ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೭೩. ಕ್ಷಾಮಪರಿಹಾರ
ವಿಜಯರಾಘನಾಯಕನು ಸ್ವಾಭಾವಿಕವಾಗಿ ಪ್ರಜಾಹಿತೈಷಿಯೂ, ಉದಾರಿಯೂ ಆಗಿದ್ದನು. ಅವನು ರಾಜಭಂಡಾರದ ಧನಕನಕಾಭರಣಗಳನ್ನೆಲ್ಲಾ ವಿನಿಯೋಗಿಸಿ ಪ್ರಜರಿಗೆ ಆಹಾರವನ್ನು ಒದಗಿಸಲಾರಂಭಿಸಿದನು. ಭೀಕರ ಕ್ಷಾಮಕ್ಕೆ ತುತ್ತಾಗಿದ್ದ ದೊಡ್ಡರಾಜ್ಯದ ಪ್ರಜರಿಗೆ ಅದೆಷ್ಟು ದಿನ ತಾನೇ ಪ್ರಯೋಜನವಾದೀತು ? ಛಂಡಾರ ಬರಿದಾಯಿತು. ಜನರಲ್ಲಿ ಅಶಾಂತಿ ಹಾಹಾಕಾರಗಳುಂಟಾದವು. ಕ್ಷಾಮವು ಭಯಂಕರ ಸ್ವರೂಪ ತಾಳಲಿರುವ ಸೂಚನೆ ಕಂಡ ನಾಯಕ ಚಿಂತಾಕ್ರಾಂತನಾದ, ಆರ್ತನಾದ ನಾಯಕನಿಗೆ ವೃದ್ಧಹಿತೈಷಿಗಳು ಶ್ರೀರಾಘವೇಂದ್ರಗುರುಗಳ ಮಹಿಮಾದಿಗಳನ್ನು ಹೇಳಿ, ಯುದ್ಧಕಾಲದಲ್ಲಿ ಸಂಧಿಯಾಗಲು ಕಾರಣರಾದ ಅವರಿಗೆ ಶರಣುಹೋದಲ್ಲಿ ಈ ಸಮಸ್ಯೆ ಪರಿಹಾರವಾಗಬಹುದೆಂದು ಸಲಹೆಮಾಡಿದರು. ಆಗ ವಿಜಯರಾಘವನಾಯಕನಿಗೆ 'ರಾಜಗುರು'ಗಳ ನೆನಪಾಯಿತು! ಜೊತೆಗೆ ಮುತ್ತಾತ, ತಂದೆಗಳಂತೆ ತಾನೂ ಆ ಮಹಾನುಭಾವರ ಮಾರ್ಗದರ್ಶನದಲ್ಲಿ ನಡೆದಿದ್ದರೆ, ಬಹುಶಃ ಈ ಪರಿಸ್ಥಿತಿಯುಂಟಾಗುತ್ತಿರಲಿಲ್ಲವೆಂಬ ಅರಿವಾಗಿ ತನ್ನ ತಪ್ಪಿಗಾಗಿ ಪರಿತಪಿಸಿದ, ಕೊನೆಗೆ ಆತ್ಮೀಯರಾದ ಹಿತಚಿಂತಕರೊಡನೆ ಕುಂಭಕೋಣಕ್ಕೆ ಬಂದು ಶ್ರೀರಾಘವೇಂದ್ರಗುರುಗಳ ಪಾದಹಿಡಿದು ಕಣ್ಣೀರು ಸುರಿಸಿ ತನಗೆ ಬಂದೊದಗಿರುವ ವಿಪತ್ತು, ಪ್ರಜೆಗಳ ಕಷ್ಟಗಳನ್ನು ಹೇಳಿಕೊಂಡು ಈ ಕಷ್ಟದಿಂದ ಪಾರುಮಾಡಿ ರಾಜ್ಯದ ಪ್ರಜರನ್ನು ಕಾಪಾಡಬೇಕೆಂದು ಬೇಡಿದನು.
ಶ್ರೀಗುರುರಾಜರು ಕ್ಷಣಕಾಲ ಧ್ಯಾನಮಗ್ನರಾದರು. ಅವರಿಗೆ ಕ್ಷಾಮದ ಭೀಕರತೆಯ ಅರಿವಾಯಿತು. ಅದು ಶೀಘ್ರವಾಗಿ ಮುಗಿಯುವುದಿಲ್ಲವೆಂಬುದನ್ನೂ ಮನಗಂಡು ಒಮ್ಮೆ ನಿಟ್ಟಿಸುರುಬಿಟ್ಟು “ರಾಜನ್, ನಿನ್ನ ರಾಜ್ಯಕ್ಕೆ ಬಂದೊದಗಿದ ಕಷ್ಟವನ್ನು ಕೇಳಿ ನಮಗೆ ಬಹು ವ್ಯಸನವಾಗಿರುತ್ತದೆ. ಧರ್ಮಿಷ್ಠನಾದ ನೀನೂ ನಮ್ಮ ಅನುಗ್ರಹಕ್ಕೆ ಪಾತ್ರನಾಗಿರುವೆ, ಪ್ರಜರ ಕಷ್ಟವನ್ನು ಪರಿಹರಿಸುವುದು ನಮ್ಮೆಲ್ಲರ ಕರ್ತವ್ಯ. ಶ್ರೀಮೂಲರಾಮನ ದಯದಿಂದ ಸಮಸ್ಯೆ ಪರಿಹಾರವಾಗುವುದೆಂದು ನಮಗೆ ನಂಬಿಕೆಯಿದೆ, ನಾವು ತಂಜಾಪುರಕ್ಕೆ ಬಂದು ಪರಿಸ್ಥಿತಿಯನ್ನು ಪರಿಶೀಲಿಸಿ ಪರಿಹಾರೋಪಾಯವನ್ನು ಚಿಂತಿಸುತ್ತೇವೆ. ಫಲ ಈಶಾಧೀನ” ಎಂದು ಆಶೀರ್ವದಿಸಿ ಕಳುಹಿಸಿದರು.
ಶ್ರೀಗಳವರಿಗೆ ಪೂರ್ವಾಶ್ರಮದಲ್ಲಿಯೇ ಮಂತ್ರಸಿದ್ಧಿಯುಂಟಾಗಿದ್ದಿತು. ಆದರೆ ಅವರದನ್ನು ಸ್ವಾರ್ಥಕ್ಕಾಗಿ ಉಪಯೋಗಿಸ ಬಾರದೆಂದು ನಿರ್ಧರಿಸಿದ್ದರು. ಅದು ಒಂದು ನಾಡಿನ ಜನತೆಯನ್ನು ಉಳಿಸಿ, ಲಕ್ಷಾಂತರ ಜನರನ್ನು ಪೋಷಿಸುವ, ಭಗವಂತನಿಗೆ ಪ್ರೀತಿಕರವಾದ, ಪರೋಪಕಾರಕಾರ್ಯವಾದುದರಿಂದ ಈಗದನ್ನು ಜನತೆಗಾಗಿ ಉಪಯೋಗಿಸಲು ಗುರುಗಳು ನಿಶ್ಚಯಿಸಿದರು. ಇದು ಸಾಮಾನ್ಯ ಜನರಿಗೆ ಪವಾಡದಂತೆ ಕಂಡರೂ ಜ್ಞಾನಿಗಳಿಗದೊಂದು ಸಾಮಾನ್ಯ ವಿಚಾರ. ಪವಾಡಗಳಿಂದ ಅವರಿಗೇನು ಆಗಬೇಕಾದುದಿಲ್ಲ. ಅಂತೆಯೇ ಜ್ಞಾನಿಗಳು ಅದನ್ನು ತೋರಬಯಸುವುದಿಲ್ಲ. ಆದರೂ ಕೆಲವೊಮ್ಮೆ ಅವು ಅನಿವಾರ್ಯವಾಗುವುದು, ಭಗವಂತನ ಆಸ್ತಿತ್ವ, ದೇವರು ಧರ್ಮಗಳಲ್ಲಿನ ನಂಬಿಗೆ, ವೇದಮತದ ಮಹತ್ವಗಳನ್ನು ಎತ್ತಿತೋರಿ, ಜನತೆಯಲ್ಲಿ ಆಸ್ತಿಕತೆ-ಧರ್ಮದ ಪ್ರಜ್ಞೆಗಳನ್ನು ಉಜ್ವಲಗೊಳಿಸಲು, ಜನರ ಕಲ್ಯಾಣದೃಷ್ಟಿಯಿಂದ ಒಮ್ಮೊಮ್ಮೆ ಪವಾಡಗಳನ್ನು ತೋರಬೇಕಾಗುತ್ತದೆ. ಅದರ ಹಿನ್ನೆಲೆಯನ್ನರಿತಾಗ ಮಾತ್ರ ಅದರ ಮಹತ್ವದ ಅರಿವಾಗುವುದು. ಶ್ರೀಪಾದಂಗಳವರು ಇಂಥ ಸಂದರ್ಭಗಳಲ್ಲಿ ತಮ್ಮ ಜೀವಿತಕಾಲದಲ್ಲಿ ಅನೇಕ ಮಹಿಮೆಗಳನ್ನು ತೋರಬೇಕಾಗಿ ಬಂದುದನ್ನು ನಾವು ಅವರ ಅಮರಚರಿತೆಯ ಅನೇಕ ಭವ್ಯ ಅಧ್ಯಾಯಗಳಲ್ಲಿ ಕಾಣಬಹುದಾಗಿದೆ. ಭಗವಂತನನ್ನು ಸಾಕ್ಷಾತ್ಕರಿಸಿಕೊಂಡವರಿಗೆ ಈ ಮಹಿಮಾಪ್ರದರ್ಶನ ಒಂದು ಲೀಲೆ, ಆದರಿಂದಲೇ ಅವರ ವೈಶಿಷ್ಟ್ಯ ತಿಳಿಯಬೇಕಾಗಿಲ್ಲ. ಅದು ಅವರ ತ್ಯಾಗ, ಔದಾರ, ಭಗವನ್ನಿಷ್ಠೆ, ಧರ್ಮಶ್ರದ್ಧೆಗಳ ಸಂಕೇತವೆಂದು ತಿಳಿಯಬೇಕು.
ಮರುದಿನ ಶ್ರೀಪಾದಂಗಳವರು ಮಹಾಸಂಸ್ಥಾನದಲ್ಲಿದ್ದ ಬೆಳ್ಳಿ, ಬಂಗಾರ, ನವರತ್ನಾಭರಣಾದಿಗಳು, ಅಪರಿಮಿತ ಧನ, ಸಂಗ್ರಹಿಸಿದ್ದ ಸಮಸ್ತ ದವಸಧಾನ್ಯಗಳನ್ನೆಲ್ಲಾ ಅನೇಕ ಬಂಡಿಗಳಲ್ಲಿ ತುಂಬಿಸಿಕೊಂಡು ಮಿತಪರಿವಾರದೊಡನೆ ತಂಜಾಪುರಕ್ಕೆ ದಯಮಾಡಿಸಿದರು. ನಾಯಕ ಗುರುಗಳನ್ನು ಭಕ್ತಿಯಿಂದ ಸ್ವಾಗತಿಸಿ ಬಿಡಾರ ಮಾಡಿಸಿದ, ರಾಘವೇಂದ್ರಗುರುಗಳು ತಾವು ತಂದಿದ್ದಬೆಳ್ಳಿ, ಬಂಗಾರ, ನವರತ್ನಾಭರಣಗಳು, ದವಸ ಧಾನಗಳೆಲ್ಲವನ್ನೂ ವಿಜಯರಾಘವಭೂಪಾಲನಿಗೆ ಕೊಟ್ಟು, “ಮಹಾರಾಜ, ಮೊದಲು ಇವುಗಳಿಂದ ಪ್ರಜೆಗಳಿಗೆ ಆಹಾರವನ್ನು ಒದಗಿಸುವ ವ್ಯವಸ್ಥೆಮಾಡು” ಎಂದರು. ಶ್ರೀಯವರ ತ್ಯಾಗ, ಉದಾರ ಹೃದಯ, ಜನರ ಕ್ಷೇಮದಲ್ಲಿನ ಕಾತರತೆಯನ್ನು ಕಂಡು ಆಶ್ಚರ್ಯಾನಂದತುಂದಿಲನಾಗಿ “ಗುರುದೇವ, ಶ್ರೀಮಠದ ಸ್ವತ್ತನ್ನು ಹೇಗೆ ಸ್ವೀಕರಿಸಲಿ ?” ಎನಲು ಶ್ರೀಗಳವರು ರಾಜನ್, ಗುರುಪೀಠಗಳಿರುವುದು ಏತಕ್ಕಾಗಿ? ದೇಶದ ಜನರು ಕಷ್ಟದಲ್ಲಿರುವಾಗ ಅವರ ಉಪಯೋಗಕ್ಕೆ ಬಾರದ ಆಸ್ತಿಪಾಸ್ತಿಗಳಿಂದೇನು ಪ್ರಯೋಜನ? ಇವೆಲ್ಲವೂ ಗುರುಭಕ್ತರಾದ ಅನೇಕ ರಾಜಾಧಿರಾಜರು, ನಿನ್ನ ಮುತ್ತಾತ, ತಾತ, ತಂದೆಗಳು ಸಮರ್ಪಿಸಿದ್ದು ಇವು ಪ್ರಜೆಗಳಿಗಾಗಿ ಸದುಪಯೋಗವಾಗುತ್ತಿದೆಯೆಂದು ನಮಗೆ ಹರ್ಷವಾಗುತ್ತಿದೆ. ಜನರು ಸಂತುಷ್ಟರಾದರೆ ಜನಾರ್ದನನು ಸಂತುಷ್ಟನಾಗುವನು. ಇದೂ ಶ್ರೀಹರಿ ಸೇವೆಯೆಂದೇ ನಾವು ಭಾವಿಸಿದ್ದೇವೆ. ಏನೂ ಯೋಚಿಸದೆ ಇವುಗಳಿಂದ ಬರುವ ಧನದಿಂದ ಸಮಸ್ತ ಪ್ರಜರಿಗೆ ಆಹಾರವನ್ನೊದಗಿಸು. ಇವು ಕೆಲವರ್ಷಗಳಿಗೆ ಸಾಕಾದೀತು. ಸಧ್ಯ ನಾವು ತಂದಿರುವ ದವಸಧಾನ್ಯಗಳನ್ನೂ ಪ್ರಜರಿಗೆ ಹಂಚಿಸು. ಮುಂದೆ ಶ್ರೀಹರಿಯು ಇನ್ನೂ ಅನುಕೂಲವನ್ನು ಒದಗಿಸಿಕೊಟ್ಟಾನು!” ಎಂದಾಜ್ಞಾಪಿಸಿದರು.
ನಾಯಕ ಗುರುಗಳ ಅಣತಿಯಂತೆ ಅವರಿತ್ತ ಸಂಪತ್ತು, ದವಸಧಾನ್ಯಗಳನ್ನು ಪ್ರಜರಿಗೆ ಉಪಯೋಗವಾಗುವಂತೆ ವ್ಯವಸ್ಥೆಮಾಡಿದನು. ಗುರುವರ್ಯರ ಈ ಉದಾರ ಸ್ವಭಾವ, ಲೋಕೋಪಕಾರ ದೀಕ್ಷೆ, ತ್ಯಾಗಗಳನ್ನರಿತ ಪ್ರಜರು ಅವರನ್ನು ತಮ್ಮ ಭಾಗದ ದೇವರೆಂದೇ ತಿಳಿದರು.
ಮರುದಿನ ಗುರುಗಳು ನಾಯಕನ ಧಾನ್ಯಾಗಾರಕ್ಕೆ ಹೋಗಿ ಅಲ್ಲಿ ಒಂದೈದಾರು ದಿನಗಳಿಗಾಗುವಷ್ಟು ಮಾತ್ರ ಧಾನ್ಯವಿರುವುದನ್ನು ಕಂಡು ಆ ಧಾನ್ಯಗಳ ಮೇಲೆಯೇ ಬೀಜಾಕ್ಷರಗಳನ್ನು ಬರೆದು, ಮೂರು ದಿನ ಪರ್ಯಂತ ಅವಿಚ್ಛಿನ್ನವಾಗಿ, ಉಪವಾಸದಿಂದ ಮಂತ್ರಗಳನ್ನು ಜಪಿಸುತ್ತಾ ಕುಳಿತುಬಿಟ್ಟರು. ಸಾವಿರಾರು ಜನರು ಧಾನ್ಯಾಗಾರದ ಮುಂದೆ ಸೇರಿದರು. ನಾಲ್ಕನೆಯ ದಿನ ಸೂರೋದಯವಾಗುತ್ತಿರುವಂತೆಯೇ ಧಾನ್ಯಾಗಾರದಲ್ಲಿ ಒಂದು ಅದ್ಭುತ ಪವಾಡವೇ ನಡೆದುಹೋಯಿತು! ಬರಿದಾಗಿದ್ದ ಧಾನ್ಯಾಗಾರ ಧಾನ್ಯರಾಶಿಯಿಂದ ತುಂಬಿತುಳುಕಹತ್ತಿತು ! ಈ ಅಚ್ಚರಿಯನ್ನು ಕಂಡ ನಾಯಕ ಮತ್ತು ಪ್ರಜಾಜನರು ಆನಂದ, ಉತ್ಸಾಹಗಳಿಂದ ಜಯಜಯ ಶ್ರೀರಾಘವೇಂದ್ರಗುರುರಾಜ” ಎಂದು ಹರ್ಷಧ್ವನಿಮಾಡಿದರು. ಶ್ರೀಯವರ ಭಕ್ತಿಗೆ ಪ್ರಸನ್ನಳಾದ ಶ್ರೀದೇವಿಯು ರಾಜನಲ್ಲಿ ಅನುಗ್ರಹೋನ್ಮುಖಳಾಗಿ ಧಾನ್ಯಾಗಾರವನ್ನು ಅಕ್ಷಯ ಧಾನ್ಯರಾಶಿಯಿಂದ ತುಂಬಿ ಕಾರುಣ್ಯ ಬೀರಿದಳು!
ವಿಜಯರಾಘವನಾಯಕ ಆನಂದನಿರ್ಭರನಾಗಿ ಗುರುಗಳ ಪಾದಗಳನ್ನು ಹಿಡಿದು “ಮಹತ್ಮಾ, ನಿಮ್ಮ ಅನುಗ್ರಹದಿಂದ ನಾನು, ನನ್ನ ಪ್ರಜೆಗಳು ಬದುಕಿದೆವು!” ಎಂದು ಉದ್ಧರಿಸಿದ, ಶ್ರೀಯವರು ನಕ್ಕು ರಾಜನ್, ಇದರಲ್ಲಿ ನಮ್ಮ ಅನುಗ್ರಹವೇನಿಲ್ಲ! ಎಲ್ಲವೂ ಶ್ರೀಲಕ್ಷ್ಮೀರಮಣನ ಅನುಗ್ರಹವೆಂದು ತಿಳಿ! ಇದು ತಾತ್ಕಾಲಿಕ ಪರಿಹಾರ! ಚೋಳಮಂಡಳದಲ್ಲಿ ಕ್ಷಾಮಪರಿಹಾರವಾಗಿ ಶಾಶ್ವತವಾಗಿ ದೇಶವು ಸುಭಿಕ್ಷವಾಗಲು ಮಾಡಬೇಕಾದ ಕಾರ್ಯ ಬಹಳವಿದೆ. ನಾಳೆ ಅದನ್ನು ನಿನಗೆ ತಿಳಿಸುತ್ತೇವೆ” ಎಂದು ಹೇಳಿ ಬಿಡಾರಕ್ಕೆ ತೆರಳಿದರು. ಶ್ರೀಯವರು ಹೋದಹೋದಲ್ಲೆಲ್ಲಾ ಸಾವಿರಾರು ಜನರು ಅವರನ್ನು ಹಿಂಬಾಲಿಸಿ, ತಮ್ಮ ಉದ್ಧಾರಕ ಗುರುಗಳೆಂದು ಸ್ವಾಮಿಗಳವರನ್ನು ಸ್ತುತಿಸಿ ಜಯಕಾರಮಾಡಹತ್ತಿದರು. ಪ್ರಜೆಗಳ ಸಂತೋಷವನ್ನು ಕಂಡು ಶ್ರೀಹರಿಯು ಪ್ರೀತನಾದನೆಂದು ಗುರುಗಳಿಗೂ ಆನಂದವಾಯಿತು. ತಮ್ಮ ಮೂಲಕವಾಗಿ ಸಮಸ್ತ ಪ್ರಜರಲ್ಲಿ ಕಾರುಣ್ಯ ತೋರಿದ ಶ್ರೀಹರಿವಾಯುಗಳನ್ನು ಸ್ತುತಿಸುತ್ತಾ ಗುರುವರ್ಯರು ಬಿಡಾರ ಸೇರಿ ಭಕ್ತಿಯಿಂದ ಶ್ರೀಮೂಲರಾಮಚಂದ್ರದೇವರ ಪೂಜಾರಾಧನೆ ಮಾಡಿ ಎಲ್ಲ ಫಲಗಳನ್ನೂ ಅವನಡಿಗೆ ಸಮರ್ಪಿಸಿ, ಭಿಕ್ಷಾ ಸ್ವೀಕರಿಸಿ ವಿಶ್ರಾಂತಿಪಡೆದರು.