|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ನಾಲ್ಕನೆಯ ಉಲ್ಲಾಸ

ಶ್ರೀವ್ಯಾಸರಾಜಯತಿಸಾರ್ವಭೌಮರು

೩೧. ಕನ್ನಡ ಸಾಮ್ರಾಜ್ಯದ ಹಿತಚಿಂತನೆ

ಸಾಳುವ ನರಸಿಂಹನು ಕರ್ನಾಟಕ ಸಾಮ್ರಾಜ್ಯ ಧುರಂದರನಾದ ಮೇಲೆ ತನ್ನ ಗುರುಗಳಾದ ಶ್ರೀಲಕ್ಷ್ಮೀನಾರಾಯಣ- ಮುನಿಗಳ ದರ್ಶನ ಮಾಡಿ, ಸಾಮ್ರಾಜ್ಯದಲ್ಲಿ ಜರುಗುತ್ತಿರುವ ಸಮಸ್ತ ವಿಚಾರಗಳನ್ನು ಅರುಹಿ, ಶ್ರೀಪಾದಂಗಳವರು ತನ್ನೊಡನಿದ್ದು ಸಾಮ್ರಾಜ್ಯಹಿತಸಾಧನೆಯಲ್ಲಿ ಮಾರ್ಗದರ್ಶನ ಮಾಡಬೇಕೆಂದು ಬೇಡಿದನು. ಶ್ರೀಗಳವರು ತಾವು ವೃದ್ಧರಾಗಿರುವುದರಿಂದ ತಮ್ಮನ್ನು ಒತ್ತಾಯಪಡಿಸಬಾರದೆಂದೂ ಈ ಮಹತ್ಕಾರ್ಯವನ್ನು ನೆರವೇರಿಸಲು ಅತ್ಯಂತ ಸಮರ್ಥರಾದ ತಮ್ಮ ಶಿಷ್ಯರನ್ನು ಕಳುಹಿಸಿಕೊಡುವುದಾಗಿಯೂ ಅವರ ಮಾರ್ಗದರ್ಶನ - ಉಪದೇಶಗಳಂತೆ ನಡೆದು ಕೀರ್ತಿಶಾಲಿಯಾಗಬೇಕೆಂದೂ ತಿಳಿಸಿ ನರಸಿಂಹಭೂಪತಿಯನ್ನು ಆಶೀರ್ವದಿಸಿ ಕಳುಹಿಸಿಕೊಟ್ಟರು ಮತ್ತು ತಾವು ನರಸಿಂಹ ಭೂಪತಿಗೆ ನೀಡಿದ ಭರವಸೆಯನ್ನು ಪೂರ್ಣ ಮಾಡಲು ಅಟ್ಟೂರಿನಿಂದ ಶ್ರೀವ್ಯಾಸತೀರ್ಥರನ್ನು ಮುಳಬಾಗಿಲಿಗೆ ಕರೆಸಿಕೊಂಡರು. 

ಶ್ರೀವಿಬುಧೇಂದ್ರರು ಮುಂದೆ ಶ್ರೀ ವಿಜಯೀಂದ್ರತೀರ್ಥರಾಗಿ ಅವತರಿಸಿ ಶ್ರೀವ್ಯಾಸರಾಜರ ಪ್ರಿಯಶಿಷ್ಯರಾದರೆಂದು ಜ್ಞಾನಿಗಳು ಹೇಳುವರು.

ಶ್ರೀವ್ಯಾಸರಾಜರು ಬಂದು ಕೆಲದಿನಗಳಾಗಿತ್ತು. ಒಂದು ದಿನ ಶ್ರೀಗಳವರು ಶಿಷ್ಯರಿಗೆ ಕನ್ನಡಸಾಮ್ರಾಜ್ಯಕ್ಕೆ ಬಂದ ಗಂಡಾಂತರ, ಇತ್ತೀಚೆಗೆ ರಾಜಕೀಯವಾಗಿ ಉಂಟಾಗಿರುವ ಬದಲಾವಣೆ, ನರಸಿಂಹ ಭೂಪಾಲನು ತಮ್ಮಲ್ಲಿ ಪ್ರಾರ್ಥಿಸಿದ್ದು, ತಮ್ಮ ಭರವಸೆ ಮುಂತಾದ ವಿಚಾರಗಳನ್ನು ತಿಳಿಸಿ ಕನ್ನಡಸಾಮ್ರಾಜ್ಯದ ಹಿತದೃಷ್ಟಿಯಿಂದ ರಾಜಾಸ್ಥಾನಕ್ಕೆ ಹೋಗಿ ಅಲ್ಲಿ ನರಸಿಂಹನಿಗೆ ಗುರುಗಳಾಗಿದ್ದು, ಉಪದೇಶ-ಮಾರ್ಗದರ್ಶನಗಳಿಂದ ರಾಜ್ಯದ ಅಭ್ಯುದಯಕ್ಕೆ ಸಹಾಯ ಮಾಡಬೇಕೆಂದು ಆಜ್ಞಾಪಿಸಿದರು. 

ವ್ಯಾಸರಾಜರು “ಗುರುವರ್ಯ, ನಾವು ಸನ್ಯಾಸಿಗಳು, ಅರಮನೆಗೂ-ಗುರುಮನೆಗೂ ಬಹುದೂರ. ರಾಜಾಸ್ಥಾನವು ನಮ್ಮಂಥವರಿಗೆ ಯುಕ್ತವಲ್ಲವೇನೋ ಎಂದು ನಮಗನಿಸುತ್ತಿದೆ” ಎಂದು ವಿಜ್ಞಾಪಿಸಿದರು. 

ಆಗ ಶ್ರೀಗಳವರು “ದೇಶದ ಹಿತ, ಪ್ರಜರಲ್ಲಿ ಧಾರ್ಮಿಕ, ಆಧ್ಯಾತ್ಮಿಕ, ಪ್ರಜ್ಞೆಗಳನ್ನು ಪ್ರಚೋದಿಸಿ ತತ್ವ, ಧರ್ಮ, ವಿಷ್ಣುಭಕ್ತಿ, ಭಾಗವತಧರ್ಮ ಪ್ರಸಾರ ದ್ವಾರಾ ಸರ್ವರಲ್ಲಿ ಶ್ರದ್ಧೆಯುಂಟಾಗುವಂತೆ ಮಾಡುವುದು ಧರ್ಮಪೀಠಾಧಿಪತಿಗಳ ಕರ್ತವ್ಯವೇ ಆಗಿದೆ. ಅದು ಸಫಲವಾಗಬೇಕಾದರೆ ದೇಶದಲ್ಲಿ ಶಾಂತಿ, ಸಮಾಧಾನ, ಸಂತೋಷಗಳ ವಾತಾವರಣ- ವುಂಟಾಗಬೇಕು. ಅದು ಆಗಬೇಕಾದರೆ ಆಡಳಿತ ಸುಲಲಿತವಾಗಿ ನಡೆದು ರಾಜ್ಯದಲ್ಲಿ ಸುಭದ್ರಸ್ಥಿತಿಯುಂಟಾಗಬೇಕು. ಆಗ ಮಾತ್ರ ರಾಷ್ಟ್ರಾಭ್ಯುದಯವಾಗಿ ಧಾರ್ಮಿಕ ತಳಹದಿಯ ಮೇಲೆ ಜನತೆಯ ಜೀವನ ಸುಲಭವಾಗುವುದು. ಇದನ್ನು ಸ್ಥಾಪಿಸುವಲ್ಲಿ ಜ್ಞಾನಿಗಳ ಪಾತ್ರವಾ ಹಿರಿದಾದುದು ಮತ್ತು ಅವರ ಧರ್ಮವೂ ಆಗಿದೆ. ಈ ಎಲ್ಲ ದೃಷ್ಟಿಯಿಂದ ನೀವು ನರಸಿಂಹರಾಜನ ಗುರುಗಳಾಗಿದ್ದು ಮಾರ್ಗದರ್ಶನ ಮಾಡುವುದು ಅತ್ಯವಶ್ಯವೆಂದು ನಾವು ಭಾವಿಸುತ್ತೇವೆ” ಎಂದು ನುಡಿದರು. 

ಆದರೂ ಶ್ರೀವ್ಯಾಸರಾಜರು ಇಂಥ ಮಹತ್ವಕಾರ್ಯವನ್ನು ತಾವು ನಿರ್ವಹಿಸಬಲ್ಲೆವೆ? ಆ ಶಕ್ತಿ ತಮಗಿದೆಯೇ ಎಂಬ ಸಂದೇಹದಿಂದ ಗುರುಗಳ ವಚನವನ್ನು ನೆರವೇರಿಸಲು ಹಿಂದು-ಮುಂದು ನೋಡಲಾರಂಭಿಸಿದರು. 

ಶ್ರೀವ್ಯಾಸತೀರ್ಥರ ಮನದಿಂಗಿತವನ್ನು ಅರಿತು ಶ್ರೀಲಕ್ಷ್ಮೀನಾರಾಯಣಮುನಿಗಳು ನಸುನಗುತ್ತಾ “ಪ್ರಿಯಶಿಷ್ಯರೇ, ನೀವು ಯೋಚಿಸುವ ಕಾರಣವಿಲ್ಲ. ಜಗತ್ತಿನಲ್ಲಿ ಸರಸ್ವತೀದೇವಿಯಲ್ಲಿ ಸಕಲವಿದ್ಯೆಯೂ, ಭಾರ್ಗವರಾಮನಲ್ಲಿ ಪ್ರತಿಭಟರನ್ನು ಪರಾಭವಗೊಳಿಸುವ ಪ್ರತಿಭಾಸಂಪತ್ತೂ, ದೇವಗುರುಬೃಹಸ್ಪತ್ಯಾಚಾರ್ಯರಲ್ಲಿ ಅಡೆತಡೆಯಿಲ್ಲದ ಬುದ್ಧಿಚಾತುರ್ಯವೂ, ದಿನಮಣಿಯಲ್ಲಿ ಆಶ್ಚರ್ಯಕರ ತೇಜಸ್ಸು, ಚಂದ್ರಮನಲ್ಲಿ ಜನಮನಾನಂದಕಾರಕ ನೈಪಣ್ಯವೂ, ಯಜೇಶ್ವರನಲ್ಲಿ ಲೋಕಪಾವನಕಾರಕ ಶುಚಿತ್ವವಾ, ಪರ್ವತರಾಜನಲ್ಲಿ ಅಚಂಚಲ ಸೈರ್ಯವೂ, ಕಲ್ಪತರುವಿನಲ್ಲಿ ಅಸಾಮಾನ್ಯ ಧಾತೃತ್ವವೂ, ಭಗವಾನ್ ಶ್ರೀವಾಸುದೇವನಲ್ಲಿ ಚಿತ್ರವಿಚಿತ್ರ ಮಹಾತ್ಮಯೂ ನೆಲೆಗೊಂಡಿರುವುದು ಲೋಕಪ್ರಸಿದ್ಧವಾಗಿದೆ. ಈ ಎಲ್ಲ ಸಂಪತ್ತುಗಳೂ ಅಭೂತಪೂರ್ವ ಅಭಿವೃದ್ಧಿಯಿಂದ ಪ್ರಖ್ಯಾತರಾದ ನಿಮ್ಮೊಬ್ಬರಲ್ಲಿಯೇ ಶ್ರೀಹರಿವಾಯುಗಳ ಅನುಗ್ರಹದಿಂದ ಸಮನ್ವಯಗೊಂಡು ಕಂಗೊಳಿಸುತ್ತಿದೆ ಎಂದು ನಾವು ಧೈರ್ಯವಾಗಿ ಹೇಳಬಲ್ಲೆವು! ಈ ಕಾರ್ಯವು ನಿಮ್ಮಿಂದ ಯಶಸ್ವಿಯಾಗಿ ಜರುಗುವುದೆಂಬ ಭರವಸೆಯು ನಮಗಿದೆ. ಆದುದರಿಂದ, ಕನ್ನಡಸಾಮ್ರಾಜ್ಯದ ಹಿತದೃಷ್ಟಿಯಿಂದ ನೀವು ನರಸಿಂಹರಾಜನಿಗೆ ಉಪದೇಶಕ ಗುರುಗಳಾಗಿದ್ದು, ಅನುಗ್ರಹಿಸುವುದು ಅತಿಮುಖ್ಯವಾಗಿದೆ. ಹಿಂದೆ ಮಹನೀಯರಾದ ಶ್ರೀವಿದ್ಯಾರಣ್ಯರು ವೈರಾಗ್ಯನಿಧಿಗಳಾಗಿ ಜ್ಞಾನಿಗಳೂ, ಸನ್ಯಾಸಿಗಳೂ ಆಗಿದ್ದರೂ, ದೇಶದ ಹಿತದೃಷ್ಟಿಯಿಂದ ಕರ್ನಾಟಕಸಾಮ್ರಾಜ್ಯವನ್ನು ಸ್ಥಾಪಿಸಲು ಮುಂದಾದುದನ್ನು ಸ್ಮರಿಸಿರಿ ಆದುದರಿಂದ ಸಾಯಂಸಮಯದಲ್ಲಿ ಬಾಡಿದ್ದ ಕಮಲಗಳನ್ನು ಸೂರ್ಯ ಭಗವಾನನು ಉದಯಿಸುತ್ತಲೇ ವಿಕಾಸಗೊಳಿಸುವಂತೆ ದುಷ್ಟವಚನ ಸುರಾಪಾನಮತ್ತರಾಗಿ ಜಡಪ್ರಾಯರಾಗಿರುವ ಸನಾತನ ವೈದಿಕ ಧರ್ಮಾಚಾರಶೀಲರನ್ನು, ದೇಶದ ಪ್ರಜರನ್ನು ನೀವೀಗ ಜಾಗೃತಗೊಳಿಸಬೇಕಾಗಿದೆ. ಜನತೆಯಲ್ಲಿನವಚೈತನ್ಯ, ಸ್ಫೂರ್ತಿಗಳನ್ನು ತುಂಬಬೇಕಾಗಿದೆ. ಮುಖ್ಯವಾಗಿ ದೈತಸಿದ್ಧಾಂತದ ಪ್ರಸಾರವಾಗಬೇಕಾಗಿದೆ. ಅದಕ್ಕೆ ರಾಜಸ್ಥಾನವೇ ಸರಿಯಾದ ಸ್ಥಳ. ಆ ಕಾರ್ಯ ಮಾಡಲು ನೀವೊಬ್ಬರೇ ಸಮರ್ಥರು.

ಸಕಲ ತತ್ವಗಳು, ಧರ್ಮಗಳಿಗೂ ರಾಜನು ಸೇತುವೆಯಂತಿರುವನು. ಆದಕಾರಣ ನೀವೀಗ ರಾಜಸ್ಥಾನದಲ್ಲಿ ಸರ್ವದಾ ಇದುಕೊಂಡು ಮಹಾರಾಜನಿಗೆ ಹಿತೋಪದೇಶ ಮಾಡುತ್ತಾ ಅವನು ಧರ್ಮದಿಂದ ರಾಜ್ಯಪರಿಪಾಲನೆ ಮಾಡುತ್ತಾ ಪ್ರಜಾರಂಜಕನಾಗಿ ಬಾಳುವಂತೆ ಮಾಡುವುದು ನಿಮ್ಮ ಕರ್ತವ್ಯ. ಈ ವಿಚಾರವಾಗಿ ನೀವು ಸಂದೇಹಿಸಬೇಕಾಗಿಲ್ಲ. ಏಕೆಂದರೆ ಹಿಂದಿನ ಕಾಲದಲ್ಲಿ ಶ್ರೀದತ್ತಾತ್ರೇಯ, ವಸಿಷ್ಠ, ವಾಮದೇವ ಮೊದಲಾದ ಯೋಗಿಗಳೂ, ತಪಸ್ವಿಗಳೂ, ವೈರಾಗ್ಯದಿಂದ ನಿಸ್ಸಂಗರಾಗಿದ್ದರೂ ಕೂಡ ಸಮಸ್ತಲೋಕದ ಹಿತದೃಷ್ಟಿಯಿಂದ ರಾಜಸ್ಥಾನಗಳಲ್ಲಿ ಗುರುಪೀಠಗಳನ್ನು ಅಲಂಕರಿಸಿ ಲೋಕೋಪಕಾರ ಮಾಡಿದ್ದಾರೆ.66 ಆದುದರಿಂದ ನೀವು ನಮ್ಮ ಶಿಷ್ಯನಾದ ನರಸಿಂಹ ಭೂಪತಿಯ ಆಸ್ಥಾನದಲ್ಲಿದ್ದು ಉಪದೇಶ- ಮಾರ್ಗದರ್ಶನಾದಿಗಳಿಂದ ಕನ್ನಡನಾಡಿನ ಹಿತವನ್ನೂ, ಪ್ರಜಾಕ್ಷೇಮವನ್ನೂ ತತ್ವ-ಧರ್ಮಪ್ರಸಾರಗಳನ್ನೂ ಸಾಧಿಸಬೇಕು” ಎಂದು ಅಪ್ಪಣೆ ಮಾಡಿದರು. 

ಗುರುಗಳ ಉಪದೇಶದಿಂದ ಸಮಾಧಾನಗೊಂಡು ಶ್ರೀವ್ಯಾಸತೀರ್ಥರು ಗುರುಗಳಿಗೆ ಕರಮುಗಿದು ತಮ್ಮ ಅಪ್ಪಣೆಯಂತೆ ನಡೆಯುತ್ತೇನೆ” ಎಂದು ಹೇಳಿ ಗುರುಗಳನ್ನು ಸಂತೋಷಪಡಿಸಿ, ಗುರುಗಳ ಆಶೀರ್ವಾದ ಪಡೆದು ಕೆಲ ಶಿಷ್ಯರೊಡಗೂಡಿ 

ನಕ್ಷತ್ರಗಣಮಂಡಿತನಾದ ಚಂದ್ರನಂತೆ ಸಾಳುವ ನರಸಿಂಹ ಭೂಪಾಲನ ರಾಜಧಾನಿಯಾದ ಮಹಾಚಲಪುರಿಗೆ (ಚಂದ್ರಗಿರಿಗೆ) ಪ್ರಯಾಣ ಬೆಳೆಸಿದರು.