, ತತ್ವಗಳು ನಮ್ಮಲ್ಲಿ ಅನೇಕ ಬಗೆಯಾಗಿದ್ದರೂ, ತಾತ್ವಿಕ ಭಿನ್ನಾಭಿಪ್ರಾಯಗಳಿದ್ದರೂ ಭಾರತೀಯರೆಲ್ಲರೂ ಆರ್ಯ ಹಿಂದೂ ಧರ್ಮಾಭಿಮಾನಿಗಳೇ ಆಗಿದ್ದು ಎಲ್ಲರೂ ಆವೊಂದು ಧರ್ಮವನ್ನು ನಂಬಿ ಬಾಳುತ್ತಿದ್ದಾರೆ. ಈ ತಾತ್ವಿಕ ಭಿನ್ನಾಭಿಪ್ರಾಯಗಳು ಎಂದೂ ಜನರ ಜೀವನಕ್ಕೆ ಅಡ್ಡಿಬಂದಿಲ್ಲ! ಸಹಸ್ರಾರು ವರ್ಷಗಳಿಂದಲೂ ವಿವಿಧ ಮತಧರ್ಮ ತಮ್ಮೋಪಾಸಕರಿದ್ದರೂ ಆಸೇತು ಹಿಮಲ ಪರ್ಯಂತವಾಗಿ ನಮ್ಮ ದೇಶದಲ್ಲಿ ಒಂದೇ ಬಗೆಯಾದ ಸಂಸ ತಿ, ಹಬ್ಬಹುಣ್ಣಿಮೆಗಳು ಓತಪ್ರೋತವಾಗಿ ನಡೆದುಬರುತ್ತಿರುವುದನ್ನು ನಾವು ವಿವೇಚಿಸಿದಾಗ ನಮ್ಮ ಈ ಧರ್ಮಭೂಮಿಯ ಮಹತ್ವ, ವೈಶಿಷ್ಟ್ಯಗಳು ವ್ಯಕ್ತವಾಗದಿರದು. ನಮ್ಮ ಹಿಂದಿನವರು ಪರಸ್ಪರ ಪ್ರೇಮ, ಸಹಕಾರ, ಮಾನವೀಯತೆಗಳಿಂದ ಅಣ್ಣ-ತಮ್ಮಂದಿರಂತೆ ಬಾಳಿ ಕೀರ್ತಿ ಗಳಿಸಿದರು. ಅವರ ಆದರ್ಶವನ್ನು ನಾವೆಲ್ಲರೂ ಅನುಸರಿಸಿದಲ್ಲಿ ನಮ್ಮೆಲ್ಲರ ಅಭ್ಯುದಯವಾಗುವುದರಲ್ಲಿ ಸಂದೇಹವಿಲ್ಲ. ಇಂಥ ಪವಿತ್ರ ನೆಲದ ಮಕ್ಕಳಾದ, ನೀವು ಕೇವಲ ಒಂದು ಎಲ್ಲೆಗಾಗಿ ಕಾದಾಡುತ್ತಿರುವುದನ್ನು ಕಂಡು ನಮಗೆ ಅಪಾರ ವೇದನೆಯಾಗುತ್ತಿದೆ. 

ಹಿಂದೆ ಪರಸ್ಪರ ದ್ವೇಷ, ಅಸಹಕಾರ, ಸ್ವಾರ್ಥಗಳಿಂದಾಗಿ ಭಾರತೀಯ ಆಳರಸರು ಒಗ್ಗಟ್ಟನ್ನು ಕಳೆದುಕೊಂಡದ್ದರಿಂದ ವಿದೇಶೀಯರು, ವಿಧರ್ಮಿಯರು ಈ ಪವಿತ್ರ ನಾಡಿನ ಮೇಲೆ ದಾಳಿ ಮಾಡಿ ದೇಶವನ್ನಾಕ್ರಮಿಸಿದ್ದು ಮಾತ್ರವಲ್ಲದೆ - ನಮ್ಮ ಪವಿತ್ರವಾದ ಗುಡಿ-ಗುಂಡಾರ, ಗ್ರಂಥ-ಗೋವುಗಳನ್ನು ಧ್ವಂಸ ಮಾಡುವಂತಾದುದನ್ನು ನೆನಪಿಗೆ ತಂದುಕೊಳ್ಳಿರಿ! ಅಂದಿನ ಅನೈಕ್ಯಮತ್ಯದ ಫಲವಾಗಿ ಸೋಮನಾಥ, ಕಾಶಿ, ಶ್ರೀರಂಗ, ಕಂಚಿ ಮುಂತಾದ ಪವಿತ್ರ ಕ್ಷೇತ್ರಗಳು - ಭಗವದ್ವಿಗ್ರಹಗಳು ವಿಧರ್ಮಿಯರ ದಾಳಿಗೆ ತುತ್ತಾಗಬೇಕಾಯಿತು. 

ನಮ್ಮ ಈ ಪವಿತ್ರ ಶ್ರೀರಂಗವನ್ನು ಯವನರು ಆಕ್ರಮಿಸಿ, ದೇವಾಲಯ, ಹಿಂದೂಜನರನ್ನು ನಾಶಮಾಡುತ್ತಿದ್ದಾಗ ನಮ್ಮ ಕನ್ನಡ ಸಾಮ್ರಾಜ್ಯಾಧೀಶರ ಅಪ್ಪಣೆಯಂತೆ ಕಪಿಲದೇವರು, ಗೋಪಣ್ಣನೆಂಬ ಸೈನ್ಯಾಧೀಶನನ್ನು ಸೈನ್ಯದೊಡನೆ ಕಳುಹಿಸಿ, ಇಲ್ಲಿಂದ ಯವನರನ್ನು ಬಡಿದೋಡಿಸಿ, ತಿರುಪತಿಯಲ್ಲಿ ರಹಸ್ಯವಾಗಿಟ್ಟಿದ್ದ ಶ್ರೀರಂಗನಾಥನನ್ನು ಮತ್ತೆ ಇಲ್ಲಿಗೆ ತರಿಸಿ ಪ್ರತಿಷ್ಠಾಪನೆ ಮಾಡಿಸಿ, ದೇವಾಲಯಾದಿಗಳನ್ನು ಅಭಿವೃದ್ಧಿಪಡಿಸಿ ಈ ಮಹಾಕ್ಷೇತ್ರವನ್ನು ಉಳಿಸಿಕೊಟ್ಟಿದನ್ನು ಜ್ಞಾಪಿಸಿಕೊಳ್ಳಿರಿ! ನಿಮ್ಮ ಈ ಪರಸ್ಪರ ಕಲಹ, ಬಡಿದಾಟ, ವಿದ್ವೇಷಗಳಿಂದ ಮತ್ತೊಮ್ಮೆ ಈ ಕ್ಷೇತ್ರವು ವಿಧರ್ಮೀಯರ ದಾಳಿಗೆ ತುತ್ತಾಗುವಂತೆ ಮಾಡಬೇಡಿರಿ. ಸಾಮ್ರಾಜ್ಯದಲ್ಲಿ ಪ್ರಜೆಗಳು ಪರಸ್ಪರ ಸ್ನೇಹ, ಸಹಕಾರದಿಂದ ಬಾಳದೆ ವಿದ್ವೇಷದ ಅಗ್ನಿಜ್ವಾಲೆ ವಿಜೃಂಭಿಸಿದರೆ ಸಾಮ್ರಾಜ್ಯ ನಿರ್ವಹಣೆ ಕಷ್ಟವಾಗುವುದು ಮಾತ್ರವಲ್ಲ; ಸಾಮ್ರಾಜ್ಯ ಶತ್ರುಗಳಾದ ವಿಧರ್ಮಿಯರಿಗೆ ಅದು ಅನುಕೂಲ ಪರಿಸ್ಥಿತಿಯಾಗಿ ಮಾರ್ಪಟ್ಟು ಸಾಮ್ರಾಜ್ಯದ ಮೇಲೆ ಧಾಳಿ ಮಾಡಲು ಸಹಾಯಕವಾಗಬಹುದು. ಆದ್ದರಿಂದ ಸಮಗ್ರ ಸಾಮ್ರಾಜ್ಯದ ಮತ್ತು ಭಾರತದೇಶದ ಹಿತದೃಷ್ಟಿಯಿಂದ ನೀವು ಶ್ರೀವೈಷ್ಣವ-ಶೈವಪಂಥೀಯರಾಗಿದ್ದರೂ, ನಿಮ್ಮ ಎಲ್ಲದ್ವೇಷ, ಭಿನ್ನಾಭಿಪ್ರಾಯಗಳನ್ನೂ ತ್ಯಜಿಸಿ, ಸ್ನೇಹ-ಸೌಹಾರ್ದ-ಸಹಕಾರ-ತ್ಯಾಗಗಳಿಂದ ಅಣ್ಮ-ತಮ್ಮಂದಿರಂತೆ ಬಾಳಿ ಎಲ್ಲರಿಗೂ ಮಾರ್ಗದರ್ಶಕರಾಗಬೇಕೆಂದು ನಾವು ಅಪೇಕ್ಷಿಸುತ್ತೇವೆ” ಎಂದು ಅಪ್ಪಣೆ ಕೊಡಿಸಿದರು. 

ಶ್ರೀಯವರ ಉಪದೇಶ ಎಲ್ಲರ ಮೇಲೆಯೂ ವಿಶೇಷ ಪರಿಣಾಮವನ್ನುಂಟುಮಾಡಿತು. ತಾವು ಒಂದು ಸಣ್ಣ ವಿಚಾರಕಕಾಗಿ ಹೀಗೆ ಬಡಿದಾಡುವುದು ಸರಿಯಲ್ಲವೆನಿಸಿದರೂ ಯಾರೂ ಸೋಲಲು ಮುಂದಾಗಲಿಲ್ಲ. ಈ ವಿದ್ವೇಷವು ಪರಿಹಾರವಾಗಬೇಕೆಂದು ಉಭಯ ಪಕ್ಷದವರಿಗೆ ಇಷ್ಟವಿದೆಯೆಂಬುದು ಅವರ ಮುಖಭಾವದಿಂದ ವ್ಯಕ್ತವಾಯಿತು. ಆದರೆ ಯಾರಿಗೂ ಪರಿಹಾರ ಮಾರ್ಗ ಗೋಚರಿಸಲಿಲ್ಲ. ಉಭಯ ಪಕ್ಷಗಳ ಪರವಾಗಿ ನಾಲ್ಕಾರು ಜನ ಮುಂದೆ ಬಂದು “ಗುರುವರ್ಯರೇ, ತಮ್ಮ ಉಪದೇಶದಿಂದ ಧನ್ಯರಾದೆವು. ತಾವು ಮಹಾತ್ಮರು. ಎಲ್ಲರ ಹಿತವನ್ನೂ ಬಯಸುವ ಶ್ರೀರುದ್ರದೇವರನ್ನು ತೆಗಳುವವರಲ್ಲ. ನಮ್ಮ ಸಿದ್ಧಾಂತದಲ್ಲಿ ಶ್ರೀರುದ್ರದೇವರನ್ನು ಭಾಗವತಾಗ್ರಣಿಗಳೆಂದು, ಮನೋಭಿಮಾನಿ- ಗಳೆಂದೂ ಗೌರವಿಸುತ್ತೇವೆ, ಪೂಜಿಸುತ್ತೇವೆ. ಜಗಜ್ಜನ್ಮಾದಿಕಾರಣನೂ, ಸರ್ವಸ್ವತಂತ್ರನೂ, ಕಲ್ಯಾಣಗುಣಪೂರ್ಣನೂ, ದೋಷದೂರನೂ, ಸರ್ವದೇವತಾಮದ್ಯನೂ ಆದವನು ಸರ್ವೋತ್ತಮ ದೇವತೆ ಶ್ರೀಹರಿಯೊಬ್ಬನೇ. ಅವನು ಸರ್ವನಾಮ- ಗಳಿಂದ ಪ್ರತಿಪಾದ್ಯನು. ನಾರಾಯಣ-ಶಿವ ಬ್ರಹ್ಮ-ಇಂದ್ರ ಮುಂತಾದ ನಾಮಗಳಿಂದ ಪ್ರಮುಖ ವೃತ್ತಿಯಿಂದ ಪ್ರತಿಪಾದ್ಯನವನು. ಬೇರೆ ಬೇರೆ ಹೆಸರಿನಿಂದ ಆಯಾ ದೇವತೆಗಳ ನಿಯಾಮಕನಾಗಿ, ಅಂತರ್ಗತನಾಗಿದ್ದು ಅವರವರಿಗೆ ಆಯಾ ನಾಮಗಳನ್ನು ಕರುಣಿಸಿ ಅವರಿಂದ ಕಾರ್ಯ ಮಾಡಿಸುವನೆಂದು ವೇದಾದಿಶಾಸ್ತ್ರಗಳು ಸಾರುತ್ತಿವೆ.105 ಅಂತೆಯೇ ನಾವು ಶ್ರೀಹರಿಯನ್ನು ಸರ್ವೋತ್ತಮ ದೇವತೆಯೆಂದು ಆರಾಧಿಸುತ್ತೇವೆ. ನಾವು ಶ್ರೀಹರಿಭಕ್ತರಾದರೂ ಇಲ್ಲಿ ನಾವು ಯಾರ ಪಕ್ಷಪಾತಿಗಳೂ ಅಲ್ಲ. ನಮಗೆ ಶೈವ-ಶ್ರೀವೈಷ್ಣವರೆಲ್ಲರೂ ಬೇಕಾದವರೇ, ನಾವು ನಿಷ್ಪಕ್ಷಪಾತವಾಗಿ ಒಂದು ಸೂಚನೆಯನ್ನು ನಿಮ್ಮ ಮುಂದೆ ಮಂಡಿಸುತ್ತೇವೆ. ಸನ್ಯಾಸಿಗಳೂ, ವಿರಕ್ತರೂ ಆದ ನಮಗೆ ಅಖಂಡಭಾರತದ ಅಷ್ಟೇ ಏಕೆ ? ಸಮಸ್ತ ವಿಶ್ವದ ಕಲ್ಯಾಣ - ಅಭ್ಯುದಯ - ಶ್ರೇಯಸ್ಸುಗಳೇ ಗುರಿ, ನಮ್ಮ ಮಾತು ನಿಮಗೆ ಒಪ್ಪಿಗೆಯಾದಲ್ಲಿ ಮುಂದಿನ ಮಾರ್ಗ ಸುಗಮ. ಕೇಳಿ, ಶ್ರೀರಂಗನಾಥಕ್ಷೇತ್ರ ಶ್ರೀಜಂಬುಕೇಶ್ವರ ಕ್ಷೇತ್ರಗಳ ಎಲ್ಲೆ ಯಾವುದು ? ಇದೇ ಈಗ ನಿರ್ಣಯವಾಗಬೇಕಾಗಿರುವ ಪ್ರಶ್ನೆ! ಇದಕ್ಕೆ ಒಂದು ಮಾರ್ಗವಿದೆ - ಅದೆಂದರೆ, ಶ್ರೀರಂಗ ಅಥವಾ ಶ್ರೀಜಂಬುಕೇಶ್ವರ ದೇವಾಲಯದ ಧ್ವಜಸ್ತಂಭದಿಂದ ಯಾರಾದರೊಬ್ಬರು ಶ್ವಾಸನಿರೋಧ ಮಾಡಿ ಓಡಬೇಕು. ಎಲ್ಲಿ ಉಸಿರುಬಿಡುತ್ತಾರೋ ಅಲ್ಲಿಯವರೆಗೆ ಆ ಕ್ಷೇತ್ರದ ಸೀಮೆ (ಎಲ್ಲೆ) ಎಂದು ತಿಳಿಯತಕ್ಕದ್ದು. ಇದೊಂದೇ ಸರಿಯಾದ ಮಾರ್ಗವೆಂದು ನಾವು ಭಾವಿಸಿದ್ದೇವೆ. ಈಗ ಹೇಳಿ ಇದು ನಿಮಗೆ ಸಮ್ಮತವೇ?” ಎಂದು ಪ್ರಶ್ನಿಸಿದರು. 

ಆಗ ಸರ್ವರೂ ಕರತಾಡನದಿಂದ ಗುರುಗಳ ಸೂಚನೆಯನ್ನು ಸ್ವಾಗತಿಸಿ “ಶ್ರೀಯವರ ಸೂಚನೆ ನಮಗೆ ಮಾನ್ಯವಾಗಿದೆ. ಆಗಬಹುದು” ಎಂದು ಒಪ್ಪಿಗೆ ಸೂಚಿಸಿದರು. ಆಗ ಶ್ರೀಗಳವರು ಸಂತುಷ್ಟರಾಗಿ ಸಂತೋಷ, ಹಾಗಾದರೆ ನಾವು ಹೇಳಿದ ನಿಯಮದಂತೆ ಓಡಲು ಯಾರು ಸಿದ್ಧರಾಗಿರುವಿರಿ ? ಮುಂದೆ ಬನ್ನಿ” ಎಂದೆನಲು ಯಾರೂ ಮುಂದಾಗಲು ಧೈರ್ಯ ತೋರಲಿಲ್ಲ. ಶ್ರೀರಂಗ-ಜಂಬುಕೇಶ್ವರಗಳಿಗೆ ನಾಲ್ಕು ಮೈಲು ಅಂತರವಿದ್ದುದರಿಂದ ಬಹುಶಃ ತಾವು ಉಸಿರು ಕಟ್ಟಿ ಹೆಚ್ಚು ದೂರ ಓಡಲಾಗದಿದ್ದಲ್ಲಿ ತಮ್ಮ ಅಸಮರ್ಥತೆಯಿಂದ ತಮ್ಮ ಕ್ಷೇತ್ರದ ಎಲ್ಲೆಗೆ ಭಂಗ ಬರಬಾರದು. ಅದು ಕಡಿಮೆಯಾಗುವುದೇನೋ ಎಂಬ ಭಯವೇ ಅವರು ಮುಂದೆ ಬರದಿರಲು ಕಾರಣವಾಗಿತ್ತು ಮಹಾನುಭಾವರು. ಉಭಯ ಪಕ್ಷದವರಿಗೂ ಸಮ್ಮತವಾಗುವಂತೆ ತಾವೇ ಒಂದು ದಾರಿಯನ್ನು ತೋರಿಸಿ ಅನುಗ್ರಹಿಸಬೇಕು” ಎಂದು ಬಿನ್ನವಿಸಿದರು. 

ಶ್ರೀವ್ಯಾಸರಾಜರು ನಗುಮುಖದಿಂದ “ಧರ್ಮಾಭಿಮಾನಿಗಳೇ, ನಮ್ಮ ಮೇಲೆ ಬಹಳ ದೊಡ್ಡ ಹೊಣೆಯನ್ನು ಹೊರೆಸುತ್ತಿರುವಿರಿ. ನಾವು ವಿಷ್ಣುಭಕ್ತರಾದರೂ ನಮಗೆ ಶೈವ-ಶ್ರೀವೈಷ್ಣವರಾದ ನೀರ್ವಿವ್ರರೂ ಸಮಾನರು. ನಿಮ್ಮ ವಿವಾದ ಪರಿಹಾರವಾಗಲು ನಮಗೊಂದು ದಾರಿ ತೋಚುತ್ತಿದೆ. ನಾವು ಸೂಚಿಸುವ ಮಾರ್ಗದಿಂದ ನಿಮ್ಮಿಬ್ಬರ ವೈಷಮ್ಯ ಪರಿಹಾರವಾಗಬಹುದೆಂದು ನಮಗನಿಸುವುದು. ಕೇಳಿ, ನಾವು ಶ್ರೀವಿಷ್ಣುಭಕ್ತರಾದರೂ, ವಿಷ್ಣುಪಾರಮ್ಯವಾದಿಗಳಾದರೂ ಶ್ರೀಯವರ ಆಹ್ವಾನವನ್ನು ಮನ್ನಿಸಿ ಯಾರೂ ಮುಂದಾಗದಿದ್ದುದರಿಂದ ಸ್ವಲ್ಪ ಕುಪಿತನಾದ ನರಸನಾಯಕನು “ನೀವೆಂಥ ಭಕ್ತರು ? ನಿಮ್ಮ ಕ್ಷೇತ್ರದ ಎಲ್ಲೆಯನ್ನು ನಿರ್ಣಯಿಸಲು ಗುರುಗಳು ಸುಲಭೋಪಾಯವನ್ನು ತೋರಿದರೂ ಅದನ್ನು ಕಾರ್ಯರೂಪಕ್ಕೆ ತರಲು ಮುಂದಾಗುತ್ತಿಲ್ಲವಲ್ಲ! ಹೂಂ, ನೀವು ಮುಂದೆ ಬರದಿದ್ದರೆ....” ಎನ್ನುತ್ತಿರುವಂತೆಯೇ ತಮ್ಮರಾಯರು ಮಧ್ಯೆ ಬಾಯಿಹಾಕಿ “ಆಗ ನಾವು ನಿರ್ವಾಹವಿಲ್ಲದೆ ನಮಗೆ ಸೂಕ್ತ ಕಂಡಂತೆ ನಿರ್ಣಯ ಕೊಡಬೇಕಾದೀತು! ಅದಕ್ಕೆ ಸರ್ವರೂ ಒಪ್ಪತಕ್ಕದ್ದು. ಅದನ್ನು ವಿರೋಧಿಸಿದವರು - ಉಲ್ಲಂಘಿಸಿದವರು ಶಿಕ್ಷಾರ್ಹರಾಗುತ್ತಾರೆ. ಎಚ್ಚರ!” ಎಂದು ಹೇಳಲು ಸರ್ವರೂ ಭಯಗ್ರಸ್ಥರಾದರು. 

ಶ್ರೀವ್ಯಾಸರಾಜರು ಮಂದಹಾಸ ಬೀರುತ್ತಾ “ಮಹಾಪ್ರಭುಗಳು ಕುಪಿತರಾಗಬಾರದು. ಇವರೆಲ್ಲರೂ ದೈವಭಕ್ತರು, ಧರ್ಮಿಷರು, ಅವರ ಮನದ ಆಂದೋಳನವನ್ನು ನಾವು ಗ್ರಹಿಸಿದ್ದೇವೆ” ಎಂದೆನಲು ಸಕಲರೂ ಗುರುಗಳ ಪ್ರಶಾಂತ ಮನಸ್ಸು, ಉದಾರ ಹೃದಯಗಳನ್ನರಿತು ಆನಂದಿಸುತ್ತಾ “ಮಹಾಪ್ರಭು! ಗುರುಗಳು ಸತ್ಯವನ್ನೇ ನುಡಿದಿದ್ದಾರೆ. ಅವರು ಜ್ಞಾನಿಗಳು, ಸರ್ವಜನ ಹಿತೇಚ್ಚುಗಳು. ನಮ್ಮೆಲ್ಲರ ಕ್ಷೇಮಾಭ್ಯುದಯವೇ ಅವರ ಗುರಿ ಎಂಬುದನ್ನು ನಾವೀಗ ಅರಿತೆವು. ಆ ಮಹನೀಯರೇ ನಮಗೆ ಮಾರ್ಗದರ್ಶನ ಮಾಡಿ ಅನುಗ್ರಹಿಸಬೇಕೆಂದು ಬೇಡುತ್ತೇವೆ” ಎಂದರುಹಿದರು. 

ಜನರ ಮಾತನ್ನಾಲಿಸಿ ತಮ್ಮರಾಯ ಮತ್ತು ನಾಯಕರು “ಗುರುದೇವ, ತಾವೇ ಈ ವಿವಾದವನ್ನು ಪರಿಹರಿಸಿ ಜನರಲ್ಲಿ ಶಾಂತಿ-ಸೌಹಾರ್ದಗಳನ್ನು ಒಡಮೂಡಿಸಬೇಕು” ಎಂದು ಸಂತಸದಿಂದ ವಿಜ್ಞಾಪಿಸಿದರು. 

ಶ್ರೀವ್ಯಾಸಮುನಿಗಳು ಹಸನ್ಮುಖಿಗಳಾಗಿ “ಆಸ್ತಿಕರೇ, ನೀವು ನಮ್ಮ ಮಾತನ್ನು ಸಾವಧಾನವಾಗಿ ಆಲಿಸಿರಿ. ನಿಮ್ಮಿಬ್ಬರ ಹಿತಚಿಂತಕರಾದ ನಾವೇ ಶ್ವಾಸನಿರೋಧಿಸಿ ಓಡಲು ಸಿದ್ಧರಾಗಿದ್ದೇವೆ. ನಮ್ಮಲ್ಲಿ ನಿಮಗೆ ನಂಬಿಕೆಯಿದ್ದಲ್ಲಿ ಉಭಯಪಕ್ಷದವರೂ ಇದಕ್ಕೆ ಒಪ್ಪಬೇಕು. ಅಂದರೆ ನಾವು ಓಡಲು ಸಿದ್ಧರಾಗಿರುತ್ತೇವೆ. ನಿಸ್ಸಂಕೋಚವಾಗಿ ನಿಮ್ಮ ಅಭಿಮತ ತಿಳಿಸಿರಿ” ಎಂದರು. 

ಗುರುಗಳ ಮಾತು ಕೇಳಿ ಎಲ್ಲರಿಗೂ ಆನಂದ-ಆಶ್ಚರ್ಯಗಳಾದವು. ಉತ್ಸಾಹದಿಂದ, ಒಕ್ಕೊರಲಿನಿಂದ “ಮಹಾಸ್ವಾಮಿ, ನಿಮ್ಮಲ್ಲಿ ನಮಗೆ ಸಂಪೂರ್ಣ ನಂಬಿಕೆಯಿದೆ, ವಿಶ್ವಾಸವಿದೆ. ತಾವೇ ಈ ಕಾರ್ಯವನ್ನು ಯಶಸ್ವಿಯಾಗಿ ಮಾಡಿ ನಮ್ಮ ವಿವಾದವನ್ನು ಬಗೆಹರಿಸಿ ಅನುಗ್ರಹಿಸಿರಿ” ಎಂದು ಬೇಡಿದರು. 

ಆಗ ವ್ಯಾಸರಾಜರು “ಸಂತೋಷ, ನಾವು ಈಗ ಶ್ರೀರಂಗನಾಥನ ಸನಿಹದಲ್ಲಿದ್ದೇವೆ. ಆದ್ದರಿಂದ ಶ್ರೀರಂಗನಾಥನ ಗುಡಿಯ ಧ್ವಜಸ್ತಂಭದ ಸಮೀಪದಿಂದಲೇ ನಾವು ಶ್ವಾಸವನ್ನು ನಿರೋಧಿಸಿ ಓಡತೊಡಗುತ್ತೇವೆ. ಉಭಯಪಕ್ಷಕ್ಕೂ ಸಂಬಂಧವಿಲ್ಲದ ನಾಲ್ವರು ಮಧ್ಯಸ್ಥಗಾರರು ನಮ್ಮೊಡನೆ ಓಡಿಬರಲಿ. ನಾವು ಎಲ್ಲಿ ಉಸಿರು ಬಿಟ್ಟು ನಿಲ್ಲುತ್ತೇವೆಯೋ ಅದನ್ನವರು ಪ್ರಾಮಾಣಿಕವಾಗಿ ಹೇಳಲಿ. ನಾವು ಉಸಿರು ಬಿಟ್ಟಲ್ಲಿಯೇ ನಿಂತುಬಿಡುತ್ತೇವೆ. ನಾವು ಎಲ್ಲಿ ನಿಲ್ಲುವೆವೋ ಅಲ್ಲಿಯವರೆಗೆ ಶ್ರೀರಂಗನಾಥ ಕ್ಷೇತ್ರದ ಎಲ್ಲೆ ಎಂದು ತಿಳಿಯತಕ್ಕದ್ದು. ಅಲ್ಲಿಂದ ಮುಂದಿನ ಭಾಗ ಶ್ರೀಜಂಬುಕೇಶ್ವರ ಕ್ಷೇತ್ರದ ಎಲ್ಲೆ ಎಂದು ತಿಳಿಯಬೇಕು. ಇದಕ್ಕೆ ನೀವೆಲ್ಲರೂ ಒಪ್ಪುವಿರಾ?” ಎಂದು ಕೇಳಿದಾಗ ಸರ್ವರೂ ಸಂತೋಷದಿಂದ ಹೃತ್ತೂರ್ವಕವಾಗಿ ಗುರುಗಳ ನಿಬಂಧನೆಗೆ ಒಪ್ಪಿರುವುದಾಗಿ ಅರುಹಿದರು. 

ಯೋಗಸಿದ್ಧಿ ಪಡೆದ ಮಹಾತ್ಮರಾದ ಶ್ರೀವ್ಯಾಸತೀರ್ಥರು ಶ್ರೀರಂಗನಾಥನ ಧ್ವಜಸ್ತಂಭದ ಹತ್ತಿರ ಬಂದು ಶ್ವಾಸನಿರೋಧ ಮಾಡಿ ಓಡಲು ಪ್ರಾರಂಭಿಸಿದರು. ಮಧ್ಯಸ್ಥರೂ ಅವರನ್ನು ಅನುಸರಿಸಿದರು. ನೂರಾರು ಭಕ್ತಜನರು ಗುರುಗಳು ಹೇಗೆ, ಎಲ್ಲಿಯವರೆಗೆ ಓಡುವರೋ ನೋಡಬೇಕೆಂದು ಉತ್ಸಾಹದಿಂದ ತಾವೂ ಗುರುಗಳನ್ನು ಹಿಂಬಾಲಿಸಿ ಓಡಲಾರಂಭಿಸಿದರು! 

ಶ್ರೀವ್ಯಾಸರಾಜರು ಓಡತೊಡಗಿದರು, ಓಡುತ್ತಲೇ ಇದ್ದಾರೆ, ಒಂದು ಮೈಲು ಪ್ರದೇಶವನ್ನು ದಾಟಿದರು. ಎರಡು ಮೈಲಿಗಳಾದವು. ಶ್ರೀಗಳವರು ಇನ್ನೂ ಓಡುತ್ತಲೇ ಇದ್ದಾರೆ! ಕೊನೆಗೆ ಶ್ರೀವ್ಯಾಸರಾಜರು ಮೂರು ಮೈಲಿ ದೂರ ಓಡಿ ಒಂದು ಮರದ ಕೆಳಗೆ ಉಸಿರಾಡಲು ನಿಂತುಬಿಟ್ಟರು! ಶ್ರೀಯವರನ್ನು ಹಿಂಬಾಲಿಸಿದ್ದ ಮಧ್ಯಸ್ಥರು, ಧಾರ್ಮಿಕರೂ ಬಂದು ಸೇರಿದರು. ಮಧ್ಯಸ್ಥರು “ಗುರುಗಳು ಇಲ್ಲಿಯವರೆಗೆ ಅಂದರೆ ಧ್ವಜಸ್ತಂಭದಿಂದ ಮೂರು ಮೈಲಿಯವರೆಗೆ ಶ್ವಾಸ ನಿರೋಧಿಸಿ ಓಡಿದ್ದಾರೆ? ಎಂದು ಘೋಷಿಸಿದರು. ಜನರು "ಶ್ರೀವ್ಯಾಸರಾಜಗುರುಗಳಿಗೆ ಜಯವಾಗಲಿ” ಎಂದು ಜಯಘೋಷ ಮಾಡಿದರು. 

ಶ್ರೀವ್ಯಾಸಮುನಿಗಳು ನಗೆಮೊಗದಿಂದ “ಆಸ್ತಿಕರೇ! ಇಂದಿನಿಂದ ಶ್ರೀರಂಗನಾಥ ಕ್ಷೇತ್ರದ ಗಡಿ ಈ ಸ್ಥಳವಾಗಿದೆ! ಇಲ್ಲಿಂದ ಮುಂದಿನ ಭಾಗ ಶ್ರೀಜಂಬುಕೇಶ್ವರ ಕ್ಷೇತ್ರದ ಗಡಿ ಎಂದು ತಿಳಿಯಿರಿ. ಇದಕ್ಕೆ ಉಭಯಪಕ್ಷದವರೂ ಬದ್ಧರಾಗಿರತಕ್ಕದ್ದು ಮತ್ತು ಮುಂದೆ ಅಣ್ಣ-ತಮ್ಮಂದಿರಂತೆ ಪ್ರೀತಿ-ವಿಶ್ವಾಸಗಳಿಂದ ವರ್ತಿಸುತ್ತಾ ಉಭಯ ಕ್ಷೇತ್ರಗಳ ಉತ್ಸವಾದಿಗಳಲ್ಲಿ ಪಾಲ್ಗೊಂಡು ಐಕ್ಯಮತ್ಯದಿಂದ ಧರ್ಮನಿರತರಾಗಿ ಭಗವದ್ಭಕ್ತರಿಗೆ ಆದರ್ಶರಾಗಿ ಬಾಳಬೇಕು. ನಿಮಗೆಲ್ಲರಿಗೂ ಮಂಗಳವಾಗಲಿ” ಎಂದು ಹಾರೈಸಿದರು. 

ಗುರುಗಳ ಉಪದೇಶ - ಅವರ ಅನುಗ್ರಹಗಳಿಂದ ಸಂತುಷ್ಟರಾದ ಉಭಯಮತೀಯರೂ ಶ್ರೀಯವರ ಅಪ್ಪಣೆಗೆ ತಲೆಬಾಗಿದರು. ಆಗಲೇ ಶ್ರೀಗಳವರು ಕನ್ನಡ ಸಾಮ್ರಾಜ್ಯಧೀಶರು ಹಾಗೂ ಕಾರ್ಯಕರ್ತರ ಮತ್ತು ಸಕಲರ ಸಮಕ್ಷ ಉಭಯಪಕ್ಷದವರಿಗೆ ಸಂಧಿ ಮಾಡಿಸಿ ಅದರಂತೆ ಕಾಗದ ಪತ್ರ ಮಾಡಿಸಿದರು. ಅನವಶ್ಯಕವಾಗಿ ಅನೇಕ ವರ್ಷಗಳಿಂದ ಬೆಳೆದು ವಿಕೋಪಕ್ಕೆ ಹೋಗಿದ್ದ ಭಿನ್ನಾಭಿಪ್ರಾಯ - ವಿದ್ವೇಷಗಳನ್ನು ಪರಿಹರಿಸಿ ಎಲ್ಲರೂ ಶಾಂತಿ - ಸಮಾಧಾನಗಳಿಂದ ಬಾಳುವಂತೆ ಮಾಡಿದ ಶ್ರೀಗಳವರನ್ನು ಎಲ್ಲರೂ ಮುಕ್ತಕಂಠದಿಂದ ಸ್ತುತಿಸಿದರು. 

ಹೀಗೆ ಶ್ರೀವ್ಯಾಸರಾಜರು ವಿವಾದವನ್ನು ಪರಿಹರಿಸಿದ್ದರಿಂದ ಚಕ್ರವರ್ತಿಗೂ, ನರಸನಾಯಕನಿಗೂ ಅಪಾರ ಆನಂದವಾಯಿತು. ಇದರಿಂದ ಧರ್ಮಸಾಮ್ರಾಜ್ಯವೆಂದು ಖ್ಯಾತಿ ಗಳಿಸಿದ್ದ ವಿಜಯನಗರ ಸಾಮ್ರಾಜ್ಯಕ್ಕೂ, ಶ್ರೀಗಳವರು, ಚಕ್ರವರ್ತಿ, ನರಸನಾಯಕರಿಗೂ “ಸಕಲ ಧರ್ಮಸಂರಕ್ಷಕ'ರೆಂಬ ಕೀರ್ತಿಯುಂಟಾಯಿತು.106 

ಜಂಬುಕೇಶ್ವರ - ಶ್ರೀರಂಗ ಕ್ಷೇತ್ರದ ಧರ್ಮದರ್ಶಿಗಳು, ಅರ್ಚಕರು, ಪುರನಿವಾಸಿಗಳು ಶ್ರೀವ್ಯಾಸರಾಜರನ್ನು ಆನೆಯ ಮೇಲೆ ಅಂಬಾರಿಯಲ್ಲಿ ಭೇರಿತಾಡನ, ವಾದ್ಯವೈಭವ, ಪೂರ್ಣಕುಂಭ, ವೇದಘೋಷಗಳೊಡನೆ ಕರೆದೊಯ್ದು ದೇವರ ದರ್ಶನ ಮಾಡಿಸಿದರು. ಶ್ರೀವ್ಯಾಸರಾಜರು ಶ್ರೀರಂಗನಾಥನ ದರ್ಶನ ಮಾಡಿ ಭಕ್ತಿಯಿಂದ ನಮಸ್ಕರಿಸಿದರು.107 ಉಭಯ ದೇವಾಲಯದವರೂ ಅಸಾಧಾರಣ ಮರ್ಯಾದೆಗಳನ್ನು ಗುರುಗಳಿಗೆ ಸಮರ್ಪಿಸಿ ಗೌರವಿಸಿದರು.108 

ಶ್ರೀವ್ಯಾಸರಾಜರು ತಾವು ಉಸಿರು ಬಿಟ್ಟು ನಿಂತ ಸ್ಥಳದಲ್ಲಿ ಉಭಯಕ್ಷೇತ್ರಗಳ ಗಡಿಗಳ ಸೂಚಕವಾಗಿ ಶ್ರೀಪ್ರಾಣದೇವರನ್ನು ಪ್ರತಿಷ್ಠಾಪಿಸಿ ಪೂಜಾರಾಧನೆಯು ಜರುಗುವಂತೆ ವ್ಯವಸ್ಥೆ ಮಾಡಿದರು. ಈಗಲೂ ಈ ದೇವರು “ಎಲ್ಲೆ ಆಂಜನೇಯನೆಂಬ ಹೆಸರಿನಿಂದ ಪೂಜೆಗೊಳ್ಳುತ್ತಿದ್ದಾನೆ! 

ಇದರಂತೆಯೇ ಮುಂದೆ ಶ್ರೀವ್ಯಾಸರಾಜರು ಶ್ರೀರಂಗನಾಥದೇವರ ಗುಡಿಯ ಒಳಪ್ರಾಕಾರದಲ್ಲಿ ಒಂದು ಮಠವನ್ನೂ, ಶ್ರೀಪ್ರಾಣದೇವರ ಗುಡಿಯನ್ನೂ ಕಟ್ಟಿಸಿ ಸಕ್ರಮವಾಗಿ ಪೂಜಾರಾಧನೆ ನಡೆಯುವಂತೆ ವ್ಯವಸ್ಥೆ ಮಾಡಿದರು. 

ಶ್ರೀರಂಗ ಮತ್ತು ಜಂಬುಕೇಶ್ವರ ಕ್ಷೇತ್ರವಾಸಿಗಳ ಪ್ರಾರ್ಥನೆಯಂತೆ ಶ್ರೀವ್ಯಾಸರಾಜ ಗುರುಗಳು ತಿಮ್ಮರಾಯ ನರಸನಾಯಕರೊಡನೆ ಕೆಲದಿನಗಳು ಅಲ್ಲಿದ್ದು ಪ್ರತಿದಿನ ಕಾವೇರೀಸ್ನಾನ, ಆಕ-ಜಪತಪಾದನುಷ್ಠಾನ, ದೇವರ ದರ್ಶನ, ಮಹಾಸಂಸ್ಥಾನ ಪೂಜೆ, ತೀರ್ಥ-ಪ್ರಸಾದ ವಿನಿಯೋಗಾದಿಗಳನ್ನು ಮಾಡುತ್ತಾ ಪ್ರತಿದಿನ ತತ್ವ ಧರ್ಮೋಪದೇಶಗಳಿಂದ ಆಸ್ತಿಕ ಜನರನ್ನು ಸಂತೋಷಗೊಳಿಸಿದರು ಆ ತರುವಾಯ ಸಾರ್ವಭೌಮ ಮತ್ತು ನರಸನಾಯಕರೊಡನೆ ಹೊರಟು ಚಂದ್ರಗಿರಿಗೆ ಬಂದರು. ನರಸನಾಯಕನು ಮಹಾಪ್ರಭುಗಳ ಮತ್ತು ರಾಜಗುರುಗಳ ವಿಶೇಷ ಕೃಪೆಗೆ ಪಾತ್ರನಾಗಿ ಅಪ್ಪಣೆ ಪಡೆದು ವಿಜಯನಗರಕ್ಕೆ ತೆರಳಿದನು. 

ಸಾಮ್ರಾಜ್ಯದಲ್ಲೇ ಭಾರೀ ವಿಪ್ಲವಕ್ಕೆ ಕಾರಣವಾಗಿದ್ದ ಶ್ರೀರಂಗದ ಶ್ರೀವೈಷ್ಣವರು ಹಾಗೂ ಜಂಬುಕೇಶ್ವರದ ಶೈವರಿಗಿದ್ದ ವಿವಾದವನ್ನು ಪರಿಹರಿಸಿ ಮತೀಯ ಕಲಹವನ್ನು ನಿವಾರಿಸಿ ಉಭಯಮತೀಯರಲ್ಲಿ ಸ್ನೇಹ-ಸೌಹಾರ್ದಗಳನ್ನು ಕುದುರಿಸಿ ಶಾಂತಿಸ್ಥಾಪನೆ ಮಾಡಿ ಯಶಸ್ವಿಯಾದನೆಂದು ಅವನ ವಿಷಯದಲ್ಲಿ ಸುಪ್ರೀತರಾದ ಸಾಮ್ರಾಜ್ಯದ ಎಲ್ಲ ಮತ-ಧರ್ಮಗಳ ಪ್ರಜಾಜನರೂ ಅವನನ್ನು ಕೊಂಡಾಡಿದರು. ಶ್ರೀವ್ಯಾಸರಾಜ ಗುರುಗಳು ಸರ್ವಧರ್ಮ ಹಿತದೃಷ್ಟಿಯಿಂದ ಮಾಡಿದ ಈ ಮಹತ್ಕಾರ್ಯದಿಂದ ತನಗೆ ಕೀರ್ತಿ, ಪ್ರತಿಷ್ಠೆ, ಪ್ರಜರ ಪ್ರೇಮಾದರಗಳು ದೊರಕುವಂತಾಯಿತೆಂದು ನರಸನಾಯಕ ಶ್ರೀವ್ಯಾಸರಾಜರ ಬಗ್ಗೆ ಅತಿಶಯ ಗೌರವ-ಭಕ್ತಿಯಿಂದ ವರ್ತಿಸಿ ಅನುಗೃಹೀತನಾದನು. 

ಶ್ರೀವ್ಯಾಸರಾಜರು ಶ್ರೀರಂಗದಿಂದ ಬಂದು ಎರಡು ತಿಂಗಳಾಗಿತ್ತು. ಒಂದು ದಿನ ಮಧ್ಯಾಹ್ನ ಶಿಷ್ಯರಿಗೆ ಪಾಠ ಹೇಳುತ್ತಾ ಕುಳಿತಿರುವಾಗ ಅರುವಾಮದೈಂಗಾರ್ ಎಂಬ ಶ್ರೀರಂಗದ ವೃದ್ಧ ಅರ್ಚಕರು ಎಂಟು-ಹತ್ತು ವರ್ಷ ವಯಸ್ಸಿನ ತೇಜಸ್ವಿ ಬಾಲಕ, ಅವನ ತಾಯಿ, ಸೋದರಮಾವಂದಿರೊಡನೆ ಬಂದು ಶ್ರೀಗುರುಗಳವರಿಗೆ ನಮಸ್ಕರಿಸಿದರು. ವೃದ್ಧರನ್ನು ಗುರುತಿಸಿದ ಗುರುಗಳು ನಸುನಗುತ್ತಾ “ಓಹೋ, ಅರುವಾಮದೈಂಗಾರ್ ಅಲ್ಲವೇ? ಯಾವಾಗ ಬಂದಿರಿ? ಕುಶಲವೇ?” ಎಂದು ಕುಶಲಪ್ರಶ್ನೆ ಮಾಡಲು ಅರುವಾಮುದೈಂಗಾರ್‌ರವರು “ಮಹಾಸ್ವಾಮಿಯವರು ನನಗೊಂದು ಹೊಣೆ ಹೊರಿಸೋಣವಾಗಿತ್ತು. ತಮ್ಮ ಅನುಗ್ರಹದಿಂದ ಯಶಸ್ವಿಯಾಗಿದ್ದೇನೆ. ಇತ್ತ ಪರಾಂಬರಿಸಬೇಕು. ತಿರುಪತಿ ಅರ್ಚಕರ ಪೈಕಿ ಓರ್ವ ತರುಣಿಯು ಗರ್ಭಿಣಿಯಾಗಿದ್ದು ತಾಯಿಯ ಮನೆಗೆ ಪ್ರಸವಕ್ಕಾಗಿ ಹೋಗಿದ್ದಳು. ಅದೇ ಕಾಲದಲ್ಲಿ ತಿರುಪತಿಯಲ್ಲಿ ಅರ್ಚಕರುಗಳ ದುರಂತ ಜರುಗಿಹೋಯಿತು. ತಾಯಿಯ ಮನೆಗೆ ಹೋಗಿದ್ದ ಆ ತರುಣಿಯೇ ಈಕೆ. ಹೆಸರು ಶೃಂಗಾರಮ್ಮ, ಈ ಬಾಲಕನೇ ಈಕೆಯ ಪುತ್ರ ಶ್ರೀನಿವಾಸ ತಾತಾಚಾರ್ಯ. ಇವರು ವೀರರಾಘವಾಚಾರ್ಯರು. ಈತನ ಸೋದರಮಾವ” ಎಂದು ಪರಿಚಯ ಮಾಡಿಸಿದರು. ಎಲ್ಲರೂ ಗುರುಗಳಿಗೆ ನಮಸ್ಕರಿಸಿದರು. 

ಶ್ರೀಗಳವರು ಅವರನ್ನು ಕಂಡು ಹರ್ಷಿಸಿ “ಈಗ ನಮ್ಮ ಮನಸ್ಸಿಗೆ ನೆಮ್ಮದಿಯುಂಟಾಯಿತು. ಶ್ರೀತಾತಾಚಾರ್ಯರ ವಂಶೀಕರು ಒಬ್ಬರಾದರೂ ದೊರೆತುದು ಸಂತೋಷಕರ. ಮುಂದಿನ ಜವಾಬ್ದಾರಿ ನಮಗಿರಲಿ, ಚಕ್ರವರ್ತಿಗಳಲ್ಲಿ ನಿವೇದಿಸಿ ಶೀಘ್ರವಾಗಿ ಈ ಬಾಲಕನಿಗೆ ದೇವರ ಪೂಜಾಧಿಕಾರವನ್ನು ವಹಿಸಿಕೊಡುತ್ತೇವೆ. ಈತನಿಗೆ ವೀರರಾಘವಾಚಾರ್ಯರು ಸಹಾಯಕರಾಗಲಿ” ಎಂದು ಆಜ್ಞಾಪಿಸಿ ಅವರಿಗೆ ವಸತಿ-ಭೋಜನಾದಿ ವ್ಯವಸ್ಥೆ ಮಾಡಲು ಮಠದ ಅಧಿಕಾರಿಗೆ ಅಪ್ಪಣೆ ಶ್ರೀವ್ಯಾಸರಾಜರು ಶ್ರೀನಿವಾಸ ತಾತಾಚಾರ್ಯನಿಗೆ ಉಪನಯನ ಮಾಡಿಸಿ, ಅವನಿಗೆ ಸಂಸ ತ ಭಾಷೆ, ಮಂತ್ರ-ಕಾವ್ಯಾದಿಗಳು, ವೇದಾಧ್ಯಯನ, ವೈಖಾನಸಾಗಮ ಪಾಠಗಳನ್ನು ಹೇಳಿಸಿ ಆತನಿಗೆ ಸ್ವತಃ ನ್ಯಾಯ-ಸಾಹಿತ್ಯಾದಿ ಪಾಠಗಳನ್ನು ಹೇಳಿದ್ದಲ್ಲದೇ, ಪ್ರತಿಮಾಪೂಜಾಕ್ರಮ, ಮಂತ್ರಾದಿಗಳು ಹಾಗೂ ಮಹಾಮಂತ್ರಾದಿಗಳನ್ನು ಹೇಳಿಕೊಟ್ಟು ನಾಲೈದು ವರ್ಷದಲ್ಲಿ ಅವನು ಶ್ರೀನಿವಾಸನ ಪೂಜೆಗೆ ಅರ್ಹನಾಗುವಂತೆ ಮಾಡಿದರು.

ಹುಡುಗನು ಅಭಿವೃದನಾದ ಮೇಲೆ ಶ್ರೀಗಳವರು ಶ್ರೀನಿವಾಸ ತಾತಾಚಾರ್ಯನೊಡನೆ ತಿರುಪತಿಗೆ ತೆರಳಿ, ಅಲ್ಲಿ ಒಂದು ದಿನ ಧರ್ಮದರ್ಶಿಗಳು, ಬೆಟ್ಟದ ಮೇಲಿನ ಧರ್ಮಾಭಿಮಾನಿಗಳು ಮುಂತಾದವರನ್ನು ಕರೆಯಿಸಿಕೊಂಡು ಎಲ್ಲರಿಗೂ ಶ್ರೀನಿವಾಸ ತಾತಾಚಾರ್ಯನ ಪರಿಚಯ ಮಾಡಿಸಿ ಇನ್ನು ಮುಂದೆ ಇವರೇ ಶ್ರೀನಿವಾಸನ ಪೂಜಾರಾಧನಾದಿ ಕೈಂಕರ್ಯವನ್ನು ನೆರವೇರಿಸುವರೆಂದೂ, ಚಕ್ರವರ್ತಿಗಳು ಇವರ ವಂಶೀಕರೇ ಪರಂಪರೆಯಾಗಿ ಅರ್ಚಕರಾಗಿ ಸೇವೆ ಸಲ್ಲಿಸಲು ನಿರೂಪ ದಯಪಾಲಿಸಿರುವುದನ್ನು ತಿಳಿಸಿ, ದೇವಾಲಯದ ಆಡಳಿತಾಧಿಕಾರವನ್ನು, ಧಾರ್ಮಿಕ ವಿಚಾರಾದಿಗಳನ್ನು ತಮ್ಮ ಪ್ರಿಯಶಿಷ್ಯರಾದ ಬೆಟ್ಟದ ಆಚಾರ್ಯರೂ, ದೇವರ ಪೂಜೆಯನ್ನು ಶ್ರೀನಿವಾಸಾಚಾರ್ಯರೂ ನೆರವೇರಿಸುತ್ತಾ ಬರಬೇಕೆಂದೂ, ಇತರ ಧರ್ಮದರ್ಶಿಗಳು, ಬೆಟ್ಟದ ಆಸ್ತಿಕವೃಂದದವರು ಸರ್ವವಿಧದಲ್ಲಿ ಶ್ರೀದೇವರ ಸೇವಾದಿಗಳಲ್ಲಿ ಸಹಕಾರ ನೀಡತಕ್ಕದ್ದೆಂದೂ ಆಜ್ಞಾಪಿಸಿ ಶ್ರೀನಿವಾಸ ತಾತಾಚಾರ್ಯರಿಗೆ ದೇವರ ಗುಡಿಯ ಗರ್ಭಾಲಯದ ಬೀಗದ ಕೈಯನ್ನು ಬೆಟ್ಟದ ಆಚಾರ್ಯರಿಂದ ಕೊಡಿಸಿ “ನಾವು ತಂತ್ರಸಾರಾಗಮದಂತೆ ಪೂಜೆ ಮಾಡುತ್ತಿದ್ದೆವು. ನೀವು ದೇವರ ಪೂಜೆ, ನಿತ್ಯ ನೈಮಿತ್ತಿಕ ಉತ್ಸವ, ಪೂಜಾರಾಧನೆಗಳನ್ನು ವೈಖಾನಸಾಗಮದಂತೆ ಸಕ್ರಮವಾಗಿ ಜರುಗಿಸಿಕೊಂಡು ಹೋಗಬೇಕು” ಎಂದೂ ಆಜ್ಞಾಪಿಸಿದರು. 

ಶ್ರೀಗಳವರ ನಿಃಸ್ವಾರ್ಥ ಬುದ್ದಿ, ಔದಾರ್ಯ, ಕಾರುಣ್ಯಗಳನ್ನು ಸಕಲರೂ ಕೊಂಡಾಡಿದರು. ಆನಂತರ ಶ್ರೀಗಳವರು ಸ್ವಾಮಿಪುಷ್ಕರಣಿಯಲ್ಲಿ ಮಿಂದು ವೈಭವದೊಡನೆ ದೇವಾಲಯಕ್ಕೆ ಬಂದು ಶ್ರೀನಿವಾಸದೇವರ ಪಾದಸ್ಪರ್ಶ ಮಾಡಿ ಭಕ್ತಿಯಿಂದ ನಮಸ್ಕರಿಸಿದರು. ಆಗ ಶ್ರೀಯವರ ಹನ್ನೆರಡು ವರ್ಷಗಳ ಪೂಜಾರಾಧನೆಯಿಂದ ಸಂತುಷ್ಟನಾದ ಶ್ರೀನಿವಾಸನು ಶ್ರೀವ್ಯಾಸರಾಜರನ್ನು ಆಶೀರ್ವದಿಸಿದನೋ ಎಂಬಂತೆ ದೇವರಿಗೆ ಹೊದಿಸಿದ್ದ ಪೀತಾಂಬರವು ದೇವರ ಶರೀರದಿಂದ ಜಾರಿ ಶ್ರೀಯವರ ಮೇಲೆ ಬಿದ್ದಿತು! ಅದನ್ನು ಕಂಡು ಜನರು ಗುರುಗಳ ಜಯಜಯಕಾರ ಮಾಡಿದರು. ಶ್ರೀಗಳವರು ಪರಮಾತ್ಮನ ಅನುಗ್ರಹದಿಂದ ಪುಳಕಿತಗಾತ್ರರಾಗಿ ಆನಂದಬಾಷ್ಪ ಸುರಿಸುತ್ತಾ ಶ್ರೀನಿವಾಸನನ್ನು ಭಕ್ತಿಯಿಂದ ಸ್ತುತಿಸಿ, ವಿಧವಿಧವಾಗಿ ಪ್ರಾರ್ಥಿಸಿ ದೇವರಿಗೆ ಮಂಗಳಾರತಿ ಮಾಡಿ, ಪ್ರಸಾದ ಸ್ವೀಕರಿಸಿ ಶ್ರೀದೇವಾಲಯದ ಸಕಲ ಬಿರುದಾವಳಿಯೊಡನೆ ಶ್ರೀಮಠಕ್ಕೆ ದಯಮಾಡಿಸಿದರು. 

ಅಂದು ಮಧ್ಯಾಹ್ನ ಧರ್ಮಾಭಿಮಾನಿಗಳು ಸಭೆ ಸೇರಿ ಹನ್ನೆರಡು ವರ್ಷಗಳ ಕಾಲ ದೇವರ ಪೂಜೆ, ಆಡಳಿತಗಳನ್ನು ನಿರ್ವಹಿಸಿ, ದೇವರ ಪೂಜಾದಿ ಕಾರ್ಯ, ಆಡಳಿತಗಳನ್ನು ಕ್ರಮಪಡಿಸಿ ಅಸಾಧಾರಣ ಸೇವೆ ಸಲ್ಲಿಸಿ ಅನುಗ್ರಹಿಸಿದ ಶ್ರೀಗಳವರ ಗುಣಗಾನ ಮಾಡಿದರು. ಇದರ ಸ್ಮರಣೆ ಹಾಗೂ ತಾತಾಚಾರ್ಯರ ವಂಶೀಕರಿಗೇ ಮತ್ತೆ ಪೂಜಾಧಿಕಾರ ಕರುಣಿಸಿದ ಕೃತಜ್ಞತಾರೂಪವಾಗಿ ಧರ್ಮದರ್ಶಿಗಳು, ಅರ್ಚಕರೆಲ್ಲರೂ ಒಮ್ಮತದಿಂದ ಗುರುಗಳ ಮಠಕ್ಕೆ ವಿಶೇಷ ಮರ್ಯಾದೆಗಳು ಶಾಶ್ವತವಾಗಿ ಸಲ್ಲಿಸುವ ಶಾಸನ ಮಾಡಿದರು. ಶ್ರೀವ್ಯಾಸರಾಜರ ಆನಂತರದ ಮುಂದಿನ ಪೀಠಾಧೀಶರು ತಿರುಪತಿಗೆ ದಯಮಾಡಿಸಿದಾಗ, ಅರ್ಧಬೆಟ್ಟದವರೆಗೆ ಪೂರ್ಣಕುಂಭ-ಸಕಲ ಬಿರುದು, ಗೌರವಗಳೊಡನೆ ಬಂದು ಶ್ರೀಗಳವರನ್ನು ಸ್ವಾಗತಿಸಿ ಕರೆತರುವುದು, ಶ್ರೀನಿವಾಸದೇವರ ದೇವಾಲಯದ ಬೀಗದ ಕೈಯನ್ನು ಒಪ್ಪಿಸುವುದು, ಶ್ರೀಪೀಠಾಧೀಶರು ತಮ್ಮ ದೇವರೊಡನೆ ಗರ್ಭಾಲಯಕ್ಕೆ ಬಂದು ಸಾಷ್ಟಾಂಗ ನಮಸ್ಕಾರ ಮಾಡಿ, ದೇವರ ಪಾದಸ್ಪರ್ಶ ಪಡೆದು ಶ್ರೀನಿವಾಸನಿಗೆ ಸ್ವಹಸ್ತದಿಂದ ಮಂಗಳಾರತಿ ಮಾಡುವುದೇ ಮುಂತಾದ ಅನೇಕ ಅಸಾಧಾರಣ ಗೌರವ, ವಿಶಿಷ್ಟ ಮರ್ಯಾದೆ ಹಕ್ಕುಗಳನ್ನು ಶ್ರೀಪಾದಂಗಳವರಿಗೆ ಸಮರ್ಪಿಸಿ ಕೃತಾರ್ಥರಾದರು - ಈ ಎಲ್ಲಾ ಗೌರವಗಳು ಶತಶತಮಾನಗಳವರೆಗೆ ಶ್ರೀವ್ಯಾಸರಾಜ ಮಠಕ್ಕೆ ಸಲ್ಲುತ್ತಿದ್ದು, ಮುಂದೆ ಪೀಠಾಧೀಶ್ವರರು ತಿರುಪತಿಗೆ ಬರುವುದು ಕಡಿಮೆಯಾಗಿ ಕ್ರಮೇಣ ಕೆಲ ಗೌರವಗಳು ತಪ್ಪಿಹೋದವು. ಆದರೂ ಇನ್ಯಾವ ಪೀಠಾಧಿಪತಿಗಳಿಗೂ ಸಲ್ಲದ ವಿಶೇಷ ಗೌರವಗಳು ಇಂದಿಗೂ ಶ್ರೀಮಠಕ್ಕೆ ಜರುಗುತ್ತಾ ಬಂದಿವೆ. 

ಇದರಂತೆ ಶ್ರೀಯವರು “ತಂತ್ರಸಾರಾಗಮೋಕ್ತ ಕ್ರಮದಲ್ಲಿ ಏರ್ಪಡಿಸಿದ ಪೂಜಾಪದ್ಧತಿಯು ಬಹುಕಾಲ ನಂತರ ನಿಂತುಹೋಗಿ ಈಗ ವೈಖಾನಸಾಗದ ಪದ್ಧತಿಯಲ್ಲಿ ಶ್ರೀನಿವಾಸದೇವರ ಪೂಜಾರಾಧನ ಜರುಗುತ್ತಿದೆ.

ಶ್ರೀಗಳವರು ಶ್ರೀನಿವಾಸದೇವರ ದರ್ಶನ ಪಡೆಯಲು ಗುಡಿಗೆ ಹೋಗಿ ದೇವರಿಗೆ ಸಾಷ್ಟಾಂಗವೆರಗಿ ನಿಂತರು. ಶ್ರೀನಿವಾಸನನ್ನು ಅಗಲಿ ಹೋಗಬೇಕಲ್ಲಾ ಎಂದವರ ಕಣ್ಣಿನಿಂದ ಧಾರಾಕಾರವಾಗಿ ನೀರು ಹರಿಯಿತು. ಹೃದಯ ಭಕ್ತಿಭರದಿಂದ ಕಂಪಿಸಿತು “ದೇವ, ೧೨ ವರ್ಷ ನಿನ್ನ ಸೇವೆ ಸ್ವೀಕರಿಸಿ ಅನುಗ್ರಹಿಸಿದೆ. ಇದು ಮುಂದೆ ನನ್ನಿಂದ ಯಾವುದೋ ಮಹತ್ಕಾರ್ಯ ಮಾಡಿಸಲು ಒಂದು ತಪಸ್ಸಾಗಬೇಕೆಂದು ನೀನು ಇಚ್ಚಿಸಿದೆ ಎಂದು ನಾನು ಭಾವಿಸುತ್ತೇನೆ. ನಾನೆಸಗಿದ ತಪಸ್ಸಿನ ಫಲವನ್ನು ಲೋಕಕಲ್ಯಾಣಕ್ಕಾಗಿ ನಿನ್ನ ಪ್ರೇರಣೆಯಂತೆ ವಿನಿಯೋಗಿಸಲು ನಾನು ಯೋಚಿಸಿದ್ದೇನೆ. ಅದನ್ನು ಪೂರ್ಣವಾಗಿ ಯಶಸ್ವಿಗೊಳಿಸುವ ಭಾರ ನಿನಗೆ ಸೇರಿದೆ. ನಿನ್ನನ್ನು ಬಿಟ್ಟು ಹೋಗಲು ಮನ ಮಿಡಿಯುತ್ತಿದೆ. ಎಲ್ಲೆಡೆಯಲ್ಲಿರುವ ಹೇ ಪ್ರಭು, ನನ್ನ ಹೃದಯದಲ್ಲಿ ನೀನು ನೆಲೆ ನಿಂತು ಅನುಗ್ರಹಿಸು” ಎಂದು ಭಕ್ತಿಭರಿತವಾಗಿ ಪ್ರಾರ್ಥಿಸಿ ಮತ್ತೆ ಮತ್ತೆ ಶ್ರೀಹರಿಗೆ ನಮಸ್ಕಾರ ಮಾಡಿ ಹೊರಗೆ ಬಂದರು. 

ಆನಂತರ ದೇವಾಲಯದ ಸಮಸ್ತ ಗೌರವದೊಡನೆ ಶ್ರೀಗಳವರನ್ನು ಬಹುದೂರ ಬಂದು ಬೀಳ್ಕೊಟ್ಟು ಗುರುಗಳ ಆಶೀರ್ವಾದ ಪಡೆದರು. ಶ್ರೀಗಳವರು ಸರ್ವರಿಗೂ ಫಲಮಂತ್ರಾಕ್ಷತೆಯನ್ನು ಅನುಗ್ರಹಿಸಿ ಬೆಟ್ಟದಾಚಾರ್ಯರಿಗೆ ಬೆಟ್ಟ ಮತ್ತು ಬೆಟ್ಟದ ಕೆಳಗಿನ ಶ್ರೀಮಠದ ಹಾಗೂ ದೇವಾಲಯದ ಧಾರ್ಮಿಕ ಅಧಿಕಾರಗಳನ್ನು ಅನುಗ್ರಹಿಸಿ, ಅವರು ಶ್ರೀಮಠದ ಪ್ರತಿನಿಧಿಯಾಗಿದ್ದು ಸಕಲ ಕಾರ್ಯಗಳನ್ನು ನಿರ್ವಹಿಸಬೇಕೆಂದು ಆಜ್ಞಾಪಿಸಿ ಚಂದ್ರಗಿರಿಗೆ ದಯಮಾಡಿಸಿದರು.