ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೮೩. ಶ್ರೀಕೃಷ್ಣ ಸಾಕ್ಷಾತ್ಕಾರ
ಶ್ರೀಗುರುರಾಜರು ಎಲ್ಲ ಭಗವದ್ರೂಪಗಳ ಉಪಾಸನೆ-ಚಿಂತನಗಳನ್ನು ಮಾಡುತ್ತಿದ್ದರೂ ಶ್ರೀಕೃಷ್ಣರೂಪದಲ್ಲಿಯೇ ಅವರಿಗೆ ವಿಶೇಷಪ್ರೇಮ-ಭಕ್ತಿ. ಅವನ ನಾಮಸ್ಮರಣದಿಂದ ಅವರಿಗೆ ಒಂದು ಬಗೆಯ ಸಾಂತನ ದೊರಕುತ್ತಿತ್ತು. ಮೈಪುಳಕಿಸುತ್ತಿತ್ತು. ಕೃಷ್ಣನ ಭುವನಮೋಹಕ ರಮಣೀಯ ರೂಪ ಸದಾ ಅವರ ಕಣ್ಣು ಮುಂದೆ ನಲಿಯುತ್ತಿತ್ತು. ಆ ನಂದಬಾಲನ ಭವರೂಪ ಅವರ ಹೃತ್ಕಮಲದಲ್ಲಿ ಒಡಮೂಡಿದಾಗ ಶರೀರದಲ್ಲಿ ವಿದ್ಯುತ್ತಂಚಾರವಾದಂತಾಗುತ್ತಿತ್ತು. ಆನಂದದ ಕಣ್ಣೀರುಹರಿದು ಕಂಠಬಿಗಿದು ಬಂದು ಪರವಶರಾಗಿ ಶ್ರೀಕೃಷ್ಣನನ್ನು ಸ್ತುತಿಸತೊಡಗುವರು. ಆಗವರಿಗೆ ಬಾಹ್ಯಪ್ರಪಂಚದ ಪರಿವೆಯೇ ಇರುತ್ತಿರಲಿಲ್ಲ. ಎಷ್ಟಾದರೂ ಕೃಷ್ಣಗ್ರಹಗೃಹೀತಾತ್ಮರಲ್ಲವೇ?
ಶ್ರೀಗಳವರ ಹಿಂದಿನ ಎಲ್ಲ ಅವತಾರಗಳನ್ನು ವಿವೇಚಿಸಿದಾಗ ಒಂದು ವಿಷಯ ಅತಿ ಸ್ಪಷ್ಟವಾಗುವುದು. ಪ್ರಹ್ಲಾದಾವತಾರದಲ್ಲಿ ಅವರನ್ನು ಅನುಗ್ರಹಿಸಿದ್ದು, ಹರಿವರ್ಷಖಂಡದಲ್ಲಿ ಮುಂದೆ ಉಪಾಸನೆಮಾಡುತ್ತಿದುದು ಶ್ರೀನರಸಿಂಹರೂಪೀ ಪರಮಾತ್ಮನಾದರೂ ಅವರನ್ನು ಭಾಗವತಾಚಾರರು 'ಕೃಷ್ಣಗ್ರಹಗೃಹೀತಾತ್ಮ' ರೆಂದೇ ವರ್ಣಿಸಿದ್ದಾರೆ. ಮುಂದೆ ವ್ಯಾಸರಾಜರಾದಾಗಲೂ ಅವರ ಉಪಾಸ್ಯಮೂರ್ತಿ ಗೋಪಾಲಕೃಷ್ಣನೇ ! ಆಗಲೂ ಅವರು ಕೃಷ್ಣಗ್ರಹಗೃಹೀತಾತ್ಮರೇ ! ಈ ಕೊನೆಯ ದೈವ ಶ್ರೀಮೂಲರಾಮ. ಆದರೂ ಗುರುರಾಜರಿಗೆ ಇಷ್ಟವಾದ ರೂಪ ಶ್ರೀಕೃಷ್ಣರೂಪವೇ! ಮೂಲರಾಮರ ಪೂಜೆಯಕಾಲದಲ್ಲಿ ಅವರ ಧ್ಯಾನಕ್ಕೆ ವಿಷಯ- ನಾಗುತ್ತಿದ್ದವನು, ಶ್ರೀಕೃಷ್ಣ ! ಕೃಷ್ಣಧ್ಯಾನರತರಾಗಿದ್ದರೆ ಅವರಿಗೆ ತಾಯಿಯ ತೊಡೆಯ ಮೇಲೆ ಕುಳಿತಷ್ಟು ನೆಮ್ಮದಿ ಆನಂದವಾಗುತ್ತಿತ್ತು. ಅವರು ಅಪರೋಕ್ಷಜ್ಞಾನಿಗಳು. ಅವರ ಬಿಂಬಮೂರ್ತಿಯೂ ಮುರಳೀಮೋಹನನೇ ಆಗಿದ್ದನು.
ಶ್ರೀಪಾದಂಗಳವರು ಬೆಳಗಿನ ಝಾವ, ಮಧ್ಯಾಹ್ನ, ಸಂಜೆ ಆಕವಾದ ಮೇಲೆ ಶ್ರೀಕೃಷ್ಣನ ಧ್ಯಾನರತರಾಗಿ ಅಸಂಪ್ರಜ್ಞಾತ ಸಮಾಧಿಯಲ್ಲಿ ಕುಳಿತುಬಿಡುತ್ತಿದ್ದರು. ಆಗ ಅವರಿಗೆ ದೂರದಲ್ಲಿ ಯಾರೋ ಮಂಜುಳ ಮುರಳಿಯನ್ನು ನುಡಿಸುತ್ತಿರುವಂತೆ ಭಾಸವಾಗಿ, ಆ ವೇಣುನಾದ ಅಲೆ ಅಲೆಯಾಗಿ ಗೆಜ್ಜೆಗಳ ಸುರಚಿರನಾದಲಹರಿಯೊಡನೆ ತೇಲಿಬಂದು ಅವರ ಕರ್ಣಕುಹರವನ್ನು ಪ್ರವೇಶಿಸುತ್ತಿತ್ತು. ಅಗ ರೋಮಹರ್ಷಣದಿಂದ ಸ್ವರ್ಗಿಯಾನಂದಾನುಭವವಾಗುತ್ತಿತ್ತು. ಇದೊಂದು ದೇವ-ಭಕ್ತರಲ್ಲಿ ನಡೆಯುತ್ತಿದ ಕಣ್ಣುಮುಚ್ಚಾಲೆ ಆಟದಂತಾಗಿತ್ತು.
ಒಂದು ದಿನ ಶ್ರೀಗಳವರು ದೃಢಸಂಕಲ್ಪಮಾಡಿದವರಂತೆ ಮಧ್ಯಾಹ್ನ ಶ್ರೀಕೃಷ್ಣನ ಮಂದಿರದಲ್ಲಿ ದೇವರ ಮುಂದೆ ಮಂಟಪದಲ್ಲಿ ಕುಳಿತು ಮುರಳೀಲೋಲವನ್ನು ವಿವಿಧ ರೀತಿಯಿಂದ ಪ್ರಾರ್ಥಿಸಿ ಶ್ರೀಕೃಷ್ಣನನ್ನು ತಮ್ಮ ಹೃದಯಮಂಟಪದಲ್ಲಿ ಧ್ಯಾನದಿಂದ ಸ್ಥಾಪಿಸಿ, ಅಸಂಪ್ರಜ್ಞಾತಸಮಾಧಿಯಲ್ಲಿ ಕುಳಿತುಬಿಟ್ಟರು, ಅವರು ಹೃದಯಕಮಲದಲ್ಲಿ ನೀಲಮೇಘಶ್ಯಾಮನು ದರ್ಶನವಿತ್ತಿದಾನೆ. ಚತುರ್ದಶಭುವನಗಳಲ್ಲಿನ ಸೌಂದರ್ಯಸಾರವೂ ಸಾಕಾರ ತಾಳಿದಂತೆ ಅದ್ಭುತ ರೂಪಲಾವಣ್ಯದಿಂದ ಕಂಗೊಳಿಸುವ ಶ್ರೀಕೃಷ್ಣದರ್ಶನಾಸಕ್ತರಾಗಿ ಗುರುಗಳು ಮೈಮರೆತಿದ್ದಾರೆ. ಆಗ ಇದ್ದಕ್ಕಿದ್ದಂತೆ ಹೃದಯಮಂಟಪದಲ್ಲಿನಲಿಯುತ್ತಿದ್ದ ಕೃಷ್ಣ ಕಣ್ಮರೆಯಾದ. ಶ್ರೀಗಳವರು ಮತ್ತೆ ಮತ್ತೆ ಧ್ಯಾನಿಸಿದರೂ ಶ್ರೀಕೃಷ್ಣರೂಪ ಅಭಿವ್ಯಕ್ತವಾಗಲಿಲ್ಲ. ವಿರಹದಿಂದ ಬಳಲಿದವರಂತೆ ಕಣ್ಣೆರೆದರು ಶ್ರೀಯವರು.
ಆಗ ಕೃಷ್ಣನ ಗರ್ಭಗುಡಿಯಿಂದ ಇ೦ಪಾದ ಕೊಳಲಿನ ನಾದ ಕೇಳಿಬಂತು. ಆಶೆಯಿಂದ ಕಣ್ಣರಳಿಸಿ ಅತ್ತ ನೋಡಿದರು. ಹಿಂದೆಂದೂ ಕೇಳದ ಕೊಳಲಿನ ಸ್ವರ್ಗಿಯ ನಾದಲಹರಿ ಅವರ ಹೃದಯವೀಣೆಯನ್ನೇ ಮೀಟುವಂತಿದೆ! ಅಬ್ಬಾ, ಅದೆಂತಹ ಅನಿರ್ವಚನೀಯ ಮಾಧುರ್ಯ! ಗರ್ಭಗುಡಿಯಲ್ಲಿ ಅಪೂರ್ವ ದಿವ್ಯಪ್ರಕಾಶ ಬೆಳದಿಂಗಳ ಕಾಂತಿಯತೆ ಮನೋಹರವಾಗಿ ಬೆಳಗುತ್ತಿದೆ, ಗುರುಗಳು ದಿವ್ಯ ಪ್ರಕಾಶಪುಂಜವನ್ನು ತದೇಕದೃಷ್ಟಿಯಿಂದ ನೋಡುತ್ತಿರುವಂತೆ ವೇಣುನಾದದೊಡನೆ “ಫಲ್, ಫಲ್ , ಫಲ್ , ಫಲೀರ್” ಎಂಬ ಗೊಲಸು-ಗೆಜ್ಜೆಗಳ, ಕಂಕಣ-ನೂಪುರಗಳ ಮಂಜುಳ ನಾದವು ಬೆರೆತು ಕರ್ಣಾನಂದವೀಯ- ಹತ್ತಿತು ! ಶ್ರೀಯವರ ಹೃದಯದಲ್ಲಿ ಆನಂದ ಶರಧಿಯುಕ್ಕೇರಿತು, ಮತ್ತೆ ಮತ್ತೆ ಕೇಳಿಬರುತ್ತಿದೆ ಮುರುಳೀನಾದ ಮತ್ತು 'ಘಲ್, ಫಲ್, ಫ್‌ಲೀ, ಘಲ್ ಘಲ್' ಎಂಬ ಮಂಜೀರದ ಮಂಜುಳದಿ೦ಚರ!
ಶ್ರೀಯವರಿಗಿನ್ನು ತಡೆಯಲಾಗಲಿಲ್ಲ. “ದೇವ ಕಮಲನಯನ, ಕಮಲಾಕಾಂತ ಕಂಸಾಂತಕ ಶ್ರೀಕೃಷ್ಣ! ದಾಸನಲ್ಲಿ ಇನ್ನು ದಯಬಾರದೇ ? ಪ್ರಭು, ಈ ಕಣ್ಣಾಮುಚ್ಚಾಲೆ ಆಟವನ್ನೇಕೆ ಆಡುತ್ತಿರುವೆ? ಪ್ರಸನ್ನನಾಗು ಭಕ್ತಬಂಧು!” ಎಂದು ಪ್ರಾರ್ಥಿಸಹತ್ತಿದರು. ವೇಣುನಾದ, ಗೆಜ್ಜೆಯ ಧ್ವನಿ, ಹತ್ತಿರವಾಗುತ್ತಿರುವಂತೆ ಭಾಸವಾಯಿತು, ಧ್ವನಿ ಕೇಳುತ್ತಿದೆಯೇ ಹೊರತು, ಸ್ವಾಮಿ ದೃಗ್ಗೋಚರವಾಗುತ್ತಿಲ್ಲ! “ಇದೇನು ಲೀಲೆ ? ನನ್ನ ಭಕ್ತಿ ಪಕ್ವವಾಗಿಲ್ಲವೇ ? ಸ್ವಾಮಿ, ಹೃದಯಮಂಟಪದಲ್ಲಿ ದರ್ಶನವೀಯುತ್ತಿದ್ದ ನೀನಿಂದು ಅಲ್ಲಿಯೂ ಕಣ್ಮರೆಯಾದೆ! ಭಕ್ತನೊಡನೆ ಆಟವಾಡುತ್ತಿರುವೆಯಾ? ಮುರಳೀಮೋಹನ! ದಯಮಾಡು ನಿನ್ನ ಪಾದದರ್ಶನದಿಂದ ನನ್ನನ್ನು ಕೃತಾರ್ಥನನ್ನಾಗಿ ಮಾಡು” ಎಂದು ಬಿನ್ನವಿಸುತ್ತಾ ಪಕ್ಕದಲ್ಲಿದ್ದ ತಮ್ಮ ವೀಣೆಯನ್ನೆತ್ತಿ ತೊಡೆಯ ಮೇಲಿಟ್ಟುಕೊಂಡು ನುಡಿಸಹತ್ತಿದರು.
ಹೃದಯವನ್ನು ದ್ರವಿಸುವ ಭೈರವೀರಾಗವಾಹನಿಯು ವೀಣೆಯಿಂದ ಹೊರಹೊಮ್ಮಿತು. ಮೈಮರೆತು ಗುರುಗಳು ವೀಣೆ ನುಡಿಸುತ್ತಿದ್ದಾರೆ. ಆಶ್ಚರ್ಯ! ಕೊಳಲಿನಿಂದಲೂ ಶ್ರೀಯವರ ಭೈರವಿ ಆಲಾಪನೆಯನ್ನನುಸರಿಸಿ ಮಂಜುಳಾಲಾಪ ಕೇಳಿಬರಹತ್ತಿತು! ಶ್ರೀಗುರುರಾಘವೇಂದ್ರರ ಕಣ್ಣುಗಳಿಂದ ಆನಂದಾಶ್ರು ಹರಿಯತೊಡಗಿತು. ಭಕ್ತಿಪರವಶರಾಗಿ ವೀಣೆ ನುಡಿಸುತ್ತಿದ್ದ ಗುರುಗಳ ವದನಾರವಿಂದದಿಂದ ಒಂದು ಅಮರ ಕೃತಿ ತಾನೇತಾನಾಗಿ ಹೊರಹೊಮ್ಮಿತು !
ಇಂದು ಎನಗೆ ಗೋವಿಂದ ನಿನ್ನಯ ಪಾದಾರ-
ವಿಂದವ ತೋರೋ ಮುಕುಂದ ಇಂದಿರಾರಮಣ
ಶ್ರೀಯವರು ಮತ್ತೆ ವೀಣೆಯನ್ನು ನುಡಿಸುತ್ತಾ ಮೈಮರೆತು ಹಾಡಿದರು -
ಇಂದು ಎನಗೆ ಗೋವಿಂದ ನಿನ್ನಯ ಪಾದಾರ
ವಿಂದವ ತೋರೋ ಮುಕುಂದ ಇಂದಿರಾರಮಣ ||
ಏನಾಶ್ಚರ್ಯ! ಮಿಂಚಿನ ಗೊಂಚಲುಗಳನ್ನೇ ತೂಗಿಬಿಟ್ಟಂತಹ ದಿವ್ಯಪ್ರಕಾಶದಲ್ಲಿ ಎರಡು ಅಪ್ರಾಕೃತ ಸುಂದರ ಪಾದಗಳು ಶ್ರೀಯವರ ದೃಷ್ಟಿಗೆ ಗೋಚರಿಸಿದವು! ಇಂದೀವರಘನಶ್ಯಾಮಸುಂದರ ನಂದನಂದನನ ಪಾದಾರವಿಂದ ದುದ್ದ ಸಂದರ್ಶನವಾದೊಡನೆ ಆ ಯತಿಚಂದ್ರಮರ ಬಂಧುರ ಹೃದಯಾರವಿಂದದಲ್ಲಿ ಶ್ರೀಕೃಷ್ಣತತ್ವದ ಸಾಕ್ಷಾತ್ಕಾರವಾದಂತಾಯಿತು. ಆ ಸುಂದರ ಭಾವನಾತರಂಗಗಳ ಮಂಗಳ ಮಡುವಿನಲ್ಲಿ ಮಿಂದು ಅಮಂದಾನಂದತುಂದಿಲರಾದರು ಶ್ರೀರಾಘವೇಂದ್ರಮುನೀಂದ್ರರು! ಅತಿಶಯ ಸಂಭ್ರಮೋಲ್ಲಾಸಗಳಿಂದ ಮೈಮರೆತ ಅವರಿಗಾದ ಆನಂದ ಅವರ್ಣನೀಯ. ತಮ್ಮ ಕರೆಗೆ ಓಗೊಟ್ಟು ಬಾಲಗೋಪಾಲನೊಲಿದು ತನ್ನ ಸುಂದರ ಪಾದಗಳನ್ನು ಪ್ರದರ್ಶಿಸಿದನೆಂದು ಭಕ್ತಿನಮಾಂಗರಾಗಿ ಪ್ರಾರ್ಥಿಸಹತ್ತಿದರು ಆ ಭಕ್ತರಾಜರು! ಆಗ ಅವರ ಮೈಯಲ್ಲಿ ರೋಮಪುಲಕ, ನೇತ್ರಗಳಲ್ಲಿ ಆನಂದಬಾಷ್ಪಗಳೇಕಕಾಲದಲ್ಲಿ ಪ್ರಕಟವಾದವು.
ಸುಂದರ ವದನನೇ ನಂದಗೋಪಿಯ ಕಂದ |
ಮಂದರೋದ್ಧಾರ ಆನಂದ ಇಂದಿರಾರಮಣ || ಅ.ಪ ||
ಅಚ್ಚರಿಯ ಮೇಲಚ್ಚರಿ! ಎರಡು ಪುಟ್ಟಪಾದಗಳ ಜೊತೆಗೆ ಈ ಕೃಷ್ಣನ ಸುಂದರ ವದನಾರವಿಂದವೂ ಗುರುಗಳ ದೃಷ್ಟಿಗೆ ಗೋಚರಿಸಿತು! ಶ್ರೀಗಳವರಿಗೆ ಅಪಾರ ಹರುಷವಾಯಿತು. “ದೇವ, ದಯಾಘನ, ಧನ್ಯನಾದೆ” ಎಂದು ಸ್ತುತಿಸಹತ್ತಿದರು. ವೀಣೆಯ ಝೇಂಕಾರ, ಮಧುರ ಗಾನ ವೇಣುಲೋಲನ ಮುರಳೀವಾದನ ಕಂಕಣದ ಕಿಣಿಕಿಣಿ, ಗೆಜ್ಜೆಗಳ ಘಲ್, ಘಲ್ ಎಂಬ ಮಂಜುಳ ನಿನಾದ, ಇವೆಲ್ಲ ಒಂದಾಗಿ ಅಲ್ಲೊಂದು ಗಂಧರ್ವಲೋಕವೇ ಸೃಷ್ಟಿಯಾದಂತಾಗಿ ಅಮರಗಾನದಿಂದ ಆ ಪ್ರದೇಶವೆಲ್ಲಾ ತುಂಬಿಹರಿಯಿತು.
ನೊಂದೆನಯ್ಯಾ ಭವ ಬಂಧನದೊಳು ಸಿಲುಕಿ |
ಮುಂದೆ ದಾರಿಗಾಣದೆ ಕುಂದಿದೆ ಜಗದೊಳು ||
ಕಂದ ನಾನೆಂದೆನ್ನ ಕುಂದುಗಳನೆಣಿಸದೆ |
ತಂದೆ! ಕಾಯೋ ಕೃಷ್ಣ! ಕಂದರ್ಪಜನಕನೇ || 1 ||
ಗುರುಗಳು ವೀಣೆಯನ್ನು ನುಡಿಸುತ್ತಾ ಆನಂದಪರವಶರಾಗಿ ಮೈಮರೆತು ಹಾಡುತ್ತಿದ್ದಾರೆ. ಬಾಲಗೋಪಾಲ ತನ್ನ ಅಪ್ರಾಕೃತ ಮಂಗಳ ಸ್ವರೂಪವನ್ನು ಪೂರ್ಣವಾಗಿ ಅಭಿವ್ಯಕ್ತಗೊಳಿಸಿ, ಮಂದಹಾಸಬೀರುತ್ತಾ ಮುರುಳಿಯನ್ನು ನುಡಿಸುತ್ತಾ ಶ್ರೀಯವರ ಗಾನ-ತಾಳಗಳ ಧಾಟಿಯನ್ನನುಸರಿಸಿ ನರ್ತಿಸಲಾರಂಭಿಸಿದ!
ಮೂಢತನದಿ ಬಲು ಹೇಡಿ ಜೀವನನಾಗಿ |
ದೃಢಭಕುತಿಯನ್ನು ಮಾಡಲಿಲ್ಲವೋ ಹರಿಯೇ ||
ನೋಡಲಿಲ್ಲವೋ ನಿನ್ನ ಪಾಡಲಿಲ್ಲವೋ ಮಹಿಮೆ |
ಗಾಡಿಕಾರ ಕೃಷ್ಣ ಬೇಡಿಕೊಂಬೆನೋ ಸ್ವಾಮಿ || 2 ||
ಒಂದು, ಎರಡು, ಮೂರನೆಯ ಕಾಲಗಳಲ್ಲಿ ಭರದಿಂದ ಮುಂದುವರೆಯಿತು ವೀಣಾವಾದನ, ಗುರುಗಳ ಮುಖಕಮಲದಿಂದ ವಿವಿಧ ತಾನ, ಸ್ವರ, ಮೂರ್ಛನಗಳೊಡನೆ ನಾದಲಹರಿಯು ಹೊರಹೊಮ್ಮಿ ಎಲ್ಲೆಡೆ ವ್ಯಾಪಿಸುತ್ತಿದೆ. ಅದೊಂದು ಸವಾಲೋ ಎಂಬಂತೆ ಬಾಲಕೃಷ್ಣನೂ ಅದನ್ನನುಸರಿಸಿ ವೇಣುಗಾನಮಾಡುತ್ತಾ ಚಿತ್ರವಿಚಿತ್ರ ರೀತಿಯಲ್ಲಿ ನರ್ತಿಸುತ್ತಿದ್ದಾನೆ !
ಧಾರುಣಿಯೊಳು ಭೂಭಾರಜೀವನನಾಗಿ |
ಮೇರೆದಪ್ಪಿ ನಡೆದೆ ಸೇರಿದೆ ಕುಜನರ ||
ಆರೂ ಕಾಯುವರಿಲ್ಲ ಸೇರಿದೆ ನಿನಗಯ್ಯ |
'ಧೀರ ವೇಣುಗೋಪಾಲ ! ಪಾರಗಾಣಿಸೋ ಸ್ವಾಮಿ || ೩ ||
ಶ್ರೀಯವರ ಮುಖದಿಂದ ಹೊರಬಂದ ಶ್ರೀಕೃಷ್ಣಸ್ತುತಿರೂಪಪದವು “ಧೀರ ವೇಣುಗೋಪಾಲ” ಎಂಬ ಅಂಕಿತದಿಂದ ಪೂರ್ಣವಾಯಿತು. ಕೂಡಲೇ ವೀಣೆಯಿಂದ ವಿವಿಧ ಸ್ವರಗಳ ತುಂಬುಕಂಠದ ನಾದದೊಡನೆ ಬೆರತು ಸ್ವರ್ಗಿಯಗಾನವಾಹಿನಿ ಹರಿಯತೊಡಗಿತು. ಒಮ್ಮೆ ಗುರುಗಳು ವೀಣೆ ನುಡಿಸುವರು. ನಂತರ ಶ್ರೀಕೃಷ್ಣ ಮುರುಳಿಯನ್ನು ನುಡಿಸುವನು. ಕೂಡಲೇ ಶ್ರೀಗಳವರು ಹಾಡುವರು-ಹೀಗೆ ಸಾಗಿತು ಆ ಅಮರಗಾನ-ದೇವದೇವನ ನರ್ತನ! ಅಹಹ! ಆ ಸುರಚಿರ, ರಮಣೀಯ ಸನ್ನಿವೇಶ ಈಶ-ದಾಸರ ಪ್ರೇಮಾಲಾಪರೂಪ ವೀಣಾ-ಮುರಳಿಗಳ ದ್ವಂದ್ವಾಲಾಪ, ನರ್ತನಗಳು ಅಪೂರ್ವ, ಅಮೋಘ, ಅವರ್ಣನೀಯ!
ಮಂದಹಾಸದಿಂದ ನರ್ತಿಸುತ್ತಿರುವ ಶ್ರೀಬಾಲಕೃಷ್ಣ ಮನ್ಮಥನನ್ನು ನಾಚಿಸುವ ಜಗನ್ನೋಹಕ ಸೌಂದರ್ಯದಿಂದ ರಾಜಿಸುತ್ತಿದ್ದಾನೆ. ನೀಲನೀರದ ಕಾಂತಿವಿರಾಜಿತನಾದ ಬಾಲಕೃಷ್ಣನ ಭವ್ಯಾಕೃತಿಯನ್ನು ಎವೆಯಿಕ್ಕದೆ ನೋಡುತ್ತಿದ್ದಾರೆ. ಯತಿರಾಜರು ದುಂಡಾದ ಮುಖ, ವಿಶಾಲಫಾಲಪ್ರದೇಶ, ಹಣೆಯಲ್ಲಿ ಬೆಳಗುವ ಕಸ್ತೂರಿತಿಲಕ, ಅತ್ಯಂತ ಆಕರ್ಷಕ ಚಂಚಲ ನಯನಗಳು, ಅದರ ಮಿಂಚಿನ ನೋಟ, ಸಂಪಿಗೆಯ ಮೊಗ್ಗವನ್ನು ಹೋಲುವ ನಾಸಿಕ, ಪುಟ್ಟ ಬಾಯಿ, ಚೆಂದುಟಿಗಳಲ್ಲಿ ಅರಳಿದ ಮಂದಹಾಸ, ತಂಗಿರಣನ ಬೆಳದಿಂಗಳನ್ನು ನಾಚಿಸುತ್ತಿದೆ, ಉಂಗುರುಂಗುವಾಗಿ ಕಂಗೊಳಿಸುವ ನೀಲಕೇಶರಾಶಿಯಿಂದ ಬೆಡಗುಗೊಂಡಿರುವ ಶಿರಪ್ರದೇಶ, ಸ್ವಲ್ಪ ಬಲಕ್ಕೆ ಬಾಗಿದಂತೆ ತಲೆಯ ಮೇಲೆ ಕೇಶಗಳನ್ನು ಹೆಣೆದು ಕಟ್ಟಿರುವ ಶಿಖೆ! ಅದಕ್ಕೆ ಸುತ್ತಿರುವ ನವರತ್ನಸರ ಜಳಪುಸುತ್ತಿದೆ. ಶಿಖೆಯಲ್ಲಿ ಪ್ರಕಾಶಿಸುತ್ತಿರುವ ಚೂಡಾಮಣಿ! ಶಿಖೆಯ ಗಂಟಿನಲ್ಲಿ ಶೋಭಿಸುತ್ತಿರುವ ಮಯೂರ ಪಿಂಛ! ಕಿವಿಗಳಲ್ಲಿ ರತ್ನಖಚಿತ ಮಕರಕುಂಡಲಗಳು, ಕಂಠ-ವಕ್ಷಸ್ಥಳಗಳಲ್ಲಿ ಮುಕ್ತಾಮಾಲೆಗಳು, ವೈಜಯಂತೀಮಾಲೆ, ವನಮಾಲೆಗಳು ವಿರಾಜಿಸುತ್ತಿವೆ. ತೋಳುಗಳಲ್ಲಿ ವೈಢರಖಚಿತ ಭುಜಕೀರ್ತಿಗಳು, ಕರಗಳಲ್ಲಿ ಮುತ್ತು-ಮಾಣಿಕ್ಯ-ರತ್ನಖಚಿತ ಕಂಕಣಗಳು, ನವರತ್ನದುಂಗುರದಿಂದ ಬೆಡಗುಗೊಂಡ ಬೆರಳುಗಳು, ಸುವರ್ಣಮಣಿಮಯ ಪೀತಾಂಬರವನ್ನು ಸ್ವಾಮಿ ವೀರಕಚ್ಚೆ ಹಾಕಿ ಉಟ್ಟಿದಾನೆ! ನಡುವಿನಲ್ಲಿ ನವರತ್ನ ಮತ್ತು ಮಾಣಿಕ್ಯಗಳಿಂದೊಪ್ಪುವ ವಡ್ಯಾಣ (ನಡುಪಟ್ಟಿ), ಕಾಲುಗಳಲ್ಲಿ ರತ್ನದ ಕಾಲ್ಗಡಗಗಳು, ಸುವರ್ಣಮಣಿಮಯ ಗೆಜ್ಜೆಗಳು, ರತ್ನಮಯ ಮಂಜೀರ, ಭುಜದ ಮೇಲೆ ಇಳಿಬಿಟ್ಟಿರುವ ಸುಂದರ ಕವಚ'ಮಯ ಮೇಲ್ವಾಸ! ತುಟಿಗಳಂಚಿನಲ್ಲಿ ಶೋಧಿಸುವ ಕೊಳಲು! ಇಂತು ಲೋಕಮೋಹಕ ರೂಪ-ಲಾವಣ್ಯ-ಶೃಂಗಾರಗಳಿಂದ ಶ್ರೀಯವರನ್ನು ಆನಂದಾಂಬುಧಿಯಲ್ಲಿ ಓಲಾಡಿಸುತ್ತಾ ಪರಮಪಾವನ ಪಾದವಿನ್ಯಾಸಗಳಿಂದ ನರ್ತಿಸುತ್ತಿದ್ದಾನೆ ಪರಾತ್ಪರ! ನರ್ತಿಸುತ್ತಿದ್ದ ಶ್ಯಾಮಸುಂದರ ತಟ್ಟನೆ ನಿಂತುಬಿಟ್ಟ ! ಅವನ ಮುಖದಿಂದ ವೀಣೆಯ ಇಂಚರವನ್ನು ನಾಚಿಸುವ ನುಡಿಮುತ್ತುಗಳುದರಿದವು - ಅಬ್ಬಾ ನೀನೆಂಥ ಸನ್ಯಾಸಿ ? ಬಹು ಹಟಿಯಪ್ಪಾ ನೀನು! ಬಾಲಕನಾದ ನನ್ನನ್ನು ಎಷ್ಟು ಹೊತ್ತು ಕುಣಿಸುವುದು ? ನೋಡು - ನನ್ನ ಪುಟ್ಟಪಾದಗಳೆಷ್ಟು ನೋವುತ್ತಿರುವುದು ?
ಗುರು : “ಶ್ರುತಂ ಪ್ರೋತವಂ!” ನೀನು ಬಾಲಕನಲ್ಲವೇ ? “ಅಣೋರಣೀಯಾನ್ ಮಹತೋ ಮಹೀಯಾನ್ ಎಂದು ಶ್ರುತಿಗಳು ಸಾರುವ ಮಹಾಮಹಿಮನಾದ ನೀನು ಬಾಲಕನೇ ಕೃಷ್ಣ? ಅಂದು ಬಲಿಯಿಂದ ಮೂರಡಿ ಭೂದಾನ ಪಡೆದು ಮೂರು ಲೋಕಗಳನ್ನೂ ವ್ಯಾಪಿಸಿ, ಬಲಿಯನ್ನು ಪಾತಾಳಕ್ಕೊತ್ತಿದ ಈ ಪಾದಗಳು ಪುಟ್ಟಪಾದಗಳೇನು? ಕಾಳಿಯ ಹೆಡೆಯ ಮೇಲೆ ನರ್ತಿಸಿ ಅವನನ್ನು ಮರ್ದಿಸಿದ್ದು ಇದೇ ಪುಟ್ಟ ಪಾದಗಳೇ ಅಲ್ಲವೇ? ಕಾಳಿಂಗನನ್ನು ಮರ್ದಿಸಿದಾಗ ನಿನ್ನಿ ಪಾದಗಳಿಗೆ ನೋವಾಗಲಿಲ್ಲವೇ ? ಪ್ರಭು! ಭಕ್ತನೊಡನೆ ಇದೇನು ಸರಸವಾಡುತ್ತಿರುವೆ!
ಕೃಷ್ಣ: (ಹುಬ್ಬೇರಿಸಿ) ಓಹೋ! ಏನೋ ಪಾಪ, ಪ್ರಾರ್ಥಿಸುತ್ತಿದ್ದಾನಲ್ಲ ಎಂದು ಮೈದೋರಿದರೆ ನನ್ನನ್ನೇ ಛೇಡಿಸುವೆಯಲ್ಲ! ಈ ಭಕ್ತರ, ಅದರಲ್ಲೂ ಸನ್ಯಾಸಿಗಳ ಸಹವಾಸ ಬಹು ಕಷ್ಟ! ನೋಡು, ನನ್ನ ಪಾದಗಳೆಷ್ಟು ನೋಯುತ್ತಿದೆ.
ಗುರುಗಳು : “ದೇವ ನಿನ್ನ ಪಾದಗಳು ನೋಯುವುದೇ ? ಬಾ ಪ್ರಭು, ಪಾದಸೇವೆ ಮಾಡಲು ಈ ದಾಸ ಸಿದ್ಧನಿದ್ದಾನೆ” ಎಂದು ಹೇಳಿ ಬಾಲಗೋಪಾಲನ ಪುಟ್ಟಪಾದಗಳ ಮೇಲೆ ಶಿರವಿರಿಸಿ, ನಮಿಸಿ, ಅನಂತರ ಮಾಧವನನ್ನು ಮಡಿಲಲ್ಲಿ ಮಂಡಿಸಿಕೊಂಡು ಮುದುಕೃಷ್ಣನ ಮೃದುಪಾದಗಳನ್ನು ಮೆಲ್ಲನೆ ಒತ್ತಲಾರಂಭಿಸಿದರು! ಮಾಧವನ ಪಾವನ ಪಾದಸ್ಪರ್ಶದಿಂದ ಪರಮಹಂಸಕುಲತಿಲಕರು ಪರವಶರಾದರು. ಮೈರೋಮಾಂಚನಗೊಂಡಿತು. ಹೃದಯದಲ್ಲಿ ಆನಂದಲಹರಿಯುಕ್ಕೇರಿತು. ಬಾಲಕೃಷ್ಣ ಗುರುಗಳ ಕಂಠವನ್ನು ಕರಗಳಿಂದ ಬಳಸಿ ಆಲಿಂಗಿಸಿ ನಸುನಗುತ್ತಾ ಅಹಹ ! ಈಗ ಸ್ವಲ್ಪ ವಾಸಿ, ಕಾಲುನೋವು ಕಡಿಮೆಯಾಯಿತು. ಇನ್ನು ಸಾಕು ಬಿಡು ಮಹರಾಯ” ಎಂದನು.
ಗುರು : (ನಗುತ್ತಾ) ಸುದೈವದಿಂದ ಸಿಕ್ಕಿರುವ ಈ ಪಾದಗಳನ್ನು ಬಿಡುವುದಿಲ್ಲ, ಖಂಡಿತ ಬಿಡಲಾರೆ.
“ಬಿಡೆ ನಿನ್ನ ಪಾದವ ಪೊಡವಿಗೊಡೆಯ ದೇವ |
ಅಡಿಗಡಿಗೆನಗಿದರೆ ನಿಡುಸೇವೆ ಕೊಡೋ ಸ್ವಾಮಿ '
ಕೃಷ್ಣ : ಇದೇನಪ್ಪಾ, 'ಹಾಡಿದೇ ಹಾಡೋ ಕಿಸಬಾಯಿದಾಸ' ಎಂಬಂತೆ ಹೇಳುತ್ತಿರುವೆ! ಈ ಭಕ್ತರ ನಡುವಳಿಕೆ ಅತಿ ವಿಚಿತ್ರವಪ್ಪಾ.
ಗುರು : ದೇವ, ಅಂದು ತಂದೆಯು ಭಯದಿಂದ ಕೂಗಿದಾಗ ಓಡಿಬಂದ ನೀನಲ್ಲವೇ 'ಕಿಸಬಾಯಿದೇವ! ನಿನ್ನ ಸೇವಕರಾದ ನಾವು “ಕಿಸಬಾಯಿದಾಸರಲ್ಲವೇ ? ನಾವು ಹಾಡಿದನ್ನಲ್ಲವೇ ಹಾಡುತ್ತಿರಬೇಕು, ದೇವ, ನೀ ನನಗೆ ಬಂದು ವರ ನೀಡುವವರೆಗೆ ಈ ಪಾದಗಳನ್ನು ಬಿಡುವುದಿಲ್ಲ!
ಕೃಷ್ಣ : (ಕಣ್ಣರಳಿಸಿ ನೋಡುತ್ತಾ) ನಿನಗೇನು ವರ ಕೊಡಬೇಕು ?
ಗುರು : ನಾನು ಕರೆದಾಗ ಬಂದು ಪೊರೆಯಬೇಕು. ನಾನು ಕೈಗೊಂಡಿರುವ ಲೋಕಕಲ್ಯಾಣಕಾರಕ್ಕೆ ನನ್ನ “ಪ್ರತೀತವ್ರತಕ್ಕೆ ನಿನ್ನ ಸಂಪೂರ್ಣ ಅನುಗ್ರಹ ದೊರಕುತ್ತಿರಬೇಕು. ಎಡೆಬಿಡದೆ ನನ್ನನ್ನು ಕಾಯುತ್ತಿರಬೇಕು. ನನ್ನೀ ಕೋರಿಕೆಯನ್ನು ಪೂರ್ಣಮಾಡುವುದಾಗಿ ಮಾತುಕೊಡು. ಗೋವಿಂದ !
ಕೃಷ್ಣ : ಭಕ್ತಾಗ್ರಣಿ! ನಿನ್ನಲ್ಲೇ ಸದಾ ಸನ್ನಿಹಿತನಾಗಿರುವ ನಾನು ನಿನ್ನನ್ನು ಕೈಬಿಡುವೆನೇ ? ನನ್ನ ಸಂಕಲ್ಪದಂತೆಯೇ ಅವತರಿಸಿದ ನಿನ್ನಿಂದ ಜಗತ್ತಿನಲ್ಲಿ ಅಮೋಘ ಕಾರ್ಯಗಳನ್ನೂ, ಲೋಕಕಲ್ಯಾಣವನ್ನೂ ಮಾಡಿಸಿ ಕೀರ್ತಿಕೊಡುತ್ತೇನೆ, ಈಗ ನಿನಗೆ ತೃಪ್ತಿಯಾಯಿತೆ? ಯತಿರಾಜ! ಭರದಿಂದ ಜಗದ ಜನತೆಯನ್ನು ಪೊರೆದು ಸದಾ ಲೋಕಕಲ್ಯಾಣ ಮಾಡುತ್ತಾ ಜಗನ್ಮಾನನಾಗು! ನಿನಗೆ ಮಂಗಳವಾಗಲಿ!
ಹೀಗೆ ಆಜ್ಞಾಪಿಸಿ ಶ್ರೀಯವರ ತೊಡೆಯಿಂದ ಮೇಲೆದ್ದು ಮಂಥಾನದಾಮಕರನಾಗಿ, ವೇಣುಗೋಪಾಲನು ಅಭಯಪ್ರದಾನ ಮಾಡಿ ಗುರುಗಳು ಆನಂದದಿಂದ ನೋಡುತ್ತಿರುವಂತೆಯೇ ಅದೃಶ್ಯನಾದನು! ಪರಮಾತ್ಮನ ಸಾಕ್ಷಾತ್ಕಾರದಿಂದ ಗುರುಗಳು ಹರುಷವಾರುಧಿಯಲ್ಲಿ ಮುಳುಗೇಳಹತ್ತಿದರು. ಅವರ ಮನದಲ್ಲಿ ಮಂಥಾನದಾಮಕರನಾದ ವೇಣುಗೋಪಾಲನ ದಿವ್ಯಮಂಗಳ ಸ್ವರೂಪ ಅಚ್ಚಳಿಯದೆ ನೆಲೆನಿಂತುಬಿಟ್ಟಿತು! ಆ ದಿವ್ಯರೂಪದಂತೆ ಗುರುಗಳು ಮಂಥಾನದಾಮಕರನಾದ ವೇಣುಗೋಪಾಲನ ಸುವರ್ಣವಿಗ್ರಹವನ್ನು ನಿರ್ಮಿಸಿ, ಅಂದಿನಿಂದ ತಮ್ಮ ಇಷ್ಟದೈವವಾಗಿ ಮಹಾಸಂಸ್ಥಾನದ ಪ್ರತಿಮೆಗಳೊಡನೆ ಪೂಜಿಸಲಾರಂಭಿಸಿದರು.
ಶ್ರೀಗುರುಸಾರ್ವಭೌಮರು ಉಡುಪಿಗೆ ಬಂದ ಕಾರ್ಯ ಯಶಸ್ವಿಯಾದ್ದರಿಂದ ಸಂತುಷ್ಟರಾಗಿ, ಸರ್ವಯತಿವರರಿಂದ ಬೀಳ್ಕೊಂಡು ಅಲ್ಲಿಂದ ಮುಂದಿನ ದಿಗ್ವಿಜಯಕ್ಕಾಗಿ ಸಂಚಾರಕ್ರಮದಿಂದ ರಾಮನಾಥಪುರಕ್ಕೆ ಬಂದು, ತುಲಾಮಾಸ ಪ್ರಯುಕ್ತ ಕೆಲದಿನ ಅಲ್ಲಿ ವಾಸಮಾಡಿ ಕಾವೇರಿ ನದಿಯಲ್ಲಿ ಸ್ನಾನ-ದಂಡೋದಕಗಳಿಂದ ಶಿಷ್ಯಮಂಡಲಿಯನ್ನು ಅನುಗ್ರಹಿಸಿ, ಅಲ್ಲಿಂದ ಶ್ರೀಪಾಂಡುರಂಗನ ದರ್ಶನಕ್ಕಾಗಿ ಪಂಢರಪುರದ ಕಡೆ ಸಂಚಾರ ಹೊರಟರು.