ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
೬೮. ಗುರುಭಕ್ತಿ
ಇಂದು ಜಗತ್ತಿನಲ್ಲಿ ಸ್ಥರೂಪೋದ್ಧಾರಕ ಗುರುಗಳೆಂದು ಶ್ರೀರಾಘವೇಂದ್ರರು ಮಾನ್ಯರಾಗಿದ್ದಾರೆ. ಅವರು ಸತ್ಯಶೀಲರಾಗಿ, ಸಾತ್ವಿಕತೆಯ ಸಂಕೇತರಾಗಿ ಜಗತ್ತಿಗೆ ಗುರು-ಶಿಷ್ಯಭಾವನೆ ಹೇಗಿರಬೇಕೆಂದು ತಮ್ಮ ಪವಿತ್ರಾಚರಣೆಯಿಂದ ತೋರಿಕೊಟ್ಟು ಆದರ್ಶ ಶಿಷ್ಯರು-ಗುರುಗಳೆಂದು ಸರ್ವರಿಂದ ಸ್ತುತರಾಗಿದ್ದಾರೆ. ಶ್ರೀರಾಘವೇಂದ್ರರು ಗುರುಭಕ್ತಿಗೆ ಇನ್ನೊಂದು ಹೆಸರಾಗಿದ್ದಾರೆ! ಅವರ ಹರಿವಾಯುಗುರುಭಕ್ತಿ, ಸಾತ್ವಿಕಶಕ್ತಿ ಭಕ್ತರಿಗೆ ದಾರಿದೀಪವಾಗಿತ್ತು. ಗುರು ಶ್ರೀಸುಧೀಂದ್ರರಲ್ಲಿನ ಅವರ ಭಕ್ತಿಯನ್ನು ತಿಳಿಸಲು ಶಬ್ದಗಳೇ ಸಾಲದು. ಅದು ಅನನ್ಯಸಾಧಾರಣವಾಗಿತ್ತು. ತಾನೇತಾನಾಗಿ ಹೃತ್ತೂರ್ವಕವಾಗಿ ಹೊರಹೊಮ್ಮುತ್ತಿತ್ತು. ತಮ್ಮ ಸರ್ವವಿಧ ಉದ್ಧಾರಕ್ಕೆ ಗುರುಗಳ ಅನುಗ್ರಹವೇ ಕಾರಣವೆಂದು ನಂಬಿ, ನಿಜವಾದ ಶಿಷ್ಯನು ಮಾಡಬೇಕಾಗಿದ್ದ ಭಕ್ತಿಯೇ ಅವರದಾಗಿತ್ತು. ಅಂತೆಯೇ ಅವರು ಅಂದು, ಇಂದು, ಮುಂದೂ, ಎಂದೆಂದಿಗೂ ಜಗತ್ತಿನಲ್ಲಿ ಗುರುಭಕ್ತಿಗೆ ಉದಾಹರಣೆಯಾಗಿದ್ದಾರೆ.
ಶ್ರೀರಾಘವೇಂದ್ರಗುರುಗಳ ಸಹೃಯತೆಯ ಸೌರಭವನ್ನಾಘ್ರಾಣಿಸಿದವರೇ ಬಲ್ಲರು, ಅವರ ಹಿರಿಮೆಯನ್ನು ! ಗುರುಗಳ ಭಕ್ತಿವಾತ್ಸಲ್ಯ ದಿವಿಯಿಂದ ಭುವಿಗಿಳಿದು ಬಂದಂತಿತ್ತು. ಅವರ ಸಂದರ್ಶನವೇ ಜೀವನ ಸಾಫಲ್ಯತೆಯ ಒಂದು ಮೈಲುಗಲ್ಲೊಂದು ಶಿಷ್ಯ-ಭಕ್ತವೃಂದ ಭಾವಿಸುತ್ತಿತ್ತು. ಮಗುವಿನಿಂದ ಮುದುಕರವರೆಗೆ ಮದ್ದರಿಂದ-ಮಹಾಧೀಮಂತರವರೆಗೆ, ಅಜ್ಞಾನಿಗಳಿಂದ- ಜ್ಞಾನಿನಾಯಕರವರೆಗೆ ಎಲ್ಲರಲ್ಲೂ ಅವರು ತೋರುತ್ತಿದ್ದ ಪ್ರೀತಿ, ವಿಶ್ವಾಸ, ವಾತ್ಸಲ್ಯಗಳು, ಸಜ್ಜನರಿಗೆ ಮಾಡುತ್ತಿದ್ದ ಉಪದೇಶ, ಮಾರ್ಗದರ್ಶನ, ಪ್ರೇಮಲ ಸಂಭಾಷಣೆಗಳು ಮಾನವರ ಮನದ ಮಾಲಿನ್ಯವನ್ನು ದೂರಮಾಡಿ ಪವಿತ್ರಭೂಮಿಕೆಯನ್ನು ರಚಿಸುತ್ತಿದವು. ಸಯುಕ್ತಿಕವೂ, ಸಕಾಲಿಕವೂ ಆದ ಅವರ ತಾತ್ವಿಕ-ಧಾರ್ಮಿಕೋಪದೇಶಗಳು ಜನರ ಹೃದಯದಲ್ಲಿ ಭಕ್ತಿಯ ಹೊನಲನ್ನೇ ಹರಿಸಿ, ದುಃಖ-ದುಮ್ಮಾನಗಳನ್ನು ದೂರ ಮಾಡಿ, ಒಂದು ನವ-ಭವ್ಯ ದಿವ್ಯದೆಡೆಗೆ ಕೊಂಡೊಯ್ಯುತ್ತಿತ್ತು. ಹೀಗೆ ಶುದ್ಧಾಂತಃಕರಣರಾದ ಶಿಷ್ಯಭಕ್ತರ ಪರಿಪುಷ್ಪಮನೋಕ್ಷೇತ್ರದಲ್ಲಿ ಭಕ್ತಿಭಾವದ ಬೀಜಗಳನ್ನು ಬಿತ್ತಿ, ಭಕ್ತಿ ಸಹಕೃತ ಜ್ಞಾನಪೂರ್ಣ ವಾಗಮೃತಬಿಂದುಗಳನ್ನು ಸಿಂಪಡಿಸಿ, ಅದು ಶೀಘ್ರವಾಗಿ ಫಲಪ್ರದವಾಗುವಂತೆ ಮಾಡಿಬಿಡುತ್ತಿದ್ದರು. ಆ ಅಮೃತ ಫಲವನ್ನು ಉಂಡು ಆನಂದಿಸಿ ಆತ್ರೋದ್ಧಾರಮಾಡಿಕೊಂಡವರು ಲಕ್ಷಾಂತರ ಜನರು! ಇಂದಿಗೂ ಕೋಟ್ಯಂತರ ಜನರು ಅವರ ಅನುಗ್ರಹೋಪದೇಶಗಳಿಂದ ಸಮಸ್ತ ಅಭ್ಯುದಯ ಕಲ್ಯಾಣಗಳನ್ನು ಪಡೆದು ಕೃತಾರ್ಥರಾಗುತ್ತಿರುವುದು ಅನುಭವಸಿದ್ದ ವಿಚಾರವಾಗಿದೆ.
ಈ ಹಿನ್ನೆಲೆಯಲ್ಲಿ ವಿಚಾರಮಾಡಿದಾಗ ಗುರುರಾಜರು ತಮ್ಮ ಗುರುಗಳಲ್ಲಿ ಮಾಡುತ್ತಿದ್ದ ಅನನ್ಯಸಾಧಾರಣ ಭಕ್ತಿ ಮತ್ತು ಸೇವೆಗಳ ಹಿರಿಮೆ-ಗರಿಮೆಗಳು ಸುಜನರಿಗೆ ವ್ಯಕ್ತವಾಗುವುದರಲ್ಲಿ ಸಂದೇಹವಿಲ್ಲ. ಶ್ರೀರಾಘವೇಂದ್ರರು ಪೀಠಾಧೀಶರಾದಲಾಗಾಯಿತು ಶ್ರೀಸುಧೀಂದ್ರ ಗುರುಗಳನ್ನು ಬಹುಭಕ್ತಿ ಶ್ರದ್ಧೆಗಳಿಂದ ಸೇವಿಸುತ್ತಿದ್ದರು. ಗುರುಸೇವೆಗೆ ಅನೇಕ ಜನರು ನಿಯುಕ್ತರಾಗಿದ್ದರೂ, ಪ್ರತಿದಿನ ಗುರುಗಳು ಬೆಳಗಿನಝಾವ ಏಳುವುದರಿಂದಾರಂಭಿಸಿ, ರಾತ್ರಿ ಅವರು ವಿಶ್ರಾಂತಿಪಡೆಯುವವರೆಗೆ, ಶ್ರೀರಾಘವೇಂದ್ರರು ತಾವೇ ಖುದ್ದಾಗಿ ಅವರ ಸೇವೆ ಮಾಡುತ್ತಿದ್ದರು. ಶ್ರೀಸುಧೀಂದ್ರರು ಶಿಷ್ಯರನ್ನು ಅತ್ಯಂತ ಪ್ರೀತಿವಿಶ್ವಾಸಗಳಿಂದ ಕಾಣುತ್ತಿದ್ದರು. ಒಂದು ಕ್ಷಣವೂ ಶಿಷ್ಯರನ್ನು ಬಿಟ್ಟಿರುತ್ತಿರಲಿಲ್ಲ. ಗುರುರಾಜರು ಶ್ರೀಸುಧೀಂದ್ರರ ಬಹಿಃಪ್ರಾಣದಂತಿದ್ದರು. ಶಿಷ್ಯರ ಗುರುಭಕ್ತಿಯನ್ನು ಕಂಡು ಸುಧೀಂದ್ರರು ವಿಸ್ಮಿತರಾಗುತ್ತಿದ್ದರು. “ಗಗನಂ ಗಗನಾಕಾರಂ ಸಾಗರಸ್ಸಾಗರೋಪಮಃ ಎಂಬ ಉಕ್ತಿಯಂತೆ ಗುರುಭಕ್ತಿ-ಶಿಷ್ಯವಾತ್ಸಲ್ಯಗಳಿಗೆ ಏನಾದರೊಂದು ಉದಾಹರಣೆ ಕೊಡಬೇಕಾದರೆ ರಾಘವೇಂದ್ರರ ಗುರುಭಕ್ತಿ-ಸುಧೀಂದ್ರರ ಶಿಷ್ಯವಾತ್ಸಲ್ಯಗಳನ್ನೇ ದೃಷ್ಟಾಂತವಾಗಿ ಕೊಡಬೇಕೇ ಹೊರತು, ಅದಕ್ಕೆ ಬೇರೆ ಉದಾಹರಣೆ ಕೊಡಲು ಸಾಧ್ಯವಿಲ್ಲ. ಹೀಗಿತ್ತು ಆ ಗುರುಶಿಷ್ಯರ-ಗುರುಭಕ್ತಿ-ಶಿಷ್ಯಪ್ರೇಮಗಳು!