|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೮೦. ವೆಲ್ಲೂರಿನಲ್ಲಿ ದಿಗ್ವಿಜಯ

ಹದಿನೇಳನೆಯ ಶತಮಾನದಲ್ಲಿ ವೆಲ್ಲೂರು ಕನ್ನಡ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ವೀರ ವೆಂಕಟಪತಿರಾಯರ ತರುವಾಯ ನಾಲ್ವಡಿ ಶ್ರೀರಾಮದೇವರಾಯರು ರಾಜ್ಯಭಾರ ಮಾಡುತ್ತಿದ್ದರು. ಶ್ರೀಮದಾಚಾರರ ಮಹಾಸಂಸ್ಥಾನಕ್ಕೂ ಕನ್ನಡ ಸಾಮ್ರಾಜ್ಯಾಧೀಶರಿಗೂ ಗುರು-ಶಿಷ್ಯ ಬಾಂಧವ್ಯವಿತ್ತು. ಈಗ ಶ್ರೀರಾಘವೇಂದ್ರಗುರುಗಳು ರಾಜಧಾನಿಗೆ ಬರುವ ವಿಚಾರ ತಿಳಿದ ಚಕ್ರವರ್ತಿಯು ಶ್ರೀಪಾದಂಗಳವರನ್ನು ರಾಜವೈಭವದಿಂದ ಸ್ವಾಗತಿಸಿ ಭವ್ಯಮಂದಿರದಲ್ಲಿ ಬಿಡಾರಮಾಡಿಸಿದ. ಶ್ರೀಗಳವರ ಜ್ಞಾನ-ಭಕ್ತಿ-ವೈರಾಗ್ಯ, ಮಹಿವಾದಿಗಳ ಪರಿಚಯ ಈಗಾಗಲೇ ಚಕ್ರೇಶನಿಗಾಗಿತ್ತು. ತಂಜಾವೂರಿನ ಕ್ಷಾಮನಿವಾರಣೆ, ಮಧುರೆಯಲ್ಲಿ ದಿಗ್ವಿಜಯ, ಅವರ ಗ್ರಂಥ ಆನೆಯ ಮೇಲೆ ಮೆರೆದಿದ್ದ - ಎಲ್ಲ ವಿಚಾರಗಳನ್ನೂ ಕೇಳಿ ತಿಳಿದಿದ್ದ ರಾಮದೇವ ಗುರುಗಳಲ್ಲಿ ವಿಶೇಷ ಭಕ್ತಿ-ಶ್ರದ್ಧೆಗಳನ್ನು ತಳೆದ. ಅರಮನೆಗೆ ಗುರುಗಳನ್ನು ವೈಭವದಿಂದ ಕರೆತಂದು ಪಾದಪೂಜೆ ಮಾಡಿ ಧನಕನಕ-ವಸ್ತ್ರಾಭರಣ- ಗ್ರಾಮಗಳನ್ನು ದಾನಮಾಡಿ ಕೃತಾರ್ಥನಾದ. 

ವೆಲ್ಲೂರಿನ ರಾಜಸಭೆಯಲ್ಲಿ ನ್ಯಾಯ-ವೇದಾಂತ-ಶೈವಾತಾದಿ ಶಾಸ್ತ್ರಕೋವಿದರೂ ವಾದವಿದ್ಯಾವಿಶಾರದರೂ ಆದ ಆನೇಕ ವಿದ್ವಾಂಸರಿದ್ದರು, ಅವರಲ್ಲಿ ಭೈರವಭಟ್ಟ ಮತ್ತು ವೀರಭದ್ರ ಎಂಬೀರ್ವರು ಶೈವಾನ್ವಿತಮತ ಪ್ರತಿಷ್ಠಾಪಕರಾಗಿದ್ದರು. ಅವರಿಗೆ ನೂರಾರುಜನ ಶಿಷ್ಯರಿದ್ದರು. ಮತ್ತರಾದ ಭೈರವಭಟ್ಟ, ವೀರಭದ್ರರು ಶಿಷ್ಯರಿಂದೊಡಗೂಡಿ ಬಂದು ರಾಜಸಭೆಯಲ್ಲಿ ಗುರುಗಳನ್ನು ತಮ್ಮೊಡನೆ ವಾದಮಾಡಲು ಆಹ್ವಾನಿಸಿದರು. ಯತಿಶಿರೋಮಣಿಗಳಾದ ಶ್ರೀರಾಘವೇಂದ್ರಗುರುಗಳ ಭವ್ಯವ್ಯಕ್ತಿತ್ವ, ದಿವ್ಯತೇಜಸ್ಸು, ಸಭಾಜನರ ಚಿತ್ತವನ್ನಾಕರ್ಷಿಸುತ್ತಿತ್ತು. ಸುರಸುಂದರ ರೂಪದ ಅವರ ಭವ್ಯ ನಿಲುವು, ಅವರ ಮಾಹಾತ್ಮ ಸೂಚಕವಾಗಿತ್ತು. ಸರ್ವತಂತ್ರ ಸ್ವತಂತ್ರರಾದ ಗುರುಗಳು ವಾದಕ್ಕೆ ಸಿದ್ಧರಾಗಿ ಕುಳಿತಾಗ ಪ್ರಖರ ಕಾಂತಿಪುಂಜಗಳೊಂದಾಗಿ ಸೇರಿ ಗುರುಗಳ ಆಕೃತಿ ತಾಳಿದಂತಿತ್ತು. ಮುಖದಲ್ಲಿ ಅಲೌಕಿಕ ತೇಜಸ್ಸು ತಾಂಡವಿಸುತ್ತಿತ್ತು. ಅವರ ವಿಶಾಲಫಾಲಪ್ರದೇಶ ಶಾಸ್ತ್ರಗಳಲ್ಲಿ ಅವರಿಗಿರುವ ಪರಿಪೂರ್ಣ ವೈದುಷ್ಯ ನೈಪುಣ್ಯವನ್ನು ಸೂಚಿಸುತ್ತಿತ್ತು. ಮಿಂಚಿನಂತೆ ಮಿನುಗುವ ಅವರ ನೇತ್ರಗಳು ವಾಂಛಿತಾರ್ಥಪ್ರದ ಕಟಾಕ್ಷಪೂರ್ಣವಾಗಿ ಕಂಗೊಳಿಸುತ್ತಿತ್ತು ಅವರ ವದನಾರವಿಂದವು ವಾಗ್ಗೇವಿಯ ವಿಹಾರಸ್ಥಾನದಂತೆ ಬೆಳಗುತ್ತಿತ್ತು. ಜ್ಞಾನ-ವೈರಾಗ್ಯಪೂರ್ಣರಾದ ಗುರುಗಳು ಮುಗುಳುನಗೆಯಿಂದ ಅಭಯಹಸ್ತವನ್ನು ಪ್ರದರ್ಶಿಸಿ ವಾಕ್ಯಾರ್ಥಕ್ಕೆ ಸಿದ್ದರಾದರು. ಅನಂತರ ಇತಿಹಾಸ ಪ್ರಸಿದ್ಧವಾದ ವಾಕ್ಯಾರ್ಥವು ಪ್ರಾರಂಭವಾಯಿತು. 

ಮೊದಲು ಭೈರವಭಟ್ಟರು ನ್ಯಾಯಶಾಸ್ತ್ರದಲ್ಲಿ ಚಿಂತಾಮಣಿಕಾರನ ಗ್ರಂಥಾನುಸಾರವಾಗಿ ಬಲವಾದ ಪಾರ್ವಪಕ್ಷ ಮಾಡಿದರು. ಅದನ್ನು ಗುರುಗಳು ಅನುವಾದ ಮಾಡಿ ಅದರ ಮೇಲೆ ತರ್ಕತಾಂಡವೋಕ್ತ ಪ್ರಕಾರವಾಗಿ ಅನೇಕ ದೊಷಗಳನ್ನು ಹೇಳಿದರು. ಭೈರವಭಟ್ಟರ ಮುಖ ವಿವರ್ಣವಾಯಿತು. ಹಟದಿಂದ ಮತ್ತೆ ತಮ್ಮ ವಾದವನ್ನು ಬಲಪಡಿಸಿ ವಾದಿಸಿದರು. ನಸುನಗುತ್ತಲೇ ಗುರುಗಳು ಕ್ಷಣಾರ್ಧದಲ್ಲಿ ಅದನ್ನು ಶತಶಃ ಖಂಡಿಸಿ ಅದರ ಮೇಲೆ ಅನೇಕ ಕೋಟಿಗಳನ್ನೇರಿಸಿದರು. ಅದಕ್ಕೆ ಉತ್ತರ ಕೊಡಲಾಗದೆ ಭೈರವಭಟ್ಟರು ತತ್ತರಿಸುತ್ತಿರುವಾಗ ಸಭಾಸದರು ಗುರುಗಳ ವೈದುಷ್ಯವನ್ನು ಶ್ಲಾಘಿಸಿದರು. ಆಗ ವೀರಭದ್ರರು ಕುಪಿತರಾಗಿ, ದೈತಸಿದ್ಧಾಂತವನ್ನು ವೇದವಿರುದ್ಧಮತವೆಂದು ಸಾರಿ ತಮ್ಮ ವಾದಕ್ಕೆ ಉಪಷ್ಟಂಭಕವಾಗಿ ಅನೇಕ ಪ್ರಮಾಣಗಳನ್ನು ಉದಾಹರಿಸಿ ವಿಜೃಂಭಿಸಿದರು. ಶ್ರೀಗಳವರು ಸಪ್ರಮಾಣವಾಗಿ ತಮ್ಮ ಮತವನ್ನು ಸಮರ್ಥಿಸಿದರು. ವೀರಭದ್ರರು ಅನೇಕ ಪ್ರಮಾಣಗಳನ್ನು ಮತ್ತೆ ಉದಾಹರಿಸಿ ವಾದಿಸಿದರು. ಶ್ರೀಪಾದರು ಶಾಂತರೀತಿಯಿಂದ ಶ್ರೀವಿಜಯೀಂದ್ರಗುರುಗಳ ನ್ಯಾಯಮೌಕ್ತಿಕಮಾಲೆಯ ಅಪೂರ್ವ ವಿಷಯಗಳನ್ನು ಅನುವಾದಮಾಡಿ ತಮ್ಮ ವಾಗೈಖರಿಯಿಂದ ವೀರಭದ್ರರನ್ನು ನಿರುತ್ತರಗೊಳಿಸಿದರು. ಅಂದಿನ ವಾಕ್ಯಾರ್ಥ ಅಷ್ಟಕ್ಕೇ ಮುಕ್ತಾಯವಾಯಿತು. 

ಮರುದಿನದಿಂದ ಎರಡು ದಿನಗಳವರೆಗೆ ವೀರಭದ್ರ-ಗುರುರಾಜರಲ್ಲಿ ಅಪೂರ್ವ ವಾದ-ವಿವಾದವಾಗಿ ಕೊನೆಗೆ ವೀರಭದ್ರರು ಗುರುಗಳ ವಾದಶೈಲಿಗೆ, ಝಂಝಾವಾತಕ್ಕೆ ಸಿಕ್ಕ ತರಗಲೆಯಂತಾಗಿ ಪರಾಜಿತರಾದರು. ಶ್ರೀಯವರ ವಿಜಯವನ್ನು ವಾದನಿರ್ಣಯಕಾರರು ಘೋಷಿಸಿದರು. ಇದರಿಂದ ಭೈರವಭಟ್ಟರಿಗೆ ಅಸಮಾಧಾನವಾಯಿತು. ಅವರು ಶ್ರೀಕಂಠಮತರೀತ್ಯಾ ಶ್ರೀಶಿವಸವೋತ್ತಮತ್ವ ಸ್ಥಾಪನೆ ಮಾಡಲು ಮುಂದೆ ಬಂದು ವೇದಾದಿಶಾಸ್ತ್ರಗಳೂ ಶಿವಸವೋತ್ತಮತ್ವವನ್ನೇ ಸಾರುವುದೆಂಬ ಶೈವಾತಮತಸಿದ್ಧಾಂತವನ್ನು ಬಲಪಡಿಸಿ ಪೂರ್ವಪಕ್ಷ ಮಂಡಿಸಿ “ಇದಕ್ಕೇನು ಹೇಳುವಿರಿ?” ಎಂದರು, ಶ್ರೀಯವರು ನಸುನಗುತ್ತಾ “ಉತ್ತರವಿದೋ ಸಿದ್ಧವಾಗಿದೆ!” ಎಂದು ಹೇಳಿ ವಿಜಯೀಂದ್ರರ “ಪರತತ್ವಪ್ರಕಾಶಿಕಾ”, “ತುರೀಯಶಿವಖಂಡನಂ ಮುಂತಾದ ಅದ್ವಿತೀಯ ಗ್ರಂಥಗಳನ್ನು ಅನುವಾದಿಸಿ ಪೂರ್ವಪಕ್ಷವನ್ನು ಶತಶಃ ಖಂಡಿಸಿದರು. ಭೈರವಭಟ್ಟರು ಗುರುಗಳ ಅಸಾಧಾರಣ ಪ್ರಜ್ಞಾತಾಂಡವದಿಂದ ವಿಸ್ಮಿತರಾದರು. ತಮಗೆ ಜಯ ಸಿಗದೆಂದು ಮನಗಂಡರು. ಆದರೂ ಛಲ ಬಿಡದೇ ವಾದಿಸಹತ್ತಿದರು. ಅವರಿಬ್ಬರ ವಾದ ಐದಾರು ದಿನಗಳವರೆಗೆ ಮುಂದುವರೆಯಿತು. ಶ್ರೀರಾಘವೇಂದ್ರಗುರುಸಾರ್ವಭೌಮರು ಶ್ರೀಹರಿ-ವಾಯುಗಳನ್ನು ಮನಸಾ ಸ್ಮರಿಸಿ ವಿಸ್ಮಿತರಾಗಿ ಅದುವರೆಗಿನ ಭೈರವಭಟ್ಟರ ಎಲ್ಲಾ ವಾದಗಳನ್ನೂ ಅನುವಾದಿಸಿ ಒಂದೊಂದು ವಿಷಯಗಳನ್ನೂ ಪ್ರತಿಭಾಪುಂಜರಂಚಿತ ವಾಗ್ದಾಣಗಳಿಂದ ಭಿನ್ನಭಿನ್ನ ಮಾಡುತ್ತಾ ವಾದಿಸಲಾರಂಭಿಸಿದರು. 

ಉತ್ತುಂಗ ರಂಗಗಳಿಂದ ಭರದಿಂದ ಮುನ್ನುಗ್ಗುವ ಗಂಗಾಪ್ರವಾಹದಂತೆ ಶ್ರೀಗುರುಸಾರ್ವಭೌಮರ ವದನಾರವಿಂದದಿಂದ ಶ್ರೀಮದಾನಂದತೀರ್ಥಭಾರತಿಯು ಹೊರಹೊಮ್ಮ ಹತ್ತಿತ್ತು. ಶ್ರೀಯವರ ಪಾಂಡಿತ್ಯ, ಪ್ರತಿಭೆ, ವಾದಶೈಲಿ, ಪ್ರಮಾಣೋದಾಹರಣ ವೈಖರಿ, ಸ್ವಮತ ಸ್ಥಾಪನರೇಯತೆಗಳನ್ನು ಕಂಡು ಸಮಸ್ತ ಸಭಿಕರು ಆನಂದಿಸಿದರು. ಶ್ರೀಯವರ ಮುಖದಿಂದ ಹೊರಡುತ್ತಿದ್ದ ಪ್ರಮಾಣೋಪನ್ಯಾಸವು ಶ್ರೀರಘುರಾಮನ ಅಕ್ಷಯ ಬತ್ತಳಿಕೆಯಿಂದ ಹೊರಹೊಮ್ಮಿ ಪ್ರತಿಭಟರನ್ನು ಛಿನ್ನವಿಚ್ಛಿನ್ನಗೊಳಿಸುವ ಶರಗಳಂತೆ ಕಂಗೊಳಿಸುತ್ತಿತ್ತು. ಶ್ರೀಯವರ ಒಂದೊಂದು ಪ್ರಮಾಣಗಳೂ ಭೈರವಭಟ್ಟರ ವಾದವನ್ನೆಲ್ಲಾಛಿದ್ರವಿಚ್ಛಿದ್ರಗೊಳಿಸಿದವು. ಆ ಜ್ಞಾನಜ್ಯೋತಿಯ ಪ್ರಖರ ತೇಜಸ್ಸಿನ ಮುಂದೆ ನಿಲ್ಲಲಾಗದೆ ಭೈರವಭಟ್ಟರು ನಿರ್ವಿಣ್ಣರಾದರು. ಅವರ ಮುಖ ಕಳೆಗುಂದಿತು. ಮಾತು ತೊದಲಹತ್ತಿತು. ಕೊನೆಗೆ ಗುರುಗಳ ವಾದಕ್ಕೆ ತಲೆಬಾಗಿ 'ಜಿತೋSಸ್ಮಿ' ಎಂದುದ್ಧರಿಸಿ ಸಾಷ್ಟಾಂಗವೆರಗಿಬಿಟ್ಟರು. ಅಜೇಯರೆನಿಸಿದ್ದ ಆಸ್ಥಾನದ ದಿಗ್ಧಂತಿ ಪಂಡಿತರಿಬ್ಬರೂ ಪರಿಜಿತರಾದುದನ್ನು ಕಂಡು ರಾಮದೇವ ಅಚ್ಚರಿಗೊಂಡ. ಗುರುಪಾದರ ಜ್ಞಾನದ ಪ್ರಭಾವವನ್ನರಿತು ಮಹಾಪ್ರಭುವು ಗುರುಗಳಿಗೆ ಅಸಾಧಾರಣ ಗೌರವಗಳನ್ನೂ, ಗ್ರಾಮ-ಭೂಮಿಗಳನ್ನೂ, ಶ್ವೇತಛತ್ರ, ಚಾಮರ, ಚೌರಿಗಳನ್ನೂ ಧನಕನಕಾಭರಣ-ಶಾಲು, ಫಲ-ಪುಷ್ಪಗಳನ್ನೂ ಅರ್ಪಿಸಿ ಕೃತಾರ್ಥನಾದ.406 ಕರ್ನಾಟಕ ರಾಜಧಾನಿಯಲ್ಲಿ ಶ್ರೀಗುರುರಾಜರಿಗೆ ದೊರೆತ ಈ ಅಭೂತಪೂರ್ವ ವಿಜಯವು ಗುರುಗಳ ಅಮರಚರಿತ್ರೆಯಲ್ಲಿನ ಒಂದು ಪ್ರಮುಖಘಟ್ಟವೆಂದು ಹೇಳಬಹುದು. ಇದರಿಂದ ಗುರುಗಳ ಕೀರ್ತಿ ದಿಗಂತ ವಿಶ್ರಾಂತವಾಯಿತು. ಇಂತು ದೈತಸಿದ್ಧಾಂತದ ವಿಜಯದುಂದುಭಿಯನ್ನು ಮೊಳಗಿಸಿದ ಶ್ರೀರಾಘವೇಂದ್ರಗುರುಗಳು ವೆಲ್ಲೂರಿನಿಂದ ಮುಂದಕ್ಕೆ ಪ್ರಯಾಣ ಬೆಳೆಸಿದರು.