ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೭೦. ಜ್ಞಾನಯಜ್ಞ
ಶ್ರೀರಾಘವೇಂದ್ರಸ್ವಾಮಿಗಳು ಹಂಪಿಯಿಂದ ಕುಂಭಕೋಣಕ್ಕೆ ಬಂದಮೇಲೆ ಒಂದು ತಿಂಗಳ ಕಾಲ ಮೌನದಿಂದ ದೇವಪೂಜಾ-ಧ್ಯಾನಾದಿಗಳಲ್ಲೇ ನಿರತರಾಗಿದ್ದರು. ಅವರು ಗುರುವಿಯೋಗದಿಂದ ಬಹಳ ಖಿನ್ನರಾಗಿದ್ದರು. ಗುರುಗಳ ಸದ್ಗುಣಗಳು, ಪಾಂಡಿತ್ಯ, ಶಿಷ್ಯವಾತ್ಸಲ್ಯಗಳನ್ನು ನೆನೆದಂತೆಲ್ಲಾ ಅವರ ನೇತ್ರಗಳು ಆಶುಪೂರ್ಣವಾಗುತ್ತಿತ್ತು. ಶ್ರೀಯವರ ಈ ಮೂಕವೇದನೆಯನ್ನು ಕಂಡು ಆತ್ಮೀಯರಿಗೆ ಬಹು ಕಳವಳವಾಯಿತು.
ಒಂದು ದಿನ ಏಕಾಂತದಲ್ಲಿ ಗುರುಗಳ ಭೇಟಿಮಾಡಿ ರಾಮಚಂದ್ರಾಚಾರ ಪ್ರಕೃತಿಗಳು ಗುರುಪಾದರು ಮಹಾಸಂಸ್ಥಾನದ, ವಿದ್ಯಾಪೀಠಗಳ ದೈನಂದಿನ ಕಾವ್ಯಗಳಲ್ಲಿ ಹೆಚ್ಚು ಆಸಕ್ತಿವಹಿಸಬೇಕೆಂದು ಪ್ರಾರ್ಥಿಸಿದರು. “ನಮ್ಮ ಯೋಜನೆಗಳು ಕಾರರೂಪಕ್ಕೆ ಬರುವ ಮೊದಲೇ ಗುರುಗಳು ನಮ್ಮನ್ನು ಅನಾಥರನ್ನಾಗಿಮಾಡಿ ಹರಿಪದ ಸೇರಿಬಿಟ್ಟರು. ಅಂತೆಯೇ ನಮ್ಮ ಉತ್ಸಾಹವೆಲ್ಲ ಕುಗ್ಗಿ ಹೋದಂತಾಗಿದೆ” ಎಂದು ಶ್ರೀರಾಘವೇಂದ್ರಗುರುಗಳು ತಮ್ಮ ಹೃದಯದ ಅಳಲನ್ನು ತೋಡಿಕೊಂಡರು. ಆಗ ಗುರುರಾಜಾಚಾರರು “ನೀವು ಹಮ್ಮಿಕೊಂಡ ಯೋಜನೆಗಳನ್ನು ಕಾರರೂಪಕ್ಕೆ ತರುವುದೇ ಅವರಿಗೆ ನೀವು ಸಲ್ಲಿಸಬಹುದಾದ ಶ್ರದ್ಧಾಂಜಲಿಯ ಗೌರವ, ಆದ್ದರಿಂದ ನೂತನೋತ್ಸಾಹದಿಂದ ಪಾಠಪ್ರವಚನ-ಗ್ರಂಥರಚನೆ, ಶಿಷ್ಯಭಕ್ತಜನೋದ್ಧಾರಾದಿ ಕಾವ್ಯಗಳಲ್ಲಿ ವಿಶೇಷಗಮನಕೊಡಬೇಕೆಂದು ನಾವೆಲ್ಲ ಪ್ರಾರ್ಥಿಸುತ್ತೇವೆ” ಎಂದರು. ಶ್ರೀಗಳವರು ನಸುನಕ್ಕು “ಶ್ರೀಶೇಚ್ಛಾ, ಆತ್ಮೀಯರಾದ ನಿಮ್ಮ ಪ್ರಾರ್ಥನೆಯಂತೆ ಕರ್ತವ್ಯನಿರತರಾಗುತ್ತೇವೆ” ಎನಲು ಸರ್ವರೂ ಗುರುಗಳಿಗೆ ನಮಸ್ಕರಿಸಿ “ಅನುಗೃಹೀತರಾದೆವು” ಎಂದು ವಿಜ್ಞಾಪಿಸಿದರು.
ಶ್ರೀವಿಜಯೀಂದ್ರತೀರ್ಥರು ಹಿಂದೆ ಕುಂಭಕೋಣದಲ್ಲಿ ಸ್ಥಾಪಿಸಿದಸಂಸ ತವಿದ್ಯಾಪೀಠವು ವಿಜಯೀಂದ್ರ-ಸುಧೀಂದ್ರತೀರ್ಥರ ಕಾಲದಲ್ಲಿ ಅತ್ಯುನ್ನತಿಯನ್ನು ಪಡೆದು, ರಾಘವೇಂದ್ರಸ್ವಾಮಿಗಳವರು ಪೀಠಾಧೀಶ್ವರರಾಗುವ ಹೊತ್ತಿಗಾಗಲೇ ಭಾರತಾದ್ಯಂತ ಶ್ರೇಷ್ಠವಿದ್ಯಾಪೀಠವೆಂದು ಕೀರ್ತಿಗಳಿಸಿತ್ತು. ರಾಘವೇಂದ್ರಗುರುಗಳು ಪ್ರತಿದಿನ ವಿದ್ಯಾಮಠದಲ್ಲಿ ನೂರಾರು ಜನ ವಿದ್ಯಾರ್ಥಿಗಳಿಗೆ ಶ್ರೀಸರ್ವಜ್ಞರ ಶಾಸ್ತ್ರದಲ್ಲಿ 'ಪ್ರಕರಣಗ್ರಂಥಗಳಿಂದಾರಂಭಿಸಿ “ನ್ಯಾಯಸುಧಾ-ಚಂದ್ರಿಕಾಂತ”ವಾಗಿ ಪಾಠಪ್ರವಚನವನ್ನು ನೆರವೇರಿಸುತ್ತಿದ್ದರು. ಶ್ರೀಗಳವರಲ್ಲದೆ ಇಪ್ಪತ್ತೈದು ಜನ ವಿವಿಧಶಾಸ್ತ್ರಪಾರಂಗತರೂ ವಿದ್ಯಾಪೀಠದಲ್ಲಿ ಪಾಠಹೇಳುತ್ತಿದ್ದರು. ಮಧ್ಯಾಹ್ನ ಶ್ರೀಮಠದಲ್ಲಿ ನ್ಯಾಯ-ವ್ಯಾಕರಣ-ಮೀಮಾಂಸಾ-ಧರ್ಮಶಾಸ್ತ್ರಗಳ ಉದ್ಘಂಥಗಳನ್ನು ಗುರುಗಳು ಪಾಠ ಹೇಳುತ್ತಿದ್ದರು. ಹೀಗೆ ಶ್ರೀಪಾದಂಗಳವರು ಹತ್ತುವರ್ಷಗಳ ಕಾಲ ಕುಂಭಕೋಣದಲ್ಲಿ ಸ್ಥಿರವಾಗಿದ್ದು ಸ್ನಾನ-ಜಪತಪ-ಪಾಠಪ್ರವಚನ-ದೇವಪೂಜಾ-ತತ್ವಧರ್ಮೋಪದೇಶಗಳಿಂದ, ಶಿಷ್ಯ-ಭಕ್ತಜನರ ವಿವಿಧ ಜಟಿಲ ಸಮಸ್ಯೆಗಳ ಪರಿಹಾರ-ಮಾರ್ಗದರ್ಶನಾದಿಗಳಿಂದ ಸಕಲವಿದ್ದದ್ದಿದ್ಯಾರ್ಥಿವೃಂದ, ಲೌಕಿಕ-ವೈದಿಕ ಶಿಷ್ಯ-ಭಕ್ತಜನರ ವಿಶೇಷ ಭಕ್ತಿ-ಗೌರವಗಳಿಗೆ ಪಾತ್ರರಾಗಿ ಲೋಕಕಲ್ಯಾಣಾಸಕ್ತರಾಗಿ ಕೀರ್ತಿಯ ಉತ್ತುಂಗ ಶಿಖರದಲ್ಲಿ ಮೆರೆಯಹತ್ತಿದರು.
ಈ ಅವಧಿಯಲ್ಲಿ ಸುಧೀಂದ್ರತೀರ್ಥರು ಮತ್ತು ಆತ್ಮೀಯರಿಗೆ, ಭರವಸೆ ನೀಡಿದ್ದಂತೆ ಶ್ರೀಯವರ ಪೂರ್ವಾಶ್ರಮ ಬಂಧುಗಳಾದ ನಾರಾಯಣಾಚಾರ, ಲಕ್ಷ್ಮೀನಾರಾಯಣಾಚಾರ, ಕೃಷ್ಣಾಚಾರ್ಯ, ಗೋವಿಂದಾಚಾರರುಗಳಿಗೆ, ರಘುಪತಿ ಆಚಾರ್ಯರುಗಳಿಗೆ ಶ್ರೀಮನ್ನಾಯಸುಧಾಂತವಾಗಿ ದೈತಶಾಸ್ತ್ರವನ್ನೂ ನ್ಯಾಯ-ಮೀಮಾಂಸಾ, ವ್ಯಾಕರಣ, ಧರ್ಮಶಾಸ್ತ್ರ- ಸಾಹಿತ್ಯಶಾಸ್ತ್ರಗಳನ್ನೂ ಪಾಠ ಹೇಳಿ ಶ್ರೇಷ್ಠಪಂಡಿತರನ್ನಾಗಿ ಮಾಡಿದರು. ಇದರಂತೆ ನೂರಾರುಜನ ವಿವಿಧಶಾಸ್ತ್ರವ್ಯಾಸಂಗಮಾಡುತ್ತಿದ್ದರು. ಹೀಗೆ ರಾಘವೇಂದ್ರಗುರುಗಳು ಹತ್ತು ವರ್ಷಗಳ ಕಾಲ ಅಖಂಡ ಜ್ಞಾನಯಜ್ಞವನ್ನು ನೆರವೇರಿಸಿ ನೂರಾರು ಜನರನ್ನು ಪಂಡಿತರನ್ನಾಗಿ ಮಾಡಿ ಜಗನ್ಮಾನ್ಯರಾದರು.