|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೯೭. ಮೂವರು ಜ್ಯೋತಿಷಿಗಳು

ಒಂದು ದಿನ ಶ್ರೀಗಳವರು ಶಿಷ್ಯಮಂಡಲಿಗೆ ಪಾಠ ಹೇಳುತ್ತಾ ಕುಳಿತಿರುವಾಗ ಕೇರಳದ ಕಡೆಯವರಂತೆ ಕಂಡುಬರುವ ಮಧ್ಯವಯಸ್ಸಿನ ಮೂವರು ತೇಜಸ್ವೀ ಬ್ರಾಹ್ಮಣರು ಬಂದು ಗುರುಗಳಿಗೆ ನಮಸ್ಕಾರಮಾಡಿದರು. ಪ್ರಸನ್ನಚಿತ್ತರಾದ ಸ್ವಾಮಿಗಳವರು “ಬನ್ನಿ, ಕುಳಿತುಕೊಳ್ಳಿ” ಎಂದಾಜ್ಞಾಪಿಸಿದರು. ನಾರಾಯಣಾಚಾರರು ಆಗಂತುಕರ ಪೂರ್ವೋತ್ತರಗಳನ್ನು ವಿಚಾರಿಸಿದಾಗ ಆ ಬ್ರಾಹ್ಮಣರಲ್ಲಿ ಒಬ್ಬರು ಹೀಗೆ ಹೇಳಿದರು - “ಸ್ವಾಮಿ, ಗುರುವರರ ಜ್ಞಾನ-ಭಕ್ತಿ-ವೈರಾಗ್ಯಾದಿಗಳು ದಕ್ಷಿಣಭಾರತದ ಮನೆಮನೆಗಳ ಮಾತಾಗಿದೆ. ಮಹಾಮಹಿಮರ ದರ್ಶನದಿಂದ ಪಾವನರಾಗಬಯಸಿ ಬಂದಿದ್ದೇವೆ. 

ಸ್ವಾಮಿ, ಹಿಂದೆ ವಿಜಯೀಂದ್ರಗುರುಗಳು ಕಂಗೊಳಿಸುತ್ತಿದ್ದಾಗ ನಮ್ಮ ವಂಶದ ಪ್ರಭಂಜನಶರ್ಮ ಎಂಬುವವರು ಗುರುಗಳ ವಿಶೇಷಾನುಗ್ರಹಕ್ಕೆ ಪಾತ್ರರಾಗಿದ್ದ ವಿಚಾರವನ್ನು ನಮ್ಮ ತಂದೆಯವರು ನಮಗೆ ತಿಳಿಸಿ ಈ ಪ್ರಾಂತ್ಯಕ್ಕೆ ಬಂದಾಗ ವಿಜಯೀಂದ್ರ ಗುರುಗಳ ಬೃಂದಾವನ ದರ್ಶನಮಾಡಿ ಪುನೀತರಾಗಬೇಕೆಂದು ಹೇಳಿದ್ದರು ಮತ್ತು ಶ್ರೀಗುರುಪಾದರು ವಿರಾಜಿಸುತ್ತಿರುವುದನ್ನೂ ತಿಳಿಸಿದರು” ಎಂದು ಹೇಳಿದರು. ಆಗ ಶ್ರೀಪಾದಂಗಳವರು ತಟ್ಟನೆ - “ಪ್ರಭಂಜನಶರ್ಮರೆಂದರೆ ಜ್ಯೋತಿಷಶಾಸ್ತ್ರಪರಾಂಗತರೂ ಪ್ರಶ್ನೆಭಾಗದಲ್ಲಿ ಅದ್ವಿತೀಯರೂ ಆಗಿದ್ದ ಪಂಡಿತರಲ್ಲವೇ?” ಎಂದು ಪ್ರಶ್ನಿಸಲು ಅವರು ಶಿರಃಕಂಪನಮಾಡಿ ಅಹುದು, ಗುರುವರ್ಯ, ಅವರೇ, ಶ್ರೀವಿಜಯೀಂದ್ರಗುರುಗಳೊಡನೆ ಜರುಗಿದ ಅವರ ಪ್ರಥಮ ಭೇಟಿಯು ಅಪೂರ್ವವಾಗಿತ್ತಂತೆ!” ಎಂದು ಹೇಳಿ ಹಿಂದಿನ ಕಥೆಯನ್ನು ಗುರುಗಳಲ್ಲಿ ನಿವೇದಿಸಿದರು. ಅದನ್ನು ಕೇಳಿ ಗುರುರಾಜರ ನೇತ್ರಗಳು ತೇವಗೊಂಡವು “ನಿಜ, ನಮ್ಮ ಗುರುಪಾದರೂ ಈ ವಿಚಾರಗಳನ್ನು ನಮಗೆ ಆಗಾಗ ತಿಳಿಸುತ್ತಿದ್ದರು' ಎಂದು ಉದ್ದರಿಸಿದರು, ಆಗ ಆ ಬ್ರಾಹ್ಮಣರು “ಸ್ವಾಮಿ, ಜ್ಯೋತಿಷಶಾಸ್ತ್ರದಲ್ಲಿ ನಾವೂ ಪರಿಣಿತರಾಗಿದ್ದೇವೆ. ಜಾತಕಭಾಗದಲ್ಲಿ ನಮ್ಮ ಪಾಂಡಿತ್ಯವನ್ನು ಗುರುಗಳ ಮುಂದೆ ಪ್ರದರ್ಶಿಸಿ ಅನುಗ್ರಹಾರ್ಶಿವಾದಗಳನ್ನು ಪಡೆಯಲು ಆಶಿಸಿದ್ದೇವೆ” ಎಂದು ವಿನಂತಿಸಿದರು. ಆಗ ನಾರಾಯಣಾಚಾರರು ಶ್ರೀಪಾದಪುತ್ರ ಲಕ್ಷ್ಮೀನಾರಾಯಣಾಚಾರ್ಯರೊಡನೆ ರಹಸ್ಯವಾಗಿ ಮಾತನಾಡಿ “ಪಂಡಿತರೇ, ಇಂದು ಮಧ್ಯಾಹ್ನ ಜಾತಕಗಳನ್ನು ಕೊಡುತ್ತೇವೆ. ನೀವದನ್ನು ಚೆನ್ನಾಗಿ ಪರಿಶೀಲಿಸಿ ನಿಮ್ಮ ಪಾಂಡಿತ್ಯಕ್ಕೆ ಗುರುಗಳು ಸನ್ಮಾನ ಮಾಡುತ್ತಾರೆ” ಎಂದು ಹೇಳಿ ಶ್ರೀಯವರು ನೋಡಿದರು. ಶ್ರೀಯವರು ಮಂದಹಾಸಬೀರಿ ಸಮ್ಮತಿ ಸೂಚಿಸಿದರು. 

ಎರಡು - ಮೂರು ದಿನಗಳಾದ ಮೇಲೆ ಮೂವರು ಜ್ಯೋತಿಷಿಗಳೂ ತಾವು ಪ್ರತ್ಯೇಕವಾಗಿ ಬರೆದಿರುವ ಜಾತಕಫಲಗಳನ್ನು ಶ್ರೀಯವರ ಮುಂದಿಟ್ಟು ಅವಲೋಕಿಸಬೇಕೆಂದು ಪ್ರಾರ್ಥಿಸಿದರು. ಗುರುಗಳ ಇಂಗಿತವರಿತು ನಾರಾಯಣಾಚಾರ್ಯರು ಮೂರು ಜನರೂ ಬರೆದ ಜಾತಕಫಲಭಾಗಗಳನ್ನು ಓದಹತ್ತಿದರು.

ಮೊದಲನೆಯ ಜ್ಯೋತಿಷಿಗಳು “ಈ ಜಾತಕವು ಪರಮಾದ್ಭುತವಾದುದು. ನಮ್ಮ ಜೀವನದಲ್ಲಿ ಇಂಥ ಉತ ಷ್ಟವಾದ ಜಾತಕವನ್ನು ನಾವು ನೋಡಿರಲಿಲ್ಲ. ಸಕಲ ಗ್ರಹಾಭಿಮಾನಿದೇವತೆಗಳಿಗೂ ಪ್ರಭುವಾದ ಶ್ರೀಹರಿಯ ವಿಶೇಷಾನುಗ್ರಹಯುಕ್ತವಾಗಿರುವ ಈ ಜಾತಕದವರು ಭಾಗ್ಯಶಾಲಿಗಳು! ಅಂತೆಯೇ ಸಕಲಗ್ರಹಗಳೂ ಅತ್ಯಂತ ಉಚ್ಚರಾಗಿದ್ದು ಈ ಜಾತಕದ ಧನ್ಯಜೀವಿಗಳಲ್ಲಿ ವಿಶೇಷ ಅನುಗ್ರಹಮಾಡುತ್ತಿದ್ದಾರೆ. ಉತ್ತಮ ದೇವಾಂಶಸಂಭೂತರಾದವರ ಜಾತಕವಿದು, ಜ್ಞಾನ-ಭಕ್ತಿ-ವೈರಾಗ್ಯಪೂರ್ಣರೂ, ಸಕಲರಾಜ-ಮಹಾರಾಜರಿಂದಮಾನಿತರೂ, ಲೋಕವಂದಿತರೂ ಆಗಿ ಅನನ್ಯ ಸಾಧಾರಣ ಕೀರ್ತಿ, ಗೌರವಗಳಿಂದ ಲೋಕಕಲ್ಯಾಣಾಸಕ್ತರಾಗಿ ವಿರಾಜಿಸುವರು. ಇವರಿಂದ ಜಗತ್ತಿನ ಜನತೆಯ ಉದ್ದಾರವಾಗುವುದು, ಇವರು ಶತಾಯುಷಿಗಳು. ಆದರೆ ಸುಮಾರು ಎಪ್ಪತ್ತೆಂಟು-ಎಂಭತ್ತರ ವಯಸ್ಸಿನಲ್ಲಿ ಅದೃಶ್ಯರಾಗುವ ಸಂಭವವಿದೆ” ಮುಂತಾಗಿ ಜಾತಕಫಲವನ್ನು ನಿರೂಪಿಸಿದ್ದರು. ಎರಡನೆಯ ಜ್ಯೋತಿಷಿಗಳು ಬರೆದ ಫಲಭಾಗವೂ ಮೊದಲಿನವರಂತೆಯೇ ಇದ್ದು “ಈ ಜಾತಕದವರು ಮೂರು ನೂರು ವರ್ಷಗಳ ಕಾಲ ಉಜ್ವಲವಾಗಿ ಬೆಳಗುತ್ತಾರೆ” ಎಂದು ಬರೆದಿದ್ದರು. 

ಮೂರನೆಯ ಜ್ಯೋತಿಷಿಗಳೂ ಇದರಂತೆಯೇ ಬರೆದಿದ್ದು ಆಯುಷ್ಯವು ಮಾತ್ರ ಏಳು ನೂರು ವರ್ಷಗಳೆಂದು ಬರೆದಿದ್ದರು ಅದನ್ನು ಕೇಳಿ ಸಭಿಕರು “ಆಹಾ, ಇದೆಂತಹ ಶ್ರೇಷ್ಠ ಜಾತಕ ! ಈ ಮಹನೀಯರಾರಾಗಿರಬಹುದು ?” ಎಂದು ಏಕಕಾಲದಲ್ಲಿ ಕೇಳಲಾರಂಭಿಸಿದರು, ಆಗ ಲಕ್ಷ್ಮೀನಾರಾಯಣಾಚಾರರು “ನಾವು ಒಂದೇ ಜಾತಕವನ್ನು ಮೂವರಿಗೂ ಕೊಟ್ಟೆವು. ಇದು ಪೂಜ್ಯ ಗುರುಪಾದರ ಜಾತಕ !” ಎನಲು ಸರ್ವರೂ ಪರಮಾಶ್ವರಾನಂದತುಂದಿಲರಾದರು. ಆಗ ಲಕ್ಷ್ಮೀನರಸಿಂಹಾಚಾರ ಪ್ರಕೃತಿಗಳು “ಜಾತಕಫಲವನೋದುತ್ತಿರುವಾಗಲೇ ಇದು ಗುರುಗಳ ಜಾತಕವಿರಬೇಕೆಂದು ತರ್ಕಿಸಿದ್ದೆವು. ಇವರು ನಿಜವಾಗಿ ಉತ್ತಮ ಪಂಡಿತರೇ ಸರಿ! ಆದರೆ ಒಂದು ವಿಚಾರ ಮಾತ್ರ ಸ್ಪಷ್ಟವಾಗಲಿಲ್ಲ. ಮೂರು ಜನರೂ ಶ್ರೀಯವರ ಆಯುಷ್ಯವನ್ನು ನೂರು, ಮುನ್ನೂರು, ಏಳುನೂರುವರ್ಷಗಳೆಂದು ಬರೆದಿದ್ದಾರೆ. ಅದು ಮಾತ್ರ ಸಮರ್ಪಕವಾಗಿಲ್ಲವೆಂದು ತೋರುವುದು. ಅದುಬಿಟ್ಟರೆ ಇವರು ಉತ್ತಮ ಜ್ಯೋತಿಷಿಗಳೂ ತಾವು ಬರೆದಿದ್ದು ಸರಿಯಾಗಿದೆಯೆಂದು ವಾದಿಸಹತ್ತಿದರು. ಆಗ ಮುಗುಳುನಗೆಯನ್ನು ಹೊರಸೂಸುತ್ತಾ ಗುರುರಾಜರು “ಪಂಡಿತರೇ, ವಿವಾದ ಮಾಡಬೇಡಿ. ನೀವು ಮೂವರು ಬರೆದಿರುವುದೂ ಯಥಾರ್ಥವಾಗಿದೆ! ಸತ್ಯವಾಗಿದೆ!” ಎಂದಪ್ಪಣೆ ಕೊಡಿಸಿದಾಗ ಎಲ್ಲರು ಬೆಕ್ಕಸಬೆರಗಾಗಿ ಗುರುಗಳನ್ನು ನೋಡಹತ್ತಿದರು. 

ಅವರೆಲ್ಲರ ಸಂಶಯವನ್ನು ಪರಿಹರಿಸಲು ಗುರುಪಾದರು ಇಂತು ವಿವರಿಸಿದರು - “ಶತಮಾನಂ ಭವತಿ ಶತಾಯುಃ ಪುರುಷಃ” ಎಂದು ವೇದಗಳು ಸಾರುವವು. ಮಾನವನ ಜೀವನದ ಪರಿಮಿತಿ ನೂರುವರ್ಷ ಆಯುಷ್ಯವೆಂದು ಬರೆದಿರುವುದು ಯುಕ್ತವಾಗಿದೆ. ಸುಮಾರು ಎಪ್ಪತ್ತೆಂಟು-ಎಂಭತ್ತನೆಯ ವಯಸ್ಸಿನಲ್ಲಿ ಅದೃಶ್ಯರಾಗುವ ಸಂಭವವಿದೆ ಎಂದು ಬರೆದಿರುವುದು ಶ್ರೀಹರಿಚಿತ್ತಕ್ಕೆ ಸೇರಿದ ವಿಚಾರವಾದ್ದರಿಂದ ಒಟ್ಟಿನಲ್ಲಿ ಇವರು ತಿಳಿಸಿರುವುದು ಸತ್ಯವೇ ಆಗಿದೆ. ಇನ್ನು ಎರಡನೆಯವರು ಮತ್ತು ಮೂರನೆಯವರು ಬರೆದಿರುವುದೂ ಒಂದು ವಿಧದಿಂದ ಸತ್ಯವೇ ಆಗುವುದೆಂದು ನಮಗೆ ಶ್ರೀಹರಿಯು ಪ್ರೇರೇಪಿಸುತ್ತಿದ್ದಾನೆ! ಮೂರುನೂರು ವರ್ಷ ಆಯುಷ್ಯವೆಂಬುದೂ ಸತ್ಯವಾಗಿದೆ. ಅದು ನಮ್ಮ ಗ್ರಂಥಗಳಿಗೆ ಸಂಬಂಧಿಸಿದ್ದು, ನಮ್ಮ ಗ್ರಂಥಗಳೆಂದರೆ ನಮ್ಮ ಉಪದೇಶಗಳೇ. ಆದ್ದರಿಂದ ನಾವಿದ್ದಂತೆಯೇ ಅಲ್ಲವೇ ? ನಮ್ಮ ಗ್ರಂಥಗಳು ಮೂರುನೂರು ವರ್ಷಗಳ ಕಾಲ ಉಜ್ವಲವಾಗಿ ಬೆಳಗುವವು. ಅಂದರೆ ಮೂರುನೂರುವರ್ಷಗಳವರೆಗೆ ಸಹಸ್ರಾರು ಜನ ನಮ್ಮ ಗ್ರಂಥಗಳ ಪಾಠ-ಪ್ರವಚನ ಮಾಡುವ ಶ್ರೇಷ್ಠಪಂಡಿತರು ಈ ದೇಶದಲ್ಲಿ ಗ್ರಾಮ ಗ್ರಾಮಗಳಲ್ಲಿ ಕಂಗೊಳಿಸುತ್ತಾರೆ. ಮೂರುನೂರು ವರ್ಷಗಳ ತರುವಾಯ ಜ್ಞಾನದ ಮಟ್ಟ ಕಡಿಮೆಯಾಗುತ್ತಾ ಹೋಗಿ ಅಲ್ಲಲ್ಲಿ ನಮ್ಮ ಗ್ರಂಥಗಳ ಪಾಠ-ಪ್ರವಚನ ಮಾಡುವ ಯೋಗ್ಯತೆ ಪಡೆದ ನೂರಾರು ಜನ ಪಂಡಿತರು ದೊರಕಬಹುದು. ಹೀಗೆ ಪಾಠ-ಪ್ರವಚನಗಳು ಜರುಗಿದರೂ ಮುನ್ನೂರು ವರ್ಷಗಳಲ್ಲಿನ ಮಟ್ಟದಲ್ಲಿ ನಡೆಯದೇ ಬರುಬರುತ್ತಾ ಕ್ಷೀಣಿಸುತ್ತಾ ಹೋಗುವುದರಿಂದ ಉಜ್ವಲ ರೀತಿಯಲ್ಲಿ ಪಾಠ-ಪ್ರವಚನ ನಡೆಯುವ ನಮ್ಮ ಗ್ರಂಥಗಳಿಗೆ ಮೂರುನೂರು ವರ್ಷಗಳ ಆಯುಷ್ಯವೆಂದು ಬರೆದಿರುವುದು ಸರಿಯಾಗಿದೆ. ಇನ್ನು ಮೂರನೆಯ ಪಂಡಿತರು ಬರೆದಿರುವ ಏಳುನೂರು ವರ್ಷ ಆಯುಷ್ಯದ ವಿಚಾರ! ನಾವು ಎಂದಾದರೊಂದು ದಿನ ಬೃಂದಾವನಸ್ಥರಾಗಲೇಬೇಕಲ್ಲವೇ ? ಆದರೆ ನಾವು ಬೃಂದಾವನಾಂತರ್ಗರಾದ ಮೇಲೆ ಏಳುನೂರು ವರ್ಷಗಳ ಕಾಲ ಬೃಂದಾವನದಲ್ಲಿದ್ದು ಲೋಕಕಲ್ಯಾಣ ಮಾಡಬೇಕೆಂಬುದು ಶ್ರೀಹರಿಯ ಸಂಕಲ್ಪವಾಗಿದೆ ಎಂದು ನಮಗೆ ಭಾಸವಾಗುತ್ತಿದೆ. ಆದುದರಿಂದ ಇವರು ಬರೆದಿರುವುದು ಸತ್ಯವೆಂದು ಧಾರಾಳವಾಗಿ ಹೇಳಬಹುದು. ಇದೆಲ್ಲವೂ ಶ್ರೀಹರಿಯ ಅಚಿಂತ್ಯಾದ್ಭುತಶಕ್ತಿ, ಸಂಕಲ್ಪ, ಭಕ್ತವಾತ್ಸಲ್ಯದ್ಯೋತಕವೆಂದು ತಿಳಿಯಬೇಕು” ಎಂದು ವಿವರಿಸಿದರು. 

ಶ್ರೀಪಾದಂಗಳ ವಿವರಣೆಯನ್ನು ಕೇಳಿ ಆ ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲರೂ ಹರ್ಷಪುಳಕಿತಗಾತ್ರರಾಗಿ ಶ್ರೀಯವರನ್ನು ಕೊಂಡಾಡಹತ್ತಿದರು. ಮೂವರು ಜ್ಯೋತಿಷಿಗಳಿಗಾದ ಆಶ್ಚರ-ಆನಂದ ವರ್ಣನಾತೀತ ! ಅವರ ಪಾಂಡಿತ್ಯವನ್ನು ಶ್ರೀಮಠದ ಪಂಡಿತರು ಶ್ಲಾಘಿಸಿದರು. ಆಗ ಆ ಜ್ಯೋತಿಷಿಗಳು ಶ್ರೀಯವರಿಗೆ ಸಾಷ್ಟಾಂಗವೆರಗಿ “ಮಹಾಸ್ವಾಮಿ, ತಮ್ಮ ಜ್ಞಾನ ಅಸಾಧಾರಣವಾದುದು. ಮಹಾತ್ಮರಾದ ಶ್ರೀವಿಜಯೀಂದ್ರತೀರ್ಥಗುರುಗಳ ಪ್ರಶಿಷ್ಯರಾದ ತಮ್ಮಲ್ಲಿ ಸಕಲ ಶಾಸ್ತ್ರಪಾಂಡಿತವಾ ವಿಲಕ್ಷಣರೀತಿಯಿಂದಿರುವುದು ಸ್ವಾಭಾವಿಕವೇ ಆಗಿದೆ, ತಮ್ಮ ವಿವರಣೆಯನ್ನು ಕೇಳಿ ನಾವು ಧನ್ಯರಾದೆವು” ಎಂದು ವಿಜ್ಞಾಪಿಸಿದರು. ಶ್ರೀಪಾದಂಗಳವರು ಸುಪ್ರಸನ್ನರಾಗಿ ಆ ಮೂವರು ಜ್ಯೋತಿಷಿಗಳಿಗೂ ಶಾಲು ಹೊದ್ದಿಸಿ “ಜೋತಿಷಶಾಸ್ತ್ರವಿಶಾರದರೆಂಬ ಪ್ರಶಸ್ತಿಯೊಡನೆ ಉದಾರವಾಗಿ ಸಂಭಾವನೆ ಕರುಣಿಸಿ ಸನ್ಮಾನಿಸಿದರು.