|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ನಾಲ್ಕನೆಯ ಉಲ್ಲಾಸ

ಶ್ರೀವ್ಯಾಸರಾಜಯತಿಸಾರ್ವಭೌಮರು

೨೯. ಪಕ್ಷಧರಮಿತ್ರ ಶಿಷ್ಯನಾದ

ಮಿಥಿಲೆಯು ವಿದ್ವಾಂಸರ ನೆಲೆವೀಡಾಗಿದ್ದಿತು. ಅಲ್ಲಿನ ವಿದ್ಯಾಪೀಠದಲ್ಲಿ ಪಕ್ಷಧರಮಿಶ್ರನೆಂಬ ಪ್ರಚಂಡ ಪಂಡಿತನಿದ್ದನು. ಅವನು ನವೀನ ನ್ಯಾಯಶಾಸ್ತ್ರ ಪರಂಪರೆಗೆ ಆದ್ಯನೆನಿಸಿದ್ದ. ಗಂಗೇಶೋಪಾಧ್ಯಾಯರ “ಚಿಂತಾಮಣಿ” ಎಂಬ ನವೀನ ನ್ಯಾಯಶಾಸ್ತ್ರದ ಮೇರುಕೃತಿಯನ್ನು ಸ್ವಾಧೀನಪಡಿಸಿಕೊಂಡು ಅದರಲ್ಲಿ ಅಸಾಧಾರಣ ಪಂಡಿತನೆನಿಸಿ ನೂರಾರು ಜನ ಪ್ರತಿಭಾನ್ವಿತ ವಿದ್ಯಾರ್ಥಿಗಳಲ್ಲಿ ಚಿಂತಾಮಣಿಯ ಪಾಠ-ಪ್ರವಚನ ಮಾಡಿಸುತ್ತಾಕೀರ್ತಿ ಗಳಿಸಿದ್ದನು. 

ನವೀನ ನ್ಯಾಯಶಾಸ್ತ್ರದ ಬಲದಿಂದ ಪಕ್ಷಧರಮಿಶ್ರನು ತನ್ನೊಡನೆ ವಾದ ಮಾಡಲು ಬಂದ ಎಲ್ಲಾ ಪಂಡಿತರನ್ನೂ ಜಯಿಸಿ ಪ್ರತಿವಾದಿಗಳಿಗೆ ಸಿಂಹಸ್ವಪ್ನನಾಗಿದ್ದನು. ನ್ಯಾಯಶಾಸ್ತ್ರದಲ್ಲಿ ಅದ್ವಿತೀಯನಾಗಿದ್ದಂತೆ ಅವನು ವ್ಯಾಕರಣ, ಮೀಮಾಂಸಾ, ಕಾವ್ಯ-ನಾಟಕ-ಅಲಂಕಾರಾದಿ ಶಾಸ್ತ್ರಗಳಲ್ಲಿಯೂ, ಅದೈತ ವೇದಾಂತಾದಿ ಸಕಲ ಶಾಸ್ತ್ರಗಳಲ್ಲಿಯೂ ಏಕಮೇವಾದ್ವಿತೀಯ- ನೆನಿಸಿದ್ದನು. ಅವನು ತಿಳಿಯದ, ಪಾಠ ಹೇಳದ, ವಾದ ಮಾಡದ ಶಾಸ್ತ್ರಗಳೇ ಇರಲಿಲ್ಲವೆನ್ನುವಷ್ಟರ ಮಟ್ಟಿಗೆ ಅವನ ಖ್ಯಾತಿ ಅಖಂಡ ಉತ್ತರಭಾರತದಲ್ಲಿ ವಿಖ್ಯಾತವಾಗಿದ್ದಿತು. ಒಂದೇ ಮಾತಿನಲ್ಲಿ ಹೇಳುವುದಾದರೆ ಪಕ್ಷಧರಮಿಶ್ರ ಮನೆಮಾತಾಗಿ ಬಿಟ್ಟಿದ್ದ! 

ಪಕ್ಷಧರಮಿಶ್ರನ ಈ ಅಪಾರ ಕೀರ್ತಿಯನ್ನು ಕೇಳಿದ್ದಶ್ರೀವ್ಯಾಸರಾಜಗುರುಸಾರ್ವಭೌಮರು ಅವನ ವಿದ್ವತ್ತನ್ನು ಪರೀಕ್ಷಿಸಲೋ ಎಂಬಂತೆ ದೆಹಲಿಯಿಂದ ಸಂಚಾರಕ್ರಮದಲ್ಲಿ ಮಿಥಿಲೆಗೆ ಚಿತ್ತೈಸಿದರು. 

ಶ್ರೀವ್ಯಾಸರಾಜರ ಕೀರ್ತಿ ಆ ವೇಳೆಗಾಗಲೇ ಮಿಥಿಲೆಗೂ ಹರಡಿತ್ತು. ಅಲ್ಲಿನ ಸಂಸ್ಥಾನೀಕರು, ಪಂಡಿತರು, ಧಾರ್ಮಿಕರು ಸ್ವಾಭಾವಿಕವಾಗಿ ಸರಸ್ವತಿ ಉಪಾಸಕರಾಗಿದ್ದುದರಿಂದ ಶ್ರೀವ್ಯಾಸಗುರುಗಳಿಗೆ ಅಲ್ಲಿ ಒಳ್ಳೆಯ ಆದರದ ಸ್ವಾಗತ ದೊರಕಿತು ಜ್ಞಾನ-ಭಕ್ತಿ-ವೈರಾಗ್ಯ-ತಪಸ್ಸುಗಳ ಸಾಕಾರಮೂರ್ತಿಯಂತೆ ತೇಜಸ್ಸಿನಿಂದ ಕಂಗೊಳಿಸಿ ದರ್ಶನ ಮಾತ್ರದಿಂದ ಭಕ್ತಿಯನ್ನು ಹುಟ್ಟಿಸುತ್ತಿದ್ದ ಅವರ ಭವ್ಯಾಕಾರದಿಂದ ಪ್ರಭಾವಿತರಾದ ಮಿಥಿಲೆಯ ಜನತೆ ಅವರಲ್ಲಿ ಪೂಜ್ಯಭಾವನೆಯಿಂದ ವರ್ತಿಸುತ್ತಿದ್ದರು. ಆದರೂ ಅಲ್ಲಿನ ಸಂಪ್ರದಾಯದಂತೆ ವಿದ್ಯಾಪೀಠದ ಪಂಡಿತರೊಡನೆ ಸೆಣಸಿ ತಮ್ಮ ಪಾಂಡಿತ್ಯದ ಪರಿಚಯ ಮಾಡಿಕೊಡಬೇಕೆಂದು ವಿದ್ದನ್ಮಂಡಲಿ ಬಯಸಿತು. ಸರಿ, ಪ್ರಾರಂಭವಾಯಿತು, ವಿವಿಧ ಶಾಸ್ತ್ರಕೋವಿದರೊಡನೆ ಶ್ರೀವ್ಯಾಸರಾಜರ ವಾಕ್ಯಾರ್ಥ ಪರಂಪರೆ! ಶ್ರೀಮಧ್ವಮತದ ವೈಶಿಷ್ಟ್ಯವನ್ನು ಅಲ್ಲಿ ಸ್ಥಾಪಿಸಲು ಶ್ರೀಗಳವರು ಮಿಥಿಲೆಯಲ್ಲಿ ಬಹುಕಾಲ ವಾಸಮಾಡಬೇಕಾಗಿ ಬಂದಿತು. ಪ್ರತಿದಿನ ಅನೇಕ ವಾದಿಗಳು ಅನೇಕ ಶಾಸ್ತ್ರಗಳಲ್ಲಿ ಗುರುಗಳೊಡನೆ ವಾದಿಸಿ, ಶ್ರೀಗಳವರ ಪ್ರಖರ ವಾಗ್ಸ್ ಖರಿಗೆ ತತ್ತರಿಸಿ ನಿರುತ್ತರರಾದರು. ಶ್ರೀಯವರ ಕೀರ್ತಿ ಎಲ್ಲೆಡೆ ಹರಡಿತ್ತು. 

ಆಗ ಪಕ್ಷಧರಮಿಶ್ರನು ನೂರಾರು ಜನ ಪಂಡಿತರಾದ ಶಿಷ್ಯವೃಂದದಿಂದ ಸಹಿತನಾಗಿ ಶ್ರೀವ್ಯಾಸತೀರ್ಥರೊಡನೆ ವಾದಮಾಡಲು ಬಂದನು. ದಕ್ಷಿಣಭಾರತದ ಪಂಡಿತರಿಗೆ ನವೀನ ನ್ಯಾಯಶಾಸ್ತ್ರದ ಪರಿಚಯವು ಅಷ್ಟಾಗಿ ಇರುವುದಿಲ್ಲವಾದ್ದರಿಂದ ಈ ಸ್ವಾಮಿಗಳನ್ನು ಸುಲಭವಾಗಿ ಜಯಿಸಿಬಿಡುತ್ತೇನೆಂಬ ಅಹಂಭಾವದಿಂದ ಕೂಡಿದ್ದ ಪಕ್ಷಧರಮಿಶ್ರನು ಶ್ರೀಯವರೊಡನೆ ವಾದಮಾಡಲು ಬಂದನು. ಅದರಿಂದ ಶ್ರೀವ್ಯಾಸಮುನಿಗಳು ಸಂತೋಷವಾಯಿತು. ಅವನನ್ನು ಗೌರವದಿಂದ ಸ್ವಾಗತಿಸಿದರು. 

ಇದೊಂದು ಅಪೂರ್ವ ಸಂದರ್ಭವಾದುದರಿಂದ ಈ ವಾಕ್ಯಾರ್ಥ ವೈಭವವನ್ನು ನೋಡಿ, ಕೇಳಿ ಆನಂದಿಸಲು ಸಹಸ್ರಾರು ಜನ ಧಾಮಿ೪ಕರು, ಪಂಡಿತರು ಆಗಮಿಸಿದರು. ಸ್ವತಃ ಪಂಡಿತರೂ, ವಿದ್ಯಾಪಕ್ಷಪಾತಿಗಳೂ, ಅಲ್ಲಿನ ವಿದ್ಯಾಪೀಠದ ಪೋಷಕರೂ ಆದ ಮಿಥಿಲಾಧಿಪತಿಗಳೂ ಮಿತಪರಿವಾರದೊಡನೆ ವಾಕ್ಯಾರ್ಥವನ್ನಾಲಿಸಲು ಆಗಮಿಸಿದರು. ವಾದನಿಯಮದಂತೆ ಮಧ್ಯಸ್ಥರು, ಶೀಘ್ರಲಿಪಿಕಾರರು, ನಿರ್ಣಯ ನೀಡುವ ಪಂಡಿತರುಗಳು ವ್ಯವಸ್ಥೆಯಾದ ಮೇಲೆ ಇತಿಹಾಸ ಪ್ರಸಿದ್ಧವಾದ ವಾಕ್ಯಾರ್ಥವು ಪ್ರಾರಂಭವಾಯಿತು. 

ಪಕ್ಷಧರಮಿಶನು “ಚಿಂತಾಮಣಿ” ಗ್ರಂಥವನ್ನಾಧರಿಸಿ ನವೀನ ನ್ಯಾಯಶಾಸ್ತ್ರದಲ್ಲಿ ಒಂದು ಅಪೂರ್ವ ವಿಷಯವನ್ನೆತ್ತಿಕೊಂಡು ವಾಕ್ಯಾರ್ಥವನ್ನು ಪ್ರಾರಂಭಿಸಿ ತನ್ನ ಪಕ್ಷವನ್ನು ಅತ್ಯಂತ ಬಲಪಡಿಸಿ ವಾದಮಾಡಿದನು. 

ವಿದ್ಯಾಮದದಿ೦ದ ಮತ್ತನಾಗಿದ್ದ ಪಕ್ಷಧರಮಿಶ್ರನು ತನ್ನನ್ನು ಚಕಿತಗೊಳಿಸುವ ಆಶ್ಚರ್ಯವೊಂದು ಕಾದಿದೆ ಎಂಬುದನ್ನು ಸ್ವಪ್ನದಲ್ಲಿ ಊಹಿಸಿರಲಿಲ್ಲ! ಶ್ರೀವ್ಯಾಸತೀರ್ಥರು ಪಕ್ಷಧರಮಿಶ್ರನ ನವೀನ ನ್ಯಾಯಶಾಸ್ತ್ರದ ವಾದವೈಖರಿ, ಆರ್ಭಟಗಳನ್ನು ಕಂಡು ನಸುನಕ್ಕು ಮಿಶ್ರನ ಪೂರ್ವಪಕ್ಷವನ್ನು ಲೀಲೆಯಿಂದಲೋ ಎಂಬಂತೆ ತಾವೂ ಅನುವಾದ ಮಾಡಿ ನವೀನ ನ್ಯಾಯಕ್ರಮದಲ್ಲಿಯೇ ಅದನ್ನು ಖಂಡಿಸಿ, ಅದರ ಮೇಲೆ ನವೀನ ನ್ಯಾಯಶಾಸ್ತ್ರ ಪದ್ಧತಿಯಂತೆ ಶಾಬ್ದಬೋಧ ಪರಿಷ್ಕೃತವಾಗಿ ವಾದ ಮಾಡಿ ಕೋಟಿಗಳನ್ನು ಹೇಳಿ ಪ್ರತಿಭಾರಂಜಿತ ಮಿಂಚಿನ ಗೊಂಚಲುಗಳನ್ನೇ ತೂಗಿಬಿಟ್ಟರು! ಶ್ರೀಯವರ ವಾದವನ್ನು ಕೇಳಿ ಸಭಿಕರಲ್ಲಿ ವಿದ್ಯುತ್ತಂಚಾರವಾದಂತಾಯಿತು! ಪಕ್ಷಧರಮಿಶ್ರ ಪ್ರತಿಭವಾದ! ತನ್ನ ಕಿವಿಗಳೇನಾದರೂ ತನಗೆ ಮೋಸ ಮಾಡುತ್ತಿವೋಯೋ ಎಂದು ಭ್ರಾಂತನಾದ! 

ತಾನು ಮಾಡಿದ ಪೂರ್ವಪಕ್ಷವನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟವಾಗಿರುವಾಗ ನವೀನ ನ್ಯಾಯಶಾಸ್ತ್ರರೀತಿಯಲ್ಲಿ ವಿದ್ವತ್ತೂರ್ಣವಾಗಿ ಅನುವಾದ ಮಾಡಿ, ತನ್ನ ಪಕ್ಷವನ್ನು ಸುಲಭವಾಗಿ ಖಂಡಿಸಿ ಕೋಟಿಕ್ರಮವನ್ನು ಹೇಳಿದನ್ನು ಕಂಡು ಪಕ್ಷಧರಮಿಶ್ರ ಅಚ್ಚರಿಯಿಂದ ದಿಢವಾಗಿ ತಡಬಡಸಹತ್ತಿದ. ಅದುವರೆಗಿದ್ದ ತಾತ್ಸಾರಭಾವ ಮಾಯವಾಗಿ ಶ್ರೀವ್ಯಾಸರಾಜ ಗುರುಗಳಲ್ಲಿ ಒಂದು ಬಗೆಯ ಗೌರವವುಂಟಾಯಿತು. ಸಭಿಕರು ದಕ್ಷಿಣಭಾರತದ ಈ ತರುಣ ಪರಮಹಂಸರು ಪಕ್ಷಧರಮಿಶ್ರನನ್ನೇ ವಿಸ್ಮಯಗೊಳಿಸಿ ಅವನ ಮೇಲೆ ಕೋಟಿಯನ್ನೇರಿಸಿದ್ದನ್ನು ಕಂಡು ಅಚ್ಚರಿಗೊಂಡು ಗುರುಗಳಲ್ಲಿ ಗೌರವಬುದ್ಧಿಯುಳ್ಳವರಾಗಿ ಆ ವಾದವಲ್ಲರಿಬ್ಬರ ವಾಕ್ಯಾರ್ಥವನ್ನು ಕುತೂಹಲದಿಂದ ಆಲಿಸಹತ್ತಿದರು.

ಮೊದಲು ಅಪ್ರತಿಭನಾಗಿ ತಡಬಡಿಸಿದ ಪಕ್ಷಧರಮಿಶ್ರನು ಎಚ್ಚರಗೊಂಡು “ಇವರೇನು ಮಹಾ ಸುಲಭವಾಗಿ ಜಯಿಸಿಬಿಡುತ್ತೇನೆ” ಎಂಬ ಅಹಂಕಾರವನ್ನು ಬಿಟ್ಟು ಇದುವರೆಗೂ ದೊರಕದಿದ್ದ, ತನಗೆ ಸರಿಸಮವಾಗಿ ನಿಂತು ವಾದ ಮಾಡಬಲ್ಲ ಶ್ರೇಷ್ಠರಾದ ಪಂಡಿತರು ದೊರಕಿದರೆಂದು ಸಂತುಷ್ಟನಾಗಿ ದ್ವಿಗುಣಿತ ಉತ್ಸಾಹದಿಂದ ಶ್ರೀಗಳವರು ಹೇಳಿದ ಕೋಟಿಗಳನ್ನು ಖಂಡಿಸಿ ಅವರ ಮೇಲೆ ಅನೇಕ ಕೋಟಿಗಳನ್ನು ಹೇರಿದನು. 

ಆಗ ಶ್ರೀವ್ಯಾಸರಾಜ ಗುರುಚರಣರು ಪಕ್ಷಧರಮಿಶ್ರನೊಡನೆ ನಿಗ್ರಹೋಚ್ಚಾರಣಸಂಧಿಗಳು, ನಿದರ್ಶನ, ಪ್ರತ್ಯುಕ್ತ, ಅನುಸಾಧಕ, ಅನುಮಾನ, ಕುಟಕೋದ್ಧಾರ, ಉಪನಯನ, ನಿಗಮ, ನಿರ್ದೇಶ, ಸರ್ವನಾಮಾನುವಾದನ, ಸಿದ್ಧಿಸಾಧಕ ಪ್ರಯೋಜಕ, ಹೇತ್ವಾಭಾಸ ಮುಂತಾದ ಕ್ರಮದಿಂದ ಚಿಂತಾಮಣಿಕಾರನ ಪದ್ಧತಿಯನ್ನೇ ಅನುಸರಿಸಿ ಅದ್ಭುತ ವಾದ ಮಾಡಿ ಶ್ರೀಗಳವರು ಪಕ್ಷಧರಮಿಶ್ರನ ವಾದವನ್ನು ಶತಶಃ ಖಂಡಿಸಿ ನಿರುತ್ತರಗೊಳಿಸಿ ಸರ್ವರನ್ನೂ ಮೂಕವಿಸ್ಮಿತರನ್ನಾಗಿ ಮಾಡಿದರು. 

ಹೀಗೆ ಸುಮಾರು ಹತ್ತು-ಹನ್ನೆರಡು ದಿನಗಳವರೆಗೆ ವಾದವು ಒಳ್ಳೆ ಭರದಿಂದ ನಡೆದು ಕೊನೆಗೆ ಶ್ರೀವ್ಯಾಸರಾಜರು ಮಿಶ್ರನ ಎಲ್ಲಾ ವಾದಗಳನ್ನು ಶತಶಃ ಖಂಡಿಸಿದ್ದಲ್ಲದೆ ಚಿಂತಾಮಣಿಗ್ರಂಥದ ಮೇಲೆಯೇ ಅನೇಕ ದೋಷಗಳನ್ನು ಹೇಳಿ " ತಮ್ಮ ಪ್ರತಿಭಾಪುಂಜರಂಜಿತ ವಾಗೈಖರಿಯಿಂದ ವಿಜೃಂಭಿಸಿದರು. ಮಿಶ್ರನಿಗೆ ವ್ಯಾಸಯತಿಗಳು ತನ್ನನ್ನೂ ಮೀರಿಸಿದ ಮಹಾನುಭಾವರೆಂಬುದು ಅರ್ಥವಾಯಿತು. “ಚಿಂತಾಮಣಿ"ಯ ಮೇಲೆಯೇ ದೋಷಗಳನ್ನು ಹೇಳಿದ ಯತಿವರ್ಯರ ವಾದವೈಖರಿಯಿಂದ ದಿಬ್ಯೂಢನಾದನು. ಮನಸ್ಸಿಗೆ ಬಹಳ ವ್ಯಾಕುಲವೂ ಆಯಿತು. ಆದ್ದರಿಂದ ಹಟವೂ ಉಂಟಾಯಿತು. ವಿಚಿತ್ರ ಶೈಲಿಯಿಂದ ವಾದಿಸಲಾರಂಭಿಸಿದನು. ವ್ಯಾಸರಾಜರೂ ಅದಕ್ಕೆ ಪ್ರತಿವಾದವನ್ನು ಹೂಡಿದರು. ಬರಬರುತ್ತಾ ಅವನ ವಿದ್ಯೆಯ ಉನ್ಮಾದ ಇಳಿಯಲಾರಂಭಿಸಿತು. ಎಷ್ಟು ಯತ್ನಿಸಿದರೂ ಅವನು ಗುರುಗಳ ವಾದದ ಮುಂದೆ ನಿಲ್ಲಲಾಗದೆ ತಲೆತಗ್ಗಿಸಿ ಕುಳಿತುಬಿಟ್ಟನು. 

ಸಭೆ ನಿಶ್ಯಬ್ದವಾಯಿತು. ತನಗುಂಟಾದ ಅಪಯಶಸ್ಸನ್ನು “ಅದೈತವಿಜಯ'ದಿಂದಾದರೂ ಪರಿಹರಿಸಿಕೊಳ್ಳಲಾಶಿಸಿ ಪಕ್ಷಧರಮಿಶ್ರನು ದೈತಾತ ವಾದವನ್ನಾರಂಭಿಸಿ ದೈತತಶಾಸ್ತ್ರದ ಮೇಲೆ ದುರ್ಧರ ದೋಷಾಭಾಸಗಳನ್ನು ಹೇಳಿ ಶ್ರುತಿ, ಸೂತ್ರಪುರಾಣ, ಗೀತಾದಿ ಸಕಲಶಾಸ್ತ್ರಗಳಿಂದ ಸಿದ್ಧವಾಗುವ ಸಿದ್ಧಾಂತವೆಂದರೆ ಅದೈತ ಸಿದ್ಧಾಂತವೊಂದೇ ಎಂದು ಬಹು ಚಮತ್ಕಾರವಾಗಿ ವಾದಿಸಲಾರಂಭಿಸಿದನು. 

ಶ್ರೀವ್ಯಾಸರಾಜ ಗುರುಗಳು “ಸಿದ್ಧಂ ನಸ್ಸಮೀಹಿತಂ” ಎಂದು ನಗೆಮೊಗದಿಂದ ಮಿಶ್ರನು ಹೇಳಿದ ಎಲ್ಲ ದೋಷಗಳನ್ನೂ ನಿವಾರಿಸಿ ಅದು ದೈತಸಿದ್ಧಾಂತಕ್ಕೆ ಹತ್ತುವುದಿಲ್ಲವೆಂಬುದನ್ನು ಅತಿಕೌಶಲ್ಯಪಾರ್ಣವಾಗಿ ತೋರಿಸಿಕೊಟ್ಟರು. ಇಬ್ಬರೂ ವಾದಮಲ್ಲರು, ಸಕಲಶಾಸ್ತ್ರವಿಶಾರದರು, ಅವರ ವಾದವು ವಿಕೋಪಕ್ಕೆ ಎಡೆಗೊಡದೆ ಶಾಸ್ತ್ರಮರ್ಯಾದೆಯನ್ನು ಉಲ್ಲಂಘಿಸದೆ ಚಾತುರ್ಯಪೂರ್ಣವಾಗಿ ಜರುಗುತ್ತಿದ್ದುದರಿಂದ ಸಹಸ್ರಾರು ಜನರನ್ನು ಅದು ಆಕರ್ಷಿಸುತ್ತಿತ್ತು. ಹತ್ತಾರು ದಿನಗಳ ಪರ್ಯಂತ ಜರುಗಿದ ಆ ಅಪೂರ್ವವಾದ ದೈತಾದ್ವಿತವಾದವು ಕೊನೆಗೊಮ್ಮೆ ಮುಕ್ತಾಯವಾಯಿತು. ವಿಜಯಲಕ್ಷ್ಮಿಯು ಶ್ರೀವ್ಯಾಸರಾಯರಿಗೆ ಮಾಲೆ ಹಾಕಿದಳು. ಜನರು ಶ್ರೀಯವರ ಜಯಜಯಕಾರ ಮಾಡಿದರು. ವಾದಮಧ್ಯಸ್ಥರು, ನಿರ್ಣಯಕಾರರು ಶ್ರೀವ್ಯಾಸತೀರ್ಥರು ವಿಜಯಶಾಲಿಗಳೆಂದು ಘೋಷಿಸಿದರು! ಪಕ್ಷಧರಮಿಶ್ರರು ಗುರುಗಳಿಗೆ ನಮಿಸಿ “ಜಿತೋS ಎಂದರು. ಜನರು ಗಗನಮಂಡಲವೇ ಭೇದಿಸುವಂತೆ ಜಯಧ್ವನಿ ಮಾಡಿದರು. ಪಕ್ಷಧರಮಿಶ್ರನ ಮೇಲಿನ ಈ ದಿಗ್ವಿಜಯವು ಮಾಧ್ವ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ಅಪೂರ್ವ ಘಟನೆಯೆನಿಸಿತು. ಈ ದಿಗ್ವಿಜಯವು ಶ್ರೀವ್ಯಾಸರಾಜರ ವಿಜಯಪರಂಪರೆಯಲ್ಲೇ ಅತ್ಯಂತ ಮಹತ್ವಪೂರ್ಣವಾದುದೆಂದು ಘಂಟಾಘೋಷವಾಗಿ ಹೇಳಬಹುದು. 

ಈ ವಾಕ್ಯಾರ್ಥವೇ ಮುಂದೆ ಶ್ರೀವ್ಯಾಸರಾಜರು “ತರ್ಕತಾಂಡವ' ಗ್ರಂಥವನ್ನು ರಚಿಸಲು ಪ್ರೇರಕವಾಯಿತೆಂದು ಹೇಳಬಹುದು.

ವಿದ್ಯಾಪಕ್ಷಪಾತಿಯಾದ ಮಿಥಿಲಾಪತಿಯು ಶ್ರೀವ್ಯಾಸರಾಜರ ಈ ದಿಗ್ವಿಜಯವನ್ನು ಕೊಂಡಾಡಲು ಒಂದು ದೊಡ್ಡ ಸಮಾರಂಭವನ್ನೇರ್ಪಡಿಸಿದನು. ಅಂದು ರಾಜಯೋಗ್ಯವಾಗಿ ಶ್ರೀವ್ಯಾಸಯತಿಗಳನ್ನು ಮಹಾರಾಜ ಸನ್ಮಾನಿಸಿದನು. 

ಆ ಸಮಾರಂಭದಲ್ಲಿ ಗುಣಗ್ರಾಹಿಯಾದ ಪಕ್ಷಧರಮಿಶ್ರನು ಶ್ರೀವ್ಯಾಸರಾಜರ ಗುಣಗಾನ ಮಾಡಿ ಅವರಂಥ ಪ್ರತಿವಾದಿಗಳನ್ನು, ಸಕಲಶಾಸ್ತ್ರಪಾರಂಗತರನ್ನು ತಾನು ಅದುವರೆಗೆ ಕಂಡಿರಲಿಲ್ಲವೆಂದೂ, ಅಂಥ ಸರ್ವತಂತ್ರಸ್ವತಂತ್ರರೂ, ಪರಮಹಂಸ ಶಿಖಾಮಣಿಗಳೂ, ಪೂಜ್ಯರೂ ಆದ ಶ್ರೀವ್ಯಾಸತೀರ್ಥರಿಂದ ತಾನು ಪರಾಜಿತನಾದುದು ತನಗೆ ಭೂಷಣವೇ! ಎಂದು ಉದ್ಧರಿಸಿ, “ನಾನು ನಾನಾ ರಾಜ್ಯಗಳಲ್ಲಿ ಸಂಚರಿಸಿ ನೂರಾರು ಜನ ಪ್ರಬಲ ಪಂಡಿತರೊಡನೆ ವಾದ ಮಾಡಿ ಜಯ ಗಳಿಸಿದ್ದೇನೆ. ಆದರೆ ಇಂದಿನವರೆಗೂ ನನ್ನನ್ನು ಪರಾಭವಗೊಳಿಸಿದವರಾರೂ ಇರಲಿಲ್ಲ. ಮುಖ್ಯವಾಗಿ ನವೀನ ನ್ಯಾಯಶಾಸ್ತ್ರಕ್ಕೆ ಅತಿಗಳೇ ಅದರಲ್ಲೂ ನಾನೇ ಆಧಾರಸ್ತಂಭನೆಂದು ಭ್ರಮಿಸಿದ್ದೆ. ಇಂದು ನನ್ನ ಭ್ರಮನಿರಸನವಾಯಿತು. ದೈತಮತದ ಈ ಮಹಾವಿಭೂತಿಪುರುಷರು ಅದನ್ನು ಸ್ಪಷ್ಟಪಡಿಸಿದರು. ಇವರು ಸಾಮಾನ್ಯ ಯತಿಗಳಲ್ಲ, ಸಾಕ್ಷಾತ್ ಶ್ರೀವೇದವ್ಯಾಸರೇ ಇವರ ರೂಪದಲ್ಲಿ ಧರೆಗಿಳಿದು ಬಂದಿದ್ದಾರೆಂದು ನಾನು ನಂಬಿದ್ದೇನೆ. ಇವರು ನವೀನವ್ಯಾಸರೆಂದೇ ನಾನು ಗೌರವಿಸುತ್ತೇನೆ” - ಮುಂತಾಗಿ ಮುಕ್ತಕಂಠದಿಂದ ಹೊಗಳಿ - 

ಯದಧೀತಂ ತದಧೀತಂ ಯದನಧೀತಂ ತದಧೀತಮ್ | 

ಪಕ್ಷಧರವಿಪ ನಾವೇಕಿ ವಿನಾ ನವೀನ ವ್ಯಾಸೇನ || 

ನಾನು ಓದಿರುವುದನ್ನೆಲ್ಲಾ ಇವರು ಓದಿದ್ದಾರೆ! ನಾನು ಅಧ್ಯಯನ ಮಾಡದಿರುವುದನ್ನೆಲ್ಲವನ್ನೂ ಇವರು ಅಧ್ಯಯನ ಮಾಡಿದ್ದಾರೆ! ಪ್ರತಿಪಕ್ಷ ಪಂಡಿತರಲ್ಲಿ ನವೀನ ವ್ಯಾಸರಂತೆ” ಕಂಗೊಳಿಸುವ ಈ ಶ್ರೀವ್ಯಾಸರಾಜಸ್ವಾಮಿಗಳಂಥ ಸರ್ವತಂತ್ರಸ್ವತಂತ್ರರಾದ ಸಿದ್ಧಾಂತಸ್ಥಾಪನಾಚಾರ್ಯರನ್ನು ಈ ಪಕ್ಷದರಮಿಶ್ರನು ಎಲ್ಲಿಯೂ ಕಾಣಲಿಲ್ಲ!! ಎಂದು ಉದ್ಗಾರ ತೆಗೆದನು. 

ಮಿಥಿಲೆಯ ರಾಜನು ಶ್ರೀವ್ಯಾಸತೀರ್ಥರನ್ನು ರಾಜೋಚಿತ ರೀತಿಯಲ್ಲಿ ಸನ್ಮಾನಿಸಿ “ಗುರುವರ್ಯರೇ, ತಮ್ಮ ಪಾದಧೂಳಿಯಿಂದ ನನ್ನ ರಾಜ್ಯ ಪಾವನವಾಯಿತು.

ವಿದ್ಯಾವೈಭವದಿಂದ ಸುರಸರಸ್ವತಿಯು ನಮ್ಮ ವಿದ್ಯಾಪೀಠದಲ್ಲಿ ತಾಂಡವಿಸುವಂತಾಯಿತು. ತಾವು ನನ್ನ ಒಂದು ಮನೋರಥವನ್ನು ನೆರವೇರಿಸಿಕೊಟ್ಟು ಅನುಗ್ರಹಿಸಬೇಕು” ಎಂದು ಪ್ರಾರ್ಥಿಸಿದರು. 

ಶ್ರೀವ್ಯಾಸತೀರ್ಥರು “ರಾಜನ್, ನಿನ್ನ ಅಭೀಷ್ಟವೇನು ತಿಳಿಸು. ಸಾಧ್ಯವಾಗುವಂತಿದ್ದರೆ ಪೂರ್ಣ ಮಾಡುವೆವು” ಎಂದೆನಲು ರಾಜನು “ಸ್ವಾಮಿ, ತಾವು ಕುಲಪತಿಗಳಾಗಿದ್ದು, ನಮ್ಮ ವಿದ್ಯಾಪೀಠದ ಕೀರ್ತಿಯನ್ನು ಬೆಳಗಬೇಕು” ಎಂದು ಬಿನ್ನವಿಸಿದನು. 

ಶ್ರೀವ್ಯಾಸಮುನಿಗಳು ಮಂದಹಾಸ ಬೀರಿ “ಮಹಾರಾಜ, ನಮ್ಮಲ್ಲಿ ನೀನಿಟ್ಟಿರುವ ವಿಶ್ವಾಸ-ಗೌರವಗಳನ್ನು ಕಂಡು ಸಂತೋಷವಾಗಿದೆ. ಈ ಮಹಾವಿದ್ಯಾಪೀಠದ ಅಧ್ಯಕ್ಷರಾಗಲು ನಮ್ಮ ಪಕ್ಷಧರಮಿಶ್ರರೊಬ್ಬರೇ ಯೋಗ್ಯರೆಂದು ನಾವು ಭಾವಿಸುತ್ತೇವೆ. ಇವರಂಥ ಪ್ರಕಾಂಡಪಂಡಿತರು ಭಾರತಾವನಿಯಲ್ಲಿ ಬೇರೊಬ್ಬರು ದೊರಕಲಾರರು! ಇದೊಂದು ಅಪೂರ್ವರತ್ನ. ಇದನ್ನು ನೀನು ಕಳೆದುಕೊಳ್ಳಬೇಡ. ನಿನಗೆ ನಮ್ಮಲ್ಲಿ ನಿಜವಾದ ಗೌರವವಿದ್ದರೆ, ಪಕ್ಷಧರಮಿಶ್ರರನ್ನೇ ವಿದ್ಯಾಪೀಠದ ಅಧ್ಯಕ್ಷರನ್ನಾಗಿ ಮಾಡು. ಇವರಿಂದಲೇ ಈ ವಿದ್ಯಾಪೀಠವು ಜಗತ್ತಿನಲ್ಲಿ ಖ್ಯಾತಿಗಳಿಸಿ, ನಿನಗೆ ಅಪಾರ ಕೀರ್ತಿ ದೊರಕುವುದು” ಎಂದು ಕೇಳಿದರು.

ಶ್ರೀಗಳವರ ಉದಾರ ಅಂತಃಕರಣ, ವಿದ್ಯಾಪಕ್ಷಪಾತ, ಸೋತವರಲ್ಲಿ ತೋರುವ ಪ್ರೀತಿ-ವಿಶ್ವಾಸ-ಸೌಹಾರ್ದಗಳನ್ನು ಕಂಡು ಸರ್ವರೂ ಆಶ್ಚರ್ಯಚಕಿತರಾದರು. ಇದರಿಂದ ಮಹಾರಾಜನಿಗೆ ಗುರುಗಳಲ್ಲಿ ವಿಶೇಷ ಗೌರವವುಂಟಾಯಿತು. ಪಕ್ಷಧರಮಿಶ್ರರು ಗುರುವ್ಯಾಸರ ಮಾತು ಕೇಳಿ ರೋಮಾಂಚನಗೊಂಡರು. ತಮ್ಮಲ್ಲಿ ಶ್ರೀಗಳವರು ತೋರಿದ ಅಪಾರ ಗೌರವ-ವಾತ್ಸಲ್ಯಗಳಿಂದ ಅವರ ಕಣ್ಣುಗಳಿಂದ ಆನಂದಾಶ್ರು ಹರಿಯಿತು. ಗದ್ಗದ ಕಂಠದಿಂದ - “ಮಹಾಸ್ವಾಮಿ, ನೀವು ಮಾನವರಲ್ಲ. ನಿಜವಾಗಿಯೂ ನೀವು ತ್ರಿಲೋಕಗುರುಗಳಾದ ಶ್ರೀವೇದವ್ಯಾಸದೇವರ ಮುಖ್ಯಾನುಗ್ರಹಪಾತ್ರರಾದ ದೇವಾಂಶಸಂಜಾತರಾದ ಜಗದ್ಗುರುಗಳು! ಸಾಮಾನ್ಯರಲ್ಲಿ ಇಂಥ ಪಾಂಡಿತ್ಯ ಪ್ರತಿಭೆ, ಕಾರುಣ್ಯ, ಲೋಕಕಲ್ಯಾಣದೀಕ್ಷೆ, ಶಮದಮಾದಿಗುಣಸಂಪತ್ತುಗಳಿರಲು ಸಾಧ್ಯವಿಲ್ಲ! ಇಂದಿನಿಂದ ಈ ಪಾಮರರನ್ನೂ ತಮ್ಮ ಶಿಷ್ಯಕೋಟಿಗೆ ಸೇರಿಸಿಕೊಂಡು ಅನುಗ್ರಹಿಸಬೇಕು” ಎಂದು ವಿಜ್ಞಾಪಿಸಿ ಸಾಷ್ಟಾಂಗ ಪ್ರಣಾಮ ಮಾಡಿದರು. 

ಮಿಥಿಲಾಧಿಪತಿಯು ಶ್ರೀಯವರ ಆಣತಿಯಂತೆ ಪಕ್ಷಧರಮಿಶ್ರರನ್ನು ವಿದ್ಯಾಪೀಠದ ಮಹಾಧ್ಯಕ್ಷರೆಂದು ಘೋಷಿಸಿ ಗೌರವಿಸಿದರು. ಇದರಿಂದ ಸರ್ವರಿಗೂ ಪರಮಾನಂದವಾಯಿತು ಶ್ರೀವ್ಯಾಸತೀರ್ಥರು ಮಿಥಿಲೆಯ ಧಾರ್ಮಿಕರ ಕೋರಿಕೆಯಂತೆ ಅಲ್ಲಿ ಕೆಲತಿಂಗಳು ವಾಸವಾಗಿದ್ದು, ತಮ್ಮ ಉಪದೇಶಾಮೃತದಿಂದ ಸರ್ವರನ್ನೂ ಆನಂದಗೊಳಿಸಿ ವಂಗದೇಶದ ಕಡೆಗೆ ಸಂಚಾರ ಹೊರಟರು.