|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೯೪. ಮಾಂಗಲ್ಯ ಉಳಿಸಿ ಹರಸಿದರು!

ಶೀಘ್ರವಾಗಿ ಕುಂಭಕೋಣವನ್ನು ತಲುಪುವ ಉತ್ಸಾಹದಿಂದ ಮಿಂಚಿನಸಂಚಾರ ಕೈಗೊಂಡ ಗುರುರಾಜರು ಚೋಳನಾಡಿನ ರಾಮಪುರವೆಂಬ ಭೂಸುರಾಗ್ರಹಾರಕ್ಕೆ ದಿಗ್ವಿಜಯಮಾಡಿದರು. ಅಲ್ಲಿನ ಮಠೀಯಶಿಷ್ಯರು ಹಾಗೂ ಆಸ್ತಿಕರ ಪ್ರಾರ್ಥನೆಯಂತೆ ಶ್ರೀಯವರು ಎರಡು-ಮೂರುದಿನ ನಿಲ್ಲಲೇಬೇಕಾಗಿಬಂದಿತು. ಶ್ರೀಯವರ ಸೇವೆ ಮಾಡುವ ಪರಿಚಾರಕರಲ್ಲಿ ಗುರುವೆಂಕಟನೆಂಬ ಇಪ್ಪತ್ತೆಂಟು ವರ್ಷದ ತರುಣನು ನಾಲ್ಕಾರು ವರ್ಷಗಳಿಂದ ದ್ವಾರಪಾಲಕನಾಗಿ ಭಯಭಕ್ತಿಗಳಿಂದ ಸೇವಿಸುತ್ತಾ ಗುರುಗಳ ಅನುಗ್ರಹಕ್ಕೆ ಪಾತ್ರನಾಗಿದ್ದನು, ಅವನು ಶ್ರೀಪಾದಪುತ್ರರಾದ ಶ್ರೀಲಕ್ಷ್ಮೀನಾರಾಯಣಾಚಾರರಲ್ಲಿ ವೇದ-ವೇದಾಂತಶಾಸ್ತ್ರಗಳನ್ನು ಅಧ್ಯಯನಮಾಡುತ್ತಾ ವಿದ್ಯಾವಿನಯ ಸಂಪನ್ನನಾಗಿದ್ದುದರಿಂದ ಶ್ರೀಮಠದ ಎಲ್ಲಜನರ ಪ್ರೀತಿಗೆ ಪಾತ್ರನಾಗಿದ್ದನು. ದೈವಯೋಗದಿಂದ ಆ ಅಗ್ರಹಾರದ ಗ್ರಹಸ್ಥರೊಬ್ಬರ ಪುತ್ರಿ ಸೌ|| ಮಂಗಳಾ ಎಂಬ ಕನೈಯೊಡನೆ ಗುರುವೆಂಕಟನ ಲಗ್ನವಾಗಿದ್ದು ಈಗ ಆ ಕನೈಯು ವಯಸ್ಸಿಗೆ ಬಂದಿದ್ದಳು, ಗುರುಸನ್ನಿಧಿಯಲ್ಲಿಯೇ ತಮ್ಮ ಅಳಿಯನಿರುವುದನ್ನು ಕಂಡ ಗೃಹಸ್ಥರು ತಮ್ಮ ಮಗಳ ನಿಷೇಕವನ್ನು ನೆರವೇರಿಸಲು ಗುರುಗಳ ಅಪ್ಪಣೆ ಪಡೆದು, ಗುರುವೆಂಕಟನನ್ನು ಮಾವನ ಮನೆಗೆ ಕರೆದೊಯ್ದರು, ಮರುದಿನ ಗುರುಗಳು ಆ ಗೃಹಸ್ಥನ ಮನೆಗೆ ದಯಮಾಡಿಸಿ ಗುರುವೆಂಕಟ-ಮಂಗಳೆಯರಿಂದ ಪಾದಪೂಜೆ ಸ್ವೀಕರಿಸಿ “ದೀರ್ಘಾಯುಷ್ಮಾನ್ ಭವ, ದೀರ್ಘ ಸುಮಂಗಲೀ ಭವ, ಸುಪುತ್ರಾವಾಪ್ತಿರಸ್ತು” ಎಂದಾಶೀರ್ವದಿಸಿ ಫಲಮಂತ್ರಾಕ್ಷತೆ ಕರುಣಿಸಿ ಶ್ರೀಮಠಕ್ಕೆ ಬಂದರು. ಅಂದು ರಾತ್ರಿ ಹತ್ತು ಘಂಟೆಯ ಸಮಯ. ಗುರುಗಳು ಪಂಡಿತರೊಡನೆ ಲೋಕಾಭಿರಾಮವಾಗಿ ಮಾತನಾಡುತ್ತಿರುವಾಗ “ಗುರುಗಳೇ ಕಾಪಾಡಿ” ಎನ್ನುತ್ತಾ ಓರ್ವತರುಣಿಯು ಶ್ರೀಗಳವರಿಗೆ ಅಡ್ಡ ಬಿದ್ದಳು, ಅವಳು ಗುರುವೆಂಕಟನ ಮಡದಿ ಮಂಗಳಾ ಎಂದು ಗುರ್ತಿಸಿದ ಶ್ರೀಗಳು “ಕುಮಾರಿ, ಪತಿಯ ಬಳಿಯಿರಬೇಕಾದವಳು ಇಲ್ಲಿಗೇಕೆ ಬಂದೆಯಮ್ಮಾ? ನಿನ್ನ ಕಣ್ಣೀರಿಗೆ ಕಾರಣವೇನು?” ಎಂದು ಪ್ರಶ್ನಿಸಿದರು. ಅದೇ ವೇಳೆಗೆ ಮಂಗಳೆಯ ತಂದೆ-ತಾಯಿಯರೂ ಅಲ್ಲಿಗೆ ಬಂದರು. ಮಂಗಳೆಯು ಅಳುತ್ತಾ “ಗುರುವರ್ಯ ಇನ್ನೆಲ್ಲಿಯ ಪತಿ ? ನಾನು ಭಾಗ್ಯಹೀನಳು, ಇಂದು ಬೆಳಿಗ್ಗೆ ತಾವು ದೀರ್ಘಾಯುಷ್ಮಾನ್ ಭವ, ದೀರ್ಘಸುಮಂಗಲೀ ಭವ” ಎಂದು ಆಶೀರ್ವದಿಸಿದಿರಿ. ಅದೀಗ ಹುಸಿಯಾಗಲಿದೆ! ಸ್ವಾಮಿ, ನನಗೆ ಮಾಂಗಲ್ಯಭಿಕ್ಷೆ ನೀಡಿ ಕಾಪಾಡಿ!” ಎಂದು ದೀನಳಾಗಿ ನಮಸ್ಕರಿಸಿದಳು. 

ಅವಳ ಮಾತು ಕೇಳಿ ಗುರುರಾಜರಿಗೆ ಆಘಾತವಾದಂತಾಯಿತು, “ಶಾಂತಂ ಪಾಪಂ. ಮಗಳೇ, ನೀನು ಏನು ಹೇಳುತ್ತಿರುವೆ? ಸ್ಪಷ್ಟವಾಗಿ ತಿಳಿಸು” ಎಂದರು. ಆಗ ಮಂಗಳೆಯ ತಂದೆಯು ಮುಂದೆ ಬಂದು “ಸ್ವಾಮಿ, ಇಂದು ರಾತ್ರಿ ಆರತಿ ಮಾಡಿ ಮಗಳು, ಅಳಿಯನನ್ನು ಕೋಣೆಗೆ ಕಳಿಸಿದೆವು, ಅಳಿಯ ಕೊಠಡಿಯನ್ನು ಪ್ರವೇಶಿಸುವಾಗ ಆಯತಪ್ಪಿ ಬಾಗಿಲಿಗೆ ಎಡವಿಬಿದ್ದ, ಅಷ್ಟೆ. ಅವನ ತಲೆಗೆ ಭಾರಿ ಪೆಟ್ಟು ಬಿದ್ದು ತರಗಲೆಯಂತೆ ಸುತ್ತಿನೆಲದ ಮೇಲೆ ಬಿದ್ದ. ನಾವು ಗಾಬರಿಯಾಗಿ ತಲೆಗೆ ನೀರುತಟ್ಟಿ ಉಪಚರಿಸಿದೆವು. ಆದರೂ ಜ್ಞಾನಬರಲಿಲ್ಲ. ವೈದ್ಯರನ್ನು ಕರೆಸಿದೆವು. ಅವರು ಪರೀಕ್ಷಿಸಿ ಜ್ಞಾನಬರುವುದು ಕಷ್ಟ. ಈಗಾಗಲೇ ಮೃತನಾಗಿದ್ದಾನೆ ಅಥವಾ ಇನ್ನು ಒಂದು ಗಂಟೆಯೊಳಗೆ ಈತ ಮೃತನಾಗುತ್ತಾನೆ” ಎಂದು ಹೇಳಿದರು. ವೈದ್ಯರ ಮಾತು ಕೇಳಿದೊಡನೆಯೇ ಮಂಗಳೆಯು ಹುಚ್ಚಳಂತೆ ಓಡುತ್ತಾ ಇಲ್ಲಿಗೆ ಬಂದಳು. ನೀವೇ ನನ್ನ ಮಗಳ ಮಾಂಗಲ್ಯ ಉಳಿಸಿ ಕಾಪಾಡಬೇಕು” ಎಂದು ಕಣ್ಣೀರು ಸುರಿಸುತ್ತಾ ಪ್ರಾರ್ಥಿಸಿದರು. 

ಗುರುರಾಜರ ಹೃದಯ ಕರಗಿತು. “ಪರಮಮಂಗಳಮೂರ್ತಿ ಶ್ರೀಮೂಲರಾಮನಿರುವಲ್ಲಿ ಅಮಂಗಳಕ್ಕೆ ಅವಕಾಶವೇ ಇಲ್ಲ. ಶ್ರೀಹರಿವಾಯುಗಳು ನಮ್ಮ ಆಶೀರ್ವಚನವನ್ನು ಸತ್ಯಮಾಡಿಸುವರು ಚಿಂತಿಸಬೇಡಿ” ಎಂದು ಹೇಳಿ ಪದ್ಮಾಸನಸೀನರಾಗಿ ಬಲಕರದಿಂದ ಹೃದಯವನ್ನು ಸ್ಪರ್ಶಿಸಿ ಧ್ಯಾನಾಸಕ್ತರಾದರು. ಸ್ವಲ್ಪ ಸಮಯವಾದಮೇಲೆ ಗುರುಗಳು ಕಣ್ಣೆರದು ಮಗಳೇ, ನಮ್ಮ ಆಶೀರ್ವಾದ ಹುಸಿಯಾಗದಮ್ಮಾ ! ಇದೊಂದು ಅಪಮೃತ್ಯು ಬಂದೊದಗಿದೆ. ಅದೂ ಪೂರ್ವಾರ್ಜಿತ ಪಾಪದ ಫಲವಾಗಿ! ಗುರುವೆಂಕಟನು ಬದಕುತ್ತಾನೆ ಚಿಂತಿಸಬೇಡ” ಎಂದು ಹೇಳಿ ದಂಡಕಮಂಡಲುಧಾರಿಗಳಾಗಿ ಎಲ್ಲರೊಡನೆ ಆ ಗೃಹಸ್ಥನ ಮನೆಗೆ ತೆರಳಿದರು. 

ಅಲ್ಲಿ ಚಾಪೆಯ ಮೇಲೆ ಮಲಗಿರುವ ಗುರುವೆಂಕಟನ ಶರೀರವನ್ನು ಒಮ್ಮೆ ನಿರೀಕ್ಷಿಸಿ ಶ್ರೀಯವರು ಕಮಂಡಲೋದಕವನ್ನು ಅಭಿಮಂತ್ರಿಸಿ ಅವನ ಶರೀರಕ್ಕೆ ಪ್ರೋಕ್ಷಿಸಿ, ತಮ್ಮ ಅಮೃತಹಸ್ತದಿಂದ ಶಿರಸ್ಸಿನಿಂದ ಹೃದಯದವರೆಗೆ ಮೂರು ಬಾರಿ ಸ್ಪರ್ಶಿಸಿ, ಹೃದಯದ ಮೇಲೆ ಕರವಿರಿಸಿ ಮನದಲ್ಲಿಯೇ ಮಂತ್ರವನ್ನು ಪಠಿಸಲಾರಂಭಿಸಿದರು, ಒಂದು ಕ್ಷಣವಾಗಿರಬಹುದು. ನಿರ್ಜೀವವಾಗಿ ಬಿದ್ದಿದ್ದ ಗುರುವೆಂಕಟನ ಶರೀರ ಮೆಲ್ಲನೆ ಚಲಿಸಲಾರಂಭಿಸಿತು! ಉಸಿರಾಡಹತ್ತಿ, ಗುರುವೆಂಕಟ ಮೆಲ್ಲನೆ ಕಣ್ಣು ತೆರೆದು ಮೇಲೆದ್ದು ಕುಳಿತ ! ಶ್ರೀಯವರನ್ನು ಕಂಡು ದಿಗ್ಗನೆ ಮೇಲೆದ್ದು ಕರಜೋಡಿಸಿ “ಮಹಾಸ್ವಾಮಿ, ತಾವು ಇಲ್ಲೇಕೆ ಬಂದಿರುವಿರಿ? ನನಗೇನಾಗಿತ್ತು?” ಎಂದು ಪ್ರಶ್ನಿಸಿದ, ಶೋಕತಪ್ತವಾಗಿದ್ದ ಮನೆ ಆನಂದೋತ್ಸಾಹಗಳ ಬೀಡಾಯಿತು! ಎಲ್ಲರೂ ತಮ್ಮ ಕಣ್ಣೆದುರಿಗೆ ಜರುಗಿದ ಈ ಪವಾಡವನ್ನು ಕಂಡು ಭಕ್ತಿ-ಗೌರವಗಳಿಂದ ಶ್ರೀಯವರನ್ನು ಸ್ತುತಿಸಹತ್ತಿದರು. 

ಮಂಗಳಾದೇವಿ ಪರಮಾನಂದಭರಿತಳಾಗಿ ಗುರುಗಳ ಪಾದಗಳಿಗೆ ನಮಸ್ಕರಿಸಿ “ಸ್ವಾಮಿ, ನೀವು ಮಹಾಮಹಿಮರು ! ನಿಮ್ಮ ಆಶೀರ್ವಾದ ಫಲಿಸಿತು ! ನನಗೆ ಮಾಂಗಲ್ಯದಾನಮಾಡಿ ಕಾಪಾಡಿದಿರಿ” ಎಂದು ಆನಂದಿಸಿದಳು. ಶ್ರೀಗುರುರಾಜರು ನಸುನಕ್ಕು “ಮಗಳೇ! ಇವೆಲ್ಲ ಶ್ರೀಮೂಲರಾಮನ ಅನುಗ್ರಹವೆಂದು ತಿಳಿ! ನೀವು ಪತಿಪತ್ನಿಯರು ಆನಂದದಿಂದ ಬಹುಕಾಲ ಪುತ್ರ-ಪೌತ್ರರನ್ನು ಪಡೆದು ಬಾಳುವಿರಿ” ಎಂದು ಆಶೀರ್ವದಿಸಿ ಬಿಡಾರಕ್ಕೆ ಬಿಜಯಂಗೈದರು. ಆ ಅಗ್ರಹಾರದಲ್ಲೆಲ್ಲಾ ಗುರುಗಳು ತೋರಿದ ಮಹಿಮಾವಿಚಾರ ಹರಡಿ ಸರ್ವರೂ ಗುರುಸಾರ್ವಭೌಮರನ್ನು ಕೊಂಡಾಡಹತ್ತಿದರು. 

ಗುರುಗಳು ದಿಗ್ವಿಜಯವನ್ನು ಮುಗಿಸಿಕೊಂಡು ಚೋಳಮಂಡಲವನ್ನು ಪ್ರವೇಶಿಸಿದರು. ಶ್ರೀಯವರು ದೂರದಿಂದಲೇ ಕಾವೇರಿಯ ದರ್ಶನ ಮಾಡಿ ಆನಂದ ನಿರ್ಭರರಾದರು. ಗುರುರಾಜರು ತಂಜಾಪುರದ ರಾಜ್ಯದಲ್ಲಿ ಪ್ರವೇಶಮಾಡಿದ ಕೂಡಲೇ ಸಮಸ್ತ ಪ್ರಜರಿಗೆ ಪರಮಾನಂದವಾಯಿತು. ಹಿಂದೆ ಹನ್ನೆರಡು ವರ್ಷಗಳ ಕ್ಷಾಮದಿಂದ ಬಳಲುತ್ತಿದ್ದ ತಮ್ಮಲ್ಲಿ ಅನುಗ್ರಹಮಾಡಿ ಕ್ಷಾಮ ಪರಿಹಾರಮಾಡಿ ಮಹಿಮೆ ತೋರಿದ್ದ ಗುರುಗಳನ್ನು ಪ್ರಜರು ತಮ್ಮ ಭಾಗದ ದೇವರೆಂದೇ ತಿಳಿದಿದ್ದರು. ಗುರುಗಳು ಬರುವ ಕಡೆಗಳಲ್ಲೆಲ್ಲಾ ಚಪ್ಪರ, ತಳಿರುತೋರಣಗಳಿಂದ ಗ್ರಾಮಗಳನ್ನು ಸಿಂಗರಿಸಿ ಸಹಸ್ರಸಂಖ್ಯೆಯಲ್ಲಿ ಗುರುಗಳನ್ನು ಸ್ವಾಗತಿಸಿ, ಸೇವಿಸಿ ಜಯಜಯಕಾರ ಮಾಡುತ್ತಿದ್ದರು. ಸಾಮಾನ್ಯ ಬಡರೈತರಿಂದ ಹಿಡಿದು ಸುಸಂಸ ತ ಪಂಡಿತರು, ಶ್ರೀಮಂತರವರೆಗೆ ಸರ್ವರೂ ಗುರುಗಳನ್ನು ಸೇವಿಸುತ್ತಿದ್ದರು. 

ಶ್ರೀಪಾದಂಗಳವರು ಹೀಗೆ ದಿಗ್ವಿಜಯ ಸಂಚಾರ ಕೈಗೊಂಡು ಹೊರಟು ದಕ್ಷಿಣಭಾರತವನ್ನೆಲ್ಲಾ ಒಂದು ಪ್ರದಕ್ಷಿಣಾಕಾರವಾಗಿ ಸುತ್ತಿ ಎಲ್ಲ ತೀರ್ಥಕ್ಷೇತ್ರಗಳ ದರ್ಶನ, ಸೇವನ, ಪರವಾದಿದಿಗ್ವಿಜಯ, ಸಿದ್ಧಾಂತಸ್ಥಾಪನ. ಶಿಷ್ಯಭಕ್ತಜನೋದ್ಧಾರ, ಮಹಿಮಾ ಪ್ರದರ್ಶನ, ದೀನ-ದಲಿತ ಜನರ ಕಲ್ಯಾಣಮಾಡುತ್ತಾರಾಜಾಧಿರಾಜರುಗಳಿಂದ ಸಂಸೇವ್ಯರಾಗಿ ದೈತವಿಜಯಪತಾಕೆಯನ್ನು ಎಲ್ಲೆಡೆ ಮೆರೆಸುತ್ತಾ ಕುಂಭಕೋಣಕ್ಕೆ ದಯಮಾಡಿಸಿದರು. 

ಕುಂಭಕೋಣದ ಸಮಸ್ತ ನಾಗರೀಕರು ಸಕಲ ನಾಗರೀಕರು ಸಕಲದೇವಾಲಯಗಳ ಅಧಿಕಾರಿಗಳು, ಪೂರ್ಣಕುಂಭ, ಬಿರುದುಬಾವಲಿ, ವೇದಘೋಷ-ಮಂಗಳವಾದ್ಯಗಳೊಡನೆ ಗುರುರಾಜರನ್ನು ಸ್ವಾಗತಿಸಿದರು. 

ಕುಂಭಕೋಣದ ಎಲ್ಲ ಬೀದಿಗಳ ಎರಡು ಭಾಗಗಳಲ್ಲಿಯೂ ಸಹಸ್ರಾರು ಜನರು ನಿಂತು ಗುರುಗಳ ದರ್ಶನಮಾಡಿ ಹರ್ಷಧ್ವನಿಗೈಯುತ್ತಾ, ಪುಷ್ಪವೃಷ್ಟಿಮಾಡುತ್ತಿದ್ದರು. ಮನೆ-ಮನೆಗಳ ಮುಂದೆ ಸುಮಂಗಲಿಯರು ಆರತಿ ಮಾಡುತ್ತಿದ್ದರು.

ದೀರ್ಘಕಾಲದ ಕ್ಷೇತ್ರಯಾತ್ರೆಯಿಂದ ಕೃಶರಾಗಿ ಕಾಣುತ್ತಿದ್ದ ಶ್ರೀರಾಘವೇಂದ್ರಗುರುಸಾರ್ವಭೌಮರು ಶ್ರೀಮೂಲರಾಮದೇವರೊಡನೆ ಪೂರ್ವದ್ವಾರದಿಂದ, ಸಕಲ ಸಂಪತ್ತಮೃದ್ಧವಾದ 'ಶ್ರೀವಿದ್ಯಾಮಠ'ವನ್ನು ಪ್ರವೇಶಿಸಿದರು.427 ಆ ಮಂಗಳಕರ ದೃಶ್ಯ ಎಲ್ಲರಿಗೂ ಪರಮಾನಂದದಾಯಕವಾಗಿತ್ತು. ಆ ಭವ್ಯ ದೃಶ್ಯವು ಹಿಂದೆ ವನವಾಸದಿಂದ ಹಿಂದಿರುಗಿದ ಶ್ರೀರಾಮಚಂದ್ರನನ್ನು, ತಪಸ್ಸಿನಿಂದ ಕೃಶನಾಗಿದ್ದ ಭರತನು ಅಯೋಧ್ಯಾನಗರಕ್ಕೆ ಕರೆತಂದು ಪುರಪ್ರವೇಶ ಮಾಡಿಸಿದ ಪಾವನ ದೃಶ್ಯವನ್ನು ಸ್ಮರಣೆಗೆ ತರುತ್ತಿತ್ತು!