|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ನಾಲ್ಕನೆಯ ಉಲ್ಲಾಸ

ಶ್ರೀವ್ಯಾಸರಾಜಯತಿಸಾರ್ವಭೌಮರು

೩೦. ವಂಗವಿಜಯ

ಶ್ರೀವ್ಯಾಸರಾಜತೀರ್ಥರು ಮಗ (ಬಂಗಾಲಿ) ದೇಶಕ್ಕೆ ದಯಮಾಡಿಸಿದಾಗ ಅಲ್ಲಿ ಅವರಿಗೆ ಆತ್ಮೀಯ ಸ್ವಾಗತ ದೊರೆಯಿತು. ಶ್ರೀಗಳವರು ಅಲ್ಲಿಗೆ ಬಂದಾಗ ಪರಿಸ್ಥಿತಿಯು ಅವರಿಗೆ ಅನುಕೂಲಕರವಾಗಿತ್ತು. 

ವಂಗದೇಶದಲ್ಲಿ ಮೊಟ್ಟಮೊದಲು ವೈಷ್ಣವಮತ ಮತ್ತು ವಿಷ್ಣುಭಕ್ತಿಯ ಪ್ರಸಾರಕ್ಕೆ ಶ್ರೀಮನ್ಮಧ್ವಾಚಾರ್ಯರು ಬೀಜನ್ಯಾಸ ಮಾಡಿದ್ದರು. ಶ್ರೀಮದಾಚಾರ್ಯರು ಕ್ರಿ.ಶ. ೧೨೬೬ರ ಸುಮಾರಿಗೆ ಎರಡನೆಯ ಬದರಿಯಾತ್ರೆಗೆ ಹೊರಟಾಗ ಅವರು ಗಂಗಾ-ಯಮುನಾ ನದಿಗಳನ್ನು ದಾಟಬೇಕಾಗಿತ್ತು. ಅದೊಂದು ಯುದ್ಧದ ಕಾರ್ಮೋಡಗಳು ದೇಶದ ಮೇಲೆ ಕವಿದಿದ್ದ ಕಾಲ. ದೆಹಲಿಯ ಸುಲ್ತಾನನಾಗಿದ್ದ ಗಿಯಾಸುದ್ದೀನ ವಿರುದ್ಧವಾಗಿ ಬಂಗಾಲದಲ್ಲಿ ದೆಹಲಿಯ ಸುಲ್ತಾನನ ಪರವಾಗಿ ರಾಜ್ಯಪಾಲನಾಗಿದ್ದ ತುಫ್ರಿಲ್ಲನು ಸುಲ್ತಾನನಿಗೆ ತಿರುಗಿಬಿದ್ದು ತಾನು ಬಂಗಾಲದ ಸ್ವತಂತ್ರರಾಜನೆಂದು ಘೋಷಿಸಿದನು. ಇದರಿಂದ ಕುಪಿತನಾದ ಗಿಯಾಸುದ್ದೀನನು ತುಮ್ರತ್ತಿನ ಮೇಲೆ ಯುದ್ಧ ಘೋಷಿಸಿ ಅವನ ವಿರುದ್ಧವಾಗಿ ಕ್ರಮ ಕೈಗೊಂಡಿದ್ದನು. ಗಂಗಾ-ಯಮುನಾ ನದಿಗಳ ಮಾರ್ಗವಾಗಿ ಶತ್ರುಗಳ ಪರಾರಿಯಾಗದಂತೆ ಮಾಡಲು ಗಿಯಾಸುದ್ದೀನನು ಧನುಷ್ ರಾಯ್ ಎಂಬ ಹಿಂದೂರಾಜನೊಡನೆ ಒಪ್ಪಂದ ಮಾಡಿಕೊಂಡು ಗಂಗಾ-ಯಮುನಾ ನದಿಯಗುಂಟ ಭಾರಿ ಸೈನ್ಯಗಳನ್ನು ಕಾವಲಿರಿಸಿದ್ದನು. ಇಂಥ ಪರಿಸ್ಥಿತಿಯಲ್ಲಿಯೇ ಆಚಾರ್ಯರು ಅಲ್ಲಿಗೆ ಬಂದಿದ್ದರು. ಶ್ರೀಮದಾಚಾರ್ಯರ ತೇಜಸ್ಸಿನಿಂದ ಪ್ರಭಾವಿತನಾದ ಧನುಜ್‌ರಾಯ್ ಅವರು ನದಿಯನ್ನು ದಾಟಿ ಬದರಿಗೆ ದಯಮಾಡಿಸಲು ಸೌಕರ್ಯವನ್ನೇರ್ಪಡಿಸಿಕೊಟ್ಟಿದಲ್ಲದೆ ಗಿಯಾಸುದ್ದೀನನಿಗೆ ಆಚಾರ್ಯರ ಪರಿಚಯ ಮಾಡಿಸಿ ಅವನಿಂದಲೂ ಆಚಾರ್ಯರಿಗೆ ಗೌರವ ಸಲ್ಲುವಂತೆ ಮಾಡಿದ್ದನು. ಸರ್ವಜ್ಞರು ಬದರಿಯಾತ್ರೆಯನ್ನು ಮುಗಿಸಿ ಬರುವ ವೇಳೆಗೆ ಯುದ್ಧ ಮುಗಿದು ಶಾಂತಿ ನೆಲೆಸಿತ್ತು. ಆಚಾರ್ಯರು ಆಗ ನವದ್ವೀಪಕ್ಕೆ ಭೇಟಿ ಕೊಟ್ಟಿದ್ದರು. ಆ ಸಮಯದಲ್ಲಿ ಧನುಜ್‌ರಾಯ್ ಗುರುಗಳನ್ನು ಬಹುವಾಗಿ ಸತ್ಕರಿಸಿ ಅವರ ಅನುಗ್ರಹಕ್ಕೆ ಪಾತ್ರನಾದನು. ಧನುಜ್‌ರಾಯ್‌ ಧಾರ್ಮಿಕನೂ, ಭಗವದ್ಭಕ್ತನೂ ಆಗಿದ್ದನು. ಶ್ರೀಮದಾಚಾರ್ಯರು ಅವನಿಗೆ ವಿಷ್ಣುಭಕ್ತಿ, ಭಾಗವತಧರ್ಮಗಳನ್ನು ಉಪದೇಶಿಸಿ ವಂಗದೇಶದಲ್ಲಿ ವಿಷ್ಣುಭಕ್ತಿಗೆ ಪ್ರೋತ್ಸಾಹ ನೀಡಿ ಭಾಗವತಧರ್ಮ ಪ್ರಸಾರ ಮಾಡಲು ಆಜ್ಞಾಪಿಸಿ ತಮ್ಮ ಯಾತ್ರೆಯನ್ನು ಮುಂದುವರೆಸಿದರು. ಧನುಜ್‌ರಾಯನು ಗುರುಗಳ ಆದೇಶದಂತೆ ತನ್ನ ರಾಜ್ಯದಲ್ಲಿ ವಿಷ್ಣುಭಕ್ತಿ, ಭಾಗವತಧರ್ಮಗಳಿಗೆ ಪ್ರೋತ್ಸಾಹ ನೀಡಿದ್ದರಿಂದ ವೈಷ್ಣವಮತಕ್ಕೆ ಅಲ್ಲಿ ಇಂಬು ದೊರಕುವಂತಾಗಿತ್ತು. 

ಮುಂದೆ ಶ್ರೀರಾಜೇಂದ್ರತೀರ್ಥರು, ಶ್ರೀಜಯಧ್ವಜತೀರ್ಥರು ಬಂಗಾಲದಲ್ಲಿ ಸಂಚಾರಮಾಡಿ ಪರವಾದಿಗಳನ್ನು ಜಯಿಸಿ, ವಿಶೇಷ ರೀತಿಯಲ್ಲಿ ವಿಷ್ಣುಭಕ್ತಿ, ಭಾಗವತಧರ್ಮ, ದೈತಸಿದ್ಧಾಂತಗಳ ಪ್ರಸಾರ ಮಾಡಿದರು. ಶ್ರೀಜಯಧ್ವಜತೀರ್ಥರು ವಂಗದೇಶದ ಶ್ರೇಷ್ಠ ಪಂಡಿತನಾದ ತಮ್ಮ ಶಿಷ್ಯನೊಬ್ಬನಿಗೆ ಸನ್ಯಾಸವಿತ್ತು ವಿಷ್ಣುಪುರಿ” ಎಂಬ ಹೆಸರಿನಿಂದ ತಮ್ಮ ಮಠದ ಒಂದು ಶಾಖೆಗೆ ಆತನನ್ನು ಅಧಿಪತಿಯನ್ನಾಗಿ ಮಾಡಿ ತಮ್ಮ ಪ್ರತಿನಿಧಿಯಾಗಿದ್ದು ವಂಗದೇಶದಲ್ಲಿ ಮಧ್ವಮತ, ವಿಷ್ಣುಭಕ್ತಿಗಳನ್ನು ಪ್ರಸಾರ ಮಾಡಲು ವ್ಯವಸ್ಥೆ ಮಾಡಿದರು. 

ಇಂದಿನ ಬಂಗಾಲದ ವೈಷ್ಣವಮತ, ವಿಷ್ಣುಭಕ್ತಿ, ಭಾಗವತ ಸಂಪ್ರದಾಯಗಳಿಗೆ ಮೂಲಪುರುಷರೇ ಈ ವಿಷ್ಣುಪುರಿಗಳು. ಅವರು ಪ್ರಪ್ರಥಮವಾಗಿ ಭಾಗವತವನ್ನು ವಂಗದೇಶದಲ್ಲಿ ಜನಪ್ರಿಯವಾಗುವಂತೆ ಮಾಡಿ ದೇಶದಲ್ಲೆಲ್ಲಾ ವೈಷ್ಣವಮತ ಪ್ರಸಾರ ಮಾಡಿದರು. ಇದು 'ಭಕ್ತಿರತ್ನಾಕರ' ಭಕ್ತಿರತ್ನಾವಳಿಗಳಿಂದ ವ್ಯಕ್ತವಾಗುವುದು. 

ಪ್ರಖ್ಯಾತ ವಿಮರ್ಶಕ ಪಂಡಿತರಾದ ರಾಯ್‌ ಬಹದ್ದೂ‌ ದಿನೇಶಚಂದ್ರಸೇನ್ ಎಂಬುವವರು ಬರೆದಿರುವ ಚೈತನ್ಯ ಮತ್ತು ಅವರ ಮಿತ್ರರು” (Chaitanya and His Companions) ಎಂಬ ಗ್ರಂಥದಲ್ಲಿ ಬಂಗಾಲದ ಚೈತನ್ಯಮತದ ಉಗಮಕ್ಕೆ ಮಾಧ್ವಸಂಪ್ರದಾಯದ ಅಲ್ಲಿನ ವೈಷ್ಣವ ಪಂಥದ ಹತ್ತನೆಯ ಗುರುಗಳಾದ ಜಯಧರ್ಮ (ಜಯಧ್ವಜ)ರ ಶಿಷ್ಯರಾದ ವಿಷ್ಣುಪುರಿಗಳೇ ಕಾರಣರೆಂದೂ ಅವರೇ ಭಾಗವತವನ್ನು ತಮ್ಮ ಭಕ್ತಿರತ್ನಾವಳಿಯ ಮೂಲಕವಾಗಿ ಜನಪ್ರಿಯವಾಗುವಂತೆ ಮಾಡಿದರೆಂದು ಅವರ ಭಕ್ತಿರತ್ನಾವಳಿಯಿಂದ ಸ್ಪಷ್ಟವಾಗುವುದೆಂದೂ ಬರೆದಿದ್ದಾರೆ. It was to the Madhwa sect that Bangal has great Vaishnava faith, the Culminating Point of which was reached in the life of Chaitanya. We find in the "Bhakti Ratnakara" that Vishnupuri, a disciple of Jayadharma (Jayadhwaja), the tenth Vishnupuri, a disciple of Jayadharma (Jayadhwaja), the tenth leader of this sect, popularized the Bhagavata amongst the Bengalies about the middle of the 13th century by his celebrated work called the "Bhakti Ratnavali". This seems to be the first impetus of Vaishnavism theat came from the Madhwa (Maddhi) order in Bengal, Rai Saheb Dinesh Chandra Sen.

ದಿನೇಶಚಂದ್ರಸೇನರು ಮಾಧ್ವಪೀಠದ ಹತ್ತನೆಯ ಶ್ರೀಜಯಧರ್ಮ ಅಥವಾ ಶ್ರೀಜಯಧ್ವಜತೀರ್ಥರೇ ವಂಗದೇಶದ ಭಕ್ತಿಪಂಥದ ಮೂಲಪ್ರಸಾರಕರೆಂದು ಹೇಳಿರುವುದು ಮಾತ್ರವಲ್ಲದೆ ಶ್ರೀಮಧ್ವಾಚಾರ್ಯರ ಮಹಾಸಂಸ್ಥಾನದ ಶ್ರೀರಾಜೇಂದ್ರ ಪರಂಪರೆಯ, ಅಂದರೆ ಈಗಿನ ಶ್ರೀವ್ಯಾಸರಾಯಮಠದ ವಂಶವೃಕ್ಷವನ್ನು ಕೊಟ್ಟು ಈ ವಂಶದ ಮಾಧ್ಯಮಠವೇ ತಮ್ಮ ಮತದ (ಚೈತನ್ಯ ಸಂಪ್ರದಾಯದ) ಮೂಲವೆಂದು ಹೇಳಿರುವುದು ಗಮನಾರ್ಹವಾಗಿದೆ.62 

ಶ್ರೀಜಯಧ್ವಜತೀರ್ಥರ ಶಿಷ್ಯರಾದ ವಿಷ್ಣುಪುರಿಯವರ ಪರಂಪರೆಯಲ್ಲಿ ಬಂದ ಶಿಷ್ಯರೇ ಶ್ರೀಕೃಷ್ಣ ಚೈತನ್ಯಪ್ರಭುಗಳು,( ಶ್ರೀಕೃಷ್ಣಚೈತನ್ಯರು ವಿಷ್ಣುಪುರಿಗಳ ಸಾಕ್ಷಾತ್ ಶಿಷ್ಯರೆಂದು ಕೆಲವರು ಹೇಳುವರು. ಮತ್ತೆ ಕೆಲವರು ವಿಷ್ಣುಪುರಿಗಳು ವೈಷ್ಣವಪಂಥದ ಹದಿಮೂರನೆಯ ಗುರುಗಳಾದ ಶ್ರೀಲಕ್ಷ್ಮೀತೀರ್ಥರ ಶಿಷ್ಯರು ಎಂದೂ ಹೇಳುವರು. ಈ ಲಕ್ಷ್ಮೀತೀರ್ಥರೇ ಶ್ರೀವ್ಯಾಸರಿಂದ ಸನ್ಯಾಸ ಪಡೆದ ಕೃಷ್ಣಚೈತನ್ಯರಿಗೆ ಪ್ರೇರಕಶಕ್ತಿಗಳಾಗಿದ್ದಾರೆ) ಶ್ರೀಚೈತನ್ಯರು ಮುಂದೆ ವಂಗದೇಶದಲ್ಲೆಲ್ಲಾ ವ್ಯಾಪಕವಾಗಿ ವೈಷ್ಣವಮತವನ್ನೂ, ವಿಷ್ಣುಭಕ್ತಿ, ಭಾಗವತಧರ್ಮಗಳನ್ನೂ ಪ್ರಚಾರ ಮಾಡಿ ವಂಗದೇಶೀಯರನ್ನು ವಿಷ್ಣುಭಕ್ತರನ್ನಾಗಿ ಮಾಡಿದರು. 

ಶ್ರೀವ್ಯಾಸರಾಜರು ವಂಗದೇಶಕ್ಕೆ ಬರುವುದರೊಳಗಾಗಿ; ಶ್ರೀವ್ಯಾಸರಾಜರು ಪಕ್ಷಧರಮಿಶ್ರನನ್ನು ವಾದದಲ್ಲಿ ಜಯಿಸಿ, ದೈತಸಿದ್ಧಾಂತ ಪ್ರತಿಷ್ಠಾನ ಮಾಡಿದ ಕೀರ್ತಿಯು ಬಂಗಾಲದಲ್ಲೆಲ್ಲಾ ಹರಡಿದ್ದಿತು. ಅಂತೆಯೇ ಶ್ರೀವ್ಯಾಸತೀರ್ಥರಿಗೆ ಅಲ್ಲಿ ಅಪೂರ್ವ ಸ್ವಾಗತ ದೊರಕಿತು. ಶ್ರೀವ್ಯಾಸರಾಜರು ವಂಗದೇಶದಲ್ಲೆಲ್ಲಾ ಸಂಚಾರ ಮಾಡಿ ಅನೇಕ ಕಡೆ ಶ್ರೀವಿಷ್ಣುಮಂದಿರಗಳನ್ನು ಪ್ರತಿಷ್ಠಾಪಿಸಿ, ನ್ಯಾಯ-ವೇದಾಂತಾದಿ ಶಾಸ್ತ್ರ ಕೋವಿದರಾದ ಅನೇಕ ಪರಮತೀಯ ವಿದ್ವಾಂಸರನ್ನು ಜಯಿಸಿ, ಹೋದಲ್ಲೆಲ್ಲಾ ದೈತಮತದ ಪ್ರತಿಕ್ರಿಯೆಗಳು, ವಿಷ್ಣುಭಕ್ತಿ, ಭಾಗವತಧರ್ಮಗಳನ್ನು ಪ್ರಸಾರ ಮಾಡಿ ನೂರಾರು ಜನರಿಗೆ ಮಂತ್ರಮುದ್ರಾಧಾರಣ- ಗುರೂಪದೇಶದ್ವಾರಾ ಮಾದ್ದದೀಕ್ಷೆಯನ್ನು ಅನುಗ್ರಹಿಸಿದರು ವಂಗದೇಶೀಯರಿಗೆ ತಮ್ಮ ವೈಷ್ಣವಪಂಥದ ಬೆಳವಣಿಗೆಗೆ ಮೂಲಕಾರಣರಾದ ಶ್ರೀರಾಜೇಂದ್ರ-ಜಯಧ್ವಜತೀರ್ಥರ ಪೀಠಾಧೀಶರೇ ಶ್ರೀವ್ಯಾಸರಾಜರೆಂದು ತಿಳಿದ ಮೇಲಂತೂ ಶ್ರೀಗುರುಗಳಲ್ಲಿ ಅವರಿಗೆ ಅಸಾಧಾರಣ ಭಕ್ತಿ-ಗೌರವಗಳುಂಟಾದವು. ಶ್ರೀಗಳವರು ಪ್ರತಿದಿನ ಪಾಠಪ್ರವಚನ, ದೇವರ ದರ್ಶನ, ತೀರ್ಥಪ್ರಸಾದ, ಶ್ರೀವಿಷ್ಣುತತ್ವ, ಸನಾತನಧರ್ಮ, ಶ್ರೀಹರಿಭಕ್ತಿಗಳ ಉಪದೇಶಗಳಿಂದ ವಂಗದೇಶದ ಶಿಷ್ಯ-ಭಕ್ತಜನರನ್ನು ಅನುಗ್ರಹಿಸಹತ್ತಿದರು. ಸಾವಿರಾರು ಜನ ಶ್ರೀಯವರ ಶಿಷ್ಯರಾದರು. 

ಶ್ರೀವ್ಯಾಸತೀರ್ಥರು ಬಹುಕಾಲ ವಂಗದೇಶದಲ್ಲಿದ್ದರು ಮತ್ತು ಅಲ್ಲಿನ ಓರ್ವ ಪಂಡಿತ ಶಿಷ್ಯನಿಗೆ ಪರಮಹಂಸಾಶ್ರಮವಿತ್ತು “ಶ್ರೀಲಕ್ಷ್ಮೀತೀರ್ಥ'ರೆಂದು ನಾಮಕರಣ ಮಾಡಿ ಶ್ರೀಮಧ್ವಾಚಾರ್ಯರ ಸಿದ್ಧಾಂತ ಪ್ರಸಾರ ಮಾಡುತ್ತಿರಬೇಕೆಂದು ಆಜ್ಞಾಪಿಸಿ ಕರ್ನಾಟಕದತ್ತ ಪ್ರಯಾಣ ಬೆಳೆಸಲು ಸಿದ್ಧರಾದರು. ವಂಗದೇಶದ ಭಗವದ್ಭಕ್ತರೂ, ಶಿಷ್ಯರೂ ಆದ ಧಾರ್ಮಿಕರು ಶ್ರೀಗಳವರನ್ನು ಕಳುಹಿಸಿಕೊಡಲು ಒಪ್ಪದಾದರು. ಶ್ರೀವ್ಯಾಸರಾಜರು ಅವರೆಲ್ಲರಿಗೂ ಮತ್ತೆ ಬರುವುದಾಗಿ ಭರವಸೆ ನೀಡಿ, ತಮ್ಮ ಶಿಷ್ಯರಾದ ಶ್ರೀಲಕ್ಷ್ಮೀತೀರ್ಥರ ಪ್ರಾರ್ಥನೆಯಂತೆ ತಮ್ಮ ಪಾದುಕೆಗಳನ್ನು ಕರುಣಿಸಿ ಎಲ್ಲರಿಂದ ಬೀಳ್ಕೊಂಡು ಅಲ್ಲಿಂದ ಪ್ರಯಾಣ ಬೆಳೆಸಿದರು. 

ಶ್ರೀವ್ಯಾಸರಾಜರು ಹೀಗೆ ಉತ್ತರಭಾರತದ ದಿಗ್ವಿಜಯವನ್ನು ಯಶಸ್ವಿಯಾಗಿ ಮುಗಿಸಿಕೊಂಡು ಕ್ರಿ.ಶ. ೧೪೭೭ರ ಹೊತ್ತಿಗೆ ಸಂಚಾರಕ್ರಮದಿಂದ ಶ್ರೀತಿರುಪತಿಗೆ ದಯಮಾಡಿಸಿ ಅಲ್ಲಿ ಶ್ರೀವೆಂಕಟೇಶ್ವರನಿಗೆ ತಮ್ಮೆಲ್ಲ ದಿಗ್ವಿಜಯಾದಿಗಳನ್ನು ಸಮರ್ಪಿಸಿ ದೇವರ ಸೇವೆ ಮಾಡಿ ಸ್ವಾಮಿಯ ಅನುಗ್ರಹ ಪಡೆದು ಕೃತಾರ್ಥರಾದರು. ತಿರುಪತಿಯಲ್ಲಿರುವಾಗಲೇ ಸಾಳುವ ನರಸಿಂಹರಾಜನು ಶ್ರೀವಿಬುಧೇಂದ್ರತೀರ್ಥರ ಅಧ್ಯಕ್ಷತೆಯಲ್ಲಿ ನೆರವೇರಿಸಿದ ಅಪೂರ್ವ ವಿದ್ವತ್ಸಭೆ, ಆ ಕಾಲದಲ್ಲಿ ಶ್ರೀಲಕ್ಷ್ಮೀನಾರಾಯಣ ಯೋಗಿಗಳು ತೋರಿದ ಪಾಂಡಿತ್ಯ, ವಾದಿದಿಗ್ವಿಜಯ, ಅವರು ರಚಿಸಿದ “ವಾಗ್ವಜ್ರ' ಗ್ರಂಥದ ಅನುವಾದ-ಪ್ರಕಾಶನ-ಯತಿ-ಪಂಡಿತ- ಪೀಠಾಧೀಶ-ಮಹಾರಾಜಾದಿಗಳ ಕೋರಿಕೆಯಂತೆ ಶ್ರೀವಿಬುಧೇಂದ್ರ ಗುರುಗಳು ಶ್ರೀಲಕ್ಷ್ಮೀನಾರಾಯಣಮುನಿಗಳಿಗೆ ಅನುಗ್ರಹಿಸಿದ “ಶ್ರೀಪಾದರಾಜ” ಪ್ರಶಸ್ತಿ, ಆನಂತರ ಸಾಳುವ ನರಸಿಂಹ ಭೂಪಾಲನು ಗುರುಗಳನ್ನು ಚಂದ್ರಗಿರಿಗೆ ರಾಜಗೌರವದಿಂದ ಕರೆದುಕೊಂಡು ಹೋಗಿ ಕರ್ನಾಟಕ ರತ್ನ ಸಿಂಹಾಸನದಲ್ಲಿ ಗುರುಗಳನ್ನು ಮಂಡಿಸಿ ಭಕ್ತಾದರಗಳಿಂದ ರಾಜಗುರು'ಗಳನ್ನಾಗಿ ಮಾಡಿಕೊಂಡು ಸಲ್ಲಿಸಿದ ಅನಿತರ ಸಾಧಾರಣ ಗೌರವಾದಿ ವಿಚಾರಗಳು ಶ್ರೀವ್ಯಾಸರಾಜರಿಗೆ ತಿಳಿದು ಪರಮಾನಂದತುಂದಿಲರಾದರು. ಗುರುಗಳನ್ನು ಸಂದರ್ಶಿಸುವ ಉತ್ಸಾಹದಿಂದ ತಿರುಪತಿಯಿಂದ ಹೊರಟು ಮುಳುಬಾಗಿಲಿಗೆ ದಿಗ್ವಿಜಯ ಮಾಡಿದರು. 

ಮತ್ತೆ ಗುರುಶಿಷ್ಯರ ಸಮಾಗಮವಾಯಿತು. ಗುರುಪಾದರ ಅಪ್ಪಣೆಯಂತೆ ಶ್ರೀವ್ಯಾಸತೀರ್ಥರು ತಮ್ಮ ಉತ್ತರಭಾರತದ ದಿಗ್ವಿಜಯ ವಿಚಾರವನ್ನು ಸಾದ್ಯಂತವಾಗಿ ನಿವೇದಿಸಿ - “ಗುರುವರ್ಯ, ನಾವು ಅತ್ತ ತೀರ್ಥಯಾತ್ರೆಯಲ್ಲಿದ್ದಾಗ, ಇಲ್ಲಿ ಸಾಳುವ ನರಸಿಂಹರಾಜರು ತಮ್ಮ ನೇತೃತ್ವದಲ್ಲಿ ಪರಮಪೂಜ್ಯ ಗುರುಪಾದರಾದ ಶ್ರೀವಿಬುಧೇಂದ್ರತೀರ್ಥ ಶ್ರೀಪಾದಂಗಳವರ ಅಧ್ಯಕ್ಷತೆಯಲ್ಲಿ ಅಪೂರ್ವವಾದ ಷದ್ದರ್ಶಿನೀ ವಿದ್ವನ್ಮಹಾಸಭೆಯನ್ನು ನೆರವೇರಿಸಿದ್ದು, ಆ ಕಾಲದಲ್ಲಿ ತಾವು ರಚಿಸಿದ “ವಾಗ್ರಜ'ವೆಂಬ ವಾದಗ್ರಂಥವನ್ನು ಅನುವಾದ ಮಾಡಿ ಗುರುಪಾದರ ಅಮೃತಹಸ್ತದಿಂದ ಪ್ರಕಾಶನಗೊಳಿಸಿದ್ದು, ಆ ಕಾಲದಲ್ಲಿ ಸೇರಿದ್ದ ಪರಮಹಂಸ-ಪಂಡಿತಮಂಡಲಿಯ ಪ್ರಾರ್ಥನೆಯಂತೆ ಶ್ರೀವಿಬುಧೇಂದ್ರ ಗುರುವರರು ತಮಗೆ “ಶ್ರೀಪಾದರಾಜ” ಪ್ರಶಸ್ತಿಯನ್ನು ಅನುಗ್ರಹಿಸಿ ಸನ್ಮಾನಿಸಿದ್ದು, ಆನಂತರ, ನರಸಿಂಹಭೂಪಾಲನು ತಮ್ಮನ್ನು ಚಂದ್ರಗಿರಿಗೆ ಕರೆಯಿಸಿಕೊಂಡು ರಾಜಸಿಂಹಾಸನದಲ್ಲಿ ಮಂಡಿಸಿ ತಮ್ಮನ್ನು “ರಾಜಗುರುಗಳನ್ನಾಗಿ ಮಾಡಿಕೊಂಡು ಗೌರವಿಸಿದ ವಾರ್ತೆಗಳು ತಿರುಪತಿಯಲ್ಲಿ ನಮಗೆ ತಿಳಿಯಿತು. ನಮಗಾದ ಆನಂದವನ್ನು ಬರೀ ಮಾತಿನಲ್ಲಿ ನಿರೂಪಿಸಲು ಸಾಧ್ಯವಿಲ್ಲ. ಇದೆಲ್ಲವೂ ತಮ್ಮ ಅಪಾರ ಮಹಿಮೆಗಳಿಗೆ ದ್ಯೋತಕವೆಂದು ನಾವು ನಂಬಿದ್ದೇವೆ. ಇದು ನಿಜವಾಗಿ ಶ್ರೀಮದಾಚಾರ್ಯರ ಸತ್ತಿದ್ಧಾಂತಕ್ಕೆ ದೊರೆತ ಗೌರವವೆಂದು ನಾವು ಭಾವಿಸುತ್ತೇವೆ. ಆದರೆ ಸ್ವಾಮಿ, ಯಾವ ಗುರುಪಾದರ ಅನುಗ್ರಹದಿಂದ ಸಂಪಾದಿಸಿದ ಸಕಲಶಾಸ್ತ್ರಪಾಂಡಿತ್ಯವನ್ನು ತಾವು ನಮಗೆ ಧಾರೆಯೆರೆದು ಅನುಗ್ರಹಿಸೋಣವಾಯಿತೋ ಅಂಥ ಜಗನ್ಮಾನ್ಯ ದೈತಸಿದ್ಧಾಂತ ಪ್ರತಿಷ್ಠಾಪನ ಚಕ್ರವರ್ತಿಗಳಾದ ಪರಮಪೂಜ್ಯ ಶ್ರೀವಿಬುಧೇಂದ್ರತೀರ್ಥ ಗುರುಪಾದರ ದರ್ಶನಲಾಭವು ನಮಗಾಗಲಿಲ್ಲವೆಂಬ ಕೊರತೆಯೊಂದು ನಮ್ಮನ್ನು ಬಾಧಿಸುತ್ತಿದೆ. ಭಗವತ್ಥಂಕಲ್ಪವೇ ಹಾಗಿರಲು ನಾವೇನು ಮಾಡಬಲ್ಲೆವು! ಒಟ್ಟಿನಲ್ಲಿ ಆ ಜಗಜಟ್ಟಿಗಳ ಪಾದಗಳನ್ನು ಮುಟ್ಟಿ ನಮಿಸಿ ಹೃಷ್ಟಾಂತರಂಗರಾಗುವ ಭಾಗ್ಯ ನಮಗಿಲ್ಲವಾಯಿತು. ಆದರೂ ನಮಗೊಂದು ಬಗೆಯ ತೃಪ್ತಿಯಾಗಿದೆ. ಆ ಮಹನೀಯರ ದ್ವಾರಾ ತಮಗೆ ಲಭಿಸಿದ ತಮ್ಮ ಅನುಗ್ರಹದಿಂದ ನಮಗೆ ಪ್ರಾಪ್ತವಾದ ಆ ಸದ್ ಜ್ಞಾನವು ನಮ್ಮಲ್ಲಿರುವವರೆಗೆ ಆ ಪೂಜ್ಯರು ನಮ್ಮೊಡನಿದ್ದು ಆಶೀರ್ವದಿಸುತ್ತಿರುವರೆಂದೇ ನಾವು ನಂಬಿದ್ದೇವೆ!” ಎಂದು ಮುಂತಾಗಿ ವಿಜ್ಞಾಪಿಸಿದರು. 

ಶ್ರೀಲಕ್ಷ್ಮೀನಾರಾಯಣಮುನೀಂದ್ರರಿಗೆ ಶಿಷ್ಯರ ಮಾತು ಕೇಳಿ ಅತೀವ ಆನಂದವಾಯಿತು. ಮೈ ಪುಳಕಿಸಿತು. ನಸುನಗುತ್ತಾ - ಪರಮಾಶ್ಚರ್ಯ! ಪ್ರಿಯಶಿಷ್ಯರೇ, ಇದೇ ಅಭಿಪ್ರಾಯವು ಪೂಜ್ಯ ಗುರುಪಾದರ ಬಾಯಿಂದಲೂ ಬಂದಿತು! ಗುರುಪಾದರು ನಿಮ್ಮ ವಿಷಯವಾಗಿ ಬಹು ಅಭಿಮಾನ - ಪ್ರೀತಿಗಳನ್ನು ವ್ಯಕ್ತಪಡಿಸಿದರು. ಅವರು ಹೇಳಿದ ಮಾತು ಇನ್ನೂ ನಮ್ಮ ಕಿವಿಗಳಲ್ಲಿ ಗುಂಯ್‌ಗುಟ್ಟುತ್ತಿದೆ! ಅವರೆಂದರು - “ಪ್ರಿಯಶಿಷ್ಯರೇ, ನಾವು ನಿಮಗೆ ಧಾರೆ ಎರೆದ ಸಕಲಶಾಸ್ತ್ರ, ಶ್ರೀಮದಾಚಾರ್ಯ ಟೀಕಾಕೃತ್ಪಾದರ ಪರಂಪರಾಪ್ರಾಪ್ತ ಪಾಠಪ್ರವಚನ, ಸಂಪ್ರದಾಯ ರಹಸ್ಯಗಳನ್ನು ನೀವು ಪರಮಶ್ರೇಷ್ಠರಾದ ಶಿಷ್ಯರಿಗೆ ಧಾರೆಯೆರೆದು ನಮ್ಮ ಶ್ರಮ, ಆಶಯಗಳನ್ನು ಸಾರ್ಥಕ ಪಡಿಸಿದ್ದೀರಿ. ನಿಮ್ಮ ಶಿಷ್ಯರ ಕೀರ್ತಿ ಈಗಾಗಲೇ ಸರ್ವತ್ರ ವ್ಯಾಪಿಸಿದೆ! ಅಂಥ ನಮ್ಮ ವಿದ್ಯಾಪ್ರಶಿಷ್ಯರನ್ನು ಕಂಡು ಆನಂದಿಸಿ, ಆಶೀರ್ವದಿಸಲು ನಮ್ಮ ಮನಸ್ಸು ಕಾತರಿಸುತ್ತಿತ್ತು. ನಾವು ಇತ್ತ ಬಂದಾಗಲೇ ಅವರು ಉತ್ತರಭಾರತ ದಿಗ್ವಿಜಯಕ್ಕೆ ಹೊರಟಿದ್ದಾರೆ! ಇದೂ ಶ್ರೀಹರಿ ಸಂಕಲ್ಪಕ್ಕೊಂದು ಉದಾಹರಣೆಯಾಗಿದೆ. ಹೂಂ, ನಾವು ಅವರನ್ನು ಬೇರೊಂದು ರೂಪದಿಂದ ಕಾಣಬೇಕೆಂಬುದು ಶ್ರೀಹರಿಚಿತ್ತವೋ ಏನೋ! ಅದಾರು ಬಲ್ಲರು ? ನಮ್ಮ ವಿದ್ಯೆಯು ಅವರ ಮೂಲಕವಾಗಿ ನಾನಾವಿಧವಾಗಿ ಸರ್ವತ್ರ ಹರಡಿ, ಅವರಿಂದ ಉದ್ದಾಮ ಪಂಡಿತರಾದ ಶಿಷ್ಯರು ತಯಾರಾಗಿ, ಆ ಶಿಷ್ಯ-ಪ್ರಶಿಷ್ಯ ಪರ೦ಪರೆಯವರು ಶತ-ಶತಮಾನಗಳವರೆಗೆ ಪರವಾದಿ ದಿಗ್ವಿಜಯಪೂರ್ವಕವಾಗಿ, ಗ್ರಂಥರಚನಾದ್ವಾರಾ, ದೈತಸಿದ್ಧಾಂತವನ್ನು ನಿಷ್ಕಂಟಗೊಳಿಸಿ ಈ ಭವ್ಯ ಸಿದ್ಧಾಂತವನ್ನು ಮುಂದುವರೆಸಿಕೊಂಡು ಹೋಗುವರೆಂದು ನಮಗೆ ಶ್ರೀಹರಿವಾಯುಗಳು ಪ್ರೇರಿಸುತ್ತಿದ್ದಾರೆ. ಇದಕ್ಕಿಂತ ಸಂತಸದ ವಿಚಾರ ಬೇರಾವುದಿದೆ ? ನಿಮ್ಮ ಶಿಷ್ಯರಿಗೆ, ಅಲ್ಲ, ನಮ್ಮ ಪ್ರೀತಿಯ ಪ್ರಶಿಷ್ಯರಿಗೆ ಅಂತಃಕರಣಪೂರ್ವಕವಾದ ನಮ್ಮ ಶುಭಾಶೀರ್ವಾದಗಳನ್ನು ತಿಳಿಸಿರಿ ಎಂದು ಆಜ್ಞಾಪಿಸಿದ್ದರು” ಎಂದು ಹೇಳಿದರು. 

ಗುರುಗಳ ವಚನವನ್ನಾಲಿಸಿ ಶ್ರೀವ್ಯಾಸತೀರ್ಥರಿಗೆ ಅಮಂದಾನಂದವಾಯಿತು. ಅವರು ಸಂತೋಷಭರದಿಂದ “ಧನ್ಯರಾದೆವು! ಆ ಮಹಾನುಭಾವರ ಅನುಗ್ರಹಾಶೀರ್ವಾದಗಳು ಪೂಜ್ಯರಾದ ತಮ್ಮ ಮೂಲಕ ನಮಗೆ ದೊರಕಿದ್ದು ನಮ್ಮ ಸೌಭಾಗ್ಯ. ಕೃತಾರ್ಥರಾದೆವು” ಎಂದು ವಿಜ್ಞಾಪಿಸಿದರು. 

ಶ್ರೀವ್ಯಾಸಭಗವಾನರು ಗುರುಗಳ ಸನ್ನಿಧಿಯಲ್ಲಿ ಕೆಲಕಾಲ ವಾಸಮಾಡಿ ಅವರು ರಚಿಸಿದ “ವಾಗ್ವಜವನ್ನು ಅಧ್ಯಯನ ಮಾಡಿ ತರುವಾಯ ಗುರುಗಳ ಅಪ್ಪಣೆ ಪಡೆದು ಅಟ್ಟೂರಿಗೆ ದಯಮಾಡಿಸಿದರು.