|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೯೦. ಜಗದ್ಗುರುಗಳು

ಅಂದು ವಿಜಾಪುರವು ಸಂಪತ್ಸಮೃದ್ಧವಾದ ದೊಡ್ಡ ರಾಜ್ಯವಾಗಿದ್ದಿತು. ಅಲ್ಲಿ ಇಮ್ಮಡಿ ಇಬ್ರಾಹಿಂ ಆದಿಲ್‌ ಷಹನ ಮಗನಾದ ಆಲೀ ಆದಿಲ್ ಷಹನು ಆಳುತ್ತಿದ್ದನು. ಅವನು ಇಸ್ಲಾಂ ಧರ್ಮದ ಮುಸ್ಲಿಂ ದೊರೆಯಾಗಿದ್ದರೂ ಆಸ್ಥಾನದ ಹಿಂದೂ ಪಂಡಿತರು, ಸಾಧು-ಸಂತರಲ್ಲಿ ಹೆಚ್ಚು ಸಂಪರ್ಕವಿಟ್ಟುಕೊಂಡು ಭಾರತೀಯ ಸಾಧು-ಸಂತರು. ಹಿಂದೂಧರ್ಮ ಮತ್ತು ವಿದ್ವಾಂಸರಲ್ಲಿ ವಿಶ್ವಾಸವುಳ್ಳವನಾಗಿದ್ದನು. ಶ್ರೀರಾಘವೇಂದ್ರಸ್ವಾಮಿಗಳು ವಿಜಾಪುರಕ್ಕೆ ಬಂದಾಗ ಘನಶ್ಯಾಮರಾಯನ ಪೌತ್ರ ನೀಲಮೇಘಶ್ಯಾಮರಾಯ ಮಂತ್ರಿಯಾಗಿದ್ದು ತನ್ನ ಗುರುಗಳನ್ನು ವೈಭವದಿಂದ ಸ್ವಾಗತಿಸಿ ತನ್ನ ಅರಮನೆಯಲ್ಲೇ ಬಿಡಾರಮಾಡಿಸಿದನು. 

ಗುರುಗಳ ಮಹಿಮೆ ತಿಳಿದ ಸುಲ್ತಾನ ಅವರನ್ನು ಅರಮನೆಗೆ ಕರೆತರಲು ಮಂತ್ರಿಗೆ ಆಜ್ಞಾಪಿಸಿದ. ಶ್ರೀಮಠದ “ಮಾಹೇಂದ್ರೀ” ಎಂಬ ಆನೆಯ ಮೇಲೆ ಅಂಬಾರಿಯಲ್ಲಿ ಸಕಲರಾಜಬಿರುದಾವಳಿ, ವಾದ್ಯವೈಭವ, ವೇದಘೋಷಗಳೊಡನೆ ಶ್ರೀಗುರುರಾಜರನ್ನು ಅಪೂರ್ವ ಗೌರವದಿಂದ ಅರಮನೆಗೆ ಕರತರಲಾಯಿತು. ಸುಲ್ತಾನ ಗುರುಗಳಿಗೊಂದಿಸಿ, ಮಂತ್ರಿಯಿಂದ ಪಾದಪೂಜೆಮಾಡಿಸಿ ಹೇರಳ ಧನಕನಕ ವಸ್ತ್ರಾಭರಣ, ಗ್ರಾಮಗಳನ್ನೂ, “ಜಗದ್ಗುರು” ಎಂಬ ಶ್ರೇಷ್ಠ ಪ್ರಶಸ್ತಿ ಶ್ವೇತಚತ್ರ ಅಪ್ತಾಗಿರಿ, ಹಸಿರು ಛತ್ರಿ, ಒಂಟೆ, ಕುದುರೆಗಳನ್ನೂ ಗುರುಗಳಿಗೆ ಸಮರ್ಪಿಸಿ ಕೃತಾರ್ಥನಾದ. ಆತನ ಆಸ್ಥಾನದ ಅನೇಕ ಪಂಡಿತರು ಗುರುಗಳೊಡನೆ ವಾದಮಾಡಿ ಪರಾಜಿತರಾದರು. ಇದರಿಂದ ಸುಲ್ತಾನನಿಗೆ ಗುರುಗಳಲ್ಲಿ ಅಪಾರ ಭಕ್ತಿಗೌರವಗಳುಂಟಾದವು. ಶ್ರೀಗಳವರು ಹತ್ತಾರುದಿನ ಶಿಷ್ಯ-ಭಕ್ತ-ಧರ್ಮಾಭಿಮಾನಿಗಳ ಸೇವೆ ಸ್ವೀಕರಿಸಿ ದೇವರ ದರ್ಶನ-ತೀರ್ಥಪ್ರಸಾದ ಉಪದೇಶಾದಿಗಳಿಂದ ಸರ್ವರನ್ನೂ ಅನುಗ್ರಹಿಸಿ, ಅಲ್ಲಿಂದ ಹೊರಟು ಕೃಷ್ಣಾತೀರವಾದ ಆಲೂರಿಗೆ ದಯಮಾಡಿಸಿದರು.