ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
೬೬. ಸರಸ್ವತಮ್ಮನವರಿಗೆ ಸದ್ಧತಿ
ಅಂದು ಸಂಜೆ ಲಕ್ಷ್ಮೀನರಸಿಂಹಾಚಾರ್ಯರು ಶ್ರೀಮಠಕ್ಕೆ ಬಂದವರು ನೇರವಾಗಿ ಶ್ರೀಸುಧೀಂದ್ರರ ಏಕಾಂತ ಕೊಠಡಿಗೆ ತೆರಳಿದರು. ಮಾನವದನರಾಗಿನಿಂತ ಅವರನ್ನು ಕಂಡು ಶ್ರೀಸುಧೀಂದ್ರರು “ಆಚಾರ್ಯರೇ, ನೀವೇಕೆ ಪ್ರಿಯಶಿಷ್ಯರ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಲಿಲ್ಲ?” ಎನಲು ಆಚಾರ್ಯರು ಅಂಗವಸ್ತ್ರದಿಂದ ಕಣ್ಣೀರೊರೆಸಿಕೊಂಡು “ಕ್ಷಮಿಸಬೇಕು. ಪರಿಸ್ಥಿತಿಯ ಕೈಗೂಸಾಗಿ ಹಾಗೆ ಮಾಡಬೇಕಾಯಿತು” ಎಂದರು. ಶ್ರೀಗಳವರು “ಅದು ಸರಿ, ಕಣ್ಣಿನಲ್ಲೇಕೆ ನೀರು ? ಭಾವಮೈದುನ ಜಗದ್ಗುರುವಾದ ಆನಂದಾತಿಶಯದಿಂದಲೇನು?” ಎನಲು ಆಚಾರ್ಯರು “ಆ ಆನಂದದ ಕಣ್ಣೀರೀಗ ದುಃಖಾಶ್ರುವಾಗಿ ಪರಿಣಮಿಸಿದೆ ಎ೦ದರು.
ಶ್ರೀ : ಅದೇನು ಹಾಗೆನ್ನುವಿರಿ? ವಿಚಾರವೇನು ?
ಆ : ದುರ್ಘಟನೆಯೊಂದನ್ನು ಬಿನ್ನವಿಸುವ ದೌರ್ಭಾಗ್ಯ ನನ್ನದಾಗಿದೆ!
ಶ್ರೀ : (ಕಳವಳದಿಂದ) ಸ್ವಷ್ಟವಾಗಿ ಹೇಳಿ, ಆಚಾರರೇ.
ಆ : ಸ್ವಾಮಿ ನಮ್ಮ ಸರಸ್ವತಿ....
ಶ್ರೀ : (ಗಾಬರಿಯಾಗಿ) ಸರಸ್ವತಿಗೇನಾಗಿದೆ ? ಆರೋಗ್ಯವಾಗಿರುವಳಷ್ಟೇ ?
ಆ : ಇನ್ನೆಲ್ಲಿಯ ಸರಸ್ವತಿ! ಸ್ವಾಮಿ, ಪತಿಗೆ ಪರಮಹಂಸಾಶ್ರಮವಾಯಿತೆಂದು ದುಃಖ ಸಹಿಸಲಾರದೆ ಆ ಸಾಧಿ ಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಳಂತೆ.
ಶ್ರೀ : “ಶಾಂತಂ ಪಾಪಂ' ಯಾವಾಗ ನಡೆಯಿತು ಈ ದುರ್ಘಟನೆ ?
ಆ : (ಕಣ್ಣೀರು ಸುರಿಸುತ್ತಾ) ನೂತನ ಯತಿಗಳಿಗೆ ಪಟ್ಟಾಭಿಷೇಕವಾದ ರಾತ್ರಿ.
ಶ್ರೀ : ಓಹ್, ಶ್ರೀಮೂಲರಾಮ! ಹೀಗೇಕಾಯಿತು ? ಛೇ, ಬಹಳ ಅನ್ಯಾಯ. ಶ್ರೀಹರಿಗೆ ಪ್ರೇಮಲ ಹೃದಯದ ಈ ಎಳೆಯ ಜೀವವೇ ಬೇಕಾಗಿತ್ತೆ? ಶ್ರೀಹರಿಚಿತ್ತ. ಮುಂದೆ ಸರಸ್ವತಿಯ ಕರ್ಮಾದಿಗಳು ?
ಆ : ಗುರುರಾಜಾಚಾರರು ಲಕ್ಷ್ಮೀನಾರಾಯಣನಿಂದ ಅಂತ್ಯಕ್ರಿಯೆಯನ್ನು ನೆರವೇರಿಸಿ, ಮುಂದಿನ ದಿನ ಕರ್ಮಗಳನ್ನು ಮಾಡಿಸುತ್ತಿದ್ದಾರೆ.
ಶ್ರೀಗಳವರು : “ಆಚಾರ, ಆ ಸಾಧಿಯ ಕರ್ಮಾದಿಗಳು ಸಕ್ರಮವಾಗಿ ನೆರವೇರಲಿ” ಎಂದು ಹೇಳಿ ಮಠದ ಅಧಿಕಾರಿಗಳಿಗೆ ಆ ಬಗ್ಗೆ ಆದೇಶ ನೀಡಿದರು. ಆಚಾರೈರು “ಮಹಾಸ್ವಾಮಿ, ಈ ದಾರುಣ ವಾರ್ತೆಯನ್ನು ಕಿರಿಯ ಶ್ರೀಪಾದಂಗಳವರಿಗೆ ತಿಳಿಸುವುದಂತೂ ನನ್ನಿಂದಾಗದು !” ಎನಲು ಶ್ರೀಯವರು “ಆ ಕಾರ್ಯವನ್ನು ನಾವೇ ನಿಭಾಯಿಸುತ್ತೇವೆ. ಕರ್ಮಗಳೆಲ್ಲಾ ಮುಗಿದು ಶುಭಸ್ವೀಕಾರವಾದ ಮೇಲೆ ಲಕ್ಷ್ಮೀನಾರಾಯಣ ಮತ್ತು ಮನೆಯವರನ್ನು ನಮ್ಮ ಸನ್ನಿಧಿಗೆ ಕರೆದುಕೊಂಡು ಬನ್ನಿರಿ” ಎಂದರು. ಆನಂತರ ಗುರುಗಳ ಅಪ್ಪಣೆ ಪಡೆದು ಲಕ್ಷ್ಮೀನರಸಿಂಹಾಚಾರೈರು ಮನೆಗೆ ತೆರಳಿದರು. ಸರಸ್ವತಮ್ಮನ ಅಕಾಲ ಮರಣ ವಿಚಾರ ತಿಳಿದು ಮಠದವರೆಲ್ಲಾ ಅತ್ಯಂತ ಖೇದಗೊಂಡರು. ಕಿರಿಯ ಶ್ರೀಯವರನ್ನು ಮುಖವೆತ್ತಿ ನೋಡುವ ಧೈರ್ಯವಿಲ್ಲದೆ ಎಲ್ಲರೂ ಮೌನದಿಂದ ತಮ್ಮ ಕಾವ್ಯದಲ್ಲಿ ಪ್ರವೃತ್ತರಾದರು.
ಅಂದು ರಾತ್ರಿ ವಿಶ್ರಾಂತಿ ಸಮಯದಲ್ಲಿ ಸುಧೀಂದ್ರರು ಪ್ರಿಯಶಿಷ್ಯರಿಗೆ ಸರಸ್ವತಮ್ಮ ನವರ ದುರಂತ ಮರಣ ವಿಚಾರವನ್ನು ಹೇಳಿದರು. ಅದನ್ನು ಕೇಳಿ ಕಿರಿಯ ಶ್ರೀಗಳವರು ನಿಶ್ಲೇಷಿತರಾಗಿ ಕುಳಿತುಬಿಟ್ಟರು. ಒಂದೇ ಒಂದು ಕ್ಷಣ ಅವರ ಚಿತ್ತಭಿತ್ತಿಯಲ್ಲಿ ತಮ್ಮ ಪೂರ್ವಾಶ್ರಮ ಪತ್ನಿಯ ಸದ್ಗುಣಗಳು, ಪ್ರೇಮಾದಿಗಳು ಚಿತ್ರಿತವಾದಂತಾಗಿ ಅವರ ಕಣ್ಣಿನಿಂದ ನಾಲ್ಕಾರು ಹನಿ ನೀರುದರಿದವು. ತಕ್ಷಣ ಮನಸ್ಸನ್ನು ಸ್ಥಿಮಿತಗೊಳಿಸಿ ನಿಟ್ಟುಸಿರುಬಿಟ್ಟು, “ಹೂಂ, ಶ್ರೀಶೇಚ್ಚಾ”, “ಯಾರಿಗೆ ಯಾರೋ ಪುರಂದರವಿಠಲ” ಎಂದಿಷ್ಟೇ ಹೇಳಿ ಮೌನತಾಳಿದರು ! ಶ್ರೀಸುಧೀಂದ್ರರು ಪ್ರಿಯಶಿಷ್ಯರ ಮನೋದಾರ್ಡ್ಯವನ್ನು ಕಂಡು ವಿಸ್ಮಿತರಾದರು.
ಶ್ರೀರಾಘವೇಂದ್ರರು ಪೂರ್ವಾಶ್ರಮಪತ್ನಿಯ ಮರಣದಿಂದ ಯಾವ ವಿಧ ಉದ್ವೇಗ, ದುಃಖಗಳನ್ನೂ ವ್ಯಕ್ತಪಡಿಸದೆ ಎಂದಿನಂತೆ ಪ್ರಸನ್ನಚಿತ್ತರಾಗಿ ಸ್ನಾನ-ಆಕ-ಜಪ-ತಪ-ಪಾಠ-ಪ್ರವಚನ-ಶ್ರೀಮೂಲರಾಮಾರಾಧನ, ಗುರುಸೇವಾದಿ ಸ್ವಾಶ್ರಮೋಚಿತಕರ್ಮಗಳನ್ನು ನೆರವೇರಿಸುತ್ತಾನಿರ್ಲಿಪ್ತಚಿತ್ತರಾಗಿರುವುದನ್ನು ಕಂಡು, ಸರ್ವರೂ ಅವರ ಸ್ಥೆರ್ಯ, ಮನೋದಾರ್ಢ, ವೈರಾಗ್ಯಾದಿಗಳಿಂದ ಪ್ರಭಾವಿತರಾಗಿ, “ಮಹಾನುಭಾವರು” ಎಂದು ಗುರುಗಳನ್ನು ಮನಮುಟ್ಟಿ ಕೊಂಡಾಡಹತ್ತಿದರು.
ಕಾವೇರಿತೀರದ ಉಪವನದಲ್ಲಿರುವ “ಪುರಾಣಮಂಟಪ'ದಲ್ಲಿ ಶ್ರೀರಾಘವೇಂದ್ರತೀರ್ಥರು ಪ್ರಾತಃಕಾಲದ ಆಕಮಗ್ನ- ರಾಗಿದ್ದಾರೆ. ಮಠದ ದವಸದ ನರಸಿಂಹಾಚಾರ್ಯರು ಗುರುಗಳ ಮುಂದೆ ಕುಳಿತು ಭಾಗವತ ಪುರಾಣಾನುವಾದ ಮಾಡುತ್ತಿದ್ದಾರೆ. ಪಂಡಿತರು, ನೂರಾರು ಜನ ಧಾರ್ಮಿಕರು ಪುರಾಣಶ್ರವಣ ಮಾಡುತ್ತಿದ್ದಾರೆ.
ಇದ್ದಕ್ಕಿದ್ದಂತೆ ಅಂಬರದಿಂದ ಕೃಷ್ಣಮೇಘಸದೃಶ ಛಾಯೆಯೊಂದು ಶ್ರೀಪಾದಂಗಳವರ ಮುಂದೆ ಅಂತರಾಳದಲ್ಲಿ ಆವಿರ್ಭವಿಸಿತು ! ಸಕಲರೂ ಇದೇನಚ್ಚರಿಯೆಂದು ಭಯಕಾತರರಾಗಿ ಕುಳಿತಿದ್ದಾರೆ. ಆ ಛಾಯೆ ಅಲುಗಾಡುತ್ತಾ ಶ್ರೀಗಳವರೊಡನೆ ಏನೋ ಹೇಳಿಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ. ಶ್ರೀಯವರು ಹಾಗೂ ಛಾಯೆಗಳ ನಡುವೆ ಸಂಭಾಷಣೆ ಪ್ರಾರಂಭವಾಯಿತು. ಗುರುಗಳ ಮಾತು ಕೇಳುತ್ತಿದೆ. ಛಾಯೆಯು ಏನು ಹೇಳುತ್ತದೆಯೆಂಬುದು ಗೊತ್ತಾಗುತ್ತಿಲ್ಲ.
ಶ್ರೀಗಳವರು : ಯಾರು ನೀನು ?
ಛಾಯೆ : ಇಷ್ಟು ಬೇಗ ನನ್ನನ್ನು ಮರೆತುಬಿಟ್ಟಿರಾ ಸ್ವಾಮಿ !
ಶ್ರೀ : ಪ್ಲಾ, ಸರಸ್ವತಿ !
ಛಾಯೆ : ಅಹುದು ಸ್ವಾಮಿ.
ಶ್ರೀ : ನಿನಗೆ ಈ ಗತಿಯಾಯಿತೇ ?
ಛಾಯೆ : ಅವಶ್ಯಮನುಭೋಕ್ತವ್ಯಂ ಕೃತಂ ಕರ್ಮ ಶುಭಾಶುಭಂ!' ಎಂದು ನೀವೇ ಹೇಳುತ್ತಿದ್ದಿರಲ್ಲವೇ ಸ್ವಾಮಿ. ಶ್ರೀ : ಸರಸ್ವತಿ, ವಿಚಾರಶೀಲಳೂ ಗುಣವತಿಯೂ ಆಗಿದ್ದ ನೀನು ಹಿಂದು ಮುಂದಾಲೋಚಿಸದೆ ದುಡುಕಿಬಿಟ್ಟೆ !
ಛಾಯೆ : ನಿಜ, ದುಡುಕಿದೆ, ಆದರೀಗ ಕಾಲ ಮಿಂಚಿದೆ. ಇಂತು ಪ್ರೇತವಾಗಿ ಅಂಡಲೆಯುವುದು ನನ್ನ ಹಣೆಯಲ್ಲಿ
ಬರೆದಿರುವಾಗ ಏನು ಮಾಡಲಾದೀತು?
ಶ್ರೀ : ಹೀಗೇಕೆ ಮಾಡಿದೆ?
ಛಾಯೆ : ಇನ್ನೇನು ಮಾಡಲಿ? ನೀವೇ ದೇವರೆಂದು ಪೂಜಿಸುತ್ತಿದೆ. ನೀವು ನನ್ನ ಜೀವನದುಸಿರಾಗಿದ್ದಿರಿ, ಕಷ್ಟ, ದಾರಿದ್ರಗಳೆಲ್ಲವನ್ನೂ ಸಂತೋಷದಿಂದಲೇ ಅನುಭವಿಸಿದೆ! ಏಕೆ ? ನಿಮ್ಮ ಸಾನ್ನಿಧ್ಯ, ಪ್ರೇಮ, ಆಲಾಪ, ಸ್ಪರ್ಶ ದೊರಕುತ್ತಿತ್ತು. ನೀವೂ ನನ್ನನ್ನು ಪ್ರೀತಿಸುತ್ತಿದ್ದಿರಿ. ಇಂಥ ನನ್ನ ಸ್ವಾಮಿಯು ನನ್ನನ್ನು ತ್ಯಜಿಸಿ ಸನ್ಯಾಸಿಗಳಾದ ಮೇಲೆ ಉಳಿದಿದ್ದಾದರೂ ಏನು? ನಾನು ಯಾರಿಗಾಗಿ ಜೀವಿಸಬೇಕಾಗಿತ್ತು! ಪತಿವಿಯೋಗ ವಿರಹಾಗ್ನಿಯಲ್ಲಿ ಬೆಂದು ಜೀವಚ್ಛವವಾಗಿ ಬದುಕಿರುವುದಕ್ಕಿಂತ
ಮರಣವೇ ಲೇಸೆನಿಸಿತು!
ಶ್ರೀ : ಅದರಿಂದ ನಿನಗೇನು ಲಾಭವಾಯಿತು?
ಛಾಯೆ : ಬದುಕಿರುವಾಗ ನಿಮ್ಮ ದರ್ಶನಭಾಗ್ಯ ನನಗಿಲ್ಲವಾಯ್ತು. ಮೃತಳಾಗಿ ಈ ರೂಪದಿಂದಲಾದರೂ, ದೂರದಲ್ಲಿಯೇ ನಿಂತು ನಿಮ್ಮನ್ನು ನೋಡುವುದಕ್ಕಿಂತ ಬೇರಾವ ಲಾಭಬೇಕು ?
ಶ್ರೀ : ಹೂಂ, ಸರಸ್ವತಿ, ನೀನೀಸ್ಥಿತಿಯಲ್ಲಿದ್ದರೂ ಇನ್ನೂ ನಿನ್ನ ಆ ಹುಚ್ಚು ಬಿಡಲಿಲ್ಲವೆ ? ನಾವು ಎಷ್ಟೋ ಸಲ “ಅತಿ ಸರ್ವತ್ರ ವರ್ಜಯೇತ್ ” ಎಂದು ಎಚ್ಚರಿಸಿದೆವು. ನೋಡು ನಮ್ಮ ಮಾತು ಕೇಳದಿದ್ದರಿಂದ ದುಃಖಕ್ಕೆ ಪಾತ್ರಳಾಗಬೇಕಾಯಿತು.
ಛಾಯೆ : ಪತಿಯನ್ನು ಪ್ರೀತಿಸುವುದು ತಪ್ಪೇ?
ಶ್ರೀ : ಅಶಾಶ್ವತ ವಸ್ತುವಿನಲ್ಲಿ ಮಾಡುವ ಪ್ರೇಮ ದುಃಖರೂಪವಾಗಿ ಕಾಡಿಸುವುದೆನ್ನಲು ನೀನೇ ಸಾಕ್ಷಿ. ನೀನು ಇದೇ ಪ್ರೇಮವನ್ನು ಶಾಶ್ವತನೂ, ಪೂರ್ಣನೂ, ಉದ್ಧಾರಕನೂ ಆದ ಪರಮಾತ್ಮನಲ್ಲಿ ಮಾಡಿದ್ದರೆ, ಈ ಹೊತ್ತಿಗೆ ಸಾಧನಮಾರ್ಗದಲ್ಲಿ ನೀನು ಬಹಳ ಮುಂದುವರೆಯಬಹುದಾಗಿತ್ತು ! ನಿನ್ನ ಮುಂದಿನ ಗತಿಯೇನು ?
ಛಾಯೆ : ಅದನ್ನು ನೀವೇ ನಿರ್ಧರಿಸಬೇಕು. ಓರ್ವ ಧರ್ಮಪತ್ನಿಗೆ ವಿಹಿತವಾದಂತೆಯೇ ನಾನು ವರ್ತಿಸಿದ್ದೇನೆ. ಮೃತಳಾದರೆ ದುಃಖದಿಂದ ಪಾರಾಗುವೆನೆಂದು ಭಾವಿಸಿದ್ದು ತಪ್ಪೆಂದು ಈಗ ತಿಳಿಯುತ್ತಿದೆ, ಇತ್ತ ನಿಮ್ಮಿಂದಲೂ ದೂರಾದೆ, ಅತ್ತ ಮಮತೆಯ ಮಗನಿಂದಲೂ ದೂರಾದೆ! ದಾರುಣವಾದ ಈ ಪ್ರೇತಶರೀರದಿಂದ ಅಂಡಲೆಯುತ್ತಿದ್ದೇನೆ. ನಮ್ಮ, ಅಲ್ಲ ಅಲ್ಲ. ನನ್ನ ವಂಶದ ಗತಿಯೇನೆಂಬ ಚಿಂತೆ ಬಾಧಿಸುತ್ತಿದೆ. ನೀವೇ ಇವೆರಡು ಚಿಂತೆಯಿಂದ ನನ್ನನ್ನು ಉದ್ಧರಿಸಿ ಕಾಪಾಡಬೇಕು.
ಶ್ರೀ : ಸರಸ್ವತಿ ! ಲಕ್ಷ್ಮೀನಾರಾಯಣನ ಚಿಂತೆ ನಿನಗೆ ಬೇಡ. ಅವನು ವಿದ್ಯಾವಂತನಾಗಿ, ಸದ್ಧಹಸ್ತನಾಗಿ, ಗ್ರಂಥಕಾರನಾಗಿ, ವಂಶದೀಪಕನಾಗಿ ಬೆಳೆದು ಕೀರ್ತಿ ಗಳಿಸುತ್ತಾನೆ. ಅವನ ಯೋಗಕ್ಷೇಮ ಶ್ರೀಹರಿ-ವಾಯುಗಳಿಗೆ ಸೇರಿದೆ. ಅವನ ವಂಶವು ಹೆಮ್ಮರವಾಗಿ ಬೆಳೆದು ಚಂದ್ರ ಸೂರ್ಯರಿರುವವರೆಗೆ ವಿಸ್ತಾರವಾಗಿ ಹಬ್ಬಿ ವಿಖ್ಯಾತವಾಗುವುದು. ಇದಕ್ಕೆ ಶ್ರೀಮೂಲರಾಮನೇ ಸಾಕ್ಷಿ! ನಿನ್ನ ಕುಮಾರನ ವಂಶಕ್ಕೆ ನಮ್ಮ ಅಭಯವಿದೆ! ಯೋಚಿಸಬೇಡ.
ಛಾಯೆ : ಆಹಾ, ಈಗಲೀಗ ನಾನು ಕೃತಾರ್ಥಳಾದೆ! ಇನ್ನು ನನ್ನ ಗತಿ ?
ಶ್ರೀ : ಅದಕ್ಕೂ ಶ್ರೀಹರಿ-ವಾಯುಗಳು ಸಮರ್ಥರಿದ್ದಾರೆ. ನಿನಗೂ ಸದ್ಧತಿಯಾಗುವುದು. ನಮ್ಮ ಪೂರ್ವಾಶ್ರಮ ಪುತ್ರ ಲಕ್ಷ್ಮೀನಾರಾಯಣನು ಮತ್ತು ಅವನ ವಂಶಪರಂಪರೆಯವರು ನಿನ್ನ ಪ್ರೀತ್ಯರ್ಥವಾಗಿ ಶುಭಶೋಭನಾದಿ ಕಾಲಗಳಲ್ಲಿ ಸುಮಂಗಲಿಯರಿಗೆ ಹೂವೀಳ್ಯವನ್ನು ಆಚರಿಸುವಂತೆ ಆಜ್ಞಾಪಿಸುತ್ತೇವೆ. ನಿನಗೆ ಸಂತೋಷವೇ ?
ಛಾಯೆ : ಆನಂದ, ಮಹದಾನಂದವಾಯಿತು ಮಹಾಸ್ವಾಮಿ. ಆದರೆ..... ಆದರೆ.... ಆತ್ಮಹತ್ಯೆ ಮಾಡಿಕೊಂಡು ನಿಮ್ಮ ಶುಭಕೀರ್ತಿಗೆ ಕಲಂಕ ತಂದೆನೇನೋ ಎಂಬ ನೋವು ನನ್ನನ್ನು ಬಾಧಿಸುತ್ತಿದೆ. ಸ್ವಾಮಿ, ನನ್ನ ಅಪರಾಧವನ್ನು ಕ್ಷಮಿಸಿ ಕಾಪಾಡಿ.
ಶ್ರೀ : (ಹುಸಿನಗೆಯಿಂದ) ಸರಸ್ವತಿ, ನಿನ್ನಂತೆಯೇ ಈ ಪ್ರಪಂಚದಲ್ಲಿ ಹುಚ್ಚರಿಗೇನು ಕೊರತೆಯಿಲ್ಲ! ನಿನ್ನ ಪತಿಪ್ರೇಮದ ಹುಚ್ಚನ್ನು ಕಂಡು ಈ ಲೋಕದ ಜನರು ನಿನ್ನನ್ನು ಮಹಾಸಾಧಿ, ಪತಿಯನ್ನಗಲಿ ಜೀವಿಸಲಾಗದೆ ಪ್ರಾಣತ್ಯಾಗಮಾಡಿದ ಪ್ರೇಮಮಯಿ ಎಂದೆಲ್ಲ ಹೊಗಳುತ್ತಿದ್ದಾರೆ! ನೀನು ಆತ್ಮಹತ್ಯೆಮಾಡಿಕೊಂಡಿದ್ದರಿಂದ ನಮಗಾವ ಅಪಕೀರ್ತಿಯೂ ಇಲ್ಲ! ಅಷ್ಟೇ ಅಲ್ಲ, ಹೊಸದಾಗಿ ಕೀರ್ತಿಯೂ ಬರಲಿದೆ! ನಿನ್ನ ಈ ಪ್ರೇತತ್ವವನ್ನು ಶ್ರೀಹರಿ-ವಾಯು-ಗುರುಗಳು ನಿವಾರಿಸಿ ಸದ್ಧತಿಯಿತ್ತು ಸ್ವರೂಪಾನಂದೋನ್ನಾಹವನ್ನು ಕರುಣಿಸುವರು. ಅದು ನಮ್ಮ ಮಹಿಮೆಯಿಂದಾಯಿತೆಂದು ಈ ಜಗದ ಮುಗ್ಧಜನ ಹಾಡಿಹೊಗಳುವರು! ನೀನಿನ್ನು ಹೊರಡು, ನಿನಗೆ ಶ್ರೀಹರಿ-ವಾಯುಗಳ ಪ್ರಸಾದವಾಗಲಿ -
ಹೀಗೆ ಹೇಳಿ ಶ್ರೀರಾಘವೇಂದ್ರಗುರುಸಾರ್ವಭೌಮರು ಆತ್ಮೀಕ ಜಲವನ್ನು ಅಭಿಮಂತ್ರಿಸಿ ಆ ಛಾಯೆಯ ಮೇಲೆ ಪ್ರೋಕ್ಷಿಸಿದರು. ಅನಂತರ ನಿಮೀಲಿತಾರ್ಧನಯನರಾಗಿ ಧ್ಯಾನಮಾಡಿ ಕಮಂಡಲೋದಕವನ್ನು ಪ್ರೋಕ್ಷಿಸಿ 'ಸದ್ಗತಿ ಪ್ರಾಪ್ತಿರಸ್ತು ಎಂದರು. ಏನಾಶ್ಚರ್ಯ! ಮಿಂಚೊಂದು ಮಿನುಗಿದಂತಾಗಿ, ಆ ದಿವ್ಯಪ್ರಕಾಶದಲ್ಲಿ ಪೀತಾಂಬರಾಭರಣಗಳಿಂದಲಂಕೃತಳಾದ. ಅಪರಮಿತ ಸೌಂದರ್ಯ-ಕಾಂತಿಗಳಿಂದ ಕಂಗೊಳಿಸುವ ಸರಸ್ವತಮ್ಮನವರು ದೃಷ್ಟಿಗೋಚರರಾದರು!! ಈ ಅದ್ಭುತ ಪವಾಡವನ್ನು ಕಣ್ಣಾರೆ ಕಂಡ ಸುಜನರು ಆಶ್ಚರ್ಯ, ಆನಂದ, ಭಕ್ತಿ, ಶ್ರದ್ಧೆಗಳಿಂದ, “ಆಹಾ, ಮಹಾನುಭಾವರು, ಮಂತ್ರಸಿದ್ಧ ತಪಸ್ವಿಗಳು ಎಂದು ಉದ್ಧರಿಸಿ ಶ್ರೀಯವರ ಜಯಜಯಕಾರಮಾಡಿ ಗುರುಗಳಿಗೆ ಸಾಷ್ಟಾಂವೆರಗಿದರು. ಪೂರ್ವಾಶ್ರಮ ಪತ್ನಿಗೆ ಸದ್ಗತಿ ಕರುಣಿಸಿದ 390 ಶ್ರೀಗಳವರು ನಿಮೀಲಿತಾರ್ಧನಯನರಾಗಿ ಬಲಕರವನ್ನು ಹೃದಯದಲ್ಲಿಟ್ಟು, ಹೊರಗಿನ ಪರಿವೆಯಿಲ್ಲದೆ ಧ್ಯಾನರತರಾದರು.
ಸರಸ್ವತಮ್ಮನವರು ಛಾಯಾರೂಪದಿಂದ ಗುರುಗಳ ಮುಂದೆ ಗೋಚರಿಸಿದ್ದು ಗುರುಗಳೊಡನೆ ಜರುಗಿದ ಸಂಭಾಷಣೆ, ಶ್ರೀಯವರು ಸರಸ್ವತಮ್ಮನ ಪ್ರೇತತ್ವವನ್ನು ಕಳೆದು ಸದ್ಧತಿನೀಡಿದ ವಿಚಾರವು ಹಾಹಾ ಅನ್ನುವುದರೊಳಗೆ ಎಲ್ಲೆಡೆ ವ್ಯಾಪಿಸಿತು! ಈ ಮಹಿಮೆಯನ್ನು ಕೇಳಿ ಪುರಜನರು ಆಶ್ವರಾನಂದ ಭರಿತರಾಗಿ ತಪಸ್ವಿಗಳಾದ ಶ್ರೀರಾಘವೇಂದ್ರಗುರುಗಳ ಗುಣಗಾನ ಮಾಡಿದರು.