|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೮೬. ಶೇಷ ನಿಶೇಷನಾದ

ಪಂಢರಪುರದ ವೈಷ್ಣವ ಸಮಾಜದ ಪ್ರಾರ್ಥನೆಯಂತೆ ಶ್ರೀಗಳವರು ಸಾವಿರಾರು ಭಕ್ತಜನರಿಗೆ ಭಾಗವತ ಪ್ರವಚನದಿಂದ ಸಂತೋಷವನ್ನುಂಟುಮಾಡುತ್ತಿದ್ದಾರೆ. ಅವ್ಯಾಹತವಾಗಿ ಸಾಗಿದೆ ಗುರುಗಳ ಪ್ರವಚನ! ಒಂದು ದಿನ ಗುರುಗಳು ಶ್ರೀಹರಿ ಸರ್ವೋತ್ತಮತ್ವವನ್ನು ನಿರೂಪಿಸುತ್ತಿರುವಾಗ, ನೂರಾರುಜನ ಶಿಷ್ಯ-ಭಕ್ತರೊಡನೆ ಓರ್ವ ಸಂತರು ಬಂದರು. ತೇಜಸ್ವಿಗಳಾದ ಅವರು ಮುಂದೆ ಬಂದು, “ಸ್ವಾಮಿ, ನನ್ನ ಹೆಸರು ಶೇಷ ಎಂದು. (ಇವರೇ ಶ್ರೀಶೇಷಮಹಾರಾಜರೆಂಬ ಸಂತರೆಂಬ ಹೇಳುವರು) “ಏಕೋ ರುದ್ರೋ ನ ದ್ವಿತಿಯೋವತಸ್ಥೆ, ಶಿವ ಏವ ಕೇವಲಃ” ಇತ್ಯಾದಿ ಶ್ರುತಿಗಳಿಂದ ಸಿದ್ಧನಾದ ಸರ್ವೋತ್ತಮನು ರುದ್ರನೇ ಹೊರತು ನಾರಾಯಣನಲ್ಲ!” ಎಂದು ಹೇಳಿ ಅದ್ಭುತ ಪಾಂಡಿತ್ಯದಿಂದ ತಮ್ಮ ವಾದವನ್ನು ಸಮರ್ಥಿಸಿದರು. ಶೇಷನಾಮಕರು ಉತ್ತಮ ಪಂಡಿತರೆಂದರಿತ ಗುರುಗಳು ಮಂದಹಾಸಬೀರಿ “ಶೇಷ ಮಹಾರಾಜರೇ, ನಿಮ್ಮ ಹೆಸರು ಕೇಳಿದ್ದೆವು. ಈಗ ನಿಮ್ಮ ವಾದಕೇಳಿ ಆನಂದವಾಯಿತು. ಆದರದು ಶ್ರುತಿಸ್ಮೃತ್ಯಾದಿ ಶಾಸ್ತ್ರಗಳಿಗೆ ಸಮ್ಮತವಲ್ಲ, ಸಕಲಶಾಸ್ತ್ರಗಳಿಂದಲೂ ಶ್ರೀಹರಿಯೇ ವೇದ್ಯನಾಗಿದ್ದಾನೆ! ಎಂದು ಹೇಳಿ ಅನೇಕ ಪ್ರಮಾಣಗಳನ್ನುದಹರಿಸಿ ಅವರ ವಾದವನ್ನು ಖಂಡಿಸಿದರು. ಶೇಷಮಹಾರಾಜರೂ ಮಹಾಪಂಡಿತರಾಗಿದ್ದರು. ಇವರಿಬ್ಬರಿಗೂ ಅಂದು ಮತ್ತು ಮುಂದೆ ಮೂರದಿವಸ ವಾಕ್ಯಾರ್ಥ ಜರಗಿತು. ಕೊನೆಗೆ ಗುರುಗಳು ಶ್ರೀವಿಜಯೀಂದ್ರರುಗಳ “ವಾಗೈಖರೀ” ಎಂಬ ಗ್ರಂಥಸ್ಥ ವಿಷಯಗಳನ್ನು ಅನುವಾದ ಮಾಡಿ ಅನೇಕ ಶ್ರುತಿ, ಗೀತಾ, ಪುರಾಣಾದಿಗಳನ್ನು ಉದಹರಿಸಿ ಶೇಷಮಹಾರಾಜರನ್ನು ವಾದದಲ್ಲಿ ಜಯಿಸಿದರು! 413 ಶೇಷಮಹಾರಾಜರು ಗುರುಗಳಿಗೆ ಸಾಷ್ಟಾಂಗವೆರಗಿ “ಜಿತೋSಸ್ಮಿ” ಎಂದರು! ಜನರು ಜಯಕಾರ ಮಾಡಿದರು. ನಂತರ ಅರ್ಧಕ್ಕೆ ನಿಂತಿದ್ದ ಭಾಗವತಾನುವಾದವನ್ನು ಮುಂದುವರೆಸಿ ೨-೩ ದಿನಗಳಲ್ಲಿ ಮಂಗಳಮಾಡಿ ಸರ್ವರನ್ನೂ ಆನಂದಗೊಳಿಸಿ, ಅಲ್ಲಿಂದ ಕೊಲ್ಲಾಪುರಕ್ಕೆ ದಿಗ್ವಿಜಯಗೈದರು.