ಕಲಿಯುಗ ಕಲ್ಪತರು
ನಾಲ್ಕನೆಯ ಉಲ್ಲಾಸ
ಶ್ರೀವ್ಯಾಸರಾಜಯತಿಸಾರ್ವಭೌಮರು
೩೨. ಬ್ರಾಹ್ಮಣಕುಮಾರನಿಗೆ ಪ್ರಾಣದಾನ ಮಾಡಿದರು
ಶ್ರೀವ್ಯಾಸರಾಜರು ಮಿತಪರಿವಾರವಾಗಿ ಚಂದ್ರಗಿರಿಯ ರಾಜಸ್ಥಾನಕ್ಕೆ ಹೊರಟು ಸಂಚಾರಕ್ರಮದಿಂದ ರಾಜಧಾನಿಗೆ ಸಮೀಪದಲ್ಲಿದ್ದ ಒಂದು ವನಪ್ರದೇಶಕ್ಕೆ ಚಿತ್ತೈಸಿದರು. ಆ ಹೊತ್ತಿಗೆ ಮಧ್ಯಾಹ್ನವಾದ್ದರಿಂದ ಅಲ್ಲಿ ನಿಬಿಡವಾದ ವೃಕ್ಷಗಳ ನೆರಳಿನ ಮದ್ಯೆ ಒಂದು ಪ್ರಶಸ್ತವಾದ, ವಿಸ್ತಾರವಾದ ಸರೋವರವನ್ನು ಕಂಡು ಅಂದಿನ ಪೂಜಾರಾಧನೆಯನ್ನು ಅಲ್ಲಿಯೇ ನೆರವೇರಿಸಲು ನಿಶ್ಚಯಿಸಿ ಆ ವನದಲ್ಲಿ ತಂಗಿದರು.
ಆನಂತರ, ಯೋಗಿವರ್ಯರು ತಿಳಿಯೂ, ಸ್ವಚ್ಛವೂ, ಶೀತಲವೂ ಆದ ಆ ಸರೋವರದ ಜಲದಲ್ಲಿ ಸ್ನಾನಮಾಡಿ ಮಾಧ್ಯಾಹ್ನಕ-ಜಪ-ತಪಾದನುಷ್ಠಾನಗಳನ್ನು ಪೂರೈಸಿ, ಶಿಷ್ಯರು ತಂದುಕೊಟ್ಟ ಕಲ್ದಾರ, ಕಮಲ, ಕೈರವಾದಿ ಕುಸುಮಗಳು ಮತ್ತು ತುಳಸಿ ಪತ್ರಾದಿಗಳಿಂದ ದೇವತಾರ್ಚನೆ ಮಾಡಿದರು.69
ಆಗ ಇದ್ದಕ್ಕಿದ್ದಂತೆ ಆ ಸರೋವರದ ದಕ್ಷಿಣಭಾಗದ ವೃಕ್ಷಗಳ ಗುಂಪಿನಿಂದ ಯಾರೋ ಚೀತ್ಕರಿಸಿ ಗಟ್ಟಿಯಾಗಿ ಅಳುತ್ತಿರುವ ಧ್ವನಿಯನ್ನು ಕೇಳಿ ಇದೇನೆಂದು ಶ್ರೀವ್ಯಾಸತೀರ್ಥರು ಯೋಚಿಸುತ್ತಿರುವಂತೆಯೇ ಬ್ರಾಹ್ಮಣ ದಂಪತಿಗಳು ಭುಜದ ಮೇಲೆ ಓರ್ವ ಬಾಲಕನನ್ನು ಹೊತ್ತುಕೊಂಡು ಸರೋವರದ ಬಳಿಗೆ ಬಂದು ಬಾಲಕನ ಕಳೇಬರವನ್ನು ಸರಸ್ಸಿನ ಬೇರೊಂದು ಭಾಗದಲ್ಲಿರಿಸಿ ಬಾಲಕನ ಮುಖವನ್ನು ನೋಡುತ್ತಾ ದುಃಖತಪ್ತರಾಗಿ ರೋಧಿಸಹತ್ತಿದರು.
ಅದನ್ನು ಕಂಡು ದಯಾಳುಗಳಾದ ಶ್ರೀವ್ಯಾಸಮುನಿಗಳು ಮೆಲ್ಲನೆ ಆ ದಂಪತಿಗಳಿದ್ದೆಡೆಗೆ ಆಗಮಿಸಿ “ಎಲೈ ಗೃಹಸ್ಥನೇ, ನೀನು ಯಾರು ? ಎಲ್ಲಿಂದ ಬಂದೆ ? ಕಂಟಕಮಯವಾದ ಈ ಅರಣ್ಯಪ್ರದೇಶಕ್ಕೆ ಏತಕ್ಕಾಗಿ ಬಂದೆ? ನಿನ್ನ ಈ ಪುತ್ರನು ಹೇಗೆ ಮರಣವನ್ನಪ್ಪಿದನು?” ಎಂದು ಪ್ರಶ್ನಿಸಿದರು.
ದುಃಖಾರ್ತನಾದ ಆ ಭೂಸುರನು ಗದ್ಗದ ಕಂಠದಿಂದ ಹೀಗೆ ವಿಜ್ಞಾಪಿಸಿದನು : “ಭಗವನ್! ನನ್ನ ಜನ್ಮಾಂತರ ದುಷ್ಕರ್ಮದ ಫಲವಾಗಿ ಬಂದೊದಗಿದ ದುಃಖವನ್ನು ಏನೆಂದು ಹೇಳಲಿ ? ಇಲ್ಲಿಗೆ ಸಮೀಪದಲ್ಲಿರುವ ಗ್ರಾಮದಲ್ಲಿ ನಾನು ವಾಸಿಸುತ್ತಿರುವೆನು. ನಮ್ಮ ವಂಶದ ಕುಡಿಯಾದ ಇವನು ನನ್ನ ಏಕಮಾತ್ರ ಪುತ್ರನು. ಇವನು ಇಂದು ಮುಂಜಾನೆ ಸಮವಯಸ್ಕರೊಡನೆ ಸಮಿತ್ತುಗಳನ್ನು ಆರಿಸಿ ತರಲು ಈ ವನಪ್ರದೇಶಕ್ಕೆ ಬಂದನು. ಒಂದು ದೊಡ್ಡ ವಟವೃಕ್ಷದ ಬುಡದಲ್ಲಿ ಸಮಿತ್ತುಗಳನ್ನು ಸಂಗ್ರಹಿಸುತ್ತಿರುವಾಗ ಆ ವಟವೃಕ್ಷದ ಪೊಟರೆಯಿಂದ ಒಂದು ಘಟಸರ್ಪವು ಬಂದು ಇವನನ್ನು ಕಚ್ಚಿಬಿಟ್ಟಿತು. ದುರ್ಧರವಾದ ವಿಷಜ್ವಾಲೆಯು ಕೂಡಲೇ ದೇಹದಲ್ಲಿ ವ್ಯಾಪಿಸಿ ಈ ವಂಶದೀಪಕನು ನಮ್ಮನ್ನು ಅನಾಥಕರನ್ನಾಗಿ ಮಾಡಿ ಮೃತನಾದನು. ಇವನ ಸಂಗಡಿಗರು, ದಾರಿಹೋಕರಾದ ಆಷ್ಟರಿಂದ ವಿಷಯವರಿತು ನಾವಿಲ್ಲಿಗೆ ಧಾವಿಸಿದೆವು. ನಮಗೆ ಏಕೈಕ ಆಧಾರನಾಗಿದ್ದ ನಮ್ಮ ಕಂದನು ಜೀವ ತೊರೆದು ಬಿದ್ದಿರುವುದನ್ನು ಕಂಡು ದುಃಖಸಮುದ್ರದಲ್ಲಿ ಮುಳುಗಿಹೋದೆವು. ಹಿತೈಷಿಗಳು ನಮ್ಮನ್ನು ಬಗೆಬಗೆಯಿಂದ ಸಮಾಧಾನಪಡಿಸಿದರು. ನಾವು ಇವನನ್ನು ಹೊತ್ತು ಮುಂದಿನ ಕಾರ್ಯಕ್ಕಾಗಿ ಇಲ್ಲಿಗೆ ಬಂದೆವು. ಸ್ವಾಮಿ, ನಾವು ಯಾರಿಗೂ ಅನ್ಯಾಯ ಮಾಡಿದವರಲ್ಲ, ಸ್ವವರ್ಣಾಶ್ರಮೋಚಿತಾಚಾರನಿಷ್ಠರಾದ ನಮಗೂ, ನಮ್ಮ ಪುತ್ರನಿಗೂ ಕರುಣೆಯಿಲ್ಲದೆ ಪರಮಾತ್ಮನು ಏಕೀ ದುರವಸ್ಥೆಯನ್ನು ತಂದನೋ ನಾನರಿಯೆ” - ಹೀಗೆ ಹೇಳಿ ಆ ದ್ವಿಜನು ಪತ್ನಿಯೊಡನೆ ಅಳಲಾರಂಭಿಸಿದನು.
ಆ ದಂಪತಿಗಳ ದುಃಖವನ್ನು ಕಂಡು ದಯಾಮಯರಾದ ಶ್ರೀವ್ಯಾಸಭಗವಾನರ ಹೃದಯ ದ್ರವಿಸಿತು. ಅವರ ಹೃದಯಭೂಮಿಯಲ್ಲಿ ಕಾರುಣ್ಯರಸವು ಉಕ್ಕೇರಿ ಹರಿಯಿತು. ಆ ಬ್ರಾಹ್ಮಣದಂಪತಿಗಳನ್ನು ಮೃದುಮಧುರ ವಚನಗಳಿಂದ ಸಂತೈಸಿದ ಶ್ರೀಗಳವರು ತಮ್ಮ ಪವಿತ್ರ ಕಮಂಡಲೋದಕವನ್ನು ಅಭಿಮಂತ್ರಿಸಿ, ಶ್ರೀಹರಿಯನ್ನು ಧ್ಯಾನಿಸುತ್ತಾ ಮೃತನಾದ ಆ ಬಾಲಕನ ಶರೀರದ ಮೇಲೆ ಪ್ರೋಕ್ಷಿಸಿದರು. ಅದೇನಾಶ್ಚರ್ಯ! ಮೃತನಾಗಿದ್ದ ಆ ಬಾಲಕನು ನಿದ್ರೆಯಿಂದೆಚ್ಚತ್ತವನಂತೆ ಎದ್ದು ಕುಳಿತು ತಂದೆ-ತಾಯಿಯವರನ್ನು ಕಂಡು “ಅಪ್ಪಾ, ಅಮ್ಮಾ” ಎನ್ನುತ್ತ ಮೇಲೆದ್ದು ನಿಂತನು! ಈ ಅಪೂರ್ವ ಪವಾಡದಂತಿರುವ ಘಟನೆಯನ್ನು ಕಂಡು ಆಶ್ಚರ್ಯಚಕಿತರಾದ ವಿಪ್ರದಂಪತಿಗಳು ಕುಮಾರನ ಮುಖವನ್ನು ನೋಡಿ ಪರಮಾನಂದತುಂದಿಲರಾಗಿ, ರೋಮಾಂಚಿತರಾಗಿ ತಮ್ಮ ಕುಮಾರನನ್ನು ಭರದಿಂದಪ್ಪಿ ಮುದ್ದಾಡಿದರು ತಮ್ಮ ಕುಮಾರನಿಗೆ ಜೀವದಾನ ಮಾಡಿ ಮಹಾಮಹಿಮೆಯನ್ನು ತೋರಿದ ಶ್ರೀವ್ಯಾಸರಾಜಯತಿಗಳಿಗೆ ಆ ದಂಪತಿಗಳು ಪುತ್ರಸಹಿತರಾಗಿ ಭಯಭಕ್ತಿಭರಿತರಾಗಿ ಸಾಷ್ಟಾಂಗ ಪ್ರಣಾಮ ಮಾಡಿ ಗುರುಗಳ ಕಾರುಣ್ಯ, ಮಹೋಪಕಾರಗಳನ್ನು ಕೊಂಡಾಡಿದರು. ನಂತರ ಪೂಜ್ಯ ಯತಿವರರನ್ನು ತಮ್ಮ ಮನೆಗೆ ಆಹ್ವಾನಿಸಿ ಸಂತಸದಿಂದ ಜೊತೆಗೇ ಕರೆದುಕೊಂಡು ಹೋದರು.
ಆ ದಂಪತಿಗಳು ತಮ್ಮ ಮನೆಯಲ್ಲಿ ಶಿಷ್ಯಸಹಿತರಾಗಿ ಶ್ರೀವ್ಯಾಸಯೋಗಿಗಳನ್ನು ಎರಡು ದಿನವಿಟ್ಟುಕೊಂಡು, ಅವರಿಗೆ ಭಕ್ತಿಯಿಂದ ವಿಶೇಷಾದರ, ಸತ್ಕಾರ, ಭಿಕ್ಷೆಗಳನ್ನರ್ಪಿಸಿ ಕೃತಾರ್ಥರಾದರು. ಶ್ರೀಗಳವರು ಆನಂತರ, ಆ ದಂಪತಿಗಳಿಗೆ, ಕುಮಾರನಿಗೆ ಕೃಪೆಯಿಂದ ಫಲಮಂತ್ರಾಕ್ಷತೆಯಿತ್ತು ಆಶೀರ್ವದಿಸಿ, ಅಲ್ಲಿಗೆ ಅತಿಸಮೀಪದಲ್ಲಿದ್ದ ಚಂದ್ರಗಿರಿಗೆ ಶಿಷ್ಯಸಮೇತರಾಗಿ ದಯಮಾಡಿಸಿದರು.