ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೮೪. ಬೆಂಗಾಡಿನಲ್ಲಿ ನಡೆದ ಪವಾಡ
ಶ್ರೀಪಾಂಡುರಂಗನ ದರ್ಶನಕ್ಕಾಗಿ ಪಂಢರಪುರದ ಕಡೆ ಸಂಚಾರ ಹೊರಟ ಶ್ರೀಯವರ ಸವಾರಿಯು ಮಾರ್ಗಮಧ್ಯದಲ್ಲಿ ಒಂದು ಬೆಂಗಾಡು ತಲುಪಿತು. ಬಿಸಿಲಿನ ತಾಳ ಹೇಳಲಸದಳ, ಗಿಡಮರ, ಕುಂಟೆ, ಬಾವಿ, ಕೆರೆ ಯಾವುದೂ ಇಲ್ಲದ ಆ ದಾರಿಯಲ್ಲಿ ಸಂಚಾರ ಹೊರಟವರೆಲ್ಲ ಬಿಸಿಲಿನಬೇಗೆ, ತೃಷೆಯಿಂದ ಬಳಲಿದ್ದಾರೆ. ಶ್ರೀಯವರೊಡನೆ ನೂರಾರುಜನ ಕುಟುಂಬಸಹಿತರಾಗಿ ಪ್ರಯಾಣ ಬೆಳೆಸುತ್ತಿದ್ದಾರೆ. ಇಂತಹ ಸಮಯದಲ್ಲಿ ದ್ವಾರಪಾಲಕನೊಬ್ಬನ ಗರ್ಭಿಣಿ ಮಡದಿಗೆ ಪ್ರಸವವೇದನೆ ಪ್ರಾರಂಭವಾಯಿತು. ಹೆಣ್ಣುಮಕ್ಕಳು ಭಯದಿಂದ ಕಂಗಾಲಾದರು. ದ್ವಾರಪಾಲಕನು ಭೀತನಾಗಿ ಗುರುಗಳು ಮಂಡಿಸಿದ್ದ ಮೇನೆಯ ಬಳಿಗೆ ಓಡಿಬಂದು ಅಡ್ಡ ಬಿದ್ದು ವಿಷಯಹೇಳಿಕೊಂಡು ಗೋಳಾಡಿದ. “ಗುರುದೇವ! ನನ್ನ ಮಡದಿಗೆ ಪ್ರಸವವೇದನೆ ಪ್ರಾರಂಭವಾಗಿದೆ. ನೀರು-ನೆರಳಿಲ್ಲದ ಈ ಬೆಂಗಾಡಿನಲ್ಲಿ ನನ್ನ ಪತ್ನಿ ಪ್ರಸವಿಸಿದರೆ ಗತಿಯೇನು ? ಜೀಯಾ, ಬಡವನಮೇಲೆ ಕರುಣೆದೋರಿ ಕಾಪಾಡಬೇಕು” ಎಂದು ಕಣ್ಣೀರಿಟ್ಟು ಪ್ರಾರ್ಥಿಸಿದ. ಶ್ರೀಯವರು ಅದನ್ನಾಲಿಸಿ ಮರುಗಿದರು. “ಹೆದರಬೇಡ, ಶ್ರೀಹರಿವಾಯುಗಳು ನಿನ್ನ ಪತ್ನಿಯನ್ನೂ ಜನಿಸಲಿರುವ ಪುತ್ರನನ್ನೂ ರಕ್ಷಿಸುವರು” ಎಂದು ಮೇನೆಯಿಂದಿಳಿದು ದ್ವಾರಪಾಲಕನ ಮಡದಿ ಕುಳಿತಿದ್ದ ಗಾಡಿಯ ಬಳಿಗೆ ಬಂದು ಆಕೆಯನ್ನು ಕೃಪಾದೃಷ್ಟಿಯಿಂದೀಕ್ಷಿಸಿ “ಮಗಳೇ ! ಭಯಪಡಬೇಡಮ್ಮ, ಮೂಲರಾಮ ಸುಖಪ್ರಸವವಾಗುವಂತೆ ಅನುಗ್ರಹಿಸುವನು!” ಎಂದು ಹೇಳಿ ಕರದಲ್ಲಿದ್ದ ಜಲಪೂರ್ಣ ಕಮಂಡಲುವನ್ನು ಬಲಕರದಿಂದ ಸ್ಪರ್ಶಿಸಿ ಮಂತ್ರೋಚ್ಚಾರಣೆ ಮಾಡುತ್ತಾ ಧ್ಯಾನಿಸಹತ್ತಿದರು.
ಶ್ರೀಗಳವರ ಕರದಲ್ಲಿದ್ದ ಕಮಂಡಲದಿಂದ ಇದ್ದಕ್ಕಿದ್ದಂತೆ ನೀರುಕ್ಕಿ ಧಾರಾಕಾರವಾಗಿ ಹರಿಯಲಾರಂಭಿಸಿತು! ಶ್ರೀಯವರಿಗೆ ಒಲಿದ ಭಾಗೀರಥಿಯು ಅಕ್ಷಯಪೂರ್ಣ ಜಲಪ್ರವಾಹರೂಪವಾಗಿ ಕಮಂಡಲದಿಂದ ಹೊರಹೊಮ್ಮಿ ಹರಿದಳು ! ಆ ಮಹಿಮೆಯನ್ನು ಕಂಡು ಜನರು ಶ್ರೀಯವರ ಜಯಘೋಷ ಮಾಡಿದರು. ಶ್ರೀಮಠದವರು ಸಡಗರದಿಂದ ನಾಲ್ಕಾರು ದೊಡ್ಡ ಪಾತ್ರೆಗಳನ್ನು ತಂದು ಕಮಂಡಲುವಿನ ಕೆಳಗಿಟ್ಟರು. ಕ್ಷಣಾರ್ಧದಲ್ಲಿ ಅವೆಲ್ಲವೂ ನೀರಿನಿಂದ ತುಂಬಿತುಳಕಾಡಿದವು! ಮಠದ ಪರಿವಾರದವರು ಆ ಪವಿತ್ರ ಜಲಪಾನಮಾಡಿ ಮುದಿಸಿದರು. ಆಗ ಶ್ರೀಯವರು ಹೊದ್ದಿದ್ದ ಶಾಟಿಯನ್ನು ಆಕಾಶದತ್ತ ಚಿಮ್ಮಿದರು, ಆಶ್ಚರ್ಯ! “ಯಾವ ಆಧಾರವೂ ಇಲ್ಲದೆ ಆ ಶಾಟಿಯು ಅಂಬರದಲ್ಲಿ ನಿಂತಿತು. ಮಾತ್ರವಲ್ಲ, ವಿಚಿತ್ರವಾಗಿ ವಿಸ್ತ್ರತವಾಗಿ ಗರ್ಭಿಣಿಯು ಕುಳಿತಿದ್ದ ಗಾಡಿಯಿದ್ದ ಪ್ರದೇಶದಲ್ಲಿ ವ್ಯಾಪಕವಾಗಿ ನೆರಳುನೀಡಿತು! ಶ್ರೀಗಳವರ ಅಪ್ಪಣೆಯಂತೆ ಕೆಲಸ್ತ್ರೀಯರನ್ನು ಪ್ರಸವವೇದನೆಯಲ್ಲಿದ್ದ ಮಹಿಳೆಯ ಸಹಾಯಕ್ಕೆ ಬಿಟ್ಟು ಎಲ್ಲರೂ ದೂರಸರಿದು ನಿಂತರು. ಶ್ರೀಯವರು ಮೇನೆಯಲ್ಲಿ ಕುಳಿತರು. ದ್ವಾರಪಾಲಕನಿಗೆ ಪುತ್ರ ಜನಿಸಿದ! ವಿಷಯವರಿತ ಗುರುಗಳು ಸಮಾಧಾನ ತಾಳಿ “ಶ್ರೀಹರಿಯು ಕೂಸು ಬಾಣಂತಿಗೆ ಮಂಗಳಕರುಣಿಸಲಿ” ಎಂದು ಆಶೀರ್ವದಿಸಿ ಪ್ರಯಾಣವನ್ನು ಮುಂದುವರೆಸಿದರು. ಮಠದ ಪರಿವಾರದವರು “ಅನಾಥರಕ್ಷಕ, ಗುರುಸಾರ್ವಭೌಮರಿಗೆ ಜಯವಾಗಲಿ” ಎಂದು ಹರ್ಷಧ್ವನಿಗೈದರು. ಹೀಗೆ ಶ್ರೀಗಳವರು ಅನೇಕ ಮಹಿಮೆ ತೋರಿ ಶರಣಾಗತರನ್ನು ಪೊರೆಯುತ್ತಾ ಸಂಚಾರಕ್ರಮದಿಂದ ಪಂಢರಪುರಕ್ಕೆ ಚಿತ್ತೈಸಿದರು.