ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೯೩. ಭಗವಂತನ ಆದೇಶ
ಮರುದಿನ ಬೆಳಗಿನಝಾವಶ್ರೀಪಾದಂಗಳವರು ವೆಂಕಟನಾರಾಯಣಾಚಾರ ನಾರಾಯಣಾಚಾರ, ಲಕ್ಷ್ಮೀನಾರಾಯಣಾಚಾರಾದಿ ಮೂರು-ನಾಲ್ಕು ಜನ ಆತ್ಮೀಯ ಶಿಷ್ಯರೊಡನೆ ಸ್ವಾಮಿಪುಷ್ಕರಣಿಯಲ್ಲಿ ಸ್ನಾನಮಾಡಿ, ಶ್ರೀವರಾಹದೇವರ ಗುಡಿಯಲ್ಲಿ ಆತ್ಮೀಕ ಜಪ-ತಪಾದಿಗಳನ್ನು ನೆರವೇರಿಸಿದರು. ತರುವಾಯ ನಾರಾಯಣಾಚಾರರು ಶ್ರೀಮೂಲರಾಮರ ಪೆಟ್ಟಿಗೆಯನ್ನು ಶಿರದಲ್ಲಿ ಹೊತ್ತು ಮುಂದೆಹೊರಡಲು ಗುರುಗಳು ಶಿಷ್ಯರೊಡನೆ ಶ್ರೀದೇವರಗುಡಿಗೆ ಬಂದರು. ಅಲ್ಲಿ ದೇವಾಲಯದ ಅಧಿಕಾರಿಗಳು ಶ್ರೀದೇವರ ಗುಡಿಗೆ ಬಂದರು.ಅಲ್ಲಿ ದೇವಾಲಯದ ಅಧಿಕಾರಿಗಳು ಶ್ರೀದೇವರ ಮೂಲಾರ್ಚಕರು, ಸಹಾಯಕ ಅರ್ಚಕರೊಡನೆ ಗುರುಗಳನ್ನು ಎದುರುಗೊಂಡು ಮಯ್ಯಾದೆಯೊಡನೆ ಶ್ರೀನಿವಾಸನ ಸನ್ನಿಧಿಗೆ ಕರೆದುಕೊಂಡು ಹೋದರು. ಗರ್ಭಾಲಯದ ಹತ್ತಿರ ಅರ್ಚಕರು ನಾರಾಯಣಾಚಾರರಿಂದ ದೇವರ ಪೆಟ್ಟಿಗೆಯನ್ನು ತಾವು ತೆಗೆದುಕೊಂಡು ದೇವರ ಸನ್ನಿಧಿಯಲ್ಲಿ ಮಣೆಯ ಮೇಲೆ ಮಂಡಿಸಿದರು. ಶ್ರೀಯವರು ಗರ್ಭಾಲಯವನ್ನು ಪ್ರವೇಶಿಸಿದ ಕೂಡಲೇ ಸಹಾಯಕ ಅರ್ಚಕರು ಮೊದಲೇ ವ್ಯವಸ್ಥೆಯಾಗಿದ್ದಂತೆ ಗರ್ಭಗುಡಿಯ ಮುಂದಿನ ಪರದೆಯನ್ನೆಳೆದು ಹೊರಗೆ ಮಠದ ಪಂಡಿತರೊಡನೆ ಕುಳಿತರು.
ಸರ್ವಾ೦ಗಸುಂದರನಾದ ಶ್ರೀವೆಂಕಟೇಶ್ವರ ತುಳಸೀಮಾಲಾಧಾರಿಯಾಗಿ ವಿಶ್ವರೂಪದಿಂದ ಗುರುರಾಜರಿಗೆ ದರ್ಶನ ನೀಡಿದ. ದೇವರದರ್ಶನದಿಂದ ಪ್ರಹೃಷ್ಟಚಿತ್ತರಾದ ಗುರುಗಳು ದೇವರ ಮುಂದೆ ಪದ್ಮಾಸನಾಸೀನರಾಗಿ ಕುಳಿತು ತಮ್ಮ ಹೃತ್ಕಮಲದಲ್ಲಿ ಬಿಂಬಮೂರ್ತಿಯನ್ನು ಧ್ಯಾನಿಸಹತ್ತಿದರು. ಬಿಂಬಮೂರ್ತಿ ಅವರ ಹೃದಯಕಮಲದಲ್ಲಿ ಗೋಚರಿಸಿದ. ಆಗ ಶ್ರೀಗಳವರು ಮನಸಾ ಬಿಂಬಮೂರ್ತಿಗೂ ವೆಂಕಟೇಶ್ವರನಿಗೂ ಐಕ್ಯಚಿಂತನಮಾಡಿ ಸ್ತುತಿಸಲಾರಂಭಿಸಿದರು, ಬಿಂಬಮೂರ್ತಿ ಅದೃಶ್ಯನಾಗಿ ಶ್ರೀನಿವಾಸ ಅಲ್ಲಿ ದರ್ಶನವಿತ್ತ. ಗುರುಗಳು ಆನಂದದಿಂದ ದೇವರನ್ನು ಸ್ತುತಿಸುತ್ತಿರಲು ಶ್ರೀನಿವಾಸ ಅದೃಶ್ಯನಾದ. ಆಗ ಗುರುಗಳು ಕಣ್ಣು ತೆರೆದು ಶ್ರೀನಿವಾಸನನ್ನು ಈಕ್ಷಿಸಿದರು. ಅಲ್ಲಿ ಅವರು ಕಂಡು ದಿವ್ಯದೃಶ್ಯ ಅವರನ್ನು ಪರವಶಗೊಳಿಸಿತು.
ಶ್ರೀವೆಂಕಟೇಶ್ವರ ಹಾಲುಬೆಳದಿಂಗಳ ದಿವ್ಯಕಾಂತಿಯಿಂದ ಬೆಳಗುತ್ತಿದ್ದಾನೆ! ಆ ಮಂಗಳಮೂರ್ತಿಯು ಚಕ್ರ-ಶಂಖ ವರಾಭಯಹಸ್ತನಾಗಿ, ಶ್ರೀವತ್ಸ-ಕೌಸ್ತುಭ ಕಿರೀಟ-ಕುಂಡಲ, ಪೀತಾಂಬರಧಾರಿಯಾಗಿ ಮೂಲರೂಪದಿಂದ ಮಂದಹಾಸಬೀರುತ್ತಾ ಗುರುರಾಜರಿಗೆ ಅಭಯಹಸ್ತ ಪ್ರದರ್ಶನ ಮಾಡುತ್ತಿರುವಂತೆ ಭಾಸವಾಯಿತು. ಗುರುರಾಜರು ಪರಮಾತ್ಮನ ಅಪ್ರಾಕೃತ ದರ್ಶನದಿಂದ ಪುಳಕಿತಗಾತ್ರರಾಗಿ ಆನಂದಾಶ್ರು ಪೂರ್ಣರಾಗಿ ಭಕ್ತತಿಶಯದಿಂದ “ದೇವಾಧಿದೇವ ! ಜಗನ್ನಾಥ, ಕಮಲಾಕಾಂತ! ದಾಸನಲ್ಲಿ ಕರುಣೆದೋರಿದೆಯಾ ಸ್ವಾಮಿ,” ಎಂದು ಪ್ರಾರ್ಥಿಸಿ -
“ಪೂರ್ಣಾಗಣ್ಯ ಗುಣೋದಾರ ಮೂರ್ತಯೇ ಪುಣ್ಯಕೀರ್ತಯೇ ! ನಮಃ ಶ್ರೀಪತಯೇ ಭಕ್ತದತ್ತಸ್ವಾನಂದಮೂರ್ತಯೇ || ಪೂರ್ಣಾಗಣ್ಯಗುಣೋದಾರ ನಿತ್ಯ ಸುಂದರಮೂರ್ತಿನೇ | ಶ್ರೀಬ್ರಹ್ಮವೀಂದ್ರಪೂರ್ವೆಡ್ಕ ಕೀರ್ತಿನೇ ಬ್ರಹ್ಮರೂಪಿಣೇ ||
“ನಿರವಧಿಕ ಪರಿಪೂರ್ಣಜ್ಞಾನಾನಂದಾದಿಗುಣಗಳಿಂದ ಉತ ಷ್ಟವಾದ ಶರೀರವುಳ್ಳ, ಪುಣ್ಯಕೀರ್ತಿಯುಳ್ಳ, ಲಕ್ಷ್ಮೀಪತಿ- ಯಾದ, ಸ್ವಭಕ್ತರಿಗೆ ಸ್ವರೂಪಾನಂದಪ್ರದನಾದ, ಲೋಕಮೋಹಕ ಸುಂದರಮೂರ್ತಿಯಾದ, ಶ್ರೀರಮಾಬ್ರಹ್ಮ ಗರುಡರುದ್ರೇಂದ್ರಾದಿ ಸ್ತುತನಾದ, ಪರಬ್ರಹ್ಮಶಬ್ದವಾಚ್ಯನಾದ ಶ್ರೀಹರಿಯೇ, ನಿನಗೆ ನಮಸ್ಕಾರ. ನಿನ್ನ ದರ್ಶನದಿಂದ ಕೃತಾರ್ಥನಾದೆ ಪ್ರಭು!” ಎಂದು ಭಾವಪರವಶನಾಗಿ ಸ್ತುತಿಸಹತ್ತಿದರು.
ಆ ಪ್ರಶಾಂತ ವಾತಾವರಣದಲ್ಲಿ ಒಂದು ಅದ್ಭುತ-ದಿವ್ಯಪ್ರಕಾಶವು ಬೆಳಗಿದಂತಾಗಿ ಅಚ್ಚರಿಯಿಂದ ಶ್ರೀಗಳವರು ಇದೇನೆಂದು ಪರಮಾತ್ಮನನ್ನು ನೋಡುತ್ತಿರಲು ವೆಂಕಟೇಶನಮುಖಾರವಿಂದದಿಂದ ಮತ್ತಃಪರಂತರಂ ನಾನೃತಿಂಚಿದಸ್ತಿ, ವೇದೋ ಖಿಲೋ ಧರ್ಮಾಮೂಲಂ, ವೇದೈಶ್ಯ ಸರ್ವೈರಹಮೇವ ವೇದ್ಯ-ಭಕ್ತಾಗ್ರೇಸರ! ವೇದವಿವರಣದ್ವಾರಾ ಮಾಮಾರಾಧಯ” ಎಂಬ ಅಮೃತವಾಣಿ ಕೇಳಿಬಂದಿತು: ಸಾಕ್ಷಾತ್ ಪರಮಾತ್ಮನ ದಿವ್ಯವಾಣಿಯನ್ನೂ ಆದೇಶವನ್ನೂ ಆಲಿಸಿ ಗುರುರಾಜರು ಪರಮಾನಂದದಿಂದ ಮೈಮರೆತರು, ಭಕ್ತಿನಮಾಂಗವಾಗಿ 'ಪರಮಾತ್ಮಾ, ರಾಮವಲ್ಲಭ ನಿನ್ನ ಆಜ್ಞೆಯನ್ನು ನೆರವೇರಿಸುತ್ತೇನೆ ಸ್ವಾಮಿ' ಎಂದು ವಿಜ್ಞಾಪಿಸಿ ದೇವನ ಪಾದಗಳ ಮೇಲೆ ಶಿರವಿರಿಸಿ ನಮಸ್ಕರಿಸಿದರು, ಶ್ರೀಯವರ ನುಡಿ ಹೊರಗಿದ್ದ ಎಲ್ಲರಿಗೂ ಕೇಳಿಸಿತು. ಎಲ್ಲರೂ ಇದೇನಿರಬಹುದೆಂದು ವಿಸ್ಮಿತರಾದರು. ಅರ್ಚಕರು ಬಳಿ ಬಂದರು.
ಶ್ರೀಹರಿಯ ಚರಣಸ್ಪರ್ಶದಿಂದ ಶ್ರೀರಾಘವೇಂದ್ರಗುರುಗಳಿಗೆ ರೋಮಹರ್ಷಣವಾಯಿತು. ಆವುದೋ ಒಂದು ಸಾತ್ವಿಕ ಶಕ್ತಿಯು ತಮ್ಮ ಶರೀರವನ್ನು ಪ್ರವೇಶಿಸಿದಂತಾಗಿ ಶ್ರೀಗಳವರು ಆನಂದಭರಿತರಾದರು. ಆಗ ಶ್ರೀನಿವಾಸನ ಕಂಠದಲ್ಲಿದ್ದ ತುಳಸೀಮಾಲೆಯು ಬಲಭಾಗದಿಂದ ಕಳಚಿ ಗುರುಗಳ ಕಂಠವನ್ನಲಂಕರಿಸಿತು! ಅದನ್ನು ಕಂಡು ವೃದ್ಧರಾದ ಅರ್ಚಕರು “ಅದ್ಭುತ ! ಅಪೂರ್ವ ! ಗುರುವಯ್ಯ, ನೀವು ಭಗವಂತನ ಅಂತರಂಗ ಭಕ್ತರು! ಭಾಗವತಾಗ್ರೇಸರರು. ನನ್ನ ಅರವತ್ತು ವರ್ಷದ ಅನುಭವದಲ್ಲಿ ಹಿಂದೆಂದೂ ಇಂತಹ ಘಟನೆ ಜರಗಿದ್ದನ್ನು ನಾನು ಕಂಡಿರಲಿಲ್ಲ ! ನಿಮ್ಮ ದಯದಿಂದ ಭಗವಂತನು ತೋರಿದ ಈ ಅದ್ಭುತವನ್ನು ಕಂಡು ಧನ್ಯನಾದೆ. ಸ್ವಾಮಿ ನಿಮಗೆ ಅನಂತ ನಮಸ್ಕಾರಗಳು” ಎಂದು ಉದ್ಧರಿಸಿ ಗುರುಗಳಿಗೆ ನಮಸ್ಕರಿಸಿದರು.
ಶ್ರೀಗಳವರು ನಸುನಕ್ಕು “ಆಚಾರರೇ, ನಾವು ನೀವು ಹೊಗಳುವಷ್ಟು ಮಹನೀಯರಲ್ಲ. ಶ್ರೀಹರಿಯ ಪಾದಸೇವಕರೆಂಬುದು ಮಾತ್ರ ನಿಜ” ಎಂದಿಷ್ಟೇ ಹೇಳಿ ಹೊರಬಂದರು. ಅರ್ಚಕರು ದೇವರ ಪೆಟ್ಟಿಗೆಯನ್ನು ಹೊರತಂದರು. ಅದನ್ನು ನಾರಾಯಣಾಚಾರರು ಸ್ವೀಕರಿಸಿ ಶಿರದಲ್ಲಿರಿಸಿ ಗುರುಗಳೊಡನೆ ಬಿಡಾರಕ್ಕೆ ಬಂದರು.
ಅಂದಿನಿಂದ ಏಳು ದಿನಗಳ ಕಾಲ ಶ್ರೀವೆಂಕಟೇಶ್ವರನಿಗೆ ವಿವಿಧ ಸೇವೆಗಳನ್ನು ನೆರವೇರಿಸಿದ ಶ್ರೀಪಾದಂಗಳವರನ್ನು ದೇವಾಲಯಾಧಿಕಾರಿಗಳು ವಿಶಿಷ್ಟರೀತಿಯಲ್ಲಿ ಗೌರವಿಸಿ ಎರಡು ಭೂಛತ್ರಕೊಡೆ, ಒಂದು ಶ್ವೇತಛತ್ರ, ಎರಡು ಚಾಮರ, ಚೌರಿಗಳು ಶ್ರೀನಿವಾಸನಿಗೆ ಅರ್ಪಿಸಿದ ಪೀತಾಂಬರಾದಿಗಳನ್ನು ಸಮರ್ಪಿಸಿದರು. ಬೆಟ್ಟದ ಮೇಲಿನ ಪಂಡಿತರು- ಧರ್ಮಾಭಿಮಾನಿಗಳು, ದೇವಾಲಯದ ಅಧಿಕಾರಿಗಳು, ಅರ್ಚಕರು, ಕರ್ಮಕಾರಕರುಗಳಿಗೆ ಗುರುವರರು ಸಂಭಾವನೆ - ಫಲಮಂತ್ರಾಕ್ಷತೆಗಳನ್ನಿತ್ತು ಎಲ್ಲರಿಂದ ಬೀಳ್ಕೊಂಡು ಬೆಟ್ಟವಿಳಿದು ಪದ್ಮ ಸರೋವರಕ್ಕೆ ದಯಮಾಡಿದರು. ಅಲ್ಲಿ ಶ್ರೀಪದ್ಮಾವತಿಯ ದರ್ಶನ ಸೇವೆಗಳಿಂದ ಗುರುಗಳಿಗೆ ಹರ್ಷವಾಯಿತು, ಗುರುಗಳು ಅಮ್ಮನವರಿಗೆ ಸುವರ್ಣಮಾಂಗಲ್ಯ, ಮುಕ್ತಹಾರ, ಪೀತಾಂಬರ, ಖಣವನ್ನು ಸಮರ್ಪಿಸಿ ವಿಶೇಷ ಉತ್ಸವಗಳನ್ನು ಮಾಡಿಸಿದರು.
ಶ್ರೀಗಳವರು ಗೋವಿಂದರಾಜಪಟ್ಟಣಕ್ಕೆ ಬಂದು ಅಲ್ಲಿ ೩-೪ ದಿನ ಭಕ್ತರಸೇವೆ ಸ್ವೀಕರಿಸಿ ಅಲ್ಲಿಂದ ಕಾಳಹಸ್ತಿಗೆ ಬಂದು ದೇವರದರ್ಶನಮಾಡಿ ಅಲ್ಲಿಂದ ಕಂಚಿಗೆ ದಯಮಾಡಿಸಿದರು. ಕಂಚಿಯಲ್ಲಿ ಶ್ರೀವರದರಾಜಸ್ವಾಮಿಗೆ ಗರುಡೋತ್ಸವ ಮಾಡಿಸಿ ದೇವರ ದರ್ಶನದಿಂದ ಕೃತಾರ್ಥರಾಗಿ, ಏಕಾಂಬರೇಶ್ವರ, ಕಾಮಾಕ್ಷಿಯರ ದರ್ಶನ ಸೇವೆಗಳಿಂದ ಆನಂದಿಸಿ ಅರುಣಾಚಲಕ್ಕೆ ಬ೦ದರು.
ಅರುಣಾಚಲದಲ್ಲಿ ಶ್ರೀಶಂಭುವಿನ ದರ್ಶನಮಾಡಿ ನಮಸ್ಕರಿಸಿ, ಸೇವೆಸಲ್ಲಿಸಿ ವೃದ್ದಾಚಲ ಮತ್ತು ಶ್ರೀಮುಷಕ್ಷೇತ್ರಗಳಿಗೆ ಶ್ರೀಪಾದಂಗಳವರು ಬಿಜಯಂಗೈದರು.25 ವೃದ್ಧಾಚಲದಲ್ಲಿ ಮಹರುದ್ರದೇವರನ್ನೂ, ಶ್ರೀಮುಷ್ಣದಲ್ಲಿ ವರಾಹರೂಪಿಯನ್ನೂ ಅವತಾರತ್ರಯ ಪ್ರಾಣದೇವರನ್ನೂ ಸಂದರ್ಶಿಸಿ, ನಮಿಸಿ, ಸ್ತುತಿಸಿದರು ನಾಲ್ಕಾರು ದಿನ ಅಲ್ಲಿದ್ದು ದೇವರಿಗೆ ವಿವಿಧ ಸೇವೆಗಳನ್ನು ನೆರವೇರಿಸಿದರು. ಅಲ್ಲಿಂದ ಗುರುಗಳು ಕುಂಭಕೋಣದ ಕಡೆಗೆ ಪ್ರಯಾಣ ಬೆಳೆಸಿದರು.