ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೭೧. ಶ್ರೀಗುರುರಾಜರ ಔದಾರ್ಯ
ಶ್ರೀಸುಧೀಂದ್ರತೀರ್ಥರ ಪೂರ್ವಾಶ್ರಮ ಸೋದರಳಿಯಂದಿರು ವೈರಾಗ್ಯದಿಂದ ಶ್ರೀಗಳವರಿಂದ ಸನ್ಯಾಸಶ್ರಮಸ್ವೀಕರಿಸಿ, ಶ್ರೀಯಾದವೇಂದ್ರತೀರ್ಥರೆಂಬಹೆಸರಿನಿಂದ ಶಿಷ್ಯರಾಗಿ ತೀರ್ಥಯಾತ್ರೆಗೆ ಹೊರಟ ವಿಚಾರ ಹಿಂದೆಯೇ ನಿರೂಪಿಸಲಾಗಿದೆ. ಶ್ರೀಯಾದವೇಂದ್ರತೀರ್ಥರು ನಾಲ್ಕಾರು ಜನ ಶಿಷ್ಯರೊಡನೆ ಭಾರತಾದ್ಯಂತ ತೀರ್ಥಕ್ಷೇತ್ರಯಾತ್ರೆ, ಭಗವನ್ನೂರ್ತಿಗಳ ದರ್ಶನ, ಪರವಾದಿದಿಗ್ವಿಜಯ, ಸಿದ್ದಾಂತಪ್ರತಿಷ್ಠಾಪನಾ ಪಾಠಪ್ರವಚನ, ಗ್ರಂಥರಚನಾದಿ ಕಾರನಿರತರಾಗಿ ಸುಮಾರು ಹತ್ತುವರ್ಷಗಳ ಕಾಲವಾದ ಮೇಲೆ ಮತ್ತೆ ದಕ್ಷಿಣಭಾರತದ ಮಧುರೆಗೆ ದಯಮಾಡಿಸಿದಾಗ ರಾಘವೇಂದ್ರತೀರ್ಥರು ಪೀಠಾಧಿಪತಿಗಳಾಗಿರುವುದು, ವಿದ್ಯಾಗುರುಗಳೂ, ಆಶ್ರಮಗುರುಗಳೂ ಆದ ಶ್ರೀಸುಧೀಂದ್ರತೀರ್ಥರು ನಿರ್ಯಾಣ ಹೊಂದಿದ ವಿಚಾರವರಿತು ತುಂಬಾ ಖಿನ್ನರಾದರು. ಶ್ರೀಸುಧೀಂದ್ರಗುರುಗಳ ಬೃಂದಾವನದರ್ಶನಮಾಡಿ ಗುರುಭಕ್ತಿಯನ್ನು ಸಮರ್ಪಿಸಿ, ಆ ಹೊತ್ತಿಗಾಗಲೇ ಅತ್ಯಂತ ಖ್ಯಾತರಾಗಿದ್ದ ಮಹಾಸಂಸ್ಥಾನಾಧಿಪತಿಗಳಾದ ಶ್ರೀರಾಘವೇಂದ್ರಸ್ವಾಮಿಗಳವನ್ನು ನೋಡಿ ಆನಂದಿಸುವ ಉದ್ದಿಶ್ಯದಿಂದ ಶ್ರೀಯಾದವೇಂದ್ರರು ಸಂಚಾರಕ್ರಮದಲ್ಲಿ ಕುಂಭಕೋಣಕ್ಕೆ ಬಿಜಯಮಾಡಿಸಿದರು.
ಆಶ್ರಮಶ್ರೇಷ್ಠರಾದ ಶ್ರೀಯಾದವೇಂದ್ರತೀರ್ಥರು ದಯಮಾಡಿಸಿದ ವಿಚಾರ ತಿಳಿದು ಶ್ರೀರಾಘವೇಂದ್ರಗುರುಗಳು ಅವರನ್ನು ಪೂರ್ಣಕುಂಭ, ವಾದ್ಯವೈಭವಗಳಿಂದ ಸ್ವಾಗತಿಸಿ ವಿದ್ಯಾಮಠಕ್ಕೆ ಕರೆತಂದು ಉನ್ನತ ಪೀಠದಲ್ಲಿ ಕೂಡಿಸಿ ನಮಸ್ಕರಿಸಿ ಕುಶಲ ಪ್ರಶ್ನೆ ಮಾಡಿದರು. ಶ್ರೀಯಾದವೇಂದ್ರರು ಮಹಾಸಂಸ್ಥಾನಾಧಿಪತಿಗಳಾಗಿದ್ದರೂ ಆಶ್ರಮಜೇಷ್ಠರೆಂದು ತಮಗೆ ನೀಡಿದ ಗೌರವಾದರಗಳಿಂದ ಸಂತುಷ್ಟರಾಗಿ ಶ್ರೀರಾಘವೇಂದ್ರರನ್ನು ಆಲಿಂಗಿಸಿ ಹಸನ್ಮುಖಿಗಳಾಗಿ ಕುಶಲಪ್ರಶ್ನೆ ಮಾಡಿದರು. ಈ ಅಪೂರ್ವ ದೃಶ್ಯವನ್ನು ಕಂಡು ಸರ್ವರೂ ಮುದಿಸಿದರು.
ಶ್ರೀರಾಘವೇಂದ್ರರು “ನೀವು ಗುರುಪಾದರ ಬಂಧುಗಳು, ಜ್ಞಾನ-ಭಕ್ತಿ ವೈರಾಗ್ಯಪೂರ್ಣರು, ಆಶ್ರಮಜೇಷ್ಠರೂ ಆಗಿದ್ದೀರಿ. ನೀವು ಈ ಮಹಾಸಂಸ್ಥಾನವನ್ನು ಆಳಬೇಕು. ನಾವು ವಿಧೇಯರಾಗಿ ಸೇವೆ ಸಲ್ಲಿಸುತ್ತೇವೆ” ಎಂದರು. ಅದನ್ನು ಕೇಳಿ ಸರ್ವರೂ ಆಶ್ಚರ್ಯಚಕಿತರಾದರು, ಶ್ರೀಯಾದವೇಂದ್ರರು ಶ್ರೀರಾಘವೇಂದ್ರರ ಉದಾರಹೃದಯ ತ್ಯಾಗಗಳನ್ನು ಕಂಡು “ನಿಮ್ಮಂತಹವರನ್ನು ನಾವೆಲ್ಲಿಯೂ ಕಾಣಲಿಲ್ಲ. ಅಂತೆಯೇ ಶ್ರೀಗುರುಪಾದರು ನಿಮ್ಮನ್ನು ಈ ಮಹಾಪೀಠದಲ್ಲಿ ಕೂಡಿಸಿದ್ದಾರೆ. ನಾವು ವೈರಾಗ್ಯದಿಂದ ಸನ್ಯಾಸ ಸ್ವೀಕರಿಸಿದವರೇ ಹೊರತು ಸ್ವಪ್ನದಲ್ಲಿಯೂ ಮಹಾಸಂಸ್ಥಾನಾಧಿಪತಿಗಳಾಗಬೇಕೆಂಬ ಆಸೆ ಇರಲಿಲ್ಲ. ಈಗಲೂ ಇಲ್ಲ! ನಿಮ್ಮ ಉದಾರ ಅಂತಃಕರಣದಿಂದ ನಾವು ತೃಪ್ತರಾಗಿದ್ದೇವೆ. ಶ್ರೀಮದಾಚಾರ್ಯರ ಸಂಸ್ಥಾನವನ್ನಾಳಲು ನೀವೇ ಸಮರ್ಥರು, ಅರ್ಹರು” ಎಂದರು. ಆಗ ಶ್ರೀರಾಘವೇಂದ್ರರು “ಇಂದಿನ ದಿನವಾದರೂ ತಾವು ಶ್ರೀಮೂಲರಾಮರ ಪೂಜೆಮಾಡಿ ನಮ್ಮನ್ನು ಆಶೀರ್ವದಿಸಬೇಕು” ಎಂದು ವಿಜ್ಞಾಪಿಸಿದರು. ಶ್ರೀಯಾದವೇಂದ್ರರು ಶ್ರೀಹರಿಚಿತ್ತ! ನಿಮ್ಮಿಷ್ಟದಂತೆ ಆಗಲಿ ಎಂದು ಸಮ್ಮತಿಸಿದರು. ಅಂದು ಮಹಾಸಂಸ್ಥಾನ ಪೂಜೆಯನ್ನು ನೆರವೇರಿಸಿ ಶ್ರೀಯಾದವೇಂದ್ರರು ಗುರುಗಳು ನೀಡಿದ್ದ ಶ್ರೀಗರುಡವಾಹನ ಲಕ್ಷ್ಮೀನಾರಾಯಣದೇವರನ್ನು ರಾಘವೇಂದ್ರರಿಗೆ ಅರ್ಪಿಸಿ “ನಾವಿನ್ನು ಗುರುಪಾದರ ದರ್ಶನಮಾಡಿ ಒಂದು ನದೀತೀರದಲ್ಲಿ ತಪೋನಿರತರಾಗಿ ಜೀವಿತವನ್ನು ಕಳೆಯಲಾಶಿಸಿದ್ದೇವೆ. ಗುರುಪಾದರು ಅರ್ಚಿಸಿದ ಈ ಪ್ರತಿಮೆಯನ್ನು ತಾವು ಸ್ವೀಕರಿಸಿ ಪೂಜಿಸಿ ಭಗವದನುಗ್ರಹಕ್ಕೆ ಪಾತ್ರರಾಗಬೇಕು” ಎಂದು ಹೇಳಿ ಹೃತ್ತೂರ್ವಕವಾಗಿ ಆಶೀರ್ವದಿಸಿ ಭಿಕ್ಷಾಸ್ವೀಕಾರಾನಂತರ ಶ್ರೀಸುಧೀಂದ್ರಗುರುಗಳ ಬೃಂದಾವನ ದರ್ಶನಾಕಾಂಕ್ಷಿಗಳಾಗಿ ಹಂಪಿಯ ಕಡೆ ಪ್ರಯಾಣ ಬೆಳೆಸಿದರು.
ಕುಂಭಕೋಣದ ಸಮಸ್ತ ನಾಗರಿಕರು, ವಿದ್ದಂಡಲಿ, ಮಠೀಯ ಶಿಷ್ಯರು, ಆತ್ಮೀಯರು, ಧರ್ಮಾಭಿಮಾನಿಗಳು ಶ್ರೀರಾಘವೇಂದ್ರರ ಔದಾರ್ಯ-ಶ್ರೀಯಾದವೇಂದ್ರರ ವೈರಾಗ್ಯ, ಸದ್ಗುಣಗಳನ್ನು ಮನಮುಟ್ಟಿ ಕೊಂಡಾಡಿದರು.