ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೮೫. ಪಾಂಡುರಂಗನ ಸನ್ನಿಧಿಯಲ್ಲಿ
ಪಂಢರಪುರವು ವೈಷ್ಣವಕ್ಷೇತ್ರ, ಭಾರತದಲ್ಲಿ ಪ್ರಖ್ಯಾತವಾದ ಈ ಕ್ಷೇತ್ರದಲ್ಲಿ ಚಂದ್ರಭಾಗಾನದಿಯ ತಟದಲ್ಲಿ ಇಟ್ಟಿಗೆಯ ಮೇಲೆ ಶ್ರೀಕೃಷ್ಣ ನಿಂತಿದ್ದಾನೆ. ಅವನೇ ಪಾಂಡುರಂಗವಿಠಲ ! ಭಕ್ತಿಪಂಥದವರಿಗೆ, ಹರಿದಾಸರಿಗೆ ಇದು ಪವಿತ್ರಕ್ಷೇತ್ರವಾಗಿದೆ. ಕನ್ನಡ ಹರಿದಾಸರಿಗೆ, ಅವರ ವಾಯಕ್ಕೆ ಇದು ಕೇಂದ್ರಬಿಂದು! ಶ್ರೀಪಾಂಡುರಂಗವಿಠಲ ಹರಿದಾಸರ ಆರಾಧ್ಯದೇವ ! ವ್ಯಾಸ-ದಾಸಪಂಥಗಳ ಪೋಷಕರಾದ ಶ್ರೀಯವರು ಬರುವ ವಿಚಾರವರಿತ ವೈಷ್ಣವಪಂಥದವರು, ಶಿಷ್ಯ-ಭಕ್ತರು ಗುರುಗಳನ್ನು ಗೌರವದಿಂದ ಸ್ವಾಗತಿಸಿ ಬಿಡಾರಮಾಡಿಸಿದರು.
ಮರುದಿನ ಶ್ರೀಯವರು ಶಿಷ್ಯಮಂಡಲಿಯೊಡನೆ ಚಂದ್ರಾಭಾಗಾ ನದಿಯಲ್ಲಿ ಸ್ನಾನಮಾಡಿ ಆಕಗಳನ್ನು ಮುಗಿಸಿ ದೇವರ ಗುಡಿಗೆ ದಯಮಾಡಿಸಿದರು. ದೇವಾಲಯದವರು ಶ್ರೀಗಳನ್ನು ಪೂರ್ಣಕುಂಭಾದಿಗಳಿಂದ ಸ್ವಾಗತಿಸಿ ದೇವರದರ್ಶನ ಮಾಡಿಸಿದರು. ಶ್ರೀಪಾಂಡುರಂಗ ಟೊಂಕದ ಮೇಲೆ ಕರವಿಟ್ಟು ನಿಂತ ಭಂಗಿ ಮಹೋಹರವಾಗಿತ್ತು. 'ಜಗತ್ತಿನಲ್ಲಿ ಭಕ್ತರನ್ನು ಪೊರೆಯುವ ದೊರೆ ನನ್ನ ಹೊರತು ಮತ್ತಾರಿದ್ದಾರೆ!' ಎಂಬ ಭಾವವನ್ನು ಪ್ರದರ್ಶಿಸುತ್ತಿತ್ತು ಆ ದೇವನ ಭಾವ! ವಿಠಲನ ಪಾದಗಳ ಮೇಲೆ ಶಿರವಿರಿಸಿ ಭಕ್ತಿಯಿಂದ ಆನಂದಬಾಷ್ಪಸಿಕ್ತನಯನರಾಗಿ ಶ್ರೀಕೃಷ್ಣನನ್ನು ಸ್ತುತಿಸುತ್ತಿರುವಾಗ ದೇವರಕಂಠದಲ್ಲಿದ್ದ ಕಮಲದ ಮಾಲೆಯು ಶ್ರೀಯವರಿಗೆ ಹಾರ ಹಾಕಿದಂತೆ ಸರಿದುಬಿದ್ದಿತು! ಗುರುಗಳು ವಿಠಲನ ಅನುಗ್ರಹವಾಯಿತೆಂದು ಹರ್ಷಿಸಿದರು. ಆನಂತರ ಪೀತಾಂಬರ-ಧನ-ಕನಕಾಭರಣಗಳನ್ನು ದೇವರಿಗರ್ಪಿಸಿ ಮೂರು ದಿನ ಉತ್ಸವ ಸೇವೆ ನಡೆಯಲು ಗುರುಗಳು ವ್ಯವಸ್ಥೆಮಾಡಿ ಪರಿವಾರಸಹಿತರಾಗಿ ಬಿಡಾರಕ್ಕೆ ಬಂದು ಸ್ನಾನಾನೀಕ ದೇವಪೂಜಾ, ಭಿಕ್ಷಾಸ್ವೀಕಾರಗಳನ್ನು ಮುಗಿಸಿದರು. ಮಧ್ಯಾಹ್ನ ವಿಠಲನ ಗುಡಿಗೆ ಬಂದು ಗರ್ಭಗುಡಿಯ ಮುಂದಿನ ಮಂಟಪದಲ್ಲಿ ಶ್ರೀಗಳವರು ವಿಠಲಧ್ಯಾನದಲ್ಲಿ ಮೈಮರೆತರು. ಆಗ ಗುರುಗಳಿಗೆ ಯಾರೋ ವೀಣೆ ನುಡಿಸುತ್ತಿರುವಂತೆ ಭಾಸವಾಯಿತು. ಕಣ್ಣೆರೆದು ಸುತ್ತ ನೋಡಿದರು. ಯಾರೂ ಕಾಣಿಸಲಿಲ್ಲ. ಆದರೆ ಮಧುರವೀಣಾನಿನಾದವು ಮಾತ್ರ ಕೇಳುತ್ತಿದೆ! ಮತ್ತೆ ಪರೀಕ್ಷಿಸಿದಾಗ ಗುರುಗಳಿಗೆ ಎಡಭಾಗದ ಸ್ತಂಭದಿಂದ ವೀಣಾನಾದ ಕೇಳಿಬಂತು. ಕಂಬವನ್ನು ಈಕ್ಷಿಸುತ್ತಿರುವ ಗುರುಗಳು ಅಲ್ಲಿ ಒಂದು ಅದ್ಭುತ ದೃಶ್ಯವನ್ನು ಕಂಡು ಅಚ್ಚರಿಗೊಂಡರು.
ಕಾಷಾಯಾಂಬರ-ಜಟಾಧಾರಿಗಳಾದ ಊರ್ಧ್ವಪುಂಡ್ರ ತುಳಸೀಮಾಲೆಗಳಿಂದ ಅಲಂಕೃತರಾಗಿ ಕರದಲ್ಲಿ ವೀಣೆಹಿಡುದು ನುಡಿಸುತ್ತಿರುವ ತೇಜಸ್ವೀಮುನಿಗಳೊಬ್ಬರ ದರ್ಶನವಾಯಿತು ಗುರುಗಳಿಗೆ! ಅರಳಿದ ಕಣ್ಣುಗಳಿಂದ ಆ ಪಾವನಮೂರ್ತಿಗಳನ್ನು ಕಂಡ ಗುರುಗಳ ಮೈ ಪುಳಕಿಸಿ ಪರಮಾನಂದವಾಯಿತು. ತಮ್ಮ ಸ್ವರೂಪೋದ್ಧಾರಕ, ಗುರುಗಳಾದ ದೇವರ್ಷಿ ನಾರದರೇ ಮೈದೋರಿ ದರ್ಶನವಿತ್ತರೆಂದು ತಿಳಿದ ಶ್ರೀಗಳವರು ಭಕ್ತಿಯಿಂದ ಆ ಸ್ತಂಭಕ್ಕೆ ಸಾಷ್ಟಾಂಗವೆರಗಿದರು!
ಪಂಡಿತರು ಪರಿಜನರು “ಸ್ವಾಮಿ, ಇದು ಪುರಂದರದಾಸರ ಕಂಬವಂತೆ, ಗೃಹಸ್ಥಾಶ್ರಮಿಗಳಿಗೆ ತಾವು ನಮಿಸಬಹುದೇ?” ಎಂದಾಗ ಗುರುಗಳು ನಸುನಕ್ಕು ನಮ್ಮ ಉದ್ಧಾರಕರಾದ ಗುರುಗಳ ಮೂಲರೂಪಕ್ಕೆ ನಾವು ನಮಿಸಿದೆವು” ಎಂದು ಹೇಳಿ ದೇವರ ದರ್ಶನ ಮಾಡಿ ಬಿಡಾರಕ್ಕೆ ತೆರಳಿದರು.