ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೭೫. ತೀರ್ಥಕ್ಷೇತ್ರಯಾತ್ರೆ - ದಿಗ್ವಿಜಯ
ಶ್ರೀರಾಘವೇಂದ್ರಸ್ವಾಮಿಗಳು ಬಹುವರ್ಷಗಳಿಂದ ತಾವು ಕೈಗೊಳ್ಳಲಾಶಿಸಿದ್ದ ತೀರ್ಥಕ್ಷೇತ್ರಯಾತ್ರೆಗೆ ಹೊರಡಲು ನಿಶ್ಚಯಿಸಿ ವಿದ್ವಾಂಸರು ವಿದ್ಯಾರ್ಥಿಗಳು, ಮಿತ ಪರಿವಾರದೊಡನೆ ಶಾಲಿವಾಹನ ಶಕೆ ೧೫೭೦ ನೇ ಸರ್ವದಾರಿ ಸಂ || ವೈಶಾಖ ಶುಕ್ಲ ಬಿದಿಗೆ (ಕ್ರಿ.ಶ. ೧೬೪೮) ಶುಭದಿನದಂದು ಕುಂಭಕೋಣದಿಂದ ದಿಗ್ವಿಜಯಯಾತ್ರೆಗೆ ಹೊರಟರು. ಶ್ರೀಹರಿಯ ಸಮಸ್ತ ಕ್ಷೇತ್ರಗಳನ್ನು ವೈಷ್ಣವ ಪುಣ್ಯತೀರ್ಥಗಳನ್ನೂ ಸಂದರ್ಶಿಸಲಾಶಿಸಿ ಶ್ರದಾನ್ವಿತ ಮನಸ್ಕರಾಗಿ ಅದೊಂದುವ್ರತದಂತೆ ದೀಕ್ಷಾಬದ್ಧರಾಗಿ ಶ್ರೀರಾಘವೇಂದ್ರ ಗುರುಗಳು ಮೊದಲು ಪೂರ್ವದಿಕ್ಕಿನ ಕಡೆ ಸಂಚಾರಹೊರಟರು.401
ವೇದೋದಿತ ಪ್ರಶಸ್ತವ್ರತಗಳುಳ್ಳ ಗುರುಗಳು ವಂದನಶೀಲರಾದ ಭಕ್ತರ ಹೃದಯಾನಂದಕನೂ, ಸುಖಪ್ರದನೂ ಪಾಪಪರಿಹಾರಕನೂ ಆದ ದುಪುರೀಶನಾದ ಶ್ರೀವಿಷ್ಣುವಿನ ದರ್ಶನಮಾಡಿ ಅಭಿವಂದಿಸಿ, ಅಲ್ಲಿಂದ ಸದ್ಗುಣಾಶ್ರಯನಾದ “ಪರಿಪೂರ್ಣದೇವನಗರ” ವೆಂಬ ಕ್ಷೇತ್ರದಲ್ಲಿರುವ ಭಗವಂತನೆಡೆಗೆ ಆಗಮಿಸಿದರು. ಅಲ್ಲಿ ದೇವನನ್ನು ಸೇವಿಸಿದ ಗುರುಗಳು ಮಣಿಶೃಂಗ (ಪರ್ವತ) ದಲ್ಲಿ ರಾಜಿಸುವ ಲೋಕ ಜನನಿಯಾದ ದುರ್ಗಾದೇವಿಯ ಸನ್ನಿಧಿಗೆ ಬಂದು ಇಂದಿರೆಯನ್ನು ವಂದಿಸಿ ಕೆಲದಿನ ವಾಸಿಸಿದರು. ಅಲ್ಲಿ ಪೂರ್ಣಪ್ರಜ್ಞರ ಸಿದ್ಧಾಂತವೆಂಬ ಸಮುದ್ರಕ್ಕೆ ಚಂದ್ರಮರಂತಿರುವ ಪ್ರಾಜ್ಞರಾದ ಸ್ವಾಮಿಗಳು ಪ್ರಮಾಣಪದ್ಧತಿಯಿಂದ ಆರಂಭಿಸಿ ಮೋಕ್ಷಾರ್ಥಪ್ರದವಾದ ಸಿದ್ಧಾಂತಗ್ರಂಥಗಳನ್ನು ಪ್ರತಿಭಾನ್ವಿತರಾದ ಶಿಷ್ಯರಿಗೆ ಪಾಠ ಹೇಳಲು ಪ್ರಾರಂಭಿಸಿದರು. ಅಲ್ಲಿಂದ ಕಮಲಾಲಯಾ ಎಂಬ ಪುಷ್ಕರಣಿಯಲ್ಲಿ ವಿರಾಜಿತಳಾದ ಲಕ್ಷ್ಮೀದೇವಿಯ ದರ್ಶನ ವಂದನಾದಿಗಳಿಂದ ಅವಳ ಕೃಪಾಪಾತ್ರರಾದ ಯತಿವರರು ಗಿರಿಜಾಲಿಂಗಿತಾರ್ಧದೇಹಿಯಾದ ಶ್ರೀರುದ್ರದೇವರಿಗೆ ನಮಿಸಲು 'ಅರ್ಧನಾರೀಶ್ವರ, ಎಂಬ ಕ್ಷೇತ್ರಕ್ಕೆ ದಯಮಾಡಿಸಿದರು. ಗುರುಗಳು ಅರ್ಧನಾರೀಶ್ವರರನ್ನು ಭಕ್ತಿಯಿಂದ ಸೇವಿಸಿ ಅವನ ಅನುಗ್ರಹಕ್ಕೆ ಪಾತ್ರರಾಗಿ, ಅಲ್ಲಿಂದ ಕಾವೇರಿಯು ಸಮುದ್ರವನ್ನು ಸೇರುವ “ಕಾವೇರಿಸಮುದ್ರಸಂಗಮ'ಕ್ಕೆ ದಯಮಾಡಿಸಿದರು.
ಕಾವೇರಿಸಮುದ್ರಸಂಗಮದ ದೃಶ್ಯ ರಮಣೀಯವಾಗಿತ್ತು. ತಾನು ಹುಟ್ಟಿದ ಕರ್ನಾಟಕದ ಶ್ರೇಷ್ಠಯತಿಯವರು ತನ್ನ ದರ್ಶನಕ್ಕೆ ಬಂದಿರುವುದನ್ನು ಕಂಡ ಕಾವೇರಿ ಅವರಿಗೆ ಶ್ರೇಷ್ಠರತ್ನಗಳನ್ನು ನೀಡಲಾಶಿಸಿ ಸಂಭ್ರಮದಿಂದ ರತ್ನಗರ್ಭಳಾದ ಭೂಮಿಯೊಳಗೆ ಪ್ರವೇಶಿಸಿರುವಳೋ ಎಂಬಂತೆ ಆ ದೃಶ್ಯವು ಮನೋಹರವಾಗಿದ್ದಿತು. ಅಲ್ಲಿ ಕಾವೇರಿಯು ತನ್ನ ಪ್ರವಾಹದೊಡನೆ ಸ್ಪಷ್ಟವಾಗಿ ಸಮುದ್ರವನ್ನು ಸೇರದೆ, ಗುಪ್ತವಾಗಿ ಸೇರುತ್ತಾಳೆ. ಅದನ್ನು ನೋಡಿದರೆ ಬಹುಶಃ ತನ್ನ ಭಕ್ತರಾದ ಶ್ರೀರಾಘವೇಂದ್ರಸ್ವಾಮಿಗಳಿಗೆ ಅಪೂರ್ವವಾದ ರತ್ನಗಳನ್ನು ತಂದುಕೊಡಲು ಸಂಭ್ರಮದಿಂದ ರತ್ನ ಗರ್ಭಳಾದ ಭೂಮಿಯಲ್ಲಿ ಹೊಕ್ಕಿರಬಹುದೆಂಬಂತೆ ಕಾಣುತ್ತಿತ್ತು! ಸಮುದ್ರದರ್ಶನದಿಂದ ಆನಂದಿತರಾದ ಗುರುಗಳು ಆ ಸಂಗಮ ಸ್ಥಳದಲ್ಲಿ ಸ್ನಾನಮಾಡಿ ಮೇಲೆದ್ದರು. ಆಗ ಅವರು ಕಾವೇರಿಯ ಹೃದಯದಲ್ಲಿ ಧ್ಯಾನಿಸಲ್ಪಟ್ಟು ಮೇಲೆದ್ದ ನಾರಾಯಣನಂತೆ ರಾಜಿಸಿದರು. ನಂತರ ಕೌಪೀನಧಾರಿಗಳಾಗಿ ದಂಡವನ್ನು ಹಿಡಿದು ಶ್ರೀರಾಘವೇಂದ್ರರು ಮತ್ತೆ ಸ್ನಾನಕ್ಕೆ ಸಿದ್ದರಾದರು. ಶ್ರೀಗಳವರನ್ನು ಸುತ್ತುವರೆದುನಿಂತ ನೂರಾರುಜನ ಭಕ್ತರು “ಓಂ ನಮೋ ನಾರಾಯಣಾಯ, ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯ ಗೋವಿಂದಾ ಗೋವಿಂದಾ” ಎಂದು ಘೋಷಿಸುತ್ತಾ ಸಂಗಮದಲ್ಲಿ ಸ್ನಾನಮಾಡಿ ಕರಮುಗಿದು ನಿಂತರು. ಗುರುಗಳು ಮಂದಹಾಸದಿಂದ ಸರ್ವರಿಗೂ ಮೂರು ಬಾರಿ ದಂಡೋದಕದಿಂದ ಪ್ರೋಕ್ಷಣಮಾಡಿದರು. ಆ ನೋಟವು, ಹಿಂದೆ ಸೂಪರಾಗ ಕಾಲದಲ್ಲಿ ಶ್ರೀಮನ್ಮಧ್ವಾಚಾರ್ಯರು ಸಮುದ್ರಸ್ನಾನಮಾಡಿ ಸಹಸ್ರಾರು ಭಕ್ತ ಜನರಿಗೆ ದಂಡೋದಕವನ್ನು ಪ್ರೋಕ್ಷಣಮಾಡಿ ಅನುಗ್ರಹಿಸಿದ ಭವ್ಯ ದೃಶ್ಯವನ್ನು ನೆನಪಿಗೆ ತರುತ್ತಿತ್ತು !
ಗುರುಗಳು ಸಮುದ್ರತೀರದಲ್ಲಿ ಕುಳಿತು ಶ್ರೀಕೃಷ್ಣಪರಮಾತ್ಮನನ್ನು ಹೃದಯಕಮಲದಲ್ಲಿ ಧ್ಯಾನಿಸಹತ್ತಿದರು. ಅನಂತರ ಪರಿಜನಸೇವಿತರಾಗಿ ಚಂಪಕಾರಣಕ್ಕೆ ಪ್ರಭುವಾದ ಶ್ರೀರಾಜಗೋಪಾಲನಿರುವ ಮನ್ನಾರುಗುಡಿಗೆ ಚಿತ್ತೆಸಿದರು. ಮನ್ನಾರು ಗುಡಿಯಲ್ಲಿ ಶ್ರೀಗುರುವರ್ಯರು ಶ್ರೀರಾಜಗೋಪಾಲನ ದರ್ಶನಮಾಡಿದರು. ಶ್ರೀಹರಿಯನ್ನು ನೋಡುತ್ತಿದ್ದಂತೆ ಯತಿರಾಜರು ಪುಳಕಿತಗಾತ್ರ- ರಾದರು. ಶ್ರೀರಾಘವೇಂದ್ರಸ್ವಾಮಿಗಳು ಆನಂದಬಾಷ್ಪಸಿಕ್ತನಯನರಾಗಿ ಹರ್ಷಾತಿರೇಕದಿಂದ ಶ್ರೀರಾಜಗೋಪಾಲನನ್ನು ಸ್ತುತಿಸಿ ನಮಸ್ಕರಿಸಿ, ದೇವನ ಅನುಗ್ರಹ ಪಡೆದು ಪರಿವಾರ ಸಹಿತರಾಗಿ ರಾಮೇಶ್ವರಕ್ಕೆ ದಿಗ್ವಿಜಯಮಾಡಿಸಿದರು.
ಶ್ರೀಗಳವರು ಸಮುದ್ರದರ್ಶನ ಮಾಡಿದರು. ಆಗ ಸಮುದ್ರದ ತರಂಗಗಳು ತೀರದವರೆಗೆ ಧಾವಿಸಿ ಬಂದು ಮತ್ತೆ ಹಿಂದಿರುಗುತ್ತಿತ್ತು. ಅದನ್ನು ನೋಡಿದರೆ ಗುರುರಾಜರನ್ನು ಸ್ವಾಗತಿಸಲು ಸಮುದ್ರರಾಜನು ಧಾವಿಸಿ ಬಂದಂತೆ ಕಾಣುತ್ತಿತ್ತು.
ಶ್ರೀರಾಘವೇಂದ್ರರು ಸಮುದ್ರದ ಗಾಂಭೀರ್ಯವನ್ನು ಕಂಡಾನಂದಿಸಿ ಪರಿವಾರ ಸಹಿತರಾಗಿ ಪೂರ್ವಪಶ್ಚಿಮ ಸಮುದ್ರಸಂಗಮ ಜಲದಲ್ಲಿ ಸ್ನಾನಮಾಡಿದರು. ನಂತರ ತೀರಕ್ಕೆ ಬಂದು ಕಾಷಾಯಾಂಬರ-ನಾಮಧಾರಣೆಮಾಡಿ ಪ್ರಾಣಾಯಾಮದಿಂದ ಚಿತ್ರ ನಿಯಮನಮಾಡಿ ಶ್ರೀಮೂಲರಾಮನನ್ನು ಮನದಲ್ಲಿ ಸ್ಥಿರಗೊಳಿಸಿ ಅವನ ಪದಗಳನ್ನು ಧ್ಯಾನಿಸುತ್ತಾ ಕೆಲಕಾಲ ವಾಸಿಸಿದರು. ಅನಂತರ ದರ್ಭಶಯನ ರಾಮ, ರಾಮೇಶ್ವರ ಮತ್ತು ಸೇತುಮಾಧವರ ದರ್ಶನಮಾಡಿ ಕೆಲದಿನ ಅಲ್ಲಿ ವಾಸಮಾಡಿ ತತ್ವ-ಧರ್ಮ ಪ್ರಸಾರಾಸಕ್ತರಾಗಿ ಆ ತರುವಾಯ ಅಳಿಗಿರಿಗೆ ಹೊರಟರು. ಅಲ್ಲಿ ದೇವರದರ್ಶನ ನಮನಾದಿಗಳಿಂದ ತುಷ್ಟರಾಗಿ 'ವನಶೈಲ' (ತೋತಾದ್ರಿ)ಕ್ಕೆ ಬಂದು ಶ್ರೀಸುಂದರನಾಮಕ ಪರಮಾತ್ಮನ ದರ್ಶನಮಾಡಿ ಕೆಲದಿನವಿದ್ದು ಅಲ್ಲಿಂದ ಶ್ರೀಅನಂತಪದ್ಮನಾಭನ ದರ್ಶನಕ್ಕಾಗಿ ಅನಂಶಯನಕ್ಕೆ ಬಂದು ದೇವರದರ್ಶನ, ಸೇವೆ, ವಂದನಗಳಿಂದ ಶ್ರೀಹರಿಯ ಅನುಗ್ರಹಕ್ಕೆ ಪಾತ್ರರಾಗಿ ಸಂಚಾರಕ್ರಮದಲ್ಲಿ ಜನಾರ್ದನಕ್ಕೆ ಬಂದರು. ಜನಾರ್ದನದಲ್ಲಿ ನಾಲ್ಕಾರು ದಿನವಿದ್ದು ದೇವರ ದರ್ಶನದಿಂದ ಪುನೀತರಾಗಿ, ತತೋಪದೇಶಾದಿಗಳಿಂದ ಜನರನ್ನು ಅನುಗ್ರಹಿಸಿ ಅಲ್ಲಿಂದ ತಾಮ್ರಪರ್ಣಿ ನದೀತೀರದ ತಿರ್ನವಲ್ಲಿ ಪ್ರಾಂತ್ಯಕ್ಕೆ ಚಿತ್ತೈಸಿದರು.