|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೬೯. ಶ್ರೀಸುಧೀಂದ್ರತೀರ್ಥರ ನಿರ್ಯಾಣ

ಶ್ರೀಸುಧೀಂದ್ರತೀರ್ಥರು ಮಹಾಸಂಸ್ಥಾನ ಪದ್ಧತಿಯಂತೆ ಪ್ರಿಯಶಿಷ್ಯರೊಡನೆ ಸಂಚಾರಹೊರಟರು. ಹೋದಹೋದಲ್ಲಿ ಉಭಯಶ್ರೀಗಳಿಗೆ ಆಭೂತಪೂರ್ವ ಸ್ವಾಗತ ದೊರಕುತ್ತಿತ್ತು. ಶ್ರೀರಾಘವೇಂದ್ರತೀರ್ಥರ ಅಲೌಕಿಕ ತೇಜಸ್ಸು, ಪಾಂಡಿತ್ಯ ಪ್ರತಿಭೆ, ಲೋಕಕಲ್ಯಾಣದೀಕ್ಷೆಗಳನ್ನು ಕಂಡು ಭಾರತದ ಜನತೆ ಉಭಯ-ಶ್ರೀಯವರ ದರ್ಶನ-ಸೇವಾದಿಗಳಿಂದ ಕೃತಾರ್ಥರಾಗುತ್ತಿದ್ದರು. ಹೀಗೆ ಎರಡು ಮೂರು ತಿಂಗಳು ಸಂಚಾರ ಮಾಡುತ್ತಾ ಶಿಷ್ಯರೊಡನೆ ಶ್ರೀಸುಧೀಂದ್ರರು ಪಾಲ್ಗುಣ ಶುಕ್ಲ ಬಿದಿಗೆಯ ಹಾಗೆ ಹಂಪಿಕ್ಷೇತ್ರಕ್ಕೆ ದಯಮಾಡಿಸಿದರು. ಅಲ್ಲಿ ಕರ್ನಾಟಕ ರಾಜ್ಯಪ್ರತಿನಿಧಿ, ಊರಿನ ವೈದಿಕ-ಲೌಕಿಕರು ಗುರುದ್ವಯರಿಗೆ ಅಸಾಧಾರಣ ಸ್ವಾಗತ ನೀಡಿ ರಾಜಮಂದಿರದಲ್ಲಿ ಬಿಡಾರಮಾಡಿಸಿದರು. ಶ್ರೀಸುಧೀಂದ್ರರು ವರಕುಮಾರರೊಡನೆ ತಮ್ಮ ಮೂಲಮಹಾಸಂಸ್ಥಾನದ ಆದ್ಯಾಚಾರರುಗಳಾದ ಶ್ರೀಪದ್ಮ ನಾಭತೀರ್ಥರು, ಶ್ರೀನರಹರಿತೀರ್ಥರು, ಶ್ರೀಜಯತೀರ್ಥರು, ಶ್ರೀಕವೀಂದ್ರತೀರ್ಥ, ವಾಗೀಶತೀರ್ಥ, ರಘುನಂದನತೀರ್ಥರು ಹಾಗೂ ಪೂಜ್ಯ ಶ್ರೀವ್ಯಾಸರಾಜಗುರುವರರ ಬೃಂದಾವನ ಸಂದರ್ಶನ ಸೇವಾದಿಗಳಿಂದ ಸುಪ್ರೀತರಾದರು. 

ಶ್ರೀಸುಧೀಂದ್ರರ ಅಪ್ಪಣೆಯಂತೆ ಗುರುರಾಜರೇ ಮಹಾಸಂಸ್ಥಾನ ಪೂಜಾ, ಪಾಠಪ್ರವಚನ ಮಂತ್ರಮುದ್ರಾಧಾರಣ ಗುರೂಪದೇಶ ಧರ್ಮೋಪದೇಶಗಳಿಂದ ಶಿಷ್ಯ-ಭಕ್ತಜನರನ್ನು ಅನುಗ್ರಹಿಸುತ್ತಿದ್ದರು. ಹೀಗೆ ಹತ್ತುದಿನಗಳು ಕಳೆದವು. ಒಂದು ದಿನ ಇದ್ದಕ್ಕಿದ್ದಂತೆ ಸುಧೀಂದ್ರತೀರ್ಥರು ಅಸ್ವಸ್ಥರಾದರು. ಅವರು ಶ್ರೀಪದ್ಮನಾಭ-ಜಯಮುನಿ-ಕವೀಂದ್ರ-ವಾಗೀಶರು ಹಾಗೂ ಶ್ರೀವ್ಯಾಸರಾಜಗುರುಗಳ ಬೃಂದಾವನ ಸನ್ನಿಧಿಯಲ್ಲಿ ತಪೋನಿಷ್ಠರಾಗಬಯಸಿ ಅಲ್ಲಿಯೇ ಬಿಡಾರಮಾಡಿದರು. ಸುಧೀಂದ್ರರು ಸ್ನಾನ-ಆಕ ಜಪತಪಾದಿಗಳನ್ನು ಮಾಡುತ್ತಾ ಹಣ್ಣು ಹಾಲುಗಳನ್ನು ಮಾತ್ರ ಸೇವಿಸುತ್ತಾ ಸದಾ ಧ್ಯಾನಾಸಕ್ತರಾಗಿರುತ್ತಿದ್ದರು. ಮುಂದೊಂದುದಿನ ಸಂಪೂರ್ಣ ಉಪೋಷಣದಿಂದಲೇ ಶ್ರೀಹರಿವಾಯು ತತ್ವಚಿಂತನ ಮಾಡುತ್ತಾ ಜಪ ತಪಧ್ಯಾನರತರಾದರು. 

ಶಾಲೀವಾಹನ ಶಕೆ ೧೪೪೫ ನೇ ರುಧಿರೋದ್ಗಾರಿ ಸಂವತ್ತರದ ಪಾಲ್ಗುಣ ಬಹುಳ ಬಿದಿಗೆ ದಿವಸ ಬೆಳಗಿನಝಾವ ಸ್ನಾನಾಕಾದಿಗಳನ್ನು ಮುಗಿಸಿ ಯೋಗಾಸನಾಸೀನರಾಗಿ ಕುಳಿತು ಪ್ರಿಯಶಿಷ್ಯರಾದ ಶ್ರೀರಾಘವೇಂದ್ರಗುರುಗಳನ್ನು ಕರೆಸಿಕೊಂಡು ಶ್ರೀಮದಾಚಾರಪರಂಪರಾಗತ ಸಂಪ್ರದಾಯಗಳನ್ನು ಉಪದೇಶಿಸಿ, ಶಿಷ್ಟರ ಶಿರದ ಮೇಲೆ ತಮ್ಮ ಅಮೃತಹಸ್ತವನ್ನು ಇರಿಸಿ, “ಶ್ರೀಮದಾಚಾರರ ಮಹಾಸಂಸ್ಥಾನವು ನಿಮ್ಮ ಕಾಲದಲ್ಲಿ ಜಗದ್ದಿಖ್ಯಾತವಾಗಿ ದೈತಸಿದ್ಧಾಂತವು ಆಚಂದ್ರಾರ್ಕವಾಗಿ ನಿಷ್ಕಂಟಕವಾಗಿ ಬೆಳಗಬೇಕು, ಸರ್ವರ ಕಲ್ಯಾಣವಾಗಬೇಕು. ಸದ್ದಂಥರಚನೆಯಾಗಿ ಪಾಠಪ್ರವಚನಗಳಿಗೆ ಸಹಾಯಕವಾಗಬೇಕೆಂದು ನಾವು ಬಯಸಿದ್ದೇವೆ. ನಮ್ಮ ಗುರುಪಾದರಾದ ಪ್ರಾಜ್ಯ ಶ್ರೀವಿಜಯೀಂದ್ರತೀರ್ಥರು ಅಪ್ಪಣೆ ಕೊಡಿಸಿದಂತೆ ಈ ಒಂದು ಮಹತ್ಕಾರಕ್ಕಾಗಿಯೇ ಅವತರಿಸಿದ ನೀವು ಈ ಕಾವ್ಯವನ್ನು ನಿರ್ವಹಿಸಲು ಶ್ರೀಹರಿ ವಾಯುಗಳು ನಿಮ್ಮಲ್ಲಿ ನಿಂತು ಶಕ್ತಿಯನ್ನಿತ್ತು ಅದನ್ನು ಸಫಲಗೊಳಿಸಿ ಅನುಗ್ರಹಿಸಲಿ ಎಂದು ನಾವು ಪ್ರಾರ್ಥಿಸಿ ಆಶಿರ್ವದಿಸುತ್ತಿದ್ದೇವೆ. ನಿಮಗೆ ಸರ್ವತ್ರವಿಜಯವಾಗಲಿ” ಎಂದು ಹರಸಿ ಅವರನ್ನು ಕಳುಹಿಸಿ, ಶ್ವಾಸನಿರೋಧ ಪಾರ್ವಕ ಲಯಚಿಂತನ ಮಾಡುತ್ತಾ ಶ್ರೀನಾರಾಯಣಸ್ಮರಣಪಾರ್ವಕವಾಗಿ ತಮ್ಮ ಇಹ ಲೋಕವ್ಯಾಪಾರ- ವನ್ನು ಮುಗಿಸಿ ಶ್ರೀಹರಿಪದ ಸೇರಿದರು. 

ನೂರಾರುಜನ ಶಿಷ-ಭಕ್ತ-ಧಾರ್ಮಿಕರು ಬಂದು ಗುರುಗಳ ಚರಮದರ್ಶನ ಪಡೆದು ಪುನೀತರಾದರು. ಗುರುಗಳು ನಿರ್ಯಾಣಹೊಂದಿದ ವಿಚಾರ ತಿಳಿದು ಶ್ರೀರಾಘವೇಂದ್ರರು ಬಹುವಾಗಿ ದುಃಖಿಸಿದರು. ಮಠದಜನರ ದುಃಖಕ್ಕೆ ಮೇರೆಯೇ ಉಳಿಯಲಿಲ್ಲ. ಶ್ರೀಗಳವರು ಪೂಜ್ಯ ಗುರುಗಳನ್ನು ಶ್ರೀಪದ್ಮನಾಭಾದಿ ಗುರುಗಳಿದ್ದ ಸನ್ನಿಧಿಯಲ್ಲಿಯೇ ನಿಕ್ಷೇಪಮಾಡಿಸಿ, ಬೃಂದಾವನ ಪ್ರತಿಷ್ಠೆ ಮಾಡಿಸಿದರು. ಆನಂತರ ಶ್ರೀಮೂಲರಾಮರ ಪೂಜಾರಾಧನೆಯನ್ನು ಮುಗಿಸಿ ಗುರುಗಳ ಬೃಂದಾವನದ ಮೇಲೆ ಶ್ರೀಮೂಲ-ದಿಗ್ವಿಜಯ್-ಜಯರಾಮರನ್ನು ಮಂಡಿಸಿ ಕನಕಾಭೀಷೇಕ ಮಾಡಿ ಹಸ್ತೋದಕಪ್ರದಾನ ಮಾಡಿ ಬಾಷಸಿಕ್ತನಯನರಾಗಿ ಗುರುಗಳ ಮೇಲೆ ಚರಮ ಶ್ಲೋಕವನ್ನು ರಚಿಸಿ ಹಾಡಿದರು - 

ಕುಶಾಗ್ರಮತಯೇ ಭಾನುದ್ವಿತಯೇ ವಾದಿಭೀತಯೇ | ಆರಾಧಿತಶ್ರೀಪತಯೇ ಸುಧೀಂದ್ರಯತಯೇ ನಮಃ | 

ಅನಂತರ ಗುರುಗಳ ಬೃಂದಾವನಕ್ಕೆ ಮಂಗಳಾರತಿಮಾಡಿ, ಮಂತ್ರಪುಷ್ಪ ಸಮರ್ಪಿಸಿ ಸಾಷ್ಟಾಂಗ ನಮಸ್ಕಾರಮಾಡಿದರು. ಅಂದು ಮತ್ತು ಮರುದಿವಸ ಸಂಪ್ರದಾಯದಂತೆ ಗುರುಗಳ ಮಹಾಸಮಾರಾಧನೆಯನ್ನು ವೈಭವದಿಂದ ನೆರವೇರಿಸಿ ಶ್ರೀಪಾದಂಗಳವರು ಮಹಾಸಂಸ್ಥಾನದೊಡನೆ ಸಂಚಾರಕ್ರಮದಿಂದ ಕುಂಭಕೋಣಕ್ಕೆ ಬಂದು ಸೇರಿದರು.

ಶ್ರೀಮತ್ತುಧೀಂದ್ರತೀರ್ಥರಿಂದ ಪರಿಪಾಲಿಸಲ್ಪಡುತ್ತಾ ರಾಜಿಸುತ್ತಿದ್ದ ಶ್ರೀಮಧ್ವಾಚಾರರ ದೈತಸಿದ್ಧಾಂತ ಸಾಮ್ರಾಜ್ಯ- ರಾಜ್ಯಲಕ್ಷ್ಮಿಯು ತುಂಗಭದ್ರಾತೀರದಲ್ಲಿ ಪೂರ್ವಾಚಾರರುಗಳ ಜತೆಗೆ ತಪೋಮಗ್ನರಾಗಿದ್ದ ಶ್ರೀಸುಧೀಂದ್ರತೀರ್ಥರನ್ನು ಬಿಟ್ಟು ಕುಂಭಕೋಣದಲ್ಲಿ ಶ್ರೀಮೂಲರಘುಪತಿ ವೇದವ್ಯಾಸದೇವರ ಪೂಾಜಾಸೇವಾಸಕ್ತರಾಗಿದ್ದ ಸದ್ಗುಣಗಣಸಮುದರೂ, ಮಹಾಪಂಡಿತರೂ, ವರ್ಧಿಷ್ಟುಗಳೂ ಆದ ಶ್ರೀರಾಘವೇಂದ್ರತೀರ್ಥಗುರುಸಾರ್ವಭೌಮರನ್ನು ಆಶ್ರಯಿಸಿದಳು. ಶ್ರೀರಾಘವೇಂದ್ರಗುರುಗಳು ಶ್ರೀಮದಾಚಾರರ ಮಹಾಸಂಸ್ಥಾನಾಧೀಶ್ವರರಾಗಿ ವಿರಾಜಿಸಿದರು.