ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೭೯. ಶ್ರೀರಂಗದಲ್ಲಿ ಜ್ಞಾನಸತ್ರ
ಗುರುಗಳು ಸಂಚಾರಕ್ರಮದಿಂದ ಶ್ರೀರಂಗಕ್ಕೆ ದಯಮಾಡಿದರು. ಮತ್ತು ಚಾತುರ್ಮಾಸ್ಯವ್ರತವನ್ನೂ ; ಅದೇ ಕಾಲದಲ್ಲಿ ಆಸ್ತಿಕ ಜನರ ಪ್ರಾರ್ಥನೆಯಂತೆ ಶ್ರೀಮಧ್ವಸಿದ್ದಾಂತ ಪಾಠಪ್ರವಚನವನ್ನೂ ನೆರವೇರಿಸಲು ನಿಶ್ಚಯಿಸಿದರು. ಗುರುಗಳಲ್ಲಿ ಅಧ್ಯಯನಮಾಡಿ ಉದ್ಘತರಾಗುವ ಬಯಕೆಯಿಂದ ಶ್ರೀಮಠದ ವಿದ್ಯಾರ್ಥಿಗಳೊಡನೆ, ನೂರಾರು ಜನ ಆಸ್ತಿಕರು ಪ್ರತಿದಿನ ಉತ್ಸಾಹದಿಂದ ಬರುತ್ತಿದ್ದರು. ಶ್ರೀಗಳವರು ಪ್ರಮಾಣಪದ್ಧತಿಯಿಂದಾರಂಭಿಸಿ ಚಂದ್ರಿಕೆಯವರೆಗೆ ಅಂದರೆ ಪ್ರಮಾಣಪದ್ಧತಿ, ದಶಪ್ರಕರಣಗಳು, ದಶೋಪನಿಷದ್ಭಾಷ್ಯಗಳು, ಬ್ರಹ್ಮಸೂತ್ರಭಾಷ್ಯ, ಋಗ್ವಾಷ್ಯ, ಗೀತಾಭಾಷ್ಯಗಳನ್ನು ಟೀಕೆಗಳೊಡನೆಯೂ, ಅನುವ್ಯಾಖ್ಯಾನವನ್ನು ನ್ಯಾಯಸುಧೆಯೊಡನೆಯೂ, ತಾತ್ಪರ್ಯಚಂದ್ರಿಕಾ, ನ್ಯಾಯಾಮೃತ, ತರ್ಕತಾಂಡವಗಳನ್ನು ಶ್ರೀವಿಜಯೀಂದ್ರ-ಸುಧೀಂದ್ರಗುರುಗಳ ವ್ಯಾಖ್ಯಾನಗಳೊಡನೆಯೂ ಪಾಠ ಹೇಳಲು ಪ್ರಾರಂಭಿಸಿದರು. ಅದೊಂದು ಜ್ಞಾನಸತ್ರವಾಗಿ ಸಕಲಜನರಿಗೆ ಪರಮಾನಂದಪ್ರದವಾಗಿ ಜರುಗುತ್ತಿತ್ತು. ಚಾತುರ್ಮಾಸ್ಯಸಂಕಲ್ಪವಾದ ಮೇಲೂ ಆರೇಳು ತಿಂಗಳ ಕಾಲ ಶ್ರೀರಂಗದಲ್ಲಿದ್ದು ಪಾಠಪ್ರವಚನವನ್ನು ನೆರವೇರಿಸಿದ ಗುರುಗಳು ಆನಂತರ ಜ್ಞಾನಸತ್ರದ ಅವಕೃತಸ್ಥಾನರೂಪ ಮಂಗಳ ಸಮಾರಂಭವನ್ನು ನೆರವೇರಿಸಿ ಅದರ ಫಲವನ್ನು ಶ್ರೀರಂಗನಾಥ ದೇವರಿಗೆ ಅರ್ಪಿಸಿ, ಶ್ರೀರಂಗನಾಥನ ಅನುಜ್ಞೆ ಪಡೆದು ಉತ್ತರದಿಕ್ಕಿನ ಕಡೆ ದಿಗ್ವಿಜಯ ಕೈಗೊಂಡು ಪ್ರಯಾಣ ಬೆಳೆಸಿದರು. ಶ್ರೀರಂಗದಿಂದ ಹೊರಟ ಗುರುಗಳು ನಾಮಗಿರಿ (ನಾಮಕಲ್ಲು) ಕ್ಷೇತ್ರಕ್ಕೆ ಬಂದು ಅಲ್ಲಿ ಶ್ರೀನೃಸಿಂಹದೇವರ ದರ್ಶನಮಾಡಿ, ನಮಸ್ಕಾರಾದಿಗಳಿಂದ ಸೇವಿಸಿ, ಅಂದಿನ ರಾತ್ರಿ ಅಲ್ಲಿ ವಾಸಮಾಡಿ ಮರುದಿನ ಅಲ್ಲಿಂದ ಬಾಣಾವರ (ವೆಲ್ಲೂರು) ನಗರಕ್ಕೆ ಬಿಜಯಮಾಡಿದರು.