ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೯೮. ಗುರುಗಳಿಗೆ ತಕ್ಕ ಶಿಷ್ಯರು
ವೇದಭಾಷರಚನೆಯ ಕಾಲದಲ್ಲಿ ವಿವಿಧ ಗ್ರಂಥಗಳ ಪರಿಶೀಲನ, ಪಂಡಿತ ಮಂಡಲಿಯೊಡನೆ ವಿಚಾರವಿನಿಮಯ, ವಿಮರ್ಶಾದಿ ಕಾವ್ಯಗಳಲ್ಲಿ ಭಾಗವಹಿಸಿ ಸೇವೆ ಸಲ್ಲಿಸಿದ್ದು ಶ್ರೀಪಾದಪುತ್ರ ಲಕ್ಷ್ಮೀನಾರಾಯಣಾಚಾರ, ಹಾಗೂ ಕೃಷ್ಣಾಚಾರರುಗಳಿಗೆ ಬಹಳ ಉಪಕಾರವಾಯಿತು. ಅದರಿಂದ ಮೊದಲೇ ಶ್ರೇಷ್ಠ ಪಂಡಿತರಾಗಿದ್ದ ಅವರಬುದ್ಧಿ ವಿಕಾಸಹೊಂದಿತು. ಅಸಾಧಾರಣ ಪ್ರತಿಭೆಯು ಹೊರಸೂಸುವಂತಾಯಿತು. ಶ್ರೀಗಳವರಲ್ಲಿ ಚತುಃಶಾಸ್ತ್ರಗಳನ್ನು ಅಧ್ಯಯನ ಮಾಡಿ, ಶ್ರೀಮಠದ ವಾಕ್ಯಾರ್ಥಾದಿಗಳಲ್ಲಿ ಪಾಲ್ಗೊಳ್ಳುತ್ತಿದ್ದರಿಂದ ಅವರ ಜ್ಞಾನ ಮತ್ತಷ್ಟು ಅಭಿವೃದ್ಧಿಸಿ ವಿಚಾರಶಕ್ತಿ ವಿಶಾಲವಾಗಹತ್ತಿತ್ತು. ಸಾವಿರಾರು ಗ್ರಂಥಗಳ ಸತತ ಚಿಂತನ ಮಂಥನಾದಿಗಳಿಂದ ಪ್ರಕೃಷ್ಟ ಜ್ಞಾನದಿಂದ ಬೆಳಗುತ್ತಿದ್ದ ಅವರಲ್ಲಿ ತಾವೂ ಗ್ರಂಥರಚನೆಮಾಡಬೇಕೆಂಬ ಹಂಬಲ ಬೆಳೆಯತೊಡಗಿತು. ಅಂತೆಯೇ ವೇದಭಾಷ್ಯ ಪ್ರಕಾಶನವಾದ ಕೆಲದಿನಗಳಾದಮೇಲೆ ಒಂದು ದಿವಸ ಅವರೀರ್ವರೂ ಗುರುರಾಜರಲ್ಲಿ ತಮ್ಮ ಅಂತರಂಗವನ್ನು ವಿಜ್ಞಾಪಿಸಿ ಗ್ರಂಥ ರಚಿಸಲು ತಮಗೆ ಅಪ್ಪಣೆ ನೀಡಬೇಕೆಂದು ಪ್ರಾರ್ಥಿಸಿದರು ಅವರ ಉತ್ಸಾಹ ಕಂಡು ಗುರುಗಳು ಮುದಿಸಿದರು. ಮತ್ತು ಕೃಷ್ಣಾಚಾರ್ಯರಿಗೆ-ಮಾಧ್ವಜನತೆ ಬ್ರಾಹ್ಮಣಸಮಾಜ, ಹಿಂದೂಜನತೆಗೆ ಈಗಧರ್ಮಶಾಸ್ತ್ರದ ಅವಶ್ಯಕತೆ ಬಹಳವಾಗಿರುವುದರಿಂದ ಲೋಕೋಪಕಾರವಾದ ಒಂದು ಧರ್ಮಶಾಸ್ತ್ರಗ್ರಂಥವನ್ನು ರಚಿಸಬೇಕೆಂದೂ; ಪೂರ್ವಾಶ್ರಮಪುತ್ರರಾದ ಲಕ್ಷ್ಮೀನಾರಾಯಣಾಚಾರರಿಗೆ ಶ್ರೀಮದಾಚಾರರ ಮಂಗಳಕರವಾದ ಋಗ್ ಭಾಷೆ ಮತ್ತು ಟೀಕೆಯನ್ನು ಅನುಸರಿಸಿ ಟಿಪ್ಪಣಿಯನ್ನು ರಚಿಸಿ ಆಚಾರರಾಯರ, ಟೀಕಾರಾಯರ ಸೇವೆಮಾಡಬೇಕೆಂದೂ ಆಜ್ಞಾಪಿಸಿ ಆಶೀರ್ವದಿಸಿ, ಫಲಮಂತ್ರಾಕ್ಷತೆಯನ್ನು ಕರುಣಿಸಿದರು. ಶ್ರೀಗಳವರ ಪರಮಾಶೀರ್ವಾದ ದೊರಕಿದ್ದರಿಂದ ಶ್ರೀಕೃಷ್ಣಾಚಾರ್ಯ- ಲಕ್ಷ್ಮೀನಾರಾಯಣಾಚಾರ್ಯರುಗಳು ಉತ್ಸಾಹದಿಂದ ಪ್ರಬಂಧರಚನೆಯಲ್ಲಿ ಆಸಕ್ತರಾದರು. ಮತ್ತು ಒಂದು ಮಂಗಳಮುಹೂರ್ತದಲ್ಲಿ ಗ್ರಂಥರಚನೆಯನ್ನು ಪ್ರಾರಂಭಿಸಿದರು. ಗ್ರಂಥರಚನಾಕಾರ ಭರದಿಂದ ಸಾಗಿತು. ಸತತ ಪರಿಶ್ರಮ, ನಿಷ್ಠೆ, ಉತ್ಸಾಹ, ಪಂಡಿತರ ಪ್ರೋತ್ಸಾಹಗಳಿಂದಾಗಿ ಉಭಯ ಆಚಾರರೂ ಗ್ರಂಥವನ್ನು ಬರೆದು ಮುಗಿಸಿ ತಾವು ರಚಿಸಿದ ಗ್ರಂಥಗಳನ್ನು ಗುರುಗಳ ಮುಂದಿಟ್ಟು ನಮಸ್ಕರಿಸಿ “ಮಹಾಸ್ವಾಮಿ, ತಮ್ಮ ಕಾರುಣ್ಯ, ಉಪದೇಶ, ಅನುಗ್ರಹಬಲದಿಂದ ನಮ್ಮ ಯೋಗ್ಯತಾನುಸಾರವಾಗಿ ಗ್ರಂಥವನ್ನು ರಚಿಸಿದ್ದೇವೆ. ತಾವು ಇದನ್ನು ಅವಲೋಕಿಸಿ ಆಶೀರ್ವದಿಸಬೇಕು” ಎಂದು ವಿಜ್ಞಾಪಿಸಿದರು.
ತಮ್ಮ ಅಪ್ಪಣೆಯಂತೆ ಕರ್ತವ್ಯನಿಷ್ಠರಾಗಿ ಗ್ರಂಥರಚನೆಮಾಡಿದ ಶಿಷ್ಯರ ಗುರುಭಕ್ತಿ, ಸಿದ್ದಾಂತದೀಕ್ಷೆ, ಶ್ರದ್ಧಾದಿಗಳಿಂದ ಸಂತುಷ್ಟರಾದ ಗುರುಗಳು ತೃಪ್ತರಾದರು. ದರಹಾಸ ಬೀರಿ “ಸಂತೋಷ, ನಾವು ಗ್ರಂಥವನ್ನು ಪರಿಶೀಲಿಸುತ್ತೇವೆ” ಎಂದು ಆಜ್ಞಾಪಿಸಿದರು.
ಶ್ರೀಪಾದಂಗಳವರು ಎರಡೂ ಗ್ರಂಥಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ ಪರಮಾನಂದಭರಿತರಾಗಿ ಶ್ರೀಪಾದಪುತ್ರರ ಮತ್ತು ಕೃಷ್ಣಾಚಾರರುಗಳ ಕೃತಿಗಳನ್ನು ವಿದ್ವತಪಂಚದಲ್ಲಿ ಪ್ರಚುರಪಡಿಸಲಿಚ್ಚಿಸಿ, ವಿದ್ವತ್ಸಭೆಯಲ್ಲಿ ಆ ಗ್ರಂಥಗಳನ್ನು ತಮ್ಮ ಅಧ್ಯಕ್ಷತೆಯಲ್ಲಿ ಶಿಷ್ಯರಿಬ್ಬರೂ ಅನುವಾದ ಮಾಡಬೇಕೆಂದು ಆದೇಶವಿತ್ತರು. ಅದರಂತೆ ಈ ವಿಚಾರವನ್ನು ಪ್ರಚುರಪಡಿಸಲು ಅಣತಿಯಿತ್ತರು. ಶ್ರೀಯವರ ಅಪ್ಪಣೆಯಂತೆ ಪ್ರತಿದಿವಸ ಬೆಳಿಗ್ಗೆ ಮಧ್ಯಾಹ್ನಕಾಲದಲ್ಲಿ ವಿದ್ವಜ್ಜನರಿಂದ ತುಂಬಿದಸಭೆಯಲ್ಲಿ ನೂತನ ಗ್ರಂಥಗಳ ಅನುವಾದ ಪ್ರಾರಂಭವಾಯಿತು. ಮೊದಲು ಶ್ರೀವಿಜಯೀಂದ್ರತೀರ್ಥರ ಸೋದರರ ಪುತ್ರರಾದ ರಾಮಚಂದ್ರಾಚಾರರ ಪುತ್ರರಾದ ಕೃಷ್ಣಾಚಾರರು ತಾವು ರಚಿಸಿದ ನಾಲ್ಕು ಪ್ರಕರಣಗಳಿಂದ ಯುಕ್ತವಾದ “ಸ್ಮೃತಿಮುಕ್ತಾವಳಿ” ಎಂಬ ಶ್ರೇಷ್ಠವಾದ ಧರ್ಮಶಾಸ್ತ್ರಗ್ರಂಥವನ್ನು ಅನುವಾದ ಮಾಡಿದರು. ಭಾರತೀಯರು ಧರ್ಮಜೀವಿಗಳು, ಶುಭಶೋಭನಾದಿ ಕಾರ್ಯಗಳು, ನಿತ್ಯನೈಮಿತ್ತಿಕ, ವೈದಿಕ ಆಚರಣೆಗಳು, ವ್ರತನಿಯಮ ಉಪವಾಸ, ವೃದ್ಧಶೌಚಾದಿ ವಿಚಾರಗಳು, ಕಾಲನಿರ್ಣಯ, ಮುಂತಾದ ಬಹು ವಿಷಯೋಪಗುಂಭಿತವಾಗಿ ಮಾರ್ಗದರ್ಶಕವಾದ, ಅಧಿಕಾರವಾಣಿಯಿಂದ ತಿಳಿಸಿಕೊಡುವ ಗ್ರಂಥಗಳ ಅವಶ್ಯಕತೆಯಿದ್ದು ಕೃಷ್ಣಾಚಾರರು ರಚಿಸಿದ “ಸ್ಮೃತಿಮುಕ್ತಾವಳಿ”ಯು ಈ ಎಲ್ಲ ವಿಚಾರ ಪರಿಷ್ಕೃತವಾಗಿ ಅತ್ಯಂತ ಉಪಕಾರವಾಗಿದ್ದು ಮಾಧ್ವರು, ಬ್ರಾಹ್ಮಣಸಮಾಜವಷ್ಟೇ ಅಲ್ಲದೆ, ಅಖಂಡಭಾರತೀಯರಿಗೆ ಅತ್ಯುಪಕಾರವಾಗಿದೆಯೆಂದು ಸಭೆಯಲ್ಲಿದ ಪಂಡಿತರುಗಳು ಆ ಗ್ರಂಥವನ್ನೂ ಗ್ರಂಥಕರ್ತರಾದ ಕೃಷ್ಣಾಚಾರರನ್ನೂ ಮುಕ್ತಕಂಠದಿಂದ ಸ್ತುತಿಸಿದರು. ಶ್ರೀಪಾದಂಗಳವರು ಪಂಡಿತರ ಅಭಿಪ್ರಾಯವನ್ನು ಸಮರ್ಥಿಸಿ ಅನುಗ್ರಹವಚನಗಳನ್ನು ಹೇಳಿ ಗ್ರಂಥವು ಜಗತ್ತಿನಲ್ಲಿ ವಿಖ್ಯಾತವಾಗಲೆಂದು ಹಾರೈಸಿ ಆಶೀರ್ವದಿಸಿದರು.
ಮರುದಿನದಿಂದ ಶ್ರೀಪಾದಪತ್ರ ಲಕ್ಷ್ಮೀನಾರಾಯಣಾಚಾರ್ಯರು ತಮ್ಮ ಗ್ರಂಥದ ಅನುವಾದವನ್ನಾರಂಭಿಸಿದರು. ಮೊದಲು ಋಗ್ವಾಷ್ಯವನ್ನು ಓದಿ, ಟೀಕಾನುವಾದಮಾಡಿ ಅದಕ್ಕೆ ತಾವು ಬರೆದಿರುವ ಟಿಪ್ಪಣಿಯನ್ನು ಧೀರಗಂಭೀರವಾಣಿಯಲ್ಲಿ ಅನುವಾದಮಾಡಹತ್ತಿದರು. ವಿದ್ದತ್ತೂರ್ಣವೂ ಸರಸಸುಂದರವೂ ರಮಣೀಯಶೈಲಿಯಿಂದ ಕಂಗೊಳಿಸುವ ಟಿಪ್ಪಣಿಯ ಅನುವಾದವನ್ನು ಕೇಳಿ ವಿದ್ವಜ್ಜನರು ಶ್ರೀಪಾದಂಗಳವರಿಗೆ ಕೀರ್ತಿತರುವ ಶಿಷ್ಯರೆಂದೂ ವಂಶದೀಪಕರೆಂದೂ, ಉತ್ತಮ ಟಿಪ್ಪಣಿಕಾರರೆಂದೂ ಆಚಾರರನ್ನು ಬಹುವಾಗಿ ಶ್ಲಾಘಿಸಿದರು. ಶ್ರೀಗುರುರಾಜರು ಆನಂದಬಾಷ್ಪಸಿಕ್ತನಯನರಾಗಿ ಕಾರುಣ್ಯ- ಪೂರ್ಣರಾಗಿ ಪೂರ್ವಾಶ್ರಮ ಪುತ್ರರ ಗ್ರಂಥವು ಜಗತ್ನಸಿದ್ಧವಾಗುವಂತೆ ಮಾಡಲು, ಆಚಾರರ ಈ ಗ್ರಂಥಕ್ಕೆ ಸಹಾಯಕವಾಗಲೆಂದೂ, ಬಲಪಡಿಸಲೂ ಸಹ ಅನೇಕ ಋಕ್ ಪರಂಪರೆಯನ್ನೇ ಉದಾಹರಿಸಿ ಉಪನ್ಯಾಸ ಮಾಡುತ್ತಾ ಲಕ್ಷ್ಮೀನಾರಾಯಣಾಚಾರರು ಬರೆದ ಋಷ್ಟಟೀಕಾಟಿಪ್ಪಣಿಯು ವಿದ್ವಜ್ಜನರಲ್ಲಿ ಚೆನ್ನಾಗಿ ಪ್ರಸಾರವಾಗುವಂತೆ ಮಾಡಿ ಅನುಗ್ರಹಿಸಿದರು. ಅದರ ಪರಿಣಾಮವಾಗಿ ಶ್ರೀಯವರ ಇನ್ನೊಂದು ಮಹಾಗ್ರಂಥವಾದ “ಮಂತ್ರಾರ್ಥಮಂಜರಿ' ಎಂಬ ಉತ್ತಮ ಕೃತಿಯೊಂದು ರಚನೆಯಾಗಲು ಕಾರಣವಾಯಿತು!
ಅಂದು ಸಂಜೆ ವಿದ್ಧತ್ತಭೆಯಲ್ಲಿ ಕೃಷ್ಣಾಚಾರ-ಲಕ್ಷ್ಮೀನಾರಾಯಣಾಚಾರರನ್ನು ಕುಂಭಕೋಣದ ವೈದಿಕ ಲೌಕಿಕ ವಿದ್ವಜ್ಜನರು ಸನ್ಮಾನಿಸಿದರು. ಅನೇಕ ಪಂಡಿತರು ಭಾಷಣಮಾಡಿ ಗ್ರಂಥಕಾರರನ್ನು ಶ್ಲಾಘಿಸಿದರು, ಗುರುರಾಜಾಚಾರರು ಮಾತನಾಡಿ “ಗುರುಪುಂಗವರ ಪೂರ್ವಾಶ್ರಮ ಬಂಧುಗಳೂ, ಶಿಷ್ಯರೂ ಆದ ಈ ಪಂಡಿತರಿಬ್ಬರು ಶ್ರೇಷ್ಠಗ್ರಂಥರಚನೆಮಾಡಿ ಶ್ರೀಯವರ “ಪ್ರತೀತವ್ರತ ರೆಂಬ ಬಿರುದು ಅನ್ವರ್ಥಕವಾಗುವಂತೆ ಮಾಡಿ ಗುರುಗಳ ಮಹಿಮಾತಿಶಯವನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ! ಶ್ರೀಪಾದರ ಈ ಪ್ರಿಯಶಿಷ್ಯರಿಬ್ಬರೂ ಗುರುಗಳಿಗೆ ತಕ್ಕ ಶಿಷ್ಯರಾಗಿದ್ದಾರೆ - ಸಕಲ ಪಂಡಿತರಿಂದ, ಧರ್ಮಾಭಿಮಾನಿಗಳಿಂದ ಮಾನ್ಯರಾಗಿದ್ದಾರೆ. ಹರಿವಾಯುಗಳು ಈ ಪಂಡಿತದ್ವಯರಿಂದ ಇದೇ ರೀತಿ ಹೆಚ್ಚು ಸತ್ಕಾರಗಳನ್ನು, ಗ್ರಂಥರಚನೆಗಳನ್ನು ಮಾಡಿಸಿ ಅನುಗ್ರಹಿಸುವಂತೆ ಶ್ರೀಪಾದರು ಆಶೀರ್ವದಿಸಬೇಕಾಗಿ ಪ್ರಾರ್ಥಿಸುತ್ತೇನೆ” ಎಂದು ನಿರೂಪಿಸಿದರು. ಜನರು ಹರ್ಷಧನಿ ಕರತಾಡನಗಳಿಂದ ತಮ್ಮ ಆನಂದವನ್ನು ವ್ಯಕ್ತಪಡಿಸಿದರು. ಅನಂತರ ಶ್ರೀಕೃಷ್ಣಾಚಾರ್ಯ, ಲಕ್ಷ್ಮೀನಾರಾಯಣಾಚಾರ್ಯರಿಗೆ ಶ್ರೀಯವರ ಅಮೃತಹಸ್ತದಿಂದ ಶಾಲುಜೋಡಿಗಳನ್ನು ಹೊದ್ದಿಸಿ, ಸುವರ್ಣಕಂಕಣಗಳನ್ನಿತ್ತು ಗೌರವಿಸಲಾಯಿತು.
ಶ್ರೀಗುರುರಾಜರ ಮರಿಮಕ್ಕಳೂ, ಮಹಾಪೀಠಾಧೀಶ್ವರರೂ ಆಗಿ “ಉಭಯವಂಶಾಬಿ ಚಂದ್ರಮ'ರೆಂದು ವಿಖ್ಯಾತರಾದ ಶ್ರೀವಾದೀಂದ್ರತೀರ್ಥಗುರುಚರಣರು ತಮ್ಮ “ಶ್ರೀಗುರುಗುಣಸ್ತವನದಲ್ಲಿ ಈ ವಿಚಾರವನ್ನು ಭಕ್ತತಿಶಯದಿಂದ ಹೀಗೆ ನಿರೂಪಸಿದ್ದಾರೆ -
“ಲಕ್ಷ್ಮೀನಾರಾಯಣಾರ್ಯಸ್ತವತನಯಮಣಿಃ ಸತ್ತು ಸರ್ವೆಷು ಧನೋ ಯಸ್ಮಾದ್ರಾಪಟೀಕಾತನುತರವಿವೃತೇರಂಜಸಾ ತತ ತಾಯಾಃ || ಪ್ರೇಮಾ ವಿದ್ವತ್ತುಭೂಯಃ ಪ್ರಚಯಮಭಿಲರ್ಷ ರಾಘವೇಂದ್ರವ್ರತೀಂದ್ರ ! ಪ್ರಾವೋಚಸಂ "ಪ್ರತೀತವ್ರತ' ನಿಚಯಮೃಚಾಮೇವ ಭಾಷ್ಯಾನುರೋಧಾತ್”