ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೯೫. ಸ್ವಾಮಿಗಳವರ ದಿನಚರಿ
ಶ್ರೀಗಳವರು ಕುಂಭಾಪುರಿಗೆ ಬಂದು ನೂತನೋತ್ಸಾಹದಿಂದ ವಿದ್ಯಾಪೀಠದ ಮೇಲ್ವಿಚಾರಣೆ, ಪಾಠಪ್ರವಚನ, ನಿತ್ಯಕರ್ಮಾನುಷ್ಠಾನ ಶ್ರೀಮೂಲರಾಮರ ಪೂಜಾರಾಧನೆಗಳಲ್ಲಿ ಮಗ್ನರಾದರು. ಶ್ರೀಗುರುಸಾರ್ವಭೌಮರ ನಿತ್ಯನೈಮಿತ್ತಿಕ ಕಾರ್ಯಗಳೆಲ್ಲವೂ ಪರಮಾತ್ಮನಲ್ಲಿ ನಿಷ್ಕಾಮನೆಯಿಂದ ಮಾಡುವ ಪಾಜಾರೂಪವಾಗಿದ್ದಿತು. ಶ್ರೀಗುರುವರರ ಹಿಂದಿನ ಅವತಾರಗಳಲ್ಲಿ ಭಗವಂತನ ದರ್ಶನದಿಂದ ಉಂಟಾದ ಮಹಾಪುಣ್ಯರಾಶಿಯು ಈ ಜನ್ಮದಲ್ಲಿಯೂ ಅವರನ್ನು ಬೆನ್ನುಹತ್ತಿಬಂದಿತು. ಭಗವತ್ಥ೦ಕಲ್ಪದಂತೆ ಅಲ್ಪಸ್ವಲ್ಪವಿದ್ದ ಪ್ರಾರಬ್ಧವನ್ನು, ಇದು ಅವರ ಚರಮಾವತಾರವಾದ್ದರಿಂದ ಪೂರ್ವಾಶ್ರಮದಲ್ಲಿ 'ಬಡತನ' ರೂಪವಾಗಿ ಅನುಭವಿಸಿ, ದುಃಖಪ್ರಾರಬ್ದವನ್ನು ಕಳೆದುಕೊಂಡಮೇಲೆ, ಯುಗಯುಗಳಿಂದ ಗಳಿಸಿದ್ದ ಪುಣ್ಯರಾಶಿಯ ಫಲವನ್ನು ಅವರು ಈಗ ಅನುಭವಿಸಬೇಕಾಯಿತು. ಆ ಪುಣ್ಯರಾಶಿಯನ್ನು ಲೋಕೋದ್ಧಾರ-ಕಲ್ಯಾಣಗಳಿಗಾಗಿಯೇ ಮೀಸಲಿಟ್ಟ ಆ ಮಹನೀಯರು ಸ್ವಾಶ್ರಮೋಚಿತಕರ್ಮಾನುಷ್ಠಾನ ದೀಕ್ಷಾಬದ್ಧರಾಗಿ ಎಲ್ಲವನ್ನೂ ಭಗವತೇವಾರೂಪವಾಗಿ ನೆರವೇರಿಸಹತ್ತಿದರು. ಆದ್ದರಿಂದ ಶ್ರೀಗುರುರಾಜರ ಆಕಾರ, ಕಾವ್ಯ, ಜ್ಞಾನ, ಅವರ ಅಮೃತಮಯನಾಮ ಎಲ್ಲವೂ ಅತ್ಯಂತ ಪಾವನವಾದುದೇ.
ಕುಂಭಕೋಣದಲ್ಲಿರಾಜಿಸುವ 'ವಿದ್ಯಾಮಠ'ದ ವಿಶ್ರಾಂತಿಗೃಹದಲ್ಲಿ ಶ್ರೀಗುರುರಾಜರು ಪವಡಿಸಿದ್ದಾರೆ, ವಿರಿಂಚ-ಭವ-ಶಕ್ರಾದಿ ಸುರವೃಂದವಂದ್ಯನಾದ ಇಂದಿರಾ ಪತಿಯ ಅನಂತಕಲ್ಯಾಣ ಗುಣಗಳನ್ನು ಅಪಹರಿಸಿ, ಅವನು ನಿರ್ಗುಣ-ನಿರಾಕಾರನೆಂದು ಬೋಧಿಸುವ, ವಂಚಕಮಾಯಿಗೋಮಾಯುಗಳು ಪ್ರಪಂಚದಲ್ಲಿ ತಲೆಯೆತ್ತದಂತೆ ಅದುಮುತ್ತೇವೆಂದು ಪಣತೊಟ್ಟಿರುವರೋ ಎಂಬಂತೆ ವಂಚಕರೂಪೀ ಮಂಚದಮೇಲೆ ವ್ಯಾಘ್ರಾಜಿನದಿಂದಾವೃತವಾದ ಸುಪ್ಪತ್ತಿಗೆಯ ಮೇಲೆ, ಆಲದೆಲೆಯ ಮೇಲೆ ಯೋಗನಿದ್ರೆಯನ್ನು ನಟಿಸುತ್ತಾ ಶ್ರೀಹರಿಯು ಮಲಗಿರುವಂತೆ, ಅವನ ಅಂತರಂಗಭಕ್ತರಾದ ಯತಿಚಂದ್ರಮರು ಸರ್ವದಾ ಶ್ರೀಹರಿಧ್ಯಾನದಲ್ಲಿ ಜಾಗರೂಕರಾಗಿದ್ದರೂ ನಿದ್ರಾಸಕ್ತರಾಗಿರುವಂತೆ ನಟಿಸುತ್ತಾ ಪವಡಿಸಿದ್ದಾರೆ.
ಪಂಚಪಂಚ ಉಷಃಕಾಲ, ಶ್ರೀಮಠದ ತಾಳಸ್ತುತಿ ಪಾಠಕರು, ಭಾಗವತರು, ವೀಣಾ, ವೇಣು, ಮೃದಂಗ, ತಾಳಗಳಿಂದ ಸುಸ್ವರವಾಗಿ ತಾಳಲಯಬದ್ಧವಾಗಿ ಶ್ರೀಹರಿಯ ಲೀಲಾವಿಲಾಸಗಳನ್ನು ಮಲಯಮಾರುತ, ಭೂಪ, ಚಕ್ರವಾಕ, ಬಿಲಹರಿ ಮುಂತಾದ ವಿವಿಧ ರಾಗಗಳಲ್ಲಿಗಾನಮಾಡಿ ಅನಂತರ ಶ್ರೀಯತಿಸಾರ್ವಭೌಮರಿಗೆ ಸುಪ್ರಭಾತವನ್ನು ಹೇಳಹತ್ತಿದರು.
“ಶ್ರೀಮಧ್ವಮತಜಲಧಿ ಪೂರ್ಣಂದು ಎದ್ದೇಳು
ರಾಮಪಾದಾಸಕ್ಕೆ ಯೋಗೀಂದ್ರ ಎದ್ದೇಳು |
ಘನಮಹಿಮ ಎದ್ದೇಳು ಲೋಕಗುರು
ಶ್ರೀರಾಘವೇಂದ್ರ! ಕವಿಗೇಯ ಎದ್ದೇಳು
ಅಂಬರದಿ ಹೊಂಗಿರಣ ಮೂಡುತಿಹನೆದ್ದೇಳು
ಕಂಬದಿಂ ಬಂದವನ ಸೇವೆಗೆದ್ದೇಳು |
ಅಂಗವಿಸಿ ಬರುತಿಪ್ಪ ಭಕುತ ವೃಂದವ ಪೊರೆದು
ಮಂಗಳವ ಕರುಣಿಸಲು ಎದ್ದೇಳು ಗುರುವೇ ”
ಹೀಗೆ ಮಾಗಧರ ವಚನಮಾಧುರ್ಯರೂಪ ಜಲಸೇಚನದಿಂದ ಎಚ್ಚರಗೊಂಡು ವ್ಯಾಘ್ರಾಜಿನಮಯ ಸುಪ್ಪತ್ತಿಗೆಯಿಂದ ಮೇಲೆದ್ದ ಗುರುರಾಜರು ಏಕಕಾಲದಲ್ಲಿ ಪಂಡಿತರು ಅನುವಾದ ಮಾಡುತ್ತಿದ್ದ ಹದಿನೆಂಟು ಪುರಾಣಗಳು ಮತ್ತು ದ್ವಾದಶಸ್ತೋತ್ರವನ್ನು ಶ್ರವಣಮಾಡಿ ಸಂತುಷ್ಟರಾದರು.
ಗುರುರಾಜರು ಮೂಲರಘುಪತಿವೇದವ್ಯಾಸರಿಗೆ ನಮಸ್ಕರಿಸಿ, ವೇದಪಾರಂಗತರಾದ, ಭೂಸುರರು, ವೇದಮಂತ್ರೋಚ್ಚಾರ- ಪೂರ್ವಕವಾಗಿ ಮಾಡಿದ ವೈದಿಕ ಶುಭಾಶಂಸನಗಳನ್ನು ಪರಮಾದರದಿಂದ ಸ್ವೀಕರಿಸಿದರು. ಆನಂತರ ವಿದ್ಯಾಮಠದ ಅಂಗಣದಲ್ಲಿ ರಾಜಿಸುವ ಶ್ರೀತುಳಸಿಬ್ಬಂದಾವನದ ಬಳಿಸಾರಿ ತುಳಸೀಬನದಲ್ಲಿ ಸನ್ನಿಹಿತರಳಾದ ಶ್ರೀಲಕ್ಷ್ಮೀ ದೇವಿಯನ್ನು ವಂದಿಸಿ, ತರುವಾಯ ಶ್ರೀಹನೂಮಂತದೇವರಿಗೆ ನಮಸ್ಕರಿಸಿದರು. ಆನಂತರ ಯತಿರಾಜರು ಮೇನೆಯಲ್ಲಿ ಕುಳಿತು ಗಜೇಂದ್ರಮೋಕ್ಷ ಸ್ತುತಿ ಮೊದಲಾದ ಪರಮಾತ್ಮನ ಮಹಿಮೆಯನ್ನು ತಿಳಿಸುವ ಸ್ತೋತ್ರಗಳನ್ನು ಪಠಿಸುತ್ತಾ ಶ್ರೀವಿಜಯೀಂದ್ರ ಶ್ರೀಪಾದರ ಬೃಂದಾವನ ಸಮೀಪದಲ್ಲಿ ಹರಿಯುವ ದಕ್ಷಿಣ ದೇಶದ ದೇವ ನದಿಯಾದ ಕಾವೇರೀ ನದಿಯಲ್ಲಿ ಸ್ನಾನಮಾಡಲು ಪಂಡಿತ ಮಂಡಲಿಯೊಡನೆ ಮೆಲ್ಲಮೆಲ್ಲನೆ ಅಲ್ಲಿಗೆ ದಯಮಾಡಿಸಿದರು.
ಯತಿಚಕ್ರವರ್ತಿಗಳು ಅಲ್ಲಿನ ಉದ್ಯಾವನದ ಸಮೀಪದಲ್ಲಿ ಮೇನೆಯಿಂದಿಳಿದು ಮೃತ್ತಿಕಾಶೌಚ, ದಂತಧಾವನಗಳನ್ನು ನೆರವೇರಿಸಿ ಕಾವೇರಿನದಿಯಲ್ಲಿ ಸಂಕಲ್ಪ ವಿಧಿಪೂರ್ವಕವಾಗಿ ಆಚಮನಮಾಡಿ ಬುಧಜನರೊಡನೆ ಸ್ನಾನಕ್ಕಿಳಿದರು ಮತ್ತು ಶ್ರೀನಾರಾಯಣಾಷ್ಟಾಕ್ಷರ, ಶ್ರೀವಿಷ್ಣುಷಡಕ್ಷರ, ಶ್ರೀವಾಸುದೇವದ್ವಾದಶಾಕ್ಷರ ಮಂತ್ರಗಳನ್ನು ಮೂರು ಮೂರು ಬಾರಿ ಜಪಮಾಡಿ ಸ್ನಾನಕಾಲದಲ್ಲಿ ಜಪಿಸಲು ಯೋಗ್ಯವಾದ ಸೂಕ್ತಗಳ ಜಪಮಾಡಿ, ಮೃತ್ತಿಕಾಸ್ನಾನ, ಅಘಮರ್ಷಣಸ್ನಾನ, ಪ್ರಣವ ಮತ್ತು ಪುರುಷಸೂಕ್ತಪಠಣಪೂರ್ವಕ ಪ್ರೋಕ್ಷಣಾದಿಗಳನ್ನು ಯಥಾವತ್ತಾಗಿ ಮಾಡಿ, ಮಂತ್ರೋದಕದಿಂದ ದೇವತರ್ಪಣಾದಿಗಳನ್ನು ಯಥಾವತ್ತಾಗಿ ಮಾಡಿ, ಮಂತ್ರೋದಕದಿಂದ ದೇವತರ್ಪಣಾದಿಗಳನ್ನು ನೆರವೇರಿಸಿ ಸರ್ವರಿಗೂ ದಂಡೋದಕವನ್ನು ಪ್ರೋಕ್ಷಿಸಿ ವಿಷ್ಣು ಪಾದೋದಕವನ್ನು ಸೇವಿಸಿ ನದಿಯತೀರಕ್ಕೆ ದಯಮಾಡಿಸಿ ಕೌಪೀನ ಕಾಷಾಯವಸ್ತ್ರಗಳನ್ನು ಧರಿಸಿ ಗೋಪೀಚಂದನದಿಂದ ಊರ್ಧ್ವಪುಂಡ್ರ ದ್ವಾದಶನಾಮಗಳನ್ನೂ, ಪಂಚಮುದ್ರೆಗಳನ್ನೂ ಧರಿಸಿದರು. ಯತಿನಾಯಕರು ಆರ್ಘ ಪ್ರಧಾನಮಾಡಿ, ಹೃದಯದಲ್ಲಿ ವೇದಮಾತೆಯಾದ ಗಾಯತ್ರೀಮಂತ್ರವನ್ನು ಧರಿಸಿ, ಆದರಪೂರ್ವಕವಾಗಿ ಮಂತ್ರರತ್ನವಾದ ತಾರಕವನ್ನೂ, ಪ್ರಣವಮಂತ್ರವನ್ನೂ ಮೌನದಿಂದ ಜಪಿಸಿದರು. ಆಗ ಗುರುಗಳ ಮುಖದಲ್ಲಿ ಕಂಗೊಳಿಸುತ್ತಿದ್ದ ಸಾತ್ವಿಕ ತೇಜಸ್ಸು, ಗಾಂಭೀರ್ಯ, ದರಹಾಸಗಳು ಅವರ ಅಲೌಕಿಕವ್ಯಕ್ತಿತ್ವವನ್ನು ಸೂಚಿಸುತ್ತಿದ್ದವು. ತರುವಾಯ ಗುರುರಾಜರು 'ಪುರಾಣಮಂಟಪ'ಕ್ಕೆ ಬಿಜಯಮಾಡಿಸಿ, ಅಲ್ಲಿ ಶ್ರೀಬಾದರಾಯಣದೇವರು ಶ್ರೀಮಧ್ವಾಚಾರರಿಗೆ ದಯಪಾಲಿಸಿದ್ದು, ಪರಂಪರೆಯಿಂದ ಶ್ರೀಮದಾಚಾರರ ಮಹಾಸಂಸ್ಥಾನದಲ್ಲಿ ಪೂಜೆಗೊಳ್ಳುತ್ತಿದ್ದ ಶುದ್ಧಶಿಲಾತ್ಮಕಗಳಾದ ಎರಡು ವ್ಯಾಸಮುಷ್ಠಿಗಳನ್ನು ಪೂಜಿಸಲು ಉತ್ಸುಕರಾಗಿ ಪಂಡಿತರಿಂದ ಭಾಗವತಾದಿ ಪುರಾಣಗಳ ಅನುವಾದವನ್ನು ಶ್ರವಣಮಾಡಿ ಶ್ರೀಹರಿಗೆ ಶುದ್ಧೋದಕದಿಂದ ಅಭಿಷೇಕ ಮಾಡುತ್ತಾ ಮಧ್ಯೆ ಕ್ಷೀರಾಭಿಷೇಕವನ್ನು ಮಾಡಿ, ಶ್ರೇಷ್ಠವೂ ಮನೋಜವೂ ಆದ ಮುದ್ದಾನ್ನವನ್ನು ಧೃತಾದಿಗಳೊಂದಿಗೆ ನಿವೇದನ ಮಾಡಿ ಮಂಗಳಾರತಿಯನ್ನು ಬೆಳಗಿದರು.
ಆನಂತರ ಅಲ್ಲಿ ವಿರಾಜಿಸಿದ್ದ ಶ್ರೀನೃಸಿಂಹ-ವಾಯುದೇವರ ದರ್ಶನಮಾಡಿ ವಂದಿಸಿ, ಶ್ರೀವಿಜಯೀಂದ್ರತೀರ್ಥರಿಗೆ ಪ್ರದಕ್ಷಿಣನಮಸ್ಕಾರಾದಿಗಳನ್ನು ಸಮರ್ಪಿಸಿ, ಋಷಿಸದೃಶರಾದ ವಿಬುಧಶ್ರೇಷ್ಠಮಂಡಲಿಯಿಂದ ಪರಿವೃತರಾಗಿ, ತಳತಳನೆ ಹೊಳೆಯುವ ಮಣಿಮಯ ಪಾದುಕೆಗಳನ್ನು ಮೆಟ್ಟಿಕೊಂಡು ಶ್ರೀವಿದ್ಯಾಮಠಕ್ಕೆ ಹೊರಟರು. ಹೀಗೆ ಪಂಡಿತರು, ಧರ್ಮಾಭಿಮಾನಿಗಳು, ವಿದ್ಯಾರ್ಥಿಗಳಿಂದೊಡಗೂಡಿ ದಯಮಾಡಿಸುತ್ತಿರುವಾಗ ಶ್ರೀಯವರ ಮುಂಭಾಗದಲ್ಲಿ ಶ್ರೀಮಠದ ಸೇವಕರು, ತಾಳಸ್ತುತಿಪಾಠಕರು, ಹರಿದಾಸರುಗಳು ಶಂಖ, ದುಂದುಭಿ, ಭೇರಿ, ಮೃದಂಗ, ಕಹಳೆಗಳಿಂದ ಮಂದ್ರೋಚ್ಚಧ್ವನಿ ಗೈಯುತ್ತಿದ್ದರು. ಆ ಮಹಾಧ್ವನಿ ಮತ್ತು ಮಡ್ಡುಕವಾದ್ಯ, ಧವಳವಾದ್ಯ, ಶೋಭನಶೃಂಗವಾದ್ಯ, ಝರ್ಝರವಾದ್ಯ, ಚಕ್ರವಾದ್ಯಗಳ ನಿನಾದದಿಂದ ದಿಮ್ಮಿುಖಗಳು ಶಬ್ದಾಯಮಾನವಾಗುತ್ತಿತ್ತು. ದೇವಲೋಕದ ಕಲ್ಪವೃಕ್ಷವೇ ಮೂರ್ತಿಮತ್ತಾಗಿ ಯತಿರೂಪದಿಂದ ಪ್ರತ್ಯಕ್ಷರಾಗಿ ಧರೆಗಿಳಿದು ಬಂದಂತಿರುವ ಶ್ರೀರಾಘವೇಂದ್ರಗುರುಸಾರ್ವಭೌಮರು ತಮ್ಮ ಒಂದೊಂದು ಹೆಜ್ಜೆಯಿಂದಲೂ ಧರೆಯನ್ನು ಪಾವನಗೊಳಿಸುತ್ತಾನಗರ ಪ್ರದಕ್ಷಿಣಾಕಾರವಾಗಿ ಬರುವಾಗ ಮಾರ್ಗಮಧ್ಯದಲ್ಲಿ ನಿಂತು ಶ್ರೀಕುಂಭೇಶ್ವರದೇವರಿಗೆ ಅಭಿವಂದಿಸಿ ಪಾದಚಾರಿಗಳಿಂದ ಜಯಜಯಘೋಷವಾಗುತ್ತಿರಲು ಸಂಭ್ರಮದಿಂದ ಶ್ರೀವಿದ್ಯಾಮಠವನ್ನು ಪ್ರವೇಶಿಸಿದರು.
ಶ್ರೀಮಠದ ಸಭಾಂಗಣದಲ್ಲಿ ಭದ್ರಾಸನಮಂಡಿತರಾಗಿ ಗುರುರಾಜರು ಶಾಂತಿಪಾಠಪುರಸ್ಸರವಾಗಿ ಪಂಡಿತ-ಶಿಷ್ಯಮಂಡಲಿಗೆ ಮಂಗಳಕರವಾದ ಶ್ರೀಮದಾಚಾರರ ಸೂತ್ರಭಾಷ್ಯವನ್ನು ತತ್ವಪ್ರಕಾಶಿಕಾ ಮತ್ತು ತಾವು ರಚಿಸಿದ ಭಾವದೀಪಗಳೊಡನೆ ಗಂಭೀರಶೈಲಿಯಿಂದ ಪ್ರವಚನ ಮಾಡಿಸಲು ಪ್ರಾರಂಭಿಸಿದರು.
“ಪರಬ್ರಹ್ಮನು ಅನಂತಕಲ್ಯಾಣ ಗುಣಪೂರ್ಣನು, ಚಿಂತಾಸಂತಾಪಮುಂತಾದ ದೋಷಗಳಿಂದ ದೂರನು, ಈಕ್ಷಣೀಯನು ಮತ್ತು ಮಕ್ತಪ್ರಾಪ್ತನು. ಈ ಪ್ರಮೇಯಗಳನ್ನು ಶ್ರೀಭಗವತ್ಪಾದರು ಸೂತ್ರಭಾಷ್ಯದಲ್ಲಿ ಕ್ರಮವಾಗಿ “ಓಂ ಅಥಾತೋ ಬ್ರಹ್ಮಜಿಜ್ಞಾಸಾ, ಜನ್ಮಾದಸ್ಯ ಯತಃ, ಶಾಸ್ತ್ರಯೋನಿಶ್ವಾತ್, ತತ್ತು ಸಮನ್ವಯಾತ್, ಈಕ್ಷತೇರ್ನಾಶಬ್ದಂ ಓಂ” ಎಂಬ ಪಂಚಾಧಿಕರಣಗಳಲ್ಲಿ ಪರಬ್ರಹ್ಮ ಲಕ್ಷಣ ಮುಂತಾದ್ದನ್ನು ಅಪ್ಪಣೆಕೊಡಿಸಿದ್ದಾರೆ” - ಎಂದು ಗುರುರಾಜರು ಹೇಳುತ್ತಿರಲು ಆ ವಿಷಯದಲ್ಲಿ ಓರ್ವ ಪಂಡಿತನು ಹೀಗೆ ಶಂಕಿಸಿದನು.
ಪಂಡಿತ : “ಯಾಚಾನಾಭ್ಯುದಿತು' ಇತ್ಯಾದಿ ಪ್ರಮಾಣಗಳಿಂದ ನಿತ್ಯವಾದ ವೇದಗಳಿಗೆ ಗೋಚರನಾದ ಪರಬ್ರಹ್ಮನ ವಿಚಾರವನ್ನು ವಾಗೀಂದ್ರಿಯದಿಂದ ಸಂಸ ತೇತರಶಬ್ದಗಳ ಉಚ್ಚಾರಣೆಯ ಮೂಲಕ ಹೇಳುವುದಕ್ಕೆ ಸರ್ವಥಾಬರುವುದಿಲ್ಲ, ಇದರಿಂದ ಶಾಸ್ತ್ರಕ್ಕೆ ವಿಷಯವಿದೆ ಎಂಬ ಹೇಳಿಕೆಯೂ ಯುಕ್ತವಲ್ಲ; ಏಕೆಂದರೆ- ವಾಗೀಂದ್ರಿಯದಿಂದ ಉಚ್ಚರಿಸುವ ನಾಮಧೇಯವು ಜಡವೆನಿಸುವುದು. ಆದುದರಿಂದ ಬ್ರಹ್ಮನನ್ನು ಪ್ರತಿಪಾದಿಸುತ್ತಿರುವಂತೆ ತೋರುವ ಶಬ್ದಗಳು ಜಡವಾದುದರಿಂದ ಮಿಥ್ಯಾ ಎನಿಸುತ್ತವೆ. ವಸ್ತುತಃ ಆ ಶಬ್ದಗಳು ಬ್ರಹ್ಮಪ್ರತಿಪಾದಕವಾಗಲಾರವು. ವೇದೇತರ ಶಬ್ದಗಳಿಂದ ಪ್ರತಿಪಾದ್ಯವಲ್ಲವಾದ್ದರಿಂದ ನಿಮ್ಮ ಅಭಿಪ್ರಾಯವುಪ್ರಯೋಜನ ರಹಿತವಾದದ್ದು. ಇನ್ನು ಬ್ರಹ್ಮನ ಹೆಸರಿನಿಂದ ನಿಮ್ಮ ಅಭಿಪ್ರಾಯವು ಪ್ರಯೋಜನ ರಹಿತವಾದದ್ದು. ಇನ್ನು ಬ್ರಹ್ಮನ ಹೆಸರಿನಿಂದ ತೋರುತ್ತಿರುವ ಶಬ್ದಗಳು ಸಹ ಬ್ರಹ್ಮಪ್ರತಿಪಾದಕವಾಗಲಾರವು. ಆದುದರಿಂದ ಆದಿಯಲ್ಲಿ ಬ್ರಹ್ಮ ಸದ್ಗುಣಂ ಅಂದರೆ ಪರಬ್ರಹ್ಮನು ಅನಂತಕಲ್ಯಾಣ ಗುಣಪೂರ್ಣನು” ಎಂದು ಮುಂತಾಗಿ ಸಮರ್ಥಿಸಿದ ನಿಮ್ಮ ಸಿದ್ಧಾಂತವು ಪ್ರಯೋಜನರಹಿತವಾದದ್ದು ! ಸ್ವಾಮಿ, ಶರೀರದೊಳಗಿನ ಆತ್ಮನು ಎರಡು ಪ್ರಕಾರದಿಂದ ಸಿದ್ಧವಾಗುತ್ತಾನೆ. ಶರೀರದ ಅವಯವಗಳು, ಚಲಿಸುವುದು ಮುಂತಾದ ಕರಣಗಳು ಲಿಂಗಗಳೆನಿಸುವವು. ಇಂಥ ಶರೀರ ಚೇಷ್ಟ ಕಾದಿ ಬಹುಲಿಂಗಗಳಿಂದ ಆತ್ಮ ಸಿದ್ಧಿಸುವುದು ಎರಡನೆಯ ಪ್ರಕಾರ 'ಅಹಂ' ಎಂಬ ಬುದ್ಧಿಯಿಂದ ಗೋಚರಿಸಿ ಸಿದ್ಧಿಸುವುದು ಎರಡನೆಯ ಪ್ರಕಾರ. ಹೀಗೆ ಪ್ರಕಾರ ದ್ದಂದದಿಂದ ಸಿದ್ದಿಸಿದ ಆತ್ಮನಿಂದ ಭಿನ್ನವಾಗಿ ಮತ್ತೊಬ್ಬ ಪರಮಾತ್ಮನು ಇದ್ದಾನೆ ಎಂಬ ವಿಷಯಕ್ಕೆ ಯಾವ ಪ್ರಮಾಣವೂ ಇಲ್ಲ! ಆತ್ಮನು “ಅಹಂಧೀ' ಪ್ರತ್ಯಕ್ಷದಿಂದ ಸಿದ್ಧನಾಗಿರುವುದರಿಂದಲೇ ಎಂಬುದು ಇದಕ್ಕೆ ಕಾರಣ. ಹೀಗೆ ಶರೀರ ಚೇಷ್ಟಕಾದಿ ಹೇತುಗಳಿಂದ ಜೀವಭಿನ್ನವಾದ ಅನ್ಯನೊಬ್ಬ ಪರಮಾತ್ಮನು ಪ್ರಮಾಣದಿಂದ ಸಿದ್ಧಿಸುವುದಿಲ್ಲ ಎಂಬ ಅಂಶವೂ ಸಹ ತತ್ವಜ್ಞಾನವಾಗುವುದಿಲ್ಲ. ಅದೂ ಅಲ್ಲದೆ, ಈ ಪರಬ್ರಹ್ಮಜ್ಞಾನದಿಂದ ಫಲವೇನು ? ಯಾವ ಫಲವೂ ಇಲ್ಲ. ಸ್ವರ್ಗಾದಿ ಫಲವಾಗಬಹುದು ಎಂದರೆ “ಜ್ಯೋತಿಷ್ಟೋಮೇನ ಸ್ವರ್ಗಕಾಮೋ ಯಜೇತ” ಜ್ಯೋತಿಷ್ಟೋಮ್ ಮೊದಲಾದ ಯಾಗಕಾರ್ಯಾಚರಣೆಯಿಂದಲೇ ಸ್ವರ್ಗಾದಿ ಫಲಗಳು ಸಿದ್ಧಿಸುವುದು. ಇನ್ನು ಬ್ರಹ್ಮಜ್ಞಾನಿಗಳಿಗಾದರೋ ಈಗಲೇ ಮುಕ್ತಿಯಿಲ್ಲ. ಯಾವ ದೇಶದಲ್ಲಾಗಲೀ, ಯಾವ ಕಾಲದಲ್ಲಾಗಲೀ ಅವರಿಗೆ ಮುಕ್ತಿಯಾದದ್ದು ಕಂಡು ಬಂದಿಲ್ಲ ! ಆದುದರಿಂದ ಬ್ರಹ್ಮಜ್ಞಾನಕ್ಕೆ ಫಲವಿಲ್ಲವೆಂದಾಯಿತು.
ಹೀಗೆ ಆ ಪಂಡಿತನು ತನ್ನ ಆಶಂಕೆಯನ್ನು ಪ್ರತಿಪಾದಿಸುತ್ತಿರುವಾಗ ಇನ್ನೊಬ್ಬ ವಾದಿಯು ಅವನನ್ನು ಹೀಗೆ ಆಕ್ಷೇಪಿಸಿದನು. “ಅಯ್ಯಾ ಶಾಸ್ತ್ರಕ್ಕೆ ವಿಷಯ - ಪ್ರಯೋಜನಗಳಿಲ್ಲವೆಂಬ ನಿನ್ನ ವಾದವು ಸಮಂಜಸವಲ್ಲ, ಮಾನಸ ಪ್ರತ್ಯಕ್ಷಸಿದ್ದನಾದ ನಿರ್ಗುಣ ಬ್ರಹ್ಮನು ಶಾಸ್ತ್ರಕ್ಕೆ ವಿಷಯ. ಶುದ್ಧ ಬ್ರಹ್ಮಜ್ಞಾನಕ್ಕೆ ಬಂಧರೂಪಸಂಸಾರ ನಿವೃತ್ತಿಯು ಫಲ, ಇದು ಫಲವಲ್ಲವೆನ್ನುವ ಪಕ್ಷಕ್ಕೆ ಸಂಸಾರ ನಿವೃತ್ತಿಯು ಫಲ, ಇದು ಫಲವಲ್ಲವೆನ್ನುವ ಪಕ್ಷಕ್ಕೆ ಸಂಸಾರ ನಿವೃತ್ತಿಯ ಹೊರತು ಯಾವ ಫಲವಿದ್ದೀತು ? ಎಂಬುದನ್ನು ನೀನೇ ಹೇಳು ! ಸಗುಣ ಬ್ರಹ್ಮನನ್ನು ಮಂದರು ಉಪಾಸಿಸತಕ್ಕದ್ದು. ಅದನ್ನು ಕೇಳಿ ಮತ್ತೊಬ್ಬ ವಾದಿಯು ಅವನನ್ನು ಖಂಡಿಸಿ ಹೀಗೆ ಹೇಳಿದನು. “ಮಾನಸ ಪ್ರತ್ಯಕ್ಷಗೋಚರನಾದ ಬ್ರಹ್ಮನು ಶುದ್ಧಬ್ರಹ್ಮನೆಂದು ನೀನು ಹೇಳಿದ್ದು ಸರಿಯಲ್ಲ, ಅದೆಂತು ಸರಿಯಲ್ಲವೆಂಬುದನ್ನೀಗ ವಿಮರ್ಶಿಸುತ್ತೇವೆ. “ಏಕಮೇsವಾದ್ವಿತೀಯಂ ಬ್ರಹ್ಮ” ಎಂಬ ಶ್ರುತಿಯ ಪ್ರಕಾರವಾಗಿ ಪರಬ್ರಹ್ಮನು ಅದ್ವಿತೀಯನೂ, ಏಕನೂ (ಒಬ್ಬನೇ ಒಬ್ಬನು) ಆಗಿದ್ದಾನೆ ಎಂದರ್ಥ. ಅದ್ವಿತೀಯ ಎಂದರೆ ಪರಬ್ರಹ್ಮನಲ್ಲಿ ಜಡಜೀವ ಮುಂತಾದ ಧರ್ಮಗಳು ಇಲ್ಲ. ಏಕತಾ ಎಂದರೆ ಏಕತ್ವ ಎಂಬ ಧರ್ಮವೂ ಸಹ ಪರಬ್ರಹ್ಮನಿಗೆ ಅಭಿನ್ನವಾಗಿದೆ ಎನ್ನುವುದಾದರೆ ಅಂಥ ಬ್ರಹ್ಮನಲ್ಲಿ ಧರ್ಮಧರ್ಮಿಭಾವವೇ ಇಲ್ಲವೆಂದದಂತಾಯಿತು. ಆಗ ಅಂತಹ ಬ್ರಹ್ಮ ಶೂನ್ಯ ಎಂದು ಸಿದ್ಧವಾಗುತ್ತದೆ. ಈ ವಿಷಯದಲ್ಲಿ ಸ್ವಲ್ಪವೂ ಸಂದೇಹವಿಲ್ಲ. ಮತ್ತು ಅನ್ಯವಾದ ಈ ಜಗತ್ತು ಬ್ರಹ್ಮನಿಂದ ಭಿನ್ನವಾದದ್ದು ಎಂಬುದು ಕೂಡ ಯುಕ್ತವಾಗುವುದಿಲ್ಲ, ಏಕೆಂದರೆ ಈ ಬ್ರಹ್ಮಭಿನ್ನವಾದ ಜಗತ್ತು ಸತ್ಯವೇ ಮಿಥೆಯೇ ? ಎಂದು ವಿಕಲ್ಪ ಮಾಡುವುದಕ್ಕೂ ಸಾಧ್ಯವಿಲ್ಲ. ಹಾಗಾದರೆ ಜಗತ್ತಿನ ಸ್ವರೂಪದಲ್ಲಿ ಬ್ರಹ್ಮನು ತೋರುತ್ತಿದ್ದಾನೆ ಎನ್ನುವುದೂ ಸಾಧ್ಯವಿಲ್ಲ. ಏಕೆಂದರೆ ಬ್ರಹ್ಮ ಸ್ವರೂಪವಾದ ಜಗತ್ತಿನಲ್ಲಿ ನಿನಗೆ ಭ್ರಾಂತಿ ಇರುವುದು ಯುಕ್ತವಲ್ಲ, ಪರಬ್ರಹ್ಮನಿಗೆ ಭ್ರಾಂತಿಯಿಲ್ಲವಷ್ಟೇ ? ಆದುದರಿಂದ ಮಾನಸಪ್ರತ್ಯಕ್ಷಗೋಚರನಾದ ಬ್ರಹ್ಮನು ಶುದ್ಧಬ್ರಹ್ಮನೆಂಬ ನಿನ್ನ ಹೇಳಿಕೆಯು ಸರಿಯಲ್ಲ” - ಎಂದು ಆತನು ಸಮರ್ಥಿಸಿದನು.
ಹೀಗೆ ವಾದಿ-ಪ್ರತಿವಾದಿಗಳ ಪ್ರಶೋತ್ತರಗಳಲ್ಲಿನ ಭ್ರಾಂತಿಯನ್ನು ಪರಿಹರಿಸಬೇಕೆಂಬ ಕುತೂಹಲದಿಂದ ಶ್ರೀಗುರುರಾಜರು ಅವರ ಮೇಲಿನ ದಯದಿಂದ ನಗು ಮುಖದಿಂದ ಹೀಗೆ ಅಪ್ಪಣೆ ಕೊಡಿಸಿದರು -
ಶ್ರೀಗಳವರು : ಅಹಂಧೀ ಪ್ರತ್ಯಕ್ಷದಿಂದ ಸಿದ್ಧನಾದ ಜೀವಾತ್ಮನಿಗಿಂತಲೂ ಭಿನ್ನನೂ, ವಿಷ್ಣುನಾಮಕನೂ, ಗುಣಪೂರ್ಣನೂ, ಅದ್ಭುತನೂ ಆದ ಪರಬ್ರಹ್ಮವೆಂಬ ವಸ್ತುವು ಸಿದ್ಧವಾಗಿದೆ. ಪರಬ್ರಹ್ಮ ವಿಚಾರವಿಷಯದಲ್ಲಿ ಪರಮಾತ್ಮ ಜೀವಾತ್ಮರ ಭೇದವನ್ನು ತಿಳಿಸುವ ಬ್ರಹ್ಮ ಎಂಬ ಅರ್ಥಪೂರ್ಣವಾದ ಪದವನ್ನು ವೇದಪುರುಷನು ಪ್ರಯೋಗಿಸಿದ್ದಾನೆ, ಸೂತ್ರಕಾರರಾದ ಶ್ರೀಬಾದರಾಯಣರು “ಸ ವಿಷ್ಣು ರಾಹ ಹಿ, ತಂ ಬ್ರಹ್ಮತ್ಯಾಚಕ್ಷತೆ” ಎಂಬ ದೇವೀಮೀಮಾಂಸಾ ಸೂತ್ರದಲ್ಲಿ ಉಕ್ತನಾದ ವಿಷ್ಣುವನ್ನು ಬ್ರಹ್ಮನೆಂದು ಹೇಳಿದ್ದಾರೆ. “ಅಥಾತೋ ಬ್ರಹ್ಮಜಿಜ್ಞಾಸಾ” ಎಂಬ ಬ್ರಹ್ಮಜಿಜ್ಞಾಸೆಯ ಮೊದಲ ಸೂತ್ರದಲ್ಲಿ ಗುಣಪೂರ್ಣನಾದ್ದರಿಂದ ಬ್ರಹ್ಮಶಬ್ದವಾಚ್ಯವೇ ವಿಷ್ಣುವೆಂದು ಬ್ರಹ್ಮವಿಷ್ಣು ಶಬ್ದನಿರ್ವಚನದಿಂದ ಸಿದ್ಧಪಡಿಸಿದ್ದಾರೆ. ಬ್ರಹ್ಮಶಬ್ದಕ್ಕೆ ಅರ್ಥದಲ್ಲಿ ವೈಶಾಲ್ಯತೆ ಇದೆ. “ಬೃಹಂತೋ ಹಸ್ಮಿನ್ ಗುಣಾಃ” ಎಂಬ ಧಾತು, ಪ್ರಕೃತಿ, ಪ್ರತ್ಯಯ, ವುತ್ಪತ್ತಿಯಿಂದ ಗುಣಪೂರ್ಣನು ಪರಬ್ರಹ್ಮನೆಂತಲೂ ಜೀವನು ಗುಣಪೂರ್ಣನಲ್ಲವೆಂದೂ ಸಿದ್ಧಿಸುತ್ತದೆ. ಇಂತಹ ಜೀವಭಿನ್ನವಾದ ಗುಣಪೂರ್ಣ ಬ್ರಹ್ಮಜ್ಞಾನದಿಂದ ಮುಕ್ತಿಯು ಸಿದ್ಧಿಸುತ್ತದೆ. ಅದಕ್ಕೆ ಮುಕ್ತಿಯೇ ಫಲ, ಮುಕ್ತಿಯ ಫಲವಿರುವುದರಿಂದ ಇಂತಹ ಬ್ರಹ್ಮ ಪ್ರತಿಪಾದಕವಾದ ವೇದಾಂತಶಾಸ್ತ್ರವನ್ನು ಉಪಕ್ರಮಮಾಡಲು ವಿಷಯ, ಪ್ರಯೋಜನ, ಸಂಬಂಧ, ಅಧಿಕಾರಿಗಳೆಂಬ ಅನುಬಂಧಚತುಷ್ಟಯವು ಸಿದ್ಧಿಸಿದೆ. ಆದುದರಿಂದ ಈ ಬ್ರಹ್ಮಮೀಮಾಂಸಶಾಸ್ತ್ರಕ್ಕೆ ಪರಬ್ರಹ್ಮವಿಷಯ, ಶ್ರೇಷ್ಠಗುರುಗಳ ಉಪದೇಶದಿಂದ ಉಪಾಸಕನು ಪರಬ್ರಹ್ಮನ ಶ್ರವಣ, ಮನನ, ನಿದಿಧ್ಯಾಸನ ಮಾಡುವುದರಿಂದ ಬ್ರಹ್ಮಜ್ಞಾನ ಲಭಿಸಿ, ತನ್ಮೂಲಕ ಪ್ರಸಾದಸಿದ್ದಿಸಿ ಜೀವನ ಸ್ವರೂಪಾನಂಧಾವಿರ್ಭಾವ ರೂಪವಾದ ಮೋಕ್ಷವು ದೊರಕುತ್ತದೆ. ಮುಕ್ತಿಯೇ ಇದಕ್ಕೆ ಪ್ರಯೋಜನ. ಮುಮುಕ್ಷು ಜೀವರು ಅಧಿಕಾರಿಗಳು, ಪರಬ್ರಹ್ಮನಿಗೂ ಶಾಸ್ತ್ರಕ್ಕೂ ಪ್ರತಿವಾದ, ಪ್ರತಿಪಾದಕ ಸಂಬಂಧವಿದೆ. ಹೀಗೆ ಅನುಬಂಧ ಚತುಷ್ಟಯಸಹಿತವಾದುದರಿಂದ ಬ್ರಹ್ಮ ಮೀಮಾಂಸಾಶಾಸ್ತ್ರವು ಆರಂಭಣೀಯವೆಂಬುದು ಸಿದ್ಧವಾಯಿತು ! ಶ್ರೀಪಾದಂಗಳವರ ಉಪದೇಶದಿಂದ ಸರ್ವರೂ ಆನಂದಭರಿತರಾದರು.
ಯತಿನಾಯಕರು ಶಿಷ್ಯಸಮೂಹಕ್ಕೆ ಉಪನಿಷದ್ದಚಾರಗಳನ್ನು ಪ್ರವಚನಮಾಡಿಸಿ ಮಾಧ್ಯಾಹ್ನಕಾದಿ ಸತ್ಕರ್ಮಾಚರಣೆಗಾಗಿ ಭದ್ರಾಸನದಿಂದ ಮೇಲೆದ್ದರು. ಸಂಪೂರ್ಣ ಕೀರ್ತಿಮಂಡಿತರಾದ, ದಂಡಧಾರಿಗಳಾದ ಪಂಡಿತೋತ್ತಮ ಯತಿಪುಂಡರೀಕರು ಶ್ರೀಮಠದ ಆಲಯದಲ್ಲಿ ವಿರಾಜಿಸುವ ಪುಷ್ಕರಣಿಯಲ್ಲಿ ವಿಧಿಪೂರ್ವಕ ಸ್ನಾನಮಾಡಿ ಕಾಷಾಯ ವಸ್ತ್ರಗಳನ್ನು ಧರಿಸಿ, ವಿದ್ವಜ್ಜನವಂದಿತ ಪಾದಾರವಿಂದರಾಗಿ ಶ್ರೀಮೂಲರಘುಪತಿವೇದವ್ಯಾಸದೇವರನ್ನು ಪೂಜಿಸಲು ಪೂಜಾಗೃಹಕ್ಕೆ ದಯಮಾಡಿಸಿ ನಾಮಧಾರಣ- ಜಪತಪಾದನುಷ್ಠಾನಗಳನ್ನೆಸಗಿದ ಮೇಲೆ ದೇವರ ಎಡಭಾಗದಲ್ಲಿ ಕುಳಿತು ಶ್ರೀಮದಾಚಾರ್ಯ ಪರಂಪರಾಗತ ಮಹಾಸಂಸ್ಥಾನ ಸಂಪ್ರದಾಯದಂತೆ ಘಂಟಾನಾದಪೂರ್ವಕವಾಗಿ ದೇವರ ಪೂಜೆಯನ್ನು ಪ್ರಾರಂಭಿಸಿದರು.
ಶ್ರೀಗುರುವರರು ಮೊದಲು ಜಲಪೂರ್ಣಕುಂಭವನ್ನು ಗಂಧಾಕ್ಷತೆ - ಕಮಲಾದಿಪುಷ್ಪಗಳು, ತುಳಸೀದಳಗಳಿಂದ ಪೂಜಿಸಿ, ಕಳಶಪೂಜೆಮಾಡಿ, ಶಂಖಪೂಜೆಯಾದಮೇಲೆ ಪೀಠಪೂಜೆ, ಭಗವದಾವಾಹನ, ಆವರಣ ಪೂಜಾದಿಗಳನ್ನು ನೆರವೇರಿಸಿದರು. ಆನಂತರ ಷೋಡಶೋಪಚಾರಗಳಿಂದ ಶ್ರೀಮೂಲರಾಮನನ್ನು ಅರ್ಚಿಸಿ, ಪಂಚಭಕ್ಷಪರಮಾನ್ನ, ಫಲಗಳು, ತಾಂಬೂಲಾದಿಗಳನ್ನು ನಿವೇದಿಸಿ ಮಹಾಮಂಗಳಾರತಿಮಾಡಿ ಮಂತ್ರಪುಷ್ಪಗಳನ್ನು ಸಮರ್ಪಿಸಿದರು. ಶಂಖಭ್ರಮಣವಾದಮೇಲೆ ಸಂಪ್ರದಾಯದಂತೆ ರಮಾ ನೈವೇದ್ಯ, ವಾಯುದೇವಪೂಜಾ, ಗುರುಪರಂಪರಾಪೂಜಾದಿಗಳನ್ನು ನೆರವೇರಿಸಿ ಹಸ್ತೋದಕವನ್ನು ಸಮರ್ಪಿಸಿದರು. ಆನಂತರ ಶ್ರೀದೇವರನ್ನು ಭುಜಂಗಿಸಲು ತಲೆ ಕಟ್ಟು ಬಿಚ್ಚಿ, ಮತ್ತೆ ಬಿಂಬಮೂರ್ತಿಯನ್ನು ಹೃದಯದಲ್ಲಿಧರಿಸಿ ಶ್ರೀಮೂಲರಾಮ ದಿಗ್ವಿಜಯರಾಮ, ಜಯರಾಮಾದಿ ಮಹಾಸಂಸ್ಥಾನ ಪ್ರತಿಮೆಗಳನ್ನು ಸರ್ವರಿಗೂ ದರ್ಶನಮಾಡಿಸಿದರು. ದೇವರ ದರ್ಶನದಿಂದ ಸಮಸ್ತ ಆಸ್ತಿಕರೂ ಮುದಿಸಿದರು. ಘಂಟಾನಾದಪೂರ್ವಕ ಮೇಲೆದ್ದು ಶ್ರೀಯವರು ದುಡಕಮಂಡಲು ಹಿಡಿದು ಸ್ತೋತ್ರಪಾರಾಯಣ ಮಾಡುತ್ತಾ ದೇವರಿಗೆ ಪ್ರದಕ್ಷಣೆ - ನಮಸ್ಕಾರಗಳನ್ನು ಸಮರ್ಪಿಸಿ ದಂಡಪೂಜಾ, ದಂಡೋದಕವಾದ ಮೇಲೆ, ತೀರ್ಥವನ್ನು ಸ್ವೀಕರಿಸಿ ಕಿವಿಗಳಲ್ಲಿ ತುಳಸೀಗುಚ್ಛಗಳನ್ನು ಧರಿಸಿ ಆಸನಾಸೀನರಾಗಿ ಸರ್ವರಿಗೂ ತೀರ್ಥ-ಪ್ರಸಾದಗಳನ್ನು ಕರುಣಿಸಿ ಪಂಡಿತಮಂಡಲಿ ಯುಕ್ತರಾಗಿ ಸಮ್ಮುಖದಲ್ಲಿ ಶ್ರೀಹರಿತತ್ವವಿಚಾರ ಮಾಡುತ್ತಾ ಭಿಕ್ಷಾ ಸ್ವೀಕಾರಮಾಡಿ, ನಂತರ ತೀರ್ಥಪ್ರಾಶನಮಾಡಿ ಸಭಾಂಗಣಕ್ಕೆ ಬಿಜಯ ಮಾಡಿದರು.
ಅಷ್ಟು ಹೊತ್ತಿಗೆ ಶ್ರೀಮಠದ ಪ್ರೌಢವಿದ್ಯಾರ್ಥಿಗಳನೇಕರು ಪಂಡಿತರು ಪಾಠಕ್ಕೆ ಸಿದ್ದರಾಗಿ ಶ್ರೀಯವರ ಮಾರ್ಗನಿರೀಕ್ಷೆ ಮಾಡುತ್ತಿದ್ದರು. ನಗೆಮೊಗದ ಜಗದ್ಗುರುಗಳು ಬಂದು ಆಸನಾಸೀನರಾದರು. ಸಕಲರೂ ಗುರುಗಳಿಗೆ ನಮಸ್ಕರಿಸಿ ಕುಳಿತರು. ದ್ವಾರಪಾಲಕನು ವ್ಯಾಸಪೀಠ ಮತ್ತು ಇತರ ಶಾಸ್ತ್ರಗ್ರಂಥಗಳನ್ನು ತಂದು ಮುಂದಿಟ್ಟು ನಮಸ್ಕರಿಸಿದನು. ಶ್ರೀಗುರುರಾಜರು ವ್ಯಾಕರಣ, ನ್ಯಾಯ, ಮೀಮಾಂಸಾದಿ ಶಾಸ್ತ್ರಗಳನ್ನು ಬಹುವಿದ್ದಷ್ಟೂರ್ಣವಾಗಿ ಶಿಷ್ಯಮಂಡಲಿಗೆ ಪ್ರವಚನಮಾಡಲಾರಂಭಿಸಿದರು. ಮಧ್ಯೆ ಮಧ್ಯೆ ಅನೇಕ ಪಂಡಿತರಿಗೆ ಬಂದ ಸಂದೇಹಗಳನ್ನು ಪರಿಹರಿಸುತ್ತಾ ಶ್ರೀಯವರು ಆಶ್ರುತ ಪೂರ್ವಾಶಾಬ್ದ ಬೋಧಗಳನ್ನು, ಜಟಿಲವಾದ ಭಾಗಗಳ ಸರಳ ನಿರೂಪಣಪೂರ್ವಕವಾಗಿ ಸರ್ವರಿಗೂ ಬುದ್ಧಿಸ್ಥವಾಗುವಂತೆ ಸುಲಭ ಶೈಲಿಯಲ್ಲಿ ನಿರರ್ಗಳ ವಾಗ್ವಿಲಾಸದಿಂದ ವಿವರಿಸಿ ಪಾಠಹೇಳಿದರು.
ಅದೇ ಸಮಯಕ್ಕೆ ಮಠದ ಪಾರುಪತ್ತೇದಾರರು ಬಂದು ಗುರುಗಳಿಗೊಂದಿಸಿ “ಜಯವಾಗಲಿ, ಪರಾಕ್, ಶ್ರೀಸನ್ನಿಧಿಯ ದರ್ಶನಾಕಾಂಕ್ಷಿಗಳಾಗಿ ದೇಶದೇಶಗಳಿಂದ ಬಂದಿರುವ ಪಂಡಿತರು, ಕವಿಗಳು, ಧರ್ಮಾಭಿಮಾನಿ ಶಿಷ್ಯ-ಭಕ್ತಜನರು, ಕುಂಭಕೋಣನಗರದ ನಾಗರಿಕರು ಮಹಾಸ್ವಾಮಿಯವರ ದರ್ಶನ ಪಡೆಯಲಾಶಿಸಿ, ತಮ್ಮ ಆಜ್ಞೆಗಾಗಿ ನಿರೀಕ್ಷಿಸುತ್ತಿದ್ದಾರೆ. ಅಪ್ಪಣೆಯಾಗಬೇಕು ಜೀಯಾ” ಎಂದು ವಿಜ್ಞಾಪಿಸಿದರು. ಶ್ರೀಯವರು ಮಂದಹಾಸಬೀರಿ ಸರ್ವರನ್ನೂ ಕರೆತರಲು ಅಣತಿ ನೀಡಿದರು. ಪಾರುಪತ್ತೇದಾರರು ಸಕಲರನ್ನೂ ಕರೆದುಕೊಂಡು ಬಂದು ಪರಿಚಯಮಾಡಿಸಿದರು. ಗುರುರಾಜರ ದರ್ಶನಮಾತ್ರದಿಂದ ಭಕ್ತಿಪುಳಕಿತಗಾತ್ರರಾಗಿ ಗೌರವಾದರಗಳಿಂದ ಶ್ರೀಯವರಿಗೆ ದೀರ್ಘದಂಡನಮಸ್ಕಾರಮಾಡಿ, ಅಪ್ಪಣೆ ಪಡೆದು ಕುಳಿತರು. ಶ್ರೀಯವರು ನಗುಮುಖದಿಂದ ಪ್ರತಿಯೊಬ್ಬರ ಕುಶಲಪ್ರಶ್ನೆ ಮಾಡಿದ ಮೇಲೆ ಯತಿರಾಜರು ಲೌಕಿಕವಿಚಾರಗಳಿಗಾಗಿ ಬಂದ ಧರ್ಮಾಭಿಮಾನಿಗಳೂ, ನಾಗರಿಕರೂ, ವೈದಿಕ-ಲೌಕಿಕ ಸುಜನರಿಗೆ ಅಲೌಕಿಕನಾದ ಭಗವಂತನ ಅಗಾಧ ಮಹಿಮೆಗಳನ್ನು ಉಪದೇಶಿಸುತ್ತಾ “ವೇದಶಾಸ್ತ್ರವಿಚಾರೇಣ ಪ್ರೀಣಯನ್ ಪುರುಷೋತ್ತಮಮ್” ಎಂಬಂತೆ ಲೌಕಿಕಕ್ಕಾಗಿ ಅನಿವಾರ್ಯವಾಗಿ ಮೀಸಲಾದ ಅತ್ಯಲ್ಪಕಾಲವನ್ನೂ ಆಧ್ಯಾತ್ಮಿಕವನ್ನಾಗಿಸಿ ಅಲೌಕಿಕ ತೇಜಸ್ಸಿನಿಂದ ಕಂಗೊಳಿಸುತ್ತಾ ಸರ್ವರನ್ನು ಸಂತೋಷಪಡಿಸುತ್ತಾ ಸತ್ಕಾಲಕ್ಷೇಪದಲ್ಲಿ ನಿರತರಾಗಿರುವಾಗ ಸಾಯಂಕಾಲವಾಯಿತು. ಗುರುರಾಜರು ಸಾಯಂದೀಪಾರಾಧನೆಗೆ ಮೇಲೆದ್ದು ಶ್ರೀಮಠದ ಅಂಗಳದಲ್ಲಿ ವಿರಾಜಿಸುವ ಪವಿತ್ರ ತಟಾಕದಲ್ಲಿ ಸ್ನಾನಮಾಡಿ ಕಾಷಾಯಾಂಬರದ್ವಯ, ಕೌಪೀನಧಾರಿಗಳಾಗಿ ದೇವಗೃಹಕ್ಕೆ ಬಂದು ಗಂಧಾಕ್ಷತೆಗಳನ್ನು ಧರಿಸಿ, ಸಾಯಂಕಾಲೀನ ಆಕರತರಾಗಿ, ಗಾಯತ್ರೀಯನ್ನು ಜಪಿಸಿ ಪ್ರಣವಾದಿಮಂತ್ರ ಜಪಮಾಡಿ ದೇವತಾ ಸಾರ್ವಭೌಮನಾದ ಶ್ರೀಮೂಲರಘುಪತಿವೇದವ್ಯಾಸರಿಗೆ ಸಾಯಂದೀಪಾರಾಧನೆಯನ್ನು ನೆರವೇರಿಸಿ ಮಂಗಳಾರತಿಯನ್ನು ಬೆಳಗಿ ಮಂತ್ರಪುಷ್ಪವನ್ನು ಸಮರ್ಪಿಸಿ ದರನಿಮೀಲಿತಾರ್ಧನಯನರಾಗಿ ಶ್ರೀಮೂಲರಘುನಂದನನನ್ನು ಭಕ್ತಿಯಿಂದ ಸ್ತುತಿಸಹತ್ತಿದರು.
ವೇದಸಿದ್ಧಮಣುತೋSಪ್ರಣುಭಾವಂ |
ಮೋದದಾಯಿ ಮಹತೋಪಿ ಮಹತ್ವಮ್ ಬಿಭ್ರತಂ ಪ್ರಥಯಿತುಂ ಮನವೇ ತ್ವಾಂ |
ಮೀನತಾಂ ಶರಣಾಯಾಮಿ ಭವಂತಮ್ ವೇದವಿಪುತಿಕೃತಂ ವಿಧಿಜಾಡ್ಕಂ |
ಹಂತ ಹಂತುಮದಧಾ ಲಜನ್ಮ ಮೀನಭಾವನಭರೇಣ ತತೋ ಮೇ |
ವಿಸ್ತ್ರಣೀಹಿ ವಿಮಲಂ ಪ್ರತಿಬೋಧಮ್ ಆತ್ಮನೈವ ಕಮತೇನ ವಿತನ್ವನ್ |
ಮಂದರೇನ ಭವಾನರಣೀದ್ವೇ |
ಮಥ್ಯತೋಕೃತ ಹಲಾಹಲವನಿಮ್ |
ಹೋತುಮಿಂದ್ರರಿಪುವೃಂದಹವೀಂಪಿ ಆದಿಸೂಕರಧರೋದ್ಧರಣಂ ತೇ |
ಸಿಂಧುಬಂಧುಜಠರಾಚ್ಯುತಿಗೀತಮ್ |
ಮಾದೃಶಾಂ ಭವಪಯೋಧಿಗತಾನಾಂ |
ರಕ್ಷಣೇ ಪರಿಚಿಯಂ ತದಮಃ ಪೂರ್ಣಚಂದ್ರಗತಲಕ್ಷಣರೇಖಾ |
ಲಕ್ಷಿತಾ ಯದಿ ತಕಕಲಾಯಾಮ್ |
ಸಂತ್ರಿತೇಂದುಮಣೆದಂಷ್ಟ್ರಧರಂ ಸ್ಮಾತ್ |
ಸೊಪಮಾ ಭವತಿ ಸೂಕರರೂಪ ತಾವಕಂ ನರಹರೇSತಿವಿರುದ್ದಂ |
ವೇಷಧಾರಣಮಿದಂ ತನುತೇ ನಃ |
ಅತ್ಯಸಂಘಟಿತಕರ್ಮ ಚ ಕೃತ್ವಾ ಪಾಲಯೇ ಪ್ರಣತಮಿತ್ರುಪದೇಶಮ್ ದಾರಿತೋದರಹಿರಣ್ಯಕಶ |
ರಾಂತ್ರಮಾಲಕಲಿತಂ ತವ ರೂಪಮ್ |
ನಾರಸಿಂಹ! ಕಲಯೇ ನನುಭೂತಂ |
ಶಾರದಂ ಜಲಧರಂ ಸಹ ಶಂಪಮ್
ಜಾನತಾಂ ನಿಜಮನಃಪರಮಾಣ |
ಮಾತುಮೇವ ಬಲಿನಿಗ್ರಹದಂಭಾತ್ |
ವಾಮನಂ ಯದಭವತ್ತವ ರೂಪಂ |
ತತ್ಸುಖೇನ ಭಗವನ್ ! ಹೃದಿ ಕುರ್ಮ ಚಂದ್ರಮಾ ಇವ ಭುವೋ ವಿರಚನ್ನಕ್ಷತ್ರಯೋಗಮಪಿ ಯತ್ವಮಲಾಸೀಃ |
ತೇನ ಶಾತ್ರವಯಶೋಂಬುಜರಾಜೀ |
ಮುದ್ರಣಂ ತವ ಕೃತಿಂ ಬಹುಮ ತಾರಣೇ ದುರಿತನೀರನಿಧೇರ್ನಃ ಸೇತುಭಾವಮಚಿರೇಣ ಯಿಯಾಸೋ |
ಭಾಸತೇ ತವ ವಿಭೋ ಕರುಣಾಯಾಃ |
ಪೂರ್ವರಂಗ ಇವ ದಕ್ಷಿಣಸೇತುಃ
ಬಂಧನಾಯ ಕೃತಮಾತ್ಮಜನನ್ಯಾ |
ತಾದೃಶಂ ಚ ಗುಣಮಂಗ್ಯಕರೋರ್ಯತ್ |
ತೇನ ನಿರ್ಗುಣಮಾತಾನಿ ನಿರಸನ್ |
ದರ್ಶಯಸ್ಕಪಿ ನಿಜಾಂ ಗುಣವತ್ತಾಮ್
ಸರ್ವದೇವರಥಚೇಷ್ಟನಮಂಗೀ |
ಕುವರ್ತಸ್ತವ ಸದೈವ ಜಗತಮ್ |
ಅರ್ಜುನೈಕರಥಸಾರಥಿಭಾವೋ |
ವಿಸ್ಮಯಾಯ ವಿದುಷಾಂ ನ ಕಥಂಚಿತ್
ತ್ವಂ ಕುಚೇಲಮುನಿಮೀಶ ಕುಚೇಲಾ |
ದೃರ್ಪಣೇನ ಕೃತವಾನುಕುಚೇಲಮ್ |
ಸೋಭವತ್ತದಪಿ ಚಾರುಕುಚೇಲಾ |
ಲಂಕೃತಸ್ತವದಿದಮದ್ಭುತಮಾಸೀತ್
ಏವಮಾದಿ ವಿವಿಧೈರವತಾರೆ: |
ಪಾಲಿತಾಖಿಲಜಥ್ ಮಾಮಾಘಮ್ ||
ಸರಸ್ಯ ಕಮಲಾಸ್ಯ ನಮಸ್ಕಾಂ |
ಸ್ವೀಕುರುಷ್ಟ ರಘುವಂಶವತಂಸ
ಹೀಗೆ ಮತ್ತೆ ಕೂರ್ಮಾದ್ಯನೇಕ ಅವತಾರಗಳನ್ನೆತ್ತಿ ದುಷ್ಟಶಿಕ್ಷಣ, ಶಿಷ್ಟರಕ್ಷಣ ಮಾಡಿದ ಕಮಲವದನನಾದ, ರಘುಕುಲಾವತಂಸನಾದ ಶ್ರೀಮೂಲರಾಮಚಂದ್ರದೇವ ! ನನ್ನ ಪಾಪವನ್ನು ಸಮೂಲವಾಗಿ ನಾಶಪಡಿಸಿ ನನ್ನ ನಮಸ್ಕಾರಗಳನ್ನು ಸ್ವೀಕರಿಸು ಪ್ರಭು. ಇಂತು ವಿನಯಪೂರ್ವಕವಾಗಿ ಮೂಲರಾಮಚುದ್ರದೇವರನ್ನು ಭಕ್ತಿಯಿಂದ ಸ್ತುತಿಸುತ್ತಿದ್ದ ಶ್ರೀಗುರುಸಾರ್ವಭೌಮರು ಆನಂತರ ಕಣ್ಣೆರೆದರು. ಶ್ರೀಗುರುರಾಜರ ವದನಮಂಟಪದಲ್ಲಿ ಕಾವ್ಯ ಸರಸ್ವತಿ ಮೈಮರೆತು ನಾಟ್ಯವಾಡುತ್ತಿರುವಾಗ ಕಾವ್ಯಕಾಮಿನಿಯ ತುರುಬಿನಿಂದ ಕಳಚಿಬಿದ್ದ ಹದಿನಾಲ್ಕು ಕುಸುಮಗಳಂತಿರುವ ಶ್ರೀದಶಾವತಾರಿ ಮೂಲರಾಮಸ್ತವನರೂಪ ಕಾವ್ಯಕುಸುಮಗಳ ಸೌರಭವನ್ನು ಆಘ್ರಾಣಿಸಿ ಭಕ್ತಿತಿಶಯದಿಂದ ಆನಂದಾಶ್ರುವನ್ನು ಸುರಿಸುತ್ತಾ ರೋಮಾಂಚಿತರಾಗಿ ಇಹಲೋಕವ್ಯಾಪಾರವನ್ನೆ ಮರೆತು ಭಕ್ತಾನೀಕವು ಭಾವಸಾಮ್ರಾಜ್ಯದಲ್ಲಿ ವಿಹರಿಸಿತು.
ಆನಂತರ ಶ್ರೀಸ್ವಾಮಿಗಳವರು ಪೂಜಾಪೀಠದಿಂದ ಮೇಲೆದ್ದು ದೇವರಿಗೆ ಪ್ರದಕ್ಷಿಣೆ ನಮಸ್ಕಾರಗಳನ್ನು ನೆರವೇರಿಸಿ ಪ್ರಾರ್ಥಿಸುತ್ತಿರುವಾಗ ಶ್ರೀಮಠದ ಧರ್ಮಾಧಿಕಾರಿಗಳು ಸಭೆಗೆ ಚಿತ್ತೈಸಬೇಕೆಂದು ಗುರುವರರನ್ನು ಪ್ರಾರ್ಥಿಸಿದರು. ಕೃಪಾಪಾರಾವಾರರಾದ ಗುರುರಾಜರು ಸತ್ಪಥವನ್ನು (ಸತ್ಪಥ = ಸಜ್ಜನರು ಅನುಸರಿಸುವ ಮಾರ್ಗ ಮತ್ತು ದೇವತೆಗಳ ಮಾರ್ಗವಾದ ಆಕಾಶ) ಧವಳ(ಪ್ರಕಾಶಗೊಳಿಸುತ್ತಾ ಉದಯಿಸಿದ ಕೈರವಬಂಧುವಾದ ಚಂದ್ರನು ಉದಯಾಚಲವನ್ನು ಪ್ರವೇಶಿಸುವಂತೆ ವಿದ್ವತ್ಸಭೆಯನ್ನು ಪ್ರವೇಶಿಸಿದರು.
ಪರಮಹಂಸನಾಯಕರು ಸಭೆಯಲ್ಲಿರುವ ಉನ್ನತ ಚಂದ್ರ ಶಿಲಾ ನಿರ್ಮಿತವೇದಿಕೆಯ ಮೇಲೆ ಸುವರ್ಣ-ಮಣಿಮಯ ದಿಗ್ವಿಜಯ ವಿದ್ಯಾಸಿಂಹಾಸನದಲ್ಲಿ ಪದ್ಮಾಸನ ಮಂಡಿತರಾಗಿ ಕುಳಿತರು. ಸಿಂಹಾಸನಾಲಂಕೃತರಾದ ಗುರುವರರ ಶಿರೋಭಾಗದಲ್ಲಿ (ಮೇಲ್ಬಾಗದಲ್ಲಿ) ಸಾರ್ವಭೌಮತ್ವದ್ಯೋತಕವಾದ ಶ್ವೇತಛತ್ರವು ತಳತಳಿಸುತ್ತಿದೆ. ಎಡ-ಬಲ ಪಾರ್ಶ್ವಗಳಲ್ಲಿ ಪಂಡಿತ-ಶಿಷ್ಯರು ಬಂಗಾರದ ಹಿಡಿಕೆಯುಳ್ಳ ಶುಭ್ರವಾದ ಚಾಮರಗಳನ್ನು ಬೀಸುತ್ತಿದ್ದಾರೆ. ಸಭೆಯ ಉನ್ನತವಾದ ಗವಾಕ್ಷಗಳಿಂದ ಚಂದ್ರಿಕೆಯ ಬೆಳಕು ಸಿಂಹಾಸನದ ಮೇಲೆ ಬೀಳುತ್ತಿದೆ. ಆ ಭವ್ಯದೃಶ್ಯವನ್ನು ನೋಡಿದರೆ, ಆಕಾಶ ಗಂಗೆಯಲ್ಲಿ ವಿಹರಿಸುವ ಹಂಸಪಕ್ಷಿಗಳು ಗಂಗಾಪ್ರವಾಹದೊಡನೆ ಧರೆಗಿಳಿದು ಬಂದು ಉನ್ನತ ವಾತಾಯನಗಳಿಂದ ಒಳನುಗ್ಗಿ ಶ್ವೇತಛತ್ರ-ಚಾಮರಗಳ ರೂಪತಾಳಿ ಬಹುದೂರದಿಂದ ಬಂದ ಪ್ರಯಾಣಶ್ರಮದಿಂದ ಮೆಲ್ಲಮೆಲ್ಲನೆ ಚಲಿಸುತ್ತಿವೆಯೋ ಎಂಬಂತೆ ಕಾಣುತ್ತಿದೆ! ಮೌಕ್ತಿಕಮಣಿಯ ಸಿಂಹಾಸನದಲ್ಲಿ ಯೋಗೇಶ್ವರರಾದ ಶ್ರೀಗುರುದೇವರು ಮಂಡಿಸಿದ್ದಾರೆ. ಮುಕ್ತಾಮಣಿವಿಭೂಷಿತ ಸಿಂಹಾಸನವನ್ನು ನೋಡಿದರೆ ವೋಮಲಂಘನ ಗರ್ವದಿಂದ ಸ್ವರ್ಗಕ್ಕೆ ತೆರಳುತ್ತಿದ್ದ ನಕ್ಷತ್ರಗಳ ಮಾರ್ಗವು; ಆಕಾಶಮಾರ್ಗದಲ್ಲಿ ಗುಂಪುಗುಂಪಾಗಿ ಸ್ವರ್ಗಕ್ಕೆ ಹೋಗಲಾಗದೇ, ಉಪಾಯಗಾಣದೆ ಯೋಗಿಗಳಿಗೆ ಪ್ರಭುಗಳಾದ, ಸರ್ವಪ್ರತಿಬಂಧನಿವಾರಕರಾದ, ಅಪ್ರತಿಹತಗಮನವುಳ್ಳ ಶ್ರೀಗುರುರಾಜರ ಸಿಂಹಾಸನವನ್ನು ಸೇರಿ, ಆಶ್ರಯಪಡೆದು ಸುಲಭವಾಗಿ ವೋಮಲಂಘನಮಾಡಿ ಸ್ವರ್ಗವನ್ನು ಸೇರಬಹುದೆಂದು ಮೌಕ್ತಿಕಮಣಿ ರೂಪತಾಳಿ ನಕ್ಷತ್ರಗಳು ಸಿಂಹಾಸನದಲ್ಲಿ ಮಿನುಗುತ್ತಿರುವಂತೆ ಕಾಣುತ್ತಿದೆ. ಶ್ರೀಗುರುರಾಜರು ಚುದ್ರಕಾಂತ ಶಿಲಾನಿರ್ಮಿತ ವೇದಿಕೆಯ ಮೇಲೆ ಮಣಿಮಯ ಮೌಕ್ತಿಕ ಸಿಂಹಾಸನದಲ್ಲಿ ಪಾಟಲಾಂಬರಧಾರಿಗಳಾಗಿ (ಪಾಟಲಾಂಬರ ಕಾಷಾಯ, ಪೀತಾಂಬರ) ಕುಳಿತಿರುವ ಪರಿಯನ್ನು ನೋಡಿದರೆ - ಸಮುದ್ರ ಮಧ್ಯದಲ್ಲಿ (ಚಂದ್ರಕಾಂತ ಶಿಲಾವೇದಿಕೆ) ಶೇಷಪರ್ಯಂಕದಲ್ಲಿ (ಮಣಿಯಮಯ ನೌಕ್ತಿಕ ಸಿಂಹಾಸನ) ಪೀತಾಂಬರ(ಕಾಷಾಯಾಂಬರ)ಧಾರಿಯಾಗಿ ರಾರಾಜಿಸುವ ನಾರಾಯಣನಂತೆ ಶ್ರೀರಾಘವೇಂದ್ರಪರಮಾತ್ಮರು (ಶ್ರೀನಾರಾಯಣ ಮತ್ತು ಲಕ್ಷ್ಮೀದೇವಿಯರನ್ನು ಮನಸ್ಸಿನಲ್ಲಿ ಧರಿಸಿರುವುದರಿಂದ ರಾಘವೇಂದ್ರಪರಮಾತ್ಮರು !) ಶೋಭಿಸುವಂತೆ ಕಾಣಿಸುತ್ತಿದೆ.
ಆನಂತರ ಆ ದಿವ್ಯಸಭೆಯಲ್ಲಿ ವಿದ್ವಜ್ಜನರು ಶ್ರೀಪಾದಂಗಳವರನ್ನು ಇನ್ನೊಬ್ಬ ಇಂದ್ರನೆಂದು ವೇದಾಂತಗಳಿಂದ ಉಪಾಸಿಸಿದರು. ಪಂಡಿತರು ಶ್ರೀಗಳವರ ಮಹಿಮಾತಿಶಯಗಳನ್ನು ಬಣ್ಣಿಸಿ ಉಪನ್ಯಾಸ ಮಾಡಿದರು. ವೇಣು, ವೀಣಾ, ಮುಂತಾದ ವಾದ್ಯಗಳಲ್ಲಿ ನಿಪುಣರಾದ ಕಲೆಗಾರರು ಮತ್ತು ಸಂಗೀತ ವಿದ್ವಾಂಸರು, ಶ್ರೀಹರಿಯ ಮಹಿಮೆಗಳನ್ನು ಎತ್ತಿತೋರುವ ಅಪರೋಕ್ಷಜ್ಞಾನಿಗಳಿಂದ ರಚಿತವಾದ ಕೀರ್ತನೆಗಳನ್ನು ಸುಸ್ತರವಾಗಿ ಹಾಡಿ, ನುಡಿಸಿ, ಗುರುವರರನ್ನು ಸಂತೋಷಪಡಿಸಿದರು. ಅನೇಕ ಕವಿಗಳು, ವಿದ್ವಾಂಸರು ಪಾದಾರ್ಧ, ಬಿಂದು, ಮಾತ್ರಾ, ಕ್ರಿಯಾದಿ ಸಮಸ್ಯಾಪೂರಣಮಾಡಿ ಕವನಗಳಿಂದ ಯತಿರಾಜರ ಜ್ಞಾನ, ಭಕ್ತಿ, ವೈರಾಗ್ಯ, ತಪಸ್ಸು ಮತ್ತು ಔದಾರ್ಯಾದಿ ಸದ್ಗುಣಗಳನ್ನು ಸ್ತುತಿಸಿ ಅನುಗೃಹೀತರಾದರು.
ಈ ಕಾರ್ಯಕ್ರಮಗಳು ಮುಗಿದ ಮೇಲೆ ಮಾಲಿಕಾ ಮಂಗಳಾರತಿಯಾಯಿತು, ಶ್ರೀಗುರುರಾಜರು ಮಂತ್ರಾಕ್ಷತೆಯನ್ನು ಅಭಿಮಂತ್ರಿಸಿ, ಪಾವನವಾದ ಆ ಮಂತ್ರಾಕ್ಷತೆಯನ್ನು ಶಿರಸ್ಸಿನಲ್ಲಿ ಧರಿಸಿ, ಆನಂತರ ಲೌಕಿಕ, ವೈದಿಕ, ವಿದ್ವಜ್ಜನರ, ಸುಮಂಗಲಿಯರಿಗೆ ಅನುಗ್ರಹಪೂರ್ವಕವಾಗಿ ಫಲಮಂತ್ರಾಕ್ಷತೆಗಳನ್ನು ದಯಪಾಲಿಸಿ ಆಶೀರ್ವಾದರೂಪ ಮಂಗಳಕರದೃಷ್ಟಿಯಿಂದ ಎಲ್ಲರನ್ನೂ ಧನ್ಯರನ್ನಾಗಿಸಿದರು.
ಹೀಗೆ ಶ್ರೀಗಳವರ ದಿನಚರಿಯು ಭಗವತೇವಾ, ಪಾಠಪ್ರವಚನ, ತತ್ವ, ಧರ್ಮೋಪದೇಶ, ಶಿಷ್ಟಭಕ್ತಜನೋದ್ದಾರ, ವಿದ್ವತೋಷಣ ಸಂತೋಷಣಾದಿಗಳಿಂದ ಮಂಗಳಕರವಾಗಿ ನೆರವೇರುತ್ತಿತ್ತು. ಶ್ರೀಗುರುರಾಜರ ಈ ಒಂದು ದಿನದ ದಿನಚರಿಯನ್ನು ಭಕ್ತಿಯಿಂದ ಪಠಣಮಾಡಿದ ಸಜ್ಜನರು ಪಾಪರಹಿತರಾಗಿ ನಿಖಿಲ ವಾಂಛಿತಾರ್ಥ ಮಂಗಳಗಳನ್ನು ಪಡೆಯುವರು.