|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೭೪. ರತ್ನಹಾರದ ಪವಾಡ

ಶ್ರೀರಾಘವೇಂದ್ರಗುರುಗಳ ಅಪ್ಪಣೆಯಂತೆ ನಾಯಕ ಕ್ಷಾಮ ನಿವಾರಣೆ, ಸುಭಿಕ್ಷಗಳಿಗಾಗಿ ಅನೇಕ ಯಜ್ಞ-ಯಾಗಾದಿಗಳನ್ನು ಏರ್ಪಡಿಸಿದನು. ಶ್ರೀಗಳವರ ಮಾರ್ಗದರ್ಶನದಲ್ಲಿ ವೇದವೇದಾಂಗಪಾರಂಗತರಾದ ಪಂಡಿತರು, ಋತ್ವಿಜರು, ಪುರೋಹಿತರು ವೈದಿಕ ವಿಧಿಯಂತೆ ಯಜ್ಞಗಳನ್ನು ನೆರವೇರಿಸುತ್ತಾ ಬಂದರು. ಅಪೂರ್ವವಾದ ಆ ಯಜ್ಞ ನಿರೀಕ್ಷಣೆಗಾಗಿ ತಂಜಾಪುರದ ರಾಜ್ಯದ ಎಲ್ಲ ಭಾಗಗಳಿಂದ ಸಾವಿರಾರು ಜನ ಆಸ್ತಿಕರು ಬಂದು ಭಾಗವಹಿಸಿ ಕೃತಾರ್ಥರಾಗುತ್ತಿದ್ದರು. ಒಂದು ತಿಂಗಳ ಕಾಲ ಶ್ರೀಗಳವರು ಯಜ್ಞ-ಯಾಗಾದಿಗಳ ಮೇಲ್ವಿಚಾರಣೆಯಲ್ಲಿ ಆಸಕ್ತರಾಗಿದ್ದುದಲ್ಲದೆ, ಸ್ವತಃ ಜಪ-ತಪಾದನುಷ್ಠಾನ ಮಾಡುತ್ತಿದ್ದರು. ಅದರ ಫಲವಾಗಿ ದೈವಾನುಗ್ರಹದಿಂದ ರಾಜ್ಯದಲ್ಲೆಲ್ಲಾ ವಿಶೇಷವಾಗಿ ಮಳೆಯಾಗಹತ್ತಿತು. ಕಾವೇರಿಯು ತುಂಬಿ ಭರದಿಂದ ಹರಿದಳು ! ಜನರ ಆನಂದಕ್ಕೆ ಪಾರವೇ ಉಳಿಯಲಿಲ್ಲ. ರೈತರು ಸಂತೋಷದಿಂದ ಜಮೀನುಗಳನ್ನು ಉತ್ತು ಬೇಸಾಯವನ್ನು ಪ್ರಾರಂಭಿಸಿದರು. ನಾಲ್ಕಾರು ತಿಂಗಳುಗಳಲ್ಲಿ ರೈತರೇ ಅಚ್ಚರಿಗೊಳ್ಳುವಂತೆ ವಿಪುಲರಾಗಿ ಬೆಳೆಕಯುಂಟಾಗಿ ದವಸಧಾನ್ಯಗಳು ರಾಶಿರಾಶಿಯಾಗಿ ದೊರಕಿದವು. ಇದರಿಂದ ಹನ್ನೆರಡು ವರ್ಷಗಳ ಕಾಲ ಆವರಿಸಿದ್ದ ಕ್ಷಾಮ ಪರಿಹಾರವಾಗಿ ದೇಶವು ಸುಭಿಕ್ಷವಾಯಿತು.399 ವಿಜಯರಾಘವನಾಯಕನಿಗೆ ಶ್ರೀಗಳವರು ಸಾಕ್ಷಾತ್ ಭಗವಂತನಂತೆ ಕಂಡರು. 

ಯಾಗಕಾಲದಲ್ಲಿ ತಂಜಾಪುರಾಧೀಶ್ವರನು ರಾಜ್ಯದ ಕೃತಜ್ಞತೆಯನ್ನು ಸೂಚಿಸಲು ಗುರುಗಳಿಗೆ ಒಂದು ಅಮೌಲ್ಯ ರತ್ನಾಹಾರವನ್ನು ಸಮರ್ಪಿಸಿದನು. ಯಜ್ಞಕುಂಡದಲ್ಲಿ ಅವಿರ್ಭವಿಸಿ ಶ್ರೀಗಳವರೊಬ್ಬರ ದೃಷ್ಟಿಗೆ ಗೋಚರವಾದ ಅಗ್ನಂತರ್ಗತನಾದ ಶ್ರೀಪರಶುರಾಮದೇವರಿಗೆ ಅರ್ಥಪಾದ್ಯಾದಿಗಳನ್ನರ್ಪಿಸಿ ಪೂಜಿಸಿ ರತ್ನಹಾರವನ್ನು ದೇವರ ಕಂಠಕ್ಕೆ ಹಾಕಿ ದೇವನಿಗೆ ನಮಸ್ಕರಿಸಿದರು. ರತ್ನಹಾರವನ್ನು ಗುರುಗಳು ಅಗ್ನಿಗೆ ಹಾಕಿದರೆಂದು ಜನ ಬೆರಗಾದರು. ನಾಯಕ ಖಿನ್ನನಾದ. ಕೃತಜ್ಞತೆಯಿಂದ ಅರ್ಪಿಸಿದ್ದನ್ನು ಬೆಂಕಿಗೆ ಹಾಕಿಬಿಟ್ಟಿರಲ್ಲಾ! ಎಂದು ತಳಮಳಿಸಿದ, ಅವನಿಗೆ ತುಂಬಾ ಅಸಮಾಧಾನ, ಅತೃಪ್ತಿಗಳುಂಟಾದವು! ಪಾಪ, ನಾಲ್ಕಾರು ವರ್ಷಗಳ ಹಿಂದೆ ಯುದ್ಧದಲ್ಲಿ ಪರಾಜಿತನಾಗಿ ಉಳಿಯುವದೇ ಕಷ್ಟವಾಗಿದ್ದಾಗ ಯಾವ ಮಹನೀಯರು ಶಾಂತಿಸಂಧಾನವಾಗಲು ಪ್ರಯತ್ನಿಸಿ ತನ್ನನ್ನು ರಕ್ಷಿಸಿದ್ದರೋ ಪ್ರಜೆಗಳ ಕಷ್ಟಕ್ಕಾಗಿ ಶ್ರೀಮಠದ ಸಿರಿಸಂಪತ್ತು, ಧಾನ್ಯಗಳನ್ನೂ ಕೊಟ್ಟು ಕಾಪಾಡಿದರೋ, ಧಾನ್ಯಾಗಾರ-ಧನಾಗಾರಗಳು ಅಕ್ಷಯವಾಗುವಂತೆ ಮಾಡಿದರೋ, ಈಗ ಹವನ ಹೋಮಾದಿಗಳಿಂದ ಮಳೆತರಿಸಿ ಕ್ಷಾಮ ಪರಿಹಾರವಾಗಿ ಸುಭಿಕ್ಷವೇರ್ಪಡುವಂತೆ ಅನುಗ್ರಹಿಸಿದ್ದಾರೋ ಅವೆಲ್ಲವನ್ನೂ ಮರೆತು ಅಂತಹ ಮಹಾನುಭಾವರ ಬಗ್ಗೆ ಕೇವಲ ರತ್ನಹಾರ ಅಗ್ನಿಗರ್ಪಿಸಿದರೆಂದು ನಾಯಕ ಸಿಡಿಮಿಡಿಗುಟ್ಟಿ, ಅಸಮಾಧಾನ ತಾಳಿದ! ಇದೇ ಮಾನವರ ಸ್ವಭಾವ! ನಾಯಕನೂ ಅದಕ್ಕೆ ಹೊರತಾಗಲಿಲ್ಲ. 

ಶ್ರೀಗಳವರು ನಾಯಕನ ಮಾನಸಿಕ ತಳಮಳ-ಅಸಮಾಧಾನಗಳನ್ನು ಕಂಡು ಅವನ ಅಜ್ಞಾನಕ್ಕಾಗಿ ಮರುಗಿ ಏನೂ ತಿಳಿಯದವರಂತೆ ಹಸನ್ಮುಖದಿಂದ ಕುಳಿತು ಪೂರ್ಣಾಹುತಿ ಸಮಾರಂಭಕ್ಕೆ ಸಿದ್ದರಾದರು. ವಾದ್ಯವೈಭವ, ವೇದಘೋಷ- ಗಳಾಗುತ್ತಿರಲು ಪೂರ್ಣಾಹುತಿ ಸಮಾರಂಭ ಯಶಸ್ವಿಯಾಯಿತು. ಯಜ್ಞಸಫಲವಾಯಿತೆಂಬುದನ್ನು ಸೂಚಿಸಲೋ ಎಂಬಂತೆ ಆಳೆತ್ತರ ಜ್ವಾಲೆಗಳು ಪ್ರಜ್ವಲಿಸಹತ್ತಿದವು. ಅಗ್ನಂತರ್ಗತ ಅಗ್ನಿಕುಂಡದಲ್ಲಿ ಮತ್ತೆ ಅವಿರ್ಭವಿಸಿ ಗುರುಗಳ ದೃಷ್ಟಿಗೋಚರರಾದರು. ಶ್ರೀರಾಘವೇಂದ್ರಸ್ವಾಮಿಗಳು ದೇವರನ್ನು ಭಕ್ತಿಭರದಿಂದ ಸ್ತುತಿಸಿ ತಂಜಾಪುರ ರಾಜ್ಯವನ್ನೂ ಜನತೆಯನ್ನೂ ಕ್ಷೇಮಾಭ್ಯುದಯಗಳಿಂದ ಕರುಣಿಸುವಂತೆ ಪ್ರಾರ್ಥಿಸಿ ಜ್ವಾಲೆಯಿಂದ ಧಗಧಗಿಸುತ್ತಿರುವ ಅಗ್ನಿಕುಂಡದಲ್ಲಿ ಕೈಹಾಕಿ ಶ್ರೀಪರಶುರಾಮದೇವರ ಕಂಠದಲ್ಲಿ ಶೋಭಿಸುತ್ತಿದ್ದ ರತ್ನಮಾಲಿಕೆಯನ್ನು ತೆಗೆದುಕೊಂಡರು! ಏನಾಶ್ಚರ್ಯ! ಎರಡು ಮೂರು ಘಂಟೆಗಳ ಹಿಂದೆ ಪ್ರಜ್ವಲಿಸುವ ಅಗ್ನಿಯಲ್ಲಿ ಅರ್ಪಿತವಾಗಿದ್ದ (ಜನರ ದೃಷ್ಟಿಯಲ್ಲಿ ರತ್ನಹಾರವು ಸ್ವಲ್ಪವೂ ವಿರೂಪತಾಳದೆ ಮೊದಲಕ್ಕಿಂತ ಅತ್ಯಂತ ಕಾಂತಿಯಿಂದ ಥಳಥಳಿಸುತ್ತಾ ಪ್ರಕಾಶಿಸುತ್ತಿದೆ!!

ಶ್ರೀಪಾದಂಗಳವರು ನಸುನಗುತ್ತಾ “ಮಹಾರಾಜ! ಶ್ರೀಹರಿಯು ಸುಪ್ರಸನ್ನನಾಗಿ ನಿನಗೆ ಇದನ್ನು ವಿಜಯಸೂಚಕಾನುಗ್ರಹ- ರೂಪಕವಾಗಿ ಕರುಣಿಸಿದ್ದಾನೆ! ನಿನಗೂ ನಿನ್ನ ರಾಜ್ಯದ ಸಮಸ್ತ ಪ್ರಜರಿಗೂ ಇನ್ನು ಮುಂದೆ ಯಾವ ಭಯವೂ ಇಲ್ಲ. ನಿಮ್ಮೆಲ್ಲರಿಗೂ ಮಂಗಳವಾಗುವುದು” ಎಂದು ರತ್ನಹಾರವನ್ನು ನಾಯಕನಿಗೆ ಅನುಗ್ರಹಿಸಿದರು.400 ಸಹಸ್ರಾರು ಜನರು, ತಮ್ಮ ಕಣ್ಣನ್ನು ತಾವೇ ನಂಬದಾದರು. ಇದೇನದ್ಭುತವೆಂದು ರಾಜ ಪರಮಾಶ್ಚರ್ಯ-ಆನಂದಪರವಶನಾಗಿ ಕುಣಿದಾಡಿದ ! ಸ್ವಾಮಿಗಳ ಮಹಿಮೆ ತಿಳಿದಿದ್ದರೂ, ಒಂದು ಕ್ಷಣದಲ್ಲಿ ತಾನು ಅವರ ಕೃತಿಯನ್ನು ಅಪಾರ್ಥಮಾಡಿಕೊಂಡು ಅಸಮಾಧಾನಗೊಂಡು ಕೃತಘ್ನನಂತೆ ಅಲ್ಪತನ ತೋರಿದೆನಲ್ಲಾಎಂದು ದುಃಖಿಸಿ ಶ್ರೀಯವರಲ್ಲಿ ಕ್ಷಮೆ ಬೇಡಿದ. ಜನರು ಶ್ರೀಗುರುಗಳು ತೋರಿದ ಈ ಮಹಾಮಹಿಮೆ- ಯನ್ನು ಕಂಡು “ಆಹಾ, ಮಹಾನುಭಾವರು, ಮಹಾತ್ಮರು - ನಮ್ಮ ಉದ್ಧಾರಕ ಗುರುಗಳು” ಎಂದು ಕೊಂಡಾಡಿ ಜಯಧ್ವನಿಮಾಡಿ ನಮಸ್ಕರಿಸಿದರು. ತಂಜಾಪುರದ ಕ್ಷಾಮಪರಿಹಾರಮಾಡಿ, ಶ್ರೀಗುರುಸಾರ್ವಭೌಮರು ಸರ್ವಜನವದರಾಗಿ ಪ್ರಜಾನೀಕ, ನಾಯಕರಿಂದ ಭಕ್ತಿಪೂರ್ವಕ ಬೀಳ್ಕೊಂಡು ಕುಂಭಕೋಣಕ್ಕೆ ದಯಮಾಡಿಸಿದರು.