|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೮೮. ಮೂಕ ಸಂಗೀತ ಹಾಡಿದ

ಶ್ರೀಪಾದಂಗಳವರು ಹೋದದೆಲ್ಲಾ ಧಾರ್ಮಿಕರು ಗುರುಗಳನ್ನು ಗೌರವದಿಂದ ಸ್ವಾಗತಿಸಿ, ಸೇವಿಸಿ ಶ್ರೀದೇವರ ದರ್ಶನ, ತೀರ್ಥಪ್ರಸಾದ ಮಂತ್ರಮುದ್ರಾಧಾರಣ ಉಪದೇಶಗಳಿಂದ ಕೃತಾರ್ಥರಾಗುತ್ತಿದ್ದರು. ಗುರುಗಳು ನಾಸಿಕಕ್ಕೆ ಬಂದು, ಕೆಲದಿನವಿದ್ದು ಗೋದಾವರಿಸ್ನಾನಮಾಡಿ ಹರ್ಷಿತರಾಗಿ ಮತ್ತೆ ಮಹಾರಾಷ್ಟ್ರದಲ್ಲಿ ಸಂಚರಿಸುತ್ತಾ ಕರಾಡ ಎಂಬಲ್ಲಿಗೆ ದಯಮಾಡಿಸಿದರು. ಕರಾಡದಲ್ಲಿ ಶ್ರೀಮಠದ ಶಿಷ್ಯರು ಅನೇಕರಿದ್ದರು. ಮಾದ್ದರೂ ನೂರಾರು ಜನರಿದ್ದರು. ಅಲ್ಲಿ ಮಠದ ಪ್ರಮುಖ ಶಿಷ್ಯರಾದ ವಾಸುದೇವ ಪಂತ ಸಹವಾಸಿ ಎಂಬುವವರು. ರಾಜಕೀಯ-ಸಾಮಾಜಿಕರಂಗಗಳಲ್ಲಿ ಪ್ರಮುಖರಾದ ಶ್ರೀಮಂತರಾಗಿದ್ದರು. ಅವರು ಗುರುವರರನ್ನು ಸ್ವಾಗತಿಸಿ ತಮ್ಮ ಮನೆಯಲ್ಲಿ ಬಿಡಾರಮಾಡಿಸಿದರು. ಪಂತರ ಮನೆ ವಿಸ್ತಾರವಾಗಿದ್ದು ವಾಸುದೇವಪಂತರು ಗುರುಗಳಿಗೆ ಎಲ್ಲ ಸೌಕಯ್ಯಗಳನ್ನು ಏರ್ಪಡಿಸಿಕೊಟ್ಟು ಪ್ರತಿದಿನ ಒಬ್ಬೊಬ್ಬರ ಮನೆಯಲ್ಲಿ ಭಿಕ್ಷೆಗಳಾಗುವಂತೆ ವ್ಯವಸ್ಥೆಮಾಡಿದರು. ಶ್ರೀಯವರು ಅಲ್ಲಿ ಹತ್ತು ಹದಿನೈದು ದಿನಗಳವರೆಗೆ ಪ್ರತಿದಿನ ಪಾಠಪ್ರವಚನ ಮಂತ್ರಮುದ್ರಾಧಾರಣ ಉಪದೇಶ, ದೇವರಪೂಜಾ ತೀರ್ಥಪ್ರಸಾದಗಳಿಂದ ಶಿಷ್ಯ-ಭಕ್ತಜನರನ್ನು ಅನುಗ್ರಹಿಸಿದರು. 

ವಾಸುದೇವಪಂತರ ಮನೆಯಲ್ಲಿ ಗುರುಗಳು ಹೊರಡುವ ದಿನ ವಿಜೃಂಭಣೆಯಿಂದ ಭಿಕ್ಷೆ ನೆರವೇರಿತು. ಅಂದು ಸಂಜೆ ದೀಪಾರಾಧನಾಕಾಲಕ್ಕೆ ಮುಂಚೆ ಕೆಲ ಗೃಹಸ್ಥರು ಪಂತರನ್ನು ಗುರುಗಳು ಸಂಗೀತಶಾಸ್ತ್ರಕೋವಿದರೆಂದು ಕೇಳಿದ್ದೇವೆ. ಮಹಾರಾಷ್ಟ್ರದ ಶ್ರೇಷ್ಠ ಸಂಗೀತಗಾರರ ಕಛೇರಿ ಇಡಿಸಿದ್ದರೆ ಚೆನ್ನಾಗಿತ್ತು' ಎಂದು ಕೇಳಿದಾಗ ಪಂತರು “ನಮ್ಮ ಸೋದರಳಿಯ ಸುರೇಂದ್ರ ಸಂಗೀತ ಸೇವೆಯಿಂದ ಗುರುಗಳನ್ನು ಸಂತೋಷಪಡಿಸಬಹುದಾಗಿತ್ತು. ದುರ್ವಿಧಿಯು ಈಗ ಅದಕ್ಕೆ ಅವಕಾಶವಿಲ್ಲದಂತೆ ಮಾಡಿರುವುದು ನಿಮಗೆ ತಿಳಿದೇ ಇದೆ. ಅವನಿಗೆ ಆ ಭಾಗ್ಯವಿಲ್ಲದಾಯಿತು” ಎಂದು ಹೇಳಿ ನಿಟ್ಟಿಸಿರುಬಿಟ್ಟರು. ಅದನ್ನು ಕೇಳಿದ ಮಠದವರಿಂದ ತಿಳಿದ ಶ್ರೀಗಳವರು ಪಂತರನ್ನು ಕರೆಸಿಕೊಂಡು ಆ ವಿಚಾರ ಪ್ರಸ್ತಾಪಿಸಿದರು. ಪಂತರ ಕಣ್ಣೀರುಡುತ್ತಾ ಮಹಾಸ್ವಾಮಿ, ನನ್ನ ಸೋದರಳಿಯ ಸುರೇಂದ್ರನನ್ನು ತಾವು ನೋಡಿದ್ದೀರಿ. ಅವನು ಈ ಒಂದು ವರ್ಷದಿಂದ ಮೂಕನಾಗಿದ್ದಾನೆ. ಅವನು ಹಿಂದೂಸ್ತಾನಿ ಸಂಗೀತದಲ್ಲಿ ಶ್ರೇಷ್ಠ ವಿದ್ವಾಂಸನಾಗಿದ್ದನು. ಅವನ ಕೀರ್ತಿ ಮಹಾರಾಷ್ಟ್ರದಲ್ಲೆಲ್ಲಾ ಖ್ಯಾತವಾಗಿತ್ತು. ಅದನ್ನು ಸಹಿಸದ ಯಾರೋ ದ್ರೋಹಿಗಳು ಅವನ ಮಾತೇ ಹೋಗುವಂತೆ ಅಭಿಚಾರಿಕ ಪ್ರಯೋಗಮಾಡಿಸಿದ್ದಾರೆ. ಅದನ್ನು ಸರಿಪಡಿಸಲು ಬಹುರೀತಿ ಯತ್ನಿಸಿದರೂ ಫಲವಾಗಲಿಲ್ಲ. ಅವನು ತಮ್ಮ ಮುಂದೆ ಹಾಡಿ ಅನುಗ್ರಹ ಪಡೆಯುವ ಭಾಗ್ಯವಿಲ್ಲವಾಯಿತು” ಎಂದರು. ಗುರುಗಳಿಗೆ ಸುರೇಂದ್ರನಲ್ಲಿ ಕರುಣೆಯುಂಟಾಯಿತು. ಏನೋ ನಿರ್ಧರಿಸದವರಂತೆ ಶ್ರೀಗಳವರು “ಪಂತರೇ, ನಿಮ್ಮ ಸೋದರಳಿಯನನ್ನು ನಮ್ಮಲ್ಲಿಗೆ ಕರೆದುಕೊಂಡು ಬನ್ನಿರಿ” ಎಂದರು. ವಾಸುದೇವಪಂತರು ಸುರೇಂದ್ರನನ್ನು ಕರೆತಂದರು. ಅವನು ಗುರುಗಳಿಗೆ ನಮಸ್ಕರಿಸಿ ನಿಂತನು. ಆಗ ಶ್ರೀಗಳವರು “ಪಂತರೇ ನಿಮ್ಮ ಸುರೇಂದ್ರನು ಇಂದು ರಾತ್ರಿ ಸಂಗೀತ ಕಛೇರಿಮಾಡುತ್ತಾನೆ, ಶ್ರೀಮೂಲರಾಮ ಅನುಗ್ರಹಿಸುತ್ತಾನೆ. ಚಿಂತಿಸಬೇಡಿ” ಎಂದು ಹೇಳಿ ಸುರೇಂದ್ರನನ್ನು ನಿಟ್ಟಿಸಿ ನೋಡಿದರು. ಸುರೇಂದ್ರ ಗುರುಗಳ ಮುಖವನ್ನು ಆಸೆಯಿಂದ, ಭಕ್ತಿಯಿಂದ ನೋಡತೊಡಗಿದನು. ಆಗೊಂದು ವಿಚಿತ್ರ ಕಾರ್ಯ ಜರುಗಿತು. ಶ್ರೀಗಳವರ ಕಣ್ಣುಗಳಿಂದ ಒಂದು ದಿವ್ಯಕಾಂತಿ ಹೊರಹೊಮ್ಮಿ ಅದು ತನ್ನತ್ತ ಬರುತ್ತಿರುವಂತೆ ಸುರೇಂದ್ರನಿಗೆ ಭಾಸವಾಯಿತು! ಅಚ್ಚರಿ, ಸಂಭ್ರಮ, ಆನಂದದಿಂದ ನೋಡುತ್ತಿರುವಂತೆಯೇ ಗುರುಗಳ ನೇತ್ರದಿಂದ ಹೊರಹೊಮ್ಮಿದ ಕಾಂತಿಪುಂಜವು ಸುರೇಂದ್ರನ ಕಂಠವನ್ನು ಸ್ಪರ್ಶಿಸಿದಂತಾಯಿತು! ಆವುದೋ ಒಂದು ಅದ್ಭುತಶಕ್ತಿ ತನ್ನ ಕಂಠವನ್ನು ಪ್ರವೇಶಿಸಿದ ಅನುಭವವಾಗಿ ಇದ್ದಕ್ಕಿದ್ದಂತೆ ಸುರೇಂದ್ರನು “ಗುರುದೇವ, ಉತ್ಕೃತನಾದೆ, ಅನುಗೃಹೀತನಾದೆ” ಎಂದು ಕೂಗಿಬಿಟ್ಟನು! ಅದನ್ನು ಕೇಳಿ ಪಂತರು, ಅವರ ಜತೆಯಲ್ಲಿದ್ದವರೆಲ್ಲರಿಗೂ ಪರಮಾಶ್ಚರ್ಯವಾಯಿತು. ಪಂತರು ಸೋದರಳಿಯನನ್ನು ನೋಡುತ್ತಾ “ಸುರೇಂದ್ರ, ನೀನು, ನೀನೇ ಮಾತನಾಡಿದೆಯಾ ?” ಎಂದು ಪ್ರಶ್ನಿಸಿದರು. ಸುರೇಂದ್ರ ಆನಂದಭರದಿಂದ “ನಿಜ, ಮಾವ, ನಾನೇ ಮಾತನಾಡಿದೆ. ಅದಕ್ಕೆ ಕಾರಣ ಈ ಗುರುಮಹಾರಾಜರ ಅನುಗ್ರಹ” ಎಂದು ಹೇಳಿ ಗುರುಗಳಿಗೆ ನಮಸ್ಕರಿಸಿದ. ಗುರುಗಳು “ಎಲ್ಲ ಶ್ರೀಮೂಲರಾಮನ ಕೃಪೆ, ಅವನು ನಿನ್ನ ಸಂಗೀತ ಕೇಳಲು ಹೀಗೆ ಅನುಗ್ರಹಿಸಿದ್ದಾನೆ. ರಾತ್ರಿ ಗಾಯನದಿಂದ ಶ್ರೀಹರಿಯನ್ನು ಆನಂದಗೊಳಿಸು ಎಂದಾಜ್ಞಾಪಿಸಿದರು, ಗುರುಗಳು ತೋರಿದ ಮಹಿಮೆ, ಕಾರುಣ್ಯಗಳು ಕರಾಡದಲ್ಲೆಲ್ಲಾ ಮಿಂಚಿನಂತೆ ಹರಡಿ ಜನರು ಪಂತರ ಮನೆಗೆ ಬರಹತ್ತಿದರು. ಒಂದು ಪರ್ವದಿಂದ ಮೂಕನಾಗಿದ್ದ ಸುರೇಂದ್ರನಿಗೆ ವಾಕ್‌ ಶಕ್ತಿಯಿತ್ತು ಕರುಣಿಸಿದ ಗುರುಗಳನ್ನು ಸರ್ವರೂ ಕೊಂಡಾಡಿದರು. 

ಅಂದು ರಾತ್ರಿ ಎರಡು ತಂಬೂರಿಗಳು ಝೇಂಕರಿಸುತ್ತಿರಲು ಸುರೇಂದ್ರನು ಪರಮಾನಂದದಿಂದ ಸಂಗೀತ ಕಛೇರಿಯನ್ನು ನೆರವೇರಿಸಿದನು. ಸಂಗೀತದಲ್ಲಿ ಪಾರಂಗತನಾದ ಅವನ ಗಾಯನವೈಭವದಿಂದ ಗುರುವರರು ಪರಮಾನಂದತುಂದಿಲರಾದರು. ನೂರಾರು ಜನರು ಅದನ್ನು ಕಣ್ಣಾರೆ ಕಂಡು, ಸುರೇಂದ್ರನ ಸಂಗೀತವನ್ನು ಕೇಳಿ ವಿಸ್ಮಿತರಾಗಿ ಶ್ರೀರಾಘವೇಂದ್ರಗುರುಗಳ ಮಹಿಮೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು! 

ಮರುದಿನ ಶ್ರೀಗಳವರು ಕರಾಡದಿಂದ ವಿಜಾಪುರದ ಕಡೆಗೆ ಪ್ರಯಾಣ ಬೆಳೆಸಿದರು.