|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೮೨. ಉಡುಪಿಯಲ್ಲಿ ವಾಸ ಗ್ರಂಥರಚನೆ

ಹಿಂದೆ ವಿಜಯೀಂದ್ರರಿಗೆ ಸ್ನೇಹದ ಕಾಣಿಕೆಯಾಗಿ ಶ್ರೀವಾದಿರಾಜರು ನೀಡಿದ್ದ ಕನಕನ ಕಿಂಡಿಯ ಎದುರಿಗಿರುವ ಮಠವನ್ನು ಗುರುಗಳ ಅಣತಿಯಂತೆ ಸುಣ್ಣ-ಬಣ್ಣಗಳಿಂದ ಅಲಂಕರಿಸಿ ಸಿದ್ಧಪಡಿಸಲಾಯಿತು. ಶ್ರೀಗುರುರಾಜರು ಉಡುಪಿಗೆ ದಯಮಾಡಿಸಿದರು. ರಜತಪೀಠಪುರದ ಗ್ರಾಮಸೀಮೆಯಲ್ಲಿ ಶ್ರೀಪರಾಯ ಮಠದ ಮುಖ್ಯಾಧಿಕಾರಿಗಳು, ಅಷ್ಟಮಠದ ಉಳಿದ ಏಳು ಜನ ಪೀಠಾಧೀಶ್ವರ ಪ್ರತಿನಿಧಿಗಳು, ಪಂಡಿತ ವಿದ್ಯಾರ್ಥಿಗಳು, ಕ್ಷೇತ್ರವಾಸಿಗಳಾದ ಲೌಕಿಕ-ವೈದಿಕರು, ಸುತ್ತಮುತ್ತಲಿನ ಗ್ರಾಮಗಳ ಆಸ್ತಿಕರು ಸಹಸ್ರಾರು ಸಂಖ್ಯೆಯಲ್ಲಿ ಸೇರಿ ಸಕಲವಾದ-ವೇದಘೋಷ, ಪೂರ್ಣಕುಂಭಗಳೊಡನೆ ಶ್ರೀಗುರುರಾಜರನ್ನು ಸ್ವಾಗತಿಸಿದರು. ಶ್ರೀಗುರುರಾಜರು ಕುಶಲಪ್ರಶ್ನೆ ಮಾಡಿದ ಮೇಲೆ ಶ್ರೀಕೃಷ್ಣಮಠದ ಸುವರ್ಣಪಾಲಿಕೆಯಲ್ಲಿ ಶ್ರೀಗುರುರಾಜರನ್ನು ಮಂಡಿಸಿ ವೈಭವದಿಂದ ಮೆರವಣಿಗೆ ಹೊರಡಿಸಿ ಶ್ರೀಕೃಷ್ಣಮಠಕ್ಕೆ ಕರೆತರಲಾಯಿತು. ಭಕ್ತಜನರು ಬೀದಿ-ಬೀದಿಗಳಲ್ಲಿ ಗುರುಗಳಿಗೆ ಲಾಜಾಪುಷ್ಪಗಳಿಂದ ವರ್ಷಣ ಮಾಡಿ, ಆರತಿಯೆತ್ತಿ, ಪುಷ್ಪಹಾರ ಸಮರ್ಪಿಸಿ ಜಯಜಯಕಾರದಿಂದ ಗೌರವಿಸುತ್ತಿದ್ದರು. ಶ್ರೀಕೃಷ್ಣಮಠದ ದ್ವಾರದಲ್ಲಿ ಶ್ರೀಪರ್ಯಾಯ ಮಠಾಧೀಶರು ಗುರುರಾಜರನ್ನು ಗೌರವದಿಂದ ಸ್ವಾಗತಿಸಿ ಆಲಂಗಿಸಿ ಕುಶಲಪ್ರಶ್ನೆ ಮಾಡಿ ಶ್ರೀಯವರಿಗೆ ಹಸ್ತಲಾಘವವಿತ್ತು ಶ್ರೀಕೃಷ್ಣಸನ್ನಿಧಿಗೆ ಕರೆದೊಯ್ದರು. ಆ ಒಂದು ವೈಭವ, ಸಂಭ್ರಮ, ಅಭೂತಪೂರ್ವವಾಗಿತ್ತು. 

ಜಗಮ್ಮೋಹನಾಕಾರನಾದ ಶ್ರೀಕೃಷ್ಣನ ದರ್ಶನವಾದ ಕೂಡಲೇ ಗುರುರಾಜರು ಸಾಷ್ಟಾಂಗವೆರಗಿ ಪ್ರಣಾಮಸಲ್ಲಿಸಿ ಎದ್ದು ನಿಂತು ದೇವನನ್ನು ಎವೆಯಿಕ್ಕದೆ ನೋಡಹತ್ತಿದರು. ಅವರ ಮೈರೋಮಾಂಚನಗೊಂಡಿತು. ಕಣ್ಣಿನಿಂದ ಆನಂದಾಶ್ರು ಹರಿಯಿತು. ಗದ್ದದಕಂಠದಿಂದ ಶ್ರೀಕೃಷ್ಣನನ್ನು ವೇದಮಂತ್ರಗಳಿಂದ ಸ್ತುತಿಸಹತ್ತಿದರು. ಪರಾಯಪೀಠಾಧೀಶರು ಗುರುಗಳಿಂದ ದೇವರಿಗೆ ಸುವರ್ಣಾರತಿಯನ್ನು ಮಾಡಿಸಿ ಭಗವದರ್ಪಿತ ತುಳಸೀ-ಪುಷ್ಪಮಾಲಿಕೆ ಹಾಕಿ ಫಲಮಂತ್ರಾಕ್ಷತಾ ಪ್ರಸಾದವನ್ನು ಸಮರ್ಪಿಸಿದರು. 

ಆನಂತರ ಸಭಾಭವನಕ್ಕೆ ಬಂದು ಆಸನಾಸೀರಾದ ಮೇಲೆ ವೇದಘೋಷವಾಗಿ ಪರ್ಯಾಯಗುರುಗಳಿಂದ ಸ್ವಾಗತ, ಪಂಡಿತರ ಉಪನ್ಯಾಸ, ಗುರುರಾಜರ ಉಪದೇಶಾದಿಗಳು ಜರುಗಿದ ಮೇಲೆ ಗುರುಗಳು ಕೆಲಕಾಲ ಉಡುಪಿಯಲ್ಲಿದ್ದು ಶ್ರೀಕೃಷ್ಣನನ್ನು ಸೇವಿಸಿ ಗ್ರಂಥರಚನೆಮಾಡಿ ಅನುಗೃಹೀತರಾಗಬೇಕೆಂಬ ಆಶಯವನ್ನು ಪರಾಯ ಪೀಠಾಧೀಶರಿಗೆ ತಿಳಿಸಿದಾಗ ಅವರು ಪರಮಾನಂದದಿಂದ “ತಾವು ದೈತಸಿದ್ಧಾಂತ ಪ್ರತಿಷ್ಠಾಪಕರು, ತಮ್ಮ ಕೀರ್ತಿ ಕೇಳಿ ಆನಂದಿಸಿದ್ದೇವೆ. ಮೇಲಾಗಿ ತಮ್ಮ ಮಹಾಪೀಠಕ್ಕೂ ತಮ್ಮ ಪೀಠಕ್ಕೂ ಬಹುಕಾಲದ ಸ್ನೇಹಸಂಬಂಧವಿದೆ. ತಾವು ಎಷ್ಟು ಕಾಲ ಬೇಕಾದರೂ ಇಲ್ಲಿದ್ದು ಗ್ರಂಥರಚನೆ, ಪಾಠಪ್ರವಚನಾದಿಗಳಿಂದ ಶ್ರೀಕೃಷ್ಣನನ್ನು ಸೇವಿಸಬಹುದು, ನಾವು ಮಾತ್ರವಲ್ಲ, ಎಲ್ಲ ಪೀಠಾಧೀಶ್ವರರೂ ತಮಗೆ ಸರ್ವವಿಧ ಸಹಾಯ, ಸಹಕಾರ ನೀಡುತ್ತೇವೆ. ಶ್ರೀಕೃಷ್ಣಮಠವು ತಮ್ಮದೆಂದೇ ಭಾವಿಸಬೇಕು” ಎಂದು ಸೌಜನ್ಯದಿಂದ ಗುರುರಾಜರಿಗೆ ತಿಳಿಸಿದರು. ಶ್ರೀಯವರಿಗೆ ಅದರಿಂದ ಪರಮಾನಂದವಾಯಿತು. ಆನಂತರ ತಮ್ಮ ಮಠಕ್ಕೆ ದಯಮಾಡಿಸಿದರು. 

ಮರುದಿನ ಗುರುಗಳು ಶ್ರೀಕೃಷ್ಣ ಸನ್ನಿಧಿಗೆ ಬಂದು ಅಪಾರ ಧನ-ಕನಕ-ಪೀತಾಂಬರ-ಆಭರಣಗಳನ್ನು ಸಮರ್ಪಿಸಿದರು, ಮತ್ತು ಏಳು ದಿನಗಳ ಕಾಲ ಶ್ರೀಕೃಷ್ಣನಿಗೆ ಸಕಲ ಉತ್ಸವಗಳನ್ನು ನೆರವೇರಿಸಲು ಪರ್ಯಾಯ ಪೀಠಾಧೀಶರಿಗೆ ಅಪಾರ ಧನವನ್ನು ಕೊಟ್ಟರು, ಅಂದಿನಿಂದಲೇ ಏಳು ದಿನಗಳ ಕಾಲ “ಸಪ್ತರಾತ್ರೋತ್ಸವವು” ಶ್ರೀಕೃಷ್ಣನಿಗೆ ಶ್ರೀಗುರುರಾಜರ ಸೇವಾರೂಪವಾಗಿ ವಿಜೃಂಭಣೆಯಿಂದ ನೆರವೇರಿತು. ಪ್ರತಿದಿನವೂ ಶ್ರೀಕೃಷ್ಣಸನ್ನಿಧಿಯಲ್ಲಿ ಶ್ರೀಪರ್ಯಾಯ ಪೀಠಾಧೀಶರು ಗುರುರಾಜರು ತಮ್ಮ ತಮ್ಮ ಸಂಸ್ಥಾನ ದೇವತಾರಾಧನೆಯನ್ನು ನೆರವೇರಿಸುತ್ತಿದ್ದು ತೀರ್ಥ-ಪ್ರಸಾದ, ಚೌಕಿಯಲ್ಲಿ ಒಟ್ಟಿಗೆ ಪಂಡಿತಮಂಡಲಿಯೊಡನೆ ಭೀಕ್ಷಾ ಸ್ವೀಕಾರ, ಪಾಠ ಪ್ರವಚನ, ಪಂಡಿತರ ಉಪನ್ಯಾಸ ಎಲ್ಲ ಪೀಠಾಧೀಶರ ಉಪದೇಶಾದಿಗಳು ಜರುಗುತ್ತಿದ್ದು ಅದೊಂದು ಜ್ಞಾನಸತ್ರವಾಗಿ ಪರಿಣಮಿಸಿ ಸಜ್ಜನರಿಗೆ ಪರಮಾನಂದವನ್ನುಂಟುಮಾಡಿತು. 

ವಾಗೇವಿಯ ಆದೇಶದಂತೆ ಗುರುರಾಜರು ಗ್ರಂಥರಚನೆ ಮಾಡಲು ರೈತಸಿದ್ಧಾಂತದ ಉಗಮಸ್ಥಾನವೂ, ಶ್ರೀಮದಾಚಾರರ ಜನ್ಮಸ್ಥಳವೂ, ಶ್ರೀಕೃಷ್ಣಸನ್ನಿಧಾನಯುಕ್ತವೂ ಆದ ಉಡುಪಿಯೇ ಯೋಗ್ಯಸ್ಥಳವೆಂದು ಭಾವಿಸಿ ಒಂದು ಶುಭಮುಹೂರ್ತದಲ್ಲಿ ಶ್ರೀಕೃಷ್ಣನ ಪ್ರೇರಣೆ, ವಾಗ್ಗೇವಿಯ ಅಪ್ಪಣೆಯಂತೆ ಶ್ರೀವ್ಯಾಸರಾಜರು ರಚಿಸಿದ ದೈತಸಿದ್ಧಾಂತಕ್ಕೆ ಆಧಾರ ಸ್ಥಂಭವಾದ ಚಂದ್ರಿಕೆಗೆ “ಪ್ರಕಾಶ” ಎಂಬ ವ್ಯಾಖ್ಯಾನವನ್ನು ಪ್ರಾರಂಭಿಸಿದರು. ಶ್ರೀಬಾದರಾಯಣರ ಬ್ರಹ್ಮಸೂತ್ರಗಳಿಗೆ ಪರಂಪರಾ ವ್ಯಾಖ್ಯಾನರೂಪವಾದ ಚಂದ್ರಿಕೆಯನ್ನು ವಿವರಿಸುವ ಮೊದಲು, ಮೂಲವಾದ ಬ್ರಹ್ಮಸೂತ್ರಗಳ ಹೃದಯವನ್ನೇ ಬಿಚ್ಚಿ ತೋರಿಸುವ ಹೃದಯಂಗಮವಾದ ವ್ಯಾಖ್ಯಾನ ರಚಿಸುವುದು ಯುಕ್ತವೆಂದಾಲೋಚಿಸಿ, ಶ್ರೀಗಳವರು ಬ್ರಹ್ಮಸೂತ್ರಗಳ ಅರ್ಥವನ್ನು ವಿವರಿಸುವ ತಂತ್ರದೀಪಿಕಾ” ಎಂಬ ಸ್ವತಂತ್ರಗ್ರಂಥವನ್ನು ರಚಿಸಿದರು. ಅದು ಪ್ರತಿಯೊಂದು ಬ್ರಹ್ಮಸೂತ್ರಾರ್ಥಗಳನ್ನೂ ಪರಿಷ್ಕಾರವಾಗಿ ನಿರೂಪಿಸುವ ಮಹಾಗ್ರಂಥವಾಯಿತು. ಅದರಂತೆ ಬ್ರಹ್ಮಸೂತ್ರಗಳ ಅಧಿಕರಣಗಳಲ್ಲಿ ಹೇಳಿರುವ ವಿಷಯಗಳನ್ನು ತಾತ್ಪರ್ಯರೂಪವಾಗಿ ವಿವರಿಸುವ “ನ್ಯಾಯಮುಕ್ತಾವಲೀ” ಎಂಬ ಗಂಭೀರಶೈಲಿಯ, ವಿದ್ವಜ್ಜನೋಪಕಾರಕವಾದ ಗ್ರಂಥವನ್ನು ರಚಿಸಿದರು. ಬ್ರಹ್ಮ ಸೂತ್ರಗಳ ಮೇಲಿನ ಈ ಎರಡು ಕೃತಿಗಳು ಗುರುಗಳ ಪಾಂಡಿತ್ಯಕ್ಕೆ ಸಾಕ್ಷೀಭೂತವಾದ ಕೃತಿಗಳೆನಿಸಿದವು. 'ತಂತ್ರದೀಪಿಕೆ'ಯನ್ನು ರಚಿಸಿದ ಮೇಲೆ 'ನ್ಯಾಯಮುಕ್ತಾವಲಿ'ಯನ್ನೂ, ನಂತರ ಶ್ರೀಮದಾಚಾರ್ಯರ 'ಅನುವ್ಯಾಖ್ಯಾನ'ಕ್ಕೆ ಟಿಪ್ಪಣಿಯಾದ ಶ್ರೀಜಯಮುನಿಗಳ ಮೇರುಕೃತಿಯಾದ 'ಶ್ರೀಮನ್ಯಾಯಸುಧಾ'ಕ್ಕೆ ಪರಿಮಳ” ಎಂಬ ಜಗನ್ಮಾನ್ಯ ಟಿಪ್ಪಣಿಯನ್ನೂ ರಚಿಸಿ, ತರುವಾಯ ಅರ್ಧಕ್ಕೆ ನಿಲ್ಲಿಸಿದ್ದ ಚಂದ್ರಿಕಾ ವ್ಯಾಖ್ಯಾನವಾದ “ಪ್ರಕಾಶ'ವನ್ನೂ ಮುಗಿಸಿ ಎಲ್ಲ ಗ್ರಂಥಗಳನ್ನೂ ಶ್ರೀಕೃಷ್ಣನಿಗೆ ಸಮರ್ಪಿಸಿ ವಾಗ್ಗೇವಿಯ ಅಣತಿಯನ್ನು ಪೂರ್ಣಮಾಡಿ ಧನ್ಯರಾದರು. 

ಗ್ರಂಥರಚನೆಯಿಂದ ಗುರುಗಳ ಕೀರ್ತಿ ದಶದಿಕ್ಕುಗಳಿಗೂ ಹರಡಿತು. ಈ ಗ್ರಂಥಗಳು ಮುಂದೆ ತಮ್ಮ ಪೀಠದಲ್ಲಿ ಬರುವ ಶ್ರೀಸುಮತೀಂದ್ರತೀರ್ಥರಿಗೆ ಸಹಾಯಕವಾಗಲೆಂದು ರಚಿಸಿದರು.

ಉಡುಪಿಯಲ್ಲಿ ಆರು ಋತುಗಳಲ್ಲಿಯೂ ಶಿಷ್ಯರು ಏರ್ಪಡಿಸಿದ ವಿವಿಧ ಉತ್ಸವಗಳನ್ನು ಗುರುಗಳು ಶ್ರೀಕೃಷ್ಣನ ಸನ್ನಿಧಿಯಲ್ಲಿ ನಡೆಸಿ ಸಜ್ಜನರಿಗೆ ಆನಂದವನ್ನುಂಟು ಮಾಡಿದರು. ಶ್ರೀಗುರುರಾಜರು ಚೈತ್ರಶುಕ್ಲನವಮೀದಿವಸ ಶ್ರೀಕೃಷ್ಣಸನ್ನಿಧಿಯ ಮುಂದಿನ ಮಂಟಪದಲ್ಲಿ ಮೂಲರಾಮದೇವರ ಮಹಾಭಿಷೇಕವನ್ನು ವೈಭವದಿಂದಾಚರಿಸಿದರು.110 ಚತುರ್ಯುಗಮೂರ್ತಿಯ ವಿಶ್ವರೂಪ ದರ್ಶನದಿಂದ ಸಕಲರೂ ಪಾವನರಾದರು. ಈ ಹೊತ್ತಿಗಾಗಲೇ ಶ್ರೀಗಳವರು ಹತ್ತು ಬಾರಿ ಚಂದ್ರಿಕಾ, ನ್ಯಾಯಮೃತ, ತರ್ಕತಾಂಡವ, ಶ್ರೀಮನ್ನಾಯಸುಧಾಗ್ರಂಥವನ್ನು ನೂರಾರು ಜನ ಶಿಷ್ಯರಿಗೆ ಮಂಗಳಮಾಡಿದ್ದರು. ಅದರಿಂದ ಅವರಿಗೊಂದು ವಿಧ ಉಲ್ಲಾಸವುಂಟಾಗಿತ್ತು. ಶ್ರೀಯವರ ಜೀವನದ ಅನೇಕ ಮುಖ್ಯ ಘಟನೆಗಳು ಉಡುಪಿಯಲ್ಲಿ ಜರುಗಿದವು. ಅದರಲ್ಲಿ ಮುಖ್ಯವಾದುದು ಶ್ರೀಕೃಷ್ಣಸಾಕ್ಷಾತ್ಕಾರ !