ಕಲಿಯುಗ ಕಲ್ಪತರು
ನಾಲ್ಕನೆಯ ಉಲ್ಲಾಸ
ಶ್ರೀವ್ಯಾಸರಾಜಯತಿಸಾರ್ವಭೌಮರು
೩೫. ಬ್ರಹ್ಮಹತ್ಯಾದೋಷ ಪರಿಹಾರ
ಕನ್ನಡನಾಡಿನ ಸಾಮ್ರಾಟನಾದ ಸಾಳುವ ನರಸಿಂಹರಾಯನು ಪಟ್ಟಕ್ಕೆ ಬಂದ ಕೆಲಕಾಲದಲ್ಲಿಯೇ ಪೂರ್ವಾರ್ಜಿತ ದುಷ್ಕರ್ಮದ ಫಲವಾಗಿ ಬ್ರಹ್ಮಹತ್ಯಾದೋಷಕ್ಕೆ ಗುರಿಯಾಗುವ ಪ್ರಸಂಗವುಂಟಾದುದು ದುರ್ದೈವದ ಸಂಗತಿ, ಸ್ವಯಮಾಚಾರ್ಯ ಪುರುಷರೂ-ಮಹಾಪಂಡಿತರೂ ಆಗಿದ್ದ ಶ್ರೀತಾತಾಚಾರ್ಯರು ತಿರುಪತಿಯ ಪೂಜಾಧಿಕಾರ-ಆಡಳಿತಗಳನ್ನು ತಮ್ಮ ಸೋದರ ಬಂಧುಗಳಿಗೆ ವಹಿಸಿ ತಿರುಪತಿಯಿಂದ ಹೊರಟುಹೋದ ಮೇಲೆ, ಅನಾಯಾಸವಾಗಿ ತಮ್ಮ ಕೈಸೇರಿದ ದೇವಾಲಯದ ಆಡಳಿತಾಧಿಕಾರವನ್ನು ಶ್ರೀತಾತಾಚಾರ್ಯರ ಬಂಧುಗಳು ದುರುಪಯೋಗಪಡಿಸಿಕೊಂಡು ದೇವರ ಭ೦ಡಾರದ ಧನಕನಕವಸ್ತ್ರಾಭರಣಾದಿಗಳು ತಮ್ಮ ಸ್ವಂತವೆನ್ನುವಂತೆ ಉಪಯೋಗಿಸಿಕೊಳ್ಳತೊಡಗಿದ್ದರು. ಶ್ರೀನಿವಾಸನ ವಾಹನಗಳು ಅವರ ಮಕ್ಕಳ ಮದುವೆ, ಮುಂಜಿಗಳ ಕಾಲದಲ್ಲಿ ಮೆರವಣಿಗೆಗೆ ಉಪಯೋಗಿಸಲ್ಪಟ್ಟವು. ತಮ್ಮ ಈ ನಡವಳಿಕೆಯನ್ನು ಎದುರಿಸಿದ್ದವರನ್ನು ಹಿಂಸಿಸುತ್ತಾ, ಅವರಿಗೆ ದೇವರ ದರ್ಶನವೂ ದೊರಕದಂತೆ ಮಾಡಿ ಹೊಡೆದು-ಬಡಿದು ಬೆಟ್ಟದಿಂದ ಹೊರಗಟ್ಟಹತ್ತಿದರು. ಇದರಿಂದ ಯಾತ್ರಾರ್ಥಿಗಳು, ಸ್ಥಳೀಯ ಜನರಲ್ಲಿ ಅಸಂತೋಷದ ಹೊಗೆಯಾಡಹತ್ತಿತು.
ಅನೇಕ ಮುಖದಿಂದ ಈ ವಿಚಾರವನ್ನು ತಿಳಿದ ಶ್ರೀನಿವಾಸನ ಭಕ್ತನಾದ ನರಸಿಂಹರಾಜನು ಚಕ್ರವರ್ತಿಯಾದ ತರುಣದಲ್ಲೇ ಅರ್ಚಕನನ್ನು ಎಚ್ಚರಿಸಿ, ದೇವರ ಸ್ವತ್ತನ್ನು ದುರುಪಯೋಗಪಡಿಸದೆ ನ್ಯಾಯಮಾರ್ಗದಲ್ಲಿ ಎಲ್ಲ ಭಕ್ತರಿಗೆ ಸಂತೋಷವಾಗುವಂತೆ ಆಡಳಿತವನ್ನು ನಿರ್ವಹಿಸಬೇಕೆಂದು ಬುದ್ದಿವಾದ ಹೇಳಿ ಕಳುಹಿಸಿದರೂ ಪ್ರಯೋಜನವಾಗಲಿಲ್ಲ. ಅದೇ ಸಮಯದಲ್ಲಿ ಅರ್ಚಕರ ಮನೆಯ ಒಂದು ಲಗ್ನಕಾಲದಲ್ಲಿ ವಧೂ-ವರರನ್ನು ದೇವರ ಸುವರ್ಣಶೇಷವಾಹನದಲ್ಲಿ ಕೂಡಿಸಿ ಮೆರವಣಿಗೆ ಮಾಡಿದ್ದನ್ನು ಕಣ್ಣಾರೆ ಕಂಡ ರಾಜಪ್ರತಿನಿಧಿಯು ಈ ವಿಚಾರವನ್ನು ನರಸಿಂಹ ಭೂಪಾಲನಲ್ಲಿ ವಿಜ್ಞಾಪಿಸಿದನು. ಇದರಿಂದ ಚಕ್ರವರ್ತಿಗೆ ಬಹಳ ಕೋಪವುಂಟಾಯಿತು. ಪರಮಾತ್ಮನ ಪವಿತ್ರ ವಸ್ತುಗಳನ್ನು ಹೀಗೆ ದುರುಪಯೋಗಪಡಿಸಿ ಭಕ್ತಜನರ ಧಾರ್ಮಿಕ ಪ್ರಜ್ಞೆಗೆ ತಣ್ಣೀರೆರಚಿ ದುಷ್ಟತನದಿಂದ ವರ್ತಿಸುತ್ತಿರುವ ಅರ್ಚಕರನ್ನು ಶಿಕ್ಷಿಸಲು ಅವರೆಲ್ಲರನ್ನೂ ಬಂಧಿಸಿ ತರಲು ಸೈನಿಕರನ್ನು ಕಳುಹಿಸಿದನು. ಇದು ಹೇಗೋ ಅರ್ಚಕರಿಗೆ ಗೊತ್ತಾಗಿ ಅವರು ಹೆದರಿದರು. ಯುಕ್ತಾಯುಕ್ತಜ್ಞಾನಶೂನ್ಯರಾಗಿ ರಾಜಾಜ್ಞೆಯನ್ನು ಧಿಕ್ಕರಿಸಿಬಿಟ್ಟಿದ್ದರು. ಈಗ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಭಗವದ್ಭಕ್ತನಾದ ನರಸಿಂಹರಾಜ ತಮ್ಮ ಈ ಅಪರಾಧವನ್ನು ಕಮಿಸುವುದಿಲ್ಲ. ಮರಣದಂಡನೆ ವಿಧಿಸಲೂಬಹುದು. ಅವನಿಂದ ಸಾಯುವುದಕ್ಕಿಂತ ತಾವೇ ಆತ್ಮಹತ್ಯೆ ಮಾಡಿಕೊಂಡು ಆ ರಾಜನ ಮೇಲೆ ಸೇಡು ತೀರಿಸಿಕೊಳ್ಳಬೇಕು - ಮುಂತಾಗಿ ಯೋಚಿಸಿ ಆ ಅರ್ಚಕರೆಲ್ಲರೂ ಹೆಂಗಸರು, ಹುಡುಗರು, ವೃದ್ಧರು ಮೊದಲಾಗಿ ಎಲ್ಲರೂ ಅಂದು ರಾತ್ರಿಯೇ ಆತ್ಮಹತ್ಯೆ ಮಾಡಿಕೊಂಡು ಮರಣ ಹೊಂದಿದರು. ಮರುದಿನ ಅರ್ಚಕರನ್ನು ಸೆರೆಹಿಡಿಯಬಂದ ಸೈನಿಕರಿಗೆ ಈ ಅನಾಹುತ ವಿಚಾರ ತಿಳಿದು ಏನು ಮಾಡಲೂ ತೋರದೆ ರಾಜಧಾನಿಗೆ ಹಿಂದಿರುಗಿ ಬಂದು ಮಹಾರಾಜರಲ್ಲಿ ಜರುಗಿದ ಅನಾಹುತವನ್ನು ನಿವೇದಿಸಿದರು. ಅದನ್ನು ಕೇಳಿ ನರಸಿಂಹರಾಜ ಬಹು ದುಃಖಿಸಿದ. ತಾನೊಂದು ಮಾಡಹೋದರೆ ದೈವವೊಂದು ಬಗೆದಂತಾಯಿತಲ್ಲ ನನ್ನ ಸ್ಥಿತಿ ! ಅರ್ಚಕರನ್ನು ಬೆದರಿಸಿ ಅವರು ನ್ಯಾಯದಿಂದ ದೇವರ ಸೇವೆ ಮಾಡುವಂತೆ ಮಾಡಲು ತಾನು ಯೋಚಿಸಿದ್ದರೆ ಹೀಗಾಯಿತಲ್ಲಾ! ಬ್ರಹ್ಮಹತ್ಯಾಪಾಪಕ್ಕೆ ಗುರಿಯಾದೆನಲ್ಲಾ ಎಂದು ತಳಮಳಿಸಿದ. ದೇವರ ಪೂಜೆಗೂ ವ್ಯತ್ಯಯ ಉಂಟಾಯಿತಲ್ಲಾ ಎಂದು ಪರಿತಪಿಸಿದ.
ಅರ್ಚಕರ ಆತ್ಮಹತ್ಯಾ ಪ್ರಕರಣ ನರಸಿಂಹಭೂಪಾಲನ ಮೇಲೆ ವಿಚಿತ್ರ ಪರಿಣಾಮವನ್ನುಂಟುಮಾಡಿತು. ಅವನಿಗೆ ಅನ್ನಾಹಾರಾದಿಗಳು ಬೇಡವಾಯಿತು. ಸಾಯುವಾಗ ಸೇಡು ತೀರಿಸಿಕೊಳ್ಳಲು ಪ್ರತಿಜ್ಞಾಬದ್ಧರಾದ ಅರ್ಚಕರು ಪಿಶಾಚಿಗಳಾಗಿ ಚಕ್ರವರ್ತಿಯನ್ನು ಹಗಲು-ರಾತ್ರಿ ಪೀಡಿಸಹತ್ತಿದರು. ನರಸಿಂಹಪ್ರಭು ದುಃಖ-ದುಮ್ಮಾನ, ಚಿಂತೆ ಮತ್ತು ಪ್ರೇತಬಾಧೆಗಲಿಂದ ದಿನೇ ದಿನೇ ಕೃಶನಾಗುತ್ತಾ ಹಾಸಿಗೆ ಹಿಡಿದು ಮಲಗಿಬಿಟ್ಟ. ರಾಜ್ಯದ ಆಡಳಿತಾದಿಗಳಂತೂ ದೂರವೇ ಉಳಿಯಿತು. ಈ ಪರಿಸ್ಥಿತಿಯನ್ನು ಕಂಡು ಚಕ್ರೇಶನ ಪತ್ನಿಪುತ್ರಾದಿಗಳು, ಸಚಿವಾದಿ ಆಪ್ತರು ಭಯಗ್ರಸ್ತರಾದರು, ಮುಂದೇನು ಮಾಡುವುದೆಂದು ವಿಚಾರವಿನಿಮಯ ಮಾಡಿ ಮಹಾರಾಣಿಯವರ ಸಲಹೆಯಂತೆ ಶ್ರೀಲಕ್ಷ್ಮೀನಾರಾಯಣಮುನಿಗಳಿಗೆ ಶರಣುಹೋಗಬೇಕೆಂದು ನಿಶ್ಚಯಿಸಿ, ಸಚಿವರು - ಕೆಲ ಆತ್ಮೀಯರು ಮುಳಬಾಗಿಲಿಗೆ ಬಂದು ಎಲ್ಲಾ ವಿಚಾರವನ್ನೂ ಗುರುಗಳಲ್ಲಿ ವಿಜ್ಞಾಪಿಸಿ, ಈ ಘೋರ ಪರಿಸ್ಥಿತಿಯಿಂದ ಸಾಮ್ರಾಜ್ಯವನ್ನೂ, ಸಾಮ್ರಾಟರನ್ನೂ ಕಾಪಾಡಬೇಕೆಂದು ಪ್ರಾರ್ಥಿಸಿದರು.
ಶ್ರೀಲಕ್ಷ್ಮೀನಾರಾಯಣ ಯತಿಗಳಿಗೆ ತಮ್ಮ ಪ್ರಿಯಶಿಷ್ಯನೂ, ಭಕ್ತನೂ ಆದ ನರಸಿಂಹ ಭೂಪತಿಗೊದಗಿದ ಈ ಗತಿಯನ್ನು ಕೇಳಿ ತುಂಬಾ ದುಃಖವಾಯಿತು. ಸ್ವಲ್ಪಕಾಲ ಧ್ಯಾನಸ್ಥರಾದ ಗುರುಗಳು ನಂತರ ಕಣ್ಣೆರೆದು "ದುಷ್ಟ ಅರ್ಚಕರು ಪಿಶಾಚಿಗಳಾಗಿ ನರಸಿಂಹಪ್ರಭುವನ್ನು ಪೀಡಿಸುತ್ತಿದ್ದಾರೆ. ಶ್ರೀಹರಿವಾಯುಗಳ ಅನುಗ್ರಹದಿಂದ ಈ ಕಷ್ಟದಿಂದ ಅವನನ್ನು ಪಾರುಮಾಡುತ್ತೇವೆ, ಚಿಂತಿಸಬೇಡಿ” ಎಂದು ಅಭಯವಿತ್ತು ಅವರೊಡನೆ ರಾಜಧಾನಿಗೆ ದಯಮಾಡಿಸಿದರು.
ಅರಮನೆಗೆ ಗುರುಗಳು ದಯಮಾಡಿಸುತ್ತಿರುವ ವಿಚಾರ ತಿಳಿದು ಹಾಸಿಗೆ ಹಿಡಿದು ಮಲಗಿದ್ದ ನರಸಿಂಹರಾಜ ಸೇವಕರ ಸಹಾಯ ಪಡೆದು ಬಹುಕಷ್ಟದಿಂದ ಮೇಲೆದ್ದು ಬಂದು ಗುರುಗಳನ್ನು ಸ್ವಾಗತಿಸಿದ. ಅವನ ಪರಿಸ್ಥಿತಿಯನ್ನು ಕಂಡು ಸ್ವಾಮಿಗಳಿಗೆ ಬಹುಪರಿತಾಪವಾಯಿತು. ಶ್ರೀಲಕ್ಷ್ಮೀನಾರಾಯಣಮುನಿಗಳನ್ನು ಕಂಡು ರಾಜನ ದುಃಖ ಒತ್ತರಿಸಿ ಬಂತು. ಕಣ್ಣೀರು ಸುರಿಸುತ್ತಾ ಬಹುಕಷ್ಟದಿಂದ ಗುರುಗಳ ಪಾದಕ್ಕೆರಗಿ ನಿಂತನು. ಗುರುಗಳಿಗೆ ಪ್ರಿಯಶಿಷ್ಯನಲ್ಲಿ ಅಪಾರ ಕಾರುಣ್ಯವುಂಟಾಯಿತು. ದಯಾದ್ರ್ರ ದೃಷ್ಟಿಯಿಂದ ಅವನನ್ನು ನೋಡುತ್ತಾ “ರಾಜನ್! ಭಯಪಡದಿರು. ನಿನ್ನ ಕಷ್ಟವೆಲ್ಲವನ್ನು ಶ್ರೀಗೋಪಿನಾಥ-ರಂಗವಿಠಲರು ಪರಿಹರಿಸುವರು. ನಾಳೆಯೇ ನೀನು ಮೊದಲಿನಂತಾಗುವೆ” ಎಂದು ಅವನ ತಲೆಯ ಮೇಲೆ ಅಮೃತಹಸ್ತವನ್ನಿಟ್ಟು ಆಶೀರ್ವದಿಸಿದರು. ಗುರುಗಳ ವಚನ, ಅಮೃತಸ್ಪರ್ಶಗಳಿಂದ ಅವನ ಶರೀರದಲ್ಲಿ ನವಚೈತನ್ಯವುಂಟಾಯಿತು. ಕಣ್ಣುಗಳಲ್ಲಿ ಕಾಂತಿ ಮಿಂಚಿತು.
ಗುರುವರ್ಯರು ಅಂದು ಅರಮನೆಯಲ್ಲಿಯೇ ದೇವರ ಪೂಜಾರಾಧನೆ ನೆರವೇರಿಸಿ, ದೇವರಲ್ಲಿ ವಿಶೇಷ ಪ್ರಾರ್ಥನೆ ಮಾಡಿ, ಭಿಕ್ಷಾ ಸ್ವೀಕಾರ ಮಾಡಿ, ಆನಂತರ ದೇವರ ಪವಿತ್ರ ತೀರ್ಥ-ಶಂಯೋದಕ-ತುಳಸೀ ಪ್ರಸಾದಗಳನ್ನು ತೆಗೆಸಿಕೊಂಡು ಬಂದು ತಮಗಾಗಿ ಹಾಕಿಸಿದ ಪೀಠದಲ್ಲಿ ಕುಳಿತು, ಶಂಶೋದಕ ತೀರ್ಥಗಳನ್ನು ಅಭಿಮಂತ್ರಿಸಿ ಪ್ರಭುವಿಗೆ ನೀಡಿ, ಅವನ ಮೇಲೆ ಪ್ರೋಕ್ಷಿಸಿದರು. ರಾಜನ ಶರೀರದಲ್ಲಿ ಅದೇನೋ ಒಂದು ಅದ್ಭುತಶಕ್ತಿಯು ಸಂಚರಿಸಿದಂತಾಯಿತು. ಗುರುಗಳ ಆಜ್ಞೆಯಂತೆ ಪ್ರಭುವಿನ ಉಡುಪುಗಳನ್ನು ಬಿಚ್ಚಿಸಿ, ಬೇರೆ ಉಡುಪುಗಳನ್ನು ತೊಡಿಸಿ, ರಾಜನು ತೊಟ್ಟಿದ್ದ ಉಡುಪುಗಳನ್ನು ಗುರುಗಳ ಮುಂದಿಟ್ಟರು. ಶ್ರೀಗಳವರು ಶಂಖದಕ ತೀರ್ಥಗಳನ್ನು ಅದರ ಮೇಲೆ ಪ್ರೋಕ್ಷಿಸಿದರು. ಪವಿತ್ರ ತೀರ್ಥ ಸ್ಪರ್ಶವಾದ ಕೂಡಲೇ ಅವೆಲ್ಲವೂ ಧಗಧಗನೆ ಉರಿದು ಭಸ್ಮವಾಗಿಹೋಯಿತು!
ಪಿಶಾಚಿಗಳಾಗಿದ್ದ ಅರ್ಚಕರು ಗುರುಗಳ ದೃಷ್ಟಿಗೆ ಗೋಚರಿಸಿ “ಮಹಾನುಭಾವರೆ! ನಾವೀಗ ಪಶ್ಚಾತ್ತಪ್ತರಾಗಿದ್ದೇವೆ. ಸೇಡು ತೀರಿಸಿಕೊಳ್ಳಬಯಸಿ ಆತ್ಮಹತ್ಯೆ ಮಾಡಿಕೊಂಡು ಈ ಪಿಶಾಚಜನ್ಮ ಪಡೆಯಬೇಕಾಯಿತು. ಮಹಾತ್ಮರಾದ ನೀವು ರಾಜರಲ್ಲಿ ಅನುಗ್ರಹ ಮಾಡಿದಂತೆ ಪಾಪಿಗಳಾದ ನಮ್ಮಲ್ಲೂ ಕಾರುಣ್ಯ ತೋರಿ ಈ ಪಿಶಾಚಜನ್ಮದಿಂದ ನಮಗೆ ನಿವೃತ್ತಿ ನೀಡಿ ಸದ್ಗತಿ ಪಡೆಯುವಂತೆ ಅನುಗ್ರಹಿಸಬೇಕು” ಎಂದು ಪ್ರಾರ್ಥಿಸಿದರು. ಅವರ ಪ್ರಾರ್ಥನೆಯಿಂದ ಗುರುಗಳಿಗೆ ಅವರಲ್ಲಿ ಕಾರುಣ್ಯ ಉಂಟಾಯಿತು. “ಚಕ್ರವರ್ತಿಯ ತಂಟೆಗೆ ನೀವು ಬರದಂತೆ ನಾವೀಗ ದಿಗ್ಧಂಧನ ಮಾಡುತ್ತೇವೆ. ನೀವಿನ್ನು ರಾಜನನ್ನು ಪೀಡಿಸದೆ ಯೋಗ್ಯರಾಗಿ ವರ್ತಿಸಿರಿ. ಅಂದರೆ ಮುಂದೆ ನಿಮಗೆ ವಿಜಯನಗರದಲ್ಲಿ ಪ್ರಾಣದೇವರ ಅನುಗ್ರಹದಿಂದ ನಮ್ಮ ಶಿಷ್ಯರ ದ್ವಾರಾ ಈ ಪಿಶಾಚಜನ್ಮ ನಿವೃತ್ತಿಯಾಗುವುದಲ್ಲದೆ, ನಿಮ್ಮ ವಂಶೀಕರೇ ಮತ್ತೆ ಶ್ರೀಶ್ರೀನಿವಾಸನನ್ನು ಪೂಜಿಸುವಂತಾಗುವುದು ಎಂದಾಜ್ಞಾಪಿಸಿದರು(ಶ್ರೀಪಾದರಾಜಗುರುಗಳ ಭವಿಷ್ಯ ಮುಂದೆ ಸತ್ಯವಾಗಿ ಪರಿಣಮಿಸಿತು. ಶ್ರೀವ್ಯಾಸರಾಜರ ಅನುಗ್ರಹ-ಪ್ರಯತ್ನಗಳಿಂದ ತಿರುಪತಿ ಅರ್ಚಕರ ವಂಶೀಕರಿಗೇ
ಶ್ರೀನಿವಾಸದೇವರ ಪೂಜಾಧಿಕಾರವು ಪ್ರಾಪ್ತವಾಯಿತು. ಪಿಶಾಚಿಗಳಾಗಿದ್ದ ಆರ್ಚಕರಿಗೆ ಚಕ್ರತೀರ್ಥದ ಸನಿಹದಲ್ಲಿ ಶ್ರೀವ್ಯಾಸರಾಜರು ಪ್ರತಿಷ್ಠಿಸಿದ ಶ್ರೀಪ್ರಾಣದೇವರ ಸೇವೆಯಿಂದ ಪಿಶಾಚಿಜನ್ಮ ನಿವೃತ್ತಿಯಾಗಿ ಸದ್ಧತಿಯಾದುದು ಇತಿಹಾಸಪ್ರಸಿದ್ಧವಾಗಿದೆ). ಗುರುಗಳ ಅಭಯವಚನದಿಂದ ಸಂತುಷ್ಟರಾಗಿ ಅರ್ಚಕ ಪಿಶಾಚಗಳು ಶ್ರೀಗಳವರಿಗೆ ಅಭಿನಂದಿಸಿ ಅದೃಶ್ಯವಾದವು.
ಸಾಮ್ರಾಟನಿಗೆ ಬಂದಿದ್ದ ವಿಪತ್ತು ಪರಿಹೃತವಾಯಿತು. ಬ್ರಹ್ಮಹತ್ಯಾ ಪಾಪ ನಿವಾರಣೆಯಾಯಿತು. ಪಿಶಾಚಬಾಧೆ ತಪ್ಪಿತು. ನರಸಿಂಹಭೂಪಾಲ ನಿರೋಗಿಯಾಗಿ ನಾಲ್ಕಾರು ದಿನಗಳಲ್ಲಿಯೇ ಸುಧಾರಿಸಿ, ಮೊದಲಿಗಿಂತ ತೇಜಸ್ವಿಯಾಗಿ, ದೃಢಕಾಯನಾಗಿ ಕಂಗೊಳಿಸಿದನು. ಶ್ರೀಪಾದಂಗಳವರು ಒಂದು ಸಪ್ತಾಹಕಾಲ ಚಕ್ರವರ್ತಿಯಿಂದ ಅನೇಕ ಹವನ-ಹೋಮಾದಿ- ಗಳನ್ನು ಮಾಡಿಸಿ, ಅವನಿಗೆ ಭಗವದನುಗ್ರಹದಿಂದ ಶಾಂತಿ-ಸಮಾಧಾನಗಳುಂಟಾಗುವಂತೆ ಮಾಡಿ ಅನುಗ್ರಹಿಸಿದರು. ಮಹಾಪ್ರಭುವು ಶ್ರೀಪಾದಂಗಳವರಿಗೆ ಮತ್ತೆ ಮತ್ತೆ ನಮಸ್ಕರಿಸಿ, ಅವರು ಮಾಡಿದ ಮಹೋಪಕಾರಕ್ಕಾಗಿ ತನ್ನ ಕೃತಜ್ಞತೆಗಳನ್ನು ಸಮರ್ಪಿಸಿ ಕೃತಾರ್ಥನಾದ ಮತ್ತು ಎಂದಿನಂತೆ ಉತ್ಸಾಹದಿಂದ ಸಾಮ್ರಾಜ್ಯ ಕಾರ್ಯಗಳಲ್ಲಿ ಮಗ್ನನಾದನು.
ಶ್ರೀಲಕ್ಷ್ಮೀನಾರಾಯಣಯೋಗಿಗಳು ಸಾಳುವ ನರಸಿಂಹನ ಬ್ರಹ್ಮಹತ್ಯಾದೋಷ ಪರಿಹಾರ ಮಾಡಿದ ವಿಚಾರ ಎಲ್ಲ ಕಡೆ ಹರಡಿ, ಸಕಲರೂ ಗುರುಗಳ ಮಹಿಮೆ-ಕಾರುಣ್ಯಗಳನ್ನು ಕೊಂಡಾಡಹತ್ತಿದರು. ಆದರೆ ಕುಬುದ್ಧಿಯ ಅಸೂಯಾಪರರಾದ ಕೆಲ ಪಂಡಿತರು “ಈ ಗುರುಗಳು ಮಹಾರಾಜನ ಬ್ರಹ್ಮಹತ್ಯಾಪಾಪವನ್ನು ತೀರ್ಥ ಪ್ರೋಕ್ಷಣೆಯಿಂದ ನಿವಾರಿಸಲು ಸಾಧ್ಯವೇ ಇಲ್ಲ. ಅದು ಸಾಧ್ಯವಾಗುವಂತಿದ್ದರೆ ಜಗತ್ತಿನಲ್ಲಿ ಪಾಪಿಗಳು - ದೋಷಗಳೇ ಇಲ್ಲದಂತಾಗಬೇಕಾದೀತು! ಇದು ಅಸಾಧ್ಯ ಮಾತ್ರವಲ್ಲ ಅಶಾಸ್ತ್ರೀಯವೂ ಆಗಿದೆ, ಇವೆಲ್ಲವೂ ಮೋಸ” ಮುಂತಾಗಿ ಆಡಿಕೊಳ್ಳಹತ್ತಿದರು.
ಈ ವಿಚಾರ ಕರ್ಣಾಕರ್ಣಿಕೆಯಾಗಿ ಶ್ರೀಲಕ್ಷ್ಮಿನಾರಾಯಣಯತಿಗಳಿಗೂ ತಿಳಿಯಿತು. ನಿಂದಕರ ಮೂಢತನವನ್ನು ಕಂಡು ಗುರುಗಳು ನಕ್ಕು ಸುಮ್ಮನಾಗಬಹುದಾಗಿತ್ತು. ಹಾಗೆ ಸುಮ್ಮನಾದಲ್ಲಿ ಅದರಿಂದ ಚಕ್ರವರ್ತಿ ಸಾಮ್ರಾಜ್ಯದ ಪ್ರಜಾವರ್ಗದ ಮೇಲೆ ದುಷ್ಪರಿಣಾಮವಾಗಿ ಕೇಡಾಗಬಹುದು. ಹಾಗಾಗಬಾರದೆಂದು ದೂರದೃಷ್ಟಿಯುಳ್ಳ ಶ್ರೀಗಳವರು ನಿಂದಕರಾದ ಪಂಡಿತರನ್ನು ಕರೆಯಿಸಿಕೊಂಡು ನರಸಿಂಹರಾಜನ ಸಮಕ್ಷಮದಲ್ಲಿ ಪಂಡಿತರೇ, ನರಸಿಂಹಪ್ರಭುಗಳ ಬ್ರಹ್ಮಹತ್ಯಾದೋಷವನ್ನು ಪರಿಹರಿಸಿದ್ದು ಸುಳ್ಳು ಎಂದು ನೀವು ಹೇಳುತ್ತಿರುವುದಾಗಿ ನಮಗೆ ತಿಳಿದುಬಂದಿದೆ. ಬ್ರಹ್ಮಹತ್ಯಾದೋಷವನ್ನು ಪರಿಹರಿಸುವುದು ಅಸಾಧ್ಯವೆಂದು ನಿಮ್ಮ ಅಭಿಮತವೇ ?” ಎಂದು ಪ್ರಶ್ನಿಸಿದರು.
ಅಸೂಯಾಪರರಾದ ಪಂಡಿತರು ಅಹುದು ಸ್ವಾಮಿ, ಬ್ರಹ್ಮಹತ್ಯಾದೋಷ ಅಪರಿಹಾರ್ಯ! ಅದು ಅನೇಕ ಕ್ಷೇತ್ರಗಳ ಯಾತ್ರೆ, ತೀರ್ಥಗಳ ಸ್ನಾನಾದಿಗಳಿಂದ ಪರಿಹಾರವಾಗುವುದೆಂದು ಶಾಸ್ತ್ರಗಳು ಹೇಳುವುವು. ನೀವು ಆ ಕ್ರಮವನ್ನು ಬಿಟ್ಟು, ಹಾಗೆ ಮಾಡಿಸದೆ ಶಂಬೋದಕ-ತೀರ್ಥ ಪ್ರೋಕ್ಷಣಗಳಿಂದ ಆ ದೋಷವನ್ನು ಅದೆಂತು ಪರಿಹರಿಸಲು ಶಕ್ತರಾದಿರಿ? ಇದು ಅಶಾಸ್ತ್ರೀಯವಲ್ಲವೇ ?” ಎಂದು ಸವಾಲು ಹಾಕಿದರು!
ದೈವ-ಮಂತ್ರ-ಶಂಖೋದಕ-ತೀರ್ಥಗಳಲ್ಲಿ ನಂಬಿಕೆಯಿಲ್ಲದ ಆ ಜನರ ಅಜ್ಞಾನವನ್ನು ಪರಿಹರಿಸಲಾಶಿಸಿ ಶ್ರೀಗಳವರು ಒಂದು ಬಿಳಿಯ ಶುಭ್ರವಾದ ವಸ್ತ್ರವನ್ನು ತರಿಸಿ, ಅದನ್ನು ಗೇರುಬೀಜದ ಎಣ್ಣೆಯಲ್ಲಿ ತೋಯಿಸಿ, ಕೃಷ್ಣವರ್ಣ ತಾಳಿದ್ದ ಆ ವಸ್ತ್ರವನ್ನು ಆ ಕುಹಕಿಗಳ ಮುಂದಿರಿಸಿ, “ಪಂಡಿತರೇ, ಈ ವಸ್ತ್ರವನ್ನು ಶುಭ್ರಗೊಳಿಸಲು ಸಾಧ್ಯವಿಲ್ಲವೇ ?” ಎಂದು ಕೇಳಿದರು. ಅದಕ್ಕೆ ಆ ಪಂಡಿತರು ನಕ್ಕು, “ಗುರುಗಳೇ, ಇದು ಗೇರೆಣ್ಣೆಯಿಂದ ಕಪ್ಪಾಗಿದೆ, ದೋಷಯುಕ್ತವಾಗಿದೆ. ಇದನ್ನು ಶುಭ್ರಗೊಳಿಸಲು ಸಾಧ್ಯವೇ ಇಲ್ಲ” ಎಂದರು.
ಶ್ರೀಗಳವರು ಮಂದಹಾಸ ಬೀರುತ್ತಾ, “ನೀವು ಹೇಳಿದಂತೆ ಬ್ರಹ್ಮಹತ್ಯಾದೋಷಗಳು ಕ್ಷೇತ್ರಯಾತ್ರೆ, ತೀರ್ಥಸ್ನಾನಾದಿ- ಗಳಿಂದ ಪರಿಹಾರವಾಗುವುದಷ್ಟೇ ? ಶಾಸ್ತ್ರವಿಹಿತವಾದ ಆ ಕ್ರಮದಂತೆ ದೋಷಯುಕ್ತವಾದ ಈ ವಸ್ತ್ರವನ್ನೂ ಕ್ಷೇತ್ರಯಾತ್ರೆ, ತೀರ್ಥ-ಸಮುದ್ರ ನದಿಗಳಲ್ಲಿ ಅದ್ದಿ ದೋಷ ಪರಿಹಾರ ಮಾಡಿಸಿ ಶುಭ್ರಗೊಳಿಸಿ ತನ್ನಿರಿ” ಎಂದು ಹೇಳಿ ಕ್ಷೇತ್ರ- ತೀರ್ಥಯಾತ್ರಾರ್ಥಿಗಳಿಗೆ ಬೇಕಾಗುವ ಧನಸಹಾಯ ಮಾಡಿ ಕಳುಹಿಸಿಕೊಟ್ಟರು.
ಒಂದೆರಡು ತಿಂಗಳು ಕಳೆದ ಮೇಲೆ ವಾಪಸಾದ ಆ ನಿಂದಕ ಪಂಡಿತರು ತಮ್ಮ ಕಾರ್ಯ ಅಸಫಲವಾಯಿತೆಂದು ಹೇಳಿ ಕಪ್ಪಾಗಿದ್ದ ವಸ್ತ್ರವನ್ನು ಶ್ರೀಗಳವರ ಮುಂದಿಟ್ಟು ತಲೆತಗ್ಗಿಸಿ ನಿಂತರು! ಆಗ ಶ್ರೀಲಕ್ಷ್ಮೀನಾರಾಯಣಮುನಿಗಳು ಶಿಷ್ಯರಿಂದ ಶಂಖೋದಕ ಮತ್ತು ದೇವರ ತೀರ್ಥವನ್ನು ತರಿಸಿ, ಅಭಿಮಂತ್ರಿಸಿ, ಎಲ್ಲರೂ ನೋಡುತ್ತಿರುವಂತೆ ಆ ವಸ್ತ್ರದ ಮೇಲೆ ಪ್ರೋಕ್ಷಿಸಿದರು. ಆಶ್ಚರ್ಯ! ಪರಮಾಶ್ಚರ್ಯ! ಕಪ್ಪುಬಣ್ಣದಿಂದಿದ್ದ ಆ ವಸ್ತ್ರವು ತಕ್ಷಣವೇ ಬಿಳುಪಾಗಿ ಮೊದಲಿನಂತೆಯೇ ಶುಭ್ರವಾಗಿ ಕಂಗೊಳಿಸಿತು! ಆ ಅದ್ಭುತ ಪವಾಡವನ್ನು ಕಂಡು ಎಲ್ಲರೂ ಬೆರಗಾದರು! ತಮ್ಮ ಕಣ್ಣೆದುರಿಗೇ ಜರುಗಿದ ವಿಸ್ಮಯಕಾರಕ ಪವಾಡವನ್ನು ಕಂಡು ಕುಹಕಿಗಳು ಅಚ್ಚರಿಗೊಂಡರು. ಆಗ ಅವರು ಈ ಗುರುಗಳು ಸಾಮಾನ್ಯರಲ್ಲ. ಭಗವಂತನ ಅನುಗ್ರಹಕ್ಕೆ ಪಾತ್ರರಾದ ಮಹಾತ್ಮರು, ಮಂತ್ರಸಿದ್ದರು. ಇಂಥವರನ್ನು ತಾವು ನಿಂದಿಸಿ ಅಪರಾಧಿಗಳಾದೆವಲ್ಲಾ ಎಂದು ಚಿಂತಾಕ್ರಾಂತರಾಗಿ ತಲೆತಗ್ಗಿಸಿ ನಿಂತರು.
ಆಗ ಶ್ರೀಗಳವರು “ಪಂಡಿತರೇ, ನೀವು ವೇದವೇದಾಂಗ ಪಾರಂಗತರು, ಆಸ್ತಿಕರು, ನಿಮ್ಮಂತಹವರು ಪರಮಾತ್ಮನ ಮಹಿಮಾತಿಶಯ, ಮಂತ್ರಶಾಸ್ತ್ರಗಳ ಮಹತ್ವವನ್ನು ಅಲ್ಲಗಳೆಯಬಹುದೇ ? ಇನ್ನು ಜನಸಾಮಾನ್ಯರ ಮತ್ತು ನಾಸ್ತಿಕರ ವಿಚಾರ ಹೇಳುವುದೇನಿದೆ ? ಜನತೆಯಲ್ಲಿ ಆಸ್ತಿಕತೆಯನ್ನು ಪ್ರಚೋದಿಸಬೇಕಾದ ನೀವೇ ಹೀಗೆ ಮಾಡಬಹುದೆ ? ಕ್ಷೇತ್ರ-ತೀರ್ಥಗಳಿಗೆ ಆ ಶಕ್ತಿಯನ್ನು ತಂದೀಯುವ ಭಗವಂತನ ಪವಿತ್ರತೀರ್ಥ, ಜಗತ್ತನ್ನೇ ಪಾವನಗೊಳಿಸುವ ಶಂಖತೀರ್ಥಗಳ ಮಹತ್ವ ನಿಮಗೆ ತಿಳಿಯದೇ ? ಭಗವದನುಗ್ರಹ, ಮಂತ್ರಶಕ್ತಿ ಪ್ರಭಾವಗಳಿಂದ ಏನನ್ನು ಬೇಕಾದರೂ ಸಾಧಿಸಬಹುದೆಂದು ಇಂದಿನ ದೃಷ್ಟಾಂತದಿಂದ ನಿಮಗೀಗ ಮನವರಿಕೆಯಾಗಿರಬಹುದೆಂದು ನಂಬಿದ್ದೇವೆ. ಗೇರೆಣ್ಣೆಯಿಂದ ಕಪ್ಪಾದ ವಸ್ತ್ರವು ಹೇಗೆ ಶುಭ್ರವಾಯಿತೋ, ಅದರಂತೆಯೇ ಮಹಾರಾಜರಿಗೆ ಬಂದಿದ್ದ ಬ್ರಹ್ಮಹತ್ಯಾದೋಷವೂ ಮಂತ್ರಪಾತವಾದ ಶಂಶೋದಕ ಮತ್ತು ದೇವರ ಪವಿತ್ರತೀರ್ಥ ಮಂತ್ರಶಕ್ತಿಯ ಪ್ರಭಾವದಿಂದ ಪರಮಾತ್ಮನ ಅನುಗ್ರಹದಿಂದ ಪರಿಹಾರವಾಗಿ ಅವರು ಪಾಪಮುಕ್ತರಾದರೆಂದು ತಿಳಿಯಿರಿ!” ಎಂದು ಹೇಳಿದರು.
ಪಂಡಿತರು ತಮ್ಮ ಕುಕೃತ್ಯಕ್ಕಾಗಿ ನಾಚಿ, ಪಶ್ಚಾತ್ತಪ್ತರಾಗಿ ಗುರುಗಳಿಗೆ ನಮಸ್ಕರಿಸಿ, “ಮಹಾನುಭಾವರೇ, ಭಗವದ್ಭಕ್ತರೂ, ಜ್ಞಾನಿಗಳೂ ಆದ ತಮ್ಮನ್ನು ಶಂಕಿಸಿ ಪಾಪಿಗಳಾಗಿದ್ದೇವೆ. ನಮ್ಮಿ ಅಪರಾಧವನ್ನು ಕ್ಷಮಿಸಿ, ಅನುಗ್ರಹಿಸಬೇಕು” ಎಂದು ಪ್ರಾರ್ಥಿಸಿದರು.
ಇವೆಲ್ಲವನ್ನೂ ಕಂಡು ನೃಸಿಂಹ ಭೂಪಾಲ ಸಂತೋಷಗೊಂಡ. ಗುರುಗಳಲ್ಲಿ ಅವನಿಗಿದ್ದ ಭಕ್ತಿ-ಗೌರವಗಳು ಇಮ್ಮಡಿಸಿದವು. ಶ್ರೀಗಳವರಿಗೆ ಕರಮುಗಿದು “ಅನುಗ್ರಹೀತನಾದೆ ಗುರುದೇವ! ತಾವು ಕೆಲಕಾಲ ಇಲ್ಲಿದ್ದು, ನನ್ನನ್ನೂ ಸಾಮ್ರಾಜ್ಯವನ್ನೂ ಕಾಪಾಡುತ್ತಿರಬೇಕು” ಎಂದು ಕೋರಿದನು. ಶ್ರೀಗಳವರು ಕಾರುಣ್ಯದಿಂದ ಅವನ ವಿಜ್ಞಾಪನೆಯಂತೆ ಅಲ್ಲಿರಲು ಒಪ್ಪಿದರು. ಮಹಾರಾಜ ಅವರಿಗೆ ಉತ್ತಮ ಬಿಡಾರ ಮತ್ತು ಸಕಲ ವ್ಯವಸ್ಥೆಗಳನ್ನೂ ಮಾಡಿಕೊಟ್ಟ.
ಇದೇ ಸಮಯಕ್ಕೆ ಸರಿಯಾಗಿ ಉತ್ತರಭಾರತ ಸಂಚಾರದಲ್ಲಿದ್ದ ಭಗವಾನ್ ವ್ಯಾಸತೀರ್ಥರು ತಮ್ಮ ದಿಗ್ವಿಜಯವನ್ನು ಯಶಸ್ವಿಯಾಗಿ ಮುಗಿಸಿಕೊಂಡು ರಾಜಧಾನಿಗೆ ದಯಮಾಡಿಸಿದರು.
ನಾಲ್ಕು ವರ್ಷಗಳ ಹಿಂದೆ ಸಾಳುವ ನರಸಿಂಹರಾಜನಿಂದ ಬೀಳ್ಕೊಂಡು ಉತ್ತರ ದಿಗ್ವಿಜಯವನ್ನು ಕೈಕೊಂಡು ಹೊರಟ ಶ್ರೀಗಳವರು ಕಾಶಿ, ಪ್ರಯಾಗ, ಗಯಾ, ಹರಿದ್ವಾರ, ಹೃಷೀಕೇಶ, ಬದರಿ, ಪೂರಿ, ಜಗನ್ನಾಥ, ಮಥುರಾ, ಬೃಂದಾವನ, ಕುರುಕ್ಷೇತ್ರ - ಮುಂತಾದ ಕ್ಷೇತ್ರಗಳಿಗೆ ದಯಮಾಡಿಸಿ ಅಲ್ಲಲ್ಲಿ ಬಹುಕಾಲ ವಾಸಮಾಡಿ ಪುಣ್ಯನದೀಸ್ನಾನ, ಭಗವದರ್ಶನ, ಸೇವೆಗಳಿಂದ ಪ್ರವಿತ್ರಾಂತಃಕರಣರಾದರು. ಕಾಶಿ, ಗಯಾ, ಹರಿದ್ವಾರ, ಮುಂತಾದಕಡೆ ಪ್ರಖ್ಯಾತರಾಗಿದ್ದ ಗದಾಧರ, ವಾಜಪೇಯಿ, ಲಿಂಗಣ್ಣಮಿಶ್ರ, ಸತ್ಯನಾಥ, ಹರಮಿಶ್ರ ಮುಂತಾದ ಪ್ರಕಾಂಡ ಪಂಡಿತರನ್ನು ವಾದದಲ್ಲಿ ಜಯಿಸಿ ತಮ್ಮ ಶಿಷ್ಯರನ್ನಾಗಿ ಮಾಡಿಕೊಂಡರು ಮತ್ತು ಕಾಶಿ, ಗಯಾ, ಹರಿದ್ವಾರ ಮುಂತಾದ ಕಡೆ ಇದ್ದ ವಿದ್ಯಾಪೀಠಗಳಿಗೆ ಕ್ರಮವಾಗಿ ಗದಾಧರ, ಹರಮಿಶ್ರ, ಸತ್ಯನಾಥ ಮುಂತಾದವರನ್ನು ಅಧ್ಯಕ್ಷರನ್ನಾಗಿ ಮಾಡಿ ಸಕಲಶಾಸ್ತ್ರಗಳು ಮುಖ್ಯವಾಗಿ ದೈತಸಿದ್ಧಾಂತ ಪ್ರಸಾರಗಳನ್ನು ನೆರವೇರಿಸಬೇಕೆಂದು ಆಜ್ಞಾಪಿಸಿ, ಅದಕ್ಕೆ ಅವರಿಗೆ ಎಲ್ಲ ಅನುಕೂಲಗಳನ್ನೂ ಏರ್ಪಡಿಸಿಕೊಟ್ಟು ಅನುಗ್ರಹಿಸಿದರು.
ಅಲ್ಲಿಂದ ಮುಂದೆ ಗುರುಗಳು ವಂಗದೇಶಕ್ಕೆ ದಯಮಾಡಿಸಿದರು. ಅಲ್ಲಿ ಅವರಿಗೆ ಅಭೂತಪೂರ್ವ ಸ್ವಾಗತ ದೊರೆಯಿತು. ಅಲ್ಲಿ ವಿಷ್ಣುಭಕ್ತಿ, ಭಾಗವತಧರ್ಮಗಳು ವಿಶೇಷ ಪ್ರಸಾರವಾಗಿರುವುದನ್ನು ಕಂಡು ಗುರುಗಳಿಗೆ ಅತೀವ ಸಂತೋಷವಾಯಿತು. ಶ್ರೀವ್ಯಾಸತೀರ್ಥರು ಊರೂರು, ಗ್ರಾಮಗಳಿಗೆ ದಯಮಾಡಿಸಿ ಎಲ್ಲೆಡೆ ವಿಷ್ಣುಭಕ್ತಿಯನ್ನು ಪ್ರಸಾರ ಮಾಡಿ ಸಹಸ್ರಾರು ಜನರಿಗೆ ಮಾಧ್ವದೀಕ್ಷೆ ಕರುಣಿಸಿ, ಮಠದ ಶಿಷ್ಯರನ್ನಾಗಿ ಮಾಡಿಕೊಂಡು ಪೊರೆದರು. ಅಲ್ಲಿನ ಜನರ ಪ್ರಾರ್ಥನೆಯಂತೆ ಅಲ್ಲಿ ಪ್ರಖ್ಯಾತ ಪಂಡಿತರಾಗಿದ್ದ ಶಿಷ್ಯರಿಗೆ ಪರಮಹಂಸಾಶ್ರಮವಿತ್ತು, ಶ್ರೀಲಕ್ಷ್ಮೀತೀರ್ಥ” ಎಂಬ ಹೆಸರಿನಿಂದ ತಮ್ಮ ಶಾಖಾಮಠದ ಅಧಿಪತಿಗಳಾಗಿರುವಂತೆ ಮಾಡಿದ್ದಲ್ಲದೆ, ಲಕ್ಷ್ಮೀತೀರ್ಥರನ್ನು ವಂಗದೇಶದ ವಿದ್ಯಾಪೀಠದ ಅಧ್ಯಕ್ಷರನ್ನಾಗಿ ಮಾಡಿದರು.
ಶ್ರೀವ್ಯಾಸರಾಜರ ಈ ದ್ವಿತೀಯ ಜೈತ್ರಯಾತ್ರೆಯು ವೈಶಿಷ್ಟ್ಯಪೂರ್ಣವಾಗಿದ್ದಿತು. ಗುರುಗಳ ತೇಜಸ್ಸು-ಜ್ಞಾನ-ಭಕ್ತಾದಿ- ಗಳಿಂದ ಪ್ರಭಾವಿತರಾಗಿದ್ದ ಜನರು ಅವರ ಉಪದೇಶ, ಅನುಗ್ರಹಗಳಿಂದ ಆಕರ್ಷಿತರಾಗಿ ಅವರಲ್ಲಿ ಅಪಾರ ಭಕ್ತಿ ಮಾಡುತ್ತಿದ್ದರು. ಶ್ರೀಯವರು ದೇವರ ದರ್ಶನ, ತೀರ್ಥ-ಪ್ರಸಾದ, ಮಂತ್ರಮುದ್ರಾಧಾರಣ, ಗುರೂಪದೇಶಾದಿಗಳಿಂದ ಆಸ್ತಿಕವೃಂದವನ್ನು ಸಂತೋಷಪಡಿಸಿದರು. ಜನತೆಯ ಅನೇಕ ಸಮಸ್ಯೆಗಳು, ಕಷ್ಟಕಾರ್ಪಣ್ಯಗಳನ್ನು ಪರಿಹರಿಸಿ, ಮನೋರಥಗಳನ್ನು ಪೂರೈಸುತ್ತಿದ್ದರು. ಜನತೆಯಲ್ಲಿ ಆಧ್ಯಾತ್ಮಿಕ, ಧಾರ್ಮಿಕ, ನೈತಿಕ ಭಾವನೆಗಳನ್ನು ಜಾಗೃತಿಗೊಳಿಸಿ, ಭಾರತೀಯ ವೈದಿಕ ಭವ್ಯ ಪರಂಪರೆಯು ಅಲ್ಲಿ ಅವ್ಯಾಹತವಾಗಿ, ನಿರ್ಬಾಧವಾಗಿ ಮುಂದುವರೆಯುವಂತೆ ಮಾಡಿದರು.
ಶ್ರೀಪಾದಂಗಳವರು ತಾವು ತಿಳಿದ ಸ್ಥಳಗಳನ್ನೆಲ್ಲಾ ತಮ್ಮ ಪಾದಧೂಳಿಯಿಂದ ಪಾವನಗೊಳಿಸುತ್ತಾ ಸುಮಾರು ನಾಲ್ಕು ವರ್ಷಗಳ ಕಾಲ ಉತ್ತರಭಾರತದಾದ್ಯಂತ ಸಂಚಾರ ಮಾಡಿ ಸಜ್ಜನರನ್ನು ಉದರಿಸುತ್ತಾ, ದೈತಸಿದ್ಧಾಂತ ವಿಜಯಧ್ವಜವನ್ನು ಮೆರೆಸಿ, ರಾಜಾಧಿರಾಜರು-ಪಂಡಿತ-ಪಾಮರರಿಂದ ಸೇವಿತರಾಗಿ ಲೋಕಕಲ್ಯಾಣವೆಸಗಿ ಮತ್ತೆ ಸಂಚಾರಕ್ರಮದಲ್ಲಿ ಚಂದ್ರಗಿರಿಗೆ ಪ್ರಯಾಣ ಬೆಳೆಸಿದರು.