|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ನಾಲ್ಕನೆಯ ಉಲ್ಲಾಸ

ಶ್ರೀವ್ಯಾಸರಾಜಯತಿಸಾರ್ವಭೌಮರು

೨೨. ಶೇಷದೇವರ ಆಶೀರ್ವಾದ

ಒಂದು ದಿನ ಶ್ರೀವ್ಯಾಸತೀರ್ಥರು ತಮ್ಮ “ವ್ಯಾಸಗುಹೆ'ಯಲ್ಲಿ ಪದ್ಮಾಸನಾಸೀನರಾಗಿ ಕುಳಿತು ಪರಮಾತ್ಮನನ್ನು ಹೃದಯಪೀಠದಲ್ಲಿ ನೆಲೆ ನಿಲ್ಲಿಸಿ ಧ್ಯಾನಾಸಕ್ತರಾಗಿದ್ದಾರೆ. ಯೋಗನಿಷ್ಠರಾದ ಆ ಮಹನೀಯರು ಹೊರಗಿನ ಪರಿವೆಯಿಲ್ಲದೆ ಭಗವಂತನ ಪಾದಗಳಲ್ಲಿ ಮನಸ್ಸನ್ನು ಸಲ್ಲಗ್ನಗೊಳಿಸಿ ಸಾಮಾಧ್ಯವಸ್ಥೆಯಲ್ಲಿದ್ದಾರೆ. ಆಗ ಒಂದು ಅದ್ಭುತ ವ್ಯಾಪಾರವು ನಡೆದುಹೋಯಿತು ! ಎಲ್ಲಿಂದಲೋ ಒಂದು ಘಟಸರ್ಪವು ಬಂದು ಅಸಂಪ್ರಜ್ಞಾತಸಮಾಧಿಯಲ್ಲಿರುವ ಶ್ರೀವ್ಯಾಸರಾಜರ ದೇಹವನ್ನು ಆಕ್ರಮಿಸಿ ಸುತ್ತಿಕೊಂಡು ಹೆಡೆಯನ್ನು ಶಿರಸ್ಸಿನ ಮೇಲಿಟ್ಟು ಪೂತ್ಕರಿಸಹತ್ತಿತು! ಇದೊಂದರ ಪರಿಜ್ಞಾನವೂ ಇಲ್ಲದ ಶ್ರೀಗಳವರು ಭಗವದ್ಯಾನದಲ್ಲಿ ತಲ್ಲೀನರಾಗಿದ್ದಾರೆ! 

ಆಗ ಆಕಸ್ಮಿಕವಾಗಿ ಶ್ರೀಗಳವರನ್ನು ನೋಡಲು ಬಂದ ಶ್ರೀಮಠದ ಪಂಡಿತರೊಬ್ಬರ ದೃಷ್ಟಿಗೆ ಈ ದೃಶ್ಯ ಗೋಚರಿಸಿತು! ಅವರು ಅದನ್ನು ಕಂಡು ಭಯಗೊಂಡು ಹೊರಗೆ ಓಡಿದರು. ಪಾಪ, ಪಂಡಿತರು ಭಯಾಕ್ರಾಂತರಾಗಿ ಬೆವೆತು ಹೋಗಿದ್ದಾರೆ. ಮಾತನಾಡಲೂ ಬಾರದಂತಾಗಿದೆ. “ಸರ್ಪ, ಸರ್ಪ, ಸಣ್ಣ ಗುರುಗಳು” ಎಂದು ತೊದಲುತ್ತಿದ್ದಾರೆ. ವಿದ್ವಾಂಸರು ದೇವರ ಆರಾಧನೆಗೆ ಸಿದ್ಧರಾಗುತ್ತಿದ್ದ ಲಕ್ಷ್ಮೀನಾರಾಯಣಮುನಿಗಳಲ್ಲಿಗೆ ಬಂದು “ಸ್ವಾಮಿ, ವಿಪತ್ತು, ಸರ್ಪ, ಸಣ್ಣಗುರುಗಳು” ಎಂದು 

ಏನೇನೋ ಬಡಬಡಿಸಿದರು. 

ಶ್ರೀಗಳವರಿಗೆ ಅವರ ಒಂದು ಮಾತೂ ಅರ್ಥವಾಗಲಿಲ್ಲ. ಅವರು “ಪಂಡಿತರೇ ಇದೇಕೆ ಹೀಗೆ ನಡುಗುತ್ತಿದ್ದೀರಿ? ವಿಷಯವೇನು ? ಸ್ಪಷ್ಟವಾಗಿ ತಿಳಿಸಿರಿ” ಎಂದು ಹೇಳಲು, ಸ್ವಲ್ಪ ಸುಧಾರಿಸಿಕೊಂಡು ಪಂಡಿತರು ತಾವು ಕಂಡ ವಿಚಾರವನ್ನು ವಿವರಿಸಿ ಸಣ್ಣಗುರುಗಳನ್ನು ಕಾಪಾಡಿ ಸ್ವಾಮಿ” ಎಂದರು. ಅವರ ಮಾತು ಕೇಳಿ ಶ್ರೀಗಳವರಿಗೆ ಭಯ-ಕೌತುಕ-ಚಿಂತೆಗಳು ಏಕಕಾಲದಲ್ಲುಂಟಾದವು. ಅವರು ಕೂಡಲೇ ವ್ಯಾಸರಾಜರಿರುವೆಡೆಗೆ ಧಾವಿಸಿದರು. ಮಠದ ಜನರು “ಮಹಾಸ್ವಾಮಿ, ತಾವು ಹೋಗಬೇಡಿ” ಎಂದು ತಡೆಯುತ್ತಿದ್ದರೂ ಶಿಷ್ಯರಿಗೆ ಬಂದೊದಗಿರುವ ವಿಪತ್ತಿನಿಂದ ಭಯಗೊಂಡು ಅವರನ್ನು ಹೇಗಾದರೂ ಪಾರುಮಾಡಬೇಕೆಂಬ ಶಿಷ್ಯವಾತ್ಸಲ್ಯದಿಂದ, ಗುರುಗಳು ಅಡ್ಡಗಟ್ಟಿದ ಜನರನ್ನು ಒಂದು ಕಡೆ ತಳ್ಳಿ ಓಡಿದರು. ಮಠದ ಪರಿವಾರದವರೂ ಕೈಗೆ ಸಿಕ್ಕ ಕೋಲು, ಕಟ್ಟಿಗೆ ಮುಂತಾದವನ್ನು ಹಿಡಿದು ಗುರುಗಳನ್ನು ಹಿಂಬಾಲಿಸಿದರು. 

ಗುರುಗಳು ವ್ಯಾಸರಾಜರಿದ್ದೆಡೆಗೆ ಬಂದರು. ಒಳಗಿನ ದೃಶ್ಯವನ್ನು ಕಂಡು ಭಯ-ಆಶ್ಚರ್ಯಚಕಿತರಾದರು. ಕೌತುಕವೆಂದರೆ ಶ್ರೀವ್ಯಾಸರಾಜರು ಹೊರಪ್ರಪಂಚವನ್ನೇ ಮರೆತು ನಿರಾಲೋಚನೆಯಿಂದ ಧ್ಯಾನಾಸಕ್ತನಾಗಿರುವಂತೆ ಕಂಡುಬರುತ್ತಿದೆ. ಮುಖದಲ್ಲಿ ಮಂದಸ್ಮಿತ ವಿರಾಜಿಸುತ್ತಿದೆ! ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದರು ಶ್ರೀಲಕ್ಷ್ಮೀನಾರಾಯಣಮುನಿಗಳು, ಅವರಿಗೆ ಸರ್ಪವು ಆನಂದದಿಂದ ವ್ಯಾಸರಾಜರ ಶಿರಸ್ಸಿನ ಮೇಲೆ ಹೆಡೆಯಾಡಿಸುತ್ತಾ ನಲಿಯುತ್ತಿದೆ. ಯಾವ ಅಪಾಯವನ್ನೂ ಮಾಡುತ್ತಿಲ್ಲವೆಂಬುದು ಮನದಟ್ಟಾಯಿತು. 

ಇದೇನು ವಿಚಿತ್ರವೆಂದು ಶ್ರೀಗಳವರು ಯೋಚಿಸಹತ್ತಿದರು. ಆನಂತರ ಧ್ಯಾನಮಗ್ನರಾಗಿ ಜ್ಞಾನದೃಷ್ಟಿಯಿಂದ ಅವಲೋಕಿಸಿದಾಗ ಅವರಿಗೆ ಎಲ್ಲವೂ ಕರತಲಾಮಲಕದಂತೆ ವೇದ್ಯವಾಗಿ ಪರಮಾನಂದವಾಯಿತು. ಆ ಘಟಸರ್ಪವು ಬೇರಾರೂ ಆಗಿರದೆ ತಮ್ಮ ಪೀಠದ ಮೂಲಪುರುಷರಾದ ಸಾಕ್ಷಾತ್ ಶ್ರೀಪದ್ಮನಾಭತೀರ್ಥರೆಂಬುದನ್ನವರು ಕಂಡುಕೊಂಡರು! ಶ್ರೀಗಳವರ ಹೃದಯ ಹರ್ಷಗೊಂಡಿತು. ಭಕ್ತಿ ನನ್ನಾಂಗರಾದ ಸ್ವಾಮಿಗಳು ಸರ್ಪಕ್ಕೆ ನಮಸ್ಕಾರ ಮಾಡಿ ಸರ್ಪಭಾಷೆಯಲ್ಲಿ ಮಾತನಾಡಿದರು. ಸರ್ಪ-ಶ್ರೀಗಳವರಲ್ಲಿ ಮಾತುಕತೆ ಪ್ರಾರಂಭವಾಯಿತು! 

ಶ್ರೀಗಳವರು : ಪರಮಪೂಜ್ಯ ಗುರುವರ್ಯ! ತಮ್ಮ ದರ್ಶನದಿಂದ ಧನ್ಯನಾದೆ. ಈ ಘೋರರೂಪವನ್ನೇಕೆ ಧರಿಸಿ ಬಂದಿರುವಿರಿ ? ನಮ್ಮ ವ್ಯಾಸತೀರ್ಥರು ತಮಗೇನು ಅಪಚಾರ ಮಾಡಿದರೆಂದು ಅವರನ್ನು ಪೀಡಿಸುತ್ತಿರುವಿರಿ? 

ಸರ್ಪ : ನಮ್ಮ ಸಧ್ವಂಶದೀಪಕರೇ! ನಿಮ್ಮನ್ನು ಕಂಡು ನಮಗೂ ಸಂತೋಷವಾಯಿತು. ನಮ್ಮ ಮೂಲರೂಪವೇ ಇದಲ್ಲವೆ ? ನಿಮ್ಮ ಶಿಷ್ಯರು ನಮಗಾವ ಅಪಚಾರವನ್ನೂ ಮಾಡಿಲ್ಲ! 

ಶ್ರೀಗಳವರು : ಹಾಗಾದರೆ ಅವರನ್ನೇಕೆ ಸುತ್ತುಗಟ್ಟಿರುವಿರಿ? 

ಸರ್ಪ : ನಾವು ಇವರನ್ನು ಆಲಿಂಗಿಸಿದ್ದೇವೆ, ಅಷ್ಟೇ! ಇವರಲ್ಲಿ ಅನುಗ್ರಹಿಸಲೆಂದೇ ನಾವು ಬಂದಿದ್ದೇವೆ. ಶ್ರೀಗಳವರು : ಮಹಾಸ್ವಾಮಿ, ತಮ್ಮ ಅಭಿಪ್ರಾಯ ನನಗೆ ಅರ್ಥವಾಗಲಿಲ್ಲ. ಅನುಗ್ರಹಿಸಿ ಸ್ಪಷ್ಟಪಡಿಸಬೇಕಾಗಿ ಪ್ರಾರ್ಥಿಸುತ್ತೇನೆ. 

ಸರ್ಪ : “ಪ್ರೀತ್ಯಾಸ್ಪದರೇ, ಹಾಗಾದರೆ ಕೇಳಿ, ಶ್ರೀವಾಯುದೇವರ ಅವತಾರರಾದ ಶ್ರೀಸರ್ವಜ್ಞಾಚಾರ್ಯರ ಸಚ್ಛಾಸ್ತ್ರವನ್ನು ಅವರಿಂದಲೇ ಅಧ್ಯಯನ ಮಾಡಲೂ, ಅದನ್ನು ವಿವರಿಸಲೂ ಗರುಡ-ಶೇಷಾದಿಗಳೇ ಅಧಿಕಾರಿಗಳು ! ಅಂತೆಯೇ ಹಿಂದೆ ನಾವು ಶ್ರೀಸರ್ವಜ್ಞರ ಉಪದೇಶ ಪಡೆಯಲು ಶ್ರೀಪದ್ಮನಾಭತೀರ್ಥರೂಪದಿಂದ ಅವರ ಶಿಷ್ಯರಾಗಿ ಅವರಿಂದಲೇ ದೈತಶಾಸ್ತ್ರದ ಉಪದೇಶ ಪಡೆದು ಕೃತಾರ್ಥರಾದೆವು. ಆಚಾರ್ಯರಾಯರ ಶಾಸ್ತ್ರವನ್ನು ವಿವರಿಸುವ ಅಧಿಕಾರ ನಮ್ಮದೆಂದು ಶ್ರೀಹರಿಯ ಆಜ್ಞೆ. ಅಂತೆಯೇ ನಾವು ಸರ್ವಜ್ಞರ ಭಾಷ್ಯಗಳಿಗೆ ಟೀಕೆಯನ್ನು ರಚಿಸಿ ಪ್ರಥಮ ಟೀಕಾಕಾರರೆಂದು ಗೌರವಾನ್ವಿತರಾದೆವು. ನಾವು ಶ್ರೀಮದಾಚಾರ್ಯರನ್ನು ಅವರ ಎಲ್ಲ ಗ್ರಂಥಗಳಿಗೆ ಟೀಕೆ ರಚಿಸುವ ಭಾಗ್ಯಶಾಲಿಗಳಾರೆಂದು ಪ್ರಾರ್ಥಿಸಿದಾಗ ಅವರು “ವಾಖ್ಯಾಸ್ಪತೈಷ ಗೋರಾಟ್” ಗೋರೂಪದಿಂದ ನಮ್ಮ ಸೇವೆ ಮಾಡುತ್ತಿರುವ ಈ ಇಂದ್ರದೇವರೇ ಆ ಮಹತ್ಕಾರ್ಯ ಮಾಡುವರು. ಅದರಲ್ಲಿ ನೀವೂ ಪಾಲ್ಗೊಳ್ಳಬೇಕು” ಎಂದಾಜ್ಞಾಪಿಸಿದರು.

ಮುಂದೆ ಇಂದ್ರದೇವರು ಶ್ರೀವಿಜಯತೀರ್ಥರೆಂಬ ಅಭಿಧಾನದಿಂದ ಅವತರಿಸಿದಾಗ ಶ್ರೀಹರಿವಾಯುಗಳ ಪ್ರೇರಣೆಯಂತೆ ನಾವು ಅವರಲ್ಲಿ ಆವಿಷ್ಟರಾಗಿದ್ದು ಶ್ರೀಮದಾಚಾರ್ಯರ ಭಾಷ್ಯಗಳಿಗೆ ಅವರು ಟೀಕೆಗಳನ್ನು ರಚಿಸುವ ಕಾರ್ಯದಲ್ಲಿ ಸಹಾಯಕರಾಗಿದ್ದು ಶ್ರೀಹರಿವಾಯುಗಳ ಸೇವೆಯನ್ನು ಮಾಡಿದೆವು. 

ಪ್ರಿಯ ಮುನೀಂದ್ರರೇ, ಈಗ ಪರಮತೀಯರು ಶ್ರೀಮದಾಚಾರ್ಯರ ಭಾಷ್ಯ, ಶ್ರೀಜಯತೀರ್ಥರ ಟೀಕೆಗಳ ಮೇಲೆ ಕುತದೋಷಾಭಾಸಗಳನ್ನು ಹೇರಿ ವೈದಿಕ ಸದೈಷ್ಣವಸಿದ್ಧಾಂತವನ್ನು ಅಪಲಾಪ ಮಾಡುತ್ತಿರುವುದನ್ನು ಪರಿಹರಿಸಲು ಶ್ರೀಹರಿಯ ಪರಮಭಕ್ತರಾದ ಶ್ರೀಪ್ರಹ್ಲಾದರಾಜರೇ ನಿಮ್ಮಿ ಶಿಷ್ಯರಾದ ಶ್ರೀವ್ಯಾಸತೀರ್ಥ ರೂಪದಿಂದ ಶ್ರೀವಾಯುದೇವರ ವಿಶೇಷ ಸನ್ನಿಧಾನಯುಕ್ತರಾಗಿ ಅವತರಿಸಿದ್ದಾರೆ! ಅವರು ಶ್ರೀಮದಾಚಾರ್ಯರ ಗ್ರಂಥಾಭಿಪ್ರಾಯವನ್ನು ಚೆನ್ನಾಗಿ ನಿರೂಪಿಸುವ ಟೀಕೆಗಳ ನೈಜಾಭಿಪ್ರಾಯವನ್ನು ಎತ್ತಿ ಹಿಡಿದು ಪರಮತ ನಿರಾಕರಣಪೂರ್ವಕವಾಗಿ ದೈತಸಿದ್ಧಾಂತಕ್ಕೆ ಬಂದಿರುವ ಎಲ್ಲ ವಿಪತ್ತುಗಳನ್ನೂ ಪರಿಹರಿಸಿ, ಅಸದೃಶ ಟಿಪ್ಪಣಿಗಳನ್ನು ಸ್ವತಂತ್ರ ಗ್ರಂಥಗಳನ್ನು ರಚಿಸಿ, ತತ್ವವಾದ ಮತದ ವಿಜಯ ವೈಜಯಂತಿಯನ್ನು ಎಲ್ಲೆಡೆ ಮೆರೆಸಿ ಪ್ರಥಮ ಟಿಪ್ಪಣಿಕಾರರೆಂಬ ಅಸಾಧಾರಣ ಕೀರ್ತಿಗೆ ಪಾತ್ರರಾಗುವ ಕಾಲ ಸನ್ನಿಹಿತವಾಗಿದೆ. ಈ ಮಹತ್ಕಾರ್ಯದಲ್ಲಿ ನಮ್ಮ ಮಹಾಸಂಸ್ಥಾನಾಧೀಶ್ವರರಾದ ಶ್ರೀವ್ಯಾಸರಾಜರಲ್ಲಿ ನಾವು ಆವಿಷ್ಟರಾಗಿದ್ದು, ತನ್ನ ಮತ್ತು ಶ್ರೀವಾಯುದೇವನ ಸೇವೆ ಮಾಡಬೇಕೆಂಬುದು ಶ್ರೀಹರಿಯ ಸಂಕಲ್ಪ! ಅಂತೆಯೇ ನಾವು ಇವರಲ್ಲಿ ಅನುಗ್ರಹ ಮಾಡಿ ಆಶೀರ್ವದಿಸಲು ಆಗಮಿಸಿದ್ದೇವೆ. ಇವರಿಂದಾಗಿ ದೈತಸಿದ್ಧಾಂತವು ನಿಷ್ಕಂಟಕವಾಗಿ ಆಚಂದ್ರಾರ್ಕಸ್ಥಾಯಿಯಾಗಿ ಬೆಳಗಲಿದೆ. ಈ ಮಹತ್ಕಾರ್ಯವು ಸುಗಮವಾಗಿ ನೆರವೇರುವಂತೆ ಆಶೀರ್ವದಿಸಿದ್ದೇವೆ. ಇವರಿಗೆ ದುಷ್ಟಮೃಗ, ಗ್ರಹಾದಿಗಳ ಬಾಧೆ, ವಿಷಬಾಧೆಗಳುಂಟಾಗದಂತೆ ಮಾಡಲು ನಾನಿವರನ್ನು ಆಲಿಂಗಿಸಿ ಆಶೀರ್ವದಿಸುತ್ತಿದ್ದೇವೆ. ದೈತಸಿದ್ಧಾಂತವು ವಿರಾಜಿಸಿರುವವರೆಗೆ ನಿಮ್ಮ ಮತ್ತು ನಿಮ್ಮ ಶಿಷ್ಯರಾದ ವ್ಯಾಸತೀರ್ಥರ ಹೆಸರು ಅಜರಾಮರವಾಗಿ ವಿರಾಜಿಸುವುದು. 

ಶ್ರೀಗಳವರು ತಮ್ಮ ಅನುಗ್ರಹದಿಂದ ನಾವು ಮತ್ತು ನಮ್ಮ ಶಿಷ್ಯರು ಕೃತಾರ್ಥರಾದೆವು. ಮಹಾಸ್ವಾಮಿ, ನಿಮಗೆ ನಮ್ಮ ಅನಂತ ನಮಸ್ಕಾರಗಳು” ಎಂದು ಹೇಳಿ ನಮಸ್ಕರಿಸಿದರು. ಆನಂತರ ಶ್ರೀಗಳವರು ನೋಡುತ್ತಿರುವಂತೆಯೇ ಸರ್ಪರೂಪದ ಶ್ರೀಪದ್ಮನಾಭತೀರ್ಥರು ಅದೃಶ್ಯರಾದರು!

ಆನಂತರ ಪರಮಾನಂದತುಂದಿಲರಾದ ಶ್ರೀಲಕ್ಷ್ಮೀನಾರಾಯಣಮುನಿಗಳು ಓಡಿಹೋಗಿ ಪ್ರಿಯಶಿಷ್ಯರನ್ನಪ್ಪಿದರು. ಆ ಹೊತ್ತಿಗೆ ಶ್ರೀವ್ಯಾಸರಾಜರು ಅಸಂಪ್ರಜ್ಞಾತ ಸಮಾಧಿಯಿಂದೆಚ್ಚೆತ್ತರು. ಕಣ್ಣು ತೆರೆದು ಗುರುಗಳು ತಮ್ಮನ್ನು ಆಲಿಂಗಿಸಿ ಆನಂದಬಾಷ್ಪ ಸುರಿಸುತ್ತಾ ತಮ್ಮ ಮೈ ಕೈ ಸವರುತ್ತಿರುವುದನ್ನು ಕಂಡು ದಿಗ್ಗನೆ ಮೇಲೆದ್ದು ಗುರುಗಳಿಗೆ ವಂದಿಸಿದರು. 

ಶ್ರೀಮಠದ ಜನರಿಗೆ ಜರುಗಿದ ವಿಚಾರಗಳಾವುದೂ ತಿಳಿಯದಿದ್ದರೂ ಶ್ರೀವ್ಯಾಸರಾಜರಿಗೆ ಯಾವ ಅಪಾಯವೂ ಆಗದೆ ಅವರು ಸುಖವಾಗಿರುವುದನ್ನು ಕಂಡು ಸಂತೋಷದಿಂದ ಶ್ರೀವ್ಯಾಸಮುನಿಗಳ ಮೇಲೆ ಶ್ರೀಹರಿವಾಯುಗಳ ಸಂಪೂರ್ಣಾನುಗ್ರಹವಿದೆಯೆಂದು ಮನಗಂಡು ಸಮಾಧಾನ ತಾಳಿದರು. ಶ್ರೀಗಳವರು ತಾವು ವ್ಯಾಸತೀರ್ಥರ ಜೊತೆಗೆ ಬರುವುದಾಗಿ ಹೇಳಿ ಮಠದ ಜನರನ್ನು ಕಳಿಸಿಬಿಟ್ಟರು. ಅಲ್ಲಿ ಆಗ ಗುರು-ಶಿಷ್ಯರಿಬ್ಬರೇ ಉಳಿದರು. 

ಶ್ರೀಲಕ್ಷ್ಮೀನಾರಾಯಣಯೋಗಿಗಳು ಪ್ರಿಯಶಿಷ್ಯರನ್ನು ಅಭಿಮಾನ-ಪ್ರೀತಿ-ವಾತ್ಸಲ್ಯಗಳಿಂದ ನೋಡುತ್ತ ಅವರಿಗೆ ನಡೆದ ವಿಚಿತ್ರ ಘಟನೆಯನ್ನು ತಿಳಿಸಿ, ಶ್ರೀಪದ್ಮನಾಭತೀರ್ಥರು ಅವರಲ್ಲಿ ಮಾಡಿದ ಅನುಗ್ರಹ, ವ್ಯಾಸತೀರ್ಥರಿಂದ ಜರುಗಬೇಕಾದ ಮಹತ್ಕಾರ್ಯಗಳ ಬಗೆಗೆ ಅವರಿತ್ತ ಆದೇಶಾದಿಗಳನ್ನೆಲ್ಲಾ ವಿವರವಾಗಿ ತಿಳಿಸಿ, “ಪ್ರಿಯಶಿಷ್ಯರೇ! ನೀವೂ, ನಾವೂ ಮಹಾ ಸುಕೃತಶಾಲಿಗಳು. ನಮ್ಮ, ನಿಮ್ಮ ಪೀಠಗಳ ಮೂಲಪುರುಷರೂ, ಶ್ರೀಶೇಷಾಂಶರೂ, ಶ್ರೀಮದಾಚಾರ್ಯರ ಪಟ್ಟದ ಶಿಷ್ಯರೂ ಆದ ಶ್ರೀಪದ್ಮನಾಭತೀರ್ಥರ ಅನುಗ್ರಹಕ್ಕೆ ಪಾತ್ರರಾದೆವು. ನೀವಿನ್ನು ನಮ್ಮಲ್ಲಿ ಅಧ್ಯಯನ ಮಾಡಬೇಕಾದುದೆಲ್ಲವೂ ಪೂರ್ಣವಾಗಿದೆಯೆಂದು ನಾವು ಭಾವಿಸುತ್ತೇವೆ. ಆದರೆ ಇನ್ನು ಕೆಲದಿನಗಳು ನಾವು ನಮ್ಮ ಗುರುಪಾದರಾದ ಶ್ರೀವಿಬುಧೇಂದ್ರತೀರ್ಥ ಶ್ರೀಪಾದಂಗಳವರಿಂದ ಅರಿತ ಶ್ರೀಟೀಕಾಕೃತ್ಪಾದ ಪರಂಪರೆಯಿಂದ ಬಂದ ಶ್ರೀಸರ್ವಜ್ಞಶಾಸ್ತ್ರ, ಪಾಠ-ಪ್ರವಚನ, ಸಂಪ್ರದಾಯರಹಸ್ಯಗಳೆಲ್ಲವನ್ನೂ ನಿಮಗೆ ಉಪದೇಶಿಸಿಬಿಡುತ್ತೇವೆ. ಆನಂತರ ನಿಮ್ಮ ದಿಗ್ವಿಜಯ ಪ್ರಾರಂಭವಾಗಬೇಕಾಗಿದೆ. ನೀವು ದುರ್ವಾದಿಗಳನ್ನು ಜಯಿಸಿ, ದೈತಸಿದ್ಧಾಂತ ಪ್ರತಿಷ್ಠಾಪನೆ ಮಾಡಿ ಅಸದೃಶ ಗ್ರಂಥ ರಚನೆಗಳಿಂದ ಸಿದ್ಧಾಂತವನ್ನು ರೂಢಮೂಲಗೊಳಿಸಿ, ವ್ಯಾಸಪಂಥ-ಹರಿದಾಸಪಂಥಗಳ ನಾಯಕರಾಗಿ ಅಖಂಡ ಭಾರತ ದೇಶದ ಕಲ್ಯಾಣ ಕಾರ್ಯಾಸಕ್ತರಾಗುವುದನ್ನು ಕಂಡಾನಂದಿಸಲು ನಾವು ಆಶಿಸುತ್ತಿದ್ದೇವೆ. ಆ ಕಾಲವೂ ಸನ್ನಿಹಿತವಾಗುತ್ತಿದೆಯೆಂದು ಶ್ರೀಹರಿವಾಯುಗಳು ಈ ವಿಚಿತ್ರ ಘಟನೆಯಿಂದ ನಮಗೆ ಸೂಚಿಸಿದ್ದಾರೆ” ಎಂದು ತಿಳಿಸಿದರು.

ಗುರುಗಳ ವಚನವನ್ನು ವಿಸ್ಮಯಾನಂದಗಳಿಂದ ಕೇಳುತ್ತಿದ್ದ ಶ್ರೀವ್ಯಾಸರಾಜರು ಗುರುಗಳ ಪಾದಸ್ಪರ್ಶ ಮಾಡಿ, “ಮಹಾಸ್ವಾಮಿ, ಇದೆಲ್ಲವೂ ತಮ್ಮ ಪಾದಾನುಗ್ರಹಬಲದಿಂದ ಜರುಗಿದೆ ಎಂದು ನಾನು ನಂಬಿದ್ದೇನೆ. ನಮ್ಮ ಮೂಲಗುರುಗಳ ಅನುಗ್ರಹವನ್ನು ದೊರಕಿಸಿಕೊಟ್ಟ ತಮಗೆ ನಾನು ಅತ್ಯಂತ ಕೃತಜ್ಞನಾಗಿದ್ದೇನೆ' ಎಂದು ಬಿನ್ನವಿಸಿದರು. 

ಆ ತರುವಾಯ ಗುರು-ಶಿಷ್ಯರು ಉಲ್ಲಾಸಭರಿತರಾಗಿ ಶ್ರೀಸಂಸ್ಥಾನದ ಮಹಾಪೂಜಾರಾಧನೆಗಾಗಿ ಚಿತ್ತೈಸಿದರು.