ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೮೯. ಅನಾಥರಕ್ಷಕರು
ಶ್ರೀಯವರ ಸವಾರೆಯು ಚಿಕ್ಕೋಡಿ-ಬಿಜಾಪುರದ ಮಾರ್ಗದಲ್ಲಿ ಬರುತ್ತಿರುವಾಗ ಗಿಡ-ಮರ-ಜಲರಹಿತ ಶುಷ್ಕಪ್ರದೇಶ- ವೊಂದು ಸಿಕ್ಕಿತು. ಬೆಳಗಿನಿಂದ ಏಕಪ್ರಕಾರವಾಗಿ ಪ್ರಯಾಣಮಾಡಿ ಮಠದ ಪರಿವಾರದವರೆಲ್ಲರೂ ಶ್ರಾಂತರಾಗಿದ್ದರು. ಆ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದಾಗ ಮಾರ್ಗಮಧ್ಯದಲ್ಲಿ ಒರ್ವ ಬ್ರಾಹ್ಮಣನು ಸೂರನ ಪ್ರಖರತಾಪದಿಂದ ನೀರೂ ದೊರಕದೆ ಗತಪ್ರಾಣನಾಗಿ ಬಿದ್ದಿದ್ದನು. ಆಗ ಅವನು ಕಾಲನ ಕರಾಳ ಕಪಿಮುಷ್ಟಿಯಲ್ಲಿ ಖೈದಿಯಾಗಿದ್ದನು. ಆ ವಿಪ್ರನ ಶೋಚನೀಯ ಸ್ಥಿತಿಯನ್ನು ಕಂಡು ಗುರುಗಳ ಕೋಮಲ ಹೃದಯ ಕರಗಿ ನೀರಾಯಿತು. ಶ್ರೀಗಳವರು ದಂಡವನ್ನು ಹಿಡಿದು ಕ್ಷಣಕಾಲ ಧ್ಯಾನಿಸಿ, “ಬಾ ತಾಯಿ, ಭಾಗೀರಥಿ !” ಎಂದು ದಂಡದಿಂದ ನೆಲವನ್ನೊಮ್ಮೆ ಕುಟ್ಟಿದರು. ಅದೇನಾಶ್ಚರ್ಯ! ಯತಿನಾಯಕರ ಭಕ್ತಿಯ ಕರೆಗಾಗಿಯೇ ಕಾದಿದ್ದಳೋ ಎಂಬಂತೆ ಭಾಗೀರಥಿಯು ಧರೆಯ ಗರ್ಭದಿಂದ ಪುಟಿದೆದ್ದು ಹರಿಯತೊಡಗಿದಳು. ಗುರುಗಳು ಹರುಷದಿಂದ ಆ ಪಾವನಜಲವನ್ನು ಗತಪ್ರಾಣನಾಗಿ ಬಿದ್ದಿದ್ದ ವಿಪ್ರನ ಮೇಲೆ ಪ್ರೋಕ್ಷಿಸಿ ಧ್ಯಾನಿಸಿದರು. ದ್ವಾರಪಾಲಕನಿಂದ ಅವನ ಬಾಯಿಗೆ ಗಂಗಾಜಲವನ್ನು ಹಾಕಿಸಿದರು. ಅಂತಕನ ಅಂಕಿತದಲ್ಲಿದ್ದ ಭೂಸುರನಲ್ಲಿ ಅನಂತನ ದಯವಾಯಿತು. ಆ ಅನಂತರೂಪೀ ಶ್ರೀಹರಿಯ ಚಿಂತನಶೀಲರಾದ ಸಂತಸಾರ್ವಭೌಮರ ಆಶೀರ್ವಾದ ಫಲಿಸಿತು! ನಿದ್ರೆಯಿಂದೆಚ್ಚೆತ್ತವನಂತೆ ವಿಪ್ರನು ಮೆಲ್ಲನೆ ಕರದನು! ಕಾಷಾಯಾಂಬರ ದಂಡಧಾರಿಗಳಾದ ತೇಜಃಪುಂಜಮುಖದಿಂದ ಮಂದಹಾಸಬೀರುತ್ತಾ ನಿಂತಿದ್ದ ಮಂಗಳಮೂರ್ತಿಗಳಾದ ಗುರುಗಳ ಮುಖಕಮಲವನ್ನು ಕಂಡು ತನ್ನನ್ನು ಉಜೀವನಗೊಳಿಸಿದರು. ಆ ಮಹನೀಯರೆಂದು ತಿಳಿದು ಆನಾಂದಾತಿರೇಕದಿಂದ ಗುರುಗಳಿಗೆ ವಂದಿಸಿ “ಮಹಾಮಹಿಮರೇ, ಮೃತ್ಯುವಿನ ಪಾಲಾಗಿದ್ದ ಈ ಅನಾಥನನ್ನು ರಕ್ಷಿಸಿದ ನಿಮಗೆ ನನ್ನ ಅನಂತ ವಂದನೆಗಳು, ತಮ್ಮಿ ಅನುಗ್ರಹವನ್ನೆಂದಿಗೂ ಮರೆಯಲಾರೆ” ಎಂದು ವಿಜ್ಞಾಪಿಸಿದನು. ಗುರುಗಳು “ನಿನ್ನನ್ನು ರಕ್ಷಿಸಿದವರು ನಾವಲ್ಲ, ಶ್ರೀಹರಿವಾಯುಗಳೆಂದು ತಿಳಿ. ನಿನಗೆ ಮಂಗಳವಾಗಲಿ” ಎಂದಾಶೀರ್ವದಿಸಿದರು. ಗುರುಗಳ ಮಹಿಮಾತಿಶಯವನ್ನು ದಿನದಿನವೂ ಕಂಡಾನಂದಿಸುತ್ತಿದ್ದ ಶ್ರೀಮಠದ ವಿದ್ವಾಂಸರು, ಗುರುಗಳ ಕಾರುಣ್ಯ, ಮಹಿಮೆಗಳನ್ನು ಕೊಂಡಾಡಿದರು. ಶ್ರೀಪಾದಂಗಳವರ ಪ್ರಯಾಣ ಮುಂದುವರೆಯಿತು.