ಕಲಿಯುಗ ಕಲ್ಪತರು
ನಾಲ್ಕನೆಯ ಉಲ್ಲಾಸ
ಶ್ರೀವ್ಯಾಸರಾಜಯತಿಸಾರ್ವಭೌಮರು
೨೫. ಶ್ರೀಬ್ರಹ್ಮಣ್ಯತೀರ್ಥರಿಗೆ ದೇಹಾಲಸ್ಯ
ಶ್ರೀವ್ಯಾಸಭಿಕ್ಷುಗಳು ಕಂಚಿಯಿಂದ ಮುಳಬಾಗಿಲಿಗೆ ಬಂದು ಕೆಲದಿನಗಳಾದ ಮೇಲೆ ಅಟ್ಟೂರಿನಿಂದ ಮಠದ ಪಂಡಿತರಾದ ವೆಂಕಟರಮಣಾಚಾರ್ಯರು ಮುಳಬಾಗಿಲಿಗೆ ಬಂದು ಉಭಯ ಶ್ರೀಪಾದಂಗಳವರ ದರ್ಶನವನ್ನು ಪಡೆದು ಕುಶಲಪ್ರಶ್ನೆಗಳಾದ ಮೇಲೆ ವಿಜ್ಞಾಪಿಸಿದರು. “ಮಹಾಸ್ವಾಮಿ, ಹಿರಿಯ ಶ್ರೀಪಾದಂಗಳವರಿಗೆ ಈಗ ಒಂದೆರಡು ತಿಂಗಳುಗಳಿಂದ ಆರೋಗ್ಯಭಾಗ್ಯ ನೆಟ್ಟಗಿಲ್ಲ. ವ್ಯಾಧಿಯಿಂದ ಬಹುವಾಗಿ ಬಳಲುತ್ತಿದ್ದಾರೆ. ಕಿರಿಯ ಶ್ರೀಪಾದಂಗಳವರನ್ನು ಕಾಣಲು ತವಕಿಸುತ್ತಿದ್ದಾರೆ. ಶ್ರೀವ್ಯಾಸತೀರ್ಥರನ್ನು ಕರೆದುಕೊಂಡು ಬರಬೇಕೆಂದು ಅಪ್ಪಣೆ ಮಾಡಿ ನನ್ನನ್ನು ಕಳುಹಿಸಿದ್ದಾರೆ' ಎಂದರು.
ಶ್ರೀಬ್ರಹ್ಮಣ್ಯತೀರ್ಥರ ದೇಹಾರೋಗ್ಯವು ಸರಿಯಿಲ್ಲವೆಂದು ತಿಳಿದು ಉಭಯ ಶ್ರೀಪಾದಂಗಳವರಿಗೆ ತುಂಬಾ
ಕಳವಳವಾಯಿತು.
ಶ್ರೀಲಕ್ಷ್ಮೀನಾರಾಯಣಮುನಿಗಳು ಹಿರಿಯ ಗುರುಗಳವರ ಇಚ್ಛೆ ನೆರವೇರಿಸಲು ನೀವು ಕೂಡಲೇ ಅಟ್ಟೂರಿಗೆ ಹೊರಡಬೇಕೆಂದು ವ್ಯಾಸತೀರ್ಥರಿಗೆ ಹೇಳಿ “ಆಚಾರ್ಯರೇ, ಶ್ರೀವ್ಯಾಸತೀರ್ಥರು ಇನ್ನು ಮೂರು-ನಾಲ್ಕು ದಿನಗಳಲ್ಲಿ ಹೊರಟು ಅಲ್ಲಿಗೆ ಬರುತ್ತಾರೆ. ನೀವು ಅಟ್ಟೂರಿಗೆ ಇಂದೇ ಹೊರಟು ಶ್ರೀಹಿರಿಯ ಶ್ರೀಪಾದಂಗಳವರಲ್ಲಿ ಈ ವಿಚಾರವನ್ನು ಅರುಹಿರಿ” ಎಂದು ವೆಂಕಟರಮಣಾಚಾರ್ಯರಿಗೆ ಹೇಳಿ ಅಪ್ಪಣೆ ಕೊಟ್ಟು ಕಳುಹಿಸಿದರು.