ಕಲಿಯುಗ ಕಲ್ಪತರು
ನಾಲ್ಕನೆಯ ಉಲ್ಲಾಸ
ಶ್ರೀವ್ಯಾಸರಾಜಯತಿಸಾರ್ವಭೌಮರು
೨೧. ಬಾಲಕೃಷ್ಣ ಒಲಿದು ನರ್ತಿಸಿದ!
ಸಕಲ ಶಾಸ್ತ್ರಗಳ ಪಾಠಪ್ರವಚನ ದೇವಪೂಜಾದಿಗಳ ಜೊತೆಗೆ ಶ್ರೀಲಕ್ಷ್ಮೀನಾರಾಯಣಮುನಿಗಳು ಶ್ರೀವಿಠಲನ ಆಜ್ಞೆಯಂತೆ “ಶ್ರೀರಂಗವಿಠಲ” ಎಂಬ ಅಂಕಿತದಿಂದ ಕನ್ನಡ ಹರಿದಾಸ ಸಾಹಿತ್ಯ ರಚನೆಯಲ್ಲಿಯೂ ಆಸಕ್ತರಾಗಿ ನೂರಾರು ದೇವರ ನಾಮಗಳನ್ನು ರಚಿಸಹತ್ತಿದರು. ಬರಬರುತ್ತಾ ಅವರು ಅಂತರ್ಮುಖಿಗಳಾಗಹತ್ತಿದರು. ಅಪರೋಕ್ಷಜ್ಞಾನಿಗಳಾದ ಅವರ ಮುಖದಲ್ಲಿ ಅಲೌಕಿಕ ತೇಜಸ್ಸು ಬೆಳಗುತ್ತಿತ್ತು. ಅವರ ದರ್ಶನ ಆಲಾಪನ-ಉಪದೇಶಾದಿಗಳಿಂದ ಸುಜನವೃಂದ ಕೃತಾರ್ಥವಾಗುತ್ತಿತ್ತು. ಜನರು ತಮ್ಮ ಪಾಪ ಪರಿಹಾರಪೂರ್ವಕ ಇಷ್ಟಾರ್ಥಗಳನ್ನು ಪಡೆದು ಮುದಿಸುತ್ತಿದ್ದರು.
ವೇದಾದಿಶಾಸ್ತ್ರಗಳಲ್ಲಿ ಅಡಗಿದ್ದ ಸತ್ತತ್ವಸಾರಗಳನ್ನೂ, ಭಗವಂತನ ಲೀಲಾವಿಲಾಸಗಳನ್ನೂ, ಪ್ರಮೇಯಗಳನ್ನೂ ಜನಸಾಮಾನ್ಯರಿಗೆ ತಿಳಿಸಿಕೊಟ್ಟು ಅವರೆಲ್ಲರೂ ಉದ್ಘತರಾಗುವಂತೆ ಮಾಡುವ ಮಹೋದ್ದೇಶದಿಂದ ಅವರು ಕನ್ನಡ ಭಾಷೆಯಲ್ಲಿ ನೂರಾರು ಪದ-ಪದ್ಯಗಳನ್ನೂ ಕಾವ್ಯಗಳನ್ನೂ ರಚಿಸಿದರು. ಅವರ ಕೃತಿಗಳೆಲ್ಲವೂ ವಿವಿಧ ರಾಗ-ತಾಳ ಬದ್ಧವಾಗಿದ್ದು ಸಂಗೀತ ಮಾಧ್ಯಮದಿಂದ ಕೂಡಿರುತ್ತಿದ್ದುದರಿಂದ ಅವು ಆಪಂಡಿತ ಪಾಮರರ ಮನಸ್ಸನ್ನಾಕರ್ಷಿಸಿ ಬಹುಬೇಗ ಜನಪ್ರಿಯವಾದವು. ಶ್ರೀನರಹರಿತೀರ್ಥರಿಂದ ಪ್ರಾರಂಭವಾಗಿ ಸುಪ್ತವಾಗಿದ್ದ ಕನ್ನಡ ಹರಿದಾಸ ಸಾಹಿತ್ಯ ಶ್ರೀಲಕ್ಷ್ಮೀನಾರಾಯಣಮುನಿ- ಗಳಿಂದ ಮತ್ತೆ ಚಿಗುರೊಡೆಯಿತು. ಇದರಿಂದ ಅವರಿಗೆ ಕನ್ನಡ ಹರಿದಾಸ ಸಾಹಿತ್ಯ ಪಿತಾಮಹರೆಂಬ ಕೀರ್ತಿ ಪ್ರಾಪ್ತವಾಯಿತು. ಇಂದಿಗೂ ಹರಿದಾಸ ಪರಂಪರೆಯಲ್ಲಿ ಅವರನ್ನು ದಾಸವಾಹ್ಮಯದ ಪಿತಾಮಹರೆಂದು ಜ್ಞಾನಿಗಳು ಗೌರವಿಸುತ್ತಿದ್ದಾರೆ.
ಶ್ರೀಲಕ್ಷ್ಮೀನಾರಾಯಣಮುನಿಗಳು ತಮ್ಮ ಪೂಜಾದಿ ಸಕಲಕಾರ್ಯಗಳಲ್ಲಿಯೂ ವ್ಯಾಸರಾಜರು ಪಾಲ್ಗೊಳ್ಳುವಂತೆ ಮಾಡುತ್ತಿದ್ದರು. ವ್ಯಾಸತೀರ್ಥರು ಪೂಜಾಕಾಲದಲ್ಲಿ ಗುರುಗಳಿಗೆ ಸಹಾಯ ಮಾಡುವುದರ ಜೊತೆಗೆ ಆ ಕಾಲದಲ್ಲಿ ಗುರುಗಳು ರಚಿಸಿದ ಕೀರ್ತನೆಗಳನ್ನು ಹಾಡುತ್ತಿದ್ದರು. ಪೂಜಾ, ರಾತ್ರಿ ದೀಪಾರಾಧನೆ ಸಮಯಗಳಲ್ಲಿ ವ್ಯಾಸರಾಜರು ಸುಮಧುರ ಕಂಠದಿಂದ ತಮ್ಮ ಕೃತಿಗಳನ್ನು ಹಾಡಿ ಸರ್ವರನ್ನೂ ಪರವಶಗೊಳಿಸುತ್ತಿದ್ದುದನ್ನು ಕಂಡು ಲಕ್ಷ್ಮೀನಾರಾಯಣಮುನಿಗಳೂ ಆನಂದದಿಂದ ಮೈಮರೆಯುತ್ತಿದ್ದರು. ಹೀಗೆ ಕಾಲಚಕ್ರ ಉರುಳಿತು......
ಒಂದು ದಿನ ಬೇರೆ ಬೇರೆ ಊರುಗಳಿಂದ ಬಂದಿದ್ದ ಶಿಷ್ಯರು-ಭಕ್ತರುಗಳೊಡನೆ ಲಕ್ಷ್ಮೀನಾರಾಯಣಯತಿಗಳು ಮಾತನಾಡುತ್ತಾ ಕುಳಿತಿರುವಾಗ ಪಾರುಪತ್ತೇದಾರರು ಬಂದು ಪೂಜೆಗೆ ವೇಳೆಯಾಯಿತೆಂದು ವಿಜ್ಞಾಪಿಸಿದರು. ಗುರುಗಳು ತಮ್ಮ ಪಕ್ಕದಲ್ಲಿ ಕುಳಿತಿದ್ದ ವ್ಯಾಸರಾಜರನ್ನು ನೋಡಿ “ನೀವು ಸ್ನಾನಾಕಾದಿಗಳನ್ನು ಮುಗಿಸಿ, ನಿರ್ಮಾಲ್ಯ ವಿಸರ್ಜನೆ ಮಾಡಿ, ಪೂಜೆಗೆ ಅಣಿಮಾಡಿರಿ. ನಾವು ಬೇಗ ಬಂದು ದೇವತಾರಾಧನೆ ನೆರವೇರಿಸುತ್ತೇವೆ” ಎಂದಾಜ್ಞಾಪಿಸಿದರು.
ಶ್ರೀವ್ಯಾಸರಾಜರು ಗುರುಗಳ ಅಪ್ಪಣೆಯಂತೆ ಸ್ನಾನಾಹಿಕಾದಿಗಳನ್ನು ಪೂರೈಸಿ ದೇವರ ಮಂಟಪದ ಮುಂದೆ ಕುಳಿತು ಮಂದಾಸನದಲ್ಲಿದ್ದ ದೇವರ ಪೆಟ್ಟಿಗೆಯನ್ನು ಬಿಚ್ಚಿ ಶ್ರೀಗೋಪೀನಾಥ-ರಂಗವಿಠಲಾದಿ ಸಂಸ್ಥಾನ ಪ್ರತಿಮೆಗಳನ್ನು ಮಂದಾಸನದಲ್ಲಿ ಮಂಡಿಸಿ ಪೂಜೆಗೆ ಪ್ರಾರಂಭಿಸಿದರು.
ಮೊದಲು ಶಾಲಿಗ್ರಾಮಗಳನ್ನು ಸೋಮಸೂತ್ರದಲ್ಲಿಟ್ಟು ನಿರ್ಮಾಲ್ಯ ವಿಸರ್ಜನೆ ಮಾಡಲು ಸಿದ್ದರಾದರು. ಆಗ ಅವರಿಗೇನೋ ಪ್ರೇರಣೆಯಾದಂತಾಗಿ ಗುರುಗಳಿಗೆ ಪಂಡರಪುರದಲ್ಲಿರಂಗವಿಠಲನ ಪೆಟ್ಟಿಗೆಯೊಡನೆ ದೊರಕಿದ್ದ ಮತ್ತೊಂದು ದೇವರ ಪೆಟ್ಟಿಗೆಯನ್ನೂ ಬಿಚ್ಚಿ ಅದರಲ್ಲಿದ್ದ ಸಂಪುಟವನ್ನು ಕರದಲ್ಲಿ ಹಿಡಿದರು. ಆಗವರ ಮನದಲ್ಲಿ ಒಂದು ಬಗೆಯ ಭಾವೋದ್ವೇಗವುಂಟಾಯಿತು. ಅವರ ನರನಾಡಿಗಳಲ್ಲಿ ಆವುದೋ ಒಂದು ವಿಚಿತ್ರ ಶಕ್ತಿ ಪ್ರವಹಿಸಿದಂತಾಗಿ ರೋಮಾಂಚನಗೊಂಡರು! ಅವರಿಗರಿವಾಗದಂತೆಯೇ ಅವರ ಕರಗಳು ಅದುವರೆಗೂ ತೆರೆಯಲಾಗದಿದ್ದ ಸಂಪುಟದ ಮುಚ್ಚಳವನ್ನು ತೆಗೆದುಬಿಟ್ಟವು! ಕೂಡಲೇ ಸಂಪುಟದಿಂದ ದಿವ್ಯವಾದ ಪ್ರಕಾಶವೊಂದು ಬೆಳಗಿದಂತಾಯಿತು. ಕುತೂಹಲ, ಆಶ್ಚರ್ಯ, ಸಂಭ್ರಮಾನಂದಗಳಿಂದ ತೆರೆದ ಸಂಪುಟವನ್ನೊಮ್ಮೆ ಈಕ್ಷಿಸಿದರು. ಏನಾಶ್ಚರ್ಯ! ಸಂಪುಟದಲ್ಲಿ ವಿರಾಜಿಸಿದ್ದ ಶುದ್ಧ ತಾಮ್ರಮಯ ಗೋಪಾಲಕೃಷ್ಣನ ಸುಂದರ ಮುಖವು ಗೋಚರಿಸಿತು. ಭಕ್ತಿಯಿಂದ ನಿಟ್ಟಿಸಿ ನೋಡುತ್ತಿರುವಾಗ ಶ್ರೀಬಾಲಗೋಪಾಲನು ತಮ್ಮನ್ನು ನೋಡಿ ಕಿಲಕಿಲನೆ ನಕ್ಕಂತಾಯಿತು! ಜಗತ್ತನ್ನೇ ಮರುಳುಗೊಳಿಸುವ ಶ್ರೀಬಾಲಗೋಪಾಲನ ಮಂದಹಾಸರಂಜಿತವಾದ ಮುಖವು ವ್ಯಾಸತೀರ್ಥರ ಹೃದಯದಲ್ಲಿ ಅಚ್ಚಳಿಯದೆ ನೆಲೆನಿಂತಿತು! ಬಾಲಗೋಪಾಲನ ವಿಗ್ರಹವನ್ನು ಭಕ್ತಿಯಿಂದ ಕರದಲ್ಲಿ ಪಿಡಿದು ದೇವನ ಪಾದಗಳ ಮೇಲೆ ಶಿರವಿರಿಸಿ, ಸ್ತುತಿಸಿ ಸೋಮಸೂತ್ರದಲ್ಲಿರಿಸಿದರು.
ಶ್ರೀವ್ಯಾಸರಾಜರಿಗೆ ಬಾಲಗೋಪಾಲನ ಸುಂದರವದನವನ್ನು ಮತ್ತೆ ನೋಡುವ ಬಯಕೆಯಾಯಿತು. ದೇವದೇವನನ್ನು ಸುಂದರವದನವನ್ನು ತೋರುತ್ತಾಬಾರೆಂದು ಕರೆಯಬೇಕೆನಿಸಿತು. ಆ ಮುರುಳೀ ಮೋಹನನ ವದನಾರವಿಂದದಲ್ಲಿ ಸ್ವಲ್ಪ ಹೊತ್ತಿನ ಮುಂಚೆ ತಾವು ಕಂಡ ಮುಗುಳುನಗೆಯನ್ನು ಮತ್ತೊಮ್ಮೆ ವೀಕ್ಷಿಸುವ ತವಕವುಂಟಾಯಿತು. “ನನ್ನನ್ನು ಕರೆ” ಎಂದು ಭಗವಂತ ಕಿವಿಯಲ್ಲಿ ಹೇಳಿದಂತಾಯಿತು! ಆಗ ಇದ್ದಕ್ಕಿದ್ದಂತೆ ಶ್ರೀವ್ಯಾಸರಾಜರ ಮುಖದಿಂದ ಭಕ್ತಿಗೀತೆಯೊಂದು ತಾನೇತಾನಾಗಿ ಹೊರಹೊಮ್ಮಿತು!
ರಾಗ : ಯಮುನಾಕಾಣಿ
ಕೃಷ್ಣಾ ನೀ ಬೇಗನೆ ಬಾರೋ
ಕೃಷ್ಣಾ ನೀ ಬೇಗನೇ ಬಾರೋ ಮುಖವನ್ನೇ ತೋರೋ
ಕಾಲಲ್ಲಂದುಗೆ ಗೆಜ್ಜೆ ಘಲುಘಲುರೆನುತಿರೆ |
ನೀಲವರ್ಣನೇ ನಾಟ್ಯವಾಡುತ ಬಾರೋ
ವರ ಉಡಿಯೋಳುಡಿಗೆಜ್ಜೆ ನೀಲದ ಬಾವುಲಿ |
ಕೊರಳೊಳು ಹಾಕಿದ ವೈಜಯಂತೀಮಾಲಾ
ಮೊಗದೊಳು ತಾಯಿಗೆ ಜಗವನ್ನೇ ತೋರಿದ |
ಜಗದೋದ್ದಾರಕ ನಮ್ಮ ಉಡುಪಿ ಶ್ರೀಕೃಷ್ಣಾ
ಆಶ್ಚರ್ಯ, ಪರಮಾಶ್ಚರ್ಯ! ಸೋಮಸೂತ್ರದಲ್ಲಿ ಮಂಡಿಸಿದ್ದ ಶ್ರೀಬಾಲಗೋಪಾಲ ಚಲಿಸಿದಂತಾಯಿತು. ಇದೇನೆಂದು ಅಚ್ಚರಿಯಿಂದ ವ್ಯಾಸರಾಜರು ನೋಡುತ್ತಿರುವಂತೆಯೇ ಶುದ್ಧ ತಾಮ್ರಮಯವಾದ ಗೋಪಾಲಕೃಷ್ಣನ ಪ್ರತಿಮೆಯು ಸೋಮಸೂತ್ರದಿಂದ ಕೆಳಕ್ಕೆ ಹಾರಿ ಆಕಾರ ತಾಳಿ ಐದು ವರ್ಷ ವಯಸ್ಸಿನ ಬಾಲಕೃಷ್ಣನಾಗಿ ನಸುನಗುತ್ತಾನಿಂತಿರುವುದು ಅವರಿಗೆ ಗೋಚರಿಸಿತು!
ಅಬ್ಬಾ, ಅದೆಂಥಾ ಸೌಂದರ್ಯ! ನೀಲನೀರದ ಕಾಂತಿಯಿಂದ ಸಕಲಲೋಕ ಸೌಂದರ್ಯಸಾರವೆಲ್ಲಾ ರೂಪ ತಳೆದು ನಿಂತಿರುವಂತೆ ಭಾಸವಾಗುತ್ತಿದೆ. ಪೀತಾಂಬರಧಾರಿಯಾಗಿ ನಿಲುವಾಭರಣಭೂಷಿತನಾಗಿದ್ದಾನೆ. ಆ ಸ್ವಾಮಿ! ಮನೋಹರವಾದ ಶಿರದ ಮೇಲೆ ಕೇಶವನ್ನು ಗಂಟಿಕ್ಕಿ ಕಟ್ಟಿದ್ದಾನೆ. ರತ್ನಮಯ ಸರಪಳಿಯನ್ನು ಅದಕ್ಕೆ ಸುತ್ತಿದ್ದಾನೆ. ಶಿಖೆಯ ಮೇಲೆ ನವಿಲುಗರಿ ಶೋಭಿಸುತ್ತಿದೆ. ನೀಲವರ್ಣದ ಉಂಗುರ-ಉಂಗುರವಾಗಿ ಕಂಗೊಳಿಸುವ ಕೇಶಗಳು ಭುಜ, ಬೆನ್ನುಗಳ ಮೇಲೆ ಹಾರಾಡುತ್ತಿವೆ. ಕರ್ಣಗಳಲ್ಲಿ ಮಕರಕುಂಡಲಗಳು, ಕಂಠದಲ್ಲಿ ಮುತ್ತು, ಮಾಣಿಕ್ಯ, ರತ್ನಖಚಿತ ಹಾರಗಳು, ಭುಜಕರಗಳಲ್ಲಿ ನವರತ್ನಮಯವಾದ ನಾಗಮುರಿಗೆ-ಕಂಕಣಗಳು, ಬೆರಳುಗಳಲ್ಲಿ ವಜ್ರ, ನೀಲಮಯ ಉಂಗುರಗಳು, ಕಾಲುಗಳಲ್ಲಿ ಸುವರ್ಣಮಯ ಕಾಲಂದಿಗೆ ಗೆಜ್ಜೆ, ರತ್ನಮಯ ಪಾಲ್ಗಡಗಗಳು, ಟೊಂಕದಲ್ಲಿ ಮುತ್ತು-ಪಚ್ಚೆ-ರತ್ನಗಳಿಂದ ಶೋಭಿಸುವ ಕನಕಮಯ ನಡುಪಟ್ಟಿ, ನಡುಪಟ್ಟಿಯಲ್ಲಿ ಸುವರ್ಣಮಯವಾದ ಕೊಳಲು ರಾರಾಜಿಸುತ್ತಿದೆ. ಸುಂದರ ಮುಖದಲ್ಲಿ ವಿಸ್ತಾರವಾದ ಚಂಚಲ ನಯನಗಳು ಮಿಂಚಿನ ಕಾಂತಿಯಿಂದ ಬೆಳಗುತ್ತಿದೆ. ಮನಮೋಹಕ ಮುಖದಲ್ಲಿ ಕಂಗೊಳಿಸುತ್ತಿರುವ ಮಂದಹಾಸ ಬೆಳದಿಂಗಳ ಕಾಂತಿಯನ್ನು ನಾಚಿಸುತ್ತಿದೆ. ಇಂತು ಸಾಕ್ಷಾತ್ ಮನ್ಮಥಮನ್ಮಥನೂ, ಜಗಮ್ಮೋಹನಾಕಾರನೂ ಆದ ನಂದನಂದನನಾದ ಆ ಬಾಲಗೋಪಾಲನು ಶ್ರೀವ್ಯಾಸತೀರ್ಥರನ್ನು ನೋಡಿ ಕಿಲಕಿಲನೆ ನಗುತ್ತಾ ನಾಟ್ಯವಾಡಲಾರಂಭಿಸಿದನು.
ಆಗ ಶ್ರೀವ್ಯಾಸಯತಿಗಳು ಶ್ರೀಕೃಷ್ಣನು ಕಾಳಿಂಗಮರ್ದನ ಮಾಡಿ ನರ್ತಿಸಿದ ಪರಮದೃಶ್ಯವನ್ನು ಮನದಲ್ಲಿ ಚಿಂತಿಸಹತ್ತಿದ್ದರು. ಶ್ರೀಬಾಲಕೃಷ್ಣ ತನ್ನ ಪ್ರಿಯಭಕ್ತರಾದ ಶ್ರೀವ್ಯಾಸರಾಜ ಮುನಿಪುಂಗವರಿಗೆ ಕಾಳಿಂಗಮರ್ದನ ನಾಟ್ಯವನ್ನೇ ತೋರಲಾರಂಭಿಸಿದರು.
ಶ್ರೀವ್ಯಾಸರಾಜರು ಇದೇನು ಸ್ವಪ್ನವೋ, ಜಾಗೃದವಸ್ಥೆಯೋ ಎಂದು ಸುತ್ತಲೂ ಪರಿಕಿಸಿ, ತಾವು ಕಾಣುತ್ತಿರುವ ಅದ್ಭುತ, ಮನೋಹರವಾದ ದೃಶ್ಯವು ಸತ್ಯಭೂತವಾದುದೆಂದು ಮನಗಂಡರು. ಆಗ ಅವರ ಹೃದಯದಲ್ಲಿ ಭಕ್ತಿ ಭಾಗೀರಥಿಯು ಪುಟಿದೆದ್ದಳು. ಮೈ ರೋಮಾಂಚಿತವಾಯಿತು. ಹೃದಯ ತುಂಬಿ ಬಂದಿತು. ಕಣ್ಣುಗಳಲ್ಲಿ ಆನಂದಾಶ್ರು ಮಿಡಿಯಿತು. ಮೈಮರೆತು ಗುರುಗಳ ಕರಗಳು ಸೋಮಸೂತ್ರದಲ್ಲಿದ್ದ ಶಾಲಿಗ್ರಾಮಗಳನ್ನು ಹಿಡಿದವು. ಶಾಲಿಗ್ರಾಮಗಳಿಂದ ತಾಳಹಾಕುತ್ತಾ ತಮಗೆ ದರ್ಶನವಿತ್ತು ನರ್ತಿಸುತ್ತಿರುವ ಶ್ರೀಬಾಲಗೋಪಾಲನ ಕಾಳಿಂಗಮರ್ದನ ನಾಟ್ಯವನ್ನು ವರ್ಣಿಸಿ ಹಾಡಲಾರಂಭಿಸಿದರು! ಶ್ರೀಬಾಲಗೋಪಾಲ ಅವರ ಗಾನ-ತಾಳಗಳಿಗೆ ತಕ್ಕಂತೆ ವಿಚಿತ್ರ ರೀತಿಯಲ್ಲಿ ನರ್ತಿಸಲಾರಂಭಿಸಿದ
ರಾಗ : ಸೌರಾಷ್ಟ್ರ
ಕಾಳಿಂಗನ ಮೆಟ್ಟಿ ನಾಟ್ಯವಾಡಿದ ಕಂಜನಾಭ ಕೃಷ್ಣನು
ಕಾಳಿಂಗನ ಮೆಟ್ಟಿ ಆಡಿದ ಭರದಲ್ಲಿ
ಶ್ರೀವತ್ಸ ಉರದಲ್ಲಿ ಕೊರಳಲ್ಲಿ ವನಮಾಲೆ
ತರಳತನದಲ್ಲಿ ಯಮುನೆಯ ಮಡುವಿನಲ್ಲಿ ಆಡುತ್ತ ಪಾಡುತ್ತ
|| ಅ.ಪ. ||
ಕಾಲಲಿ ಗೆಜ್ಜೆ ಘಲುಘಲುಘಲುರೆನ್ನೆ
ಫಾಲಾದಿ ತಿಲಕವು ಹೊಳೆಹೊಳೆ ಹೊಳೆಯುತ್ತ
ಜ್ವಲಿತ ಮಣಿಮಯ ಲಲಿತಪದಕಹಾರ
ಜ್ವಲಿತಕಾಂತಿ ಬೆಳಗುತ ದಿಕ್ಕುಗಳಲ್ಲಿ
ಸುರರು ದುಂದುಭಿಯ ಢಣಢಣ ಢಣರೆಂದು
ಮೊರೆಯ ತಾಳಗಳು ಝಣಝಣ ಝಣಾರೆಂದು
ಹರ ಬ್ರಹ್ಮ ಸುರರು ತಟ್ಟೆ ತಟ್ಟೆಯೆನ್ನಲು
ನಾರದ ತು೦ಬರ ಸಿದರು ವಿದ್ಯಾ-
ಧರರು ಅಂಬರದಲ್ಲಿ ಆಡುತ್ತ ಪಾಡಲು
ಯೋಗಿಗಳೆಲ್ಲ ಜಯಜಯ ಜಯಯೆನ್ನೆ
ಭೋಗಿಗಳೆಲ್ಲ ಭಯಭಯ ಭಯವೆನ್ನೆ
ನಾಗಕನೈಯರು ಅಭಯ ಅಭಯವೆನ್ನೆ
ನಾಗಶಯನ ಸಿರಿಕೃಷ್ಣ ಜನನಿಯ ಕಂಡು
ಬೇಗನೆ ಬಿಗಿದಪ್ಪಿ ಮುದ್ದನ್ನು ತೋರಿದ
ಇತ್ತ ಶ್ರೀಲಕ್ಷ್ಮೀನಾರಾಯಣಮುನಿಗಳು ಧಾರ್ಮಿಕ ನಿಯೋಗದವರೊಡನೆ ಮಾತನಾಡಿ ಪದ್ಧತಿಯಂತೆ ಅಭ್ಯಂಜನ ಸ್ನಾನಕ್ಕೆ ತೆರಳಿದರು. ಶ್ರೀಮಠದ ಪರಿಚಾರಕನೊಬ್ಬ ಪೂಜೆಗೆ ಹೂವು-ತುಳಸಿಗಳನ್ನು ತೆಗೆದುಕೊಂಡು ಬಂದು ಅದನ್ನು ದೇವಗೃಹದಲ್ಲಿಡಲು ಹೋದನು. ಅಲ್ಲಿ ಶ್ರೀವ್ಯಾಸರಾಜರು ಶಾಲಿಗ್ರಾಮಗಳಿಂದ ತಾಳ ಹಾಕುತ್ತಾ ಮೈಮರೆತು ಗಾನಮಾಡುತ್ತಿರುವುದು ಕಣ್ಣಿಗೆ ಬಿದ್ದಿತು. ಅದನ್ನು ಕಂಡು ಅವನು ಗಾಬರಿಯಾಗಿ ಶ್ರೀವ್ಯಾಸತೀರ್ಥರಿಗೆ ಹುಚ್ಚು ಹಿಡಿಯಿತೆಂದು ಭ್ರಮಿಸಿ ಈ ವಿಚಾರವನ್ನು ಲಕ್ಷ್ಮೀನಾರಾಯಣಮುನಿಗಳಿಗೆ ತಿಳಿಸಲು ಓಡಿದನು.
ಶ್ರೀಗಳವರು ಅಭ್ಯಂಜನವನ್ನು ಮುಗಿಸಿ, ಮಡಿನೀರಿನಿಂದ ಸ್ನಾನಮಾಡಿ ಕರವಸ್ತ್ರವನ್ನುಟ್ಟು ಮೈ ಒರೆಸಿಕೊಳ್ಳುತ್ತಿರಲು ಪರಿಚಾರಕನು ಓಡಿ ಬಂದು “ಸ್ವಾಮಿ, ಶ್ರೀವ್ಯಾಸತೀರ್ಥರಿಗೆ ಹುಚ್ಚು ಹಿಡಿದಿದೆ. ಕೈಯಲ್ಲಿ ಶಾಲಿಗ್ರಾಮಗಳನ್ನು ಹಿಡಿದು ಕುಟ್ಟುತ್ತಾ ಭ್ರಾಂತರಾಗಿ ಹಾಡುತ್ತಿದ್ದಾರೆ” ಎಂದು ವಿಜ್ಞಾಪಿಸಿದನು.
ಪರಿಚಾರಕನ ಮಾತು ಕೇಳಿ ಲಕ್ಷ್ಮೀನಾರಾಯಣಮುನಿಗಳಿಗೆ ಒಂದು ಬಗೆಯ ಭಯವಾಯಿತು. ಕೂಡಲೇ ಶಿಷ್ಯಾಭಿಮಾನದಿಂದ ಒದ್ದೆಯ ಕರವಸ್ತ್ರವನ್ನುಟ್ಟೇ ದೇವಗೃಹದತ್ತ ಧಾವಿಸಿದರು. ಹತ್ತಿರ ಹೋಗುತ್ತಿದ್ದಂತೆ ಅವರಿಗೆ “ಫಲ್, ಘಲ್, ಘಲಿ” ಎಂಬ ಮಂಜುಳವಾದ ಗೆಜ್ಜೆಯ ನಾದ ಕೇಳಿಸಿತು! ಯಾರೋ ನರ್ತಿಸುತ್ತಿರುವಂತೆ ಭಾಸವಾಯಿತು. ಕುತೂಹಲದಿಂದ ಅವರು ದೇವಮಂದಿರದ ಕಿಟಕಿಯಿಂದ ಇಣುಕಿ ನೋಡಿದರು. ಅಲ್ಲಿ ಅವರು ಕಂಡ ಅಪೂರ್ವ ದೃಶ್ಯ ಅವರನ್ನು ದಿಗ್ಧಮೆಗೊಳಿಸಿತು! ಪರಾತ್ಪರನಾದ ಬಾಲಗೋಪಾಲನ ಸುರಮನೋಹರ ಸುಂದರರೂಪ ಅವರ ನಯನಗಳಿಗೆ ಗೋಚರಿಸಿತು! ಪ್ರಿಯಶಿಷ್ಯರಾದ ಶ್ರೀವ್ಯಾಸರಾಜರು ಭಕ್ತಿಪರವಶರಾಗಿ ಗಾನಮಾಡುತ್ತಿದ್ದಾರೆ. ಅವರ ನೇತ್ರಗಳಿಂದ ಆನಂದಾಶ್ರು ಹರಿಯುತ್ತಿದೆ. ಮೈಮರೆತ ಅವರು ಶಾಲಿಗ್ರಾಮಗಳಿಂದ ತಾಳ ಹಾಕುತ್ತಿದ್ದಾರೆ! ಅವರ ಮುಂದೆ ನಂದನಂದನನು ಆನಂದದಿಂದ ಕಾಳಿಂಗ ನಾಟ್ಯವಾಡುತ್ತಿದ್ದಾನೆ!!
ದೇವಾನುದೇವತೆಗಳಿಗೂ ಅಲಭ್ಯವಾದ ಪರಮಪವಿತ್ರ ದೃಶ್ಯ! ಸಹಸ್ರಾರು ವರ್ಷಗಳ ಕಾಲ ತಪಸ್ಸನ್ನೆಸಗಿದರೂ ಋಷಿಮುನಿಗಳಿಗೆ ದರ್ಶನವೀಯದ ಸಾಕ್ಷಾತ್ ಪರಬ್ರಹ್ಮ ಸ್ವರೂಪನಾದ ಶ್ರೀಬಾಲಕೃಷ್ಣನು ಪ್ರಿಯಶಿಷ್ಯರಿಗೆ ತಾನಾಗಿ ಒಲಿದು ಬಂದು ತನ್ನ ಲೀಲಾತಾಂಡವವನ್ನು ಪ್ರದರ್ಶಿಸುತ್ತಾ ಆನಂದಗೊಳಿಸುತ್ತಿದ್ದಾನೆ! ಅದನ್ನು ಕಂಡು ಶ್ರೀಲಕ್ಷ್ಮೀನಾರಾಯಣಮುನಿಗಳು ಭಕ್ತಿಪುಳಕಿತಗಾತ್ರರಾದರು. ಅವರ ಕಣ್ಣುಗಳಿಂದ ಧಾರಾಕಾರವಾಗಿ ಆನಂದಾಶ್ರು ಪ್ರವಹಿಸಿತು. ಮೈಯಲ್ಲಿ ವಿದ್ಯುತ್ತಂಚಾರವಾಯಿತು. ಆನಂದಶರಧಿಯುಕ್ಕಿ ಹರಿಯಿತು! ಗದ್ಗದ ಕಂಠದಿಂದ “ಕೃಷ್ಣಾ, ಪ್ರಭು, ಗೋಪಾಲ” ಎನ್ನುತ್ತಾ ಭಕ್ತಿಯ ಆವೇಗದಿಂದ ಹುಚ್ಚು ಹಿಡಿದವರಂತೆ ದೇವಮಂದಿರದೊಳಗೆ ಧಾವಿಸಿ ಬಂದರು. ಶ್ರೀಗಳವರು ಒಳಗೆ ಬಂದ ಕೂಡಲೇ ಬಾಲಕೃಷ್ಣ ಅವರು ಮಂದಹಾಸ ಬೀರಿ ಅಭಯಪ್ರದಾನ ಮಾಡಿ ಅದೃಶ್ಯನಾದನು! ಅವನ ಸ್ಥಾನದಲ್ಲಿ ಹೊಸದಾದ, ತಾವು ಆವರೆಗೂ ಕಾಣದ ಶುದ್ಧ ತಾಮ್ರಮಯವಾದ ಶ್ರೀಗೋಪಾಲಕೃಷ್ಣ ಪ್ರತಿಮೆಯು ರಾಜಿಸುತ್ತಿದೆ! ಅದನ್ನು ಕಂಡು ಅವನ ಮನದಲ್ಲಿ ಮಿಂಚೊಂದು ಮಿನುಗಿದಂತಾಗಿ ಒಂದು ವಿಚಾರವು ಸ್ಪುರಿಸಿತು.
ಹಿಂದೆ ಪಂಢರಾಪುರದಲ್ಲಿ ಸ್ವಪ್ನದಲ್ಲಿ ಶ್ರೀ ಪಾಂಡುರಂಗವಿಠಲನು ಎರಡು ದೇವರ ಪೆಟ್ಟಿಗೆಗಳ ವಿಚಾರ ಹೇಳಿ ಒಂದರಲ್ಲಿ “ಶ್ರೀರಂಗವಿಠಲ' ಸ್ವರೂಪನಾದ ತಾನು, ತಮಗೊಲಿದಿರುವುದಾಗಿಯೂ ಅದನ್ನು ಸಂಸ್ಥಾನದ ಆರಾಧ್ಯಮೂರ್ತಿಗಳೊಂದಿಗೆ ಪೂಜಿಸಬೇಕೆಂದೂ ಹೇಳಿ ಇನ್ನೊಂದು ಪೆಟ್ಟಿಗೆಯಲ್ಲಿರುವ ತಾನು ಬೇರೊಂದು ಪ್ರತಿಮಾರೂಪ- ನಾಗಿದ್ದು, ಮುಂದೆ ತನ್ನ ಪ್ರಿಯಭಕ್ತಿನಿಗೊಲಿಯುವುದಾಗಿಯೂ ಅಪ್ಪಣೆ ಕೊಡಿಸಿದ್ದು, ಶ್ರೀಲಕ್ಷ್ಮೀನಾರಾಯಣಮುನಿಗಳಿಗೆ ನೆನಪಾಯಿತು. ಅಂದು ಶ್ರೀಹರಿಯು ಹೇಳಿದ ಮತ್ತೊಬ್ಬ ಪರಮಭಕ್ತರೇ ಶ್ರೀವ್ಯಾಸರಾಜರೆಂದೂ ಈಗ ಶ್ರೀವ್ಯಾಸತೀರ್ಥರಿಗೊಲಿದು ದರ್ಶನವಿತ್ತು ನರ್ತಿಸಿದ ಬಾಲಕೃಷ್ಣನೇ ಈ ಮತ್ತೊಂದು ಭಗವನ್ನೂರ್ತಿಯೆಂದು ಅವರಿಗೆ ಈಗ ಸ್ಪಷ್ಟವಾಯಿತು. “ಧನ್ಯ, ಪ್ರಿಯಶಿಷ್ಯರೇ ಪರಮಧನ್ಯರು ನೀವು! ನಿಮ್ಮ ಭಾಗ್ಯವೆಷ್ಟು ದೊಡ್ಡದು! ಶ್ರೀಬಾಲಕೃಷ್ಣನನ್ನು ಪ್ರಸನ್ನೀಕರಿಸಿಕೊಂಡು ಕುಣಿಸಿದ ನೀವು ಸಾಮಾನ್ಯರಲ್ಲ! ಲೋಕಕಲ್ಯಾಣಕ್ಕಾಗಿಯೇ ಅವತರಿಸಿದ ಮಹಾನುಭಾವರು” ಎನ್ನುತ್ತ ಹಾಗೆಯೇ ಹೋಗಿ ವ್ಯಾಸರಾಜರನ್ನು ಭರದಿಂದ ಅಪ್ಪಿಬಿಟ್ಟರು!
ಶ್ರೀವ್ಯಾಸತೀರ್ಥರಿಗೆ ಆಗ ಮನವರಿಕೆಯಾಯಿತು, ಶ್ರೀಬಾಲಗೋಪಾಲ ಅದೃಶ್ಯನಾದ ವಿಚಾರ! ಅದನ್ನು ಗುರುಗಳು ಕಂಡು ಪ್ರೇಮಭರದಿಂದ ತಮ್ಮನ್ನು ಆಲಿಂಗಿಸಿರುವರೆಂಬುದೂ ಸ್ಪಷ್ಟವಾಯಿತು. ಶ್ರೀವ್ಯಾಸರಾಜರು ಕರಗಳಲ್ಲಿದ್ದ ಶಾಲಿಗ್ರಾಮಗಳನ್ನು ಸೋಮಸೂತ್ರದಲ್ಲಿರಿಸಿ ವಿನಯದಿಂದ ಮೇಲೆದ್ದು ಗುರುಗಳಿಗೆ ಸಾಷ್ಟಾಂಗವೆರಗಿದರು.
ಶ್ರೀಲಕ್ಷ್ಮೀನಾರಾಯಣಮುನಿಗಳು ನಸುನಗುತ್ತಾ “ನನ್ನ ಪ್ರೀತ್ಯಾಸ್ಪದ ಶಿಷ್ಯರೇ! ನೀವು ಪರಮಪುಣ್ಯಶಾಲಿಗಳು. ನಾನು ತೆರೆಯಲಾಗದ ಸಂಪುಟದ ಮುಚ್ಚಳವನ್ನು ತೆರೆದು ಶ್ರೀಮುರಳೀ ಮಾಧವನನ್ನು ಕುಣಿಸಿಬಿಟ್ಟಿರಿ! ಆಹಾ, ಆ ಪರಮಾತ್ಮನ ದಿವ್ಯಮಂಗಳರೂಪವೆಷ್ಟು ಮನೋಹರ! ಆ ಜಗದೊಡೆಯನ ಲೀಲಾತಾಂಡವವೆಷ್ಟು ಸೊಗಸು! ಆ ಪವಿತ್ರನೋಟವನ್ನು ನಾನೆಂತು ವರ್ಣಿಸಲಿ ? ಗೋಪಾಲಕೃಷ್ಣ ನಿಮಗೆ ಪ್ರಸನ್ನನಾಗಿ ಒಲಿದು ಬಂದಿದ್ದಾನೆ. ನಾವಿಂದು ಧನ್ಯರಾದೆವು ! ನಿಮಗೆ ಒಲಿದ ಈ ಬಾಲಕೃಷ್ಣನನ್ನು ಇನ್ನು ಮುಂದೆ ನೀವೇ ಪೂಜಿಸಿರಿ! ಇಕೋ ನಮ್ಮ ಪ್ರಿಯಶಿಷ್ಯರಿಗೆ ನಮ್ಮ ಪ್ರೀತಿಯ ಕಾಣಿಕೆ ಸ್ವೀಕರಿಸಿರಿ” ಎಂದು ಬಾಲಗೋಪಾಲಕೃಷ್ಣನ ಪ್ರತಿಮೆಯನ್ನು ವ್ಯಾಸರಾಜರ ಕರಗಳಲ್ಲಿಟ್ಟು ಅವರನ್ನು ಆಲಂಗಿಸಿ ಮತ್ತೆ ಹೇಳಿದರು ಬಹುದಿನದಿಂದಿದ್ದನಮ್ಮ ಮನೋರಥದ್ರುಮವಿಂದು ಫಲಿಸಿತು. ಪಂಢರಾಪುರದಲ್ಲಿ ವಿಠಲನು ಕನ್ನಡ ಹರಿದಾಸಪಂಥವನ್ನು ಪ್ರಾರಂಭಿಸಿ, ಕನ್ನಡ ಹರಿದಾಸವಾಹ್ಮಯವನ್ನು ಬೆಳೆಸಿ ಆಪಂಡಿತಪಾಮರರು ಅದರಿಂದ ತನ್ನ ಪ್ರಸಾದ-ಅನುಗ್ರಹಗಳಿಗೆ ಪಾತ್ರರಾಗಲು ಮಾರ್ಗದರ್ಶನ ಮಾಡಬೇಕೆಂದು ಆಜ್ಞಾಪಿಸಿದ್ದನು. ಅವನ ಆಣತಿಯಂತೆ “ಶ್ರೀರಂಗವಿಠಲಾಂಕಿತ'ದಿಂದ ವೇದಾದಿಶಾಸ್ತ್ರಗಳ ಸಾರವನ್ನು ಕನ್ನಡ ಭಾಷೆಯಲ್ಲಿ ಪದ-ಪದ್ಯ-ಸುಳಾದಿಗಳ ರೂಪವಾಗಿ ರಚಿಸಲು ಪ್ರಾರಂಭಿಸಿದೆವು. ಶ್ರೀಹರಿಯು ನಮ್ಮಿಂದ ಪ್ರವರ್ತನಗೊಳಿಸಿದ ಈ ಕನ್ನಡ ಹರಿದಾಸಪಂಥವನ್ನು ನಮ್ಮ ತರುವಾಯ ಮುಂದುವರೆಸಿಕೊಂಡು ಹೋಗಿ ಸಾಹಿತ್ಯ ರಚನೆ ಮಾಡಿ, ಹರಿದಾಸಪಂಥಕ್ಕೊಂದು ಸ್ವರೂಪವನ್ನು ಕೊಟ್ಟು, ತನ್ಮೂಲಕ ಜನಸಾಮಾನ್ಯರ ಉದ್ಧಾರ - ಜಗತ್ಕಲ್ಯಾಣಗಳಾಗುವಂತೆ ಯಾರು ಮಾಡುವರೆಂದು ನಾವು ಚಿಂತಿಸುತ್ತಿದ್ದೆವು. ಇಂದು ನಮ್ಮ ಆ ಚಿಂತೆ ದೂರವಾಯಿತು! ನಿಮ್ಮ ಬಾಯಿಯಿಂದ ಹೊರಹೊಮ್ಮಿದ ಅಪೂರ್ವ, ಸುಂದರ ದೇವರನಾಮವನ್ನಾಲಿಸಿ, ಪರಮಾನಂದತುಂದಿಲರಾದೆವು. ಇದು ಭಗವಂತನ ಸಂಕಲ್ಪದಂತೆ ಜರುಗಿದ ಅಪೂರ್ವ ಘಟನೆ. ಅಂದು ನಮ್ಮಿಂದ “ಶ್ರೀರಂಗವಿಠಲಾಂಕಿತ
ದಿಂದ ಕನ್ನಡ ಹರಿದಾಸಸಾಹಿತ್ಯದ ರಚನೆಗೆ ಪ್ರೇರಕಶಕ್ತಿಯಾದ ಶ್ರೀಹರಿಯೇ ಇಂದು ನಿಮಗೆ ಪ್ರೇರಣೆ ಮಾಡಿ "ಶ್ರೀಕೃಷ್ಣಾಂಕಿತ'ದಿಂದ ನಿಮ್ಮಿಂದ ಈ ಉತ್ತಮ ಕೃತಿ ರಚನೆ ಮಾಡಿಸಿರುವುದು ನಿಜವಾಗಿ ಒಂದು ಮಹಾಯೋಗ! ನಮ್ಮಿಂದ ಪ್ರಾರಂಭ ಮಾಡಿಸಿದ ಕಾರ್ಯವನ್ನು ನಿಮ್ಮಿಂದ ಮುಂದುವರೆಸುವುದಾಗಿ ಶ್ರೀಹರಿಯು ಈ ಘಟನೆಯಿಂದ ಸೂಚಿಸಿದ್ದಾನೆ! ಜಗನ್ನಾಟಕ ಸೂತ್ರಧಾರಿಯಾದ ಶ್ರೀರಮಾರಮಣನು ಕನ್ನಡ ಹರಿದಾಸಪಂಥ, ವಾಹ್ಮಯಗಳ ಅಭಿವೃದ್ಧಿ, ಲೋಕಕಲ್ಯಾಣಗಳು ಗುರು-ಶಿಷ್ಯರಾದ ನಮ್ಮಿರ್ವರಿಂದ ನೆರವೇರಬೇಕೆಂದು ಸಂಕಲ್ಪಿಸಿದ್ದಾನೆ! ಅದನ್ನು ಅವನು ತನ್ನ ಅಗಾಧವಾದ ಈ ಲೀಲೆಯಿಂದ ನಮ್ಮಿಬ್ಬರಿಗೂ ಆಜ್ಞಾಪಿಸಿದಂತಿದೆ. ನಿಜವಾಗಿಯೂ ನಾವಿಬ್ಬರೂ ಭಾಗ್ಯಶಾಲಿಗಳು. ಇನ್ನು ಮುಂದೆ ಈ ಹರಿದಾಸಪಂಥದ ನಾಯಕರು ನೀವಾಗಬೇಕು. ನಿಮ್ಮ ಅಧ್ವರ್ಯುತನದಲ್ಲಿ ಕನ್ನಡ ಹರಿದಾಸ ವಾಹ್ಮಯವು ಅಗಾಧವಾಗಿ ಬೆಳೆದು ಅವ್ಯಾಹತವಾಗಿ ಮುಂದುವರೆಯುವಂತಾಗಬೇಕೆಂಬ ನಮ್ಮ ಹಿರಿಯಾಶೆಯನ್ನು ನೆರವೇರಿಸುವುದಾಗಿ ನಮಗೆ ನೀವು ವಚನವನ್ನು ನೀಡಿರಿ” ಎಂದು ಹೇಳಿದರು.
ಶ್ರೀವ್ಯಾಸತೀರ್ಥರು ಗುರುಗಳ ವಚನಗಳನ್ನಾಲಿಸಿ ಪರಮಹರುಷನಿರ್ಭರರಾಗಿ “ಗುರುದೇವ! ಇದೆಲ್ಲವೂ ತಮ್ಮ ವಾತ್ಸಲ್ಯ ಅನುಗ್ರಹಫಲವೆಂದೇ ನಾನು ಭಾವಿಸಿರುತ್ತೇನೆ ಬಾಲಕನಾಗಿದ್ದ ನನಗೆ ಸಕಲಶಾಸ್ತ್ರಜ್ಞಾನವನ್ನೂ ಉಪದೇಶಿಸಿದಿರಿ. ನಿಮ್ಮ ವಾತ್ಸಲ್ಯದ ಫಲವಾಗಿ ಇಂದು ಶ್ರೀಹರಿಯ ಪ್ರಸಾದ - ಅನುಗ್ರಹಗಳು ನನಗೆ ಲಭಿಸಿದವು! ನಾನು ಯೋಚಿಸಲೂ ಸಾಧ್ಯವಾಗದ ರೀತಿಯಲ್ಲಿ ತಮ್ಮ ಆಶೀರ್ವಾದದಿಂದ ಕನ್ನಡದಲ್ಲಿ ಶ್ರೀಕೃಷ್ಣಾಂಕಿತ'ದಿಂದ ಭಗವಂತನ ಮೇಲೆ ಕೃತಿಗಳು ರಚನೆಯಾಗಿವೆ! ತಮ್ಮ ಅಪ್ಪಣೆಯನ್ನು ಶಿರಸಾ ಧರಿಸಿದ್ದೇವೆ. ತಮ್ಮ ಮಾರ್ಗದರ್ಶನದಲ್ಲಿ ಮುಂದುವರೆದು ತಮ್ಮ ಮನದಾಶೆಯನ್ನು ನನ್ನ ಕೈಲಾದ ಮಟ್ಟಿಗೂ ಪೂರ್ಣಗೊಳಿಸಲು ಪ್ರಯತ್ನಿಸುತ್ತೇನೆ. ಇದೇ ನಾನು ನಿಮಗೆ ನೀಡುವ ವಚನ” ಎಂದು ಗುರುಗಳ ಕರದ ಮೇಲೆ ತಮ್ಮ ಕರವಿಟ್ಟು ಪ್ರಮಾಣ ಮಾಡಿ ನಮಸ್ಕರಿಸಿದರು.
ಶ್ರೀಲಕ್ಷ್ಮೀನಾರಾಯಣಯೋಗಿಗಳಿಗೆ ಪರಮಾನಂದವಾಯಿತು. ಸಂತೋಷ-ಸಂಭ್ರಮದಿಂದ ಶಿಷ್ಯರೊಡನೆ ಸಂಸ್ಥಾನಪೂಜೆಯನ್ನು ಭಕ್ತಿಯಿಂದ ನೆರವೇರಿಸಿ, ಸರ್ವರಿಗೂ ತೀರ್ಥ-ಪ್ರಸಾದ ವಿನಿಯೋಗಾನಂತರ ಭಿಕ್ಷಾಸ್ವೀಕಾರ ಮಾಡಿದರು.