ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೭೬. ಪತಿತಪಾವನರು
ಶ್ರೀಗುರುರಾಜರು ತಿರ್ನವಲ್ಲಿ ಪ್ರಾಂತ್ಯದಲ್ಲಿ ಸಂಚಾರಮಾಡುತ್ತಿರುವಾಗ ಒಂದು ದಿನ ನದೀತೀರದಲ್ಲಿ ಗುರುಗಳ ಆಗಮನವನ್ನೇ ನಿರೀಕ್ಷಿಸುತ್ತಾ ಒಂದು ಮರದ ಕೆಳಗೆ ನಿಂತಿದ್ದ ಓರ್ವ ಬ್ರಾಹ್ಮಣನು ಶ್ರೀಯವರ ಸವಾರಿ ಚಿತ್ತೈಸಿದ ಕೂಡಲೇ ಓಡೋಡಿ ಬಂದು ಅವರ ಪಾದಗಳಿಗೆ ಅಡ್ಡಬಿದ್ದು “ಅನುಗ್ರಹಿಸಬೇಕು ಗುರುದೇವ!” ಎಂದು ಅಂಗಲಾಚಿ ಬೇಡಿದನು, ಕರುಣಾಳುಗಳಾದ ಗುರುಗಳು ನಗುಮುಖದಿಂದ “ವಿಪ್ರವರ್ಯ ನಮ್ಮಿಂದ ನಿನಗೇನಾಗಬೇಕು ?” ಎಂದರು. ವಿಪ್ರನು (ಕಣ್ಣೀರು ಸುರಿಸುತ್ತಾ) ಮಹಾನುಭಾವರೇ, ನಾನೊಬ್ಬ ಮಾಧ್ವಬ್ರಾಹ್ಮಣ, ತಮ್ಮ ಸಂಸ್ಥಾನದ ಶಿಷ್ಯ. ಈಗ ಪಾಪಿಯಾದ ನನ್ನನ್ನು ತಾವೇ ಉದ್ದರಿಸಬೇಕು” ಎಂದನು. ಶ್ರೀಗಳವರು “ವಿಚಾರವೇನು ವಿವರಿಸಪ್ಪ” ಎನಲು ದೀನನಾದ ಆ ವಿಪ್ರನು “ಸ್ವಾಮಿ, ನನಗೆ ತಿಳಿಯದೆ ಜರುಗಿದ ಒಂದು ಅಪರಾಧಕ್ಕಾಗಿ ಸಮಾಜದವರು ನನ್ನನ್ನು ಬಹಿಷ್ಕರಿಸಿದ್ದಾರೆ. ಅಪರಾಧವರಿತೊಡನೆ ಪ್ರಾಯಶ್ಚಿತ್ತವನ್ನೂ ಮಾಡಿಕೊಂಡೆನು. ಆದರೂ ಸಮಾಜದವರು ಬಹಿಷ್ಕರಿಸಿದ್ದಾರೆ. ಇದರಿಂದ ನನಗೆ ಜೀವಿತವೇ ಹೊರೆಯಾಗಿದೆ. ತಮ್ಮ ವಿನಃ ಉದ್ಧರಿಸುವ ಪ್ರಭುಗಳು ಬೇರೊಬ್ಬರಿಲ್ಲ, ಶರಣಾಗತನಾಗಿದ್ದೇನೆ. ಕೈಹಿಡಿದು ಕಾಪಾಡಬೇಕು” ಎಂದು ಹೇಳಿ ಗುರುಗಳ ಪಾದಹಿಡಿದು ಗಳಗಳನೆ ಅತ್ತು ಬಿಟ್ಟನು ಆ ಬ್ರಾಹ್ಮಣ, ಗುರುರಾಜರ ಹೃದಯದಲ್ಲಿ ಕಾರುಣ್ಯ ದೊರತೆಯು ಉಕ್ಕಿಹರಿಯಿತು. ಕೃಪಾಕಟಾಕ್ಷದಿಂದ ಭೂಸುರನನ್ನು ಹರ್ಷಗೊಳಿಸಿ ಚಿಂತಿಸಬೇಡ, ಶ್ರೀಮೂಲರಾಮನ ಅನುಗ್ರಹದಿಂದ ಎಲ್ಲವೂ ಒಳಿತಾಗುವುದು. ನಾಳೆ ಬಂದು ನಮ್ಮನ್ನು ಕಾಣು” ಎ೦ದಾಜ್ಞಾಪಿಸಿ ಗುರುಗಳು ಮುಂದೆ ನಡೆದರು. ಆ ವಿಪ್ರನ ಮುಖ ನೋಡಿದೊಡನೆಯೇ ಅಪರೋಕ್ಷಜ್ಞಾನಿ- ಗಳಾದ ಗುರುಗಳಿಗೆ ಆತನ ನಿಜಯೋಗ್ಯತೆ ಅರಿವಾಯಿತು. ಅವನನ್ನು ಉದ್ದರಿಸಲು ಸಂಕಲ್ಪಿಸಿದರು. ಮರುದಿನ ಬಂದು ನಮಸ್ಕರಿಸಿದ ಆ ಬ್ರಾಹ್ಮಣನಿಗೆ ಸರಪ್ರಾಯಶ್ಚಿತ್ತ ಮಾಡಿಸಿ, ಶಂಖೋದಕವನ್ನು ಅಭಿಮಂತ್ರಿಸಿ ಪ್ರೋಕ್ಷಿಸಿ ಆತನನ್ನು ಪರಿಶುದ್ಧಗೊಳಿಸಿ ಅನುಗ್ರಹಿಸಿದರು.
ಇದರಿಂದ ಊರಿನ ಜನರಿಗೆ ಅಸಮಾಧಾನವಾಯಿತು. ಶ್ರೀಗಳವರು ಹಿಂದು-ಮುಂದು ವಿಚಾರಿಸದೆ ಪತಿತನನ್ನು ಶುದ್ಧಗೊಳಿಸಿದೆವೆಂದು ಆಜ್ಞಾಪಿಸಿದ್ದು ಅವರಿಗೆ ನುಂಗಲಾರದ ತುತ್ತಾಯಿತು. ಅಂತೆಯೇ ಹತ್ತಾರು ಜನ ಬ್ರಾಹ್ಮಣರು ಶ್ರೀಯವರಲ್ಲಿಗೆ ಬಂದು “ಸ್ವಾಮಿ, ಆತ ಪತಿತ, ಅವನನ್ನು ತಾವು ಶುದ್ಧಗೊಳಿಸಿದ್ದಾಗಿ ತಿಳಿಯಿತು. ಅದು ಹೇಗೆ ಅವನು ಶುದ್ಧನಾದ ? ದಯಮಾಡಿ ತಿಳಿಸಬೇಕು” ಎಂದು ಬಿನ್ನವಿಸಿದರು. ಶ್ರೀಯವರು ದರಹಾಸಬೀರಿ “ಭೂಸುರರೇ, ಆ ಬ್ರಾಹ್ಮಣಯೋಗ್ಯ ಚೇತನನಾಗಿದ್ದಾನೆ, ಅರಿಯದೇ ಆದ ತಪ್ಪಿನಿಂದ ನೊಂದಿದ್ದಾನೆ. ಪ್ರಾಯಶ್ಚಿತ್ತವನ್ನೂ ಮಾಡಿಕೊಂಡಿದ್ದಾನೆ. ಇಂದು ನಾವೇ ಎದುರಿದ್ದು ಮತ್ತೆ ಪ್ರಾಯಶ್ಚಿತ್ತ ಮಾಡಿಸಿ ಶುದ್ಧಗೊಳಿಸಿದ್ದೇವೆ. ಇದು ಶಾಸ್ತ್ರವಿಹಿತವಾಗಿರುವುದರಿಂದ ಅವನು ಸಹವಾಸಕ್ಕೆ ಅರ್ಹನಾಗಿದ್ದಾನೆ” ಎಂದು ಹೇಳಲು ಆ ಬ್ರಾಹ್ಮಣರು “ಸ್ವಾಮಿ, ಕ್ಷಮಿಸಬೇಕು. ಪತಿತನು ಪ್ರಾಯಶ್ಚಿತ್ತದಿಂದ ಶುದ್ಧನಾದನೆಂಬುದನ್ನು ನಂಬುವುದೆಂತು ?” ಎಂದರು. ಆಗ ಗುರುವರರು “ವಿಪ್ರರೇ, ನಿಮಗೆ ಶಂಖೋದಕ ಪ್ರಭಾವ ತಿಳಿಯದೆ ?” ಎಂದು ಹೇಳಲು ಆ ಭೂಸುರರು “ಹಾಗೆ೦ದರೇನು ಸ್ವಾಮಿ ?” ಎಂದು ಕೇಳಿದರು.
ಶ್ರೀಗಳವರು : ಶಂಶೋದಕದ ಮಹಿಮೆ ಅಪಾರವಾದುದು. “ಪಾಂಚಜನ್ಯ ನಿಜಾನರಸಪಾತಕಸಂಚಯ” ಎಂದು ಪ್ರಮಾಣವಿದೆ. ಶಂಖಧ್ವನಿ ಶ್ರವಣ ಮಾತ್ರದಿಂದ ಸಮಸ್ತಪಾತಕಗಳೂ ನಾಶವಾಗುವವು. ಧ್ವನಿಯಿಂದಲೇ ಪಾಪರಾಶಿಯನ್ನು ನಾಶಪಡಿಸುವ ಸಾಮರ್ಥ್ಯವುಳ್ಳ ಶಂಖದಮಹಿಮೆ ಎಷ್ಟು ಬಣ್ಣಿಸಿದರೂ ಸ್ವಲ್ಪವೇ ಸರಿ! ಇನ್ನು ಮಂತ್ರಪೂತವಾದ ಶಂಖೋದಕ ಮಹಿಮೆಗೆ ಇತಿಮಿತಿಯುಂಟೆ ?
ಬ್ರಾಹ್ಮಣರು “ತಾವು ಅದನ್ನು ಪ್ರತ್ಯಕ್ಷವಾಗಿ ಸಿದ್ಧಪಡಿಸುವಿರಾ?” ಎನಲು ಅವರ ಪ್ರಶ್ನೆಗೆ ಖಿನ್ನರಾದ ಗುರುಗಳು ಶಂಖೋದಕದ ಪ್ರಭಾವವನ್ನು ಪ್ರತ್ಯಕ್ಷವಾಗಿ ತೋರಿಸಿಕೊಡಲು ನಿಶ್ಚಯಿಸಿ ದ್ವಾರಪಾಲಕನನ್ನು ಕರೆದು ಅವನ ಕಿವಿಯಲ್ಲೇನೋ ಉಸುರಿದರು. ಆ ಸೇವಕ ಒಂದು ಬಿಳಿಯ ವಸ್ತ್ರವನ್ನು ಗೇರೆಣ್ಣೆಯಲ್ಲಿ ನೆನೆಸಿ ತಂದ, ಅದು ಕರಿಯಬಣ್ಣಕ್ಕೆ ತಿರುಗಿದ್ದಿತು! ಆಗ ಶ್ರೀಗಳವರು ಶ್ರೀಹರಿಯನ್ನು ಧ್ಯಾನಿಸಿ ಶಂಶೋದಕವನ್ನು ಅಭಿಮಂತ್ರಿಸಿ ಕರವಸ್ತ್ರದ ಮೇಲೆ ಪ್ರೋಕ್ಷಿಸಿ ಅದನ್ನು ಸ್ಪರ್ಶಿಸಿದರು! ಆಗೊಂದು ಪವಾಡವೇ ನಡೆದುಹೋಯಿತು! ಆಶ್ಚರ್ಯ! ಗೇರೆಣ್ಣೆಯಿಂದಾಗಿ ಕರಿಯಬಣ್ಣಕ್ಕೆ ತಿರುಗಿದ್ದ ಆ ವಸ್ತ್ರವು ಸ್ವಲ್ಪಹೊತ್ತಿನಲ್ಲೇ ಬಿಳುಪಾಗಿ ಮೊದಲಕಿಂತ ಅತಿಕಾಂತಿಯುಕ್ತವಾಗಿ ಕಂಗೊಳಿಸಿತು! “ಆಶ್ಚರ್ಯ, ಅದ್ಭುತ!” ಎನ್ನುತ್ತಾ ಜನಸ್ತೋಮ ಗುರುಗಳ ಮಹಿಮೆಯನ್ನು ಕೊಂಡಾಡಿತು. ಕಣ್ಣೆದುರಿಗೇ ಜರುಗಿದ ಈ ಮಹಿಮೆಯನ್ನು ಕಂಡು ಬ್ರಾಹ್ಮಣರ ಮುಖ ಮಾನವಾಯಿತು. ಗುರುಗಳನ್ನು ಪರೀಕ್ಷಿಸಿದ್ದಕ್ಕೆ ಅವರಿಗೆ ಕಳವಳವಾಯಿತು. ಅವರು ಸಾಷ್ಟಾಂಗವೆರಗಿ “ಗುರುದೇವ, ತಾವು ಮಹಾತ್ಮರು.
ತಮ್ಮನ್ನು ಪರೀಕ್ಷೆಗೀಡುಮಾಡಿ ಪಾಪಿಗಳಾಗಿದ್ದೇವೆ. ಪತಿತ ಪಾವನರಾದ ತಾವು ನಮ್ಮ ಅಪರಾಧವನ್ನು ಕ್ಷಮಿಸಿ ಕಾಪಾಡಬೇಕು ಎಂದು ಪ್ರಾರ್ಥಿಸಿದರು.
ಶ್ರೀಗಳವರು “ನೀವು ನಮ್ಮನ್ನು ಪರೀಕ್ಷಿಸಿದಿರೆಂದು ನಮಗೆ ಅಸಮಾಧಾನವಿಲ್ಲ. ಈಗಲಾದರೂ ಈ ವಿಪ್ರನು ಪರಿಶುದ್ಧನಾಗಿರುವನೆಂದು ನಂಬಿ ಆತನೊಡನೆ ಸೌಜನ್ಯದಿಂದ ವರ್ತಿಸಿ. ಸಮಾಜದಲ್ಲಿ ಅವನು ಕಳೆದುಕೊಂಡಿದ್ದ ಸ್ಥಾನಮಾನಗಳನ್ನಿತ್ತು ಸೌಹಾರ್ದದಿಂದ ಬಾಳುವಿರಾ?” ಎಂದರು, ಆಗ ಎಲ್ಲ ಬ್ರಾಹ್ಮಣರೂ ಏಕಕಂಠದಿಂದ “ಸ್ವಾಮಿ, ತಮ್ಮ ಕಾರುಣ್ಯದಿಂದ ಈತ ಶುದ್ಧನಾಗಿದ್ದಾನೆ! ನೀವು ಪತಿತಪಾವನರು. ತಮ್ಮಾಜ್ಞೆಯಂತೆ ಇವನೊಡನೆ ಸ್ನೇಹದಿಂದ ಬಾಳುತ್ತೇವೆ” ಎಂದುರುಹಿದರು. ಶ್ರೀಗಳವರು ಸಂತುಷ್ಟರಾಗಿ ಅಂದು ಅವರೆಲ್ಲರಿಗೂ ಶ್ರೀಮೂಲರಾಮನ ದರ್ಶನ, ತೀರ್ಥ-ಪ್ರಸಾದ ಸ್ವೀಕರಿಸುವಂತೆ ಆಜ್ಞಾಪಿಸಿದರು. ಎಲ್ಲ ಭೂಸುರರೂ, ಪರಿಶುದ್ಧನಾದ ಬ್ರಾಹ್ಮಣ, ಪರಿವಾರದವರೊಡನೆ ಸೇರಿ ದೇವರದರ್ಶನ ತೀರ್ಥ-ಪ್ರಸಾದ ಸ್ವೀಕರಿಸಿ ಶ್ರೀಹರಿ ನಿವೇದಿತವಾದ ಭೋಜನಮಾಡಿ ಫಲಮಂತಾಕ್ಷತಾ ಸ್ವೀಕರಿಸಿದರು. ಶ್ರೀಗಳವರು ತಾಮ್ರಪರ್ಣಿತೀರದಲ್ಲಿ ಕೆಲದಿನಗಳು ವಾಸಮಾಡಿದರು.
ಶ್ರೀರಾಘವೇಂದ್ರರು ತಾಮ್ರಪರ್ಣಿಯಲ್ಲಿ ಪ್ರತಿನಿತ್ಯ ಸ್ನಾನಮಾಡುತ್ತಾ ನದೀತೀರದಲ್ಲಿದ್ದ ಒಂಭತ್ತು ಪರದೇವತಾವಿಗ್ರಹಗಳ ದರ್ಶನ-ವಂದನಗಳನ್ನೆಸಗುತ್ತಾ ಅಲ್ಲಿಯೇ ಹತ್ತಿರದಲ್ಲಿದ ಜಗನ್ಮಾನ್ಯ ವಿಬುಧೇಂದ್ರತೀರ್ಥರ ವೃಂದಾವನಸನ್ನಿಧಿಯಲ್ಲಿ ಮೂರು ದಿನವಿದ್ದು ಮಹಾಸಂಸ್ಥಾನ ಪೂಜಾರಾಧನೆಗಳನ್ನು ನೆರವೇರಿಸಿ. ಶ್ರೀವಿಭುದೇಂದ್ರರ ಬೃಂದಾವನದ ಮೇಲೆ ಶ್ರೀಮೂಲರಾಮ ಶ್ರೀದಿಗ್ವಿಜಯರಾಮ್-ಜಯರಾಮದೇವರನ್ನು ಮಂಡಿಸಿ ಕನಕಾಭಿಷೇಕಮಾಡಿ, ಹಸ್ತೋದಕ ಸಮರ್ಪಿಸಿ, ಶ್ರೀವಿಬುಧೇಂದ್ರಗುರುಗಳ ವಿಶೇಷಾನುಗ್ರಹಕ್ಕೆ ಪಾತ್ರರಾದರು. ಶ್ರೀವಿಬುಧೇಂದ್ರತೀರ್ಥರ ದರ್ಶನದಿಂದ ಗುರುಗಳಲ್ಲಿ ಒಂದು ಬಗೆಯ ನೂತನೋತ್ತಾಹ, ಶಕ್ತಿಸಾಮರ್ಥ್ಯಗಳು ಬಂದಂತಾಗಿ ಪರಮಾನಂದತುಂದಿಲರಾದರು. ಆನಂತರ ಗುರುಗಳು ಕೃತಮಾಲಿಕಾನದಿಯಿಂದ ಶೋಭಿಸುವ ಮಧುರೆಗೆ ದಿಗ್ವಿಜಯಮಾಡಿದರು.