|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ನಾಲ್ಕನೆಯ ಉಲ್ಲಾಸ

ಶ್ರೀವ್ಯಾಸರಾಜಯತಿಸಾರ್ವಭೌಮರು

೨೬. ಮಹಾಸಂಸ್ಥಾನಾಧಿಪತಿಗಳಾದರು

ಒಂದೆರಡು ದಿನಗಳಾದ ಮೇಲೆ ಶ್ರೀವ್ಯಾಸರಾಜಗುರುವರ್ಯರು ಪೂಜ್ಯಗುರುಗಳಿಗೆ ನಮಸ್ಕರಿಸಿ ಅವರ ಆಶೀರ್ವಾದವನ್ನು ಪಡೆದು ಅಟ್ಟೂರಿಗೆ ದಯಮಾಡಿಸಿದರು. 

ಶ್ರೀಬ್ರಹ್ಮಣ್ಯತೀರ್ಥರು ಅನಾರೋಗ್ಯದಿಂದ ಬಹಳ ಬಡವಾಗಿದ್ದರೂ ಪ್ರಸನ್ನಚಿತ್ತರಾಗಿದ್ದರು. ಶಿಷ್ಯರು ಬರುವ ವಾರ್ತೆಯಿಂದ ಅವರಲ್ಲಿ ಒಂದು ಬಗೆಯ ಉತ್ಸಾಹ ತುಂಬಿಬಂದಿತ್ತು. ಪ್ರೀತಿಯ ಶಿಷ್ಯರನ್ನು ಸ್ವಾಗತಿಸಲು ಹುಡುಗರಂತೆ ಲವಲವಿಕೆ, ಸಂಭ್ರಮ, ಸಂತೋಷಗಲಿಂದ ಓಡಾಡಹತ್ತಿದರು. ಶ್ರೀವ್ಯಾಸತೀರ್ಥರನ್ನು ಎದುರುಗೊಂಡು ಸ್ವಾಗತಿಸಲು ಸಕಲ ವ್ಯವಸ್ಥೆಗಳನ್ನು ಖುದ್ದಾಗಿ ಮಾಡಿ, ಪೂರ್ಣಕುಂಭ-ವಾದ್ಯವೈಭವ-ಬಿರುದಾವಳಿಗಳೊಡನೆ ಶ್ರೀಮಠದ ಅಧಿಕಾರಿಗಳು, ಪಂಡಿತರು, ಆತ್ಮೀಯರು, ಶಿಷ್ಯಮಂಡಲಿಯನ್ನು ಕಳುಹಿಸಿಕೊಟ್ಟು, ಶ್ರೀಮಠದ ಬಾಗಿಲಿನಲ್ಲಿ ಶಿಷ್ಯರ ಆಗಮನವನ್ನು ನಿರೀಕ್ಷಿಸಹತ್ತಿದರು. 

ಶ್ರೀವ್ಯಾಸತೀರ್ಥರನ್ನು ಅಲಂಕೃತ ಪಾಲಕಿಯಲ್ಲಿ ಸಕಲ ವೈಭವದೊಡನೆ ಶ್ರೀಮಠದವರು ಕರೆತಂದರು. ಶ್ರೀವ್ಯಾಸರಾಜರ ಪಾಲಕಿಯು ಶ್ರೀಮಠದ ಮುಂದೆ ಬಂದಕೂಡಲೇ ತಮ್ಮನ್ನು ಸ್ವಾಗತಿಸಲು ಕಾದುನಿಂತಿದ್ದ ಪೂಜ್ಯಗುರುಗಳನ್ನು ಕಂಡು ಪಾಲಕಿಯಿಂದಿಳಿದು ಗುರುಗಳತ್ತ ಧಾವಿಸಿದರು. ಇಪ್ಪತ್ತರ ತಾರುಣ್ಯ, ಜ್ಞಾನ-ಭಕ್ತಿ-ವೈರಾಗ್ಯಸೂಚಕ ದಿವ್ಯ ತೇಜಸ್ಸು, ಆಕರ್ಷಣೀಯ ಸೌಂದರ್ಯಗಳಿಂದ ಕಂಗೊಳಿಸುತ್ತಿರುವ ಶಿಷ್ಯರನ್ನು ಕಂಡು ಶ್ರೀಬ್ರಹ್ಮಣ್ಯತೀರ್ಥರು ಹಿರಿಹಿರಿ ಹಿಗ್ಗುತ್ತಾ ಆನಂದಭರದಿಂದ ಶಿಷ್ಯರತ್ತ ತಾವೂ ಧಾವಿಸಿದರು. ಶ್ರೀವ್ಯಾಸತೀರ್ಥರು ಗುರುಗಳಿಗೆ ಸಾಷ್ಟಾಂಗ ಪ್ರಣಾಮ ಮಾಡಿದರು. ಬ್ರಹ್ಮಣ್ಯಮುನಿಗಳು ಶಿಷ್ಯರನ್ನಾಲಿಂಗಿಸಿ ಮೋದಪರವಶರಾದರು. ಇಬ್ಬರ ಕಣ್ಣಿನಿಂದಲೂ ಆನಂದಬಾಷ್ಪ ಸುರಿಯುತ್ತಿದೆ. ಮಾತನಾಡಲೂ ಬಾರದಂತಾಗಿದೆ. ಒಬ್ಬರ ಮುಖವನ್ನೊಬ್ಬರು ನೋಡುತ್ತಿದ್ದಾರೆ. ಆ ಗುರುಶಿಷ್ಯರ ಸಮಾಗಮ, ಅವರ ಪ್ರೇಮ, ವಾತ್ಸಲ್ಯಗಳನ್ನು ನೋಡಿದ ಸುಜನರು ಆನಂದದಿಂದ “ಆಹಾ, ಎಂಥ ಗುರುಶಿಷ್ಯರು! ಅದೇನು ಪ್ರೇಮ - ಈ ಪವಿತ್ರ ನೋಟವನ್ನು ಕಂಡ ನಮ್ಮ ಕಣ್ಣುಗಳು ಸಾರ್ಥಕವಾದವು” ಎಂದು ಉದ್ಧರಿಸಹತ್ತಿದರು. 

ಗುರುಶಿಷ್ಯರಲ್ಲಿ ಪ್ರಥಮ ಸಮಾಗಮದ ಉದ್ವೇಗವು ಸ್ವಲ್ಪ ಕಡಿಮೆಯಾದ ಮೇಲೆ ಬ್ರಹ್ಮಣ್ಯತೀರ್ಥರು ಪ್ರೀತಿಯಿಂದ ಶಿಷ್ಯರ ಕರಪಿಡಿದು ಶ್ರೀಮಠಕ್ಕೆ ಕರೆತಂದರು. ಶ್ರೀಮಠದ ಮುಖದ್ವಾರದಲ್ಲಿ ಸುಮಂಗಲೆಯರು ಶ್ರೀವ್ಯಾಸಯತಿಗಳಿಗೆ ಆರತಿ ಬೆಳಗಿದರು. ಪರಿವಾರದವರು ದೃಷ್ಟಿಪರಿಹಾರಕ್ಕಾಗಿ ಅನೇಕ ತೆಂಗಿನಕಾಯಿಗಳನ್ನು ಒಡೆದರು. ಸುಜನರು ಉಭಯ ಗುರುಗಳ ಜಯಜಯಕಾರಗೈಯುತ್ತಾ ಲಾಜಪುಷ್ಪವೃಷ್ಟಿ ಮಾಡಿದರು. 

ಗುರುಶಿಷ್ಯರು ಮಠ ಪ್ರವೇಶ ಮಾಡಿ ಆಸನಾಸೀನರಾದರು. ಆನಂತರ ಸ್ವಾಗತ ಸಮಾರಂಭ ಜರುಗಿ, ಅನೇಕ ಪಂಡಿತರು, ಧರ್ಮಾಭಿಮಾನಿಗಳು ಗುರುಶಿಷ್ಯರ ಗುಣಗಾನ ಮಾಡಿ ಕೊಂಡಾಡಿದರು. ಆನಂತರ ಶ್ರೀವ್ಯಾಸತೀರ್ಥರು ಸೂಕ್ತ ರೀತಿಯಲ್ಲಿ ಉಪದೇಶ ಭಾಷಣ ಮಾಡಿ, ಸರ್ವರಿಗೂ ಫಲಮಂತ್ರಾಕ್ಷತೆಯನ್ನು ದಯಪಾಲಿಸಿದ ಮೇಲೆ ಗುರುಶಿಷ್ಯರು ವಿಶ್ರಾಂತಿಗೆ 

ತೆರಳಿದರು. 

ತಾವು ಶ್ರೀಲಕ್ಷ್ಮೀನಾರಾಯಣಮುನಿಗಳಲ್ಲಿ ವ್ಯಾಸಂಗಕ್ಕೆ ಬಿಟ್ಟು ಬಂದ ಮೇಲೆ ಶ್ರೀವ್ಯಾಸರಾಜರು ಅಲ್ಲಿ ಅಧ್ಯಯನ ಪ್ರಾರಂಭಿಸಿದಲಾಗಾಯಿತು, ಈವರೆಗಿನ ಸಮಸ್ತ ವೃತ್ತಾಂತವನ್ನೂ ಶ್ರೀಬ್ರಹ್ಮಣ್ಯತೀರ್ಥರು ಪ್ರಿಯಶಿಷ್ಯರಿಂದ ತಿಳಿದು 

ಹರ್ಷನಿರ್ಭರರಾದರು. 

ಶ್ರೀವ್ಯಾಸತೀರ್ಥರು ಅಂದಿನಿಂದ ಶ್ರೀಮಠದ ನಿರ್ವಹಣೆಯ ಜವಾಬ್ದಾರಿಯನ್ನು ತಾವೇ ವಹಿಸಿಕೊಂಡು ಶ್ರೀದೇವಪೂಜಾ, ಪಾಠಪ್ರವಚನಗಳನ್ನು ನಿರ್ವಹಿಸುತ್ತಾ ತಮ್ಮ ಗುರುಗಳಿಗೆ ಪೂರ್ಣ ವಿಶ್ರಾಂತಿ ದೊರಕುವಂತೆ ಮಾಡಿ ತಾವೇ ಸ್ವತಃ ನಿಂತು ಗುರುಗಳ ಔಷಧೋಪಚಾರ, ಆಹಾರಗಳಿಗೆ ಗಮನವಿತ್ತು ಹಗಲು-ರಾತ್ರಿ ಗುರುಗಳಿಗೆ ಭಕ್ತಿ-ಶ್ರದ್ಧೆಗಳಿಂದ ಶುಕ್ರೂಷೆ ಮಾಡುತ್ತಾ ಗುರುಗಳ ವಿಶೇಷ ಪ್ರೀತಿ-ವಿಶ್ವಾಸ-ಅನುಗ್ರಹಗಳಿಗೆ ಪಾತ್ರರಾದರು. 

ಶ್ರೀವ್ಯಾಸತೀರ್ಥರು ಅಟ್ಟೂರಿಗೆ ಬಂದು ಒಂದೆರಡು ತಿಂಗಳುಗಳಾದವು. ಶ್ರೀಬ್ರಹ್ಮಣ್ಯತೀರ್ಥರ ಆರೋಗ್ಯವು ಸುಧಾರಿಸುವ ಬದಲು ಕೆಡುತ್ತಾ ಬಂದಿತು. ಶ್ರೀಗಳವರು ಬಹಳ ನಿಶ್ಯಕ್ತರಾದರು. ಅವರು ಪ್ರಿಯಶಿಷ್ಯರಿಗೆ ಇನ್ನು ಔಷಧೋಪಚಾರಗಳಿಂದ ಪ್ರಯೋಜನವಿಲ್ಲವೆಂದು ಹೇಳಿ ಅವೆಲ್ಲವನ್ನೂ ನಿಲ್ಲಿಸಿಬಿಟ್ಟರು. ಶ್ರೀವ್ಯಾಸತೀರ್ಥರಿಗೆ ಗುರುಗಳ ಆರೋಗ್ಯಸ್ಥಿತಿಯನ್ನು ಕಂಡು ತು೦ಬಾ ಕಳವಳವಾಯಿತು. 

ಶ್ರೀಬ್ರಹ್ಮಣ್ಯತೀರ್ಥರು ಶಿಷ್ಯರನ್ನು ಹತ್ತಿರ ಕೂಡಿಸಿಕೊಂಡು ಒಂದು ದಿನ ಶಿಷ್ಯರಿಗೆ ತಿಳಿಸಬೇಕಾದ ಮಹಾಸಂಸ್ಥಾನದ ಇತಿಹಾಸ, ಷಾಷಿಕ ಮನೆತನದ ಹಿರಿಮೆ-ಗರಿಮೆಗಳನ್ನೂ, ಶ್ರೀಮಠದ ಸಂಪ್ರದಾಯಾದಿ ಸಮಸ್ತ ವಿಚಾರಗಳನ್ನೂ ವಿಸ್ತಾರವಾಗಿ ತಿಳಿಸಿ, “ನಮ್ಮ ಕಾಲ ಮುಗಿಯುತ್ತಾ ಬಂದಿದೆ. ಇನ್ನು ಈ ಮಹಾಸಂಸ್ಥಾನದ ಆಚಾರ್ಯರ ಸಿದ್ಧಾಂತದ ಅಭಿವೃದ್ಧಿಯನ್ನು ಯಶಸ್ವಿಯಾಗಿ ನೆರವೇರಿಸಿ, ಜಗತ್ತಿನಲ್ಲೆಲ್ಲಾದೈತಸಿದ್ಧಾಂತದ ವಿಜಯವೈಜಯಂತಿಯನ್ನು ಮೆರೆಯಿಸುತ್ತೀರಿ ಎಂಬ ನಂಬಿಕೆ ನಮಗಿದೆ. ನಮಗೆ ಇನ್ನು ಯಾವ ಚಿಂತೆಯೂ ಇಲ್ಲ. ನಮ್ಮಿ ಹಿರಿಯಾಸೆಯನ್ನು ನೆರವೇರಿಸುವುದಾಗಿ ನಮಗೆ ವಚನವನ್ನು ಕೊಡಬೇಕು. ಅಂದರೆ ನಾವು ನಿರಾಲೋಚನೆಯಿಂದ, ಸಂತೋಷದಿಂದ ನಮ್ಮ ಇಹಲೋಕ ವ್ಯಾಪಾರವನ್ನು ಮುಗಿಸುತ್ತೇವೆ” ಎಂದು ಆಜ್ಞಾಪಿಸಿದರು. 

ಆಗ ಶ್ರೀವ್ಯಾಸರಾಜರು ಗುರುಗಳ ಪಾದಗಳನ್ನು ಹಿಡಿದು “ಗುರುವರ್ಯ! ತಮ್ಮ ಚರಣಕಮಲಗಳನ್ನು ಹಿಡಿದು ಪ್ರಮಾಣ ಮಾಡಿ ವಚನ ನೀಡುತ್ತಿದ್ದೇನೆ. ನನ್ನ ಜೀವನದ ಕೊನೆಯುಸಿರು ಇರುವವರೆಗೆ ನಿಮ್ಮ ಈ ಆಜ್ಞೆಯನ್ನು ನೆರವೇರಿಸಿಕೊಂಡು ಬರುತ್ತೇನೆ. ಇನ್ನು ನನ್ನ ಜೀವನ ಅದಕ್ಕಾಗಿಯೇ ಮುಡುಪಾಗಿಡುತ್ತೇನೆ” ಎಂದು ಹೇಳಿದರು. ಆಗ ಶ್ರೀಬ್ರಹ್ಮಣ್ಯತೀರ್ಥರಿಗಾದ ಆನಂದ ಅವರ್ಣನೀಯ! 

ಶ್ರೀಶಾಲಿವಾಹನ ಶಕ ೧೩೮೯ನೆಯ ಸರ್ವಜಿತ್‌ ಸಂವತ್ಸರದ ವೈಶಾಖ ಕೃಷ್ಣ ದಶಮೀ ದಿವಸ (ಕ್ರಿ.ಶ. ೧೪೬೭ನೇ ಮೇ ಮಾಹೆ) ಶ್ರೀವ್ಯಾಸರಾಜ ಗುರುಸಾರ್ವಭೌಮರಿಗೆ ವೈಭವದಿಂದ ಮಹಾಸಂಸ್ಥಾನವನ್ನು ಒಪ್ಪಿಸಿಕೊಟ್ಟು, ಮರುದಿನ ಏಕಾದಶಿ ದಿವಸ ಪ್ರಾತಃಕಾಲ ಸ್ನಾನ, ಆಕ, ಜಪತಪಾದ್ಯನುಷ್ಠಾನಗಳನ್ನು ಪೂರೈಸಿ ಶ್ರೀಪಟ್ಟಾಭಿರಾಮ-ಮೂಲಗೋಪಾಲಕೃಷ್ಣ- ವೇದವ್ಯಾಸದೇವರಿಗೆ ನಮಸ್ಕಾರ ಮಾಡಿ ಯೋಗಾಸನಾರೂಢರಾಗಿ ಕುಳಿತು ಸೂರ್ಯಾಂಶರಾದ ಶ್ರೀಬ್ರಹ್ಮಣ್ಯತೀರ್ಥರು ಮಧ್ಯಾಹ್ನ ಶ್ರೀಹರಿವಾಯುಗಳ ಪಾದಸ್ಮರಣೆ ಮಾಡಿ, ಲಯಚಿಂತನ ಮಾಡುತ್ತಾ ಶ್ರೀಹರಿಧ್ಯಾನ ಪೂರ್ವಕವಾಗಿ ಯೋಗಶಕ್ತಿಯಿಂದ ತಮ್ಮ ಐಹಿಕ ವ್ಯಾಪಾರವನ್ನು ಮುಗಿಸಿ, ತಮ್ಮ ಮೂಲರೂಪವಾದ ಸೂರ್ಯಮಂಡಲದಲ್ಲಿ ಲೀನರಾದರು. 

ಪೂಜ್ಯ ಗುರುಗಳು ಶ್ರೀಮನ್ನಾರಾಯಣ ಧ್ಯಾನಪರರಾದ ವಿಚಾರ ತಿಳಿದು ಶ್ರೀವ್ಯಾಸತೀರ್ಥರು ಗುರುಗಳ ವಿಯೋಗ ದುಃಖವನ್ನು ಸಹಿಸಲಾರದೆ ಕಣ್ಣೀರು ಸುರಿಸಿ ಅವರ ಶಿಷ್ಯಪ್ರೇಮ-ವಾತ್ಸಲ್ಯ-ಅನುಗ್ರಹಾದಿಗಳನ್ನು ಸ್ಮರಿಸುತ್ತಾ ಅವರ ಗುಣಗಾನ ಮಾಡಹತ್ತಿದರು. ಆನಂತರ, ಸಂಸ್ಥಾನ ಪರಂಪರಾಗತ ಪದ್ಧತಿಯಂತೆ ಶ್ರೀಬ್ರಹ್ಮಣ್ಯತೀರ್ಥರ ಬೃಂದಾವನ ಪ್ರತಿಷ್ಠಾ ಮಹೋತ್ಸವಗಳು ವೈಭವದಿಂದ ನೆರವೇರಿದವು.