ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೯೬. ವೇದಭಾಷ್ಯ ರಚನೆ
ಶ್ರೀಗುರುರಾಜರು ಒಂದು ದಿನ ಶ್ರೀಮಠದ, ವಿದ್ಯಾಪೀಠದ ವೃದ್ಧರಾದ ಪಂಡಿತರುಗಳು, ಆತ್ಮೀಯ ಬಂಧುಗಳೂ ಆದ ಲಕ್ಷ್ಮೀನರಸಿಂಹಾಚಾರ್ಯ, ರಾಮಚಂದ್ರಚಾರ್ಯ, ನರಸಿಂಹಾಚಾರ್ಯ, ಅಣ್ಣ ಗುರುರಾಜಾಚಾರ್ಯರು ಮತ್ತು ಪೂರ್ವಾಶ್ರಮ ಸೋದರಳಿಯ, ಅಣ್ಣನ ಮಕ್ಕಳು, ಶ್ರೀಪಾದಪುತ್ರರುಗಳು, ವಿದ್ಯಾಶಿಷ್ಯರೂ ಆದ ನಾರಾಯಣಾಚಾರ್ಯ, ವೆಂಕಟನಾರಾಯಾಣಾ- ಚಾರ್ಯ, ಲಕ್ಷ್ಮೀನಾರಾಯಣಾಚಾರ್ಯ, ಕೃಷ್ಣಾಚಾರ್ಯ, ಗೋವಿಂದಾಚಾರ್ಯ ಮುಂತಾದವರನ್ನು ಕರೆಯಿಸಿಕೊಂಡು ತಾವು ರಚಿಸಲು ಸಂಕಲ್ಪಿಸಿರುವ ವೇದಭಾಷ್ಯಗಳ ವಿಚಾರವನ್ನು ನಿರೂಪಿಸಿ ಹೀಗೆ ಅಪ್ಪಣೆ ಕೊಡಿಸಿದರು.
“ವಿದ್ಯಾಲಕ್ಷ್ಮಿಯು ಪರಮಹಂಸಾಶ್ರಮವನ್ನು ಸ್ವೀಕರಿಸಿ ದೈತಸಿದ್ಧಾಂತ ರಕ್ಷಣೆಗೆ ವೇದಭಾಷ್ಯ, ಪ್ರಕಾಶ, ಪರಿಮಳಾದಿ ಗ್ರಂಥಗಳನ್ನು ರಚಿಸಬೇಕೆಂದು ಆದೇಶ ನೀಡಿದ್ದಳು. ಶ್ರೀವಿಜಯೀಂದ್ರರು-ಗುರುಪಾದರೂ ಆಜ್ಞಾಪಿಸಿದ್ದರು. ನಾವು ಪೀಠಾಧಿಪತಿಗಳಾಗಿ ಬಹುವರ್ಷಗಳಾದವವು. ಈ ಒಂದು ಅವಧಿಯಲ್ಲಿ ಶ್ರೀಹರಿವಾಯುಗಳು ನಮ್ಮಿಂದ ಅನೇಕ ಗ್ರಂಥಗಳನ್ನು ರಚನೆಮಾಡಿಸಿ ಅನುಗ್ರಹಿಸಿದ್ದರೂ ಈವರೆವಿಗೂ ವಾಗ್ಗೇವಿಯ ಅಣತಿಯಂತೆ ವೇದಭಾಷ್ಯಗಳನ್ನು ರಚಿಸಲು ಅವಕಾಶವಾಗಿರಲಿಲ್ಲ. ನಾವು ಯಾತ್ರಾಕ್ರಮದಿಂದ ತಿರುಪತಿಗೆ ಹೋದಾಗ ಶ್ರೀವೆಂಕಟೇಶ್ವರನು ನಮ್ಮಲ್ಲಿ ಪರಮಾನುಗ್ರಹಮಾಡಿ ವೇದಭಾಷ್ಯಗಳನ್ನು ರಚಿಸಲು ವರರೂಪ ಆದೇಶವನ್ನು ನೀಡಿದ್ದನು. ಶ್ರೀಹರಿ-ವಾಯು-ಗುರುಗಳ ಪ್ರೇರಣೆಯಂತೆ ನಾವೀಗ ಆ ಮಹತ್ಕಾರ್ಯವನ್ನು ನೆರವೇರಿಸಲು ಸಂಕಲ್ಪಿಸಿದ್ದೇವೆ. ಇದೊಂದು ಅಸದೃಶ ಭಗವತೇವೆಯಾಗಿದೆ. ಅಂತೆಯೇ ಇದು ಬಹು ಹೊಣೆಗಾರಿಕೆಯ ಕಾರ್ಯವೂ ಆಗಿದೆ. ಶ್ರೀಹರಿವಾಯುಗಳ, ಗುರುಪಾದರ ದಯದಿಂದ ಅದನ್ನು ಯಶಸ್ವಿಯಾಗಿ ಪೂರೈಸುತ್ತೇವೆಂಬ ಧೈರ್ಯ, ನಂಬಿಕೆಗಳು ನಮಗುಂಟಾಗಿವೆ. ಈ ಮಹತ್ಕಾರದಲ್ಲಿ ವಿದ್ವಾಂಸರೂ, ಅನುಭವಿಗಳೂ, ಆತ್ಮೀಯರೂ ಆದ ನಿಮ್ಮೆಲ್ಲರ ಸಹಕಾರವು ಅವಶ್ಯವಾಗಿದೆ.
ಈಗ ಮೊದಲು ಋಕ್, ಯಜುಸ್ಸಾಮಾಥರ್ವವೇದಗಳ ಪ್ರತಿಗಳು, ಅವನ್ನು ಅರ್ಥೈಸಲು ಸಹಾಯಕವಾದ ಗ್ರಂಥಗಳ ಸಂಗ್ರಹ, ಪರಿಶೀಲನ, ಸಂಶೋಧನೆ, ಪಾಠಾಂತರಗಳ ನಿರ್ಧಾರ, ಶುದ್ಧಪ್ರತಿಗಳ ತಯಾರಿಕೆ, ಮುಂತಾದ ಪೂರ್ವಭಾವಿ ಕಾರ್ಯಗಳಾಗಬೇಕಾಗಿದೆ. ಇವೆಲ್ಲದರಲ್ಲೂ ನಿಮ್ಮೆಲ್ಲರ ಶ್ರದ್ಧಾ-ಭಕ್ತಿಯುಕ್ತ ಸೇವೆ ಅವಶ್ಯವಾಗಿದೆ.”
ಅಮೃತಸ್ಯಂದಿಯಾದ ಶ್ರೀಗಳವರ ವಚನವನ್ನಾಲಿಸಿ ಸಮಸ್ತರೂ ಆನಂದ ತುಂದಿಲರಾದರು. ವೇದಭಾಷ್ಯರಚನೆಯಾದರೆ ದೈತಸಿದ್ಧಾಂತಕ್ಕೆ ಮಹದುಪಕಾರವಾಗುವುದಲ್ಲದೆ, ಪಾಠಪ್ರವಚನಾಸಕ್ತರಾದ ಪಂಡಿತರಿಗೆ ಅತ್ಯಂತ ಸಹಾಯಕವಾಗುವುದೆಂಬುದನ್ನು ಬಲ್ಲ ಅವರು ಉತ್ಸಾಹದಿಂದ ಶ್ರೀಯವರ ಅಪ್ಪಣೆಯಂತೆ ಸೇವೆ ಸಲ್ಲಿಸುವುದಾಗಿ ಗುರುಗಳಲ್ಲಿ ವಿನಯದಿಂದ ವಿಜ್ಞಾಪಿಸಿ ನಮಸ್ಕರಿಸಿದರು.
ಸರಿ, ಪ್ರಾರಂಭವಾಯಿತು ಗ್ರಂಥಸಂಗ್ರಹಕಾರ ! ರಾಜ್ಯ-ರಾಜ್ಯಗಳು, ಗ್ರಾಮ-ಗ್ರಾಮಗಳು, ಮನೆ-ಮನೆಗಳಿಂದ ವೇದಗ್ರಂಥಗಳ ಸಂಗ್ರಹಕಾರ ಭರದಿಂದ ಸಾಗಿತು. ಸುಮಾರು ಆರೇಳು ತಿಂಗಳುಗಳಲ್ಲಿ ಸಾವಿರಾರು ತಾಳಾಓಲೆ, ಹಸ್ತಲಿಖಿತ ವೇದಗ್ರಂಥಗಳನ್ನು ಸಂಗ್ರಹಿಸಿ ಆ ವಿಚಾರವನ್ನು ಗುರುಗಳಲ್ಲಿ ನಿವೇದಿಸಲಾಯಿತು. ಶ್ರೀಪಾದಂಗಳವರು ಲಕ್ಷ್ಮೀನರಸಿಂಹಾಚಾರ, ರಾಮಚಂದ್ರಾಚಾರ, ಗುರುರಾಜಾಚಾರರ ಮೇಲ್ವಿಚಾರಣೆಯಲ್ಲಿ ವೇದವಿದ್ಯಾವಿಶಾರದರು, ನಲವತ್ತು ಐವತ್ತು ಜನ ಶಾಸ್ತ್ರ ಪಾರಂಗತ ಪಂಡಿತರು ಹಾಗೂ ವೆಂಕಟನಾರಾಯಣಾಚಾರ, ನಾರಾಯಣಾಚಾರ ಶ್ರೀಪಾದಪುತ್ರ ಲಕ್ಷ್ಮೀನಾರಾಯಣಾಚಾರ, ಕೃಷ್ಣಾಚಾರರುಗಳಿಂದ ಕೂಡಿದ ವೇದಸಂಶೋಧನಾ ಕಾರನಿರ್ವಾಹಕಮಂಡಲಿಯನ್ನು ಏರ್ಪಡಿಸಿ, ಪ್ರತಿಯೊಂದು ವೇದಗಳನ್ನೂ ಪರಿಶೀಲಿಸಿ, ಶುದ್ಧವಾದ ಪ್ರತಿಗಳನ್ನು ಪ್ರತ್ಯೇಕಿಸಿ, ಪಾಠಾಂತರಗಳಿರುವ ಪ್ರತಿಗಳಲ್ಲಿ ಹೆಚ್ಚು ಗ್ರಂಥಗಳಲ್ಲಿ ಒಂದೇ ರೀತಿಯ ಪಾಠವಿರುವ ಪ್ರತಿಗಳನ್ನೂ ಪ್ರತ್ಯೇಕಿಸಿ, ಅವೆರಡೂ ಪ್ರತಿಗಳನ್ನೂ ಕೂಲಂಕುಷವಾಗಿ ಸಂಶೋಧಿಸಿ, ಪರಿಶುದ್ಧ ಪ್ರತಿಯನ್ನು ತಯಾರಿಸುವುದರ ಜೊತೆಗೆ ಪಾಠಾಂತರಗಳ ವಿವೇಚನಾಪೂರ್ವಕವಾಗಿ ಅವುಗಳ ವಿವರವಿರುವ ಯಾದಿಯನ್ನೂ ಸಿದ್ಧಪಡಿಸುವಂತೆ ಅಪ್ಪಣೆ ಮಾಡಿದರು.
ವಿದ್ಯಾಮಠದಲ್ಲಿ ನಲವತ್ತೈದು ಜನ ವಿದ್ವಾಂಸರು ವೇದಗ್ರಂಥಗಳ ಸಂಶೋದನಾಕಾರದಲ್ಲಿ ತೊಡಗಿದರು. ಎಲ್ಲರೂ ಉತ್ಸಾಹ-ಶ್ರದ್ಧೆಯಿಂದ ಕೆಲಸಮಾಡುತ್ತಿದ್ದುದರಿಂದ ಸಂಶೋಧನಾಕಾರವು ಭರದಿಂದ ಜರುಗಹತ್ತಿತು. ವಾರಕ್ಕೆ ಒಮ್ಮೆ ಪಂಡಿತರು ತಾವು ನೆರವೇರಿಸಿದ ಸಂಶೋಧನಾಕಾರ, ಸಂಶೋಧಿತ ವೇದಗ್ರಂಥಗಳ ಪ್ರತಿಗಳನ್ನು ಶ್ರೀಯವರ ಸನ್ನಿಧಿಗೆ ಪಾಠಾಂತರಗಳ ಯಾದಿಯೊಡನೆ ಸಮರ್ಪಿಸುತ್ತಿದ್ದರು. ಗುರುಗಳು ಅವನ್ನು ಪರಿಶೀಲಿಸಿ ಹೆಚ್ಚು ಕಡಿಮೆ ಮಾಡಬೇಕಾದುದನ್ನು ತಿಳಿಸುತ್ತಿದ್ದರು. ಆನಂತರ ಅವುಗಳನ್ನು ಸರಿಪಡಿಸಿ ಮತ್ತೊಂದು ಪ್ರತಿ ತಯಾರು ಮಾಡುವುದರಲ್ಲಿ ವಿದ್ವಾಂಸರು ಮಗ್ನರಾಗುತ್ತಿದ್ದರು. ಹೀಗೆ ಸುಮಾರು ಒಂದು ವರ್ಷಕಾಲ ಪಂಡಿತರ ಸತತ ಪರಿಶ್ರಮದ ಪರಿಣಾಮವಾಗಿ ವೇದತ್ರಯಗಳ ಶುದ್ಧವಾದ ಗ್ರಂಥಗಳು ಸಿದ್ಧವಾದವು. ಆನಂತರ ಶ್ರೀಪಾದಂಗಳವರು ಮತ್ತೊಮ್ಮೆ ಆ ಪ್ರತಿಗಳನ್ನು ಸಾದ್ಯಂತವಾಗಿ ಪರಿಶೀಲಿಸಿ 'ಇದಮಿತ್ಥಂ' ಎಂದು ನಿರ್ಣಯಿಸಿದಮೇಲೆ 'ತ್ರಯೇ' ಎಂದು ವಿಖ್ಯಾತವಾದ ಋಗ್‌ವೇದ, ಯಜುರ್ವೇದ, ಸಾಮವೇದಗಳ ಪರಿಶುದ್ಧ ಪ್ರತಿಯು, ಯುಕ್ತಪಾಠಾಂತರಗಳೊಡನೆ ಸಿದ್ಧವಾಯಿತು.
ಶ್ರೀಗುರುರಾಜರು ಒಂದು ಶುಭಮುಹೂತ್ರದಲ್ಲಿ ವೇದಭಾಷ್ಯ' ರಚನೆಯ ಕಾವ್ಯವನ್ನು ಪ್ರಾರಂಭಿಸಿದರು. ಶುದ್ಧಪ್ರತಿ ವೇದಗ್ರಂಥಗಳು, ವೇದಾಂಗಗಳು, ನಿರುಕ್ತ, ಛಂದಸ್ಸು, ವೇದಕೋಶ, ಶ್ರೀಮದಾಚಾರರ ಋಗ್ ಭಾಷ್ಯ. ಶ್ರೀಜಯತೀರ್ಥರ ಟೀಕೆ, ಶ್ರೀವಾಗೀಶತೀರ್ಥರು ಬರೆದ ಪದ-ಕ್ರಮ-ಗ್ರಂಥಗಳು, ಶ್ರೀಜಯತೀರ್ಥ, ಶ್ರೀವ್ಯಾಸರಾಜ, ಶ್ರೀವಿಜಯೀಂದ್ರ, ಶ್ರೀಸುಧೀಂದ್ರತೀರ್ಥರುಗಳು ಪರವಾದನಿರಾಕರಣಕಾಲದಲ್ಲಿ ಶ್ರುತರ್ಥವಿವರಣಮಾಡಿದ ಭಾಗಗಳು, ಶ್ರೀವಿಜಯೀಂದ್ರತೀರ್ಥರು ರಚಿಸಿದ “ಶ್ರುತಿ ತಾತ್ಪರ್ಯಕೌಮುದೀ, ಶ್ರುತ್ಯರ್ಥಸಾರ, ತುರೀಯಶಿವಖಂಡನಂ, ಪರತತ್ವಪ್ರಕಾಶಿಕಾ, ಭೇದವಿದ್ಯಾವಿಲಾಸ, ಭೇದಚಂದ್ರಿಕಾ, ಭೇದಾಗಮನಸುಧಾಕರ, ಭೇದಚಿಂತಾಮಣಿ, ಭೇದಪ್ರಭಾ, ಚಕ್ರಮೀಮಾಂಸಾ” ಮುಂತಾದ ಗ್ರಂಥಗಳು ಮತ್ತು ಶ್ರೀಮದಾಚಾರರ, ಟೀಕಾರಾಯರ ಉಪನಿಷದ್ಭಾಷ-ಟೀಕೆಗಳು ಹಾಗೂ ಸಾಯಣಭಾಷ್ಯ-ಇವಿಷ್ಟು ಗ್ರಂಥಗಳನ್ನಿಟ್ಟುಕೊಂಡು, ವೇದತ್ರಯಗ್ರಂಥಗಳನ್ನೂ, ನೂತನ ಭಾಷ್ಯರಚನೆಗೆ ಸಿದ್ಧಪಡಿಸಲಾದ ತಾಲಾಪತ್ರಗ್ರಂಥಗಳನ್ನೂ ಪೂಜಿಸಿ ಮಂಗಳಾರತಿಮಾಡಿ ಮಂತ್ರಪುಷ್ಪ ಸಮರ್ಪಿಸಿ ಶ್ರೀಬಾದರಾಯಣರು, ಶ್ರೀಮದಾಚಾರರು, ಶ್ರೀಟೀಕಾರಾಯರುಗಳ ಭಾವಚಿತ್ರಗಳಿಗೆ ಆರತಿಮಾಡಿ ಮಂತ್ರಪುಷ್ಪಗಳನ್ನು ಸಮರ್ಪಿಸಿ ಪ್ರಾರ್ಥಿಸಿ, ಶ್ರೀವಿಜಯೀಂದ್ರಗುರುಗಳ ಬೃಂದಾವನ ದರ್ಶನಮಾಡಿ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಿ ವಿದ್ಯಾಮಠಕ್ಕೆ ಬಂದು ವಿದ್ವತ್ತಭೆಯಲ್ಲಿ ಭದ್ರಾಸನದಲ್ಲಿ ಕುಳಿತು ಶ್ರೀರಾಘವೇಂದ್ರಗುರುಸಾರ್ವಭೌಮರು ವೇದಭಾಷ್ಯರಚನೆಯನ್ನು ಪ್ರಾರಂಭಿಸಿದರು.
ನೂರಾರು ಜನ ಪಂಡಿತರು, ವಿದ್ಯಾರ್ಥಿಗಳು, ಆತ್ಮೀಯರು ಹೀಗೆ ಸಭಿಕರು ಕಿಕ್ಕಿರಿದು ತುಂಬಿದ್ದ ಸಭೆಯಲ್ಲಿ ಆರು ಜನ ವಿಖ್ಯಾತ ಶೀಘ್ರಲಿಪಿಕಾರರಾದ ವಿದ್ವಾಂಸರು ಶ್ರೀಯವರ ಮುಂಭಾಗದಲ್ಲಿ ತಾಳಾ ಓಲೆಗರಿಗಳು, ಕಂಠಗಳನ್ನು ಹಿಡಿದು ಸಿದ್ಧರಾಗಿದ್ದರು. ಆ ಮನೋಹರವಾದ ದೃಶ್ಯ ಅತೃಪೂರ್ವವಾಗಿತ್ತು. ಹಿಂದೆ ಬಾದರಾಯಣದೇವರು ಬದರಿಯಲ್ಲಿ ವೇದವಿಭಾಗಪೂರ್ವಕವಾಗಿ, ವೇದಾರ್ಥನಿರ್ಣಾಯಕ ಬ್ರಹ್ಮಮೀಮಾಂಸಾಶಾಸ್ತ್ರವನ್ನು ರಚಿಸುತ್ತಿರುವಾಗ ನೂರಾರು ಋಷಿಮುನಿಗಳಿಂದ ಸಂಶೋಭಿಸುತ್ತಿದ್ದ ದೃಶ್ಯವನ್ನು ಇದು ನೆನಪಿಗೆ ತರುತ್ತಿದ್ದಿತು. ಸಕಲರೂ ಆನಂದ ಪುಳಕಿತಗಾತ್ರರಾಗಿ ಶ್ರೀಯವರ ವದನಾರವಿಂದದಿಂದ ಹೊರಹೊಮ್ಮುವ ವೇದ ವಿವರಣವನ್ನಾಲಿಸಲು ಉತ್ಸುಕರಾಗಿ ಕುಳಿತಿದ್ದಾರೆ. ಸಭೆಯಲ್ಲಿ ಅದೊಂದುಬಗೆಯ ದೈವೀಭಾವನೆ ಕಂಗೊಳಿಸುತ್ತಿದೆ!
ಶ್ರೀಗುರುರಾಜರು ಹೃದಯದಲ್ಲಿ ಶ್ರೀಮೂಲರಘುಪತಿ ವೇದವ್ಯಾಸಸದೇವರನ್ನು ಸ್ಮರಿಸಿ, ಒಮ್ಮೆ ಸಭೆಯನ್ನು ನಿರೀಕ್ಷಿಸಿ ಮಂದಹಾಸಬೀರುತ್ತಾ ಭಾಷ್ಯರಚನೆಯನ್ನಾರಂಭಿಸಿದರು! ಆಗ ಸಭೆಯಲ್ಲಿ ವಿದ್ಯುತ್ತಂಚಾರವಾದಂತಾಯಿತು. ಶ್ರೀಯವರು ಹೇಳುತ್ತಿರುವಂತೆಯೇ ಆರು ಜನ ಗ್ರಂಥಲೇಖಕರು ಸರಸರನೆ ಬರೆಯಲಾರಂಭಿಸಿದರು.
ಗುರುವರರು ಮೊದಲು ಋಗೈದಭಾಷ್ಯ ರಚನೆಯನ್ನು ಪ್ರಾರಂಭಿಸಿ ಮಂಗಳಾಚರಣ, ಗುರುಪರಂಪರಾವಂದನೆ, ಗ್ರಂಥರಚನೆಯ ಉದ್ದೇಶ ಮುಂತಾದವುಗಳನ್ನು ಧೀರಗಂಭೀರವಾಣಿಯಿಂದ ನಿರೂಪಿಸುತ್ತಿದ್ದಂತೆ ಲೇಖಕರು ಬರೆಯುತ್ತಿದ್ದಾರೆ. ಸಭಿಕರು ಅಭೂತಪೂರ್ವವೂ; ಅಸಾಧಾರಣವೂ, ವಿದ್ದತ್ತೂರ್ಣವೂ ಆದ ಶ್ರೀಗುರುರಾಜರ ಗ್ರಂಥರಚನಾಚಾತುರ್ಯವನ್ನು ಕಂಡು ಪುಳಕಿತಗಾತ್ರರಾಗುತ್ತಿದ್ದಾರೆ, ಎಲ್ಲ ಸಹೃದಯ ಪಂಡಿತರ ಕಣ್ಣುಗಳಿಂದ ಆನಂದಸಲಿಲ ಹರಿಯುತ್ತಿದೆ.
ಗುರುಪಾದರು ಮೊದಲು ಅಪೌರುಷೇಯವಾದ ಋಗ್ರೇದದ ಮಹತ್ವವನ್ನು ಹೃದಂಗಮವಾಗಿ ವರ್ಣಿಸಿ, ಮೊದಲ ಋಕ್ಕನ್ನು ಪಠಿಸಿ, ಅದನ್ನು ವಿವರಿಸಿ ಅರ್ಥನಿರೂಪಣೆಮಾಡಿದರು. ತರುವಾಯ ಶ್ರೀಸಾಯಣಾಚಾರರು ರಚಿಸಿದ ಭಾಷ್ಯದಲ್ಲಿ ಇರುವ ದೋಷಗಳು, ಅಪೂರ್ಣತೆ, ಅಪಾರ್ಥ, ವಿಪರೀತಾರ್ಥಗಳನ್ನೂ ಸಪ್ರಮಾಣವಾಗಿ ವಿವರಿಸಿ, ಸಾಯಣರಭಾವಗಳೆಂತು ಅಸಂಗತವೆಂದು ಪ್ರಾಮಾಣಿಕವಾಗಿ ತೋರಿಸಿಕೊಟ್ಟು ಅದನ್ನು ಶ್ರುತ್ಯಾದಿಗಳ ಆಧಾರದಿಂದಲೇ ನಿರಾಕರಿಸಿ, ಶ್ರೀಬಾದರಾಯಣರಿಗೆ ಸಮ್ಮತವಾದ ರೀತಿಯಲ್ಲಿ ಅರ್ಥವನ್ನು ವಿವರಿಸಿ ಅದನ್ನು ಸಮರ್ಥಿಸಲು ಇತರಶಾಸ್ತ್ರಗಳು ಶ್ರೀಮದಾಚಾರ-ಟೀಕಾಕೃತ್ಪಾದರುಗಳ ವಚನಗಳನ್ನು ಉದಾಹರಿಸಿ ಒಂದೊಂದು ಋಕ್ಕುಗಳಿಗೂ ಅರ್ಥವಿವರಣಮಾಡಿ ಒಂದೊಂದು ಋಕ್ಕುಗಳಲ್ಲಿರುವ ಪದ, ವರ್ಣಗಳೂ ಹೇಗೆ ಶ್ರೀವಿಷ್ಣುವನ್ನೇ ಪ್ರತಿಪಾದಿಸುತ್ತವೆ ಎಂಬುದನ್ನು ಸಪ್ರಮಾಣವಾಗಿ ವಿದ್ವತ್ತೂರ್ಣ ಹೃದಯಂಗಮಶೈಲಿಯಲ್ಲಿ ಪ್ರತಿಭಾಪುಂಜಗಳಿಂದ ಮಿಂಚಿಸುತ್ತಾ, ಸಿದ್ದಾಂತಮಾಡುತ್ತಿದ್ದಾರೆ - ಆಗ ವೇದಾಭಿಮಾನಿನಿಯಾದ ಶ್ರೀಲಕ್ಷ್ಮೀದೇವಿಯು, ಪರರಾತ್ಪರನಾದ ಪತಿ ಶ್ರೀನಾರಾಯಣನೊಡನೆ ಗುರುಗಳ ವದನರಂಗದಲ್ಲಿ ವಿಹರಿಸುತ್ತಿರುವಂತೆ ಜನರಿಗೆ ಭಾಸವಾಗುತ್ತಿತ್ತು.
ಶ್ರೀಹರಿಯು ಪಂಚರೂಪಗಳಿಂದಲೂ ಶ್ರೀಭೂದುರ್ಗಾರೂಪದಿಂದ ರಮಾದೇವಿಯೂ, ಹನುಭೀಮದ್ದರೂಪಗಳಿಂದ ಜೀವೋತ್ತಮರಾದ ಶ್ರೀಮುಖ್ಯಪ್ರಾಣ ದೇವರೂ, ಜಗತ್ತಿಗೆ ವೇದಗಳನ್ನು ಉಪದೇಶಿಸಿದ ಚತುರಾನನ ಬ್ರಹ್ಮದೇವರು, ವೀಣಾಪಾಣಿ ಗೀರ್ವಾಣಿಯವರೊಡನೆ ಗುರುಗಳ ಮುಖವೆಂಬ ರಂಗಮಂಟಪದಲ್ಲಿ ಕ್ರೀಡಿಸುತ್ತಾ, ಪ್ರೇರಕಶಕ್ತಿಗಳಾಗಿ ನಿಂತು, ಅನಾದ್ಯವಚ್ಛಿನ್ನ ಸತ್ಪರಂಪರಾಪ್ರಾಪ್ತ ಶ್ರೀಮವೈಷ್ಣವಸಿದ್ಧಾಂತವೇ ಸಕಲವೇದಗಳ ಮುಖ್ಯತಾತ್ಪರ್ಯವೆಂಬ ಸಿದ್ಧಾಂತವನ್ನು ಶ್ರೀಗುರುರಾಜರ ನುಡಿಮುತ್ತುಗಳ ಮೂಲಕ ಪ್ರಕಾಶಪಡಿಸುತ್ತಾ, ಅನನ್ಯ ಸಾಧಾರಣವೂ, ಅತ್ಯದ್ಭುತವೂ, ಜಗನ್ಮಾನವೂ ಆದ ವೇದಭಾಷ್ಯರಚನೆಮಾಡಿಸಿ ಗುರುಪಾದರಿಗೆ ಅಜರಾಮಕೀರ್ತಿಯನ್ನು ನೀಡುತ್ತಿದ್ದಾರೆ !
ಹೀಗೆ ಶ್ರೀರಾಘವೇಂದ್ರಗುರುವರ್ಯರು ವೇದಭಾಷ್ಯರಚನೆಯಲ್ಲಿ ಆಸಕ್ತರಾದರು. ಪ್ರತಿದಿನ ಬೆಳಿಗ್ಗೆ ಸ್ನಾನಾಕ್ಷೀಕ ಜಪಾದಿಗಳನ್ನು ಮುಗಿಸಿ ಸೂರೋದಯವಾಗುತ್ತಿದ್ದಂತೆಯೇ ಕಿಕ್ಕಿರಿದು ತುಂಬಿದ ವಿದ್ವತ್ತಭೆಯಲ್ಲಿ ವಿದ್ಯಾಸಿಂಹಾಸನದಲ್ಲಿ ವಿರಾಜಿಸಿ ಸುಮಾರು ಮೂರು ಘಂಟೆಗಳಕಾಲ ವೇದಭಾಷ್ಯರಚನೆ ಮಾಡುತ್ತಿದ್ದರು. ಅನಂತರ ಒಂಭತ್ತರಿಂದ ಹನ್ನೆರಡು ಗಂಟೆಯವರೆಗೆ ಸಚ್ಛಾಸ್ತ್ರಪಾಠಪ್ರವಚನವು ನಡೆಯುತ್ತಿತ್ತು.
ಶ್ರೀಪಾದಂಗಳವರ ಪೂರ್ವಾಶ್ರಮದ ಅಣ್ಣ ಗುರುರಾಜಾಚಾರರ ಮಕ್ಕಳೂ ಪ್ರಿಯ ವಿದ್ಯಾಶಿಷ್ಯರೂ ಆದ ವೆಂಕಟ ನಾರಾಯಣಾಚಾರರ ನಾಲ್ವರು ಪುತ್ರರಾದ ವೆಂಕಣ್ಣಾಚಾರ, ವಾಸುದೇವಾಚಾರ, ಮುದ್ದು ವೆಂಕಟಕೃಷ್ಣಾಚಾರ ಮತ್ತು ವಿಜಯೀಂದ್ರಾಚಾರರು, ಶ್ರೀಸುಧೀಂದ್ರತೀರ್ಥರ ಬಂಧುಗಳಾದ ನರಸಿಂಹಾಚಾರರ ಮಕ್ಕಳು ಗೋವಿಂದಾಚಾರರು, ಶ್ರೀಪಾದಪತ್ರ ಲಕ್ಷ್ಮೀನಾರಾಯಣಾಚಾರರ ಪುತ್ರರಾದ ಪುರುಷೋತ್ತಮಾಚಾರರು ಇದರಂತೆ ಬಿಚ್ಚಾಲೆಯಿಂದ ಬಂದಿದ್ದ ಅಪ್ಪಣ್ಣಾಚಾರರು ಹೀಗೆ ಆರುಜನರು ಮತ್ತು ಕುಂಭಕೋಣ, ತಂಜಾಪುರ ಮುಂತಾದ ಕಡೆಯ ಪಂಡಿತರ ಮಕ್ಕಳಾದ ಹದಿನಾರು ಜನ ತರುಣ ವಿದ್ಯಾರ್ಥಿಗಳು ಶ್ರೀಗುರುಸಾರ್ವಭೌಮರಲ್ಲಿ ಅದೇ ಸಮಯದಲ್ಲಿ ಸಮಗ್ರ ವೇದಾಂತಶಾಸ್ತ್ರ, ನ್ಯಾಯ, ಮೀಮಾಂಸಾ, ವ್ಯಾಕರಣ, ಧರ್ಮಶಾಸ್ತ್ರಗಳನ್ನು ವ್ಯಾಸಂಗಮಾಡಹತ್ತಿದರು.
ಇಂತು ಪ್ರಾತಃಕಾಲ ಸೂರ್ಯೋದಯದಿಂದ ಹಿಡಿದು ಮಧ್ಯಾಹ್ನದವರೆಗೆ ವೇದಭಾಷ್ಯರಚನೆ, ಪಾಠಪ್ರವಚನಗಳೂ, ಮಧ್ಯಾಹ್ನ ಶ್ರೀಮಹಾಸಂಸ್ಥಾನಪೂಜಾ, ತೀರ್ಥಪ್ರಸಾದ ವಿನಿಯೋಗ, ಭೋಜನಾದಿಗಳಾಗಿ ಮಧ್ಯಾಹ್ನ ಎರಡು ಘಂಟೆಯಿಂದ ನಾಲ್ಕು ಘಂಟೆಯವರೆಗೆ ಇತರ ಶಾಸ್ತ್ರಗಳ ಪಾಠ, ಧಾರ್ಮಿಕರೊಡನೆ ಮಾತುಕಥೆ, ಸಾಯಂದೀಪಾರಾಧನೆ, ಫಲಮಂತ್ರಾಕ್ಷತಾ ಪ್ರದಾನಗಳಾಗಿ ಅನಂತರ ಶ್ರೀಪಾದಂಗಳವರು ಮರುದಿನ ವೇದಭಾಷ್ಯ ರಚನೆಗೆ ಗ್ರಂಥಾವಲೋಕನ, ಚಿಂತನ-ಮಂಥನಗಳಲ್ಲಿ ತಲ್ಲೀನರಾಗಿ ಆ ತರುವಾಯ ವಿಶ್ರಾಂತಿ ಪಡೆಯುತ್ತಿದ್ದರು.
ಹೀಗೆ ಅವ್ಯಾಹತವಾಗಿ ಭಾಷ್ಯರಚನೆ, ಪಾಠಪ್ರವಚನಾದಿಗಳು ಜರುಗಹತ್ತಿತ್ತು. ಮಾಸಗಳು, ವರ್ಷಗಳು ಉರುಳಹತ್ತಿದವು, ದಿನಗಳುರುಗುತ್ತಿದ್ದಂತೆ ಶ್ರೀಪಾದಂಗಳವರು, ಋಗ್ವದ, ಯಜುರ್ವೇದ, ಸಾಮವೇದಗಳಿಗೆ ಅತ್ಯಂತ ವಿಸ್ತಾರವಾದ ಪ್ರೌಢ-ವಿದ್ವತ್ತೂರ್ಣ ಭಾಷ್ಯಗಳನ್ನು ರಚಿಸಿ ಮುಗಿಸಿದರು. ಅಥರ್ವವೇದಕ್ಕೆ ಭಾಷ್ಯ ರಚನೆಮಾಡುವುದು ಲೋಕಕಲ್ಯಾಣ, ಜನಹಿತದೃಷ್ಟಿಯಿಂದ ಯುಕ್ತವಲ್ಲವೆಂದು ದೂರದೃಷ್ಟಿಯುಳ್ಳ, ಜ್ಞಾನಿಗಳಾದ ಗುರುಗಳಿಗೆ ಭಗವಂತನ ಪ್ರೇರಣೆಯಾದುದರಿಂದ ಗುರುರಾಜರು ಅಥರ್ವವೇದಕ್ಕೆ ಭಾಷರಚಿಸುವುದನ್ನು ಮಾನಸಿಕಮಾಡಿದರು.
ಇದೇ ಸಂದರ್ಭದಲ್ಲಿ ಶ್ರೀಗುರುರಾಜರು ೧) ಗೀತಾರ್ಥಸಂಗ್ರಹ (ಗೀತಾವಿವೃತಿ), ೨) ಗೀತಾಭಾಷ್ಯ ಪ್ರಮೇಯದೀಪಿಕಾ ಟಿಪ್ಪಣಿ, ೩) ಗೀತಾತಾತ್ಪರ್ಯ ಟೀಕಾ ವಿವರಣ, ೪) ಮಹಾಭಾರತ ತಾತ್ಪರ್ಯನಿರ್ಣಯ ಭಾವಸಂಗ್ರಹ, ೫) ವಾದಾವಳೀ ವಾಖ್ಯಾ, ೬) ತರ್ಕತಾಂಡವ ವ್ಯಾಖ್ಯಾ, ೭) ಪ್ರಮಾಣಪದ್ಧತಿ ಟಿಪ್ಪಣಿ, ೮) ಪ್ರಮೇಯಸಂಗ್ರಹ - ಮುಂತಾದ ಅಸಾಧಾರಣ ಗ್ರಂಥಗಳನ್ನೂ ರಚಿಸಿ, ವೇದಭಾಷ್ಯಕಾರರು, ಟೀಕಾಕಾರರು, ಟಿಪ್ಪಣ್ಯಾಚಾರ ಚಕ್ರವರ್ತಿಗಳೆಂದು ಭಾರತಾದ್ಯಂತ ವಿದ್ವಜ್ಜನರಿಂದ ಮಾನ್ಯರಾಗಿ ಅನುಪಮ ಕೀರ್ತಿಯಿಂದ ವಿರಾಜಿಸಿದರು.
ವಿದ್ಯಾಮಠದಲ್ಲಿ ಶ್ರೀಮಧ್ವನವರಾತ್ರೋತ್ಸವ -ಮಹಾವಿದ್ವತ್ಸಭೆಗಳು ಬಹು ವೈಭವದಿಂದ ಜರಗುತ್ತಿವೆ. ಮಹಾವಿದ್ವತ್ಸಭೆಯಲ್ಲಿ ಶ್ರೀಮಠದ ಸುವರ್ಣಪಾಲಕಿಯಲ್ಲಿ ಶ್ರೀವೇದವ್ಯಾಸದೇವರು, ಶ್ರೀಮದಾಚಾರ್ಯರ ಭಾವಚಿತ್ರ, ಸರ್ವಮೂಲಗ್ರಂಥಗಳು, ವೇದಭಾಷ್ಯಗಳು, ನೂತನವಾಗಿ ಗುರುಗಳು ರಚಿಸಿದ ಶಾಸ್ತ್ರಗ್ರಂಥಗಳನ್ನು ಮಂಡಿಸಿ ಕನಕಾಭರಣ ಪೀತಾಂಬರಗಳಿಂದ ಅಲಂಕರಿಸಿ ಮಂಗಳವಾದ್ಯಗಳು ವೇದ ಘೋಷಗಳೊಡನೆ ಮೆರವಣಿಗೆ ಹೊರಡಿಸಿ, ಕುಂಭಕೋಣದ ರಾಜಬೀದಿಗಳಲ್ಲಿ ಮೆರಸಲಾಗುತ್ತಿದೆ. ಸುವರ್ಣಪಾಲಕಿಯು ಬೀದಿಬೀದಿಗಳಲ್ಲಿ ಬರುತ್ತಿರುವಾಗ ಸುಮಂಗಲೆಯರು ಆರತಿ ಬೆಳಗುತ್ತಿದ್ದಾರೆ ಜನರು ಹರ್ಷಧ್ವನಿಮಾಡುತ್ತಾ ಪುಷ್ಪ ವೃಷ್ಟಿಮಾಡುತ್ತಿದ್ದಾರೆ. ಶ್ರೀಪಾದಂಗಳವರು, ಶ್ರೀಪಾದಪುತ್ರರು ಸುವರ್ಣಹಿಡಿಯ ಚಾಮರ ಬೀಸುತ್ತಾ ಪಾದಚಾರಿಗಳಾಗಿ ನೂರಾರು ಪಂಡಿತರಿಂದೊಡಗೂಡಿ ದಯಮಾಡಿಸುತ್ತಿದ್ದಾರೆ. ಆ ಭವ್ಯ ರಮಣೀಯ ದೃಶ್ಯವನ್ನು ನೋಡಿ ಆನಂದಿಸಿದವರೇ ಧನ್ಯರು! ಮೆರವಣಿಗೆಯು ವಿದ್ಯಾಮಠಕ್ಕೆ ಹಿಂದಿರುಗಿದ ಮೇಲೆ ಶ್ರೀಯವರ ಅಮೃತಹಸ್ತದಿಂದ ವೇದಭಾಷ್ಯಗಳ ಪ್ರಕಾಶನ ಸಮಾರಂಭವು ವೈಭವದಿಂದ ನೆರವೇರಿತು. ಅಂದು ಶ್ರೀಯವರು ಮಾಡಿದ ಅನುಗ್ರಹಭಾಷಣ ಐತಿಹಾಸಿಕವಾಗಿ ಭಾರತೀಯ ತತ್ವಶಾಸ್ತ್ರದ ಚರಿತ್ರೆಯಲ್ಲಿ ರತ್ನಾಕ್ಷರಗಳಿಂದ ಬರೆದಿಡುವಂತಹುದಾಗಿತ್ತು! ಅನೇಕ ಪಂಡಿತರು ಭಾಷಣಮಾಡಿ ಶ್ರೀಯವರ ಜ್ಞಾನ-ಭಕ್ತಿ-ವೈರಾಗ್ಯಗಳನ್ನೂ, ಗ್ರಂಥರಚನಾ ಸಾಮರ್ಥ್ಯವನ್ನೂ, ವೇದಭಾಷ್ಯಗಳ ಮಹತ್ವವನ್ನೂ ಮುಕ್ತಕಂಠದಿಂದ ಸ್ತೋತ್ರಮಾಡಿದರು. ಸಹಸ್ರಾರು ಜನರು ಆ ಪರಮಪಾವನ ಮಂಗಳಮೂರ್ತಿಗಳಾದ ಗುರುಸಾರ್ವಭೌಮರ ದರ್ಶನ, ಅನುಗ್ರಹವಚನ, ತೀರ್ಥ-ಪ್ರಸಾದ, ಫಲಮಂತ್ರಾಕ್ಷತೆಗಳನ್ನು ಪಡೆದು ತಮ್ಮ ಜೀವನ ಸಾರ್ಥಕವಾಯಿತೆಂದು ಪರಮಾನಂದತುಂದಿಲರಾದರು.