|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ನಾಲ್ಕನೆಯ ಉಲ್ಲಾಸ

ಶ್ರೀವ್ಯಾಸರಾಜಯತಿಸಾರ್ವಭೌಮರು

೨೭. ಉತ್ತರಭಾರತ ಸಂಚಾರ

ಶ್ರೀಮದಾಚಾರ್ಯ ಮಹಾಸಂಸ್ಥಾನಾಧಿಪತಿಗಳಾಗಿ ಶ್ರೀವ್ಯಾಸರಾಜ ಗುರುಸಾರ್ವಭೌಮರು ಪರಂಪರಾಗತ ಸಂಪ್ರದಾಯದಂತೆ ಮಹಾಸಂಸ್ಥಾನಾಧಿಪತಿಗಳಾದ ಮೇಲೆ ಮೊದಲ ಬಾರಿಗೆ ತೀರ್ಥಕ್ಷೇತ್ರ ಸಂದರ್ಶನ, ಸಿದ್ಧಾಂತಸ್ಥಾಪನೆ, ಶಿಷ್ಯ-ಭಕ್ತ ಜನೋದ್ದಾರಾರ್ಥವಾಗಿ ಉತ್ತರಭಾರತ ದಿಗ್ವಿಜಯವನ್ನು ಕೈಗೊಳ್ಳಲು, ನಿಶ್ಚಯಿಸಿ ಆ ವಿಚಾರವನ್ನು ಶ್ರೀಲಕ್ಷ್ಮೀನಾರಾಯಣ- ಮುನಿಗಳಲ್ಲಿ ವಿಜ್ಞಾಪಿಸಿದರು ದೇಶಸಂಚಾರ, ಪಾಠಪ್ರವಚನ, ಪರವಾದಿ ದಿಗ್ವಿಜಯ, ಸಿದ್ಧಾಂತಸ್ಥಾಪನೆ, ಲೋಕಸಂಗ್ರಹ, ಶಿಷ್ಯ-ಭಕ್ತಜನರ ಉದ್ಧಾರ, ಕಲ್ಯಾಣಾದಿಗಳು ಮಠಗಳ ಮುಖ್ಯ ಕರ್ತವ್ಯವಾಗಿದ್ದು, ಈ ಒಂದು ಸಂಪ್ರದಾಯವು ಅತಿಪ್ರಾಚೀನಕಾಲದಿಂದಲೂ ನಡೆದುಬಂದಿದೆ. 

ಮಠವೆಂದರೆ “ಮಠ ಛಾತ್ರಾದಿನಿಲಯಃ” ಎಂಬಂತೆ ವಿದ್ಯಾಪೀಠವು. ಈ ಮಠಗಳು ಒಂದೆಡೆ ನೆಲೆಸಿದ್ದಾಗಲೂ, ಸಂಚಾರದಲ್ಲಿರುವಾಗಲೂ, ಪಾಠಪ್ರವಚನ, ವಾದಿದಿಗ್ವಿಜಯ, ಸಿದ್ಧಾಂತಸ್ಥಾಪನೆ, ಶಿಷ್ಯ-ಭಕ್ತಜನೋದ್ದಾರಾದಿ ಕಾರ್ಯವನ್ನು ಮಾಡುತ್ತಾ ಬಂದಿರುವುದೂ ಇತಿಹಾಸಪ್ರಸಿದ್ಧವಾಗಿದೆ. ಮಠಗಳೆಂದರೆ ಸಂಚಾರಿ ವಿದ್ಯಾಪೀಠಗಳೇ ಆಗಿದ್ದವು. In the good old days, The Mathams were always the Seats of learning. They were then not the petty things they are now. they answered the purpose of a Universities and unlike our modern universities, were both teaching and examining bodies. Kavya, Nataka, Alankara, The Vedanga, Vedas, Bhugola, Lilavathi and every department of knowledge was taught. And whenever parties wanted to give a Sound and liberal education to their sons, they sent them to the nearest Mathams 

ಈ ಎಲ್ಲ ವಿಚಾರಗಳನ್ನೂ ಶ್ರೀಲಕ್ಷ್ಮೀನಾರಾಯಣಮುನಿಗಳ ಉಪದೇಶದಿಂದ ಚೆನ್ನಾಗಿ ಅರಿತಿದ್ದರಿಂದಲೇ ಶ್ರೀವ್ಯಾಸರಾಜ ಗುರುಗಳು ಶ್ರೀಮದಾಚಾರ್ಯರ ಮಹಾಸಂಸ್ಥಾನದ ಮುಖ್ಯ ಕರ್ತವ್ಯವನ್ನು ಯಶಸ್ವಿಯಾಗಿ ಜರುಗಿಸಲು ಸಂಕಲ್ಪಿಸಿ ಕಂಚಿಯ ದಿಗ್ವಿಜಯಾನಂತರ ವ್ಯಾಪಕವಾದ ಉತ್ತರಭಾರತ ದಿಗ್ವಿಜಯವನ್ನು ಕೈಗೊಂಡರು. 

ಶ್ರೀವ್ಯಾಸರಾಜರು ಲಕ್ಷ್ಮೀನಾರಾಯಣಮುನಿಗಳಲ್ಲಿ ತಮ್ಮ ದಿಗ್ವಿಜಯಯಾತ್ರೆಯ ವಿಚಾರವನ್ನರುಹಿದಾಗ ಗುರುಗಳು ಪರಮಸಂತುಷ್ಟರಾಗಿ ಪ್ರಿಯಶಿಷ್ಯರನ್ನು ಪ್ರೋತ್ಸಾಹಿಸಿ ಆಶೀರ್ವದಿಸಿದರು. ಕ್ರಿ.ಶ. ೧೪೬೭-೬೮ರಲ್ಲಿ ನವರಾತ್ರಿಯ ವಿಜಯದಶಮಿಯಂದು ಗುರುಗಳೊಡನೆ ಶ್ರೀನರಸಿಂಹತೀರ್ಥಕ್ಕೆ ಬಂದು ಅಲ್ಲಿ ಶ್ರೀನರಸಿಂಹದೇವರ ಸನ್ನಿಧಿಯಲ್ಲಿ ಪೂಜಾರಾಧನೆಗಳನ್ನು ಮುಗಿಸಿ, ಬನ್ನಿ ಮುಡಿದು, ಶ್ರೀನೃಸಿಂಹದೇವರಲ್ಲಿ ಪ್ರಾರ್ಥಿಸಿ, ಪ್ರಸಾದ ಸ್ವೀಕರಿಸಿ ಮಿತಪರಿವಾರ ಸಮೇತರಾಗಿ ಉತ್ತರಭಾರತ ಸಂಚಾರ ಕೈಗೊಂಡು ಪ್ರಯಾಣ ಬೆಳೆಸಿದರು. ಶ್ರೀಪಾದಂಗಳವರು ಪಂಪಾಕ್ಷೇತ್ರಕ್ಕೆ ದಯಮಾಡಿಸಿ, ವಿರೂಪಾಕ್ಷಸ್ವಾಮಿಯ ದರ್ಶನ ಪಡೆದು ತಮ್ಮ ಮೂಲಗುರುಗಳಾದ ಶ್ರೀಪದ್ಮನಾಭ, ಶ್ರೀನರಹರಿ, ಶ್ರೀಜಯತೀರ್ಥ ಮತ್ತು ಶ್ರೀಕವೀಂದ್ರರು, ಶ್ರೀವಾಗೀಶತೀರ್ಥರುಗಳ ಬೃಂದಾವನ ಸಂದರ್ಶನ ಮಾಡಿ ಹಸ್ತೋದಕವನ್ನು ಸಮರ್ಪಿಸಿ ಫಲಮಂತ್ರಾಕ್ಷತೆ ಸ್ವೀಕರಿಸಿ ಉತ್ತರಭಾರತದ ಕಡೆ ಸಂಚಾರ ಹೊರಟು ಕಾಶೀಕ್ಷೇತ್ರಕ್ಕೆ ದಯಮಾಡಿಸಿದರು. 

ಕಾಶೀಕ್ಷೇತ್ರವು ಮೊದಲಿನಿಂದಲೂ, ಭಾರತದೇಶದ ಶ್ರೇಷ್ಠ ಕ್ಷೇತ್ರಗಳಲ್ಲೊಂದಾಗಿದ್ದು, ಅಲ್ಲಿ ಪವಿತ್ರ ಗಂಗಾನದಿಯು ಹರಿಯುತ್ತಾ ಜನರ ಪಾಪ ನಿವಾರಣೆ ಮಾಡಿ ತನು-ಮನಗಳನ್ನು ಪಾವನಗೊಳಿಸುತ್ತಿರುವಳು. 

ಶ್ರೀಪಾದಂಗಳವರು ಕಾಶಿಯಲ್ಲಿ ಗಂಗಾಸ್ನಾನ, ಶ್ರೀಬಿಂದುಮಾಧವನ, ಶ್ರೀವಿಶ್ವೇಶ್ವರ, ವಿಶಾಲಾಕ್ಷಿಯರ ದರ್ಶನ ಮಾಡಿ ಪ್ರತಿದಿನ ಜನತೆಗೆ ಉಪದೇಶ ಮಾಡುತ್ತಾ ಧಾರ್ಮಿಕ ಜಾಗೃತಿಯನ್ನುಂಟುಮಾಡುತ್ತಿದ್ದರು. ಶ್ರೀಪಾದಂಗಳವರ ಭವ್ಯಾಕೃತಿ, ಜ್ಞಾನ-ಭಕ್ತಿ-ವೈರಾಗ್ಯಾದಿಗಳಿಂದ ಪ್ರಭಾವಿತನಾದ ಕಾಶಿಯ ದೊರೆ ಗುರುಗಳನ್ನು ಬಹುವಾಗಿ ಗೌರವಿಸುತ್ತಿದ್ದರು. 

ಅಂದು ಉತ್ತರಭಾರತದಲ್ಲಿ ವಿಖ್ಯಾತವಾಗಿದ್ದ ವಿದ್ಯಾಕೇಂದ್ರಗಳಲ್ಲಿ ಕಾಶಿಯೂ ಒಂದಾಗಿತ್ತು. ಅಲ್ಲಿ ಕರ್ಮಠರೂ, ವೇದ, ವೇದಾಂಗಪಾರಂಗತರೂ, ನ್ಯಾಯ, ಮೀಮಾಂಸಾ, ವೇದಾಂತಾದಿ ಶಾಸ್ತ್ರಕೋವಿದರೂ, ವಾದವಿದ್ಯಾವಿಶಾರದರೂ ನೂರಾರು ಜನರಿದ್ದರು. ಮಿಥಿಲೆಯ ವಿದ್ಯಾಪೀಠದಂತೆ ಕಾಶಿಯ ವಿದ್ಯಾಪೀಠವೂ ಬಹು ಹೆಸರುವಾಸಿಯಾಗಿದ್ದಿತು. 

ಶ್ರೀಗಳವರು ಕಾಶಿಗೆ ಹೋಗುವ ವೇಳೆಗಾಗಲೇ ಮೂರು-ನಾಲ್ಕು ದಶಕಗಳಿಂದ ಶ್ರೀವಿಬುಧೇಂದ್ರತೀರ್ಥರು ಎರಡು, ಮೂರು ಬಾರಿ ಕಾಶಿಗೆ ದಯಮಾಡಿಸಿ, ತಮ್ಮ ಪಾಂಡಿತ್ಯ ಪ್ರಭಾವದಿಂದ ಅಲ್ಲಿನ ಪಂಡಿತಮಂಡಲಿಯನ್ನು ಜಯಿಸಿ ಮಾಧ್ಯ ವಿಜಯದುಂದುಭಿಯನ್ನು ಮೊಳಗಿಸಿದ್ದರು. ಅದುವರೆಗೆ ಮಧ್ವಮತವೆಂದರೆ ಅದೇನು ಮಹಾ ಎಂಬ ತಾತ್ಸಾರವಿದ್ದು ಶ್ರೀವಿಬುಧೇಂದ್ರರ ವಿಜಯಪರಂಪರೆಯಿಂದಾಗಿ ಪಂಡಿತರಿಗೆ ದೈತಮತದ ಬಗ್ಗೆ ಗೌರವವುಂಟಾಗಿತ್ತು. ಇಂಥ ದೈತಸಿದ್ಧಾಂತ ಸ್ಥಾಪನಾಚಾರ್ಯರಾದ ಶ್ರೀಮನ್ಮಧ್ವಾಚಾರ್ಯರ ಮಹಾಸಂಸ್ಥಾನಾಧೀಶರೇ ಶ್ರೀವ್ಯಾಸರಾಜಗುರುವರ್ಯರೆಂದು ತಿಳಿದ ಮೇಲೆ ಮತ್ತು ತರುಣರಾದರೂ ಜ್ಞಾನವೃದ್ಧರಾಗಿ ಕಂಚಿಯ ವಿದ್ಯಾಪೀಠದ ಸಮಸ್ತ ಪ್ರಕಾಂಡ ಪಂಡಿತರನ್ನು ಜಯಿಸಿದ ಕೀರ್ತಿಯನ್ನು ಕೇಳಿ ಕಾಶಿಯ ಪಂಡಿತರು, ಆಸ್ತಿಕರು ಗುರುವರರನ್ನು ಬಹು ಗೌರವಾದರಗಳಿಂದ ಕಾಣಲಾರಂಭಿಸಿದರು. 

ಇಷ್ಟಾದರೂ ಶ್ರೀಯವರು ಮೇಲಿನಿಂದ ಮೇಲೆ ಪ್ರತಿವಾದಿಗಳನ್ನು ಎದುರಿಸುವ ಪ್ರಸಂಗಗಳಿಗೇನು ಕಡಿಮೆ ಇರಲಿಲ್ಲ. ಶ್ರೀಗಳವರು ಅಲ್ಲಿ ನಾಲ್ಕಾರು ತಿಂಗಳ ಕಾಲ ವಾಸಮಾಡಿದಾಗ ಪ್ರತಿದಿನವೂ ಒಂದೊಂದು ಶಾಸ್ತ್ರದಲ್ಲಿ ಖ್ಯಾತ ಪಂಡಿತರೊಡನೆ ವಾಕ್ಯಾರ್ಥ ಮಾಡಬೇಕಾಗಿ ಬಂದಿತು. ಶ್ರೀಹರಿವಾಯುಗಳ ಅನುಗ್ರಹ, ಶ್ರೀಲಕ್ಷ್ಮೀನಾರಾಯಣಮುನಿಗಳ ಆಶೀರ್ವಾದ ಬಲದಿಂದ ಸಕಲ ವಿದ್ವಾಂಸರನ್ನೂ ವಾದದಲ್ಲಿ ಸೋಲಿಸಿ ಅಪೂರ್ವ ವಿಜಯಕೀರ್ತಿಗಳನ್ನು ಗಳಿಸಿದರು. ಅನೇಕ ಆಸ್ತಿಕರು ಶ್ರೀಯವರು ಶಿಷ್ಯರಾದರು. ಕಾಶಿಯ ಮಹಾರಾಜ ಗುರುಗಳನ್ನು ಬಗೆ ಬಗೆಯಿಂದ ಸನ್ಮಾನಿಸಿ ಕೃತಾರ್ಥನಾದ. 

ಕಾಶಿಯ ಈ ದಿಗ್ವಿಜಯವು ಶ್ರೀಪಾದಂಗಳವರ ವಿಜಯಪರಂಪರೆಯ ಇತಿಹಾಸದಲ್ಲಿ ಶಾಶ್ವತವಾಗಿ ಬೆಳಗುವ ದ್ವಿತೀಯ ಘಟ್ಟವೆಂದು ಹೇಳಬಹುದು. 

ಶ್ರೀವ್ಯಾಸರಾಜ ಗುರುವರ್ಯರು ಸರ್ವಮಾನ್ಯರಾಗಿ ಕಾಶಿಯಿಂದ ಹೊರಟು ಸಂಚಕ್ರಮದಿಂದ ಪ್ರಯಾಗ, ಗಯಾ, ಅಯೋಧ್ಯಾ, ಪುರಿಜಗನ್ನಾಥ, ಮಥುರಾ, ಬೃಂದಾವನ, ಹರಿದ್ವಾರ, ಹೃಷೀಕೇಶ, ಬದರೀಕ್ಷೇತ್ರಗಳನ್ನು ಸಂದರ್ಶಿಸಿ ಒಂದೊಂದು ಕ್ಷೇತ್ರಗಳಲ್ಲಿಯೂ ಬಹುಕಾಲ ವಾಸಮಾಡಿ, ಎಲ್ಲ ಕಡೆ ಭಗವದನುಗ್ರಹವನ್ನು ಸಂಪಾದಿಸಿ ಕುರುಕ್ಷೇತ್ರವನ್ನು ಸಂದರ್ಶಿಸಲಾಶಿಸಿ ಮಾರ್ಗಮಧ್ಯದಲ್ಲಿದೆಹಲಿಗೆ ಭೇಟಿ ನೀಡಿದರು. 

ಆಗ ಆಫ್ಘನ್ ರಾಜವಂಶೀಯನಾದ ಸುಲ್ತಾನ್ ಬಹುಲೂಲ್ ಲೂದಿಯು ದೆಹಲಿಯ ದೊರೆಯಾಗಿದ್ದನು. ಅವನು ಸ್ವಾಭಾವಿಕವಾಗಿ ದೈವಭಕ್ತನಾಗಿದ್ದನು. ಸಾಧು, ಸಂತರು, ಜ್ಞಾನಿಗಳು, ಪಂಡಿತರುಗಳನ್ನು ಕಂಡರೆ ಅವನಿಗೆ ವಿಶೇಷ ಗೌರವವಿತ್ತು. ಅಂತೆಯೇ ಶ್ರೀವ್ಯಾಸರಾಜ ಗುರುಸಾರ್ವಭೌಮರು ದೆಹಲಿಗೆ ಬಂದಾಗ, ಶ್ರೀಗಳವರ ಜ್ಞಾನ-ಭಕ್ತಿ-ವೈರಾಗ್ಯ, ಪಾಂಡಿತ್ಯ-ತೇಜಸ್ಸು, ಧರ್ಮಪ್ರಸಾರ-ಸಜ್ಜನೋದ್ದಾರಾದಿ ಸದ್ಗುಣಗಳ ವಿಚಾರವನ್ನು ದರ್ಬಾರಿನ ಪಂಡಿತರು, ರಾಜಕೀಯ ಮುಖಂಡರುಗಳಿಂದ ತಿಳಿದು ಅವರ ದರ್ಶನ ಮಾಡಲು ಉತ್ಸುಕನಾದ. 

ಒಂದು ದಿನ ಅಶ್ವಾರೋಹಿಯಾಗಿ ಯಮುನಾ ನದಿಯ ತೀರದಲ್ಲಿ ವಾಯುವಿಹಾರಕ್ಕಾಗಿ ಹೊರಟಿದ್ದ ಸುಲ್ತಾನ್ ಲೂದಿಯು ಯಮುನೆಯ ದಡದಲ್ಲಿ ಸಹಸ್ರಾರು ಜನರಿಗೆ ತತ್ತೋಪದೇಶ ಮಾಡುತ್ತಿದ್ದ ಅತ್ಯಂತ ತೇಜಸ್ವಿಗಳಾದ ಶ್ರೀವ್ಯಾಸತೀರ್ಥರನ್ನು ಕಂಡನು. ಶ್ರೀಯವರ ಅಸ್ಥಲಿತ ವಾಗೈಖರಿಯನ್ನು ಕೇಳಿ ಮುಗ್ಧನಾದನು. ಶ್ರೀಯವರ ವರ್ಚಸ್ಸಿನಿಂದ ಪ್ರಭಾವಿತನಾದ ದೆಹಲಿಯ ಸುಲ್ತಾನ ಗುರುಗಳ ಸಮೀಪಕ್ಕೆ ಬಂದು ಕುದುರೆಯಿಂದಿಳಿದು ವಿನಯದಿಂದ ತನ್ನ ಪದ್ದತಿಯಂತೆ ನಮಸ್ಕರಿಸಿದನು. ಅವನು ದೆಹಲಿಯ ಸುಲ್ತಾನನೆಂದು ಅರಿತ ಶ್ರೀವ್ಯಾಸರಾಜರು ಅವನನ್ನು ನಗೆಮೊಗದಿಂದ ಸ್ವಾಗತಿಸಿ, ಕುಶಲ ಪ್ರಶ್ನೆ ಮಾಡಿ ಅವನಿಗೆ ಶ್ರೇಯಸ್ಸಾಗುವಂತೆ ಫಲಮಂತಾಕ್ಷತೆಯಿತ್ತು ಆಶೀರ್ವದಿಸಿದರು. 

ಸುಲ್ತಾನ್ ಬಹಲೂಲ್ ಲೂದಿಯು ಗುರುಗಳನ್ನು ತನ್ನ ಅರಮನೆಗೆ ಬಂದು ಅನುಗ್ರಹಿಸಬೇಕೆಂದು ಪ್ರಾರ್ಥಿಸಿದನು. ಅವನ ಕೋರಿಕೆಯಂತೆ ಶ್ರೀವ್ಯಾಸತೀರ್ಥರು ಮರುದಿನ ಮಿತಪರಿವಾರದೊಡನೆ ಅರಮನೆಗೆ ತೆರಳಿದರು. ಸುಲ್ತಾನ ಗುರುಗಳನ್ನು ರಾಜ್ಯವೈಭವದಿಂದ ಸ್ವಾಗತಿಸಿ ಸತ್ಕರಿಸಿದನು ಮತ್ತು ಅವರಿಗೆ ಸುಲ್ತಾನರ ವಿಶೇಷ ಬಿರುದೆನಿಸಿದ ಒಂಟೆಯ ಮೇಲೆ ಹಸಿರು ಛತ್ರಿಯನ್ನು ಹಿಡಿದುಕೊಂಡು ಹೋಗುವ ಅಸಾಧಾರಣ ಗೌರವ ಪ್ರಶಸ್ತಿಯನ್ನೂ ಧನಕನಕಾಭರಣ ವಸ್ತಗಳನ್ನೂ ಅರ್ಪಿಸಿ, ತನ್ನ ರಾಜ್ಯದಲ್ಲಿ ಶ್ರೀಯವರು ಸಂಚರಿಸುವಾಗ ಅವರಿಗೆ ಎಲ್ಲೆಡೆ ಸಕಲ ಸೌಕರ್ಯಗಳನ್ನೂ ಒದಗಿಸುವಂತೆ ಹುಕುಂ ಪತ್ರವನ್ನೂ ಸಮರ್ಪಿಸಿ ಕೃತಾರ್ಥನಾದ. 

ಶ್ರೀಪಾದಂಗಳವರು ಬಹುದಿನ ದೆಹಲಿಯಲ್ಲಿದ್ದು, ಅಲ್ಲಿಂದ ಕುರುಕ್ಷೇತ್ರ ಸಂದರ್ಶನ ಮಾಡಿಬಂದು ಮತ್ತೆ ದೆಹಲಿಯಿಂದ ಮಿಥಿಲೆಯ ಕಡೆಗೆ ದಿಗ್ವಿಜಯ ಮಾಡಿದರು.