|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ನಾಲ್ಕನೆಯ ಉಲ್ಲಾಸ

ಶ್ರೀವ್ಯಾಸರಾಜಯತಿಸಾರ್ವಭೌಮರು

೩೮. ಕನ್ನಡ ಚಕ್ರವರ್ತಿಗಳ ಗುರುಭಕ್ತಿ

ಶ್ರೀವ್ಯಾಸರಾಜರು ತಿರುಪತಿಯ ಶ್ರೀನಿವಾಸನು ಸುಮುಖನಾಗಿ ಭಕ್ತಜನರನ್ನು ಪೊರೆಯುವಂತೆ ಮಾಡಿ ದೇವರ ಗುಡಿಯ ಆಡಳಿತ, ಸೇವಾಸೂತ್ರಗಳನ್ನು ಕ್ರಮಪಡಿಸಿ ದೇವರ ಭಂಡಾರವು ಅತಿಶಯವಾಗಿ ಬೆಳೆಯುವಂತೆ ಮಾಡಿದ ನಾಲ್ಕಾರು ವರ್ಷವಾದ ನಂತರ ನರಸಿಂಹ ಭೂಪತಿಯ ಪ್ರಾರ್ಥನೆಯಂತೆ ತಮ್ಮ ಶಿಷ್ಯರಿಗೆ ದೇವರ ಪೂಜಾರಾಧನಾದಿಗಳನ್ನು ವಹಿಸಿಕೊಟ್ಟು ಚಂದ್ರಗಿರಿಗೆ ಬಂದು ರಾಜನಿಗೆ ಉಪದೇಶ-ಮಾರ್ಗದರ್ಶನ ಮಾಡುತ್ತಾ ಅನುಗ್ರಹಿಸುತ್ತಿದ್ದರೂ ಪ್ರತಿ ಗುರುವಾರದಿಂದ ಶನಿವಾರದವರೆಗೆ ಬೆಟ್ಟಕ್ಕೆ ಹೋಗಿ ಸ್ವತಃ ದೇವರ ಪೂಜಾರಾಧನೆ ನೆರವೇರಿಸುತ್ತಿದ್ದರು. ಉಳಿದ ವೇಳೆಯಲ್ಲಿ ಅವರ ಶಿಷ್ಯರೇ ಪೂಜಿಸುತ್ತಿದ್ದರು. ಚಂದ್ರಗಿರಿಯಲ್ಲಿ ವ್ಯಾಸತೀರ್ಥರು ಪರವಾದಿ ದಿಗ್ವಿಜಯ, ಪಾಠಪ್ರವಚನ, ಶ್ರೀಮೂಲಗೋಪಾಲಕೃಷ್ಣನ ಪೂಜೆ, ಭಕ್ತಜನರಿಗೆ ಉಪದೇಶಾದಿ ಕಾರ್ಯಾಸಕ್ತರಾಗಿ, ರಾಜಗುರುಗಳಾಗಿ ಸಾಮ್ರಾಜ್ಯ ಹಿತಚಿಂತನೆ ಮಾಡುತ್ತಾ ಧರ್ಮಸಂಸ್ಥಾಪನೆ ಮಾಡುತ್ತಾ ಕೀರ್ತಿ ಗಳಿಸಿ ಅನೇಕ ವರ್ಷಗಳ ಕಾಲ ಅಲ್ಲಿ ವಾಸಮಾಡಿದರು.

ನರಸಿಂಹ ಭೂಪಾಲನಿಗೆ ಶ್ರೀವ್ಯಾಸರಾಜರಲ್ಲಿ ಅಪರಿಮಿತವಾದ ಭಕ್ತಿ-ಗೌರವಗಳಿದ್ದವು. ಅವನು ಶ್ರೀವ್ಯಾಸಮುನಿಗಳನ್ನು ತನ್ನ ಉದ್ಧಾರಕ ಗುರುಗಳೆಂದು ನಂಬಿದ್ದನು. ಅಂತೆಯೇ ಅವನು ಕಾರ್ತವೀರ್ಯಾರ್ಜುನನು ಶ್ರೀದತ್ತಾತ್ರೇಯಸ್ವಾಮಿಯನ್ನು ಪೂಜಿಸಿದಂತೆ ಭಕ್ತಿಯಿಂದ ಪೂಜಿಸುತ್ತಿದ್ದನು. 

ಸಾಳುವ ನರಸಿಂಹನಿಗೆ ತಿಮ್ಮರಾಜ, ತಮ್ಮರಾಜರೆಂಬ ಮಕ್ಕಳಿದ್ದರು. ಹಿರಿಯವನಾದ ತಿಮ್ಮರಾಜನಿಗೆ ನರಸಿಂಹ ಭೂಪತಿಯು ಕ್ರಿ.ಶ. ೧೪೯೩ರಲ್ಲಿ ಯೌವರಾಜ್ಯದಲ್ಲಿ ಪಟ್ಟಾಭಿಷೇಕ ಮಾಡಿದನು. ಅವನು ಗುರುಗಳಾದ ಶ್ರೀವ್ಯಾಸರಾಜರಲ್ಲಿ ತನ್ನ ತರುವಾಯ ತಿಮ್ಮರಾಜನೂ, ಅವನ ನಂತರ ತಮ್ಮ ರಾಜನೂ ಕನ್ನಡ ಸಾಮ್ರಾಜ್ಯವನ್ನಾಳುವಂತೆ ಮಾಡಿ ಅನುಗ್ರಹಿಸಬೇಕೆಂದು ಪ್ರಾರ್ಥಿಸಿದನು. ಶ್ರೀವ್ಯಾಸತೀರ್ಥರು ಅವನ ಮನದಾಶೆಯನನು ನೆರವೇರಿಸುವುದಾಗಿ ಭರವಸೆ ನೀಡಿದರು. ಇದಾದ ಕೆಲದಿನಗಳಲ್ಲಿ ಸಾಳುವ ನರಸಿಂಹರಾಜನು ಸ್ವರ್ಗಸ್ಥನಾದನು. ಶ್ರೀವ್ಯಾಸರಾಜರು ತಿಮ್ಮರಾಜನಿಗೆ ಪಟ್ಟ ಕಟ್ಟಿಸಿದರು. ಆದರೆ ದುರ್ದೈವದಿಂದ ಒಂದು ದಿನ ಬೇಟೆಗೆ ಅರಣ್ಯಕ್ಕೆ ಹೋದ ತಿಮ್ಮರಾಯನು ಮರಳಿ ಬರಲಿಲ್ಲ. ಏನಾದನೆಂದೂ ತಿಳಿಯಲಿಲ್ಲ. ಆಗ ಸಾಮ್ರಾಜ್ಯನಿಷ್ಠ ಸೇವಕರು ಮಾರ್ಗದರ್ಶನಕ್ಕಾಗಿ ರಾಜಗುರುಗಳ ಬಳಿಗೆ ತುಳುವ ನರಸನಾಯಕನೊಡನೆ ತಿರುಪತಿಗೆ ತೆರಳಿದರು. 

ತುಳುವ ನರಸನಾಯಕನು ರಾಜಗುರುಗಳ ದರ್ಶನ ಪಡೆದು ನಡೆದ ವೃತ್ತಾಂತವನ್ನರುಹಿ ಮುಂದಿನ ಕರ್ತವ್ಯದ ಬಗ್ಗೆ ಸಲಹೆ ನೀಡಲು ಚಂದ್ರಗಿರಿಗೆ ಬರಬೇಕೆಂದು ಪ್ರಾರ್ಥಿಸಿದನು. ವ್ಯಾಸತೀರ್ಥರು ನರಸನಾಯಕನೊಡನೆ ರಾಜಧಾನಿಗೆ ಬಂದು ಸ್ವಾಮಿನಿಷ್ಠ ಸೇವಕರು, ಸಚಿವ-ಸೇನಾನಿ-ರಾಜಬಂಧುಗಳ ಸಭೆಯಲ್ಲಿ ಕೀರ್ತಿ ಸೇಷ ಸಾಳುವ ನರಸಿಂಹರಾಜನ ಅಪೇಕ್ಷೆ, ಅದಕ್ಕೆ ತಾವು ನೀಡಿದ್ದ ಭರವಸೆಗಳನ್ನು ವಿವರಿಸಿ ತಮ್ಮ ರಾಜರೇ ಸಾಮ್ರಾಟರಾಗಬೇಕು ಎಂದು ಸಲಹೆ ನೀಡಿದರು. ಆಗ ಕೆಲವರು “ತಮ್ಮ ರಾಜರು ಇನ್ನೂ ಬಾಲಕರು. ಮಹಾಸಾಮ್ರಾಜ್ಯವನ್ನವರು ಆಳಬಲ್ಲರೇ” ಎಂದು ಸಂದೇಹ ವ್ಯಕ್ತಪಡಿಸಿದರು. 

ಶ್ರೀವ್ಯಾಸರಾಜರು “ಸಾಮ್ರಾಜ್ಯನಿಷ್ಠರಾದ ಕನ್ನಡವೀರರೇ, ನಿಮ್ಮ ಅಭಿಪ್ರಾಯ ವ್ಯಕ್ತವಾಯಿತು. ನಮಗೆ ಶ್ರೀಹರಿಯು ಪ್ರೇರಿಸಿರುವುದನ್ನು ತಿಳಿಸುತ್ತೇವೆ. ಅದು ಯುಕ್ತವಾಗಿದ್ದಲ್ಲಿ ಅದರಂತೆ ನಡೆಯಬಹುದು” ಎಂದು ಹೇಳಿದರು. ಸಕಲರೂ “ಗುರುಪಾದರೇ, ನೀವೇ ನಮಗೀಗ ದಿಕ್ಕು, ತಮ್ಮ ಅಭಿಪ್ರಾಯವನ್ನು ತಿಳಿಸಬೇಕು” ಎಂದು ಪ್ರಾರ್ಥಿಸಿದರು. 

ಆಗ ವ್ಯಾಸಮುನಿಗಳು “ನರಸಿಂಹ ಭೂಪಾಲರ ಪುತ್ರರಾದ ತಮ್ಮರಾಜರು ಸಾಮ್ರಾಟರಾಗಿರಲಿ. ಅವರು ಪ್ರಾಪ್ತವಯಸ್ಕರಾಗಿ ಸ್ವತಃ ಸಾಮ್ರಾಜ್ಯ ನಿರ್ವಹಣೆ ಮಾಡುವ ಯೋಗ್ಯತೆ ಬರುವವರೆಗೆ ಮಹಾಪರಾಕ್ರಮಿಗಳೂ ಸಾಮ್ರಾಜ್ಯದ ಹಿತಚಿಂತಕರೂ, ಮಹಾದಂಡನಾಯಕರೂ ಆದ ತುಳುವ ನರಸನಾಯಕರು ಸಾಮ್ರಾಜ್ಯದ ಕಾರ್ಯಕರ್ತರಾಗಿದ್ದು (ಕ್ಷಮಾಪತಿಗಳು) ಸಾಮ್ರಾಜ್ಯದ ಸಮಸ್ತ ಹೊರೆಯನ್ನು ಹೊತ್ತು ಆಡಳಿತವನ್ನು ನಿರ್ವಹಿಸಲಿ. ಇಂದಿನ ಪರಿಸ್ಥಿತಿಯಲ್ಲಿ ಇದಕ್ಕೆ ನರಸನಾಯಕರೇ ಸಮರ್ಥರು. ನೀವೆಲ್ಲರೂ ಅವರಿಗೆ ಬೆಂಬಲಿಗರಾಗಿದ್ದು ಸಾಮ್ರಾಜ್ಯದ ಹಿತವನ್ನು ಸಾಧಿಸಬೇಕು” ಎಂದು ಆಜ್ಞಾಪಿಸಿದರು. 

ಗುರುಗಳ ಮಾತು ಎಲ್ಲರಿಗೂ ಸಮ್ಮತವಾಯಿತು. ಆನಂದದಿಂದ ಸರ್ವರೂ ಅದನ್ನು ಪೂರ್ಣಮನಸ್ಸಿನಿಂದ ಅನುಮೋದಿಸಿದರು. ಶ್ರೀಗಳವರು ತನ್ನ ಮೇಲೆ ತೋರಿದ ಅನುಗ್ರಹ, ನೀಡಲಿರುವ ಜವಾಬ್ದಾರಿಗಳ ಮಹತ್ವವನ್ನರಿತು ಪರಮಾನಂದಭರಿತನಾದ ತುಳುವ ನರಸನಾಯಕನು ಶ್ರೀವ್ಯಾಸತೀರ್ಥರಿಗೆ ನಮಸ್ಕರಿಸಿ “ಗುರುದೇವ! ನನ್ನ ಮೇಲೆ ದೊಡ್ಡ ಹೊಣೆ ಹೊರಿಸುತ್ತಿರೋಣವಾಗಿದೆ. ತಮ್ಮ ಆಶೀರ್ವಾದ ಉಪದೇಶದಂತೆ, ಸಾಮ್ರಾಜ್ಯನಿಷ್ಟ ಹಿತೈಷಿಗಳ ಸಲಹೆಯಂತೆ ಚಕ್ರವರ್ತಿಗಳಿಗೆ ವಿಧೇಯನಾಗಿದ್ದು ನನ್ನ ಯೋಗ್ಯತಾನುಸಾರ ಸೇವೆ ಸಲ್ಲಿಸುತ್ತಾ ಕನ್ನಡ ಸಾಮ್ರಾಜ್ಯದ ಅಭ್ಯುದಯವಾಗುವಂತೆ ಶ್ರಮಿಸುತ್ತೇನೆ' ಎಂದು ವಿಜ್ಞಾಪಿಸಿದನು. 

ಒಂದು ಶುಭಮುಹೂರ್ತದಲ್ಲಿ ತಮ್ಮ ರಾಯನಿಗೆ ಪಟ್ಟಾಭಿಷೇಕವಾಯಿತು. ಅವನು ಇಮ್ಮಡಿ ನರಸಿಂಹನೆಂಬ ಹೆಸರಿನಿಂದ ಕನ್ನಡ ಸಾಮ್ರಾಜ್ಯದ ಚಕ್ರವರ್ತಿಯಾದನು.

ಇಮ್ಮಡಿ ನರಸಿಂಹನು ರಾಜಗುರುಗಳಾದ ಶ್ರೀವ್ಯಾಸರಾಜರನ್ನು ದೇವೇಂದ್ರನು ತನ್ನ ಗುರುಗಳಾದ ಬೃಹಸ್ಪತ್ಯಾಚಾರ್ಯರನ್ನು ಸೇವಿಸುವಂತೆ ಅತಿಭಕ್ತಿಯಿಂದ ಪೂಜಿಸುತ್ತಿದ್ದನು. 

ಕನ್ನಡ ಸಾಮ್ರಾಜ್ಯದ ನೂತನ ಕ್ಷಮಾಪತಿಯಾದ ತುಳುವ ನರಸನಾಯಕನು ಶ್ರೀವ್ಯಾಸರಾಜರು ಮೊದಲೇ ತೀರ್ಮಾನಿಸಿ ಒಪ್ಪಿಸಿದಂತೆ, ಇಮ್ಮಡಿ ನರಸಿಂಹನು ಚಂದ್ರಗಿರಿಯಲ್ಲಿದ್ದು ರಾಜ್ಯವಾಳಲು ಎಲ್ಲ ವ್ಯವಸ್ಥೆಯನ್ನೂ ಮಾಡಿ ವಿಜಯನಗರಕ್ಕೆ ಹೊರಡಲು ಸಿದ್ಧನಾದನು. 

ಅದೇ ಸಮಯಕ್ಕೆ ಶ್ರೀರಂಗದ ವೈಷ್ಣವರು, ಜಂಬುಕೇಶ್ವರದ ಶೈವರು ತಮ್ಮ ವಿವಾದ ಪರಿಹರಿಸಿ ನ್ಯಾಯ ದೊರಕಿಸಿಕೊಡಬೇಕೆಂದು ಚಕ್ರವರ್ತಿಯ ಬಳಿಗೆ ನಿಯೋಗ ಬಂದರು. ಬಹುವರ್ಷಗಳಿಂದ ಈ ವಿವಾದವು ಇದ್ದು ಸಾಮ್ರಾಜ್ಯದಲ್ಲೆಲ್ಲಾ ವೈಷ್ಣವ, ಶೈವ ವಿವಾದ-ದ್ವೇಷಾಸೂಯೆಗಳಿಗೆ ಕಾರಣವಾಗಿದ್ದು, ಆ ವಿವಾದವನ್ನು ಪರಿಹರಿಸುವುದು ಸಾಮ್ರಾಜ್ಯದ ಹಿತದೃಷ್ಟಿಯಿಂದ ಅತ್ಯವಶ್ಯವಾದ್ದರಿಂದ ನರಸನಾಯಕನು ಚಕ್ರವರ್ತಿ - ವ್ಯಾಸರಾಜರೊಡನೆ ವಿಚಾರ ವಿನಿಮಯ ಮಾಡಿ ರಾಜಗುರುಗಳು ಚಕ್ರವರ್ತಿಗಳೊಡನೆ ತಾನೇ ಶ್ರೀರಂಗಕ್ಕೆ ಬಂದು ಉಭಯರಿಗೂ ಸಮ್ಮತವಾಗುವ ರೀತಿಯಲ್ಲಿ ವ್ಯವಸ್ಥೆ ಮಾಡಿ ವಿವಾದವನ್ನು ಪರಿಹರಿಸುವುದಾಗಿ ಹೇಳಿ ನಿಯೋಗದವರನ್ನು ಕಳುಹಿಸಿದನು. ಆನಂತರ ನಾಲ್ಕಾರು ದಿನಗಳಾದ ಮೇಲೆ ನರಸನಾಯಕನು ಚಕ್ರವರ್ತಿಗಳು ಶ್ರೀವ್ಯಾಸರಾಜ ಗುರುಗಳನ್ನು ಕರೆದುಕೊಂಡು ಶ್ರೀರಂಗಕ್ಕೆ ಪ್ರಯಾಣ ಬೆಳೆಸಿದನು.