|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ನಾಲ್ಕನೆಯ ಉಲ್ಲಾಸ

ಶ್ರೀವ್ಯಾಸರಾಜಯತಿಸಾರ್ವಭೌಮರು

೨೮. ಶ್ರೀಪಾದರಾಜ ಪ್ರಶಸ್ತಿ

ಕ್ರಿ.ಶ. ೧೪೭೦ರ ಹೊತ್ತಿಗಾಗಲೇ ಚಂದ್ರಗಿರಿಯ ರಾಜನೂ, ಮುಳಬಾಗಿಲು ಪೆನಗೊಂಡೇ ಮಂಡಲಗಳ ಮಹಾಮಂಡಲಾಧಿಪತಿಯೂ, ಕನ್ನಡ ಸಾಮ್ರಾಜ್ಯ ಧುರಂಧರನೂ ಆಗಿದ್ದ ಸಾಳುವ ನರಸಿಂಹ ಭೂಪಾಲನು ಅತ್ಯಂತ ಪ್ರಬಲನಾಗಿದ್ದನು. ಶ್ರೀಲಕ್ಷ್ಮೀನಾರಾಯಣಮುನಿಗಳ ಅನುಗ್ರಹದಿಂದಲೇ ತಾನು ಇಂತು ಅಭಿವೃದ್ಧಿಸಿ ಕೀರ್ತಿ ಗಳಿಸಿರುವನೆಂದು ಅವನು ಭಾವಿಸಿದ್ದನು. ಅಂತೆಯೇ ಶ್ರೀಪಾದಂಗಳವರನ್ನು ವಿಶೇಷ ರೀತಿಯಿಂದ ಸೇವಿಸಿ, ಗೌರವಿಸಬೇಕೆಂದು ಅವನು ಆಶಿಸಿದ್ದನು. ಸ್ವಾಭಾವಿಕವಾಗಿ ವಿದ್ವಜ್ಜನ ಪಕ್ಷಪಾತಿಯಾದ ಅವನ ಒಲವು ಯಾವಾಗಲೂ ವಿದ್ಯೆಯತ್ತಲೇ ಇದ್ದಿತು. ಭಾರತದ ಅನೇಕ ವಿದ್ಯಾಕೇಂದ್ರಗಳ ವಿಚಾರ ಕೇಳಿ ತಿಳಿದಿದ್ದ ಅವನಿಗೆ ಮೊದಲಿನಿಂದಲೂ ವಿದ್ಯೆ, ಕಲೆಗಳಿಗೆ ತವರುಮನೆಯೆನಿಸಿದ್ದ ಕರ್ನಾಟಕದಲ್ಲಿ ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠವಾದ ಒಂದು ವಿಶ್ವವಿದ್ಯಾನಿಲಯವನ್ನು ಪ್ರಾರಂಭಿಸಿ ನಡೆಸಿಕೊಂಡು ಬಂದು, ಸಕಲ ವಿದ್ಯೆಗಳಿಗೆ ಪ್ರೋತ್ಸಾಹ ನೀಡಬೇಕೆಂದು ಅವನು ತವಕಿಸುತ್ತಿದ್ದನು. ಆದ್ದರಿಂದಲೇ ಸಾಳುವ ನರಸಿಂಹಭೂಪತಿಯು ಲಕ್ಷ್ಮೀನಾರಾಯಣಮುನಿಗಳನ್ನು ಶ್ರೀರಂಗದಿಂದ ಮುಳುಬಾಗಿಲಿಗೆ ಕರೆತಂದು ಅವರ ಅಧ್ಯಕ್ಷತೆಯಲ್ಲಿ ಒಂದು ವಿದ್ಯಾಪೀಠವನ್ನು ಸ್ಥಾಪಿಸಿ ಅದಕ್ಕೆ ಬೇಕಾದ ಸಕಲ ಸೌಕರ್ಯಗಳನ್ನು ಏರ್ಪಡಿಸಿಕೊಟ್ಟಿದ್ದನು. ಅದು ಈಗಾಗಲೇ ದಕ್ಷಿಣಭಾರತದಲ್ಲಿ ಪ್ರಖ್ಯಾತಿ ಪಡೆದಿದ್ದಿತು. ಅದು ಮತ್ತಷ್ಟು ಅಭಿವೃದ್ಧಿಸಬೇಕಾದರೆ ಅಲ್ಲಿ ಆಗಾಗ್ಗೆ ಅಖಿಲಭಾರತದ ಷಡರ್ಶನ ವಿದ್ವನ್ಮಹಾಸಭೆಗಳನ್ನು ನೆರವೇರಿಸಬೇಕೆಂದು ಅವನು ಮನಸಾ ಸಂಕಲ್ಪಿಸಿದ್ದನು. ಇವೆಲ್ಲ ಹಿನ್ನೆಲೆಯನ್ನೂ ನರಸಿಂಹರಾಜನು ತನ್ನ ಗುರುಗಳಾದ ಶ್ರೀಲಕ್ಷ್ಮೀನಾರಾಯಣಮುನಿಗಳಲ್ಲಿ ವಿಜ್ಞಾಪಿಸಿದನು. ವಿದ್ಯೆಗಳ ಬಗೆಗೆ, ವಿದ್ವಾಂಸರ ವಿಷಯವಾಗಿ ಅವನಿಗಿರುವ ಅಭಿಮಾನವನ್ನು ಕಂಡು ಹರ್ಷಿಸಿ, ಶ್ರೀಗಳವರು ಅವನನ್ನು ಪ್ರೋತ್ಸಾಹಿಸಿದರು ಮತ್ತು ಈ ಮಹಾಸಭೆಯು ತಮ್ಮ ಪೂಜ್ಯ ಗುರುಪಾದರಾದ ಶ್ರೀವಿಬುಧೇಂದ್ರತೀರ್ಥ ಯತಿಸಾರ್ವಭೌಮರ ಮಹಾಧ್ಯಕ್ಷತೆಯಲ್ಲಿ ಜರುಗಿದರೆ ಅದಕ್ಕೆ ಹೆಚ್ಚು ಮಹತ್ವ ಪ್ರಾಪ್ತವಾಗುವುದೆಂದು ನಿಶ್ಚಯಿಸಿದ ಶ್ರೀಗಳವರು ನರಸಿಂಹರಾಜರಿಗೆ ಶ್ರೀವಿಬುಧೇಂದ್ರ ಗುರುಗಳ ಮಹತ್ವ, ಮಹಿಮಾದಿಗಳನ್ನು ನಿರೂಪಿಸಿ, ರಾಜನ ಸುಕೃತಫಲವಾಗಿಯೋ ಎಂಬಂತೆ ಉತ್ತರಭಾರತ ತೀರ್ಥಕ್ಷೇತ್ರ ಸಂಚಾರದಲ್ಲಿದ್ದ ಗುರುಗಳು ಇದೀಗ ತಾನೇ ಕುಂಭಕೋಣಕ್ಕೆ ದಯಮಾಡಿಸಿರುವ ವಿಚಾರವನ್ನೂ ತಿಳಿಸಿ ಮಹಾಧ್ಯಕ್ಷತೆ ವಹಿಸಲು ಅವರನ್ನು ಆಹ್ವಾನಿಸಬೇಕೆಂದು ಆಜ್ಞಾಪಿಸಿದರು. 

ನರಸಿಂಹ ಭೂಪಾಲನು ತನ್ನ ಆತ್ಮೀಯ ಅಧಿಕಾರಿಗಳನ್ನೂ, ಶ್ರೀಪಾದಂಗಳವರ ಮಠದ ಪಂಡಿತರನ್ನೂ ತನ್ನ ಮತ್ತು ಶ್ರೀಗಳವರ ವಿಜ್ಞಾಪನಾಪತ್ರಗಳೊಡನೆ ಕುಂಭಕೋಣಕ್ಕೆ ಕಳುಹಿಸಿ ಶ್ರೀವಿಬುಧೇಂದ್ರ ಗುರುಗಳನ್ನು ಕರೆಯಿಸಿಕೊಂಡನು. ಪ್ರಿಯಶಿಷ್ಯರನ್ನು ಬಹುವರ್ಷಗಳ ಮೇಲೆ ಕಂಡು ಗುರುಪಾದರು ಅವರನ್ನು ಭರದಿಂದಪ್ಪಿ ಆನಂದಬಾಷ್ಪ ಸುರಿಸಿದರು. ಶ್ರೀಲಕ್ಷ್ಮೀನಾರಾಯಣಮುನಿಗಳು ಗುರುಗಳಿಗೆ ಪದೇ ಪದೇ ಪ್ರಣಾಮ ಮಾಡಿ ತಮ್ಮ ಗುರುಭಕ್ತಿಯನ್ನು ಸಮರ್ಪಿಸಿದರು. 

* ಸುಲ್ತಾನ ಬಹಲೂಲ್ ಲೂದಿಯ ಮಗನು ಮೃತನಾದನೆಂದು ಅವನ ಗೋರಿ ಮಾಡಿದ್ದಾಗ ಶ್ರೀವ್ಯಾಸರಾಜಗುರುಗಳು ರಾಜಕುಮಾರನು ಸತ್ತಿಲ್ಲವೆಂದು ಹೇಳಿ ಲೂದಿಯ ಸಮಕ್ಷ ಗೋರಿಯಿಂದ ರಾಜಕುಮಾರನ ಕಳೇಬರವನ್ನು ತೆಗೆಸಿ ಕಮಂಡಲೋದಕವನ್ನು ಪ್ರೋಕ್ಷಿಸಿ ಶ್ರೀಹರಿಯ ಅನುಗ್ರಹದಿಂದ ಅವನನ್ನು ಉಜೀವನಗೊಳಿಸಿ ಹಿಂದೂಧರ್ಮ-ಮಂತ್ರಗಳ ಪ್ರಭಾವವನ್ನು ತೋರಿದರೆಂದೂ ಅದರಿಂದ ಪ್ರೀತನಾದ ಸುಲ್ತಾನ ಗುರುಗಳಿಗೆ ಒಂಟೆಯ ಮೇಲೆ ಹಸಿರು ಭತ್ರಿಯ ಗೌರವ ಸಲ್ಲಿಸಿದನೆಂದೂ ಒಂದು ಕಥೆಯಿದೆ.

ಗುರುಗಳು ಬಂದಿದ್ದರಿಂದ ಶ್ರೀಗಳವರಿಗೆ ಚತುರ್ಭುಜವಾದಂತಾಯಿತು. ಸಾಳುವ ನರಸಿಂಹನು ಮುಳಬಾಗಿಲಿನಲ್ಲಿ ದಕ್ಷಿಣಭಾರತದ ಸಕಲ ವಿದ್ವಜ್ಜನರನ್ನು ಕರೆಯಿಸಿಕೊಂಡು ಷಡರ್ಶನ ವಿದ್ವನ್ಮಹಾಸಮ್ಮೇಳನವನ್ನು ಜರುಗಿಸಿದನು. 

ಶ್ರೀವಿಬುಧೇಂದ್ರಗುರುಗಳ ಮಹಾಧ್ಯಕ್ಷತೆಯಲ್ಲಿ ಸಭೆಯು ಪ್ರಾರಂಭವಾಯಿತು. ಅದೊಂದು ಅಭೂತಪೂರ್ವ ವಿದ್ದತ್ಸಭೆಯಾಗಿತ್ತು. ಜಗಜೇತಾರ ವಾದಮಲ್ಲರೂ, ಸರಸ್ವತಿಯ ಅಪರಾವತಾರರೂ, ಶ್ರೀಮಧ್ವಾಚಾರ್ಯರ ಮಹಾಸಂಸ್ಥಾನ ಸಾರ್ವಭೌಮರೂ ಆದ ಶ್ರೀವಿಬುಧೇಂದ್ರತೀರ್ಥರೇ ಮಹಾಧ್ಯಕ್ಷರಾಗಿದ್ದುದು ಅದಕ್ಕೆ ಕಾರಣವಾಗಿತ್ತು. ದಕ್ಷಿಣಭಾರತದ ಎಲ್ಲ ಭಾಗಗಳಿಂದ, ವಿದ್ಯಾಕೇಂದ್ರಗಳಿಂದ ಸಕಲಶಾಸ್ತ್ರಪಾರೀಣರಾದ ಪಂಡಿತ ಪ್ರಕಾಂಡರು, ಕವಿಗಳು, ಸಾಹಿತಿಗಳು, ಕಲೆಗಾರರು, ಹರಿದಾಸಪಂಥದವರುಗಳಲ್ಲದೆ ಅನೇಕ ಪೀಠಾಧೀಶರು, ಪರಮಹಂಸರುಗಳೂ ನೂರಾರು ಜನರು ಎಲ್ಲ ಭಾಗಗಳಿಂದ ಈ ಅಪೂರ್ವ ವಿದ್ವತ್ಸಭೆಯಲ್ಲಿ ಭಾಗವಹಿಸಲು ಆಸ್ತಿಕರೂ ಸಹಸ್ರಸಂಖ್ಯೆಯಲ್ಲಿ ಮುಳಬಾಗಿಲಿಗೆ ಬಂದು ಸೇರಿದ್ದರು. ಸಂತೋಷ-ಸಂಭ್ರಮಗಳಿಂದ ವಿದ್ವತ್ಸಭೆಯು ವೈಭವದಿಂದ ಪ್ರಾರಂಭವಾಯಿತು. 

ಹನ್ನೆರಡು ದಿನಗಳವರೆಗೆ ಜರುಗಿದ ಈ ವಿದ್ವತ್ಸಭೆಯು ಎಲ್ಲ ವಿಧದಿಂದಲೂ ಅಪೂರ್ವವೇ ಆಗಿದ್ದಿತು. ಕರ್ನಾಟಕ ಸಾಮ್ರಾಜ್ಯದ ಪ್ರಬಲ ಮುತ್ಸದ್ದಿಯೂ, ಮಹಾರಾಜನೂ ಆದ ಸಾಳುವ ನರಸಿಂಹ ಭೂಪಾಲನೇ ಮುಂದಾಳಾಗಿ ನಿಂತು ನೆರವೇರಿಸುತ್ತಿದ್ದುದರಿಂದ ಯಾವುದಕ್ಕೂ ಕೊರತೆ ಎಂಬುದೇ ಇರಲಿಲ್ಲ. 

ಪ್ರತಿದಿನವೂ ವಿವಿಧ ಶಾಸ್ತ್ರಗಳಲ್ಲಿ ವಾಕ್ಯಾರ್ಥಗಳಾಗುತ್ತಿದ್ದಿತು. ನೂರಾರು ಜನ ವಿದ್ಯಾರ್ಥಿಗಳು ವಿವಿಧ ವಿದ್ಯೆಗಳಲ್ಲಿ ಪರೀಕ್ಷೆ ಕೊಡುತ್ತಿದ್ದರು. ಅಷ್ಟಾವಧಾನ, ಶತಾವಧಾನಗಳೂ, ಆಶುಕವಿತಾಸ್ಪರ್ಧೆಗಳೂ, ಸಂಗೀತ, ಹರಿದಾಸ ಸಮ್ಮೇಳನಾದಿಗಳೂ ಜರುಗುತ್ತಿದ್ದವು. ಶ್ರೀಲಕ್ಷ್ಮೀನಾರಾಯಣಮುನಿಗಳು ಪ್ರತಿಯೊಂದು ಶಾಸ್ತ್ರಗಳಲ್ಲಿ ತೋರುತ್ತಿದ್ದ ಪ್ರತಿಭೆ, ವಾದವೈಖರಿ, ಪರೀಕ್ಷಿಸುವ ಶೈಲಿ ಇವುಗಳೆಲ್ಲವನ್ನೂ ಕಂಡು ವಿದ್ವನ್ಮಂಡಲಿ, ಪೀಠಾಧೀಶರು, ಪರಮಹಂಸರು ವಿಸ್ಮಿತರಾಗುತ್ತಿದ್ದರು. ಶ್ರೀವಿಬುಧೇಂದ್ರತೀರ್ಥರೇ, ಪ್ರಿಯಶಿಷ್ಯರ ಅಗಾಧ ಪ್ರಜ್ಞಾತಾಂಡವ ಪ್ರತಿಭಾದಿಗಳನ್ನು ಕಂಡು ಮುಗ್ಧರಾಗುತ್ತಿದ್ದರೆಂದ ಮೇಲೆ ಉಳಿದವರ ಪಾಡೇನು ? 

ಇದೇ ಸಂದರ್ಭದಲ್ಲಿ ಶ್ರೀಲಕ್ಷ್ಮೀನಾರಾಯಣಮುನಿಗಳು ತಾವು ರಚಿಸಿದ್ದ “ವಾಗ” ಎಂಬ ಶ್ರೀಮನ್ಯಾಯಸುಧಾ- ಗ್ರಂಥದ ಮೇಲಿನ ವಿದ್ದತ್ತೂರ್ಣವೂ, ಪ್ರೌಢವೂ ಆದ ವಾದಗ್ರಂಥರತ್ನವನ್ನು ಗುರುಗಳ ಆಜ್ಞೆಯಂತೆ ಸಭೆಯಲ್ಲಿ ಮೂರು-ನಾಲ್ಕು ದಿನಗಳ ಕಾಲ ಅನುವಾದ ಮಾಡಿ ಸಕಲ ವಿದ್ವಜ್ಜನರನ್ನೂ, ಧಾರ್ಮಿಕರನ್ನೂ, ಸಹಸ್ರಾರು ಸಭಿಕರನ್ನೂ ಪರಮಾನಂದಗೊಳಿಸಿದರು. ವಿಬುಧೇಂದ್ರ ಗುರುಗಳು ವಾಗ್ವಜ್ರಗ್ರಂಥವನ್ನು ಸ್ವಹಸ್ತದಿಂದ ಪ್ರಕಾಶಗೊಳಿಸಿದರು. ಶ್ರೀಗಳವರ ವಿದ್ಯಾವೈಭವ ಗ್ರಂಥರಚನಾಚಾತುರ್ಯ, ಸಿದ್ಧಾಂತಸ್ಥಾಪನೆಗಳ ಜಾಣ್ಮಗಳಿಂದ ಅತ್ಯಂತ ಪ್ರಭಾವಿತರಾದ ವಿದ್ವಜ್ಜನರು, ಸನ್ಯಾಸಿಗಳು, ಪೀಠಾಧೀಶರುಗಳು ಶ್ರೀಗಳವರ ಕೃತಿಯು ಸಾರ್ವಕಾಲಿಕವಾಗಿ ನಿಂತು ದೈತಸಿದ್ಧಾಂತದ ವಿಜಯಪತಾಕೆಯಂತೆ ಮೆರೆಯುವ ಅಮೋಘ ಗ್ರಂಥರಾಜವಾಗಿದೆಯೆಂದು ಕೊಂಡಾಡಿದರು. ಮಾತ್ರವಲ್ಲ, ಇಂಥ ಅಪೂರ್ವಕೃತಿಯನ್ನು ರಚಿಸಿದ ಗುರುವರ್ಯರನ್ನು ಸರಿಯಾದ ರೀತಿಯಲ್ಲಿ ಸನ್ಮಾನಿಸಬೇಕೆಂದು ಆಶಿಸಿ, ತಮ್ಮ ಬಯಕೆಯನ್ನು ಸಾಳುವ ನರಸಿಂಹರಾಜ ಮತ್ತು ಗುರುಪಾದರಾದ ಶ್ರೀವಿಬುಧೇಂದ್ರತೀರ್ಥರಲ್ಲಿ ವಿಜ್ಞಾಪಿಸಿದರು. ಮಹಾರಾಜನಿಗೆ ಪರಮಾನಂದವಾಯಿತು. ಶ್ರೀವಿಬುಧೇಂದ್ರಗುರುಗಳಿಗಾದ ಹರ್ಷವಂತೂ ವರ್ಣಿಸಲಸದಳ ! 

ಶ್ರೀವಿಬುಧೇಂದ್ರ ಗುರುಗಳ ಅಮೃತಹಸ್ತದಿಂದ ಮರುದಿನ ಶ್ರೀಲಕ್ಷ್ಮೀನಾರಾಯಣಮುನಿಗಳನ್ನು ರಾಜವೈಭವದೊಡನೆ ಸನ್ಮಾನಿಸುವುದೆಂದು ತೀರ್ಮಾನಿಸಲಾಯಿತು. 

ಮರುದಿನ ವಿದ್ದನ್ನ ಹಾಸಭೆಯ ಮುಕ್ತಾಯ ಸಮಾರಂಭಕಾಲದಲ್ಲಿ ಶ್ರೀವಿಬುಧೇಂದ್ರತೀರ್ಥ ಶ್ರೀಪಾದಂಗಳವರು ಪ್ರಾಸ್ತಾವಿಕ ಭಾಷಣ ಮಾಡಿ ತಮ್ಮ ಶಿಷ್ಯರ ಸರ್ವಂಕಷ ಪಾಂಡಿತ್ಯ, ಪ್ರತಿಭೆ, ಗ್ರಂಥರಚನಾ ಚಾತುರ್ಯ, ಅವರು ನಡೆಸಿಕೊ೦ಡು ಬರುತ್ತಿರುವ ವಿದ್ಯಾಪೀಠದ ಮಹತ್ವಾದಿಗಳನ್ನು ನಿರೂಪಿಸಿ, “ವಾಗ'ದಂತಹ ಅಸಾಧಾರಣ ಶಾಸ್ತ್ರೀಯ ಗ್ರಂಥರತ್ನವನ್ನು ರಚಿಸಿ, ದೈತಸಿದ್ಧಾಂತಕ್ಕೆ ಅವಿಸ್ಮರಣೀಯ ಕೊಡುಗೆಯನ್ನಿತ್ತಿರುವ ಪ್ರಿಯಶಿಷ್ಯರಿಗೆ “ಯತಿಚಕ್ರವರ್ತಿ” ಎಂಬ ಪ್ರಶಸ್ತಿಯನ್ನು ತಮ್ಮ ಮೂಲಕ ಕೊಡಿಸಿ ಸನ್ಮಾನಿಸಲು ಮಹಾರಾಜರು, ಪೀಠಾಧೀಶರು, ಯತಿಗಳು, ಸಕಲ ಪಂಡಿತರೂ ನಿಶ್ಚಯಿಸಿರುವ ವಿಚಾರವನ್ನು ಸಂತೋಷಭರದಿಂದ ನಿರೂಪಿಸಿದರು. 

ಶ್ರೀಲಕ್ಷ್ಮೀನಾರಾಯಣಮುನಿಗಳು ಮೇಲೆದ್ದು ನಿಂತು “ದೈತಸಿದ್ಧಾಂತಕ್ಕೆ ಚಕ್ರವರ್ತಿಗಳು ಒಬ್ಬರೇ! ಅವರೇ ನಮ್ಮ ಪೂಜ್ಯ ಗುರುಪಾದರಾದ ಶ್ರೀವಿಬುಧೇಂದ್ರಗುರುಸಾರ್ವಭೌಮರು! ಅವರಂಥ ಮಹಾನುಭಾವರು ವಿರಾಜಿಸುತ್ತಿರುವಾಗ ಅವರ ಅನುಗ್ರಹೋಪಜೀವಿಗಳೂ, ಶಿಷ್ಯರೂ ಆದ ತಾವೆಂತು ಯತಿಚಕ್ರವರ್ತಿಗಳಾಗಲು ಸಾಧ್ಯ? ಇದು ಗುರುಗಳ ಶಿಷ್ಯವಾತ್ಸಲ್ಯದ್ಯೋತಕವಾಗಿದೆ. ಈ ಮಹಾಪ್ರಶಸ್ತಿಯನ್ನು ನಾವು ಸ್ವೀಕರಿಸುವುದು ಗುರುದ್ರೋಹವಾದೀತು. ಆದುದರಿಂದ ಗುರುಪಾದರು, ಮಹಾಪ್ರಭುಗಳು, ಯತಿವರ್ಯರು ಪಂಡಿತರ ಈ ವಿಚಾರವನ್ನು ಬಿಡಬೇಕೆಂದು ಆಶಿಸುತ್ತೇವೆ” ಎಂದು 

ವಿನಯದಿಂದ ನಿರೂಪಿಸಿದರು. 

ಸರ್ವರೂ ಶ್ರೀಗಳವರ ಗುರುಭಕ್ತಿ, ನಿಸ್ವಾರ್ಥ ಬುದ್ಧಿಗಳನ್ನು ಕಂಡು ಗುರುಗಳ ಗುಣಗಾನ ಮಾಡಿದರು. ಶ್ರೀವಿಬುಧೇಂದ್ರತೀರ್ಥ ಶ್ರೀಪಾದಂಗಳವರು ಸುಪ್ರೀತರಾಗಿ ಮಂದಹಾಸ ಬೀರುತ್ತಾ “ನಮ್ಮ ಪ್ರಿಯಶಿಷ್ಯರು ದೈತಸಿದ್ಧಾಂತಕ್ಕೆ ಒಬ್ಬರೇ ಚಕ್ರವರ್ತಿಗಳೆಂದು ಹೇಳಿ ತಮ್ಮ ಗುರುಭಕ್ತಿಯನ್ನು ತೋರಿದ್ದಾರೆ, ಸಂತೋಷ. ಚಕ್ರವರ್ತಿಯು ಒಬ್ಬನಾದರೂ ದೈತಸಿದ್ಧಾಂತ ರಾಜ್ಯದ ಭಾವಿ ಚಕ್ರವರ್ತಿಯಾದ ಯುವರಾಜನಿರಬಹುದಲ್ಲವೇ ? ದೈತಸಿದ್ಧಾಂತವನ್ನು ಕಾಪಾಡಿಕೊಂಡು ಬಂದು ಪರಮಹಂಸಕುಲದೀಪಕರಾಗಿ ಮೆರೆಯುತ್ತಿರುವ ನಮ್ಮ ಪ್ರಿಯಶಿಷ್ಯರು ಇಂದು ಪರಮಹಂಸಕುಲದ “ಯುವರಾಜರಾಗಿದ್ದಾರೆ. ಅದನ್ನಂತೂ ಅವರು ಅಲ್ಲಗಳೆಯುವಂತಿಲ್ಲ, ಆದ್ದರಿಂದ ಭಾವಿ “ಯತಿಚಕ್ರವರ್ತಿ” ಸ್ಥಾನದಲ್ಲಿರುವ ಶ್ರೀಲಕ್ಷ್ಮೀನಾರಾಯಣಮುನಿಗಳು; ನಾವೀಗ ಸರ್ವಯತಿಗಳ, ಪಂಡಿತರ, ಮಹಾರಾಜರ ಅಪೇಕ್ಷೆಯಂತೆ ಅನುಗ್ರಹಿಸಲಿರುವ “ಶ್ರೀಪಾದರಾಜರು” ಎಂಬ ಪ್ರಶಸ್ತಿಯನ್ನು ಸ್ವೀಕರಿಸಿ ಸರ್ವರನ್ನೂ ಸಂತೋಷಪಡಿಸುವರೆಂದು ನಾವು ನಂಬಿದ್ದೇವೆ” ಎಂದು ಆಜ್ಞಾಪಿಸಿದರು. ಸಮಸ್ತ ಸಭೆಯು 

ಪರಮಹರ್ಷದಿಂದ ಜಯಜಯಕಾರ ಕರತಾಡನ ಮಾಡಿತು. 

ಆಗ ಶ್ರೀಲಕ್ಷ್ಮೀನಾರಾಯಣಮುನಿಗಳು ನಸುನಕ್ಕು, “ಗುರುಗಳ ಆಜ್ಞೆಯನ್ನು ಶಿರಸಾ ಧರಿಸಿದ್ದೇವೆ” ಎಂದು ಬಿನ್ನವಿಸಿದರು. 

ಆನಂದೋತ್ಸಾಹಭರಿತನಾದ ಸಾಳುವ ನರಸಿಂಹ ಭೂಪಾಲನು ಧನಕನಕಮುಕ್ತಾಮಾಲೆ, ಶಾಲುಜೋಡಿ, ಪಟ್ಟೆ-ಪೀತಾಂಬರಾದಿಗಳನ್ನು ತಂದು ಶ್ರೀವಿಬುಧೇಂದ್ರಮುನಿಗಳಿಗೆ ಸಮರ್ಪಿಸಿದ. ಶ್ರೀವಿಬುಧೇಂದ್ರತೀರ್ಥರು ಮಂಗಳವಾದ್ಯ, ವೇದಘೋಷ, ಜಯಜಯಕಾರಗಳಾಗುತ್ತಿರಲು ತಮ್ಮ ಪ್ರಿಯಶಿಷ್ಠರಿಗೆ “ಶ್ರೀಪಾದರಾಜ” ಎಂಬ ಮಹಾಪ್ರಶಸ್ತಿಯನ್ನು ಅನುಗ್ರಹಿಸಿ, ಆಶೀರ್ವದಿಸಿದರು. ಆನಂತರ ಪೀಠಾಧೀಶರು, ಸನ್ಯಾಸಿಗಳು, ಪಂಡಿತರು, ಧಾರ್ಮಿಕರು ಒಬ್ಬೊಬ್ಬರಾಗಿ ಶ್ರೀಪಾದಂಗಳವರಿಗೆ ಭಕ್ತಿ ಕಾಣಿಕೆಗಳನ್ನು ಸಮರ್ಪಿಸಿ ಕೃತಕೃತ್ಯರಾದರು. 

ಆನಂತರ ಶ್ರೀವಿಬುಧೇಂದ್ರ ಗುರುವರ್ಯರು ವಿದ್ದತ್ತೂರ್ಣವಾಗಿ ಅಧ್ಯಕ್ಷ ಪೀಠದ ಪರವಾಗಿ ಉಪದೇಶ ಭಾಷಣ ಮಾಡಿದ ಮೇಲೆ ಸಮಸ್ತ ಪೀಠಾಧೀಶರು, ಸನ್ಯಾಸಿಗಳು, ಪಂಡಿತರು, ಕವಿಗಳು, ಕಲೆಗಾರರು, ಹರಿದಾಸರು, ವಿದ್ಯಾರ್ಥಿಗಳಿಗೆ ಉದಾರವಾಗಿ ಶಾಲು, ಮಡಿ, ಪೀತಾಂಬರ, ಕನಕಾಭರಣ, ರಜತಪಾತ್ರೆ ಮತ್ತು ಸಂಭಾವನೆಗಳನ್ನು ಶ್ರೀವಿಬುಧೇಂದ್ರತೀರ್ಥರು “ಶ್ರೀಪಾದರಾಜ ಬಿರುದಾಂಕಿತ ಶ್ರೀಲಕ್ಷ್ಮೀನಾರಾಯಣಮುನಿಗಳಿಂದ ಕೊಡಿಸಿ ಸರ್ವರನ್ನೂ ಆನಂದಗೊಳಿಸಿದರು. 

ಸದ್ದಿದ್ಯಾಶ್ರಯ” ಎಂಬ ಕೀರ್ತಿ ಗಳಿಸಿ ಸಾಳುವ ನರಸಿಂಹ ಭೂಪಾಲನು ಸಕಲರ ಶ್ಲಾಘನೆಗೆ ಪಾತ್ರನಾದನು. 

ಲಕ್ಷ್ಮೀನಾರಾಯಣಮುನಿಃ ವ್ಯಾಸದೇಶಿಕದೈಶಿಕಃ | ಯಸ್ಮಾತ್ ಶ್ರೀಪಾದರಾಜಾಖಃ ಹೃದಗೀತ್ಸಕಲಾಗಮಾನ್ || - ಶ್ರೀರಾಘವೇಂದ್ರಮಠಗತಾರ್ಚಾಗತಿಕ್ರಮಃ ಇದರಂತೆ "ಶ್ರೀಲಕ್ಷ್ಮೀನಾರಾಯಣಮೌನಿಂದ್ರಗುಣರತ್ನಮಾಲಾ” ಮತ್ತು ಶ್ರೀವಿಬುಧೇಂದ್ರವಿಜಯಗಳಲ್ಲಿ ಈ ವಿಚಾರವು ಸುಂದರವಾಗಿ ನಿರೂಪಿತವಾಗಿವೆ ನರಸಿಂಹ ಭೂಪಾಲನು ಭಕ್ತಿವಿನಮ್ರನಾಗಿ ಶ್ರೀವಿಬುಧೇಂದ್ರತೀರ್ಥರು, ಲಕ್ಷ್ಮೀನಾರಾಯಣಮುನಿಗಳು, ಇತರ ಪೀಠಾಧೀಶರು, ಸನ್ಯಾಸಿಗಳು, ಪಂಡಿತರುಗಳಿಗೆ ತನ್ನ ಕೃತಜ್ಞತೆಯನ್ನು ಸಮರ್ಪಿಸಿ ವಂದನಾರ್ಪಣೆ ಮಾಡಿದ ಮೇಲೆ ಅಭೂತಪೂರ್ವವಾದ ಷಡರ್ಶನೀ ವಿದ್ವನ್ಮಹಾ ಸಮ್ಮೇಳನವು ಮುಕ್ತಾಯವಾಯಿತು. 

ಶ್ರೀವಿಬುಧೇಂದ್ರ ಗುರುಗಳು ಶಿಷ್ಯರ ಒತ್ತಾಯದಿಂದ ಕೆಲದಿನಗಳು ಮುಳಬಾಗಿಲಿನಲ್ಲಿದ್ದು, ನಂತರ ಮಹಾಸಂಸ್ಥಾನದೊಡನೆ ದಕ್ಷಿಣಭಾರತ ತೀರ್ಥಯಾತ್ರೆಗೆ ದಿಗ್ವಿಜಯ ಮಾಡಿದರು. 

ಮುಳಬಾಗಿಲಿನಲ್ಲಿ ವಿದ್ವತ್ತಭೆ ಮುಗಿದು ನಾಲ್ಕಾರು ತಿಂಗಳುಗಳಾದ ಮೇಲೆ ಸಾಳುವ ನರಸಿಂಹ ಭೂಪಾಲನು ಲಕ್ಷ್ಮೀನಾರಾಯಣಮುನಿಗಳನ್ನು ಚಂದ್ರಗಿರಿಯ ತನ್ನ ಆಸ್ಥಾನಕ್ಕೆ ಕರೆಯಿಸಿಕೊಂಡು ಗುರುಗಳನ್ನು ಸಕಲ ರಾಜಗೌರವದಿಂದ ಸ್ವಾಗತಿಸಿ ಸುವರ್ಣಪಲ್ಲಕ್ಕಿಯಲ್ಲಿ ಅವರನ್ನು ಮಂಡಿಸಿ ಮೆರವಣಿಗೆಯಿಂದ ಅರಮನೆಗೆ ಕರೆತಂದು ಬಿಡಾರ ಮಾಡಿಸಿದನು. ಪ್ರತಿನಿತ್ಯ ಗುರುಗಳನ್ನು ವಿವಿಧ ರೀತಿಯಿಂದ ಸತ್ಕರಿಸುತ್ತಾ ಅವರಿಂದ ತತ್ವ-ಧರ್ಮೋಪದೇಶ, ರಾಜನೀತಿಗಳಲ್ಲಿ ಸಲಹೆಗಳನ್ನು ಪಡೆಯುತ್ತಾ ಕೃತಾರ್ಥನಾದನು. 

ಒಂದು ದಿನ ಶುಭಮುಹೂರ್ತದಲ್ಲಿ ಶ್ರೀಲಕ್ಷ್ಮೀನಾರಾಯಣ, ಯೋಗೀಂದ್ರರನ್ನು ತನ್ನ ಅರಮನೆಯಲ್ಲಿ ಸಕಲ ಸಾಮಂತರಾಜರು-ಪಂಡಿತರು-ಪೌರಜಾನಪದರ ಸಮಕ್ಷ ತನ್ನ ರತ್ನಸಿಂಹಾಸನದಲ್ಲಿ ಕೂಡಿಸಿ ಅವರನ್ನು “ರಾಜಗುರುಗಳನ್ನಾಗಿ ಮಾಡಿಕೊಂಡನು ಮತ್ತು ಧನಕನಕ ವಸ್ತ್ರಾಭರಣಾದಿಗಳನ್ನೂ ಗ್ರಾಮ-ಭೂಮಿಗಳನ್ನೂ ಸಮರ್ಪಿಸಿ ಕೃತಕೃತ್ಯನಾದನು. ಶ್ರೀಲಕ್ಷ್ಮೀನಾರಾಯಣಮುನಿಗಳು “ರಾಜಗುರುಗಳಾಗಿ ಚಂದ್ರಗಿರಿಯಲ್ಲಿ ಕೆಲಕಾಲ ವಾಸಮಾಡಿ ಆಧ್ಯಾತ್ಮಿಕ ತತ್ರೋಪದೇಶಾದಿ- ಗಳಿಂದ ನರಪತಿಯನ್ನು ಅನುಗ್ರಹಿಸಿದರು. ಆನಂತರ, ಸಾಳುವ ನರಭೂಪಾಲನಿಂದ ಬೀಳ್ಕೊಂಡು ಮುಳಬಾಗಿಲಿಗೆ ಚಿತ್ತೈಸಿದರು.