ಕಲಿಯುಗ ಕಲ್ಪತರು
ನಾಲ್ಕನೆಯ ಉಲ್ಲಾಸ
ಶ್ರೀವ್ಯಾಸರಾಜಯತಿಸಾರ್ವಭೌಮರು
೩೭. ತಿರುಪತಿ ಶ್ರೀನಿವಾಸನ ಸೇವೆ
ಮರುದಿನ ಸಂಜೆ ಗುರು-ಶಿಷ್ಯರು ಏಕಾಂತವಾಗಿ ಮಾತನಾಡುತ್ತಿರುವಾಗ ಮಠದ ಅಧಿಕಾರಿಗಳು ನರಸಿಂಹ ಭೂಪಾಲನನ್ನು ಗುರುಸನ್ನಿಧಿಗೆ ಕರೆತಂದರು. ಶ್ರೀಯವರಿಗೆ ನಮಸ್ಕರಿಸಿದ ಸಾಮ್ರಾಟನು ಅಪ್ಪಣೆ ಪಡೆದು ತನಗಾಗಿ ಹಾಕಿದ ಚಿತ್ರಾಸನದಲ್ಲಿ ಕುಳಿತ. ಆಗ ನಸುನಗುತ್ತಾ ಶ್ರೀವ್ಯಾಸರಾಜರು - “ಕರ್ನಾಟಕ ಚಕ್ರವರ್ತಿಗೆ ಮಂಗಳವಾಗಲಿ! ರಾಜನ್ ! ನಾವು ಸಂಚಾರದಲ್ಲಿದ್ದಾಗ ಇಲ್ಲಿ ನಡೆದ ಸಕಲ ವಿಚಾರಗಳನ್ನು ಗುರುಪಾದರು ತಿಳಿಸಿದರು. ಮಹದಾನಂದವಾಯಿತು. ನಮ್ಮ ಕನಸು ನನಸಾಯಿತು! ಇದು ಸಾಮ್ರಾಜ್ಯದ ಭಾಗೋದಯ, ಸಂತೋಷ” ಎಂದರು.
ಸಾಳುವ ನರಸಿಂಹನು “ಗುರುದೇವ! ಇವೆಲ್ಲವೂ ತಮ್ಮ ಉಪದೇಶದಂತೆ ನಡೆದುದರ ಫಲ! ಉಭಯ ಶ್ರೀಪಾದಂಗಳವರ ಅನುಗ್ರಹ-ಆಶೀರ್ವಾದ ಬಲದಿಂದಲೇ ನನಗೆ ಇಂಥ ಭಾಗ್ಯ ದೊರಕಿದೆಯೆಂದು ನಾನು ನಂಬಿದ್ದೇನೆ. ಉಭಯಗುರುಗಳು ಮಾರ್ಗದರ್ಶನ-ಉಪದೇಶ-ಅನುಗ್ರಹಗಳೇ ನನಗೆ ಮುಂದೆಯೂ ದಾರಿದೀಪ. ತಮ್ಮ ಅನುಗ್ರಹ ಏಕರೀತಿಯಾಗಿರಬೇಕು” ಎಂದು ಪ್ರಾರ್ಥಿಸಿ, ಆನಂತರ ಮತ್ತೆ ವಿಜ್ಞಾಪಿಸಿದ.
“ಹಿರಿಯ ಗುರುಗಳ ಅನುಗ್ರಹದಿಂದ ಬಂದಿದ್ದ ವಿಪತ್ತಿನಿಂದ ಪಾರಾಗಿ ಬದುಕಿದ್ದೇನೆ. ಇದರಿಂದ ನನ್ನ ಒಂದು ಸಮಸ್ಯೆ ಬಗೆಹರಿದಂತಾಯಿತು. ಆದರೆ ನನ್ನನ್ನು ಕಾಡುತ್ತಿರುವ ಮತ್ತೊಂದು ಸಮಸ್ಯೆಯು ಪರಿಹಾರವಾಗದ ವಿನಃ ನನ್ನ ಮನಸ್ಸಿಗೆ ಸಮಾಧಾನವಿಲ್ಲ. ಸಾಮ್ರಾಜ್ಯದ ಅಭ್ಯುದಯವೂ ಆಗದು”.
ಹಿರಿಯ ಗುರುಗಳು : “ರಾಜನ್, ನಿನ್ನನ್ನು ಬಾಧಿಸುತ್ತಿರುವ ಚಿಂತೆಯೇನು?” ಎಂದು ಪ್ರಶ್ನಿಸಿದರು.
ನರಸಿಂಹ : ಗುರುದೇವ, ತಿರುಪತಿ ಶ್ರೀನಿವಾಸದೇವರ ಪೂಜಾರಾಧನೆಯು ನಿಂತುಹೋಗಿರುವ ವಿಚಾರ ಸನ್ನಿಧಿಗೆ ವೇದ್ಯವೇ ಆಗಿದೆ. ನನ್ನ ನಿಮಿತ್ತವಾಗಿ ದೇವರ ಸೇವೆ ನಿಲ್ಲುವಂತಾಯಿತು. ಆ ಚಿಂತೆ ಹಗಲಿರುಳೂ ನನ್ನನ್ನು ಬಾಧಿಸುತ್ತಿದೆ. ಅರ್ಚಕರ ಮರಣಾನಂತರ ಯೋಗ್ಯರಾದ ಒಬ್ಬಿಬ್ಬರನ್ನು ಪೂಜೆಗೆ ನೇಮಿಸಿದ್ದೆ. ಆದರವರು “ಸ್ವಾಮಿಯನ್ನು ಪೂಜಿಸುವ ಧೈರ್ಯ ನಮಗಿಲ್ಲ'ವೆಂದು ಹೇಳಿಬಿಟ್ಟರು. ಮುಂದಿನ ದಾರಿಗಾಣದೆ ಅಲ್ಲಿನ ಮುಖ್ಯಸ್ಥರು ಗರ್ಭಾಲಯದ್ವಾರವನ್ನು ಮುಚ್ಚಿಸಿ, ಬೀಗಮುದ್ರೆ ಮಾಡಿಸಿ, ಮುಂಭಾಗದ ಮಂಟಪದಲ್ಲೇ ಭೋಗ ಶ್ರೀನಿವಾಸದೇವರಿಗೆ (ಉತ್ಸವಮೂರ್ತಿ) ಪೂಜಾದಿಗಳು ನಡೆಯುವ ವ್ಯವಸ್ಥೆ ಮಾಡಿ, ನನಗೆ ಆ ವಿಚಾರವನ್ನು ನಿವೇದಿಸಿದರು. ಈಗ ಕೆಲತಿಂಗಳುಗಳಿಂದ ಸ್ವಾಮಿಯ ಪೂಜೆ ನಿಂತುಹೋಗಿದೆ. ದೇವರನ್ನು ಪೂಜಿಸಲು ಯಾರೂ ಧೈರ್ಯ ಮಾಡಿ ಮುಂದೆ ಬರಲೊಲ್ಲರು. ಈ ಚಿಂತೆಯು ನನ್ನನ್ನು ಪೀಡಿಸುತ್ತಿದೆ. ಜ್ಞಾನನಿಧಿಗಳಾದ ಹಿರಿಯ ಶ್ರೀಪಾದಂಗಳವರೇ ಶ್ರೀನಿವಾಸನ ದೇವಾಲಯಾಡಳಿತ, ಪೂಜಾಧಿಕಾರವನ್ನು ವಹಿಸಿಕೊಂಡು ಶ್ರೀನಿವಾಸನು ಎಂದಿನಂತೆ ಸುಪ್ರಸನ್ನನಾಗಿ ಪೂಜಾ ಸ್ವೀಕರಿಸಿ ಸರ್ವರನ್ನೂ ಅನುಗ್ರಹಿಸುವಂತೆ ಮಾಡಬೇಕಾಗಿ ಬೇಡುತ್ತೇನೆ.
ಶ್ರೀಲಕ್ಷ್ಮಿ : ಸಾರ್ವಭೌಮ! ದೇವರನ್ನು ಒಲಿಸಿಕೊಂಡು ನೀನು ಹೇಳಿದ ಕಾರ್ಯ ಮಾಡಲು ಶಕ್ತರಾದ ಮಹನೀಯರೊಬ್ಬರಿದ್ದಾರೆ. ಅವರು ಮನಸ್ಸು ಮಾಡಿದರೆ ಎಲ್ಲವೂ ಮಂಗಳಕರವಾಗಿ ಜರುಗುವುದು.
ನರಸಿಂಹ : ಸ್ವಾಮಿ, ಆ ಮಹನೀಯರಾರು ? ಅಪ್ಪಣೆ ಮಾಡಿರಿ. ಅವರ ಕಾಲಿಗೆ ಬಿದ್ದು ಬೇಡಿ ಒಪ್ಪಿಸುತ್ತೇನೆ. ಶ್ರೀಲಕ್ಷ್ಮಿ : ಮಹಾರಾಜ! ಅವರಿಲ್ಲೇ ಇದ್ದಾರೆ!
'ಇಲ್ಲಿರುವರೇ?' ಎಂದು ಚಕ್ರವರ್ತಿ ವಿಸ್ಮಿತನಾಗಿ ಪ್ರಶ್ನಿಸಲು ಶ್ರೀಲಕ್ಷ್ಮೀನಾರಾಯಣಯೋಗಿಗಳು ಮಂದಸ್ಮಿತರಾಗಿ ಶ್ರೀವ್ಯಾಸರಾಜರತ್ತ ದೃಷ್ಟಿ ಬೀರಿ, “ಭೂಪಾಲ! ಇಕೋ ಈ ರಾಜಗುರುಗಳೇ ಆ ಮಹನೀಯರು! ಹಿಂದೆ ಭಯಂಕರ ಕೋಪದಿಂದ ತ್ರಿಲೋಕಗಳನ್ನೇ ಭಯಗೊಳಿಸಿದ್ದ ಶ್ರೀನರಹರಿಯನ್ನು ತಮ್ಮ ಭಕ್ತಿ ಮತ್ತು ಸ್ತೋತ್ರಗಳಿಂದ ಶಾಂತಗೊಳಿಸಿ, ಅವನು ಸುಪ್ರಸನ್ನನಾಗಿ ಸರ್ವರನ್ನೂ ರಕ್ಷಿಸುವಂತೆ ಶ್ರೀಪ್ರಹ್ಲಾದರಾಜರು ಮಾಡಿದ್ದರೆಂಬುದು ಪುರಾಣಾದಿಗಳಿಂದ ತಿಳಿದಿರುವುದಷ್ಟೇ ? ಆ ಪ್ರಹ್ಲಾದರಾಜರಂತೆ ಶ್ರೀನಿವಾಸನನ್ನು ಒಲಿಸಿಕೊಂಡು ಸುಪ್ರಸನ್ನಗೊಳಿಸಿ, ಅವನ ಅನುಗ್ರಹ ಸರ್ವರಿಗೂ ದೊರಕುವಂತೆ ಮಾಡಲು ನಮ್ಮ ಈ ವ್ಯಾಸರಾಜರು ಸಮರ್ಥರಾಗಿದ್ದಾರೆ. ಇವರನ್ನೇ ಪ್ರಾರ್ಥಿಸು” ಎಂದು ಹೇಳಿದರು.
ಗುರುಗಳ ಮಾತನ್ನಾಲಿಸಿ ನರಸಿಂಹ ಭೂಪತಿಯು ಹರ್ಷನಿರ್ಭರನಾಗಿ “ಗುರುದೇವ! ಪೂಜ್ಯ ಹಿರಿಯರುಗಳ ಮಾತು ಕೇಳೋಣವಾಯಿತಷ್ಟೇ ? ? ಈಗ ನೀವೇ ನನಗೆ ದಿಕ್ಕು, ತಿರುಪತಿ ದೇವಾಲಯಾಡಳಿತ ಪೂಜಾಧಿಕಾರಗಳನ್ನು ವಹಿಸಿಕೊಂಡು ದೇವರು ಒಲಿಯುವಂತೆ ಮಾಡಿ ಅನುಗ್ರಹಿಸಬೇಕು” ಎಂದು ಶ್ರೀವ್ಯಾಸರಾಜರಿಗೆ ನಮಸ್ಕರಿಸಿ ಪ್ರಾರ್ಥಿಸಿದನು.
ಶ್ರೀವ್ಯಾಸರಾಜರು ಕ್ಷಣಕಾಲ ಮೌನವಾಗಿದ್ದು, ಅನಂತರ “ಹೂಂ, ಶ್ರೀಹರಿ ಚಿತ್ತ, ಗುರುಗಳ ಆಜ್ಞೆ! ರಾಜನ್, ಶ್ರೀಹರಿಯು ಒಲಿದರೆ ಯಾವುದೂ ಅಸಾಧ್ಯವಲ್ಲ! ಆಗಲಿ, ನಿನ್ನ ಕೋರಿಕೆಯಂತೆ ಶ್ರೀವೆಂಕಟೇಶ್ವರನನ್ನು ಒಲಿಸಿಕೊಂಡು ಅವನು ಸುಮುಖನಾಗಿ ಸರ್ವರನ್ನೂ ಪೊರೆಯುವಂತೆ ಮಾಡಲು ಪ್ರಯತ್ನಿಸುತ್ತೇವೆ. ಫಲ ಆ ದೇವನಿಗೇ ಸೇರಿದ್ದು, ಆದರೆ ರಾಜನ್, ನಮ್ಮ ಒಂದು ಕರಾರಿಗೆ ನೀನು ಸಮ್ಮತಿಸಿದಲ್ಲಿ ನಾವೀ ಕಾರ್ಯವನ್ನು ಕೈಗೊಳ್ಳುತ್ತೇವೆ” ಎಂದರು.
ನರಸಿಂಹ : ಮಹಾಸ್ವಾಮಿ, ತಮ್ಮೆಲ್ಲ ನಿಬಂಧನೆಯನ್ನೂ ಒಪ್ಪಿದ್ದೇನೆ. ಅದೇನು ಅಪ್ಪಣೆಯಾಗಲಿ!
ವ್ಯಾಸರಾಜರು : (ದಹಾಸ ಬೀರಿ) ಚಕ್ರೇಶ, ಈ ಹೊಣೆಗಾರಿಕೆ ತಾತ್ಕಾಲಿಕವಾಗಿರಬೇಕು. ಮುಂದೆ ದೇವರ ಪೂಜಾಧಿಕಾರವು ಶ್ರೀತಾತಾಚಾರ್ಯರ ವಂಶೀಕರಿಗೆ ಕೊಡಲು ನೀವು ಒಪ್ಪಬೇಕು. ನಾವು ತಿರುಪತಿಗೆ ಮೂರು-ನಾಲ್ಕು ಜನ ಶಿಷ್ಯರೊಡನೆ ಹೋಗಿ ಅಲ್ಲಿ ಒಂದು ಮಂಡಲ ಏಕಾಂತವಾಗಿ ಪೂಜಾರಾಧನೆ ನೆರವೇರಿಸುತ್ತೇವೆ. ಆಗ ಯಾರಿಗೂ ಒಳಗೆ ಪ್ರವೇಶವಿರತಕ್ಕದ್ದಲ್ಲ. ಭಗವಂತನು ನಮ್ಮ ಕೈಂಕರ್ಯವನ್ನು ಸ್ವೀಕರಿಸಿ ಸುಪ್ರಸನ್ನವಾಗುವ ಶುಭಲಕ್ಷಣ ಕಂಡಾಗ ನಾವು ಹೇಳಿಕಳುಹಿಸುತ್ತೇವೆ. ಆಗ ಪೂಜ್ಯಗುರುಗಳು ಮತ್ತು ನೀವೆಲ್ಲರೂ ಬಂದು ಶ್ರೀನಿವಾಸನ ದರ್ಶನ, ಅನುಗ್ರಹಗಳಿಗೆ ಪಾತ್ರರಾಗಬೇಕು. ಇದೇ ನಮ್ಮ ಕರಾರು!
ನರಸಿಂಹ ಭೂಪತಿಯು ಆನಂದಪರವಶರಾಗಿ “ಸ್ವಾಮಿ, ನನ್ನಲ್ಲಿ ತಮ್ಮ ಕಾರುಣ್ಯ ಅಪಾರವಾಯಿತು. ತಮ್ಮ ಚಿತ್ತದಂತಾಗಲಿ” ಎಂದು ವಿಜ್ಞಾಪಿಸಿದನು. ಒಂದೆರಡು ದಿನಗಳಲ್ಲಿಯೇ ಶ್ರೀವ್ಯಾಸರಾಜರು ತಿರುಪತಿಗೆ ಹೊರಡುವದೆಂದು ನಿಶ್ಚಯಿಸಲಾಯಿತು. ನರಸಿಂಹ ಭೂಪನು ತಿರುಪತಿಯ ಮುಖ್ಯಸ್ಥರಿಗೆ “ರಾಜಗುರು ಶ್ರೀವ್ಯಾಸರಾಜರು ತಿರುಪತಿಯ ದೇವಾಲಯಾಧಿಪತ್ಯ, ಪೂಜಾಧಿಕಾರಗಳನ್ನು ವಹಿಸಿಕೊಳ್ಳಲು ದಯಮಾಡಿಸುವರು. ಅವರ ಆಜ್ಞೆಯಂತೆ ಸರ್ವರೂ ವರ್ತಿಸತಕ್ಕದ್ದು” ಎಂದು ನಿರೂಪ
ಬರೆಯಿಸಿ ಕಳುಹಿಸಿದನು.
ಶ್ರೀವ್ಯಾಸರಾಜರು ತಮ್ಮ ಪೂರ್ವಾಶ್ರಮದ ಷಾಷಿಕ ಬಂಧುಗಳು. ಶ್ರೇಷ್ಠ ಪಂಡಿತರೂ, ಸದಾಚಾರಸಂಪನ್ನರೂ ಆದ ನಾಲ್ಕು ಜನ ಆತ್ಮೀಯ ಶಿಷ್ಯರೊಡನೆ ಒಂದು ಶುಭ ಮುಹೂರ್ತದಲ್ಲಿ ತಿರುಪತಿಗೆ ಹೊರಟರು. ಬೆಟ್ಟವು ಕಣ್ಣಿಗೆ ಬಿದ್ದೊಡನೆ ಶ್ರೀಗಳವರು ಸಾಷ್ಟಾಂಗ ನಮಸ್ಕಾರ ಮಾಡಿ ವಿಷ್ಣುಸಹಸ್ರನಾಮ, ಸೂತ್ರಭಾಷ್ಯ, ಗೀತಾಭಾಷ್ಯ, ಅನುವ್ಯಾಖ್ಯಾನಗಳನ್ನು ಪಾರಾಯಣ ಮಾಡುತ್ತಾ ಪರ್ವತವನ್ನು ಹತತೊಡಗಿದರು. ಭಗವಾನ ಮಾಡುತ್ತ ಗುರುಗಳು ಬೆಟ್ಟವನ್ನು ಹತ್ತಿ ಗುಡಿಯ ಸಮೀಪಕ್ಕೆ ದಯಮಾಡಿಸಿದರು. ಆಗ ಅಲ್ಲಿನ ಮುಖ್ಯಸ್ಥರು, ಧರ್ಮಾಭಿಮಾನಿಗಳು, ಪೂರ್ಣಕುಂಭ, ವಾದ್ಯ, ವೇದಘೋಷಗಳೊಡನೆ ಗುರುಗಳನ್ನು ಸ್ವಾಗತಿಸಿ ದೇವಾಲಯದ ಸಮೀಪದಲ್ಲೇ ಏರ್ಪಡಿಸಿದ್ದ ಮಂದಿರದಲ್ಲಿ ಬಿಡಾರ ಮಾಡಿಸಿ ಫಲಮಂತ್ರಾಕ್ಷತೆ ಪಡೆದು ತೆರಳಿದರು.
ಶ್ರೀಗಳವರು ಶಿಷ್ಟಸಹಿತರಾಗಿ ಸ್ವಾಮಿಪುಷ್ಕರಣಿಯಲ್ಲಿ ಸ್ನಾನಮಾಡಿ ದೇವಾಲಯ ಸಮೀಪಕ್ಕೆ ಬಂದು ಮಹಾದ್ವಾರದ ಮುಂದೆಯೇ ದೇವರಿಗೆ ನಮಸ್ಕರಿಸಿ ಬಿಡಾರಕ್ಕೆ ಆಗಮಿಸಿ, ಸ್ನಾನ, ಆತ್ಮೀಕ, ಜಪತಪಾದಿಗಳನ್ನೂ, ದೇವರ ಪೂಜೆಯನ್ನೂ ಮುಗಿಸಿ ಭಿಕ್ಷಾ ಸ್ವೀಕರಿಸಿ ವಿಶ್ರಾಂತಿ ಪಡೆದರು. ಅಂದು ರಾತ್ರಿ ಅಲ್ಲಿನ ಮುಖ್ಯಸ್ಥರನ್ನು ಕರೆಯಿಸಿಕೊಂಡು ತಾವು ನಲವತ್ತೆಂಟು ದಿನ ಶ್ರೀನಿವಾಸನನ್ನು ಏಕಾಂತವಾಗಿ ಆರಾಧಿಸಲಿಚ್ಛಿಸುವುದಾಗಿಯೂ, ಆ ಕಾಲದಲ್ಲಿ ದೇವಾಲಯದ ಗರ್ಭಾಲಯಕ್ಕೆ ಯಾರೂ ಬರದಂತೆ ವ್ಯವಸ್ಥೆ ಮಾಡಬೇಕೆಂದೂ ತಿಳಿಸಿದರು ಅವರು ಶ್ರೀಗಳವರ ಆಜ್ಞೆಯಂತೆ ವ್ಯವಸ್ಥೆ ಮಾಡುವುದಾಗಿ ವಿಜ್ಞಾಪಿಸಿ ಶ್ರೀಯವರ ಪೂಜಾರಾಧನೆ, ಭಿಕ್ಷಾದಿಗಳಿಗೂ ಸರ್ವವ್ಯವಸ್ತೆಗಳನ್ನು ಮಾಡಿ ಅಪ್ಪಣೆ ಪಡೆದು ತೆರಳಿದರು.
ಮರುದಿನ ಬೆಳಗಿನ ಝಾವ ಶ್ರೀಗಳವರು ಸ್ವಾಮಿಪುಷ್ಕರಣಿಯಲ್ಲಿ ಶಿಷ್ಯರೊಂದಿಗೆ ಸ್ನಾನ ಮಾಡಿ ಆಕಾದಿಗಳನ್ನು ಪೂರೈಸಿ ಪೂಜಾದ್ರವ್ಯಗಳೊಡನೆ ಸಿದ್ಧರಾಗಿದ್ದ ಶಿಷ್ಯರೊಡನೆ ದೇವಾಲಯ ಪ್ರವೇಶ ಮಾಡಿದರು. ಶ್ರೀಯವರ ಅಪ್ಪಣೆಯಂತೆ ಅಲ್ಲಿನ ಮುಖ್ಯಸ್ಥರು ಗರ್ಭಾಲಯದ ಬೀಗಮುದ್ರೆಯನ್ನೊಡೆಸಿ ಗರ್ಭಾಲಯದ ಬೀಗದ ಕೈಯನ್ನು ಗುರುಗಳಿಗಅರ್ಪಿಸಿ ತೆರಳಿದರು. ಪೂಜಾದ್ರವ್ಯವನ್ನು ಕರದಲ್ಲಿ ಪಿಡಿದು ಶ್ರೀಗಳವರು, ತಾವು ಮತ್ತೆ ಹೊರಗೆ ಬರುವವರೆಗೆ ಗರ್ಭಾಲಯದ ಹೊರಗೇ ಕಾದಿರಲು ಶಿಷ್ಯರಿಗೆ ಹೇಳಿ ತಾವೊಬ್ಬರೇ ಪರಮಾತ್ಮನನ್ನು ಸ್ತುತಿಸುತ್ತಾ ಬಾಗಿಲು ತೆರೆದು ಒಳಗೆ ಪ್ರವೇಶಿಸಿ, ಮತ್ತೆ ಬಾಗಿಲನ್ನು ಭದ್ರಪಡಿಸಿ ದೇವರ ಸನ್ನಿಧಿಗೆ ಬಂದರು. ಒಳಗೆ ಗರ್ಭಾಂಕಣವನ್ನೂ ದಾಟಿ ಶ್ರೀವೆಂಕಟೇಶ್ವರನಿಗೆ ಸಾಷ್ಟಾಂಗ ಪ್ರಣಾಮ ಮಾಡಿ ದೇವದೇವನನ್ನು ಭಕ್ತಿಯಿಂದ ಈಕ್ಷಿಸಿದರು. ಆಗ ಗುರುಗಳ ಮುಖದಿಂದ ಭಗವಂತನ ಸ್ತುತಿಯೊಂದು ಹೊರಹೊಮ್ಮಿತು!
ರಾಗ : ಪೂರ್ವಿ
ನಿನ್ನ ನೋಡಿ ಧನ್ಯನಾದೆನೋ | ಹೇ ಶ್ರೀನಿವಾಸ
ನಿನ್ನ ನೋಡಿ ಧನ್ಯನಾದೆ | ನೆನ್ನಮನದಿ ನಿಂತು ಸುಪ್ರ | ಸನ್ನ ದಯಮಾಡಿ ನೀನು | ಮುನ್ನಿನಂತೆ ಸಲಹಬೇಕು
ಲಕ್ಷ್ಮೀರಮಣ ಪಕ್ಷಿವಾಹನ | ಕಕ್ಷ ನಿನ್ನದಲ್ಲಿ ಪಾಂಡು | ಪಕ್ಷ ದೈತ್ಯ ಶಿಕ್ಷ | ರಕ್ಷಿಸೆನ್ನ ಕಮಲಾಕ್ಷ
ದೇಶದೇಶವನ್ನು ತಿರುಗಿ | ಆಶೆಬದ್ಧನಾದೆ ಸ್ವಾಮಿ | ಪಾಶ ನನ್ನದಲ್ಲ ಜಗ 1 ದೀಶ ಕಾಯೊ ವಾಸುದೇವ
ಕಂತುಜನಕ ಕೇಳೋಯೆನ್ನ | ಅಂತರದ ಸೇವೆಯನ್ನು
ಅಂತರವಿಲ್ಲದೆ ಸಲಹಬೇಕು | ಹೊಂತಕಾರಿ ಮುದ್ದುಕೃಷ್ಣ
ತಿರುಪತಿಯಲ್ಲಿ ಪೂಜೆ ನಿಂತುಹೋಗಿ ಉದಾಸ ರೂಪ ತಾಳಿ ನಿಂತಿದ್ದ ಶ್ರೀನಿವಾಸನನ್ನು ಒಲಿಸಿಕೊಳ್ಳಲು ತಿರುಪತಿಗೆ ಬಂದಾಗ ಶ್ರೀವ್ಯಾಸರಾಜರು ಮೊಟ್ಟಮೊದಲು ದೇವರ ದರ್ಶನ ಮಾಡಿದಾಗ ರಚಿಸಿದ ಪದವಿದೆಂದು ಹೇಳಬಹುದು.
ಈ ಪದದಲ್ಲಿರುವ “ನಿನ್ನ ನೋಡಿ ಧನ್ಯನಾದೆ. ಎನ್ನ ಮನದಿ ನಿಂತು ಸುಪ್ರಸನ್ನ ದಯಮಾಡಿ ನೀನು ಮುನ್ನಿನಂತೆ ಸಲಹಬೇಕು. ಕಂತುಜನಕ ಕೇಳೋ, ಎನ್ನ ಅಂತರದ (ಅಂತರಂಗದ) ಸೇವೆಯನ್ನು ಅಂತರವಿಲ್ಲದೆ ಸಲಹಬೇಕು' ಇತ್ಯಾದಿ ವಾಕ್ಯಗಳನ್ನು ವಿವೇಚಿಸಿದಾಗ ಶ್ರೀವ್ಯಾಸರಾಜರು ಶ್ರೀನಿವಾಸನನ್ನು ಹೀಗೆ ಪ್ರಾರ್ಥಿಸಿದರೆಂದು ಹೇಳಬಹುದು. “ದೇವ, ನಿನ್ನನ್ನು ನೋಡಿ ಧನ್ಯನಾದೆ. ನನ್ನ ಮನದಲ್ಲಿ ನಿಂತು ಅಂದರೆ ನನ್ನ ಹೃದಯಕಮಲದಲ್ಲಿ ಬಿಂಬರೂಪಿಯಾಗಿರುವ ಹೇ ಕಂತುಜನಕ ಶ್ರೀಕೃಷ್ಣಾ! ಅಲ್ಲಿ ನೀನು ಪ್ರಸನ್ನನಾಗಿರುವೆ. ಸ್ವಾಮಿ, ಇಲ್ಲೇಕೆ ಉದಾಸರೂಪಿಯಾಗಿದ್ದೀಯೆ ? ನನ್ನ ಮನದಲ್ಲಿ ನೆಲೆನಿಂತಿರುವಂತೆಯೇ ಇಲ್ಲಿಯೂ ಸುಪ್ರಸನ್ನನಾಗಿ ಈಗಿನ ಉದಾಸರೂಪವನ್ನು ತ್ಯಜಿಸಿ ಮೊದಲಿನಂತೆಯೇ (ಮುನ್ನಿನಂತೆ) ಸುಪ್ರಸನ್ನರೂಪದಿಂದ ದರ್ಶನವಿತ್ತು ಕಾಪಾಡು. ಸ್ವಾಮಿ, ಕೇಳು ನಾನು ಮಾಡುತ್ತಿರುವ ಈ ಅಂತರಂಗಸೇವೆಯನ್ನು ಅಂತರವಿಲ್ಲದೆ, ನನ್ನನ್ನು ದೂರಮಾಡದೆ ಸ್ವೀಕರಿಸಿ ಸಲಹಬೇಕು” ಎಂದು ಪ್ರಾರ್ಥಿಸಿದ್ದಾರೆಂದು ಭಾಸವಾಗುತ್ತದೆ. ಆದ್ದರಿಂದ ಇದು ದೇವರ ದರ್ಶನವಾದ ಕೂಡಲೇ ರಚಿಸಿದ ಪದವೆಂದು ಹೇಳಬಹುದು.
ಆನಂತರ ಶ್ರೀವ್ಯಾಸರಾಜರು ಶ್ರೀನಿವಾಸನ ಮುಂದೆ ಕರಜೋಡಿಸಿ ನಿಂತು ಪ್ರಾರ್ಥಿಸಹತ್ತಿದರು ದೇವದೇವ! ಜಗಜ್ಜನ್ಮಾದಿ ಕಾರಣ, ರಮಾಬ್ರಹ್ಮರುದ್ರೇಂದ್ರಾಮರವೃಂದವಂದ್ಯ ಪಾದಾಬ್ಬ! ಸರ್ವೋತ್ತಮ, ಅನಂತಕಲ್ಯಾಣಗುಣಮಂದಿರ, ದೋಷದೂರ, ಆನಂದಮಯ, ಮೋಕ್ಷಪ್ರದಾತ, ಭಕ್ತವತ್ಸಲ, ಸ್ವಾಮಿ! ಏಕಿಂತು ಉದಾಸರೂಪ ತಾಳಿರುವೆ ? ದೇವ, ನಿನ್ನೀ ಉದಾಸರೂಪವನ್ನು ಕಂಡು ಹೆದರುವೆನೆಂದು ತಿಳಿದಿರುವೆಯಾ? ಹಿಂದೆ ಖಳಹಿರಣ್ಯಕಶ್ಯಪನನ್ನು ಸಂಹರಿಸಿದಾಗ ನಿನ್ನ ಕೋಪ-ಭಯಂಕರರೂಪವನ್ನು ಕಂಡು ಸರ್ವರೂ ಭಯಾರ್ತರಾದಾಗ, ನಿನ್ನ ಭಕ್ತನಾದ ಪ್ರಹ್ಲಾದನು ಭಯಗೊಂಡನೇನು ? ಪ್ರಹ್ಲಾದನ ಸ್ತುತಿಗೆ ನೀನು ಪ್ರಸನ್ನನಾಗಿ ಕೋಪ ತ್ಯಜಿಸಿ ಪೊರೆದೆಯಲ್ಲವೆ? ಅದನ್ನು ಮರೆತುಬಿಟ್ಟೆಯಾ ಸ್ವಾಮಿ ? ನಿನ್ನ ಭಕ್ತನಾದ ನಾನೂ ಪ್ರಹ್ಲಾದನಂತೆ ನಿನ್ನೀ ಉದಾಸರೂಪವನ್ನು ನೋಡಿ ಭಯಪಟ್ಟಿಲ್ಲ. ನನ್ನ ಪ್ರಾರ್ಥನೆಯನ್ನು ಕೇಳಿ ಪ್ರಸನ್ನನಾಗು. ಶ್ರೀವೆಂಕಟೇಶ, ನಿನ್ನೀ ಅಭಿನಯವನ್ನು ಸಾಕುಮಾಡು ಅನಂತಕಲ್ಯಾಣಗುಣ- ಪೂರ್ಣನೂ, ದೋಷದೂರನೂ, ಅಪ್ರಾಕೃತಸ್ವಾಮಿಯೂ ಆದ ನಿನಗೆ ಉದಾಸರೂಪವೆಂದರೇನು ? ನಿನ್ನ ಪೂಜಾರಾಧನೆಯು ನಿಂತಿತೆಂದೇ ? ರಮಾಬ್ರಹ್ಮಾದಿಗಳಿಂದ ನಿರಂತರ ಪೂಜೆಗೊಳ್ಳುತ್ತಿರುವ ನಿನ್ನ ಅರ್ಚನೆಗೆ ಅಪೋಹ ಉಂಟೆ ? ಅಜ್ಜಜನರ ಕಣ್ಣಿಗೆ ಶಿಲಾರೂಪವಾಗಿ ಕಾಣುವ ನೀನು ಕಲಿಯುಗದ ಜನರನ್ನು ಪೊರೆಯಲೆಂದು ವೈಕುಂಠದಿಂದ ಧರೆಗಿಳಿದು ಬಂದು ನಿಂತಿರುವ ಸಚ್ಚಿದಾನಂದ ಸ್ವರೂಪನೆಂದು ನಾನರಿತಿರುವೆನು. ದೇವ! ನೀನು ಪೂಜೆ ಸ್ವೀಕರಿಸದೇ ನಿಲ್ಲುವಂತಾದುದಕ್ಕೆ ಕಾರಣವೇನು? ಬಹುಶಃ ಈ ನಿನ್ನ ಪಾದಕಿಂಕರನಿಂದ ಸೇವೆ ಸ್ವೀಕರಿಸುವ ಇಚ್ಛೆ ಮತ್ತು ಸೇವೆ ಸ್ವೀಕರಿಸಿ ಮೊದಲಿಗಿಂತ ಹೆಚ್ಚು ಸಾನ್ನಿಧ್ಯ, ತೇಜಸ್ಸುಗಳಿಂದ ಕಂಗೊಳಿಸಿ ವಿಶೇಷಾಕಾರವಾಗಿ ಜಗತ್ಕಲ್ಯಾಣ ಮಾಡಿ, ಆ ಕೀರ್ತಿಯನ್ನು ಈ ದಾಸನಿಗಿತ್ತು ಪೊರೆಯಬೇಕೆಂಬ ವಾತ್ಸಲ್ಯದಿಂದಲೇ ಉದಾಸರೂಪ ತಾಳಿದಂತೆ ನಟಿಸುತ್ತಿರುವೆಯಾ? ದೇವ, ಭಕ್ತರ ಗುಂಪಿನಲ್ಲಿ ನಾನು ನಿನಗೆ ಅತಿಪ್ರಿಯನೆಂದು ಒಪ್ಪಿಕೊಂಡಿರುವೆ. ಅದು ಸತ್ಯವಾಗಿದ್ದಲ್ಲಿ ನನ್ನ ಸೇವೆ ಸ್ವೀಕರಿಸಿ, ಉದಾಸರೂಪವನ್ನು ತ್ಯಜಿಸಿ, ಸುಪ್ರಸನ್ನನಾಗಿ ಹಿಂದಿನಂತೆಯೇ ಪ್ರಶಾಂತ ಸುಂದರರೂಪದಿಂದ ಸರ್ವರನ್ನೂ ಕಾಪಾಡು! ಭಕ್ತವತ್ಸಲನೆಂಬ ನಿನ್ನ ಬಿರುದನ್ನು ಸಾರ್ಥಕಪಡಿಸಿಕೊ. ಪ್ರಭು, ನಿನಗೆ ನಮೋನಮಃ” ಎಂದು ಪರಿಪರಿಯಿಂದ ಪ್ರಾರ್ಥಿಸಿ ನಮಸ್ಕರಿಸಿದರು.
ಆಗೊಂದು ಅದ್ಭುತ ಘಟನೆ ಜರುಗಿತು! ಗುರುಗಳ ಪ್ರಾರ್ಥನೆಗೆ ಶ್ರೀನಿವಾಸನು ಒಲಿದನೋ ಎಂಬಂತೆ ಇದ್ದಕ್ಕಿದ್ದಂತೆ ಗರ್ಭಾಲಯದಲ್ಲಿ ಮಿಂಚೊಂದು ಮಿನುಗಿದಂತಾಗಿ ಆ ದಿವ್ಯ ಪ್ರಶಾಂತ ಪ್ರಭೆಯಲ್ಲಿ ಶ್ರೀವೆಂಕಟೇಶ್ವರನು ಅಭಯ-ವರದಮುದ್ರಾಂಕಿತಕರನಾಗಿ ಮಂದಹಾಸ ಬೀರುತ್ತಾ ನಿಂತಿರುವ ಭವ್ಯ ದೃಶ್ಯ ಶ್ರೀಗಳವರ ದೃಷ್ಟಿಗೆ ಗೋಚರಿಸಿತು! ಗುರುಗಳು ರೋಮಾಂಚಿತರಾದರು. ಅವರ ನೇತ್ರಗಳಿಂದ ಆನಂದಸಲಿಲ ಹರಿಯತೊಡಗಿತು. ಭಕ್ತು ದ್ರೇಕದಿಂದ ಶ್ರೀವ್ಯಾಸತೀರ್ಥರು “ಒಲಿದೆಯಾ ಪ್ರಭು! ಆಹಾ, ನೀನೆಂಥ ಕರುಣಾಳು! ನಿನ್ನ ಭಕ್ತವಾತ್ಸಲ್ಯಕ್ಕೆ ಎಣೆಯಿಲ್ಲ, ದೇವ, ಧನ್ಯನಾದೆ” ಎಂದು ಸ್ತೋತ್ರಮಾಡಿ ಶ್ರೀನಿವಾಸನ ಪಾದಕಮಲಗಳನ್ನು ಶುದ್ಧೋದಕದಿಂದ ತೊಳೆದು ಕ್ಷೀರಾಭಿಷೇಕ ಮಾಡಿ “ತಂತ್ರಸಾರೋಕ್ತ ಕ್ರಮದಿಂದ ದೇವರನ್ನು ಗಂಧಾಕ್ಷತೆ, ತುಳಸೀ ಪುಷ್ಪಾದಿಗಲಿಂದ ಅರ್ಚಿಸಿ, ಫಲಕ್ಷೀರಗಳನ್ನು ಸಮರ್ಪಿಸಿ, ಮಹಾನೀರಾಜನವನ್ನೆತ್ತಿ, ಮಂತ್ರಪುಷ್ಪಗಳನ್ನು ಅರ್ಪಿಸಿ, ಭಗವಂತನ ಪಾದಗಳ ಮೇಲೆ ಶಿರವಿರಿಸಿ ನಮಸ್ಕರಿಸಿ ಪ್ರಾರ್ಥಿಸಿದರು.
ತರುವಾಯ ತೀರ್ಥ-ಪ್ರಸಾದಗಳೊಡನೆ ಹೊರಬಂದು ಗರ್ಭಾಲಯ ದ್ವಾರವನ್ನು ಬಂಧಿಸಿ ಬೀಗ ಹಾಕಿದರು. ವಿಲಕ್ಷಣ ತೇಜಸ್ಸು, ಭಕ್ತಿಭಾವ, ಮಿನುಗುವ ಕಾಂತಿಪೂರ್ಣ ನೇತ್ರಗಳು, ಮಂದಹಾಸದಿಂದ ರಂಜಿತರಾದ ಗುರುಗಳನ್ನು ಕಂಡು ಶಿಷ್ಯರು ಗುರುಗಳಿಗೆ ಭಗವಂತನು ಒಲಿದಿರುವನೆಂದರಿತು ಆನಂದದಿಂದ ಗುರುವರರಿಗೆ ನಮಸ್ಕರಿಸಿ ನಿಂತರು. ಆಗ ವ್ಯಾಸಮುನಿಗಳು ಗದ್ಗದ ಕಂಠದಿಂದ “ಶ್ರೀಶ್ರೀನಿವಾಸ ಸುಪ್ರಸನ್ನನಾದ” ಎಂದಿಷ್ಟೇ ಹೇಳಿ ಶಿಷ್ಯರೊಡನೆ ಮಠಕ್ಕೆ ಬಂದು ಸಂಸ್ಥಾನ ಪೂಜೆ ಮಾಡಿ ಶ್ರೀನಿವಾಸನ ತೀರ್ಥ-ಪ್ರಸಾದಗಳನ್ನು ಸ್ವೀಕರಿಸಿ ಭಿಕ್ಷಾ ಸ್ವೀಕಾರ ಮಾಡಿದರು.
ಮರುದಿನ ಶ್ರೀವ್ಯಾಸತೀರ್ಥರ ಆದೇಶದಂತೆ ಬೆಟ್ಟದ ಪ್ರಮುಖರು ಶ್ರೀನಿವಾಸನ ಪೂಜಾಮಂಡಲೋತ್ಸವಾಂಗವಾಗಿ ಹವನ, ಹೋಮ, ಸಚ್ಛಾಸ್ತ್ರಪಾರಾಯಣಾದಿಗಳನ್ನು ವೈಭವದಿಂದ ಜರುಗಿಸಹತ್ತಿದರು. ಒಂದು ಸಪ್ತಾಹಕಾಲ ತಾವೊಬ್ಬರೇ ಏಕಾಂತವಾಗಿ ಶ್ರೀನಿವಾಸದೇವರ ಪೂಜಾರಾಧನೆ ಮಾಡುತ್ತಿದ್ದ ಶ್ರೀಗಳವರು ಆನಂತರ ದೇವರ ಪೂಜಾಕೈಂಕರ್ಯಕ್ಕೆ ತಮ್ಮ ಪಂಡಿತ ಶಿಷ್ಯರ ಸಹಾಯವನ್ನು ಪಡೆದು ಏಕಾಂತವಾಗಿ ಪೂಜಿಸಹತ್ತಿದರು. ಅದೇ ಕಾಲದಲ್ಲಿ ತಮ್ಮ ಮಹಾಸಂಸ್ಥಾನ ಪೂಜೆಯನ್ನೂ ಶ್ರೀವೆಂಕಟೇಶ್ವರ ಸನ್ನಿಧಿಯಲ್ಲಿಯೇ ನೆರವೇರಿಸಲಾರಂಭಿಸಿದರು. ಹದಿನೈದು ದಿನಗಳು ಶ್ರೀಯವರು ಭಕ್ತಿಯಿಂದ ಪೂಜಾರಾಧನೆ ನೆರವೇರಿಸುತ್ತಿದ್ದಂತೆಯೇ ವಿಶೇಷ ತೇಜಸ್ಸು, ಸೌಂದರ್ಯ, ಪ್ರಸನ್ನತೆಗಳಿಂದ ಶ್ರೀನಿವಾಸ ರಾರಾಜಿಸಲಾರಂಭಿಸಿದನು. ಇದರಿಂದ ಹರ್ಷಿತರಾದ ವ್ಯಾಸಭಿಕ್ಷುಗಳು ತಮ್ಮ ಈ ಕೈಂಕರ್ಯ, ಭಗವಂತನು ಒಲಿದು ಪ್ರಸನ್ನನಾದುದರ ಜ್ಞಾಪಕಾರ್ಥವಾಗಿ ಮಂಡಲೋತ್ಸವ ಸಮಾರೋಪಣ ಕಾಲದಲ್ಲಿ ಶ್ರೀನಿವಾಸದೇವರಿಗೆ ಸಮರ್ಪಿಸಲು ಶ್ರೀಮಠದ ಖರ್ಚಿನಿಂದಲೇ ನೂರೆಂಟು ಶಾಲಿಗ್ರಾಮಗಳಿಂದ ಶೋಭಿಸುವ ಸುವರ್ಣಹಾರವನ್ನು ನಿರ್ಮಾಣ ಮಾಡಿಸಿದರು.
ನಲವತ್ತು ದಿನಗಳ ಕಾಲ ಪೂಜೆ, ಹವನ-ಹೋಮ-ಪಾರಾಯಣಾದಿಗಳು ನಿರ್ವಿಘ್ನವಾಗಿ ಜರುಗಿದ ಮೇಲೆ ಶ್ರೀವ್ಯಾಸಮುನಿಗಳು, ಈ ವಿಚಾರವನ್ನು ಗುರುಗಳು ಹಾಗೂ ಸಾರ್ವಭೌಮನಿಗೆ ತಿಳಿಸಿ, ಮಂಡಲೋತ್ಸವದ ದಿನ ಬಂದು ದೇವರ ದರ್ಶನ ಮಾಡಿ ಅನುಗ್ರಹ ಪಡೆಯಬೇಕೆಂದು ಹೇಳಿ ಕಳುಹಿಸಿದರು. ಆ ವಿಚಾರ ಕೇಳಿ ಪರಮಾನಂದತುಂದಿಲರಾದ ಅವರು ಮಂಡಲೋತ್ಸವಕ್ಕೆ ತಿರುಪತಿಗೆ ಬರಲು ಸಿದ್ದರಾಗಹತ್ತಿದರು.
ಮಂಡಲೋತ್ಸವದ ಹಿಂದಿನ ದಿನ ಗುರುಗಳು ಸಚಿವ-ಸಾಮಂತ-ಪರಿವಾರದೊಡನೆ ಬಂದ ನರಸಿಂಹ ಭೂಪಾಲನನ್ನು ಗೌರವದಿಂದ ಸ್ವಾಗತಿಸಿ, ಬಿಡಾರ ಮಾಡಿಸಿ, ಸಕಲ ವಿಚಾರವನ್ನೂ ವ್ಯಾಸತೀರ್ಥರು ತಿಳಿಸಿದರು. ಆನಂದಪರವಶರಾಗಿ ಸರ್ವರೂ ರಾತ್ರಿಯನ್ನು ಕಳೆದರು.
ಮಂಡಲೋತ್ಸವದ ಕೊನೆಯ ದಿನ ಬೆಳಗಿನ ಝಾವ ಶ್ರೀವ್ಯಾಸತೀರ್ಥರು ಗುರುಗಳೊಡನೆ ಸ್ವಾಮಿಪುಷ್ಕರಣಿಯಲ್ಲಿ ಮಿಂದು ಜಪತಪಾದನುಷ್ಠಾನ ಪೂರೈಸಿ, ವಾದಘೋಷ, ವೇದಪಾರಾಯಣಗಳನ್ನು ಪಂಡಿತರು ನೆರವೇರಿಸುತ್ತಿರಲು ಪುನಗು ಜಾಜಿ, ಕಸ್ತೂರಿ, ಇನ್ನಿತರ ಪರಿಮಳ ದ್ರವ್ಯಗಳಿಂದ ಪರಿಮಿಶ್ರಿತವಾದ ಸುಗಂಧಕ್ಕೆ ತೈಲ ತುಂಬಿದ ಸುವರ್ಣ ಕಳಶಗಳನ್ನು ಶಿರದಲ್ಲಿರಿಸಿ ಭಕ್ತಿಯಿಂದ ಶ್ರೀನಿವಾಸನ ಸನ್ನಿಧಿಗೆ ಬಂದರು. ಕನ್ನಡ ಚಕ್ರವರ್ತಿ ಪರಿವಾರ ಸಹಿತನಾಗಿ ಗುರುಗಳನ್ನು ಹಿಂಬಾಲಿಸಿದನು. ಬಹುಕಾಲ ಪೂಜೆ ನಿಂತಿದ್ದು, ಶ್ರೀವ್ಯಾಸತೀರ್ಥರು ಭಗವಂತನನ್ನು ಒಲಿಸಿಕೊಂಡು ಮೊದಲಿನ ಕಾಂತಿಯಿಂದ ವಿರಾಜಿಸುವ ಶ್ರೀನಿವಾಸನಿಗೆ ಮಂಡಲೋತ್ಸವ ನಡೆಸಿ ಅಂದು ಸರ್ವರಿಗೂ ದೇವರ ದರ್ಶನ ಮಾಡಿಸುವರೆಂಬ ವಾರ್ತೆ ಹಬ್ಬಿ ಎಲ್ಲ ಕಡೆಯಿಂದ ಸಹಸ್ರಾರು ಜನ ಭಕ್ತರು ದೇವರ ಭಜನೆ, ನಾಮಸ್ಮರಣೆ ಮಾಡುತ್ತಾ ದೇವಾಲಯದಲ್ಲಿ ನೆರೆದಿದ್ದರು. ಗುರುದ್ವಯರು ಮಂತ್ರಪಠನ ಮಾಡುತ್ತಾ ಗರ್ಭಗುಡಿಯನ್ನು ಪ್ರವೇಶಿಸಿದರು. ನರಸಿಂಹ ಭೂಪಾಲ-ಪರಿವಾರದವರೂ ಹಿಂಬಾಲಿಸಿದರು. ತೆರೆಯನ್ನು ತೆರೆದ ಕೂಡಲೇ ದಿವ್ಯಪ್ರಕಾಶದಲ್ಲಿ ನಗೆಮೊಗದಿಂದ ಸುಪ್ರಸನ್ನನಾಗಿ ನಿಂತ ಶ್ರೀನಿವಾಸನ ವಿಶ್ವರೂಪದರ್ಶನವಾದ ಕೂಡಲೇ ಸಕಲರೂ ಆನಂದತುಂದಿಲರಾಗಿ “ಜಯ ಜಯ ವೆಂಕಟೇಶ್ವರ” ಎಂದು ಜಯಘೋಷ ಮಾಡಿದರು. ಅನಂತರ ವ್ಯಾಸರಾಜರು ಮತ್ತು ಶ್ರೀಪಾದರಾಜರು ಮಂಡಲಾಭಿಷೇಕಾಂಗ ಪುನಗಾಭಿಷೇಕ ನಿಮಿತ್ತವಾಗಿ ಸಕಲರ ಶ್ರೇಯಸ್ಸಿಗಾಗಿ ಸಂಕಲ್ಪ ಮಾಡಿ ಅಕ್ಷತೆ - ನೀರು ಬಿಟ್ಟರು. ಸುಪ್ರಸನ್ನನಾದ ಶ್ರೀನಿವಾಸನ ದರ್ಶನ ಮಾಡಲೋ ಎಂಬಂತೆ ಅದೇ ಸಮಯಕ್ಕೆ ಪೂರ್ವ ದಿಗಂತದಲ್ಲಿ ಸೂರ್ಯ ಭಗವಾನನು ತನ್ನ ತರುಣಾರುಣ-ಕಿರಣ ಕಾಂತಿಯನ್ನು ಹೊರಚೆಲ್ಲುತ್ತಾ ಉದಯಿಸಿದನು.
ಶ್ರೀಮಠದ ಪಂಡಿತರು ಸಹಾಯ ಮಾಡುತ್ತಿರಲು ಗುರುದ್ವಯರು ಶ್ರೀವೆಂಕಟೇಶ್ವರನಿಗೆ ಭಕ್ತಿಶ್ರದಾನ್ವಿತರಾಗಿ ಪುನಗಾಭಿಷೇಕ ಮಾಡಿದರು. ಅದೊಂದು ಪವಿತ್ರ ಮಂಗಳಕರ ದೃಶ್ಯವಾಗಿತ್ತು. ತರುವಾಯ ಸಹಸ್ರ ಶಂಖ ಕ್ಷೀರಾಭಿಷೇಕ, ಶುದ್ಧೋದಕಾಭಿಷೇಕ- ಗಳಾದ ಮೇಲೆ ದ್ವಾರದ ತೆರೆಯನ್ನು ಎಳೆದರು. ಶ್ರೀವ್ಯಾಸರಾಜರು ಪರಮಾತ್ಮನನ್ನು ವಸ್ತ್ರಾಭರಣ-ಪುಷ್ಪಮಾಲೆಗಳಿಂದ ಅಲಂಕರಿಸಿ ದೇವರ ಹಣೆಯಲ್ಲಿ ಕಸ್ತೂರಿ, ಕರ್ಫಾರ, ಕೇಸರಿ ಮಿಶ್ರಿತವಾದ ತಿಲಕವನ್ನಿಟ್ಟರು (ಶ್ರೀಪಾದರೇಣು), ನಂತರ ಗುರುಗಳ ಅಪ್ಪಣೆಯಂತೆ ತೆರೆಯನ್ನು ತೆರೆಯಲಾಯಿತು. ಸರ್ವಾಭರಣ ಭೂಷಿತನಾಗಿ ಮುಖಾರವಿಂದದಲ್ಲಿ ಮಂದಹಾಸ ಚಂದ್ರಿಕೆಯನ್ನು ಹೊರಸೂಸುತ್ತಾ ಅಭಯವರದ ಮುದ್ರಾಂಕಿತಕರವಾಗಿ ಕೋಟಿ ಮನ್ಮಥ ಸೌಂದರ್ಯದಿಂದ ದೇದೀಪ್ಯಮಾನನಾದ ಶ್ರೀನಿವಾಸನ ದರ್ಶನ ಪಡೆದು, ಭಕ್ತಸಮುದಾಯ “ಶ್ರೀಹರೇ, ಶ್ರೀನಿವಾಸ ಜಯ ಜಯ” ಎಂದು ಹರ್ಷಧ್ವನಿ ಮಾಡಿದರು.
ಆನಂತರ ಗುರುಗಳು ವಿವಿಧ ಪುಷ್ಪ-ತುಳಸಿಗಳಿಂದ ಸಹಸ್ರಾರ್ಚನೆ ಮಾಡಿ, ಫಲಗಳನ್ನು ಸಮರ್ಪಿಸಿ, ಮಹಾಮಂಗಳಾರತಿಯನ್ನು ಬೆಳಗಿದರು. ಆಗ ಶ್ರೀವ್ಯಾಸತೀರ್ಥರು ತಾವು ತಯಾರು ಮಾಡಿಸಿದ ಸುವರ್ಣಶಾಲಿಗ್ರಾಮಸರವನ್ನು ಗುರುಗಳಿಗೂ ಸಾರ್ವಭೌಮನಿಗೂ ತೋರಿಸಿ ಶ್ರೀನಿವಾಸದೇವರ ಕಂಠದಲ್ಲಿ ಹಾಕಿ ಸಾಷ್ಟಾಂಗ ಪ್ರಣಾಮ ಮಾಡಿದರು.99 ಆಗೊಂದು ಪವಾಡವೇ ನಡೆದುಹೋಯಿತು. ಶ್ರೀವ್ಯಾಸ ಯತೀಶ್ವರರು ತನಗರ್ಪಿಸಿದ ಶಾಲಿಗ್ರಾಮಸರವನ್ನು ಆನಂದದಿಂದ ಸ್ವೀಕರಿಸಿ ಆಶೀರ್ವದಿಸುತ್ತಾ, ಗುರುಗಳನ್ನು ಸಂಭಾವಿಸುತ್ತಿರುವನೋ ಎಂಬಂತೆ ದೇವರ ಕೊರಳಲ್ಲಿದ್ದ ಮಲ್ಲಿಕಾಮಾಲೆಯೊಂದು ಕಳಚಿಬಿದ್ದು ನಮಸ್ಕರಿಸಿದ ಶ್ರೀವ್ಯಾಸರಾಜರ ಕಂಠವನ್ನಲಂಕರಿಸಿತು! ಶ್ರೀನಿವಾಸನ ಈ ಭಕ್ತವಾತ್ಸಲ್ಯ-ಅನುಗ್ರಹಗಳನ್ನು ಕಂಡು ಸಕಲರೂ “ಶ್ರೀವ್ಯಾಸತೀರ್ಥರಿಗೆ ಜಯವಾಗಲಿ” ಎಂದು ಹರ್ಷಧ್ವನಿಗೈದರು.
ಭಗವದನುಗ್ರಹವನ್ನು ಕಂಡು ವ್ಯಾಸಮುನಿಗಳು ರೋಮಾಂಚಿತರಾದರು. ಆಗ ಅವರ ಮುಖದಿಂದ ಸುರಸರಸ್ವತಿಯು ಸ್ತೋತ್ರರೂಪವಾಗಿ ಹೊರಹೊಮ್ಮಿದಳು.
ಶ್ರೀವ್ಯಾಸರಾಜ ವಿರಚಿತ ಶ್ರೀನಿವಾಸ ಸುಪ್ರಭಾತ ಸ್ತುತಿ
ಪ್ರಾತಃಸ್ಮರಾಮಿ ರಮಯಾ ಸಹ ವೇಂಕಟೇಶಂ
ಮಂದಸ್ಮಿತಂ ಮುಖಸರೋರುಹ ಕಾಂತಿರಮ್ಯಮ್ |
ಮಾಣಿಕ್ಯಕಾಂತಿ ವಿಲಸನ್ನು ಕುಟೋರ್ಧ್ವಪುಂಡ್ರಂ
ಪದ್ಮಾಕ್ಷಲಕ್ಷ(ಕ)ಮಣಿಕುಂಡಲಮಂಡಿತಾಂಗಮ್
ಪ್ರಾತರ್ಭಜಾಮಿ ಕರರಮ್ಯ ಸುಶಂಖಚಕ್ರಂ ಭಕ್ತಾಭಯಪ್ರದಕಟಿಸಲದತ್ತ ಪಾಣಮ್ ।
ಶ್ರೀವತ್ಸಕೌಸ್ತುಭ ಲಸನ್ಮಣಿ ಕಾಂಚನಾಢಂ
ಪೀತಾಂಬರಂ ಮದನಕೋಟಿ ಸುಮೋಹನಾಂಗ
ಪ್ರಾತರ್ನಮಾಮಿ ಪರಮಾತ್ಮಪದಾರವಿಂದ
ಆನಂದಸಾಂದ್ರನಿಲಯಂ ಮಣಿನೂಪುರಾಢಮ್ |
ಏತತ್ಸಮಸ್ತಜಗತಾಮಿತಿ ದರ್ಶಯಂತಂ
ವೈಕುಂಠಮತ್ರ ಭಜತಾಂ ಕರಪಲ್ಲವೇನ
ವ್ಯಾಸರಾಜಯತಿಪ್ರೋಕ್ತಂ ಶ್ಲೋಕತ್ರಯಮಿದಂ ಶುಭಂ ।
ಪ್ರಾತಃಕಾಲೇ ಪಠೇದ್ಯಸ್ತು ಪಾಪೇಭ್ ಮುಚ್ಯತೇ ನರಃ ||
ತಿರುಪತಿಯಲ್ಲಿ ಇಂದಿಗೂ ಶ್ರೀವ್ಯಾಸರಾಜರು ಸಮರ್ಪಿಸಿದ ಸುವರ್ಣಶಾಲಿಗ್ರಾಮಹಾರವನ್ನು ಶ್ರೀನಿವಾಸನು ಧರಿಸುವುದನ್ನು ಎಲ್ಲರೂ ನೋಡಬಹುದಾಗಿದೆ.
ಶ್ರೀವ್ಯಾಸರಾಯರು ತಿರುಪತಿ ಶ್ರೀನಿವಾಸನನ್ನು ಪ್ರಪ್ರಥಮವಾಗಿ ಪೂಜಿಸಿದಾಗ ಶ್ರೀಹರಿಯು ಯತಿಗಳ ಸೇವೆಯನ್ನು ಸ್ವೀಕರಿಸಿ ಸುಪ್ರಸನ್ನನಾಗಿ ಅವರನ್ನು ಅನುಗ್ರಹಿಸಿದಾಗ ಶ್ರೀವ್ಯಾಸಮುನಿಗಳು ಈ ಸುಪ್ರಭಾತವನ್ನು ರಚಿಸಿ, ಸಮರ್ಪಿಸಿದರೆಂದು ಪರಂಪರೆಯಿಂದ ಹಿರಿಯರು, ಜ್ಞಾನಿಗಳು ಹೇಳುತ್ತಾ ಬಂದಿದ್ದಾರೆ.
ಭಕ್ತುದ್ವೀಪಕವಾದ ಆ ಸುಪ್ರಭಾತವನ್ನಾಲಿಸಿ ಸರ್ವರೂ ಪರಮಾನಂದಭರಿತರಾದರು. ಆಗ ಸಾಮ್ರಾಟ್ ನರಸಿಂಹ ಭೂಪನು ತಾನು ತಂದಿದ್ದ ಧನಕನಕಾಭರಣಾದಿ ಕಾಣಿಕೆಗಳನ್ನು ದೇವರಿಗೆ ಅರ್ಪಿಸಿ ಕೃತಾರ್ಥನಾದನು. ಅದರೊಂದಿಗೆ ಬೆಳಗಿನ ಪೂಜಾಕಾರ್ಯ ಮುಗಿಯಿತು.
ಆ ತರುವಾಯ ಉಭಯಗುರುಗಳ ನೇತೃತ್ವದಲ್ಲಿ ಹವನ-ಹೋಮಾದಿಗಳ ಪೂರ್ಣಾಹುತಿಯಾಗಿ ಋತ್ವಿಜರು-ಪಾರಾಯಣ ಮಾಡಿದವರುಗಳಿಗೆ, ಪುರೋಹಿತರಿಗೆ ಚಕ್ರವರ್ತಿಯು ಗುರುಗಳಿಂದ ಸಂಭಾವನಾ ಪ್ರದಾನ ಮಾಡಿಸಿದನು.
ಮಧ್ಯಾಹ್ನ ಶ್ರೀವ್ಯಾಸರಾಜರು ಶ್ರೀನಿವಾಸನ ಸನ್ನಿಧಿಯಲ್ಲಿ ತಮ್ಮ ಮಹಾಸಂಸ್ಥಾನ ಪೂಜೆಯನ್ನೂ ಶ್ರೀನಿವಾಸನಿಗೆ ಮಧ್ಯಾಹ್ನದ ಪೂಜೆಯನ್ನೂ ನೆರವೇರಿಸಿ ಶಾಲ್ಯಾನ್ನ, ಹುಗ್ಗಿ, ಲಕ, ದೋಸೆ, ವಡೆ, ಫಲಗಳನ್ನು ನಿವೇದಿಸಿ ಮಹಾಮಂಗಳಾರತಿ ಮಾಡಿ ಸಕಲರಿಗೂ ದೇವರ ತೀರ್ಥ ಪ್ರಸಾದಗಳನ್ನು ಕರುಣಿಸಿದರು. ಅಂದು ನಾಲ್ಕಾರು ಸಾವಿರ ಜನರಿಗೆ ಮೃಷ್ಟಾನ್ನ ಭೋಜನವಾಯಿತು.
ಅಂದು ಸಂಜೆ ಸಾರ್ವಜನಿಕ ಸಭೆ ಸೇರಿಸಿ ಸಾಳುವ ನರಸಿಂಹರಾಜನು ಶ್ರೀವ್ಯಾಸರಾಜರು ತನಗೆ, ಸಾಮ್ರಾಜ್ಯಕ್ಕೆ, ಅಖಂಡ ಭಕ್ತವೃಂದಕ್ಕೆ ಶ್ರೀನಿವಾಸದೇವರ ಅನುಗ್ರಹ ದೊರಕಿಸಿಕೊಟ್ಟು ಮಹೋಪಕಾರ ಮಾಡಿದ್ದನ್ನು ಬಣ್ಣಿಸಿ ಗುರುಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದನು ಮತ್ತು ಇನ್ನು ಮುಂದೂ ಶ್ರೀವ್ಯಾಸತೀರ್ಥರೇ ದೇವಾಲಯದ ಆಡಳಿತ, ಪೂಜಾದಿಗಳನ್ನು ನೆರವೇರಿಸುತ್ತಾ ಸಮಸ್ತ ಭಕ್ತಜನರಿಗೆ ಶ್ರೇಯಸ್ಸು, ಮಂಗಳಗಳೂ, ದೇವರ ಅನುಗ್ರಹವೂ ದೊರಕುವಂತೆ ಮಾಡಬೇಕೆಂದು ಪ್ರಾರ್ಥಿಸಿ, ಶ್ರೀಗಳವರ ಆಜ್ಞೆಯಂತೆಯೇ ಬೆಟ್ಟದ ಲೌಕಿಕ-ವೈದಿಕ ಜನರು, ಬರುವ ಯಾತ್ರಾರ್ಥಿಗಳು ವರ್ತಿಸಬೇಕೆಂದು ಆಜ್ಞಾಪಿಸಿ ಅದರಂತೆ
ನಿರೂಪ ಹೊರಡಿಸಿದನು.
ಶ್ರೀವೆಂಕಟೇಶ್ವರನ ಇಚ್ಛೆಯಿಂದಲೇ ಪರಮಾತ್ಮನನ್ನು ಪೂಜಿಸುವ ಅಧಿಕಾರ-ವೈಭವಗಳು ಪ್ರಾಪ್ತವಾಯಿತೆಂದು, ಅದು ಭಗವತ್ಥಂಕಲ್ಪವೆಂದೂ ಭಾವಿಸಿದ ಶ್ರೀವ್ಯಾಸತೀರ್ಥರು ಚಕ್ರವರ್ತಿಯ ಪ್ರಾರ್ಥನೆಗೆ ಸಂತೋಷದಿಂದ ಸಮ್ಮತಿಸಿದರು. ಅಂದಿನಿಂದ ಗುರುಗಳು ಶ್ರೀನಿವಾಸದೇವರ ಪೂಜಾರಾಧನೆಯನ್ನು ತಂತ್ರಸಾರಾಗಮ” ಕ್ರಮದಂತೆಯೇ ನೆರವೇರಿಸುತ್ತಾ ಬಂದರು.
ಶ್ರೀಪಾದರಾಜರು, ನರಸಿಂಹ ಭೂಪಾಲ ಮತ್ತು ಪರಿವಾರದವರು ಮೂರು - ನಾಲ್ಕು ದಿನ ಬೆಟ್ಟದ ಮೇಲಿದ್ದು ತರುವಾಯ ಚಂದ್ರಗಿರಿಗೆ ಪ್ರಯಾಣ ಬೆಳೆಸಿದರು. ಶ್ರೀಲಕ್ಷ್ಮೀನಾರಾಯಣಮುನಿಗಳು ಅಲ್ಲಿಂದ ಮುಳಬಾಗಿಲಿಗೆ ದಯಮಾಡಿಸಿದರು.
ಕೆಲಕಾಲ ಗತಿಸಿದ ಮೇಲೆ ಚಕ್ರವರ್ತಿಯು ಶ್ರೀವ್ಯಾಸರಾಜರಿಗೆ ತಿರುಪತಿ ಬೆಟ್ಟದ ಮೇಲೆ ಸ್ವಾಮಿಪುಷ್ಕರಣಿಯ ತೀರದಲ್ಲಿ ಒಂದು ಭವ್ಯಮಠವನ್ನು ನಿರ್ಮಿಸಿಕೊಟ್ಟನು. ಶ್ರೀಗಳವರು ಬೆಟ್ಟದ ಮೇಲಿರುವಾಗ ಆ ಮಠದಲ್ಲಿದ್ದು ದೇವರ ಸೇವೆಯನ್ನು ಮಾಡಬೇಕೆಂದು ಪ್ರಾರ್ಥಿಸಿದನು. ಅರಸನ ಅಪೇಕ್ಷೆಯಂತೆ ಗುರುಗಳು ಸಾರ್ವಭೌಮನು ತಮಗಿತ್ತ ಮಠದಲ್ಲಿ ವಾಸಿಸುತ್ತಾ ಶ್ರೀನಿವಾಸದೇವರ ಪೂಜಾರಾಧನೆ, ದೇವಾಲಯಾಡಳಿತಾದಿಗಳನ್ನು ನೆರವೇರಿಸಹತ್ತಿದರು. ಒಂದೆರಡು ವರ್ಷಗಳಲ್ಲೇ ಸಹಸ್ರ ಸಂಖ್ಯೆಯಲ್ಲಿ ಯಾತ್ರಿಕರು ಬಂದು ದೇವರನ್ನು ಸೇವಿಸಿ ಇಷ್ಟಾರ್ಥಗಳನ್ನು ಪಡೆದು ಕೃತಾರ್ಥರಾಗತೊಡಗಿದರು.
ವ್ಯಾಸರಾಜರು ತಿರುಪತಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸಿ ಶ್ರೀನಿವಾಸನ ಪೂಜಾರಾಧನೆಯು ಸುಸೂತ್ರವಾಗಿ ನೆರವೇರುವ ವ್ಯವಸ್ಥೆ ಮಾಡಿದರು. ಅವುಗಳಲ್ಲಿ ಕೆಲವನ್ನು ಇಲ್ಲಿ ಉಲ್ಲೇಖಿಸುವುದು ಯುಕ್ತವಾಗಿದೆ ಮೊದಲನೆಯದಾಗಿ ಗುರುಗಳು ಶಾಸ್ತ್ರೀಯವಾಗಿ ದೇವರ ಪೂಜಾರಾಧನೆಗಳನ್ನು ನೆರವೇರಿಸಲು ವ್ಯವಸ್ಥೆಯನ್ನು ಮಾಡಿ ತಂತ್ರಸಾರಾಗಮೋಕ್ತಪ್ರಕಾರವಾಗಿ ದೇವರ ಪೂಜೆಯನ್ನು ನೆರವೇರುವಂತೆ ಮಾಡಿದರು. ಪ್ರತಿದಿವಸ ಶ್ರೀನಿವಾಸದೇವರ ಪಾದಗಳಿಗೆ ಮಾತ್ರ ಅಭಿಷೇಕ, ಪೂಜೆಗಳು ಜರುಗುವಂತೆಯೂ, ಪ್ರತಿ ಗುರುವಾರ ದೇವರಿಗೆ ಪಾದಗಳಿಗೆ ಅಭಿಷೇಕವಾದ ಮೇಲೆ ದೇವರಿಗೆ “ಹೂವಿನ ಅಂಗಿ”ಯ ಸೇವೆ ನೆರವೇರುವ ಕ್ರಮವನ್ನೇರ್ಪಡಿಸಿದರು. ಪ್ರತಿ ಶುಕ್ರವಾರ ಮಾತ್ರ ಶ್ರೀನಿವಾಸದೇವರ ವಿಶ್ವರೂಪ ದರ್ಶನವಾಗುವಂತೆಯೂ, ಅಂದು ದೇವರಿಗೆ ಪುನಗಾಭಿಷೇಕ, ಸರ್ವಾಭರಣಾಲಂಕಾರ, ವಿಧ್ಯುಕ್ತ ಷೋಡಶೋಪಚಾರಪೂಜಾಕ್ರಮವನ್ನೇರ್ಪಡಿಸಿದರು. ಇದರಂತೆ ನಿತ್ಯೋತ್ಸವ, ವಾರೋತ್ಸವ, ಪಕೋತ್ಸವ, ಮಾಸೋತ್ಸವಾದಿ ಸೇವೆಗಳಲ್ಲದೆ ನೈಮಿತ್ತಿಕವಾದ ವಿಶೇಷೋತ್ಸವಗಳು, ಕಲ್ಯಾಣೋತ್ಸವ, ಬ್ರಹ್ಮತ್ಸವಾದಿ ಸೇವೆಗಳು ವಿಶೇಷ ವೈಭವದಿಂದ ಸಕ್ರಮವಾಗಿ ನೆರವೇರುವ ಕ್ರಮವನ್ನು ಏರ್ಪಡಿಸಿದರು ಮತ್ತು ಭಕ್ತರುಗಳಿಗಾಗಿ ಆರತಿ, ಅರ್ಚನೆ, ತೋಮಾಲಸೇವೆ, ಕಲ್ಯಾಣೋತ್ಸವ, ವಿವಿಧ ವಾಹನೋತ್ಸವಗಳು, ವಿವಿಧ ನೈವೇದ್ಯ ಸಮರ್ಪಣೆ ಮುಂತಾದ ಹೊಸ ವ್ಯವಸ್ಥೆಗಳು ಸಕ್ರಮವಾಗಿ ಭಕ್ತರ ಮನಸ್ಸಿಗೆ ತೃಪ್ತಿಯಾಗುವಂತೆ ಸುವ್ಯವಸ್ಥಿತವಾಗಿ ನೆರವೇರಿಸುವಂತೆ ಮಾಡಿದರು.
ಶ್ರೀಗಳವರು ಏರ್ಪಡಿಸಿದ ಸರ್ವಜನರಿಗೂ ಸಂತೋಷಪ್ರದವಾದ ಈ ಕ್ರಮದಿಂದಾಗಿ ತಿರುಪತಿಗೆ ದಿನೇ ದಿನೇ ಯಾತ್ರಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಬರಲಾರಂಭಿಸಿದರು. ಜನಸಂದಣಿ ಅಧಿಕವಾಗಹತ್ತಿದ್ದರಿಂದ ಭಕ್ತರಾದ ಯಾತ್ರಾರ್ಥಿಗಳು ತಂಗಲು ಅನೇಕ ಕಟ್ಟಡ-ಛತ್ರಾದಿಗಳನ್ನು ಗುರುಗಳು ನಿರ್ಮಾಣ ಮಾಡಿಸಿದರು. ದೇವಾಲಯದ ಆಡಳಿತವು ಸುವ್ಯವಸ್ಥಿತವಾಗಿ ಜರುಗಲು ಅನೇಕ ಯೋಗ್ಯರಾದ ಜನರನ್ನು ಅನೇಕ ಹುದ್ದೆಗಳಿಗಾಗಿ ತೆಗೆದುಕೊಂಡು ಅವರೆಲ್ಲರೂ ಭಕ್ತಿ-ಶ್ರದ್ಧೆಗಳಿಂದ ಯಾತ್ರಾರ್ಥಿ ಭಕ್ತರ ಮನಸ್ಸಂತೋಷವಾಗುವಂತೆ ವರ್ತಿಸುತ್ತಾ ಸೇವೆ ಸಲ್ಲಿಸಲು ಕಟ್ಟಳೆ ಮಾಡಿದರು. ಇವೆಲ್ಲದರ ಪರಿಣಾಮವಾಗಿ, ಮುಖ್ಯವಾಗಿ ಶ್ರೀಯವರ ಶುದ್ಧ ಆಡಳಿತ, ಕಾರ್ಯದಕ್ಷತೆ, ಅವರ ಜ್ಞಾನ-ವೈರಾಗ್ಯ-ತಪಸ್ಸುಗಳಿಂದ ಪ್ರಭಾವಿತರಾದ ಭಕ್ತಜನರು ಪರಮಹರ್ಷಿತರಾಗಿ ದೇವರಿಗೆ ವಿವಿಧ ರೀತಿಯಲ್ಲಿ ಧನ, ಕನಕ, ಆಭರಣ, ವಸ್ತ್ರ, ಪಾತ್ರೆ, ದಿನಸಿ ಮುಂತಾದವುಗಳನ್ನು ಕಾಣಿಕೆಯಾಗಿ ಸಮರ್ಪಿಸಲಾರಂಭಿಸಿದರು ಮತ್ತು ಶ್ರೀಮಂತರು ಭೂಸ್ವಾಸ್ತಿಗಳನ್ನು ದೇವರಿಗೆ ದತ್ತಿಯಾಗಿ ಬಿಟ್ಟರು. ಇವೆಲ್ಲದರಿಂದ ದೇವಾಲಯದ ಭಂಡಾರ ತುಂಬಿ ಆದಾಯವು ಮೊದಲಿಗಿಂತ ನಾಲ್ಕಾರು ಪಟ್ಟು ಅಧಿಕವಾಗಲು ಕಾರಣವಾಯಿತು.
ಶ್ರೀಪಾದಂಗಳವರು ಇದಿಷ್ಟರಿಂದಲೇ ತೃಪ್ತರಾಗಲಿಲ್ಲ. ತಮಗೆ ಕುಲದೇವನೂ, ಆರಾಧ್ಯಮೂರ್ತಿಯೂ ಆದ ಶ್ರೀವೆಂಕಟೇಶ್ವರನಿಗೆ ಶ್ರೀಪಾದರು ತಮ್ಮ ಶ್ರೀಮಠದ ಉತ್ಪನ್ನದಿಂದ ವಿವಿಧ ಆಭರಣಗಳು, ಪೂಜಾಸಾಮಗ್ರಿಗಳನ್ನು ಮಾಡಿಸಿ ದೇವರಿಗೆ ಸಮರ್ಪಿಸಿದರು. ಶ್ರೀವ್ಯಾಸರಾಜರು ತಿರುಪತಿಯ ಶ್ರೀನಿವಾಸನ ಭಂಡಾರಕ್ಕೆ ಸುಮಾರು ಹದಿನಾಲ್ಕು ಸಾವಿರ (೧೪,೦೦೦) ಸ್ವರ್ಣಪಣ (ನರ್‌ಪಣ)ಗಳನ್ನು ಅಂದರೆ ಇಂದಿನ ೬೦ ಸಾವಿರ ತೊಲ ಬಂಗಾರವನ್ನು ಕಾಣಿಕೆಯಾಗಿ ಸಮರ್ಪಿಸಿ, ಪ್ರತಿವರ್ಷವೂ ವಿಶೇಷ ದಿನಗಳಲ್ಲಿ ದೇವರಿಗೆ ಅಪ್ಪಪಡಿಗಳನ್ನು ಅರ್ಪಿಸುವ ವ್ಯವಸ್ಥೆ ಮಾಡಿದರು. ಇದಲ್ಲದೆ ಕನ್ನಡದ ಎಲ್ಲ ಸಾರ್ವಭೌಮರಿಂದಲೂ ದೇವರಿಗೆ ಗ್ರಾಮ, ಭೂಮಿ, ಆಭರಣಗಳು, ವಿಶೇಷ ಪೂಜೆಗಳು, ಅನ್ನದಾನ ಮುಂತಾದವು ಹೆಚ್ಚಾಗಿ ಜರುಗಲು ಮುಖ್ಯ ಕಾರಣರಾದರು. ಇದೂ ಅಲ್ಲದೆ ಚಕ್ರವರ್ತಿಯು ತಮಗೆ ನೀಡಿದ್ದು ಪಡೈನಾಡು ಸೀಮೆಯಲ್ಲಿದ್ದ “ಶಿಯಾಲಪಾಂಡೂರು” ಎಂಬ ಗ್ರಾಮವನ್ನು ತಿರುಪತಿಯ ಗೋವಿಂದರಾಜನಿಗೆ ಪ್ರತಿನಿತ್ಯವೂ ಕೆಲವು ಸೇವೆಗಳು ಜರುಗಲು ದಾನವಾಗಿ ಕೊಟ್ಟರು. ಶ್ರೀವ್ಯಾಸರಾಜರು ಶ್ರೀನಿವಾಸನ ಸೇವೆಗಾಗಿ ಶ್ರೀಮಠದಿಂದ ಅನೇಕ ಭೂಸ್ವಾಸ್ತಿಗಳನ್ನೂ, ಗ್ರಾಮಗಳನ್ನೂ, ಸುವರ್ಣಾಭರಣಗಳನ್ನು ಸಮರ್ಪಿಸಿ ಭಗವಂತನ ವಿಶೇಷಾನುಗ್ರಹಕ್ಕೆ ಪಾತ್ರರಾದರು.
ಇದಕ್ಕಿಂತಲೂ ಹೆಚ್ಚಾಗಿ ಶ್ರೀವ್ಯಾಸರಾಜರು ಸ್ವಹಸ್ತದಿಂದ ಶ್ರೀಶ್ರೀನಿವಾಸನನ್ನು ಪೂಜಿಸುತ್ತಿದ್ದುದರಿಂದ ಪ್ರತಿಮಾಯಾಂ ತು ಸಾನಿಧ್ಯಂ ಅರ್ಚಕ ತಪೋಬಲಾತ್” ಎಂಬ ಪ್ರಮಾಣದಂತೆ ಶ್ರೀನಿವಾಸನು ತನ್ನ ವಿಶೇಷ ಸನ್ನಿಧಾನದಿಂದ ತಿರುಪತಿಯಲ್ಲಿ ಪೂರ್ಣಕಳೆಯಿಂದ ಕಂಗೊಳಿಸಹತ್ತಿದನು. ದೇವರಿಗೆ ಹೂವಿನ ಅಂಗಿ ಸೇವೆ, ಪುನಗಾಭಿಷೇಕ ಮುಂತಾದ ಸೇವೆಗಳನ್ನು ಏರ್ಪಡಿಸಿದ್ದಲ್ಲದೆ ವರ್ಷದಲ್ಲಿ ಇನ್ನೂರಾ ಇಪ್ಪತ್ತೈದು ದಿನಗಳಲ್ಲಿ ಶ್ರೀನಿವಾಸನಿಗೆ ವಿಶೇಷ ಪೂಜೆ ಜರುಗುವಂತೆ ಮಾಡಿದರು. ಪದ್ಮಸರೋವರದಲ್ಲಿ (ತಿರುಚಾನೂರು) ಶ್ರೀಪದ್ಮಾವತಿದೇವಿಗೆ ವರ್ಷದಲ್ಲಿ ನೂರೈವತ್ನಾಲ್ಕು ದಿನಗಳಲ್ಲಿ ವಿಶೇಷ ಪೂಜಾರಾಧನೆ ನೆರವೇರುವಂತೆ ವ್ಯವಸ್ಥೆ ಮಾಡಿದರು.
ಶ್ರೀವ್ಯಾಸರಾಜರು ತಿರುಪತಿ ಬೆಟ್ಟದ ಮೇಲಿನ ತಮ್ಮ ಶ್ರೀಮಠದ ಮುಂಭಾಗದಲ್ಲಿ ಒಂದು ಮಂಟಪವನ್ನು ಕಟ್ಟಿಸಿ, ಅಲ್ಲಿ ತಮ್ಮ ಸೇವಾರೂಪವಾಗಿ ಪ್ರತಿವರ್ಷ ಜರುಗುವ ಬ್ರಹೋತ್ಸವ, ಅಧ್ಯಯನೋತ್ಸವ, ಪವಿತ್ರೋತ್ಸವಗಳ ಸಮಯದಲ್ಲಿ ಶ್ರೀಭೋಗ ಶ್ರೀನಿವಾಸದೇವರು (ಉತ್ಸವಮೂರ್ತಿ) ಉತ್ಸವದಿಂದ ಬಂದು ಆ ಮಂಟಪದಲ್ಲಿ ಮಂಡಿಸಿ, ಮೂರುನೂರಾ ಐವತ್ನಾಲ್ಕು 'ಅಪ್ಪ-ಪಡಿ'ಗಳನ್ನು ಸ್ವೀಕರಿಸಿ ಹೋಗುವ ಕ್ರಮ ಏರ್ಪಡಿಸಿದರು. ಬೆಟ್ಟದ ಕೆಳಗೆ ಗೋವಿಂದರಾಜಪಟ್ಟಣದಲ್ಲಿ ಪ್ರತಿ ತಿಂಗಳ ಪೂರ್ಣಿಮಾ ದಿವಸ ಶ್ರೀಗೋವಿಂದರಾಜಸ್ವಾಮಿಗೆ “ಪೂರ್ಣಿಮೋತ್ಸವ” ನೆರವೇರಿಸಲು ಗ್ರಾಮದಾನ ಮಾಡಿದರು. ಹೀಗೆ ಗುರುಗಳು ಅನೇಕ ರೀತಿಯಿಂದ ಶ್ರೀವೆಂಕಟೇಶ್ವರನ ಸೇವೆ ಮಾಡಿ ಕೀರ್ತಿಶಾಲಿಗಳಾದರು.
ಕ್ರಿಸ್ತಶಕೆ ೧೪೮೬ ರಿಂದ ೧೪೯೮ ರವರೆಗೆ ಹನ್ನೆರಡು ವರ್ಷಗಳ ಕಾಲ ತಿರುಪತಿ ಶ್ರೀನಿವಾಸದೇವರ ಪೂಜೆ ಮಾಡಿ,
ಅವರು ದೇವಾಲಯದ ಆಡಳಿತ ನಡೆಸಿದ ಕಾಲ ತಿರುಪತಿಯ ಇತಿಹಾಸದ ಸುವರ್ಣಯುಗವೆಂದು ಹೇಳಬಹುದು.
ಶ್ರೀವ್ಯಾಸಮುನಿಗಳು ಅನೇಕ ವರ್ಷ ಬೆಟ್ಟದಲ್ಲಿಯೇ ನೆಲೆಸಿದ್ದು ದೇವಾಲಯಾಡಳಿತ, ದೇವರ ಪೂಜಾರಾಧನೆಗಳನ್ನು ಖುದ್ದಾಗಿ ಸ್ವಹಸ್ತದಿಂದ ನೆರವೇರಿಸುತ್ತಿದ್ದರು. ಆನಂತರ, ಸಾಳುವ ನರಸಿಂಹನ ಪ್ರಾರ್ಥನೆಯಂತೆ ಚಂದ್ರಗಿರಿಯಲ್ಲಿ ವಾಸಿಸುತ್ತಿರುವಾಗಲೂ ಪ್ರತಿ ಗುರುವಾರ, ಶುಕ್ರವಾರಗಳಲ್ಲಿ ತಿರುಪತಿಗೆ ತೆರಳಿ ದೇವರ ಸೇವೆಯನ್ನು ನೆರವೇರಿಸಿ ಬರುತ್ತಿದ್ದರು. ಶ್ರೀಗಳವರು ಅನುಪಸ್ಥಿತಿಯಲ್ಲಿ ಶ್ರೀನಿವಾಸದೇವರ ಪೂಜೆಯನ್ನು ಆತ್ಮೀಯ ಶಿಷ್ಯರಾದ ಪಂಡಿತರು ನೆರವೇರಿಸುತ್ತಿದ್ದರು. ಈ ಶಿಷ್ಯರಲ್ಲಿ ಶ್ರೀವ್ಯಾಸರಾಜರ ಪೂರ್ವಾಶ್ರಮ ವಂಶಿಕರೂ, ಷಾಷಿಕ ಕುಲಭೂಷಣರೂ ಆದ ಬೆಟ್ಟದ ಆಚಾರ್ಯರು ಪ್ರಮುಖರು.
ತಿರುಪತಿಯಲ್ಲಿ ಶ್ರೀವ್ಯಾಸರಾಜರು ನೆರವೇರಿಸಿದ ಇನ್ನೊಂದು ಮಹತ್ವಪೂರ್ಣ ಕಾರ್ಯವೆಂದರೆ, ತಾವು ಶ್ರೀವೆಂಕಟೇಶ್ವರನನ್ನು ಹನ್ನೆರಡು ವರ್ಷಗಳ ಕಾಲ ಪೂಜಿಸಿದ ಜ್ಞಾಪಕಾರ್ಥವಾಗಿ ಶ್ರೀನಿವಾಸನ ಗರ್ಭಗುಡಿಯ ಮೇಲಿರುವ ಗೋಪುರಕ್ಕೆ ಬಂಗಾರದ ಮುಲಾಮು ಮಾಡಿಸಿದ ತಗಡನ್ನು ಬಡಾಯಿಸಿ ಸುವರ್ಣ ಗೋಪುರವು ಭಕ್ತರನ್ನು ಆಕರ್ಷಿಸುವಂತೆ ಮಾಡಿದ್ದು102 ಮತ್ತು ಗೋಪುರದ ಉತ್ತರದಿಕ್ಕಿನಲ್ಲಿ ವಿಮಾನ ಶ್ರೀನಿವಾಸನನ್ನು ಸ್ಥಾಪಿಸಿ ಶ್ರೀಮದಾಚಾರ್ಯರ ಅನುಯಾಯಿಗಳು ಮಠೀಯ ಶಿಷ್ಯರುಗಳು ಶ್ರೀನಿವಾಸನ ದರ್ಶನ ಮಾಡಿಹೋಗುವ ಮೊದಲು ಈ ವಿಮಾನ ಶ್ರೀನಿವಾಸನ ದರ್ಶನ ಪಡೆದು ಹೋಗುವುದು ಮತ್ತು ಅಲ್ಲಿ ಪುರಾಣ, ಹರಿಕಥೆ, ಭಜನೆ, ಪಾರಾಯಣಾದಿಗಳನ್ನು ಮಾಡಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗುವಂತೆ ಪದ್ಧತಿಯನ್ನು ಏರ್ಪಡಿಸಿದರು. ಇಂದಿಗೂ ಮಾಧ್ವರು ಈ ಶ್ರೀವಿಮಾನ ಶ್ರೀನಿವಾಸನ ಸನ್ನಿಧಿಯಲ್ಲಿ ಪುರಾಣ-ಪಾರಾಯಣಾದಿಗಳನ್ನು ಮಾಡುತ್ತಾ, ಭಗವದನುಗ್ರಹಕ್ಕೆ ಪಾತ್ರರಾಗುತ್ತಿರುವುದು ಕಾಣಬಹುದು. ಇದರಂತೆ ದೇವಸ್ಥಾನದ ಮುಂಭಾಗದ ಎದುರು ಸ್ವಲ್ಪ ದೂರದಲ್ಲಿ ಶ್ರೀನಿವಾಸದೇವರ ಭಕ್ತರನ್ನಾಕರ್ಷಿಸಿ ಬೆಟ್ಟಕ್ಕೆ ಕರೆತರುವ ಹೊಣೆ ಹೊತ್ತ ಬೇಡಿ ಆಂಜನೇಯನ ಸನ್ನಿಧಿಯಿಂದ ತಿರುಪತಿಗೆ ಬರುವ ಅನೇಕ ಧರ್ಮಪೀಠಾಧೀಶರನ್ನು ಪೂರ್ಣಕುಂಭ-ದೇವಾಲಯದ ಗೌರವಗಳೊಡನೆ ಸ್ವಾಗತಿಸಿ ಕರೆದು ತಂದು ದೇವರ ಧೂಳಿ ದರ್ಶನ ಮಾಡಿಸುವ ಸಂಪ್ರದಾಯವನ್ನು ಏರ್ಪಡಿಸಿದರು. ಅದು ಇಂದಿಗೂ ನಡೆದುಬಂದಿದೆ.
ಮೇಲ್ಕಂಡ ಎಲ್ಲ ವಿಚಾರಗಳೂ ಅನೇಕ ಶಿಲಾಶಾಸನ, ತಾಮ್ರಶಾಸನ, ದಾನಶಾಸನ ಪತ್ರಗಳೇ ಮೊದಲಾದವುಗಳಿಂದ ಸ್ಪಷ್ಟವಾಗುವುದು. ಶ್ರೀವ್ಯಾಸರಾಜರು ದೇವರ ಗೋಪುರಕ್ಕೆ ಬಡಾಯಿಸಿದ್ದ ತಗಡಿನಲ್ಲಿದ್ದ ಬಂಗಾರದ ಮುಲಾಮು ಐದು ನೂರು ವರ್ಷಗಳ ಕಾಲ ಬಿಸಿಲು ಮಳೆಗಳ ಪರಿಣಾಮವಾಗಿ ಮಸುಕಾದ್ದರಿಂದ ಇತ್ತೀಚೆಗೆ ತಿರುಪತಿಯ ದೇವಸ್ಥಾನದವರು ಹಳೆಯ ತಗಡು ತೆಗೆಸಿ ಹೊಸದಾಗಿ ಬಂಗಾರದ ಮುಲಾಮು ಮಾಡಿಸಿ ತಗಡನ್ನು ಬಡಾಯಿಸಿದ್ದಾರೆ. ಶ್ರೀವ್ಯಾಸರಾಜ ಪ್ರತಿಷ್ಠಿತ ವಿಮಾನ ಶ್ರೀನಿವಾಸನಿಗೂ ಹೊಸದಾಗಿ ಬಂಗಾರದ ಮುಲಾಮು ಮಾಡಿಸಿದ್ದಾರೆ. ತಿರುಪತಿಗೆ ಹೋದ ಭಕ್ತರು ಇಂದಿಗೂ ಆ ಸುವರ್ಣ ಗೋಪುರ, ವಿಮಾನ ಶ್ರೀನಿವಾಸರನ್ನು ಕಾಣಬಹುದಾಗಿದೆ.