ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೯೨. ಕುಲಸ್ವಾಮಿಯ ಸನ್ನಿಧಿಯಲ್ಲಿ
ಶ್ರೀಗುರುರಾಜರು ಗೋವಿಂದರಾಜಪಟ್ಟಣಕ್ಕೆ ಬಂದು ಅಂದು ಅಲ್ಲಿಯೇ ತಂಗಿದ್ದು, ಮರುದಿನ ಪರಿವಾರದೊಡನೆ ಕಪಿಲತೀರ್ಥದಲ್ಲಿ ಸ್ನಾನಮಾಡಿ ಆಕಾದಿಗಳನ್ನು ಮುಗಿಸಿ, ದೇವರ ಪೆಟ್ಟಿಗೆಯನ್ನು ಮುಂದೆಮಾಡಿಕೊಂಡು ಹೊರಟು ಬೆಟ್ಟದ ಕೆಳಭಾಗಕ್ಕೆ ದಯಮಾಡಿಸಿ ಸಾಷ್ಟಾಂಗವರೆಗಿದರು. ಆನಂತರ ಪಂಡಿತರು, ವಿದ್ಯಾರ್ಥಿಗಳು ಪರಿವಾರದವರೊಡನೆ ಸಚ್ಛಾಸ್ತ್ರಪಾರಾಯಣಮಾಡುತ್ತಾ ಬೆಟ್ಟವನ್ನು ಹತ್ತಲಾರಂಭಿಸಿದರು. ಗುರುಗಳು ಮಧ್ಯಾಹ್ನದ ಹೊತ್ತಿಗೆ ಬೇಡಿ ಶ್ರೀಪ್ರಾಣದೇವರ ಸನ್ನಿಧಿ ಬಳಿಗೆ ಬಂದರು. ಅಲ್ಲಿ ದೇವಾಲಯದವರು ಪೂರ್ಣಕುಂಭಾದಿ ಗೌರವದಿಂದ ಸ್ವಾಗತಿಸಿದರು. ಮಹಾಪ್ರಾಕಾರವನ್ನು ಪ್ರದಕ್ಷಿಣಾಕಾರವಾಗಿ ಬಳಸಿ ಸ್ವಾಮಿಪುಷ್ಕರಣಿಯ ಪವಿತ್ರಜಲವನ್ನು ಪ್ರೋಕ್ಷಿಸಿಕೊಂಡು ಶ್ರೀವರಾಹಸ್ವಾಮಿಯ ದರ್ಶನಮಾಡಿ ಶ್ರೀಗಳವರು ಶ್ರೀವೆಂಕಟೇಶ್ವರನ ಸನ್ನಿಧಿಗೆ ಬಂದರು. ದೇವದೇವನ ದರ್ಶನವಾದ ಕೂಡಲೇ ಗುರುಗಳಿಗೆ ಪರಮಾನಂದವಾಯಿತು. ಭಕೃತಿಶಯದಿಂದ ಕಣ್ಣಿಂದ ಆನಂದಾಶ್ರು ಹರಿಯಿತು. ಶ್ರೀಶ್ರೀನಿವಾಸನಿಗೆ ಸಾಷ್ಟಾಂಗವೆರಗಿ ವಿವಿಧರೀತಿಯಿಂದ ಸ್ತುತಿಸಿ, ದೇವರಿಗೆ ಮಂಗಳಾರತಿಯನ್ನು ಮಾಡಿ, ಪ್ರಸಾದ ಸ್ವೀಕರಿಸಿ, ಪಾದಸ್ಪರ್ಶಮಾಡಿ ಆನಂದತುಂದಿಲರಾದರು. ಶ್ರೀಗಳವರು ದೇವರ ಸನ್ನಿಧಿಯಲ್ಲಿ ತಾವು ಕೆಲವು ಸಮಯ ಏಕಾಂತವಾಗಿ ಧ್ಯಾನಮನ್ನರಾಗಿರಲುಬಯಸಿದಾಗ ವೃದ್ಧರಾದ ಅರ್ಚಕರು ಮತ್ತು ಅಧಿಕಾರಿಗಳು ಬೆಳಗಿನಝಾವ ಗುರುಗಳು ದೇವರನ್ನು ಸೇವಿಸಬಹುದು ಎಂದು ತಿಳಿಸಿದರು. ಆನಂತರ ಗುರುಗಳು ಶ್ರೀಮಠಕ್ಕೆ ಬಂದು ದೇವ ಪೂಜಾದಿಗಳನ್ನು ಮುಗಿಸಿ ಬೆಟ್ಟದಲ್ಲಿ ವಾಸಿಸುವ ನೂರಾರು ಜನ ಮಠದ ಶಿಷ್ಯರು ಭಕ್ತರುಗಳಿಗೆ ತೀರ್ಥಪ್ರಸಾದ ಕರುಣಿಸಿ ಭಿಕ್ಷಾ ಸ್ವೀಕರಿಸಿದರು.