|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ನಾಲ್ಕನೆಯ ಉಲ್ಲಾಸ

ಶ್ರೀವ್ಯಾಸರಾಜಯತಿಸಾರ್ವಭೌಮರು

೩೬. ಶ್ರೀಪಾದರಾಜರಿಗೆ ರತ್ನಾಭಿಷೇಕ

ಇತ್ತ ಕನ್ನಡ ರಾಜಧಾನಿಯಲ್ಲಿ ಸಾಳುವ ನರಸಿಂಹ ಭೂಪಾಲನು ತನಗೆ ಬಂದ ವಿಪತ್ತನ್ನು ಪರಿಹರಿಸಿ ಅನುಗ್ರಹಿಸಿದ ಪರಮಪೂಜ್ಯ ಶ್ರೀಲಕ್ಷ್ಮೀನಾರಾಯಣಯತಿಗಳನ್ನು ವಿಶೇಷ ರೀತಿಯಿಂದ ಗೌರವಿಸಲಾಶಿಸಿ, ಸಚಿವರಾದ ಭುವನಬಂಧು, ತುಳವ ನರಸನಾಯಕ, ಚಿನ್ನರಾಜ ಮುಂತಾದ ಆತ್ಮೀಯರೊಡನೆ ವಿಚಾರವಿನಿಮಯ ಮಾಡಿ ಸರ್ವಾನುಮತದಿಂದ ಶ್ರೀಪಾದಂಗಳವರಿಗೆ ರತ್ನಾಭಿಷೇಕ ಮಾಡಿ ಗೌರವಿಸಬೇಕೆಂದು ತೀರ್ಮಾನಿಸಿದನು. ಚಕ್ರವರ್ತಿ, ಸಚಿವ ಮಂಡಲಿಯವರು ಖುದ್ದಾಗಿ ನಿಂತು, ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಿ, ಗುರುಗಳನ್ನು ಒಪ್ಪಿಸಲು ಶ್ರೀಗಳವರ ಸನ್ನಿಧಿಗೆ ಬಂದು ನರಸಿಂಹಪ್ರಭುವು ತನ್ನ ಆಶೆಯನ್ನು ವಿಜ್ಞಾಪಿಸಿ ರತ್ನಾಭಿಷೇಕಕ್ಕೆ ಒಪ್ಪಿ ಅನುಗ್ರಹಿಸಬೇಕೆಂದು ಪ್ರಾರ್ಥಿಸಿದರು. 

ಶ್ರೀಲಕ್ಷ್ಮೀನಾರಾಯಣಮುನಿಗಳು ಮೊದಲು ಅದಕ್ಕೆ ಸಮ್ಮತಿಸದಿದ್ದರೂ ಚಕ್ರವರ್ತಿ ಸಚಿವಾದಿಗಳ ವಿಶೇಷ ಪ್ರಾರ್ಥನೆಯಿಂದ ಮನಕರಗಿ ಸಮ್ಮತಿಸಿದರು ಮತ್ತು ರಾಜನ್, ನೀನೀಗಾಗಲೇ ನಮಗೆ ಗ್ರಾಮ, ಭೂಮಿ, ತಸ್ವೀಕು, ಬಿರುದು-ಬಾವಲಿ, ಧನಕನಕಾಭರಣಗಳು ಶ್ರೀಹರಿಗೆ ವಿವಿಧ ನೈವೇದ್ಯಗಳನ್ನು ಅರ್ಪಿಸಲು ಬೇಕಾದ ಎಲ್ಲಾ ಸೌಕರ್ಯಾದಿಗಳನ್ನು ಮಾಡಿಕೊಟ್ಟು ಗೌರವಿಸಿದ್ದೀಯೇ. ಈಗ ಮತ್ತೆ ಈ ರಾಭಿಷೇಕದ ಅವಶ್ಯಕತೆ ಇರಲಿಲ್ಲ. ನಿನ್ನ ಮನಸ್ಸಿಗೆ ನೋವಾಗಬಾರದೆಂದು ಅದನ್ನು ಶ್ರೀಗೋಪೀನಾಥ-ರಂಗವಿಠಲರಿಗೆ ನೀನು ಸಮರ್ಪಿಸುವ ಸೇವೆಯೆಂದು ಭಾವಿಸಿ ಸ್ವೀಕರಿಸಲು ಒಪ್ಪಿದ್ದೇವೆ. ಈಗ ನಿನಗೆ ತೃಪ್ತಿಯೇ?” ಎಂದರು. ನರಸಿಂಹಪ್ರಭು ಸಚಿವಾದಿಗಳಿಗೆ ಸಂತೋಷವಾಯಿತು. ಗುರುಗಳಿಂದ ಫಲಮಂತ್ರಾಕ್ಷತೆ ಪಡೆದು ಅರಮನೆಗೆ ತೆರಳಿದರು.96 

ನಾಲ್ಕಾರು ದಿನಗಳಾದ ಮೇಲೆ ಒಂದು ಶುಭಮುಹೂರ್ತದಲ್ಲಿ ನರಸಿಂಹ ಭೂಪಾಲನು ಸಮಸ್ತರಾಜವೈಭವದೊಡನೆ ಶ್ರೀಲಕ್ಷ್ಮೀನಾರಾಯಣಮುನಿಗಳನ್ನು ಸಂಭ್ರಮದಿಂದ ಅರಮನೆಗೆ ಕರೆತಂದು ವಾದ್ಯವೈಭವವೇದಘೋಷಗಳೊಡನೆ ರತ್ನಸಿಂಹಾಸನದಲ್ಲಿ ಮಂಡಿಸಿ, ವಂದಿಮಾಗಧರು ಜಯಘೋಷ ಮಾಡುತ್ತಿರಲು ಸ್ವಹಸ್ತದಿಂದ ಶ್ರೀಪಾದಂಗಳವರಿಗೆ ಭಕ್ತಿಯಿಂದ ರತ್ನಾಭಿಷೇಕ ಮಾಡಿ ಧನಕನಕವಸ್ತ್ರಾಭರಣಗಳನ್ನು ಸಮರ್ಪಿಸಿ ಕೃತಾರ್ಥನಾದನು. ಗುರುವರ್ಯರು ಸಾಮ್ರಾಟನು ಮಾಡಿದ ರತ್ನಾಭಿಷೇಕ, ನವರತ್ನಕನಕಾಭರಣಾದಿಗಳನ್ನು ತಿರುಪತಿ ಶ್ರೀನಿವಾಸ, ಕಂಚಿವರದರಾಜ, ಶ್ರೀರಂಗದ ರಂಗನಾಥ, ಹಂಪಿಯ ವಿರೂಪಾಕ್ಷದೇವರುಗಳ ಸೇವೆಗಾಗಿಯೂ, ಪಂಡಿತರು ಪ್ರೋತ್ರೀಯ ಬ್ರಾಹ್ಮಣರು ಹಾಗೂ ಬಡಬಗ್ಗರುಗಳಿಗೆ ಉದಾರವಾಗಿ ದಾನ ಮಾಡಿದರು. ಶ್ರೀಗಳವರ ನಿಸ್ವಾರ್ಥ ಬುದ್ದಿ, ಔದರ್ಯಾದಿಗಳನ್ನು ಕಂಡು ಸರ್ವರೂ ಗುರುವರ್ಯರನ್ನು ಮುಕ್ತಕಂಠದಿಂದ ಕೊಂಡಾಡಿದರು.

ಅಂದು ಅರಮನೆಯಲ್ಲಿಯೇ ಗುರುಗಳು ಪೂಜಾರಾಧನೆಯನ್ನು ನೆರವೇರಿಸಿದರು. ಸಹಸ್ರಾರು ಜನರಿಗೆ ಮೃಷ್ಟಾನ್ನ ಭೋಜನವಾಯಿತು. ಅಂದು ಸಂಜೆ ರತ್ನಾಭಿಷೇಕಾಂಗವಾಗಿ ವಿದ್ವತ್ಸಭೆಯೂ, ಗುರುಗಳ ಆಶೀರ್ವಾದರೂಪ ಉಪದೇಶಗಳು ಜರುಗಲು ವ್ಯವಸ್ಥೆಯಾಗಿತ್ತು. 

ಹಿಂದೆ ನಿರೂಪಿಸಿದಂತೆ ಇದೇ ಸಮಯಕ್ಕೆ ಸರಿಯಾಗಿ ಶ್ರೀವ್ಯಾಸತೀರ್ಥರು ಉತ್ತರಭಾರತ ದಿಗ್ವಿಜಯವನ್ನು ಪೂರೈಸಿ ಚಂದ್ರಗಿರಿಗೆ ದಯಮಾಡಿಸಿದರು. ಹರ್ಷಭರಿತನಾದ ಚಕ್ರೇಶ್ವರನು “ರಾಜಗುರುಗಳನ್ನು ರಾಜವೈಭವದಿಂದ ಸ್ವಾಗತಿಸಿ ಅರಮನೆಗೆ ಕರೆದುತಂದನು. ಶ್ರೀಲಕ್ಷ್ಮೀನಾರಾಯಣಮುನಿಗಳು ಪ್ರಿಯಶಿಷ್ಯರನ್ನು ಪ್ರೀತ್ಯಾದರಗಳಿಂದ ಸ್ವಾಗತಿಸಿದರು. ವ್ಯಾಸಭಿಕ್ಷುಗಳು ಗುರುಗಳಿಗೆ ಸಾಷ್ಟಾಂಗವೆರಗಿದರು. ಗುರುಗಳು ಶಿಷ್ಯರನ್ನು ಭರದಿಂದ ಆಲಿಂಗಿಸಿದರು. ಪರಸ್ಪರ ದರ್ಶನದಿಂದ ಗುರುಶಿಷ್ಯರಿಗೆ ಅಪಾರ ಆನಂದವಾಯಿತು. ಈ ಪವಿತ್ರ ದೃಶ್ಯವನ್ನು ನೋಡಿ ಸಕಲರೂ ಹರ್ಷಭರಿತರಾಗಿ ಗುರುಶಿಷ್ಯರನ್ನು ಕೊಂಡಾಡಿದರು. 

ಅಂದು ಸಂಜೆ ಶ್ರೀಮಠದ ಪಂಡಿತರು, ಆತ್ಮೀಯರು ಶ್ರೀವ್ಯಾಸರಾಯರು ದಿಗ್ವಿಜಯ ಹೊರಟಮೇಲೆ ಕನ್ನಡ ಸಾಮ್ರಾಜ್ಯದಲ್ಲಿ ಜರುಗಿದ ಎಲ್ಲಾ ಘಟನೆಗಳನ್ನು ಚಕ್ರವರ್ತಿಗೆ ಬಂದಿದ್ದ ಬ್ರಹ್ಮಹತ್ಯಾದೋಷ ಪರಿಹಾರ, ಶ್ರೀಲಕ್ಷ್ಮೀನಾರಾಯಣ- ಮುನಿಗಳು ಅದನ್ನು ಪರಿಹರಿಸಿದ್ದು, ಕುಹಕಿಗಳ ನಿಂದೆ, ಆಗ ಗುರುಗಳು ತೋರಿದ ಪವಾಡ, ನರಸಿಂಹರಾಜನು ಅಂದು ಗುರುಗಳಿಗೆ ನೆರವೇರಿಸಿದ ರತ್ನಾಭಿಷೇಕ - ಮುಂತಾದ ವಿಚಾರಗಳನ್ನು ನಿವೇದಿಸಿದರು. ಶ್ರೀವ್ಯಾಸತೀರ್ಥರು ಗುರುಗಳ ಮಹಿಮಾತಿಶಯವನ್ನು ಕೇಳಿ ಪರಮ ಸಂತೋಷಗೊಂಡರು. 

ಅಂದು ಅರಮನೆಯಲ್ಲಿ ವಿದ್ವತ್ತನೆಯಿದ್ದು, ಅದೇ ಸಮಯಕ್ಕೆ ಶ್ರೀವ್ಯಾಸರಾಜರು ಆಗಮಿಸಿದ್ದರಿಂದ ವಿಶೇಷ ಕಳೆಯುಂಟಾಗಿತ್ತು. ನರಸಿಂಹ ಮಹೀಪಾಲನು ಗುರುಗಳನ್ನು ಸಕಲ ಸಚಿವ-ಸಾಮಂತ-ಪಂಡಿತರೊಡನೆ ಸಕಲ ವೈಭವದಿಂದ ದರ್ಬಾರಿಗೆ ಕರೆತಂದನು. ವೈಭವದಿಂದ ದಯಮಾಡಿಸುತ್ತಿರುವ ಪೂಜ್ಯಗುರುಗಳನ್ನು ಶ್ರೀವ್ಯಾಸಯತೀಂದ್ರರು, ತದೇಕ ದೃಷ್ಟಿಯಿಂದ ಅವಲೋಕಿಸಿದರು. ಅವರು ಕಂಡ ದೃಶ್ಯ, ಅವರ ಮೈ ಪುಳಕಗೊಳಿಸಿತು. ಭಕ್ತಿಯಿಂದ ಆನಂದದ ಕಣ್ಣೀರು ಹರಿಯಿತು.

ಶ್ರೀಲಕ್ಷ್ಮೀನಾರಾಯಣಮುನೀಂದ್ರರು ಸಾರ್ವಭೌಮನ ಪ್ರಾರ್ಥನೆಯಂತೆ ಅವನು ಅರ್ಪಿಸಿದ ಉಡುಗೆ-ತೊಡುಗೆಗಳಿಂದ ಅಲಂಕೃತರಾಗಿದ್ದಾರೆ. ಕಾಷಾಯಾಂಬರ, ದ್ವಾದಶನಾಮ, ಗಂಧಗಳಿಂದೊಪ್ಪತ್ತಿದ್ದಾರೆ. ಸುವರ್ಣ ಪೀತಾಂಬರವನ್ನು ಹೊದ್ದಿದ್ದಾರೆ. ಮುತ್ತಿನ ಕವಚ, ನವರತ್ನ ಕರ್ಣಕುಂಡಲಗಳು, ಕಂಕಣಹಾರಗಳು, ತುಳಸೀ ಮಾಲೆಗಳಿಂದ ಶೋಭಿಸುತ್ತಿದ್ದಾರೆ. ಶಿರದಲ್ಲಿ ಮುತ್ತು-ರತ್ನ-ಮಾಣಿಕ್ಯಮಯ ಕಿರೀಟ (ಕುಲಾವಿ) ರಾಜಿಸುತ್ತಿದೆ. ಹಣೆಯಲ್ಲಿ ಕಸ್ತೂರಿತಿಲಕ ಕಂಗೊಳಿಸಿದೆ! ಪಂಡಿತರು ಶ್ವೇತಭತ್ರ ಹಿಡಿದಿದ್ದಾರೆ. ಸಾರ್ವಭೌಮ ಮಹಾಮಾತ್ಯರು ಗುರುಗಳಿಗೆ ಚಾಮರ ಹಾಕುತ್ತಿದ್ದಾರೆ. ಸಭಾಸದರು ಎದ್ದು ನಿಂತು ಗೌರವ-ಭಕ್ತಿಗಳನ್ನರ್ಪಿಸುತ್ತಾ ಜಯಜಯಕಾರ ಮಾಡುತ್ತಿದ್ದಾರೆ. ಆಗ ನರಸಿಂಹ ಭೂಪಾಲ ಗುರುಗಳಿಗೆ ಹಸ್ತಲಾಘವವಿತ್ತು ಸಿಂಹಾಸನದಲ್ಲಿ ಕೂಡಿಸಿ, ಶ್ರೀವ್ಯಾಸರಾಜರಿಗಾಗಿ ಏರ್ಪಡಿಸಿದ್ದ ಸುವರ್ಣಾಸನದಲ್ಲಿ ಅವರನ್ನು ಮಂಡಿಸುವಂತೆ ಪ್ರಾರ್ಥಿಸಿದ. ಸಭೆ ಸಂಭ್ರಮಯುಕ್ತವಾಗಿದ್ದರೂ ನಿಶ್ಯಬ್ದವಾಗಿದೆ. 

ತಮ್ಮ ಆಸನದತ್ತ ಬರುವಾಗ ವ್ಯಾಸರಾಜರಿಗೆ ಗುರುಗಳು ಚಕ್ರವರ್ತಿಗೆ ಬಂದಿದ್ದ ಬ್ರಹ್ಮಹತ್ಯಾದೋಷ ಪರಿಹಾರ ಮಾಡಿದುದು, ಮತ್ತಿತರ ಮಹಿಮೆಗಳೆಲ್ಲಾ ಅವರ ಮನದಲ್ಲಿ ಮಿಂಚಿ ಮಿನುಗಹತ್ತಿತು. ಭಾವಪರವಶರಾದ ಶ್ರೀವ್ಯಾಸತೀರ್ಥರು ಗುರುಗಳಿಗೆ ನಮಿಸಿ, ಕರಜೋಡಿಸಿ ನಿಂತರು. ಆಗ ಅವರ ಮುಖಾರವಿಂದದಿಂದ ಗುರುಮಹಿಮಾನಿರೂಪಣಪರವಾದ ಕೃತಿಯೊಂದು ಹೊರಹೊಮ್ಮಿತು! 

ರಾಗ : ಪಂತುವರಾಳಿ 

ಮಹಿಮೆ ಸಾಲದೇ ಇಷ್ಟೇ ಮಹಿಮೆ ಸಾಲದೇ 

ಅಹಿಶಯನನ ಒಲುಮೆಯಿಂದ 

ಮಹಿಯೊಳೆಮ್ಮ ಶ್ರೀಪಾದರಾಜರ 

ಮುತ್ತಿನ ಕವಚ ಮೇಲ್ಕುಲಾವಿ ರತ್ನ ಕೆತ್ತಿದ ಕರ್ಣಕುಂಡಲ | ಕಸ್ತೂರಿತಿಲಕ ಶ್ರೀಗಂಧಲೇಪನ ವಿಸ್ತಾರದಿಂದ ಮೆರೆದು ಬರುವ ವಿಪ್ರಹತ್ಯಾದೋಷ ಬರಲು ಕ್ಷಿಪ್ರ ಶಂಬೋದಕದಿ ಕಳೆಯೆ | ಅಪ್ರಬುದ್ಧರು ದೂಷಿಸೆ ಗೇರೆಣ್ಣೆ ಕಪ್ಪುವಸನ ಶುಭ್ರ ಮಾಡಿದ 

ಹರಿಗೆ ಸಮರ್ಪಿಸಿದ ನಾನಾ ಪರಿಯ ಶಾಕಗಳನು ಭುಂಜಿಸೆ | ನರರು ನಗಲು ಶ್ರೀಕೃಷ್ಣನ ಕರುಣದಿಂದ ಹಸಿಯ ತೋರಿದ

ಶ್ರೀಲಕ್ಷ್ಮೀನಾರಾಯಣಯೋಗೀಂದ್ರರ ಮಹಿಮಾನಿರೂಪಣಪರವಾದ ಮನೋಹರವಾದ ಆ ಕೃತಿಯನ್ನಾಲಿಸಿ ಸಭೆಯ ಜನರೆಲ್ಲ ರೋಮಾಂಚಿತರಾಗಿ 'ಜಯ ಜಯ ಶ್ರೀಲಕ್ಷ್ಮೀನಾರಾಯಣ ಗುರುಸಾರ್ವಭೌಮ ! ಜಯ ಜಯ ಶ್ರೀವ್ಯಾಸರಾಜ ಯತಿಸಾರ್ವಭೌಮ” ಎಂದು ಹರ್ಷಧ್ವನಿ ಮಾಡಿದರು. ಶ್ರೀಲಕ್ಷ್ಮೀನಾರಾಯಣಯೋಗಿಗಳು ವಾತ್ಸಲ್ಯಾನಂದಗಳಿಂದ ಪ್ರಿಯಶಿಷ್ಯರನ್ನಾಲಿಂಗಿಸಿ ಕರಪಿಡಿದು ಅವರನ್ನು ಭದ್ರಾಸನದಲ್ಲಿ ಕೂಡಿಸಿ ತಾವೂ ಆಸನಾಸೀನರಾದರು. 

ಆನಂತರ ಸಭೆಯು ಪ್ರಾರಂಭವಾಯಿತು. ಸಾಳುವ ನರಸಿಂಹಪ್ರಭುವು ಗುರುಗಳು ತನಗೆ ಮಾಡಿದ ಮಹೋಪಕಾರವನ್ನು ಬಣ್ಣಿಸಿ ಮಾತನಾಡಿದ ಮೇಲೆ ಅನೇಕ ಪಂಡಿತರು, ಗುರುಗಳ ಭಕ್ತಿ-ವೈರಾಗ್ಯ-ಮಹಿಮಾತಿಶಯಗಳನ್ನು ವರ್ಣಿಸಿ, ಸ್ತುತಿಸಿದರು. ಆನಂತರ ಶ್ರೀವ್ಯಾಸರಾಜರು ಗುರುಗಳು ತಮ್ಮಲ್ಲಿ ಕನ್ನಡ ಸಾಮ್ರಾಜ್ಯದಲ್ಲಿ ಚಕ್ರವರ್ತಿಯಲ್ಲಿ ಸಕಲ ಸಜ್ಜನರಲ್ಲಿ ಮಾಡಿದ, ಮಾಡುತ್ತಿರುವ ಅನುಗ್ರಹ, ಅವರ ಮಹಿಮಾತಿಶಯಗಳನ್ನು ವಿದ್ದತ್ತೂರ್ಣವಾಗಿ ನಿರೂಪಿಸಿ ಅಂದು ಜರುಗಿದ ರತ್ನಾಭಿಷೇಕದ ಮಹತ್ವ, ಅದರಿಂದ ಸಾಮ್ರಾಜ್ಯದ-ಸಾಮ್ರಾಟನ ಕೀರ್ತಿ ಬೆಳಗಲಿರುವುದೇ ಮುಂತಾದ ವಿಚಾರಗಳನ್ನು ವಿದ್ವತ್ತೂರ್ಣವಾಗಿ ಹೇಳಿ ಗುರುಗಳಿಗೆ ನಮಸ್ಕರಿಸಿ ಕುಳಿತರು.

ತರುವಾಯ ಶ್ರೀಲಕ್ಷ್ಮೀನಾರಾಯಣಮುನೀಂದ್ರರು ಸಕಲಶಾಸ್ತ್ರಾರ್ಥ ಸಾರಭೂತವಾದ, ವಿದ್ವತ್ತೂರ್ಣವಾದ ಅನುಗ್ರಹೋಪದೇಶಭಾಷಣ ಮಾಡಿ ಸರ್ವರನ್ನೂ ಆಶೀರ್ವದಿಸಿ ಪರಮಾನಂದಗೊಳಿಸಿದರು. ತದನಂತರ, ನರಸಿಂಹ ಭೂಪಾಲನ ಕೋರಿಕೆಯಂತೆ ವಿದ್ವಾಂಸರು, ವಿದ್ಯಾರ್ಥಿಗಳು, ಕವಿಗಳು, ಸಾಹಿತಿಗಳು, ಸಂಗೀತಗಾರರು, ಕಲೆಗಾರರು, ಹರಿದಾಸರುಗಳಿಗೆ ಉದಾರವಾಗಿ ಸಂಭಾವನೆ ನೀಡಿ ಫಲಮಂತ್ರಾಕ್ಷತೆಯನ್ನು ಕರುಣಿಸಿದರು. ಆನಂತರ, ವಂದನಾರ್ಪಣೆಯೊಡನೆ ರತ್ನಾಭಿಷೇಕಾಂಗ ಕಾರ್ಯಕಲಾಪಗಳು ಮುಕ್ತಾಯವಾದವು.