ಕಲಿಯುಗ ಕಲ್ಪತರು
ನಾಲ್ಕನೆಯ ಉಲ್ಲಾಸ
ಶ್ರೀವ್ಯಾಸರಾಜಯತಿಸಾರ್ವಭೌಮರು
೩೩. ರಾಜಾಸ್ಥಾನದಲ್ಲಿ ಶ್ರೀವ್ಯಾಸರಾಜರು
ಕೋಟೆ-ಕೊತ್ತಲಗಳು, ಭವ್ಯಮಂದಿರಗಳು, ಗೋಡೆ-ಗೋಪುರಗಳು, ಉದ್ಯಾನವನಗಳು, ವಿಸ್ತಾರವಾದ ರಾಜಬೀದಿಗಳು, ಮುಗಿಲು ಮುಟ್ಟುವ ಅರಮನೆಗಳಿಂದ ಶ್ರೀಮಂತಿಕೆ ವೈಭವಗಳನ್ನು ಪ್ರದರ್ಶಿಸುತ್ತಾ ಕಂಗೊಳಿಸುತ್ತಿದ್ದ ಚಂದ್ರಗಿರಿ ರಾಜಧಾನಿಗೆ ಶ್ರೀವ್ಯಾಸರಾಜರು ದಯಮಾಡಿಸಿದರು. ಆಕಸ್ಮಿಕವಾಗಿ ಪೂರ್ವಸೂಚನೆ ನೀಡದೆಯೇ ಚಿತ್ತೈಸಿದ ಶ್ರೀಗಳವರ ಸವಾರಿಯನ್ನು ಕಂಡ ರಾಜಧಾನಿಯ ಪಂಡಿತರೊಬ್ಬರು ಗುರುಗಳನ್ನು ಭಕ್ತಿಗೌರವಗಳಿಂದ ತಮ್ಮ ಮನೆಗೆ ಕರೆದೊಯ್ದು ಸತ್ಕರಿಸಿದರು. ಅಂದು ಆ ಪಂಡಿತರ ಮನೆಯಲ್ಲಿಯೇ ಭಿಕ್ಷೆಯನ್ನು ಸ್ವೀಕರಿಸಿ, ಸಾಯಂ ದೀಪಾರಾಧನೆಯನ್ನು ಮುಗಿಸಿ ವಿಶ್ರಮಿಸಿದರು.
ಇತ್ತ ಚಂದ್ರಗಿರಿಯ ಅರಮನೆಯಲ್ಲಿ ಸಚಿವ-ಸಾಮಂತ-ಸೈನ್ಯಾಧಿಪತಿಗಳು-ರಾಜಮನ್ನೆಯರು, ಪಂಡಿತರು, ಕವಿಗಳು, ಗಾಯಕರು, ಪೌರಜಾನಪದರಿಂದ ತುಂಬಿದ ರಾಜಸಭೆಯಲ್ಲಿ ಉನ್ನತ ವೇದಿಕೆಯ ಮೇಲೆ ಕಂಗೊಳಿಸುವ ಸಿಂಹಾಸನದಲ್ಲಿ ಮಂಡಿಸಿ ಸಾಳುವ ನರಸಿಂಹ ಭೂಪಾಲನು ಸಚಿವ-ಸಾಮಂತರಿಂದ ಓಲೈಸಿಕೊಳ್ಳುತ್ತಿರುವಾಗ, ನರಸಿಂಹ ಭೂಮೀಂದ್ರನ ಸನ್ನಿಧಿಗೆ ರಾಜಪುರೋಹಿತ ಸಹಕೃತನಾಗಿ ಸಚಿವಾಗ್ರೇಸರನಾದ ಭುವನಬಂಧುವು ಮುಂದೆ ಬಂದು ಶಿರಬಾಗಿ ವಿಜ್ಞಾಪಿಸಿದನು.
“ಕನ್ನಡ ಸಾಮ್ರಾಜ್ಯಧುರಂಧರ! ಪೂಜ್ಯಗುರುಗಳಾದ ಶ್ರೀಲಕ್ಷ್ಮೀನಾರಾಯಣ ಯೋಗೀಂದ್ರರ ಶಿಷ್ಯರೂ ಸರಸ್ವತಿಯ ಅಪರಾವತಾರರೂ ಆದ ಶ್ರೀವ್ಯಾಸತೀರ್ಥಯತೀಂದ್ರರು ಶ್ರೀಗುರುಪಾದರ ಆದೇಶದಂತೆ ನೆನ್ನೆ ಸಂಜೆ ರಾಜಧಾನಿಗೆ ದಯಮಾಡಿಸಿದ್ದಾರೆ.
ಪ್ರಭು! ಮಹನೀಯರಾದ ಶ್ರೀವ್ಯಾಸರಾಜ ಗುರುವರ್ಯರ ಕೀರ್ತಿಯು ಮಹಾಸನ್ನಿಧಿಗೆ ಈಗಾಗಲೇ ವೇದ್ಯವೇ ಆಗಿರುತ್ತದೆ. ಆ ಮಹಾತ್ಮರು ಜಾಹ್ನವಿಯು ಹಿಮಗಿರಿ ತಟವನ್ನು ಪಾವನಗೊಳಿಸುವಂತೆ ತಮ್ಮ ಶಿಷ್ಯರಾದ ಓರ್ವ ಪಂಡಿತರ ಮನೆಯಲ್ಲಿ ಬಿಡಾರ ಮಾಡಿ ಆ ಗೃಹವನ್ನು ಪಾವನಗೊಳಿಸಿದ್ದಾರೆ. ಅವರನ್ನು ಗೌರವದಿಂದ ಸ್ವಾಗತಿಸಿ ಕರೆತರಲು ತಮ್ಮ ಅಪ್ಪಣೆಯನ್ನು ನಿರೀಕ್ಷಿಸುತ್ತಿದ್ದೇವೆ.
ಭುವನಬಂಧುಗಳ ಮಾತನ್ನಾಲಿಸಿ ನರಸಿಂಹ ಭೂಪಾಲನು ಕುತೂಹಲ - ಸಂಭ್ರಮ ಸಡಗರಗಳಿಂದ ಒಮ್ಮೆ ರಾಜಸಭೆಯನ್ನು ಪರಿಕಿಸಿ, ಪೂಜ್ಯ ಗುರುಗಳವರನ್ನು ಗೌರವದಿಂದ ಸ್ವಾಗತಿಸಿ, ಕರೆತರಲು ರಾಜಪುರೋಹಿತರು, ದರಬಾರಿನ ಪ್ರಮುಖರು, ಯೋಗ್ಯರಾದ ಪರಿವಾರದವರೊಡನೆ ತನ್ನ ಓರ್ವ ಸಚಿವರನ್ನು ಕಳುಹಿಸಿಕೊಟ್ಟನು.76
ಆನಂತರ, ಭುವನಬಂಧುವು “ಮಹಾಪ್ರಭು ! ತಾವು ದಯಮಾಡಿಸುವುದನ್ನು ಪೂರ್ವಭಾವಿಯಾಗಿ ತಿಳಿಸದೆ ಬಂದಿರುವ ಆ ಮಹನೀಯರು ನಿಜವಾಗಿ ಮಹಾತಪಸ್ವಿಗಳೂ, ವೈರಾಗ್ಯನಿಧಿಗಳೆಂದೇ ನಾನು ಭಾವಿಸುವೆನು. ನಮ್ಮ ಕನ್ನಡನಾಡು, ಇಂದಿನ ಚಕ್ರೇಶರ ಅವ್ಯವಹಾರದಿಂದಾಗಿ ಮೃತಪ್ರಾಯವಾಗಿದ್ದಾಗ ಈ ಭವ್ಯನಾಡಿಗೆ ಸ್ಫೂರ್ತಿಯನ್ನಿತ್ತು ನೂತನ ಚೈತನ್ಯವನ್ನು ತುಂಬಿ ಉಜ್ಜಿವನಗೊಳಿಸಲೆಂದೇ ಭಗವಾನ್ ಶ್ರೀನಿವಾಸನು, ಭಗವದ್ದಕ್ತರೂ, ಪ್ರಜಾರಂಜಕರೂ, ಆದ ತಮ್ಮನ್ನು ನಮಗೆ ಕರುಣಿಸಿರುವಂತೆ ಕನ್ನಡ ಸಾಮ್ರಾಜ್ಯದ ಅಭ್ಯುದಯಕ್ಕಾಗಿಯೇ ಪೂಜ್ಯಲಕ್ಷ್ಮೀನಾರಾಯಣಮುನೀಂದ್ರರು, ಶ್ರೀವ್ಯಾಸತೀರ್ಥ- ರಂತಹ ತಪಸ್ವಿಗಳನ್ನು ಕಳುಹಿಸಿರುವುದು ನಾಡಿನ ಸೌಭಾಗ್ಯವೆಂದು ಭಾವಿಸುತ್ತೇನೆ. ಇದಕ್ಕೆ ಆ ಮಹನೀಯರು ರಾಜಧಾನಿಯ ಸನಿಹಕ್ಕೆ ಬರುತ್ತಿರುವಂತೆಯೇ ತೋರಿದ ಅಪೂರ್ವ ಮಹಿಮೆಯೇ ದೃಷ್ಟಾಂತವಾಗಿದೆ! ಪ್ರಭು, ರಾಜಧಾನಿಗೆ ಹತ್ತಿರವಿರುವ ವನವೊಂದರಲ್ಲಿ ಸರ್ಪದಂಶನದಿಂದ ಮೃತನಾಗಿದ್ದ ಓರ್ವ ಬ್ರಾಹ್ಮಣಕುಮಾರನನ್ನು ಗುರುಗಳು ಮಂತ್ರೋದಕ ಪ್ರೋಕ್ಷಣದಿಂದ ಬದುಕಿಸಿದ ಅದ್ಭುತ ಪವಾಡವು ರಾಜಧಾನಿಯಲ್ಲಿ ಜನಜನಿತವಾಗಿದೆ. ಇದು ಅವರ ತಪಃಪ್ರಭಾವಕ್ಕೆ ಜ್ವಲಂತ ದೃಷ್ಟಾಂತವಾಗಿದೆ” ಎಂದರುಹಿದನು.
ಸಚಿವಾಗ್ರೇಸರನ ವಚನವನ್ನು ಕೇಳಿ ರೋಮಾಂಚಾಶ್ಚರ್ಯಚಕಿತನಾಗಿ, ನರಸಿಂಹಭೂಪಾಲನು ಆನಂದದಿಂದ ಅಮಾತ್ಯರೇ, ಎಂತಹ ಸಂತಸದ ಸಮಾಚಾರವನ್ನರುಹಿದಿರಿ! ನಿಜ, ನಮ್ಮ ಗುರುಪಾದರಾದ ಶ್ರೀಲಕ್ಷ್ಮೀನಾರಾಯಣ- ಮುನಿಗಳು ಹೇಳಿದ ಮಾತು ಅಕ್ಷರಶಃ ಸತ್ಯ! ಕನ್ನಡನಾಡು ಮತ್ತು ನಮ್ಮೆಲ್ಲರ ಉದ್ಧಾರಕ್ಕಾಗಿಯೇ ಭಗವಾನ್ ಶ್ರೀವೆಂಕಟೇಶ್ವರನು ಶ್ರೀವ್ಯಾಸಭಗವಾನರನ್ನು ತನ್ನ ಪ್ರತಿನಿಧಿಯಾಗಿ ನಮಗೆ ಕರುಣಿಸುತ್ತಿರುವನೆಂದು ಭಾವಿಸಿದ್ದೇನೆ. ಆ ಮಹನೀಯರ ದರ್ಶನಕ್ಕಾಗಿ ನನ್ನ ಮನವು ಹಾತೊರೆಯುತ್ತಿದೆ. ಅಂಥ ತಪಸ್ವಿಗಳು ನಮಗೆ ಗುರುಗಳಾಗಿ ದೊರಕುವುದು ನಮ್ಮ ನಾಡಿನ, ಜನತೆಯ ಪೂರ್ವಾರ್ಜಿತ ಪುಣ್ಯಫಲವೆಂದೇ ನಾನು ನಂಬಿದ್ದೇನೆ” ಎಂದು ಉದ್ಧರಿಸಿ ಶ್ರೀವ್ಯಾಸಭಗವಾನರ ಆಗಮನವನ್ನು ಕುತೂಹಲ ಭಕ್ತಿಪೂರ್ವಕ ನಿರೀಕ್ಷಿಸಹತ್ತಿದನು.
ಇತ್ತ ಶ್ರೀವ್ಯಾಸತೀರ್ಥರು ಬಿಡಾರ ಮಾಡಿರುವ ವಿದ್ವಾಂಸರ ಮನೆಗೆ ಪೂರ್ಣಕುಂಭ, ವೇದಘೋಷ, ವಾದ್ಯವೈಭವ, ರಾಜಗೌರವಗಳೊಡನೆ ಪಂಡಿತಮಂಡಲಿ-ಪುರೋಹಿತರಿಂದ ಸಹಿತರಾಗಿ ಬಂದ ರಾಜಸಚಿವರು ದೂರದಿಂದಲೇ ತೇಜಸ್ವಿಗಳಾದ ಶ್ರೀವ್ಯಾಸರಾಜಮುನಿಗಳ ದರ್ಶನ ಮಾಡಿದರು. ಗುರುಗಳತ್ತ ಬಂದ ಸಚಿವರು ಯತಿಗಳಿಗೆ ನಮಸ್ಕರಿಸಿ “ಭಗವನ್ ! ಮಹಾರಾಜರು ತಮ್ಮ ಪರಮಾನುಗ್ರಹವನ್ನು ಬಯಸುತ್ತಿದ್ದಾರೆ. ಅನುಗ್ರಹಿಸಿ ದಯಮಾಡಿಸಬೇಕು” ಎಂದು ಪ್ರಾರ್ಥಿಸಿದರು.
ಶ್ರೀವ್ಯಾಸಭಗವಾನರು ನಗೆಮೊಗದಿಂದ, “ಸಂತೋಷ ಬರುತ್ತೇವೆ” ಎಂದು ಅಭಯವಿತ್ತು ಶಿಷ್ಯಮಂಡಲಿಯೊಡನೆ ದೇವೇಂದ್ರಸದನಕ್ಕೆ ಹೊರಡುವ ಆದಿಯೋಗಿಗಳಂತೆ ಅರಮನೆಗೆ ಚಿತ್ತೈಸಿದರು.
ಆನಂತರ, ಸಂತಸದಿಂದ ಸಚಿವಾದಿಗಳು ಗೌರವದಿಂದ ಕರೆತರುತ್ತಿರುವ ಯೋಗಿವರ್ಯರ ತೇಜಃಪುಂಜ ಮುಖಮುದ್ರೆ, ಅಪಾರ ವರ್ಚಸ್ಸುಗಳನ್ನು ನೋಡಿ ಕೊಂಡಾಡುತ್ತಾ ರಾಜಪಥದ ಎರಡು ಭಾಗಗಳಲ್ಲಿಯೂ ನಿಂತು ಸಹಸ್ರಾರು ಜನರು ಗುರುಗಳ ಜಯಜಯಕಾರ ಮಾಡುತ್ತಿರಲು ಗುರುಗಳ ಸವಾರಿಯು ಅರಮನೆಗೆ ಸಮೀಪಿಸಿತು. ದೂರದಿಂದಲೇ ಶ್ರೀವ್ಯಾಸಯೋಗೀಂದ್ರರನ್ನು ಕಂಡ ನರಸಿಂಹ ಭೂಪಾಲನು ಅಂಕುರಿಸಿದ ವಿಸ್ಮಯದಿಂದ ಪಲ್ಲವಿಸಿದ ಭಕ್ತಿಯಿಂದಲೂ ಕುಸುಮಿತ ವಿನಯದಿಂದಲೂ, ಉಲ್ಲಸಿತ ಪ್ರಮೋದದಿಂದಲೂ, ಫಲಿತವಾದ ಪುಣ್ಯದಿಂದಲೂ, ಸಮೃದ್ಧಿಸಿದ ಮಂಗಳ ಸಮುದಾಯದಿಂದಲೂ ಕೂಡಿ, ಸಮಸ್ತ ರಾಜಪರಿವಾರದಿಂದೊಡಗೂಡಿ ಸಡಗರದಿಂದ ಸಿಂಹಾಸನದಿಂದಿಳಿದು ಮುನಿವರ್ಯರನ್ನು ಎದುರುಗೊಳ್ಳಲು ಹೊದಿದ್ದ ಶುಭ್ರ ಮೇಲ್ವಸ್ತವನ್ನು ಟೊಂಕಕ್ಕೆ ಕಟ್ಟಿ ಗುರುಗಳ ಸನಿಹಕ್ಕೆ ಧಾವಿಸಿ ನೆಲದ ಧೂಳಿನಿಂದ ತನ್ನ ಫಾಲ ಮತ್ತು ದೇಹಭಾಗಗಳು ದೂಸರಿತವಾಗುವಂತೆ ಗುರುಗಳ ಪಾದದಡಿಯಲ್ಲಿ ಮಲಗಿ ಸಾಷ್ಟಾಂಗ ನಮಸ್ಕಾರ ಮಾಡಿದನು.79
ವಿನಯಶೀಲನಾದ ರಾಜನನ್ನು ಕಂಡು ಗುರುವರ್ಯರು ಶುಭಾಶೀರ್ವಾದಪೂರ್ವಕವಾಗಿ ಅವನಿಗೆ ಶ್ರೀದೇವರ ಶ್ರೀಗಂಧ, ಫಲಮಂತ್ರಾಕ್ಷತೆಗಳನ್ನು ದಯಪಾಲಿಸಿದರು. ನರಸಿಂಹ ಭೂಪತಿಯು ಅದನ್ನು ಭಕ್ತಿಯಿಂದ ಸ್ವೀಕರಿಸಿ, ಶಿರದಲ್ಲಿ ಧರಿಸಿದನು. ಅನಂತರ ತಾಪಸಸಾರ್ವಭೌಮರನ್ನು ಉನ್ನತವಾದ ಸುವರ್ಣಮಯ ಭದ್ರಾಸನದಲ್ಲಿ ಕೂಡಿಸಿ, ಅವರ ಅಪ್ಪಣೆ ಪಡೆದು ತಾನೂ ಸ್ವಲ್ಪದೂರದಲ್ಲಿ ಕುಳಿತು ವಿನಯದಿಂದ ವಿಜ್ಞಾಪಿಸಿದನು :
“ಭಗವನ್, ನನ್ನ ಪೂರ್ವಾರ್ಜಿತ ಪುಣ್ಯಫಲದಿಂದ ತಮ್ಮ ದರ್ಶನ ಲಭಿಸಿತು. ಪೂಜ್ಯ ಗುರುವರ್ಯರಿಂದ ತಮ್ಮ ಗುಣಮಹಾತ್ಮಗಳನ್ನು ಬಹುಕಾಲದಿಂದ ಕೇಳುತ್ತಿದ್ದು, ತಮ್ಮ ದರ್ಶನ ಪಡೆಯಲು ಕುತೂಹಲಯುಕ್ತನಾಗಿದ್ದ ನನ್ನ ಕಣ್ಮನಗಳ ಅಭಿಲಾಷೆಯಿಂದು ಪೂರ್ಣವಾಯಿತು. ತಮ್ಮ ವಿಶೇಷ ಸನ್ನಿಧಾನದಿಂದ ಉಂಟಾದ ಆನಂದವು ಸಕಲ ಮುನಿಗಳಿಂದ ಸಹಿತರಾದ, ಸನಕಮುನೀಂದ್ರರ ಸನ್ನಿಧಾನದಿಂದ ಶೋಭಿತವಾದ ಸತ್ಯಲೋಕದ ಆನಂದ ಸುಖವನ್ನೂ ಮೀರಿಸಿದೆ!”
ಮಹಾರಾಜನ ಬಿನ್ನಹವನ್ನು ಲಾಲಿಸಿದ ವ್ಯಾಸಯತೀಂದ್ರರು ಸಾನುರಾಗಪೂರ್ವಕವಾಗಿ ಮಂದಹಾಸ ಬೀರುತ್ತಾ ಇಂತು ಅಪ್ಪಣೆ ಕೊಡಿಸಿದರು.
“ರಾಜೇಂದ್ರ! ಪರಮಾತ್ಮನ ಧ್ಯಾನಾಸಕ್ತರಾದ ಸಾಧುಗಳನ್ನು ವಿಧಿಪೂರ್ವಕವಾಗಿ ಶ್ರದ್ಧೆಯಿಂದ ಪೂಜಿಸಿ, ಸತ್ಕರಿಸಿ ಅವರನ್ನು ಆನಂದಗೊಳಿಸುವುದು ಮೊದಲಿನಿಂದಲೂ ನಿಮ್ಮ ವಂಶಕ್ಕೆ ಸಹಜವಾಗಿ ಬಂದಿರುವ ಸದ್ಗುಣವಲ್ಲವೇ ಸಾಮ್ರಾಜ್ಯ ಕಂಟಕರಾದ ಶತ್ರುಗಳೂ ನಿನ್ನ ಪರಾಕ್ರಮದಿಂದ ಏಕಕಾಲದಲ್ಲಿ ನಾಶಹೊಂದುವುದರಲ್ಲಿ ಸಂದೇಹವಿಲ್ಲ. ನೀನು ಕರ್ನಾಟಕ ಸಾಮ್ರಾಜ್ಯಧುರಂಧರನಾಗಿ ವಿರಾಜಿಸುತ್ತಿರುವುದರಿಂದ ದೀಪಾಂತರದ ಪ್ರತಾಪಶಾಲಿಗಳಾದ ಸಾಮಂತರಾಜರಿಗೆ ಕಪ್ಪಕಾಣಿಕೆಗಳು ತಪ್ಪಿ, ಆ ಕಪ್ಪಕಾಣಿಕೆಗಳು ಅವರಿಂದ ನಿಮಗೆ ಬರುವುದು ಲೋಕಪ್ರಸಿದ್ಧವಾಗಿದೆ. ನಿನ್ನ ಪ್ರಭಾವದಿಂದ ಶತ್ರುರಾಜರ ಪಟ್ಟಣಗಳಲ್ಲಿ ಮೆರೆಯುತ್ತಿದ್ದ ಅವರ ಧ್ವಜಗಳು ಕೆಳಗಿಳಿಸಲ್ಪಟ್ಟು, ಕನ್ನಡ ಸಾಮ್ರಾಜ್ಯ ಧ್ವಜವು ಅಲ್ಲಿ ಮೇಲೇರಿ ಮೆರೆಯುವಂತೆ ಮಾಡಿರುವ ನಿನ್ನ ಚಿತ್ರವಿಚಿತ್ರ, ಶೌರ್ಯ-ಸಾಹಸಾದಿ ಚರಿತ್ರೆಯನ್ನು ಯಾರು ತಾನೇ ವರ್ಣಿಸಲು ಸಾಧ್ಯ? ಹೆಚ್ಚು ಹೇಳುವುದೇನಿದೆ? ಮಹಾರಾಜ! ಪುಣ್ಯಶ್ಲೋಕರೂ, ಮಹಾರಾಜಾಧಿರಾಜರೂ ಆಗಿದ್ದನಲ-ನಹುಷ ಮುಂತಾದ ಸಾರ್ವಭೌಮರಂತೆ ನೀತಿಯಿಂದ ರಾಜ್ಯಪರಿಪಾಲನೆ ಮಾಡುತ್ತಾದಿಗಂತದಲ್ಲಿ ಕಂಗೊಳಿಸುವ ಕೀರ್ತಿಯುಳ್ಳವನಾಗಿ, ಭುಜಬಲಪರಾಕ್ರಮದಿಂದ ಭೂಮಂಡಲವನ್ನು ಜಯಿಸುತ್ತಿರುವ ನಿನ್ನ ಪ್ರತಾಪವು ಅನ್ಯಾದೃಶವಾಗಿದೆ!
ಅಷ್ಟು ಹೊತ್ತಿಗೆ ಮಧ್ಯಾಹ್ನ ಸೂಚಕ ಶಂಖಧ್ವನಿಯಾಗಲು ದೇವತಾರ್ಚನೆಗೆ ಕಾಲಾತೀತವಾಗುವುದೆಂದು ಶ್ರೀವ್ಯಾಸತೀರ್ಥರು ಸೂಚಿಸಲು ನರಸಿಂಹ ಭೂಪಾಲನು ಸಕಲ ರಾಜಪರಿವಾರದೊಡನೆ ಮೇಲೆದ್ದು ಅಂಜಲಿಬದ್ದನಾಗಿ ಯತಿವರರನ್ನು ಬೀಳ್ಕೊಟ್ಟು ಅವರನ್ನು ಗೌರವದಿಂದ ಕಳುಹಿಸಿ ಬರಲು ಅನೇಕ ಸೈನ್ಯಾದಿ ರಾಜವೈಭವದೊಡನೆ ಭುವನಬಂಧುವನ್ನು ಕಳುಹಿಸಿಕೊಟ್ಟನು. ಅಪರಿಮಿತ ವೈಭವ, ಸಂಭ್ರಮಗಳಿಂದ ಭುವನಬಂಧುವು ಶ್ರೀವ್ಯಾಸತೀರ್ಥರಿಗಾಗಿ ಏರ್ಪಡಿಸಿದ್ದ ಒಂದು ವಿಶಾಲವಾದ ಭವ್ಯಮಂದಿರಕ್ಕೆ ಕರೆದು ತಂದು ಬಿಟ್ಟು, ಗುರುಗಳಿಗೆ ವಾಸಮಾಡಲು ಬೇಕಾದ ಸಮಸ್ತ ವ್ಯವಸ್ಥೆಗಳನ್ನೂ ಮಾಡಿ ಶ್ರೀವ್ಯಾಸತೀರ್ಥರ ಅಪ್ಪಣೆ ಪಡೆದು ಅರಮನೆಗೆ ಮರಳಿದನು.
ಶ್ರೀವ್ಯಾಸತೀರ್ಥರು ಆನಂತರ ಸ್ನಾನ-ಆಕ-ಜಪ-ತಪಾದಿಗಳನ್ನು ಪೂರೈಸಿ ದೇವತಾರ್ಚನೆಯನ್ನು ಮಾಡಿ ತೀರ್ಥಪ್ರಸಾದ ವಿತರಣಪೂರ್ವಕವಾಗಿ ಅನೇಕ ಪ್ರಮುಖ-ಪಂಡಿತರೊಡನೆ ಭಿಕ್ಷೆಯನ್ನು ಸ್ವೀಕರಿಸಿದರು. ತರುವಾಯ ವಿದ್ವಾಂಸರು ಭಾಗವತಾದಿಗಳನ್ನು ಅನುವಾದ ಮಾಡುತ್ತಿರಲು ತತ್ವಾರ್ಥಗಳನ್ನು ವಿಬುಧಮಂಡಲಿಗೆ ಅನುವಾದ ಮಾಡಿ ಅಂದಿನ ರಾತ್ರಿಯನ್ನು ಕಳೆದರು.