|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೭೮. ಅಂಬಾರಿಯಲ್ಲಿ ಮೆರೆದ ಅಮರ ಗ್ರಂಥ

ಶ್ರೀರಾಘವೇಂದ್ರಗುರುಸಾರ್ವಭೌಮರು ಮಧ್ಯಾಹ್ನ ಅಧ್ಯಕ್ಷಪೀಠವನ್ನಲಂಕರಿಸಿ ಒಮ್ಮೆ ಪಂಡಿತಮಂಡಲಿಯತ್ತ ದೃಷ್ಟಿ ಬೀರಿದರು. ಆಗ ಅವರಿಗೆ ಅಂದಿನ ಸಭೆಯಲ್ಲಿ ಏನೋ ಹುರುಪಿದ್ದಂತೆ ಕಂಡುಬಂದಿತು. ಸರ್ವಜ್ಞರಾದ ಗುರುಗಳು ಅದರ ಕಾರಣವರಿತು ನಸುನಕ್ಕರು. ನೀಲಕಂಠದೀಕ್ಷಿತರು ಸರ್ವಶಾಸ್ತ್ರಗಳಲ್ಲಿ ನುರಿತ ಪಂಡಿತರಾಗಿದ್ದರು. 'ವ್ಯವಹಾರೇ ಭಾಟ್ಟನಯಃ ಎಂಬಂತೆ ಅವರಿಗೆ ಛಾಟ್ಟಮತದಲ್ಲಿ ವಿಶೇಷ ಪ್ರೇಮವಿದ್ದಿತು. ದೀಕ್ಷಿತರಿಗೆ ಹತ್ತಾರು ಜನ ಶಿಷ್ಯರೂ ಇದ್ದರು. ಮೊದಲೇ ಯೋಜಿಸಿದ್ದಂತೆ ದೀಕ್ಷಿತರು ತಮ್ಮ ಪ್ರಮುಖ ಶಿಷ್ಯನಿಂದ ಮೀಮಾಂಸಾಶಾಸ್ತ್ರದ ಭಾಟ್ಟಮತದಂತೆ ವಾಕ್ಯಾರ್ಥ ಪ್ರಾರಂಭಮಾಡಿಸಿ ಪೂರ್ವಪಕ್ಷಮಾಡಿಸಿದರು. ಹಿರಿಯ ಪಂಡಿತರಾದ ರಾಮಚಂದ್ರಾಚಾರರು ಅದಕ್ಕೆ ಸುಲಭವಾಗಿ ಸಮಾಧಾನ ಹೇಳಿದರು. ವಾದಿ-ಪ್ರತಿವಾದಿಗಳಿಬ್ಬರಲ್ಲೂ ಸ್ವಲ್ಪಹೊತ್ತು ವಾಕ್ಯಾರ್ಥವಾದ ಮೇಲೆ ಶ್ರೀನೀಲಕುಠದೀಕ್ಷಿತರೇ ಸ್ವತಃ ವಾದಕಣಕ್ಕಿಳಿದು ಅಸಾಧಾರಣ ಪ್ರತಿಭೆಯಿಂದ ವಾದಮಾಡಿ ಪೂರ್ವಪಕ್ಷವನ್ನು ಬಲಪಡಿಸಿ, ಶ್ರೀಯವರತ್ತ ತಿರುಗಿ “ಮಹಾಸ್ವಾಮಿ, ಈವರೆಗೂ ಎಲ್ಲ ಶಾಸ್ತ್ರಗಳಲ್ಲಿ ತಮ್ಮ ಶಿಷ್ಯರು, ಸಂಸ್ಥಾನದ ಪಂಡಿತರುಗಳು ವಾದಮಾಡಿದ್ದಾರೆ, ಅದನ್ನು ಹೇಳಿ ಹರ್ಷಿಸಿದ್ದೇವೆ. ಆದರೆ ಪೂಜ್ಯ ಗುರುಗಳ ಅಮೃತವಾಣಿಯನ್ನಾಲಿಸುವ ಸೌಭಾಗ್ಯ ನಮಗೀವರೆಗೆ ದೊರಕಲಿಲ್ಲ. ಈಗಲಾದರೂ ಗುರುಗಳು ನಮ್ಮಾಸೆಯನ್ನು ಪೂರ್ಣಗೊಳಿಸಬೇಕಾಗಿ ಬೇಡುತ್ತೇನೆ” ಎಂದು ವಿಜ್ಞಾಪಿಸಿದರು. 

ಚಾಣಾಕ್ಷತನದಿಂದ ತಮಗೆ ಸವಾಲೆಸೆದ ದೀಕ್ಷಿತರ ಬುದ್ಧಿವಂತಿಕೆಯನ್ನು ಕಂಡು ತಲೆದೂಗಿದ ಶ್ರೀರಾಘವೇಂದ್ರತೀರ್ಥರು ನಸುನಗುತ್ತಾ “ಸಂತೋಷ ದೀಕ್ಷಿತರೇ ! ನಿಮ್ಮಂಥ ವಿದ್ವಜ್ಜನರ ಪ್ರಾರ್ಥನೆಯನ್ನು ಪೂರೈಸುವುದು ನಮ್ಮ ಕರ್ತವ್ಯ. ಆಗಬಹುದು ಎಂದಾಜ್ಞಾಪಿಸಿದರು. ಆಗ ದೀಕ್ಷಿತರು ಕರಜೋಡಿಸಿ “ಗುರುಗಳ ಅಮೃತವಾಣಿಯನ್ನಾಲಿಸಿ ಕೃತಾರ್ಥರಾಗಲು ನಾವು ಆಶಿಸಿದ್ದೇವೆ. ಗುರುಪಾದರನ್ನು ನಾವು ವಾದಕ್ಕೆ ಆಹ್ವಾನಿಸಿದೆವೆಂದು ಭಾವಿಸಬಾರದಾಗಿ ಕೋರುತ್ತೇನೆ” ಎಂದರು. ಶ್ರೀಗಳವರು ಮುಗುಳುನಗೆಬೀರಿ “ದೀಕ್ಷಿತರೇ, ವಾದಕ್ಕೆ ಆಹ್ವಾನಿಸಿದರೂ ಅದು ತಪ್ಪೇನಲ್ಲ! ನಾವು ಮೂರುದಿನಗಳಿಂದಲೂ ನಿಮ್ಮಿ ಆಹ್ವಾನವನ್ನು ಪ್ರತೀಕ್ಷಿಸುತ್ತಲೇ ಇದ್ದೆವು. ನಮಗೀಗ ಸಮಾಧಾನವಾಯಿತು! ನಿಮ್ಮ ಪೂರ್ವಪಕ್ಷಕ್ಕೆ ಈಗ ಉತ್ತರ ನೀಡುತ್ತೇವೆ” ಎಂದು ಹೇಳಿ, ದೀಕ್ಷಿತರ ವಾದವನ್ನು ಸಂಪೂರ್ಣವಾಗಿ ವಿದ್ವತ್ತೂರ್ಣವಾಗಿ ಅನುವಾದಮಾಡಿ, ಅವರ ಆಶಂಕೆಗಳಿಗೆ ಸಮರ್ಥರೀತಿಯಲ್ಲಿ ಉತ್ತರ ನೀಡಿದರು. ಆಗವರು ಸಾಕ್ಷಾತ್ ಸರಸ್ವತಿದೇವಿಯಂತೆ ಕಂಗೊಳಿಸುತ್ತಿದ್ದರು. ಗುರುಗಳ ತೇಜಸ್ಸು, ವ್ಯಕ್ತಿತ್ವ, ಲೋಕವಿಲಕ್ಷಣ ಪಾಂಡಿತ್ಯಗಳಿಂದ ಅತ್ಯಂತ ಪ್ರಭಾವಿತರಾಗಿ ಸಭಾಸದರು ಮಂತ್ರಮುಗ್ಧರಾಗಿ ಕುಳಿತು ಆನಂದಿಸಹತ್ತಿದರು. 

ಶ್ರೀಪಾದಂಗಳವರು ತಮ್ಮ ವಾದವನ್ನೆಲ್ಲಾ ಸಂಪಾರ್ಣವಾಗಿ ಅನುವಾದಮಾಡಲಾರಂಭಿಸಿದಾಗಲೇ ಭಾಟ್ನಮೀಮಾಂಸಾ ಶಾಸ್ತ್ರದಲ್ಲಿ ಗುರುಗಳಿಗಿರುವ ಅನಿತರಸಾಧಾರಣ ಪಾಂಡಿತ್ಯಪ್ರತಿಭೆಗಳು ದೀಕ್ಷಿತರಿಗೆ ಅರಿವಾಗಿತ್ತು! ಶ್ರೀಯವರು ತಮ್ಮ ಎಲ್ಲಾ ಆಶಂಕೆಗಳಿಗೂ ಸುಲಭವಾಗಿ ಸಪ್ರಮಾಣವಾಗಿ ಉತ್ತರ ನೀಡಿದ ಮೇಲಂತೂ ದೀಕ್ಷಿತರು ಹರ್ಷನಿರ್ಭರರಾಗಿ “ಸಾಧು, ಸಾಧು” ಎಂದು ಉದ್ಧರಿಸಿದರು. ವಿದ್ವನ್ಮಂಡಲಿಯು ಕರತಾಡನ - ಶಿರಃಕಂಪನಗಳಿಂದ ಗುರುಗಳನ್ನು ಶ್ಲಾಘಿಸಿತು. ಅನಂತರ ದೀಕ್ಷಿತರು ಭಾಟ್ನಮೀಮಾಂಸಾಶಾಸ್ತ್ರದಲ್ಲಿನ ಅತಿಮುಖ್ಯ ಘಟ್ಟಗಳಲ್ಲಿ ಮಹಾಪಂಡಿತರಿಗೂ ಬಗೆಹರಿಯದ ಅನೇಕ ಕ್ಲಿಷ್ಟವಿಚಾರಗಳನ್ನು ಶ್ರೀಯವರ ಮುಂದೆ ಮಂಡಿಸಿ ಗುರುವರ್ಯ, ಈ ಘಟ್ಟಗಳು ಅನೇಕ ಪಂಡಿತರಿಗೆ, ಅಷ್ಟೆ ಏಕೆ ? ನನಗೂ ಸಹ ಕಗ್ಗಂಟಾಗಿಯೇ ಉಳಿದಿದೆ! ಶ್ರೀಪಾದರು ಇದನ್ನು ಪರಿಹರಿಸಿಕೊಟ್ಟು ಉಪಕರಿಸಬೇಕು” ಎಂದು ಪ್ರಾರ್ಥಿಸಿದರು. ಶ್ರೀಗಳವರು ದರಹಾಸದಿಂದ ದೀಕ್ಷಿತರ ಎಲ್ಲಾ ಸಂಶಯಗಳಿಗೂ ಸುಲಭವಾಗಿ, ಸಪ್ರಮಾಣವಾಗಿ ಸಮಾಧಾನ ಹೇಳಿ ಅವರು ಕ್ಲಿಷ್ಟವೆಂದು ಭಾವಿಸಿದ್ದ ಘಟ್ಟಗಳಿಗೆ ತಮ್ಮ ಪ್ರಜ್ಞಾತಾಂಡವದಿಂದ ಅವೆಲ್ಲ ಅತಿ ಸುಲಭವೆಂಬಂತೆ, ಅವರ ಅಶಂಕೆಗಳನ್ನು ಪರಿಹರಿಸಿ “ಈಗ ನಿಮಗೆ ತೃಪ್ತಿಯಾಯಿತೇ ದೀಕ್ಷಿತರೇ ?” ಎಂದು ನಸುನಕ್ಕರು. 

ನೀಲಕಂಠದೀಕ್ಷಿತರು ತಮ್ಮ ಕಿವಿಗಳನ್ನೇ ನಂಬದಂತಾದರು. ತಮಗೆ ಬಹುವರ್ಷಗಳಿಂದ ಕಗ್ಗಂಟಾಗಿಯೇ ಉಳಿದಿದ್ದ ವಿಚಾರಗಳನ್ನು ಶ್ರೀಯವರು ಲೀಲೆಯೋ ಎಂಬಂತೆ ಸುಲಭವಾಗಿ ಬಿಚ್ಚಿತೋರಿ ಸಮಾಧಾನ ಹೇಳಿದ್ದರಿಂದ ಅವರಿಗೆ ಆನಂದಾತಿಶಯವನ್ನು ತಡೆಯಲಾಗಲಿಲ್ಲ. ಕೂಡಲೇ ಮೇಲೆದ್ದು ಹೊದ್ದಿದ್ದ ವಸ್ತ್ರವನ್ನು ಟೊಂಕಕ್ಕೆ ಕಟ್ಟಿ ಶ್ರೀಪಾದಂಗಳವರಿಗೆ ಮೂರು ಬಾರಿ ಶಿರಸಾಷ್ಟಾಂಗ ಪ್ರಣಾಮ ಮಾಡಿ “ಧನ್ಯನಾದೆ ಗುರುದೇವ! ತಾವು ನಿಜವಾಗಿಯೂ ಅಭಿನವ ಭಟ್ಟರೇ ಆಗಿದ್ದೀರಿ! ತಮ್ಮಂಥ ಜ್ಞಾನಿನಾಯಕರ ಪರಿಚಯವಾದದ್ದು ನನ್ನ ಸುದೈವ. ಬಹುದಿನದ ನನ್ನ ಸಂದೇಹಗಳನ್ನು ಪರಿಹರಿಸಿ, ಭಾಟ್ಟಮತದಲ್ಲಿ ನನಗೆ ಹೆಚ್ಚು ದೀಕ್ಷೆಯುಂಟಾಗುವಂತೆ ಮಾಡಿದ ತಮಗೆ ನಮೋ ನಮಃ” ಎಂದು ಬಿನ್ನವಿಸಿದರು. 

ಇದನ್ನೆಲ್ಲಾ ವಿಸ್ಮಿತನಾಗಿ ನೋಡುತ್ತಾ ಕುಳಿತಿದ್ದ ತಿರುಮಲನಾಯಕನಿಗೆ ಪರಮಾನಂದವಾಯಿತು. ರಾಜಾಸ್ಥಾನದ ಸಮಸ್ತಪಂಡಿತರು ಸಂತೋಷಾಧಿಕ್ಯದಿಂದ ಮೈಮರೆತು “ಶ್ರೀರಾಘವೇಂದ್ರಗುರುಸಾರ್ವಭೌಮರಿಗೆ ಜಯವಾಗಲಿ!” ಎಂದು ಜಯಘೋಷ ಮಾಡಿದರು. ಸಭಾಸದರು ಪ್ರಚಂಡ ಕರತಾಡನಮಾಡಿ ಗುರುಗಳಿಗೆ ತಮ್ಮ ಭಕ್ತಿಯನ್ನರ್ಪಿಸಿದರು. 

ಆಗ ಲಕ್ಷ್ಮೀನರಸಿಂಹಾಚಾರ್ಯರು ವೇದಿಕೆಯನ್ನೇರಿ ನಿಂತು “ಮಹಾಪಂಡಿತರಾದ ನಮ್ಮ ನೀಲಕಂಠದೀಕ್ಷಿತರು ಮೀಮಾಂಸಾಶಾಸ್ತ್ರದಲ್ಲಿನ ಗುರುರಾಜರ ಅಪಾರ ವಿದ್ವತ್ತನ್ನು ಕಂಡು ಮುಕ್ತಕಂಠದಿಂದ ಹೊಗಳಿದ್ದು ಅವರ ಸಹೃದಯತೆ ಹಾಗೂ “ವಿದ್ವಾನೇವ ವಿಜಾನಾತಿ ವಿದ್ವಜ್ಜನ ಪರಿಶ್ರಮಂ” ಎಂಬ ಪ್ರಮಾಣಕ್ಕೆ ತಕ್ಕಂತೆ ಸ್ವತಃ ಮಹಾಪಂಡಿತರಾದ್ದರಿಂದಲೇ ಅವರು ಉದಾರವಾಗಿ ವರ್ತಿಸಿ ಸರ್ವರ ಪ್ರೇಮಾದರಗಳಿಗೂ, ಗುರುಗಳ ಅನುಗ್ರಹಕ್ಕೂ ಪಾತ್ರರಾಗಿದ್ದಾರೆ. ಈ ಆನಂದದ ಸಮಯದಲ್ಲಿ ನಾನೊಂದು ಮುಖ್ಯವಿಚಾರವನ್ನು ಈ ವಿದ್ವತ್ಸಭೆಯಲ್ಲಿ ನಿವೇದಿಸಬಯಸಿದ್ದೇನೆ. ನಮ್ಮ ಪೂಜ್ಯ ಗುರುವರ್ಯರು ಮೀಮಾಂಸಾಶಾಸ್ತ್ರದಲ್ಲಿ ತತ್ರಾಪಿ ಭಾಟ್ಟಮತದಲ್ಲಿ ಅಸಾಧಾರಣ ಪಂಡಿತರಾಗಿರುವುದು ಮಾತ್ರವಲ್ಲ: ಭಾಟ್ನಮತಾನುಸಾರವಾಗಿ “ಛಾಟ್ಟಸಂಗ್ರಹ” ಎಂಬ ಅದ್ವಿತೀಯ ಮೀಮಾಂಸಾಶಾಸ್ತ್ರಗ್ರಂಥವನ್ನು ರಚಿಸಿದ್ದಾರೆ! ಅದನ್ನು ನಮ್ಮ ದೀಕ್ಷಿತರು ಪರಿಶೀಲಿಸಿ ತಮ್ಮ ಅಭಿಪ್ರಾಯವನ್ನು ಸಭೆಗೆ ತಿಳಿಸಬೇಕಾಗಿ ನಾನು ಅಪೇಕ್ಷಿಸುತ್ತೇನೆ” ಎಂದು ಹೇಳಿ ಗುರುಗಳು ಬರೆದ ಭಾಟ್ಟಸಂಗ್ರಹ” ಗ್ರಂಥವನ್ನು ದೀಕ್ಷಿತರಿಗೆ ನೀಡಿದರು. ಆಗಲಂತೂ ದೀಕ್ಷಿತರ ಸಂತೋಷ ಮೇರೆಮೀರಿತು! ಪ್ಲಾ ಏನು? ಇದು ಗುರುಗಳು ರಚಿಸಿದ ಭಾಟ್ಟಸಂಗ್ರಹವೇ ? ನಮ್ಮ ಭಾಟ್ಟಮತಕ್ಕೆ ಗ್ರಂಥರಚನೆಯಿಂದ ಮಾನ್ಯತೆ ತಂದುಕೊಟ್ಟಿರುವರೇ? ಸಂತೋಷ, ಪರಮಸಂತೋಷ!” ಎಂದು ಗ್ರಂಥವನ್ನು ಕಣ್ಣಿಗೊತ್ತಿಕೊಂಡು ಶ್ರೀಗಳಿಗೆ ಸಾಷ್ಟಾಂಗವೆರಗಿ “ಸ್ವಾಮಿ ನಾನಿಂದು ಧನ್ಯನಾದೆ!” ಎಂದು ವಿಜ್ಞಾಪಿಸಿ ಆನಂತರ “ನಾಳೆ ಸಭಾಧ್ಯಕ್ಷರ ಉಪದೇಶ ಭಾಷಣ, ವಿದ್ದಂಭಾವನೆಗಳೊಡನೆ ಈ ಮಹಾವಿದ್ವತ್ಸಭೆಯು ಪರಿಸಮಾಪ್ತವಾಗುವುದು” ಎಂದು ಘೋಷಿಸಿದರು ತರುವಾಯ ಅಂದಿನ ಕಾರ್ಯಕಲಾಪಗಳು ಮುಕ್ತಾಯವಾದವು. 

ಮಧುರೆಯ ರಾಜಸಭೆಯಲ್ಲಿಂದು ಜನರು ಕಿಕ್ಕಿರಿದು ತುಂಬಿದ್ದಾರೆ. ಶ್ರೀನೀಲಕಂಠದೀಕ್ಷಿತರು ಪ್ರಾಸ್ತಾವಿಕ ಭಾಷಣ ಮಾಡಿ ಶ್ರೀಪಾದಂಗಳವರು ಮೀಮಾಂಸಾಶಾಸ್ತ್ರದಲ್ಲಿ ಪ್ರಕಟಿಸಿದ ಅದ್ಭುತ ಪಾಂಡಿತ್ಯ, ಅವರ ಜ್ಞಾನ-ಭಕ್ತಿ-ವೈರಾಗ್ಯ, ಗ್ರಂಥರಚನೆ, ಮಹಾಮಹಿಮೆಗಳನ್ನು ಮುಕ್ತಕಂಠದಿಂದ ಶ್ಲಾಘಿಸಿ, ಅನಂತರ ಗುರುಗಳು ರಚಿಸಿದ “ಭಾಟ್ಟಸಂಗ್ರಹ” ವಿಚಾರವನ್ನು ಪ್ರಸ್ತಾಪಿಸಿ, “ಒಂದೇ ಮಾತಿನಲ್ಲಿ ಹೇಳುವುದಾದರೆ “ಭಾಟ್ನಸಂಗ್ರಹ” ಗ್ರಂಥವು ಪೂರ್ವಮೀಮಾಂಸಾಶಾಸ್ತ್ರಕ್ಕೆ ಶ್ರೀಗುರುಗಳು ನೀಡಿರುವ ಅಸಾಧಾರಣ, ಅಪೂರ್ವ ಕಾಣಿಕೆ ಎಂದು ಘಂಟಾಘೋಷವಾಗಿ ಘೋಷಿಸಲು ನನಗೆ ಪರಮಾನಂದವಾಗುತ್ತಿದೆ. ನಮ್ಮಂಥ ಮೀಮಾಂಸಾಶಾಸ್ತ್ರ ಪ್ರವೀಣರಿಗೆ ಈ ಗ್ರಂಥವು ಮಹೋಪಕಾರವೂ, ಪಾಠಪ್ರವಚನಗಳಿಗೆ ಅತ್ಯಂತ ಸಹಾಯಕವೂ ಆಗಿದೆ. ಕಳೆದ ಎರಡು ಶತಮಾನಗಳಲ್ಲಿ ಮೊದಲಬಾರಿಗೆ ರಚಿತವಾಗಿರುವ ಈ ಮಹಾಗ್ರಂಥವು ಜಗನ್ಮಾನ್ಯವಾಗಿದೆ ಎಂದು “ಉತ ಭುಜಮುಚ್ಯತೇ!” ಎರಡು ತೋಳುಗಳನ್ನೂ ಮೇಲೆತ್ತಿ ಹೇಳಲು ಹೆಮ್ಮೆ ಪಡುತ್ತೇನೆ” ಮುಂತಾಗಿ ಪ್ರಾಸ್ತಾವಿಕ ಭಾಷಣ ಮಾಡಿದರು. ಸಮಸ್ತ ಸಭಿಕರೂ ಹರ್ಷಧ್ವನಿ ಮಾಡಿದರು. 

ಆ ನಂತರ ತಿರುಮಲನಾಯಕರು ಮೇಲೆದ್ದು ನಿಂತು ಶ್ರೀಪಾದಂಗಳವರು ಅಲಂಕರಿಸಿರುವ ಗುರುಪೀಠಕ್ಕೂ ತಮ್ಮ ರಾಜಾಸ್ಥಾನಕ್ಕೂ ಶ್ರೀಸುರೇಂದ್ರಗುರುಗಳ ಕಾಲದಿಂದ ನಡೆದುಬಂದಿರುವ ಮಧುರ ಬಾಂಧವ್ಯ, ಗುರು-ಶಿಷ್ಯ ಭಾವಾದಿಗಳನ್ನು ವಿವರಿಸಿ, “ಇವರ ಅನುಗ್ರಹದಿಂದ ನಮ್ಮ ರಾಜ್ಯ ಮಾತ್ರವಲ್ಲ: ದಕ್ಷಿಣದ ಎಲ್ಲಾ ರಾಜ್ಯಗಳೂ ಅಭಿವೃದ್ಧಿಗೆ ಬಂದು ಪ್ರಜರು ಸುಖ-ಸಂತೋಷದಿಂದ ಬಾಳುವಂತಾಗಿದೆ. ಈ ಮಹನೀಯರು ರಚಿಸಿದ “ಭಾಟ್ಟಸಂಗ್ರಹ”ವೆಂಬ ಮಹಾಗ್ರಂಥವನ್ನು ಅಸಾಧಾರಣ ರೀತಿಯಿಂದ ಗೌರವಿಸಲು ಶ್ರೀದೀಕ್ಷಿತರ ಸಲಹೆಯಂತೆ ತೀರ್ಮಾನಿಸಿ, ಈ ಗುರುಗಳ ಮಹಾಗ್ರಂಥವನ್ನು ಆನೆಯ ಮೇಲೆ ಅಂಬಾರಿಯಲ್ಲಿಟ್ಟು ಸಕಲ ವೈಭವದಿಂದ ರಾಜಧಾನಿಯಲ್ಲಿ ಮೆರೆಸಿ ಗೌರವಿಸಲು ನಿಶ್ಚಯಿಸಿದ್ದೇವೆ. ಶ್ರೀಗುರುಗಳು ಇದಕ್ಕೆ ಸಮ್ಮತಿ ನೀಡುವರೆಂದು ನಂಬಿದ್ದೇನೆ” ಮುಂತಾಗಿ ನಿರೂಪಿಸಲು ಸಕಲರಿಗೂ ಮಹಾರಾಜರ ವಿಜ್ಞಾಪನೆಯಿಂದ ಪರಮ ಸಂತೋಷವಾಗಿ ಹರ್ಷಧ್ವನಿ ಮಾಡಿದರು. ಆಗ ಗುರುವರ್ಯರು ಹಸನ್ಮುಖದಿಂದ “ಶ್ರೀಮೂಲರಾಮನ ಚಿತ್ರ, ನಮ್ಮ ಗುರುಪಾದರ ಅನುಗ್ರಹ. ಆಗಲಿ, ರಾಜನ್, ನಿನ್ನ ಪ್ರಾರ್ಥನೆಯಂತೆ ಆಗಲಿ” ಎಂದರು. ಆನಂತರ ಗುರುರಾಜರು ಅತ್ಯಮೋಘವಾಗಿ ವಿದ್ದತ್ತೂರ್ಣವಾಗಿ ಉಪದೇಶಮಾಡಿ ಸರ್ವರನ್ನೂ ಆನಂದಗೊಳಿಸಿದರು. ಆನಂತರ ನೀಲಕಂಠದೀಕ್ಷಿತರು “ಪ್ರಭುಗಳ ಪ್ರಾರ್ಥನೆಯಂತೆ ವಿದ್ವತ್ತಭೆಯ ಅಧ್ಯಕ್ಷತೆ ವಹಿಸಿ ಯಶಸ್ವಿಯಾಗಿ ನಿರ್ವಹಿಸಿಕೊಟ್ಟ ಶ್ರೀಗಳವರಿಗೆ ಪ್ರಭುಗಳು ಸಂಪತ್ತಮೃದವಾದ ಎರಡು ಗ್ರಾಮಗಳನ್ನೂ, ದೇವರಿಗೆ ನವರತ್ನಾಭರಣಗಳನ್ನೂ, ಭಾಟ್ಟಸಂಗ್ರಹವನ್ನು ಗೌರವಿಸಲು ಸುವರ್ಣಪೀಠ ಪ್ರಭಾವಳಿಯನ್ನೂ ಅರ್ಪಿಸುತ್ತಾರೆ. ಗುರುವರ್ಯರು ಸ್ವೀಕರಿಸಿ ಆಶೀರ್ವದಿಸಬೇಕು” ಎಂದು ಕೋರಿದರು. ಆಗ ತಿರುಮಲನಾಯಕರು ಗುರುಗಳಿಗೆ ಸಂಕಲ್ಪ ಪೂರ್ವಕವಾಗಿ ಎರಡು ಗ್ರಾಮಗಳು, ನವರತ್ನಾಭರಣಗಳು, ಸುವರ್ಣಪೀಠ, ಶಾಲು ಜೋಡಿ ಕಾಣಿಕೆಗಳನ್ನು ಸಮರ್ಪಿಸಿ ನಮಸ್ಕರಿಸಿ ಗುರುಗಳ ಅನುಗ್ರಹಕ್ಕೆ ಪಾತ್ರರಾದರು.

ಅರಮನೆಯ ಹೊರಭಾಗದಲ್ಲಿ ಅಲಂಕೃತ ಗಜರಾಜನ ಮೇಲೆ ಸುವರ್ಣಮಯ ಅಂಬಾರಿಯಲ್ಲಿ ತಿರುಮಲನಾಯಕರಿತ್ತ ಸುವರ್ಣಪೀಠ ಪ್ರಭಾವಳಿಯ ಆಸನದಲ್ಲಿ ಭಾಟ್ಟ ಸಂಗ್ರಹ ಗ್ರಂಥವನ್ನಿಟ್ಟು ಅಲಂಕರಿಸಲಾಗಿದೆ. ಪಂಡಿತರು, ಪೌರಜಾನಪದರು, ದರ್ಬಾರಿನ ಪ್ರಮುಖರು, ಸೇನಾನಿಗಳು, ಸೈನಿಕರು ರಾಜ್ಯದ ಸಮಸ್ತ ಬಿರುದಾವಳಿಗಳು, ವಿವಿಧ ವಾದ್ಯ, ಭೇರಿ, ನಗಾರಿ, ಕಹಳೆಗಳನ್ನು ಹಿಡಿದವರು, ಆನೆ, ಒಂಟೆ, ಕುದುರೆಗಳು - ಹೀಗೆ ಎಲ್ಲರೂ ಸಿದ್ಧರಾಗಿದ್ದಾರೆ. ತಿರುಮಲನಾಯಕರು, ಮಂತ್ರಿ ನೀಲಕಂಠದೀಕ್ಷಿತರುಗಳು ಎರಡು ಚಾಮರಗಳನ್ನು ಹಿಡಿದು ಬೀಸುತ್ತಾ ಮೆರವಣಿಗೆಯನ್ನು ಹೊರಡಿಸಿದರು. ಆಗ ತೋಪುಖಾನೆಯಿಂದ ಇಪ್ಪತ್ತೊಂದು ಗುಂಡುಗಳು ಹಾರಿದವು. ಪಂಡಿತರು ವೇದಘೋಷ ಮಾಡಹತ್ತಿದರು. ಮಂಗಳವಾದ್ಯಗಳು ಮೊಳಗಿದವು. ಭಾಟ್ಟಸಂಗ್ರಹವನ್ನು ಹೊತ್ತ ಗಜರಾಜನು ರಾಜಠೀವಿಯಿಂದ ಗಂಭೀರವಾಗಿ ಮುನ್ನೆಡೆದನು. ಸಹಸ್ರಾರು ಜನರು ಜಯಘೋಷಮಾಡುತ್ತಾ ಲಾಜಾಪುಷ್ಪಗಳನ್ನು ವರ್ಷಿಸತೊಡಗಿದರು. ಅತ್ಯಂತ ವೈಭವದ ಆ ಮೆರವಣಿಗೆಯು ಮಧುರಾಪುರದ ಎಲ್ಲರಾಜಬೀದಿಗಳಲ್ಲಿಯೂ ಸಂಭ್ರಮದಿಂದ ಬರಹತ್ತಿತ್ತು. ಅಲ್ಲಲ್ಲಿ ಜನರು ಪುಷ್ಪವೃಷ್ಟಿ ಮಾಡುತ್ತಾ ಜಯಘೋಷಮಾಡುತ್ತಿದ್ದರು. ಸುಮಾರು ಎರಡು ಘಂಟೆಗಳ ಕಾಲ ರಾಜಬೀದಿಗಳಲ್ಲಿ ಮೆರೆದ 'ಭಾಟ್ಟಸಂಗ್ರಹ'ವನ್ನು ಹೊತ್ತ ಅಂಬಾರಿಯು “ಸರಸ್ವತೀಮಂದಿರ'ಕ್ಕೆ ಬಂದಿತು. 

ಅಂದು ಜರುಗಿದ ಆ ಸಂಭ್ರಮದ ಮೆರವಣಿಗೆಯು ಹಿಂದೆ ಶ್ರೀವಿದ್ಯಾರಣ್ಯಮುನಿಗಳು ಶ್ರೀಜಯತೀರ್ಥರ ಗ್ರಂಥಗಳನ್ನು ಆನೆಯ ಮೇಲೆ ಅಂಬಾರಿಯಲ್ಲಿಟ್ಟು ರಾಜಧಾನಿಯಲ್ಲಿ ವೈಭವದಿಂದ ಮೆರೆಸಿದ ವಿಚಾರವನ್ನು ನೆನಪಿಗೆ ತರುತ್ತಿತ್ತು! ಭಾರತದ ಅದರಲ್ಲೂ ದಕ್ಷಿಣಭಾರತದ ಇತಿಹಾಸದಲ್ಲಿ ದೈತಸಿದ್ಧಾಂತದ ಇತಿಹಾಸದಲ್ಲಿ ಇಂತಹ ಅಮೋಘವಾ, ಮಹತ್ವಪೂರ್ಣವೂ, ಅಪೂರ್ವವೂ ಆದ ಮೆರವಣಿಗೆಯೆಂದರೆ ಮೊದಲನೆಯದು ಶ್ರೀಜಯತೀರ್ಥರ ಗ್ರಂಥಗಳು ಮೆರೆದದ್ದು, ಅದಾದ ಮೇಲೆ ಎರಡನೆಯ ಬಾರಿ ಐತಿಹಾಸಿಕ ಮಹತ್ವಪೂರ್ಣವಾದ ಭಾಟ್ಟಸಂಗ್ರಹ ಮೆರವಣಿಗೆ - ಎಂದು ಘಂಟಾಘೋಷವಾಗಿ ಹೇಳಲು ಹರ್ಷಿಸುತ್ತೇವೆ.

ಈ ಮಹತ್ವಪೂರ್ಣ ಐತಿಹಾಸಿಕ ವೈಭವವನ್ನು ಶ್ರೀವಾದೀಂದ್ರತೀರ್ಥಗುರುಚರಣರು “ಶ್ರೀಗುರುಗುಣಸ್ತವನದಲ್ಲಿ ಹೀಗೆ ವರ್ಣಿಸಿದ್ದಾರೆ - 

“ಮಂತ್ರಿ ಶ್ರೀನೀಲಕಂಠಾಭಿಧಮಖಿಮಣಿನಾ ಭಟ್ಟತಂತ್ರಾನುಬಂಧ | 

ಗ್ರಂಥ ತಾವತದೀಯೇ ಕರಿಣಿ ಗುಣವಿದಾರೋಪಿತೇ ಭರ್ಹಣಾಯ || ಕೀರ್ತಿಸ್ತೇ ರಾಘವೇಂದ್ರವ್ರತಿಸುಮತಿಮಣೇ ! ನ್ಯೂನಮನ್ಯೂನವೇಗಾ- ದ್ವಿಗ್‌ನಾಗಾನಾರುರುಕ್ಷುಃ ಸ್ವಯಮಪಿ ಸಹಸಾ ಧಾವದದಿಗಂತಾನ್ ” 

ವ್ರತಗಳಲ್ಲಿಯೂ, ಸುಮತಿಗಳಲ್ಲಿಯೂ ಅತ್ಯಂತಶ್ರೇಷರಾದ ಶ್ರೀರಾಘವೇಂದ್ರತೀರ್ಥಗುರುಸಾರ್ವಭೌಮರೇ! ಸ್ವಸಿದ್ಧಾಂತ ಸಂಪತ್ತುಳ್ಳ, ಅಂದರೆ ಅದೈತ ಪೂರ್ವಮೀಮಾಂಸಾಶಾಸ್ತ್ರಗಳಲ್ಲಿ ವಿಖ್ಯಾತ ಪಂಡಿತರಾದ, ವಿದ್ಯಾಪಕ್ಷಪಾತಿಗಳೂ ಗುಣಜ್ಞರೂ ಆದ ಮಧುರಾ ರಾಜ್ಯದ ಮಹಾಮಂತ್ರಿಗಳಾದ ಶ್ರೀನೀಲಕಂಠದೀಕ್ಷಿತರು (ಮಧುರಾ ರಾಜ್ಯಾಧಿಪತಿಯಾದ ತಿರುಮಲನಾಯಕನ ಪ್ರಾರ್ಥನೆಯಂತೆ), ನೀವು ಪೂರ್ವಮೀಮಾಂಸಾಶಾಸ್ತ್ರದಲ್ಲಿ ರಚಿಸಿದ ಅತ್ಯಂತ ಶ್ರೇಷ್ಠವಾದ “ಭಾಟ್ಟಸಂಗ್ರಹ” ಗ್ರಂಥವನ್ನು ಗೌರವಿಸಲಾಶಿಸಿ ಆ ಮಹಾಗ್ರಂಥವನ್ನು ಆನೆಯ ಮೇಲೆ ಅಂಬಾರಿಯಲ್ಲಿ ಮಂಡಿಸಿ ರಾಜಧಾನಿಯಲ್ಲಿ ರಾಜವೈಭವದಿಂದ ಮೆರೆಸಿದರು! ಹೀಗೆ ನಿಮ್ಮ ಗ್ರಂಥವು ಲೋಕಮಾನ್ಯತೆ ಗಳಿಸಿ “ಗಜಾರೋಹಣ” ಮಾಡಿದ್ದರಿಂದ ನಿಮ್ಮ ಕೀರ್ತಿಯೂ ತಾನೂ ಸಹ ದಿಗ್ಗಜಗಳನ್ನೇರಬೇಕೆಂದು ಅತಿವೇಗವಾಗಿ ಅಷ್ಟದಿಗಂತಗಳನ್ನು ಕುರಿತು ಧಾವಿಸಿತು! ಅಂದರೆ - ಸ್ವಾಮಿ, ಈ ನಿಮ್ಮ ಗ್ರಂಥವು ಆನೆಯ ಮೇಲೆ ಅಂಬಾರಿಯಲ್ಲಿ ಮೆರೆದಿದ್ದರಿಂದ ನಿಮ್ಮ ಕೀರ್ತಿಯೂ ದಿಗಂತವಿಶ್ರಾಂತವಾಯಿತು ಎಂಬ ಭಾವ ! ಮಧುರೆಯ ಈ ಮಹಾದಿಗ್ವಿಜಯವು ಶ್ರೀರಾಘವೇಂದ್ರಗುರುಸಾರ್ವಭೌಮರ ದಿಗ್ವಿಜಯಗಳಲ್ಲಿ ಅತ್ಯಂತ ಮಹತ್ವಪೂರ್ಣ ಐತಿಹಾಸಿಕ ಘಟನೆಯಾಗಿದೆಯೆಂದು ಹೇಳಬಹುದು. 

ಅದು ಸಂಜೆ ಶ್ರೀಯವರು ನೆರವೇರಿಸಿದ ವಿದ್ವತ್ಸಭೆಯಲ್ಲಿ ಶ್ರೀರಾಘವೇಂದ್ರತೀರ್ಥಗುರುಸಾರ್ವಭೌಮರು ಮಧುರಾಧಿಪತಿ ಯಾದ ತಿರುಮಲನಾಯಕನಿಗೆ ಸುವರ್ಣ ಸೀತಾರಾಮ ಪ್ರತಿಮಾಪದಕಶೋಭಿತವಾದ ಮುಕ್ತಮಾಲೆ, ಪೀತಾಂಬರ, ಶಾಲುಜೋಡಿ- ಗಳನ್ನಿತ್ತು ಗೌರವಪೂರ್ವಕವಾಗಿ ಆಶೀರ್ವದಿಸಿದರು. ಇದರಂತೆ ಮಂತ್ರಿಗಳು, ಮಹಾಪಂಡಿತರೂ ಆದ ಶ್ರೀನೀಲಕಂಠದೀಕ್ಷಿತರಿಗೆ ಮುಕ್ತಾಮಾಲೆ, ಜೋಡಿಶಾಲುಗಳೊಡನೆ “ವಿದ್ದಚೂಡಾಮಣಿ” ಎಂಬ ಪ್ರಶಸ್ತಿಯನ್ನು ಅನುಗ್ರಹಿಸಿ, ಫಲಮಂತ್ರಾಕ್ಷತೆ ಕರುಣಿಸಿದರು. ತರುವಾಯ ಶ್ರೀಪಾದಂಗಳವರು ಶ್ರೀಸುಂದರೇಶ್ವರ ಶ್ರೀಮೀನಾಕ್ಷಿದೇವಿಯರ ಸಂದರ್ಶನ ಮಾಡಿ ಭಕ್ತಿಪೂರ್ವಕ ನಮಸ್ಕರಿಸಿ ರಾಜಧಾನಿಯಲ್ಲಿ ತಮಗೆ ದೊರೆತ ಎಲ್ಲ ದಿಗ್ವಿಜಯ್-ಗೌರವಗಳನ್ನೂ ಶ್ರೀಮೀನಾಕ್ಷೀ ಸುಂದರೇಶಾಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಸಂಕರ್ಷಣಾಭಿನ್ನ ಶ್ರೀಮೂಲರಾಮಚಂದ್ರದೇವರಿಗೆ ಸಮರ್ಪಿಸಿದರು. ಮರುದಿನ ಶ್ರೀಪಾದಂಗಳವರು ತಿರುಮಲನಾಯಕ, ನೀಲಕಂಠದೀಕ್ಷಿತರು, ವಿದ್ವಜ್ಜನರು, ಧರ್ಮಾಭಿಮಾನಿಗಳಿಂದ ಬೀಳ್ಕೊಂಡು ಮಹಾಸಂಸ್ಥಾನದೊಡನೆ ಶ್ರೀರಂಗಕ್ಷೇತ್ರಕ್ಕೆ ಹೊರಟರು.