ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೭೭. ಮಧುರೆಯಲ್ಲಿ ವಿಜಯಪರಂಪರೆ
ಮಧುರೆಯಲ್ಲಿ ಆಗ ನೀಲಕಂಠದೀಕ್ಷಿತರ ಪ್ರಭಾವ ಅಧಿಕವಾಗಿದ್ದಿತು. ದೀಕ್ಷಿತರು ಜಗದ್ವಿಖ್ಯಾತರಾಗಿದ್ದ ಅಪ್ಪಯ್ಯ ದೀಕ್ಷಿತರ ಪೌತ್ರರೂ, ಮಹಾಪಂಡಿತರೂ ಆಗಿದ್ದರು. ಶ್ರೀವಿಜಯೀಂದ್ರರು-ಅಪ್ಪಯ್ಯದೀಕ್ಷಿತರಿಗಿದ್ದ ಸ್ನೇಹ-ಸೌಹಾರ್ದವನ್ನು ತಿಳಿದಿದ್ದ ವಿದ್ಯಾಪಕ್ಷಪಾತಿಗಳಾಗಿದ್ದ ದೀಕ್ಷಿತರು ಸ್ವಾಭಾವಿಕವಾಗಿ ಶ್ರೀವಿಜಯೀಂದ್ರ ಸುಧೀಂದ್ರ ರಾಘವೇಂದ್ರರಲ್ಲಿ ಅತಿಗೌರವವನ್ನಿಟ್ಟಿದ್ದರು. ಶ್ರೀರಾಘವೇಂದ್ರರಂಥ ಮಹಾತ್ಮರು ರಾಜಧಾನಿಗೆ ದಯಮಾಡುವುದು ರಾಜ್ಯದ ಭಾಗ್ಯದಯವೆಂದು ಭಾವಿಸಿ ಅವರೂ ಗುರುಗಳ ಆಗಮನವನ್ನು ಕುತೂಹಲದಿಂದ ನಿರೀಕ್ಷಿಸುತ್ತಿದ್ದರು.
ಶ್ರೀರಾಘವೇಂದ್ರಗುರುಗಳು ಮಹಾಸಂಸ್ಥಾನದೊಡನೆ ನಿಶ್ಚಿತವಾದನ ಆಗಮಿಸಿದರು. ರಾಜ್ಯದ ಸಮಸ್ತ ಬಿರುದುಬಾವಲಿ ವೈಭವಗಳಿಂದ ರಾಜ-ಮಂತ್ರಿ-ಪಂಡಿತಮಂಡಲಿ, ಪೌರಜಾನಪದರು ಗುರುಗಳನ್ನು ಪೂರ್ಣಕುಂಭದೊಡನೆ ಸ್ವಾಗತಿಸಿ ಗೌರವದಿಂದ ಮೆರವಣಿಗೆಯೊಡನೆ ಕರೆತಂದು “ಸರಸ್ವತೀಮಂದಿರದಲ್ಲಿ ಬಿಡಾರ ಮಾಡಿಸಿದರು. ಮರುದಿನ ಮಹಾರಾಜರ ಪ್ರಾರ್ಥನೆಯಂತೆ ಗುರುಗಳು ಅರಮನೆಗೆ ತೆರಳಿ ರಾಜರಿಂದ ಪಾದಪೂಜಾದಿಗಳನ್ನು ಸ್ವೀಕರಿಸಿ ಬಿಡಾರಕ್ಕೆ ದಯಮಾಡಿಸಿದರು. ಅಲ್ಲಿ ಮಹಾರಾಜರು ಅದ್ಧೂರಿಯ ಭಿಕ್ಷೆಯನ್ನೇರ್ಪಡಿಸಿದ್ದರು. ಶ್ರೀಮೂಲರಾಮದೇವರ ಪೂಜಾರಾಧನೆಯನ್ನು ಅವಲೋಕಿಸಿ ಪ್ರಭುಗಳು, ಗುರುಗಳು ಭಿಕ್ಷಾ ಸ್ವೀಕರಿಸಿದ ಮೇಲೆ ತೀರ್ಥ-ಪ್ರಸಾದವನ್ನು ಸ್ವೀಕರಿಸಿ, ದೇವರ ಪ್ರಸಾದ - ಫಲಮಂತಾಕ್ಷತೆ ಪಡೆದು ಪುನೀತರಾದರು. ಅಂದು ಸಂಜೆ ಶ್ರೀಯವರು ಉಪದೇಶ ಭಾಷಣ ಮಾಡಿದ ಮೇಲೆ ನೀಲಕಂಠದೀಕ್ಷಿತರ ಸಲಹೆಯಂತೆ ತಿರುಮಲರಾಜ ಗುರುಗಳ ಅಧ್ಯಕ್ಷತೆಯಲ್ಲಿ ವಿದ್ವತ್ತಭೆ ನೆರವೇರಿಸಲು ನಿರ್ಧರಿಸಿ ಅದನ್ನು ಶ್ರೀಯವರಲ್ಲಿ ವಿಜ್ಞಾಪಿಸಿದಾಗ ಗುರುಗಳು ಸಂತೋಷದಿಂದ ಸಮ್ಮತಿಸಿದರು.
ಮರುದಿನ ಬೆಳಿಗ್ಗೆ ಸುವರ್ಣಪಾಲಿಕೆಯಲ್ಲಿ ಶ್ರೀಗಳವರು ವೇದಘೋಷ, ವಾದ್ಯವೈಭವದೊಡನೆ ಅರಮನೆಗೆ ಬಂದರು. ತಿರುಮಲನಾಯಕ-ದೀಕ್ಷಿತರು ಗುರುಗಳನ್ನು ಸ್ವಾಗತಿಸಿ ಕರೆತಂದು ಭದ್ರಾಸನದಲ್ಲಿ ಕೂಡಿಸಿ ನಮಸ್ಕರಿಸಿದರು. ಸಭೆಯು ಕಿಕ್ಕಿರಿದು ತುಂಬಿದ್ದಿತು.
ಶ್ರೀಯವರ ಅಧ್ಯಕ್ಷತೆಯಲ್ಲಿ ವಿದ್ವತ್ತನೆ ಪ್ರಾರಂಭವಾಯಿತು. ಮಧುರೆಯ ಆಸ್ಥಾನದ ನಾಲ್ಕಾರು ಜನ ಪಂಡಿತರು; ವೇದಾಂತ, ನ್ಯಾಯ, ಮೀಮಾಂಸಾ, ಧರ್ಮಶಾಸ್ತ್ರ, ವ್ಯಾಕರಣಶಾಸ್ತ್ರಗಳಲ್ಲಿ ಶ್ರೀಮಠದ ಪಂಡಿತರೂ, ಸ್ವಾಮಿಗಳವರ ಶಿಷ್ಯರೂ ಆದ ನಾರಾಯಣಚಾರ, ವೆಂಕಟನಾರಾಯಣಾಚಾರ್, ಶ್ರೀಪಾದಪುತ್ರ ಲಕ್ಷ್ಮೀನಾರಾಯಣಾಚಾರ್ಯ, ಕೃಷ್ಣಾಚಾರ, ಗೋವಿಂದಾಚಾರ ಮುಂತಾದವರೊಡನೆ ವಾಕ್ಯಾರ್ಥಮಾಡಿದರು. ಮೂರುದಿನ ಜರುಗಿದ ವಾಕ್ಯಾರ್ಥಗಳಲ್ಲಿ ಮೇಲ್ಕಂಡ ಶ್ರೀಯವರ ಶಿಷ್ಯರು ಅಪೂರ್ವವಿಜಯಗಳಿಸಿ ಸರ್ವರ ಗೌರವಾದರಗಳಿಗೆ ಪಾತ್ರರಾದರು. ನಾಲ್ಕನೆಯ ದಿನ 'ನ್ಯಾಯಸುಧೆ'ಯ ಮೇಲೆ ದೋಷಗಳನ್ನು ಹೇಳಿ ಅದೈತ ಪಂಡಿತರು ಪೂರ್ವಪಕ್ಷ ಮಾಡಿದಾಗ ಶ್ರೀಗಳವರ ಪೂರ್ವಾಶ್ರಮ ಅಣ್ಣಂದಿರೂ, ಶ್ರೀಸುಧೀಂದ್ರರ ವಿದ್ಯಾಶಿಷ್ಯರೂ ಆದ ಗುರುರಾಜಾಚಾರೈರು ಅವರ ವಾದವನ್ನು ಶತಶಃ ಖಂಡಿಸಿ ಶ್ರೀಮನ್ಯಾಯಸುಧೆಯನ್ನು ಮಂಡನಮಾಡಿದರು. ಸುಮಾರು ನಾಲ್ಕು ಘಂಟೆಯ ಕಾಲ ಜರುಗಿದ ಆ ವಾಕ್ಯಾರ್ಥದಲ್ಲಿ ಗುರುರಾಜಾಚಾರ್ಯರು ಅಂತ್ಯವಿಜಯವನ್ನು ಸಾಧಿಸಿದರು. ಸಭಿಕರು, ವಿದ್ವನ್ಮಂಡಲಿ ಆಚಾರರ ಜಯಕಾರಮಾಡಿದರು.
ವಿದ್ಯಾಪಕ್ಷಪಾತಿಗಳಾದ ನೀಲಕಂಠದೀಕ್ಷಿತರು, ಶ್ರೀಮಠದ ಪಂಡಿತರೂ, ಶ್ರೀಯವರ ಶಿಷ್ಯರೂ ಗಳಿಸಿದ ವಾದವಿಜಯವನ್ನು ಕೊಂಡಾಡಿದರು. ತಿರುಮಲನಾಯಕ ಪಂಡಿತಮಂಡಲಿಯವರು ಕರತಾಡನದಿಂದ ತಮ್ಮ ಆನಂದವನ್ನು ವ್ಯಕ್ತಪಡಿಸಿದರು. ಅದರೊಂದಿಗೆ ಅಂದಿನ ಬೆಳಗಿನ ಸಭೆ ಮುಕ್ತಾಯವಾಯಿತು.