ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
೬೫. ವೇದಾಂತಸಾಮ್ರಾಜ್ಯಾಭಿಷೇಕ
ತಂಜಾಪುರದರಮನೆಯು ತಳಿರುತೋರಣ, ಬಾಳೇಕಂಬ, ವರ್ಣರಂಜಿತ ಧ್ವಜಪತಾಕೆ-ಮರತೋರಣ ಪುಷ್ಪಗಳಿಂದ ಶೋಭಾಯಮಾನವಾಗಿದೆ. ರಾಜಪ್ರಾಸಾದ ಶಿಖರದಲ್ಲಿ ಚಟಪಟನೆ ಹಾರಾಡುತ್ತಿದೆ ಪ್ರಣವಧ್ವಜ! ಅದನ್ನು ನೋಡಿದರೆ “ಬಾಲ್ಯದಲ್ಲಿಯೇ-ನಾನು (ಓಂಕಾರವು) ಜಗದೊಡೆಯನಾದ ಪರಬ್ರಹ್ಮನು ಅನಂತಕಲ್ಯಾಣ ಗುಣಪೂರ್ಣನೆಂದು ಅನಂತವೇದಗಳು ಸಾರುವ ಮಹಾಮಹಿಮನೆಂದು ಸೂಚಿಸುವ ಸಂಕೇತ' ವೆಂದು ಹೇಳಿ, ವಿದ್ವನ್ಮಂಡಲಿಯನ್ನು ಅಚ್ಚರಿಗೊಳಿಸಿದ ಮಹನೀಯನು ಇಂದು ಜಪತಪರತನಾಗಿ ದುರ್ಭೇದ್ಯವಾದ ವೇದತ್ರಯಗಳಿಗೆ ಭಾಷ್ಯಗಳನ್ನು ರಚಿಸಿ ನನ್ನ ಹಾದ್ರ್ರವನ್ನೇ ಜಗತ್ತಿಗೆ ಬಿಚ್ಚಿತೋರಿ, ಸಕಲಜೀವರ ಮುಖ್ಯ ಗುರಿಯಾದ ಶಾಶ್ವತಾನಂದಪ್ರದನಾದ ಪರಮಾತ್ಮನ ಅತ್ಯರ್ಥಪ್ರಸಾದವನ್ನು ಪಡೆಯಲು ಸಜ್ಜನರಿಗೆ ಮಾರ್ಗದರ್ಶನಮಾಡಿ, ಲೋಕಕಲ್ಯಾಣವೆಸಗಲು ಪರಮಹಂಸ ಗುರುಪೀಠದಲ್ಲಿ ಪಟ್ಟಾಭಿಷಕ್ತನಾಗಿ ಕಂಗೊಳಿಸಲಿರುವನು! ಈ ಮಹಾವೈಭವ ಸಮಾರಂಭವನ್ನು ನೋಡಿ ಜೀವನ ಸಾಫಲ್ಯತೆಯನ್ನು ಪಡೆಯಲು-ಹೇ ಸುಜನರೇ ! ನೀವೆಲ್ಲರೂ ಬನ್ನಿರಿ” ಎಂದು ಕೈಬೀಸಿ ಕರೆಯುತ್ತಿರುವಂತೆ ಭಾಸವಾಗುತ್ತಿದೆ.
ಅರಮನೆಯ ಸಭಾಂಗಣದ ಸೊಬಗಂತೂ ಅವರ್ಣನೀಯ. ವಿಸ್ತಾರವಾದ ಸಭಾಂಗಣವು ಕಣ್ಮನಗಳನ್ನು ತಣಿಸುವತೆರದಿ ಚಿತ್ರವಿಚಿತ್ರವಾಗಿ ಅಲಂಕೃತವಾಗಿದೆ. ಭುವನೇಶ್ವರಿಗಳಿಂದ ತೂಗುಬಿಟ್ಟಿರುವ ವಿವಿಧವರ್ಣರಂಜಿತ ರನ್ನ ಗುಂಡು, ಗುಳೋಪು, ಕಂದೀಲು, ರತ್ನಗನ್ನಡಿ, ವಿವಿಧಾಕಾರದ ರನ್ನಪುಷ್ಪಗುಚ್ಛಗಳು, ಉದಯಿಸುತ್ತಿರುವ ಗ್ರಹರಾಶಿ-ನಕ್ಷತ್ರಮಂಡಲದಿಂದೊಳಗೂಡಿ ಸೂರ-ಚಂದ್ರರ ಕಾಂತಿಯಂತೊಪ್ಪಿ ಕಂಗೊಳಿಸುತ್ತಿವೆ. ಮುಕ್ತಮಾಲೆ ಪುಷ್ಪಹಾರಗಳಿಂದ ಶೋಭಿಸುವ ಆ ಭುವನೇಶ್ವರಿಯ ಬೆಡಗನ್ನು ನೋಡಿ ಆನಂದಿಸಬೇಕೇ ವಿನಃ ವರ್ಣಿಸಲು ಸಾಧ್ಯವಿಲ್ಲ.
ಮನೋಹರ ಕೆತ್ತನೆಗಳಿಂದ ಕಲಾತ್ಮಕವಾಗಿ ಚಿತ್ರಿತವಾದ ನೀಲವರ್ಣದ ಆಸ್ಥಾನದ ಅಷ್ಟಸ್ಥಂಭಗಳು ಸೊಂಡಲುಗಳನ್ನು ಮೇಲೆತ್ತಿ ನಿಂತ ಅಷ್ಟದಿಗ್ಗಜಗಳಂತೆ ಕಾಣಿಸುತ್ತಿವೆ! ವಿಸ್ತಾರವೂ ಉನ್ನತವೂ ಆದ ರಾಜವೇದಿಕೆಯು ಉತ್ತುಂಗರಂಗತರಂಜಿತ ಕ್ಷೀರಸಮುದ್ರದಂತೆಯೂ, ಅದರಮೇಲೆ ಸುವರ್ಣಹಂಸ, ಪಂಚಕಳಶ, ತೂಗುಬಿಟ್ಟಿರುವ ಸಹಸ್ರಾಧಿಕ ಮಣಿಗಳಿಂದ ಬೆಡಗುಗೊಂಡು ಅದಭ್ರಶುಭ್ರ ಶ್ವೇತಛತ್ರದಿಂದೊಪ್ಪಿ ರಾಜಿಸುವ ಸುವರ್ಣಮಯ ಸುಂದರ ದಿಗ್ವಿಜಯ ವಿದ್ಯಾಸಿಂಹಾಸನವು, ಸಹಸ್ರಫಣಿಗಳಿಂದ ಕಂಗೊಳಿಪ ಜಗದಾಧಾರಿ ಆದಿಶೇಷನನ್ನು ನೆನಪಿಗೆ ತರುವಂತಿದೆ!
ದಿನಮಣಿಯ ತರುಣಾರುಣ ಕಿರಣಸರಣಿಯನ್ನನುಕರಿಸುವ ರತ್ನತೋರಣಗಳು ಪ್ರೇಕ್ಷಕರನ್ನು ಪರವಶಗೊಳಿಸುತ್ತಿವೆ. ಸಾಮ್ರಾಜ್ಯಾಭಿಷೇಕವನ್ನು ನಿರೀಕ್ಷಿಸುತ್ತಿರುವಂತಿರುವ 'ದಿಗ್ವಿಜಯ ವಿದ್ಯಾಸಿಂಹಾಸನ' ದ ಪಾರ್ಶ್ವದಲ್ಲಿ ಮತ್ತೊಂದು ಭದ್ರಾಸನದಲ್ಲಿ ಮಹಾಮಹಿಮರಾದ ಶ್ರೀಸುಧೀಂದ್ರಯತಿಪುಂಗವರು ಮಂದಹಾಸವದನಾರವಿಂದದಿಂದ ಆನಂದದಿಂದೊಪ್ಪತ್ತಿದ್ದಾರೆ. ವೇದಿಕೆಯ ಎಡಭಾಗದಲ್ಲಿ ಸ್ವರ್ಣರಜತ ಭದ್ರಾಸನಗಳಲ್ಲಿರಘುನಾಥಭೂಪಾಲ, ಮಧುರೆಯ ಯುವರಾಜ ತಿರುಮಲನಾಯಕ ಕರ್ನಾಟಕ ಸಾಮ್ರಾಜ್ಯ, ಮಹೀಶೂರಪುರವರಾಧಿಶರ ಪ್ರತಿನಿಧಿಗಳೂ, ಅವರ ಪಕ್ಕದಲ್ಲಿ ತಂಜಾಪುರದ ಯುವರಾಜ ವಿಜಯರಾಘವನಾಯಕ, ಸಚಿವ, ಸಾಮಂತ, ಸೇನಾನಿಗಳು, ದರ್ಬಾರಿನ ಪ್ರಮುಖ ರಾಜಪುರುಷರು, ರಾಜಧಾನಿಯ ಗಣ್ಯವ್ಯಕ್ತಿಗಳು ಕಮನೀಯ ಕೂರ್ಚಾಸನಗಳಲ್ಲಿ ವಿರಾಜಿಸುತ್ತಿದ್ದಾರೆ.
ವೇದಿಕೆಯ ಬಲಭಾಗದಲ್ಲಿ ಸಾಲಾಗಿಶೋಭಿಸುವ ಕೂರ್ಚಾಸನಗಳಲ್ಲಿ ದರ್ಬಾರಿನ ಪ್ರಮುಖ ಪಂಡಿತರು, ಶ್ರೀಮಠದ ಪಂಡಿತರು, ಕವಿಗಳು, ಧರ್ಮಾಭಿಮಾನಿಗಳು ಮಂಡಿಸಿದ್ದಾರೆ. ವೇದಿಕೆಯ ಮುಂಭಾಗದಲ್ಲಿ ನಾಲ್ಕು ಸಣ್ಣ ವೇದಿಕೆಗಳು ರಾಜಿಸುತ್ತಿದ್ದು ಅವುಗಳ ಮೇಲೆ, ವೇದವಿದ್ಯಾವಿಶಾರದರು, ಹರಿದಾಸರು, ಗಾಯಕರು, ವೀಣಾವೇಣುಸ್ತರಮಂಡಲಾದಿ ವಾದಕರು ವಿರಾಜಿಸುತ್ತಿದ್ದಾರೆ. ಆ ವೇದಿಕೆಗಳಿಗೆ ಹೊಂದಿಕೊಂಡು ರಾಜದ್ವಾರದವರೆಗೆ ಮಹಾವೇದಿಕೆಗೆ ಹೋಗುವ ಮಾರ್ಗವನ್ನು ಕಿಂಕಾಪಿನ ರತ್ನಗಂಬಗಳಿಂದ ಅಲಂಕರಿಸಲಾಗಿದೆ. ಅದರ ಎಡಪಾರ್ಶ್ವದಲ್ಲಿ ಬೇರೆ ಬೇರೆ ದೇಶಗಳಿಂದ ಬಂದಿದ್ದ ಮತ್ತು ತಂಜಾಪುರದ ಲೌಕಿಕ-ವೈದಿಕಭೂಸುರರೂ, ಬಲಭಾಗದಲ್ಲಿ ರಾಜಧಾನಿಯ ಮನೆತನಸ್ಥ ಲಲನೆಯರು, ಸಂಗೀತ ಸಾಹಿತ್ಯ ಕಲಾವಿದೆಯರೂ ಮಂಡಿಸಿದ್ದಾರೆ. ಮಹಾವೇದಿಕೆಯ ಹಿಂಭಾಗದಲ್ಲಿ ತೆರೆಯಮರೆಯಲ್ಲಿ ರಾಣಿವಾಸದವರು, ಅಂತಃಪುರದ ಮುಖ್ಯಪರಿವಾರವರ್ಗದವರು ಕುಳಿತಿದ್ದಾರೆ. ರಾಜದ್ವಾರದಿಂದಾರಂಭಿಸಿ ಮಹಾವೇದಿಕೆಯವರೆಗೆ ಎರಡೂ ಭಾಗದ ಆಸನಗಳ ಹಿಂಭಾಗದಲ್ಲಿ ಶಸ್ತ್ರಧಾರಿಗಳಾಗಿ ಸಮವಸ್ತ್ರ ಧರಿಸಿದ ಸೈನಿಕರು ಶಿಸ್ತಾಗಿ ನಿಂತಿದ್ದಾರೆ. ವೇದಿಕೆಯ ಮುಂದೆ ದರ್ಬಾರಿನ ಮತ್ತು ಮಹಾಸಂಸ್ಥಾನದ ಸುವರ್ಣ-ರಜತದಂಡಧಾರಿ ದ್ವಾರಪಾಲಕರು ನಿಂತಿದ್ದಾರೆ. ಹೀಗೆ ಮಹಾವೈಭವದಿಂದೊಪ್ಪವ ಆ ರಾಜಸಭೆಯು ಇಂದ್ರದೇವರ “ಸುಧರ್ಮ ಸಭೆಯಂತೆ ಕಂಗೊಳಿಸಿ ಸರ್ವರನ್ನೂ ಮಹದಾನಂದ ತುಂದಿಲರನ್ನಾಗಿ ಮಾಡುತ್ತಿದೆ.
ಪೂಜ್ಯ ಶ್ರೀಸುಧೀಂದ್ರಗುರುವರರು ನೂತನ ಯತಿಗಳ ಆಗಮನವನ್ನು ಪ್ರತೀಕ್ಷಿಸುತ್ತಾ ಆತ್ಮೀಯರೊಡನೆ ಮಾತನಾಡುತ್ತಿದ್ದಾರೆ. ರಘುನಾಥಭೂಮೀಂದ್ರನ ಅಣತಿಯಂತೆ ಸಚಿವ-ಸೇನಾನಿ-ಮಹಾಪಂಡಿತರು, ರಾಜಪುರೋಹಿತರು ಪೂರ್ಣಕುಂಭದೊಡನೆ ನೂತನ ಯತಿಗಳನ್ನು ಸ್ವಾಗತಿಸಿ ಕರತರಲು ಉತ್ಸಾಹದಿಂದ ರಾಜದ್ವಾರದ ಬಳಿ ಕಾದು ನಿಂತಿದ್ದಾರೆ. ರಾಜಸಭೆಗೆ ಪ್ರವೇಶಾವಕಾಶ ದೊರಕದ ಸಹಸ್ರಾರು ಜನ ಸ್ತ್ರೀಪುರುಷರು ಅರಮನೆಯ ಮುಂಭಾಗದ ಇಕ್ಕೆಲಗಳಲ್ಲಿ ಸಾಲಾಗಿ ನಿಂತು ಯತಿಗಳ ದರ್ಶನಕ್ಕಾಗಿ ಕಾತುರರಾಗಿದ್ದಾರೆ. ಜನಸಮ್ಮರ್ದವನ್ನು ನಿಯಂತ್ರಿಸಲು ಅಶ್ವಾರೂಢ ಸೈನಿಕರು ಅತ್ತಿಂದಿತ್ತ ಚಲಿಸುತ್ತಿದ್ದಾರೆ. ನೂರಾರು ಜನ ಸಮವಸ್ತ್ರಧಾರಿ ಶಸ್ತ್ರಪಾಣಿ ಸೈನಿಕರು ರಸ್ತೆಯ ಎರಡು ಪಾರ್ಶ್ವಗಳಲ್ಲೂ ನಿಂತಿದ್ದಾರೆ. ಆ ವರ್ಣರಂಜಿತ ಮನೋಹರದೃಶ್ಯ ಆ ಸಂಭ್ರಮ-ಸಡಗರಗಳು ಅವರ್ಣನೀಯ!
ದೂರದಲ್ಲಿ ವಿಜಯಸೂಚಕ ಕಹಳೆ, ದುಂದುಭಿ, ಮಂಗಳವಾದ್ಯ, ವೇದಘೋಷಗಳ ಮಂಜುಳ ನಿನಾದ ಕೇಳಿಬಂದಿತು! ನಾಗರಿಕರು ಉತ್ಸಾಹದಿಂದ ಕರಮುಗಿದು ನಿಂತರು. ಮಹಾಸಂಸ್ಥಾನದ ಸಮಸ್ತ ಬಿರುದು-ಪಂಡಿತಮಂಡಲೀ ಮಂಡಿತರಾಗಿ, ಸುವರ್ಣಪಾಲಕಿಯಲ್ಲಿ ಕುಳಿತು ಶ್ರೀದತ್ತಾತ್ರೇಯರಂತೆ ಶೋಭಿಸುವ ನೂತನ ಯತಿಪುಂಗವರ ಸವಾರಿ ಚಿತೈಸಿತು. ಜನರು ಹರ್ಷಧ್ವನಿಗೈದರು. ಅರಮನೆಯ ನಗಾರಿ ಖಾನೆಯಿಂದ ನಗಾರಿ, ನವಪತ್ತು, ಮಂಗಳವಾದ್ಯಗಳು ಭೋರ್ಗರೆದವು. ಪಾಲಕಿಯು ರಾಜದ್ವಾರದ ಬಳಿಗೆ ಬಂದಿತು.
ಆಗ ವೇದಘೋಷ ಪೂರ್ಣಕುಂಭಗಳೊಡನೆ ಶ್ರೀಯಜ್ಞನಾರಾಯಣದೀಕ್ಷಿತರು ರಾಜಪುರೋಹಿತಾದಿಗಳು ನೂತನಗುರುಗಳಿಗೆ ಹಸ್ತಲಾಘವ ನೀಡಿದರು. ಮಂತ್ರಿ ಸೇನಾನಿಗಳು ಟೊಂಕಬಗ್ಗಿಸಿ ಪ್ರಣಾಮಗೈದು ಸ್ವಾಗತಿಸಿದರು. ಸಚಿವ ಸೇನಾನಿಗಳು ಸ್ವತಃ ಬಂಗಾರದಹಿಡಿಕೆಯುಳ್ಳ ಚಾಮರವನ್ನು ಬೀಸುತ್ತಿರಲು, ರಾಮಚಂದ್ರಾಚಾರ, ಲಕ್ಷ್ಮೀನರಸಿಂಹಾಚಾರರು ಚೌರಿಗಳನ್ನು ಹಿಡಿದು ಯತಿಗಳ ಹಿಂದೆ ಬರುತ್ತಿರಲು, ನಾಲ್ವರು ಸುವರ್ಣದಂಡಧಾರಿಗಳು ದಾರಿತೋರುತ್ತಾ ಮುನ್ನಡೆದಿರಲು, ರಾಜದ್ವಾರದಲ್ಲಿ ಸುಮಂಗಲೆಯರು ಕದಲಾರತಿ ಮಾಡುತ್ತಿರಲು, ದೃಷ್ಟಿಪರಿಹಾರಕ್ಕಾಗಿ ಅರಮನೆಯ ಸೇವಕರು ಇಡಿಗಾಯಿ- ಗಳನ್ನೊಡೆಯುತ್ತಿರಲು, ಮಂದಹಾಸವನ್ನು ಹೊರಸೂಸುತ್ತಾ, ನೂತನ ಯತಿವರರು ರಾಜದ್ವಾರವನ್ನು ದಾಟಿ ರಾಜಸಭೆಯನ್ನು ಪ್ರವೇಶಿಸಿದ ಶ್ರೀವಸಿಷ್ಠ ಮಹರ್ಷಿಗಳನ್ನು ನೆನಪಿಗೆ ತರುತ್ತಿತ್ತು!
ತರುಣಾರುಣತರಣಿಕರ ಸರಣಿಯನ್ನನುಕರಿಸುವ ಆ ತರುಣ ಯತಿಗಳ ಪಾವನ ಚರಣಸರಣಿಯು, ಧರಣೀಸುರಮಣಿಗಳ ಉದ್ಧಾರದ ದಿವ್ಯಸರಣಿಯನ್ನು ಸೂಚಿಸುತ್ತಾ ತನ್ನ ಕಾಂತಿಕಿರಣಗಳಿಂದ ಉರವಣಿಸಿ ರಾಜಸಭೆಯನ್ನು ಪ್ರಕಾಶಗೊಳಿಸಿತು!
ಪರಮಹಂಸಕುಲಶೇಖರರಾಗಿ ಮೆರೆಯಲಿರುವ ತರುಣಗುರುಗಳ ಆ ಭವ್ಯಾಕೃತಿಯು ದೈತಸಾಮ್ರಾಜ್ಯಾಧಿಪತಿಗಳಾದ ಶ್ರೀಮತ್ತುಧೀಂದ್ರತೀರ್ಥಗುರುಚರಣರ ನಲವತ್ತೈದು ವರ್ಷಗಳ ಅಖಂಡ ತಪಸ್ಸಿನ ಪುಣ್ಯಫಲವೇ ಸಾಕಾರತಾಳಿಧರೆಗುದಿಸಿ ಬಂದಂತೆ ಕಾಣಿಸುತ್ತಿತ್ತು!
ಧೀರ, ಗಂಭೀರ ನಡೆಯಿಂದ ಸಾಂಗವೇದಾದಿ ಸಚ್ಛಾಸ್ತ್ರಪಾರಂಗತರಾದ ಆ ಶುಭಾಂಗಯತಿಪುಂಗವರು ತಮ್ಮ ಅಪಾಂಗ ವೀಕ್ಷಣದಿಂದ ಸಭಾಂಗಣದಲ್ಲಿ ಮಂಗಳದ ಮುಂಬೆಳಕನ್ನು ಚೆಲ್ಲುತ್ತಾ ಸಂಗಡಿಗ ಭಕ್ತರಿಂದಂಗವಣಿಸಿ, ಮನಮಂದಿರದಲ್ಲಿ ಪಾಲ್ಗಡಲೊಡಲಿನೊಳು ಸಹಸ್ರಹೆಡಗಳಿಂದ ರಂಜಿಪನೊಡಲಿನಲಿ ಪವಡಿಸಿಹ ಪೊಡವಿಗೊಡೆಯನ ಅಡಿದಾವರೆಗಳ ನಡಿಗಡಿಗೆ ಧೇನುಸುತ ಕಾಷಾಯಾಂಬರ ದಂಡಕಮಂಡಲು ಊರ್ಧ್ವಪುಂಡ್ರ ತುಳಸೀಮಣಿಮಾಲೆಗಳಿಂದಲಂಕೃತರಾಗಿ ನಡೆತಂದ ಪರಮಹಂಸರಿಗೊಡೆಯರ ಭವ್ಯಾಕಾರ, ದಿವ್ಯವ್ಯಕ್ತಿತ್ವ, ನವ್ಯಮೋಹಕ ನಿಲುವು, ಗಾಂಭೀರ್ಯ, ಅಪೂರ್ವ ತೇಜಸ್ಸು, ಓಜಸ್ಸು ವರ್ಚಸ್ಸುಗಳು ಸುಜನವೃಂದದ ನೇತ್ರಗಳಿಗೆ ಪಾತ್ರವಾಗಿ ಕರುಣಾಪಾತ್ರ, ಛಾತ್ರಸಂಘದ ಕಣ್ಮನಗಳನ್ನು ಸಾರ್ಥಕಗೊಳಿಸಿತು! ಪಾವನ ಮೂರ್ತಿಗಳ ಕಮನೀಯ ವದನವು ಕೆಂಗಿರಣನ ಪ್ರಖರ ತೇಜಸ್ಸು, ಹೊಂಗಿರಣನ ಓಜಸ್ಸು, ತಂಗಿರಣನ ಶೀತಲಾಹ್ಲಾದಕತ್ವ ವರ್ಚಸ್ಸುಗಳಿಂದ ರಾಜಿಸುತ್ತಾ ಸಭಾಸದರನ್ನು ರೋಮಪುಲಕಗಳಿಂದ ಹರ್ಷವಾರಧಿಯೊಳೋಲಾಡಿಸುತ್ತಿತ್ತು!
ಇಂತು ಸಕಲ ಸುಜನರ ಕಣ್ಮನಗಳನ್ನು ತಣಿಸುತ್ತಾ ನೂತನ ಯತಿಗಳು ಮಹಾ ವೇದಿಕೆಯನ್ನೇರಿ ಸುಧೀಂದ್ರತೀರ್ಥ ಶ್ರೀಪಾದಂಗಳವರ ಚರಣಕಮಲಗಳಿಗೆ ಸಾಷ್ಟಾಂಗವೆರಗಿ ನಿಂತರು. ರಾಮಚಂದ್ರಾಚಾರ-ಮಠದ ಪುರೋಹಿತಾದಿಗಳಿಗೂ ವೇದಿಕೆಯನ್ನೇರಿದಮೇಲೆ ಸಂಪ್ರದಾಯಾನುಸಾರವಾಗಿ ಏಕಾಂತದಲ್ಲಿ ಗುರೂಪದೇಶಾದಿಗಳು ಜರುಗಬೇಕಾದರಿ೦ದ ಸ್ವರ್ಣದಂಡಧಾರಿಗಳಾದ ದ್ವಾರಪಾಲಕರು ವೇದಿಕೆಯ ಸುತ್ತಲೂ ಕಿಂಕಾಪಿನ ತೆರೆಯನ್ನೆಳೆದರು.
ಆಗ ಶ್ರೀಸುಧೀಂದ್ರಗುರುಗಳ ಅಣತಿಯಂತೆ ಮಠದ ಪುರೋಹಿತರು ಗುರುಗಳಿಗೆ ಪಾದಪೂಜೆ ಮಾಡಿಸಿದರು. ನೂತನಯತಿಗಳು ಸಂಪ್ರದಾಯಪ್ರಕಾರವಾಗಿ ಶ್ರೀಮದಾನಂದತೀರ್ಥಗುರುಪಾದಪ್ರಕ್ಷಾಳನ ಮಾಡಿ ಅದನ್ನು ಗುರುಗಳು ಶಿರಸಾ ಧರಿಸಿದ ಮೇಲೆ ತಾವೂ ಧರಿಸಿ ಶ್ರೀಸುಧೀಂದ್ರ ಗುರುಗಳ ಪಾದಗಳನ್ನು ರಜತತಾಂಬಾಣದಲ್ಲಿ ಮಂಡಿಸಿ, ಸುವರ್ಣಕುಂಭದಲ್ಲಿದ್ದ ಸಮಶೀತೋಷ್ಣ ಜಲದಿಂದ ತೊಳೆದು ಗುರು ಪಾದೋದಕವನ್ನು ಪ್ರೋಕ್ಷಿಸಿಕೊಂಡು, ಕರವಸ್ತ್ರದಿಂದ ಪಾದಗಳನ್ನೊರೆಸಿದರು. ತರವಾಯ “ಅಭಿವಸ್ಥಾ ಸುವಸನಾನೃರ್ಷಾಭಿಧೇನೋ ಸುಭಗಾಃ ಪ್ರಯಮಾನಾಃ | ಅಭಿಚಂದ್ರಾವರ್ತಮಾನೋ ಹಿರಣ್ಯಾಛಾಗ್ ರಥಿನೋ ದೇವಸೋಮ” ಎಂಬ ಮಂತ್ರದಿಂದ ಗುರುಸುಧೀಂದ್ರರಿಗೆ ಶಾಲು ಹೊದಿಸಿ, ಫಲಪುಷ್ಪಮಾಲಿಕೆಗಳಿಂದ ಕೂಡಿದ ತಟ್ಟೆಯನ್ನು “ಯಾಃ ಫಲನೀರ್ಯಾಃ ಅಫಲಾ ಅಪುಷ್ಪಾಯಾಶ್ಚ ಪುಷ್ಪಣೀ! ಬೃಹಸ್ಪತಿಃ ಪ್ರಸೂತಾಸ್ತಾನೋ ಮುಂಚತ್ವಗ್ ಹಸಃ ' ಎಂಬ ಮಂತ್ರವನ್ನು ಹೇಳಿ ಗುರುಗಳ ಮುಂದೆ ಹಿಡಿದರು. ಗುರುಗಳು ಅದನ್ನು ಸ್ಪರ್ಶಿಸಿದ ಮೇಲೆ ಪುಷ್ಪಹಾರವನ್ನು ಗುರುಪಾದರ ಕೊರಳಿಗೆ ಹಾಕಿ, ಸುವರ್ಣತಟ್ಟೆಯಲ್ಲಿ ವರ್ತಿಗಳನ್ನಿಟ್ಟು ಬೆಳಗಿಸಿ ಗುರುಗಳ ಪಾದಗಳಿಗೆ ಮಂಗಳಾರತಿ ಮಾಡಿ ನಮಸ್ಕರಿಸಿದರು.
ಪಂಡಿತರು “ಸುದರ್ಶನ ಮಹಾಜ್ವಾಲ ಕೋಟಿಸೂರ್ಯ ಸಮಪ್ರಭ! ಅಜ್ಞಾನಾಂಧತಮೇ ನಿತ್ಯಂ ವಿಷರ್ಮಾರ್ಗ೦ ಪ್ರದರ್ಶಯ || ಪಾಂಚಜನ್ಯಜನಿದ್ದಾನ ಧ್ವಸಪಾತಕ ಸಂಚಯ |ತ್ರಾಹಿ ಮಾಂ ಪಾಪಿನ ಘೋರಸಂಸಾರಾರ್ಣವ ಪಾತಿನಮ್ ।। ಎಂಬ ವೇದಮಂತ್ರವನ್ನು ಪಠಿಸುತ್ತಿರಲು ಶ್ರೀಸುಧೀಂದ್ರರು ಮಂತ್ರಪಾತ ತಪ್ತಚಕ್ರ-ಶಂಖಗಳಿಂದ ಪ್ರಿಯಶಿಷ್ಯರ ಎರಡುಭುಜಗಳಿಗೆ ಮುದ್ರಾಂಕನಮಾಡಿದರು.
ಆಗ ಪರಮಾನಂದಭರಿತರಾಗಿ ಗುರುಗಳ ಸನ್ನಿಧಿಯಲ್ಲಿ ವಿನಯ-ಶ್ರದ್ಧಾನ್ವಿತರಾಗಿ ಸಮಿತ್ಪಾಣಿಗಳಾಗಿ ಬಲಗಾಲು ಮಂಡೆಯೂರಿ ಕುಳಿತು “ಪ್ರಾಯಸ್ಥ ಛೋ ಜಗನ್ನಾಥ ಗುರೋ ಸಂಸಾರವನಾ | ದಗ್ಧಂ ಮಾಂ ಕಾಲದಷ್ಟಂ ಚ ತ್ವಾಮಹಂ ಶರಣಂ ಗತಃ || ಯೋ ಬ್ರಹ್ಮಾಣಂ ವಿದಧಾತಿ ಪೂರ್ವಂ ಯೋ ವೈ ವೇದಾಂಶ್ಚ ಪ್ರಹಿಣೋತಿ ತಸ್ಕೃ | ತಂ ಹ ದೇವಮಾತ್ಮ ಬುದಿಪ್ರಕಾಶಂ ಮುಮುಕ್ಷುರ್ವೈ ಶರಣಮಹಂ ಪ್ರಪದ್ಯೆ ।।' -ಸಂಸಾರವೆಂಬ ಬೆಂಕಿಯಿಂದ ದಗನಾಗಿರುವ, ಕಾಲ ಮೃತ್ಯುವಿನಿಂದ ಕಚ್ಚಲ್ಪಟ್ಟವನಾದ ನಾನು ನಿಮಗೆ ಶರಣು ಬಂದಿದ್ದೇನೆ, ನನ್ನನ್ನು ರಕ್ಷಿಸಿರಿ. ಯಾರು ಸೃಷ್ಟಿಗೆ ಮೊದಲು ಚತುರ್ಮುಖ ಬ್ರಹ್ಮದೇವರನ್ನು ಸೃಜಿಸಿ, ಅವರಿಗೆ ವೇದಗಳನ್ನು ಉಪದೇಶಿಸಿದರೋ, ಅಂತಹ ಜೀವಾತ್ಮ ಪರಮಾತ್ಮ ವಿಷಯಕಜ್ಞಾನಪ್ರಕಾಶಕನಾದ ಕ್ರೀಡಾದಿಗುಣವಿಶಿಷ್ಟನಾದ ಪರಮಾತ್ಮನಿಗೆ ಮೋಕ್ಷಾಪೇಕ್ಷಿಯಾದ ನಾನು ಶರಣಾಗತನಾಗಿದ್ದೇನೆ ಎಂದು ಪ್ರಾರ್ಥಿಸಿ, ಗುರುಗಳ ಪಾದಹಿಡಿದು “ಅಧೀಹಿ ಭಗವೋ ಬ್ರಹ್ಮ”-ಭೋಃ ಉತ್ಪತ್ತಿ-ವಿನಾಶ-ಪಂಚಭೂತಗಳ ಆಗಮನ-ನಿರ್ಗಮನಗಳು ವಿದ್ಯೆ-ಅವಿದ್ಯೆಗಳನ್ನು ಚೆನ್ನಾಗಿ ಬಲ್ಲವರಾದ್ದರಿಂದಲೇ ಭಗವಚ್ಚಬ್ದವಾಚ್ಯರಾದ 382 ಪೂಜ್ಯ ಗುರುವರರೇ! “ಸಮಗ್ರೆಶ್ಚರ್ಯ-ಬಲ-ಕೀರ್ತಿ-ಸಂಪತ್ತು-ಜ್ಞಾನ-ವಿಜ್ಞಾನಗಳೆಂಬ ಷಡ್ಗುಣೈಶ್ವರ್ಯ ಸಂಪನ್ನನಾದ ಪರಬ್ರಹ್ಮವಿದ್ಯೆಯನ್ನು ಉಪದೇಶಿಸಿರಿ” ಎಂದು ಪ್ರಾರ್ಥಿಸಿದರು.
ಆಗ ಶ್ರೀಸುಧೀಂದ್ರತೀರ್ಥರು, ಜ್ಯೋತಿಶ್ಯಾಸ್ತ್ರವಿಶಾರದರಾದ ಪಂಡಿತರು ಬಹುವಿಧವಾಗಿ ಪರಿಶೀಲಿಸಿ, ವಿಮರ್ಶಿಸಿ, ನಿಷ್ಕರ್ಷಿಸಿದ ಪಂಚೇಷ್ಟಿಕಾದಿ ಗುಣಯುಕ್ತವೂ ಗುರುದೃಷ್ಟಿಸಹಿತವಾ ಆದ ಶುಭಮುಹೂರ್ತದಲ್ಲಿ-ಸುಪ್ರಸನ್ನಚಿತ್ತರಾಗಿ ವಿದ್ವಜ್ಜನರು ವೇದಘೋಷ ಮಾಡುತ್ತಿರಲು, ಶ್ರೀಸುಧೀಂದ್ರರು ತಮ್ಮ ಹೃದಯಾಂತರ್ಗತಭಾರತೀರಮಣಮುಖ್ಯಪ್ರಾಣಾಂತರ್ಗತ ಪರಬ್ರಹ್ಮಸ್ವರೂಪಿ ಸೀತಾಪತಿ ಶ್ರೀಮೂಲರಾಮಚಂದ್ರ-ವೇದವ್ಯಾಸದೇವರನ್ನು ಧ್ಯಾನಿಸಿ ಜಲಪೂರ್ಣವಾದ ಶಂಖವನ್ನು ದ್ವಾದಶಪ್ರಣವಗಳಿಂದ ಅಭಿಮಂತ್ರಿಸಿ ಆಪೂತಜಲದಿಂದ ಶಿಷ್ಯರಿಗೆ ಪ್ರೋಕ್ಷಿಸಿ “ಶಂ ನೋ ಮಿತ್ರಂ ವರುಣಃ” ಇತ್ಯಾದಿ ಶಾಂತಿಮಂತ್ರವನ್ನು ಪಠಿಸಿ ತಮ್ಮ ಬಲಕರವನ್ನು ಶಿಷ್ಯರ ಬಲಕರದಲ್ಲಿಟ್ಟು ಪುರುಷಸೂಕ್ತವನ್ನು ಪಠಿಸಿನಂತರ ಶಿಷ್ಯರ ಹೃದಯದಲ್ಲಿ ಬಲಕರವನ್ನಿಟ್ಟು “ಮಮ ವ್ರತೇ ಹೃದಯಂ ತೇ ದದಾಮಿ” ಇತ್ಯಾದಿ ಮಂತ್ರಗಳನ್ನು ಜಪಿಸಿ, ಶಿಷ್ಯರ ಬಲಗಿವಿಯಲ್ಲಿ ಅಸ್ವಪ್ನರಾದ ದೇವತೆಗಳಿಂದಲೂ ಹೊಂದಲಸಾಧ್ಯವಾದ ಮಹಾತ್ಮಾಶ್ರಯರಾದ ಶ್ರೀಸುಧೀಂದ್ರಗುರುಚರಣರು ಪ್ರಣವಮಂತ್ರವನ್ನು ಉಪದೇಶಿಸಿದರು.
ಆನಂತರ ಹಂಸ, ಹಯಗ್ರೀವ, ವ್ಯಾಸ, ರಾಮ, ನರಹರಿ, ಕೃಷ್ಣ, ಧನ್ವಂತರೀ ನಾರಾಯಣ-ವಾಸುದೇವಾದೃಷ್ಟ ಮಹಾಮಂತ್ರಗಳನ್ನೂ, ಶ್ರೀಹನುಮ-ಭೀಮ ಮಧ್ವ ಮಂತ್ರಗಳನ್ನೂ, ಔಪಚಾರಿಕವಾಗಿ ಚರ್ತುಷಷ್ಟಿ ಕಲೆಗಳನ್ನೂ ಉಪದೇಶ ಮಾಡಿದರು. ತರುವಾಯ “ಓಂ ಓಂ ಅಥಾತೋ ಬ್ರಹ್ಮಜಿಜ್ಞಾಸಾ ಓಂ” ಎಂದಾರಂಭಿಸಿ “ಓಂ ಅನಾವೃತ್ತಿಶಬ್ಬಾದನಾವೃತ್ತಿಶಬ್ದಾತ್ ಓಂ” ಎಂಬವರಿಗೆ ಚತುರ್ಲಕ್ಷಣೋಪೇತವಾದ ಬ್ರಹ್ಮಮೀಮಾಂಸಾ ಶಾಸ್ತ್ರವನ್ನು ಸಂಪ್ರದಾಯಾನುಸಾರವಾಗಿ ಉಪದೇಶಿಸಿದರು. ನಂತರ ಶ್ರೀಮದಾಚಾರ ಮಹಾಸಂಸ್ಥಾನದ ಆರಾಧ ಪ್ರಧಾನಮೂರ್ತಿಯಾದ ಶ್ರೀಮೂಲರಾಮಚಂದ್ರ-ದಿಗ್ವಿಜಯಕಾರಕ ಪ್ರಧಾನ ಮೂರ್ತಿಗಳಾದ ಶ್ರೀದಿಗ್ವಿಜಯ ರಾಮ-ಶ್ರೀಜಯರಾಮ ದೇವರುಗಳ ಧ್ಯಾನಶ್ಲೋಕಗಳನ್ನೂ ಉಪದೇಶಮಾಡಿ ಫಲ ಮಂತ್ರಾಕ್ಷತೆಯನ್ನು ಅನುಗ್ರಹಿಸಿ ಶಿಷ್ಟರ ಶಿರದಲ್ಲಿ ಅಮೃತಹಸ್ತವಿರಸಿ, ಆನಂದಬಾಷ್ಪ ಸಿಕ್ಕನಯನರಾಗಿ ಆಶೀರ್ವದಿಸಿದರು. ಆ ಬಳಿಕ ದ್ವಾರಪಾಲಕರು ಮುಚ್ಚಿದ್ದ ತೆರೆಯನ್ನೆಳೆದರು.
ಆಗ ವಿದ್ವಜ್ಜನರು ವೇದಘೋಷ ಮಾಡುತ್ತಿರಲು, ವಿಜಯಸೂಚಕ ಶಂಖ ಧ್ವನಿ-ಘಂಟಾನಿನಾದವಾಗುತ್ತಿರಲು, ಸಭಾಸದರು ಜಯಕಾರ ಮಾಡುತ್ತಿರಲು, ಸುಧೀಂದ್ರತೀರ್ಥರು ಪ್ರಿಯಶಿಷ್ಯರಾದ ನೂತನಯತಿವರರಿಗೆ ಹಸ್ತಲಾಘವವಿತ್ತು ಅವರನ್ನು ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರ ವೇದಾಂತಸಾಮ್ರಾಜ್ಯ ದಿಗ್ವಿಜಯ ವಿದ್ಯಾಸಿಂಹಾಸನದಲ್ಲಿ ಕೂಡಿಸಿದರು. ನೂತನಯತಿಗಳು ಮನದಲ್ಲಿ ಶ್ರೀಮೂಲರಘುಪತಿವೇದವ್ಯಾಸರು - ಶ್ರೀಮದಾಚಾರರು - ಶ್ರೀಪದ್ಮನಾಭಾದಿ ಶ್ರೀವಿಜಯೀಂದ್ರ- ರವರೆಗಿನ ಗುರುಗಳ ಪಾದಸ್ಮರಣೆ ಮಾಡುತ್ತಾಪದ್ಮಾಸನಾಸೀನರಾಗಿ ನಿಮೀಲಿತಾರ್ಧನಯರಾಗಿ ಕಂಗೊಳಿಸಿದರು.
ಆಗ ಶ್ರೀಮಠದ ಅಧಿಕಾರಿಗಳು - “ಈಗ ಪೂಜ್ಯ ಶ್ರೀಸುಧೀಂದ್ರ ಗುರುಪಾದರು ತಮ್ಮ ಪ್ರಿಯಶಿಷ್ಯರಾದ ನೂತನ ಯತಿವರ್ಯರಿಗೆ ನಾಮಕರಣಪೂರ್ವಕವಾಗಿ ದೈತ ಸಾಮ್ರಾಜ್ಯ ವಿದ್ಯಾಸಿಂಹಾಸನದಲ್ಲಿ ಪಟ್ಟಾಭಿಷೇಕಮಾಡಿ ಆಶೀರ್ವದಿಸುತ್ತಾರೆ” ಎಂದು ಘೋಷಿಸಿದರು. ಸಭಾಸದರು ಉತ್ಸಾಹಸಂಭ್ರಮದಿಂದ ಶಾಂತರೀತಿಯಾಗಿ ಆ ಮಹೋತ್ಸವ ದಿದೃಕ್ಷುಗಳಾಗಿ ಆನಂದದಿಂದ ಕರಜೋಡಿಸಿ ಎದ್ದುನಿಂತರು.
ಶ್ರೀಸುಧೀಂದ್ರತೀರ್ಥರು-ಶ್ರೀಮೂಲರಘುಪತಿ ವೇದವ್ಯಾಸರು, ಆಚಾರ ಶ್ರೀಮದ್ದರು, ತಮಗೆ ಸ್ವಪ್ನದಲ್ಲಿ ಸೂಚಿಸಿದ ಹೆಸರಿನ ಮಹತ್ವವನ್ನು ವಿವರಿಸಿ ಸಕಲ ಅನಿಷ್ಟ-ಪಾಪಸಮೂಹವನ್ನು ಪರಿಹರಿಸಿ, ನಿಖಿಲವಾಂಚಿತಾರ್ಥಗಳನ್ನು ಕರುಣಿಸಿ ಪೊರೆಯುವುದೆಂಬರ್ಥದ ರಘುಕುಲಲಲಾಮನಾದ ಶ್ರೀರಾಮಚಂದ್ರನೆಂಬ ಮತ್ತು ಶ್ರೀವಾಯುದೇವರ ಅವತಾರರಾದ ಶ್ರೀಹನುಮ೦ತದೇವರೆಂಬರ್ಥದಿಂದ ಕಂಗೊಳಿಸಿ ಪರಮಪಾವನವಾದ.
“ಶ್ರೀರಾಘವೇಂದ್ರತೀರ್ಥಶ್ರೀಪಾದಂಗಳವರು”
ಎಂಬ ಅನ್ವರ್ಥಕ ಹೆಸರನ್ನು ತಮ್ಮ ವರಕುಮಾರರಿಗೆ ಕರುಣಿಸಿ,385 ಈ ನಮ್ಮ ಪ್ರಿಯ ಶಿಷ್ಯರು ಸಕಲಸಿರಿಸಂಪತ್ತುಗಳಿಗೆ ಅಧಿಪತಿಯಾದ ರಾಜರಾಜ(ಕುಬೇರನಂತೆ ಸಕಲ ಅಕ್ಷಯಸಿರಿಸಂಪತ್ತುಗಳಿಂದಲೂ, ಪರಮಮಂಗಳಮೂರ್ತಿ ಜಗದಭಿರಾಮ ಶ್ರೀರಾಮ ಭದ್ರನಂತೆ ಮಂಗಳಪ್ರದರಾಗಿ, ಶ್ರೀರಘುರಾಮನ ಕಾರುಣ್ಯವಾಹಿನಿಯಂತೆ ಸಕಲ ಜಗತ್ತಿನ ಹಿತದಲ್ಲಿ ಆಸಕ್ತರಾಗಿ, ಮಾನಸಪೂಜಾದುರಂಧರೂ, ಸರ್ವತಂತ್ರಸ್ವತಂತ್ರರೂ, ತಾಪಸಚಕ್ರವರ್ತಿಗಳೂ ಆದ ಶ್ರೀಸುರೇಂದ್ರತೀರ್ಥರಂತೆ ಮಹಾತಪಸ್ವಿಗಳಾಗಿ - ನಿಖಿಲದುರ್ಮತಧ್ವಾಂತ ಭಾಸ್ಕರರೂ, ಸದೈಷ್ಣವಕುಮುದಬಾಂಧವರೂ, ಚತುರಧಿಕಶತ ಪ್ರೌಢಬಂಧ ಪ್ರಣಯನ ಪಾರೀಣರೂ ಅಜಯ್ಯರೆನಿಸಿ ಅನಿತರಸಾಧಾರಣ ಕೀರ್ತಿಚಂದ್ರಿಕಾ ಧವಳಿತ ದಿಂಡಲರೂ. ನಮ್ಮ ಪರಮಪೂಜ್ಯ ಗುರುಪಾದರೂ ಆದ ಶ್ರೀವಿಜಯೀಂದ್ರತೀರ್ಥರಂತೆ ವಿಮಲಕೀರ್ತಿವಿರಾಜಿತರಾಗಿ, ಜಗತ್ತಿನಲ್ಲಿಗರ್ವಾಂಧರಾದ ದುರ್ವಾದಿಗಳೆಂಬ ಮತ್ತೆ ಮಾತಂಗ ಕುಂಭಭೇದನಪಟು ಪಂಚಾನನರೆಂದೂ, ವಿಶ್ವದ ವಿದ್ವನಿಕುರುಂಬವನ್ನು ವಾದಸಂಗರದಲ್ಲಿ ಲೀಲಾಜಾಲವಾಗಿ ಪರಾಜಯಗೊಳಿಸುವ ವಾದವಿದಾಕಲೆಯಲ್ಲಿ ಅಗ್ರಗಣ್ಯರೆಂದೂ ಜಗನ್ಮಾನ್ಯರಾದ ತಮ್ಮಂತೆ (ಶ್ರೀಸುಧೀಂದ್ರರುಗಳಂತೆ) ವಾದವಿದ್ದಾಕೋವಿದರಾಗಿ ಲೋಕಕಲ್ಯಾಣಾಸಕ್ತರಾಗಿ, ನಿಮ್ಮಿ ವರಕುಮಾರಕರಾದ ಶ್ರೀರಾಘವೇಂದ್ರತೀರ್ಥಶ್ರೀಪಾದಂಗಳವರು ಅಭಿವೃದ್ಧಿಸಲಿ !” ಎಂದು ತುಂಬುಹೃದಯದಿಂದ ಆನಂದ ಬಾಷ್ಪಸಿಕ್ತನಯನರಾಗಿ ಆಶೀರ್ವದಿಸಿದರು.
ಅನಂತರ ಶ್ರೀಸುಧೀಂದ್ರಗುರುಗಳು ಶ್ರೀರಾಘವೇಂದ್ರತೀರ್ಥ ಶ್ರೀಪಾದಂಗಳವರ ಶಿರದಮೇಲೆ ಸುವರ್ಣಮಯ ತಟ್ಟೆಯಲ್ಲಿ ಶ್ರೀರಾಮ-ಕೃಷ್ಣ -ವೇದವ್ಯಾಸಪ್ರತಿಮೆಗಳು, ಶಾಲಿಗ್ರಾಮ, ಆಚಾರರ ಪ್ರತಿಮೆಗಳನ್ನಿಟ್ಟು ಋಗಾದಿಮಂತ್ರಗಳಿಂದ ಪವಿತ್ರವಾದ, ಕಮಲಾದಿ ಪುಷ್ಪಗಳು, ಮೌಕ್ತಿಕಗಳು, ನವರತ್ನಗಳನ್ನು ಅನೇಕ ಶಂಖಗಳಲ್ಲಿ ತುಂಬಿ, ಪವಿತ್ರೋದಕ ಸಹಿತವಾಗಿ ಜ್ಞಾನಿಗಳಾದ ಶ್ರೀರಾಘವೇಂದ್ರಗುರುಗಳ ಶಿರಸ್ಸಿನಲ್ಲಿ ಪುರುಷಸೂಕ್ತವನ್ನು ಪಠಿಸುತ್ತಾ ಅಭಿಷೇಕ ಮಾಡುತ್ತಿರಲು-ಸಮಸ್ತ ಪಂಡಿತ ಮಂಡಲಿಯು ಭಕ್ತಿಯಿಂದ “ಭಗವಾನುವಾಚ-ಭೂಯ ಏವ ಮಹಾ ಬಾಹೋ ಶ್ರುಣು ಮೇ ಪರಮಂ ವಚಃ | ಯತ್ತೇSಹಂ ಪ್ರಿಯಮಾಣಾಯ ವಕ್ವಾಮಿ ಹಿತ ಕಾವ್ಯಯಾ ” ಎಂಬ ಗೀತೆಯ ವಿಶ್ವರೂಪಾಧ್ಯಾಯ ಮತ್ತು “ಊರ್ಧ್ವಮೂಲಮಧಃ ಶಾಖಮಶ್ವತ್ಥಂ ಪ್ರಾಹುರವ್ಯಯಂ | ಛಂದಾಂಸಿ ಯಸ್ಯ ಪರ್ಣಾನಿ ಯಸ್ತಂ ವೇದ ಸವೇದವಿತ್ ” ಎಂಬ ಹದಿನೈದನೆಯ ಅಧ್ಯಾಯಗಳನ್ನು ಪಾರಾಯಣ ಮಾಡುತ್ತಿರಲು - “ವೇದಾಂತವಿದ್ಯಾನಿಜರಾಜ್ಯಪಾಲನೇ ಸಂಕಲ್ಪವಾನೋ ಗುರುಣಾ ಗರೀಯಸೀ। ಅದಭ್ರಚೇತಾ ಅಭಿಷಿಚ್ಛ ತೇ ಪುರಾ। ಸವಾರಿಭಿರ್ವಾರಿಜ ಪೂರಿತೈರಥ!” ಎಂದು ಪೂಜ್ಯರಾದ ಶ್ರೀಅಚ್ಯುತಪ್ರೇಕ್ಷಾಚಾರರು ಶ್ರೀಮನ್ಮಧ್ವಾಚಾರ್ಯರಿಗೆ ವೇದಾಂತ ಸಾಮ್ರಾಜ್ಯಾಭಿಷೇಕ ಮಾಡಿದ ಶ್ರೀಸುಮಧ್ವವಿಜಯ ಭಾಗವನ್ನು ಪಾರಾಯಣಮಾಡಿದರು. ಆಗ ಪಂಡಿತರು ವೇದಘೋಷಮಾಡಿದರು. ವಿವಿಧ ಮಂಗಳವಾದ್ಯಗಳು ಮೊಳಗಿದವು. ಭೇರಿದುಂದುಭಿ ಶಂಖ ಮುಂತಾದ ವಿಜಯವಾದಗಳು ಧ್ವನಿಸಿದವು. ಹರಿದಾಸರು ನರ್ತಿಸುತ್ತಾಶ್ರೀಹರಿಯಮಹಿಮೆಗಳನ್ನು ಪಾಡಿದರು. ದರ್ಬಾರಿನ ಸಂಗೀತಗಾರರು ಸುಸ್ವರವಾಗಿ ಗಾನಮಾಡುತ್ತಿರಲು ವೀಣಾವೇಣು ಮೃದಂಗಾದಿಗಳನ್ನು ಆಯಾ ವಾದ್ಯನಿಪುಣರು ನುಡಿಸಹತ್ತಿದರು. ಸಮಸ್ತ ಸಭಾಸದರು ಲಾಜಾ-ಹೂಗಳಿಂದ ಶ್ರೀರಾಘವೇಂದ್ರ ಗುರುಸಾರ್ವಭೌಮರಿಗೆ ಪುಷ್ಪವೃಷ್ಟಿಮಾಡಿದರು. ಭೂಸುರವೃಂದ ಜಯಜಯಕಾರಮಾಡಿತು. ಅರಮನೆಯ ಬತೇರಿಯ ತೋಪಖಾನೆಯಿಂದ ಸಾಮ್ರಾಜ್ಯಾಭಿಷೇಕ ಸೂಚಕವಾಗಿ ಮೂವತ್ತೊಂದು ಗುಂಡುಗಳು ಹಾರಿದವು! ಆ ಎಲ್ಲಾ ಧ್ವನಿಗಳೂ ಒಂದಾಗಿ ನಭೋಮಂಡಲವನ್ನೇ ಭೇದಿಸುವಂತೆ ದಶದಿಕ್ಕುಗಳಿಗೂ ವ್ಯಾಪಿಸಿ ಪ್ರತಿಧ್ವನಿಸಿತು.
ಶ್ರೀಸುಧೀಂದ್ರತೀರ್ಥರು ಪರಮಾನಂದನಿರ್ಭರರಾಗಿ ಶ್ರೀಶಾಲಿವಾಹನಶಕೆ ೧೫೪೩ ನೇ ದುರ್ಮತಿನಾಮ ಸಂವತ್ಸರದ ಫಾಲ್ಗುಣ ಶುಕ್ಲ ಬಿದಿಗೆಯ (ಕ್ರಿ.ಶ. ೧೬೨೧ ಮಾರ್ಚ್) ಶುಭದಿನದಂದು ಶ್ರೀರಾಘವೇಂದ್ರತೀರ್ಥಗುರುಸಾರ್ವಭೌಮರನ್ನು ಶ್ರೀಮನ್ಮಧ್ವಾಚಾರ್ಯರ ವೇದಾಂತ ವಿದ್ಯಾಸಾಮ್ರಾಜ್ಯದ ಚಕ್ರವರ್ತಿಗಳನ್ನಾಗಿ ಮಾಡಿ (ಆಶೀರ್ವದಿಸಿದರು) ಕೃತಕೃತ್ಯರಾದರು.387 ಮತ್ತು ಪ್ರಿಯವರಕುಮಾರರೇ ನೀವು ಮುಂದೆ ಸಮಯ ಬಂದಾಗ ಈ ಮಹಾಪೀಠಕ್ಕೆ ಅರ್ಹರೂ, ಅಧಿಕಾರಿಗಳೂ ಆಗಿರುವ ಶಿಷ್ಟರಿಗೆ ಮಹಾಸಂಸ್ಥಾನಪರಂಪರಾಪ್ರಾಪ್ತ ಸಂಪ್ರದಾಯದಂತೆ ಸನ್ಯಾಸ ದೀಕ್ಷೆಯನ್ನು ಕೊಟ್ಟು ಮಹಾಸಂಸ್ಥಾನವನ್ನು ಮುಂದುವರೆಸಿ ಕೊಂಡು ಬರುವಂತೆ ಮಾಡಿ ಕೀರ್ತಿಶಾಲಿಗಳಾಗಬೇಕು” ಎಂದು ಆಜ್ಞಾಪಿಸಿದರು. ಶ್ರೀರಾಘವೇಂದ್ರಗುರುವರರು “ಗುರ್ವಾಜ್ಞೆಯನ್ನು ಶಿರಸಾಧರಿಸಿದ್ದೇನೆ” ಎಂದು ವಿಜ್ಞಾಪಿಸಿದರು.
ಆ ತರುವಾಯ ಶ್ರೀಸುಧೀಂದ್ರಗುರುಗಳು ಶ್ರೀಮಠದ ಆರಾಧ್ಯಮೂರ್ತಿಗಳಾದ ಶ್ರೀಮೂಲರಾಮ-ದಿಗ್ವಿಜಯರಾಮ- ಜಯರಾಮ-ಎರಡು ವ್ಯಾಸಮುಷ್ಟಿಕೆಗಳು, ರತ್ನಗರ್ಭಶಾಲಿಗ್ರಾಮ-ಬಲಮುರಿಶಂಖಗಳನ್ನಿಟ್ಟಿದ್ದ ರಜತಪೇಟಿಕೆಯನ್ನೂ ಸಮಸ್ತಶಾಸ್ತ್ರಗ್ರಂಥಗಳನ್ನಿಟ್ಟಿದ್ದ ರಜತಪೆಟ್ಟಿಗೆಯನ್ನೂ ನೂತನ ಜಗದ್ಗುರುಗಳಿಗೆ ಸಮರ್ಪಿಸಿದರು. ತರುವಾಯ ಶ್ವೇತಛತ್ರ, ಆಪ್ತಾಗಿರಿ, ಚೌರಿ, ಚಾಮರಗಳು, ಸ್ವರ್ಣಪಾಲಕಿ, ಸ್ವರ್ಣಾಂಬಾರಿ, ಮೇನೆ, ಹಗಲುದೀವಟಿಕೆ, ಕರದೀಪ ನಾಲ್ಕು ವಿಧ ಮಂಗಳವಾದ್ಯಗಳು, ಶಂಖ-ಧವಳ-ಭೇರೀ-ಢಕ್ಕಾ-ಕಹಳೆ-ಹೀಗೆ ವಿಜಯವಾದಗಳನ್ನೂ, ನಾಲ್ವರು ಸುವರ್ಣ-ರಜತ-ದಂಡಧಾರಿಗಳು, ಈರ್ವರು ಸಿಂಹ ಮುಖಾಲಂಕೃತ ಸ್ವರ್ಣದಂಡಧಾರಿಗಳು, ತಾಳಸ್ತುತಿ ಪಾಠಕರು, ಮಧಿಮಾಗಧರೇ ಮೊದಲಾದ ಸಮಸ್ತ ರಾಜವೈಭವವನ್ನೂ ಅನುಗ್ರಹಿಸಿದರು.
ಶ್ರೀಯವರು ಒಂದೊಂದು ರಾಜಗೌರವವನ್ನು ಅರ್ಪಿಸುವಾಗ ಕ್ರಮವಾಗಿ ಆಯಾಯ ರಾಜಚಿಹ್ನೆಗಳನ್ನು ಹಿಡಿದು ಸೇವಕರು ವೇದಿಕೆಯ ಮುಂದೆ ಬಂದು ನಮಸ್ಕರಿಸಿ ಹೋಗುತ್ತಿದ್ದರು. ಶ್ವೇತಭತ್ರ-ಚಾಮರದವರು ಬಂದಾಗ ರಘುನಾಥನಾಯಕ- ತಿರುಮಲನಾಯಕರು ಎರಡು ಚಾಮರಗಳನ್ನು ತಾವೇ ಹಿಡಿದು ನೂತನ ಜಗದ್ಗುರುಗಳನ್ನು ಸೇವಿಸಿ ನಮಸ್ಕರಿಸಿದರು. ಪಾಲಕಿ-ಅಂಬಾರಿಗಳನ್ನು ಹೊತ್ತು ತಂದವರು ಗುರುಗಳಿಗೆ ನಮಿಸಿ ಹೋದರು. ರಜತದಂಡಯುಕ್ತವಾದ ಹಗಲು ದೀವಟಿಗೆಯನ್ನು ಶ್ರೀಗಳವರ ಮುಂದೆ ಹಿಡಿದು ಗೌರವ ಸಮರ್ಪಣೆಮಾಡಿದರು. ರಜತ ಕರದೀಪಧಾರಿಯೊಬ್ಬನು ವೇದಿಕೆಯನ್ನು ಹತ್ತಿ ನಿಂತು “ಪರಾಕ್ ಪರಾಕ್” ಎಂದು ಹೇಳಿ ನಮಿಸಿದನು. ಸ್ವರ್ಣ-ರಜತಾದಿದಂಡಧಾರಿಗಳೂ ಮುಂದೆಬಂದು “ಪರಾಕ್ ಸ್ವಾಮಿ ಪರಾಕ್' ಎಂದು ಘೋಷಿಸಿ ನಮಿಸಿ ನಡೆದರು. ಇದರಂತೆ ವಾದ್ಯಗಾರರು, ತಾಳಸ್ತುತಿ, ಪಾಠಕರು ಗೌರವಸಮರ್ಪಣೆ ಮಾಡಿದರು. ಅನಂತರ ಇಬ್ಬರು ವಂಧಿ-ಮಾಗಧರು ವೇದಿಕೆಯ ಅಕ್ಕಪಕ್ಕ ನಿಂತು ಕರಜೋಡಿಸಿ ಬಿರುದಾವಳಿಗಳನ್ನು ಘೋಷಿಸತೊಡಗಿದರು -
ಜಯಜಯ ! ಶ್ರೀಮತ್ಪರಮಹಂಸಪರಿವ್ರಾಜಕಾಚಾರ್ಯವರ್ಯ !
ಪಾದವಾಕ್ಯ-ಪ್ರಮಾಣ-ಪಾರಾವಾರಪಾರೀಣಶೇಖರ !
ಯಮನಿಯಮಾಸನ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನಧಾರಣ ಸಮಾಧೃಷ್ಟಾಂಗ ಯೋಗಾನುಷ್ಠಾನಗರಿಷ್ಠ |
ಷಡರ್ಶನಾಚಾರ್ಯವರ್ಯ ! ನಿಖಿಲವಿದ್ಯಾ ಚಕ್ರವರ್ತಿನ್ ! ಸರ್ವತಂತ್ರ ಸ್ವತಂತ್ರ ! ಚತುಃಷಷ್ಟಿಕಲಾಪಾರಂಗತ !
ದುರ್ವಾದಿ ಮತ್ತೇಭಪಂಚಾನನ, ವ್ಯಾಖ್ಯಾನಸಿಂಹಾಸನಾಧೀಶ್ವರ ! ಶ್ರೀಮದೈದಿಕ ಸದೈಷ್ಣವ ಸಿದ್ಧಾಂತ ಪ್ರತಿಷ್ಠಾಪನಾಚಾರ್ಯ ! ನಾಸ್ತಿಕಕುಲತಿಮಿರ ಸಹಸ್ರಕಿರಣ ! ಆಸ್ತಿಕದರ್ಶನ ಮಹಾಚಾರ್ಯ ! ಶ್ರೀಮದ್ವಂಸನಾಮಕಪರಮಾತ್ಮ ಪ್ರವರ್ತಿತ ಜ್ಞಾನಪೀಠಾಧ್ಯಕ್ಷ ! ಶ್ರೀಮನ್ಮಧ್ವಾಚಾರ್ಯ ಮುಖ್ಯಮಹಾಸಂಸ್ಥಾನಾಧೀಶ್ವರ ! ಶ್ರೀಮತ್ಕವೀಂದ್ರಯತಿಪುಂಗವಸಮಲಂಕೃತ ದಕ್ಷಿಣಾದಿಪೀಠಾಧೀಶ್ವರ !
ನಿಖಿಲಭೂಮಂಡಲಾಚಾರ್ಯವಯ್ಯ ! ಸಕಲಯತಿಕುಲತಿಲಕ !
ನಿಖಿಲಕರ್ಮಂದಿವಂದ್ಯಪಾದಾಬ್ಬ ! ಸಂಪ್ರದಾಯಪ್ರವರ್ತಕ ! ಸನಾತನಧರ್ಮಸಂರಕ್ಷಣದುರಂಧರ ! ಶ್ರೀಭಾಗವತಾಗ್ರೇಸರ ! ಜಗನ್ಮಾನ ಜಗದ್ಗುರು ಶ್ರೀಮಧ್ವಜಯೀಂದ್ರತೀರ್ಥಕರಕಮಲ ಸಂಜಾತ ಶ್ರೀಮತ್ಸುಧೀಂದ್ರತೀರ್ಥ ವರಕುಮಾರಕ ! ರಾಜಾಧಿರಾಜ ಸಂಸೇವ್ಯ ಪಾದಪಂಕಜ !
ಶ್ರೀಮದ್ರಾಜಾಧಿರಾಜ-ಶ್ರೀಮದ್ರಾಘವೇಂದ್ರತೀರ್ಥಗುರುಸಾರ್ವಭೌಮ
ಜಯ ಜಯ ! ಪರಾಕ್, ಸ್ವಾಮಿ ಪರಾಕ್, ಬಹುಪರಾಕ್ !
ಮದಿಮಾಗಧರುಘೋಷಿಸಿದ ಬಿರುದಾವಳಿಯನ್ನಾಲಿಸಿ ಪರಮಾನಂದತುಂದಿಲರಾದ ಸಮಸ್ತಸಭಾಸದರೂ ಏಕಕಂಠದಿಂದ “ಶ್ರೀಮದ್ರಾಜಾಧಿರಾಜ ಶ್ರೀಮದ್ರಾಘವೇಂದ್ರ ಗುರುಸಾರ್ವಭೌಮ ಜಯಜಯ” ಎಂದು ಹರ್ಷಧ್ವನಿಮಾಡಿದರು.
ಪರಮಸುಂದರ ಭವ್ಯಾಕೃತಿಯ ಆ ಗುರುಸಾರ್ವಭೌಮರು ಮಂದಹಾಸದಿಂದ ಅಭಯಹಸ್ತಪ್ರದರ್ಶನಮಾಡುತ್ತಾ ನಿಮೀಲಿತಾರ್ಧನಯನರಾಗಿ ಪದ್ಮಾಸನಾಸೀನರಾಗಿ ಕುಳಿತಿದ್ದರು. ಆ ಮಹನೀಯರು ಈ ಸಮಸ್ತ ವೈಭವ-ಗೌರವಗಳನ್ನು ಶ್ರೀಹರಿಯ ಚರಣಾರವಿಂದಗಳಿಗರ್ಪಿಸುತ್ತಾ, ಆ ಶರಣಜನಮಂದಾರರಾದ ಯತಿಚಂದ್ರಮರು ಹೃನ್ಮಂದಿರದೊಳು ವಂದಾರುಜನ ವೃಂದಾವನಮಂದಾರ ವೃಂದಾರಕ ವೃಂದ ವಂದನೀಯ-ಇಂದಿರಾರಮಣ ನಂದನಂದನಪಾದರವಿಂದದ್ದಂದ ವಂದನ ಕಂದಲಿತಾನಂದತುಂದಿಲರಾಗಿ ಜಗದ್ವಂದ ಸುಂದರ ವಿದ್ಯಾಸಿಂಹಾಸನದಲ್ಲಿ ಕಂಗೊಳಿಸಿದರು. ವಿಬುಧಜನಭರಣವಿಧತ ಕನಕಧರಾಧರರಾದ ಮುನಿಚಂದ್ರಮರು ತಮ್ಮ ಅಮಂದಮಂದಹಾಸದಿಂದ ಚಂದ್ರನ ಚಲ್ವಿಕೆಯನ್ನು ನಾಚಿಸುತ್ತಾ ಮಿಂಚಿನ ಗೊಂಚಲಿನಂತೆ ಸಂಚರಿಸುವ ಕೃಪಾದೃಷ್ಟಿವೃಷ್ಟಿಯಿಂದ ಸಜ್ಜನವೃಂದವನ್ನು ಪೋಷಿಸುತ್ತಾ, ತಪಶಕ್ತಿಯಿಂದ ಜನತೆಯ ಅಘನಿವಹವನ್ನು ಬಡಿದೋಡಿಸುತ್ತಾ, ಸಂತತ ಚಿಂತಿತ ವಾಂಛಿತಸಂತತಿಯನ್ನಿತ್ತು ಸಂತೋಷಗೊಳಿಸುತ್ತಾ, ಮಂಗಳದ ಮಳೆಗರೆಯುತ್ತಾ ನರಸಿಂಗನ ಅಂತರಂಗಭಕ್ತರಾದ ಆ ಯತಿಪುಂಗವರು ಶ್ರೀಪ್ರಹ್ಲಾದರಾಜರಂತೆ ಶೃಂಗಾರವಾದ ಶಿಂಗಪೀಠದಲ್ಲಿ ಕಂಗೊಳಿಸಿದರು.
ಅಹಾ! ಭಾರತದ ಭಾಗರವಿಯುದಯಿಸಿ! ಸುಜನವೃಂದದ ಹಿತೈಷಿ ದೇವಾಂದನು ಧರೆಗಿಳಿದು ಬಂದ ! ತತ್ವಶಾಸ್ತ್ರ-ಧರ್ಮ- ನ್ಯಾಯ-ನೀತಿ-ಸಂಪ್ರದಾಯಗಳ ರಕ್ಷಕನ ಅವತಾರವಾದಂತಾಯಿತು! ಭಾರತದ ಸದಾಚಾರ-ಶೀಲ-ವಿದ್ಯೆ-ತಪಸ್ತುಗಳ ಸಂಕೇತರಾದ ಶ್ರೀರಾಘವೇಂದ್ರಗುರುಸಾರ್ವಭೌಮರ ಪಟ್ಟಾಭಿಷೇಕೋತ್ಸವದಿಂದ ಆಸ್ತಿಕಮತದ ನೂತನ ಯುಗ ಪ್ರಾರಂಭವಾಯಿತು ! ಪಂಚರೂಪೀ ಶ್ರೀಹರಿಯ ವಿಶೇಷ ಸನ್ನಿಧಾನ, ಶ್ರೀವಾಲ್ದಾವೇಶಯುಕ್ತರಾದ ಶ್ರೀಪ್ರಹ್ಲಾದ-ಬಾಕ-ಶ್ರೀವ್ಯಾಸರಾಜಾವತಾರರಾದ ಈ ಮಹನೀಯರ ವೇದಾಂತಸಾಮ್ರಾಜ್ಯಾಭಿಷೇಕವು ಜಗತ್ಕಲ್ಯಾಣದ ಮಂಗಳಗೀತೆಯಾಗಿ ಪರಿಣಮಿಸಿತು. ಶತಶತಮಾನಗಳವರೆಗೆ ಅವಿಪಾಲ- ಗೋಪಾಲ-ವಿದ್ವಜ್ಜನ-ದೀನದಲಿ-ಆರ್ತರಿಂದೊಡಗೂಡಿದ ಜಗತ್ತಿಗೆ ಕಲ್ಯಾಣ-ಶ್ರೇಯಸ್ಸುಗಳನ್ನು ಕರುಣಿಸಿ ಪೊರೆಯುತ್ತೇವೆ- ಎಂಬ ಭಾವವನ್ನು ಸೂಚಿಸಲೋ ಎಂಬಂತೆ ಆ ಯತಿವರರು ಅಭಯ-ವರದಹಸ್ತರಾಗಿ ದೈತವಿದ್ಯಾಸಾಮ್ರಾಜ್ಯ ಸಿಂಹಾಸನದಲ್ಲಿ ರಾರಾಜಿಸಿದರು.
ಆಗ ನೂತನ ಜಗದ್ಗುರುಗಳಿಗೆ ಕನ್ನಡಸಾಮ್ರಾಜ್ಯದ ಮತ್ತು ಮೈಸೂರರಸರ ಪ್ರತಿನಿಧಿಗಳು, ಹಗಲು ದೀವಟಿಕೆ ಶ್ವೇತಛತ್ರ ಮತ್ತು ರಾಜೋಚಿತ ಖಿಲ್ಲತ್ತು ಧನಕನಕ ವಸ್ತ್ರಾಭರಣಗಳನ್ನು ಅರ್ಪಿಸಿ ಕೃತಾರ್ಥರಾದರು, ಮಧುರೆಯ ತಿರುಮಲ ನಾಯಕ ಮುಂದೆ ಬಂದು ಬಾಗಿ ನಮಿಸಿ ಸುವರ್ಣತಟ್ಟೆಯಲ್ಲಿ ಕಾಣಿಕೆಗಳನ್ನಿಟ್ಟು ಸಮರ್ಪಿಸಿದ ತರುವಾಯ ರಘುನಾಥ ಭೂಪಾಲನು ಮುಂದೆ ಬಂದು ಶಿರಬಾಗಿ ನಮಿಸಿ ನವರತ್ನ ಕನಕನಾಣ್ಯಗಳಿಂದ ನೂತನ ಜಗದ್ಗುರುಗಳಿಗೆ ರತ್ನಾಭಿಷೇಕಮಾಡಿ ರಾಹುಕೇತುವಾದ್ಯ, ಆನೆಯ ಮೇಲೆ ರಜತಾಂದೋಲಿಕೆ, ಪಂಚಕಳಶೋಪೇತ ಕೆಂಪುಛತ್ರಿಯ ಬಿರುದಾವಳಿಗಳನ್ನೂ, ರಾಜಖಿಲ್ಲತ್ತನ್ನೂ ಸಮರ್ಪಿಸಿ ಗುರುಗಳ ಪಾದಸ್ಪರ್ಶಮಾಡಿ ಪುನೀತನಾದ, ರಘುನಾಥಭೂಮೀಂದ್ರನೆಸಗಿದ ರತ್ನಾಭಿಷೇಕದ ದೃಶ್ಯವು ಹಿಂದೆ ಕರ್ನಾಟಕ ಸಾಮ್ರಾಟ್ ಕೃಷ್ಣದೇವರಾಯನು, ಅಳಿಯ ರಾಜರಾಜ, ವೆಂಕಟಪತಿ ಮಹಾರಾಜ, ಗ್ವಾಲಿಯರ್ ಸಿಂಧೆಗಳು ಶ್ರೀವ್ಯಾಸರಾಜರು, ಶ್ರೀವಿಜಯೀಂದ್ರರು ಮತ್ತು ಶ್ರೀಸುಧೀಂದ್ರರಿಗೆ ನೆರವೇರಿಸಿದ ರತ್ನಾಭಿಷೇಕ-ಕನಕಾಭಿಷೇಕಗಳನ್ನು ನೆನಪಿಗೆ ತರುವಂತಿತ್ತು ! ಆ ತರುವಾಯ ತಂಜಾಪುರದ ಮಂತ್ರಿ-ಸೇನಾನಿಗಳು, ದರ್ಬಾರಿನ ಪಂಡಿತರಪರವಾಗಿ ಯಜ್ಞನಾರಾಯಣ ದೀಕ್ಷಿತರು, ಶ್ರೀಮಠದ ವಿದ್ವಾಂಸರಪರವಾಗಿ ರಾಮಚಂದ್ರಾಚಾರ್ಯ-ಲಕ್ಷ್ಮೀನರಸಿಂಹಾಚಾರ್ಯರುಗಳೂ, ಕವಿಗಳ ಪರವಾಗಿ ವೃದ್ಧರಾದ ಮಹಾಕವಿ ಕೃಷ್ಣಯಜ್ಜರು, ವೈದಿಕ ಲೌಕಿಕ ಧಾರ್ಮಿಕ ಜನತಾಪ್ರತಿನಿಧಿಗಳೂ ನೂತನ ಜಗದ್ಗುರುಗಳಿಗೆ ಭಕ್ತಿಯಿಂದ ಕಾಣಿಕೆಗಳನ್ನರ್ಪಿಸಿ ನಮಸ್ಕರಿಸಿದರು. ಆ ವೈಭವ, ಸಂಭ್ರಮಗಳನ್ನು ಕಣ್ಣಾರೆ ಕಂಡವರೇ ಧನ್ಯರು! ಭಾಗ್ಯಶಾಲಿಗಳು!
ಆಗ ಕವಿಗಳು, ಸಾಹಿತಿಗಳು ನೂತನ ಜಗದ್ಗುರುಗಳ ಜ್ಞಾನ-ಭಕ್ತಿ-ವೈರಾಗ್ಯ-ತಪಸ್ಸು-ಮಹಿಮಾತಿಶಯಗಳನ್ನೂ, ವೈಭವಾದಿಗಳನ್ನೂ ಆಶುಕವಿತೆಗಳಿಂದ ವರ್ಣಿಸಿ ಹಾಡಹತ್ತಿದರು.
ಮೊದಲು ವಿದ್ವಜ್ಜನಪೋಷಕನೂ, ಸ್ವಯಂ ಕವಿಯೂ ಆದ ರಘುನಾಥ ಭೂಪಾಲನು ವೇದಿಕೆಯನ್ನೇರಿ ನಿಂತು -
ಕಾ ವಾ ವಿಷ್ಣು ಹೃದಬಗಾ ಕುರುಪತೇರ್ಮಿತ್ರಂ ಚ ಕಿಂ ತತ್ವದ |
ಕೋ ವರ್ಷತ್ವಮಲಂ ಜಲಂ ಕಲಿಯುಗೇ ಕೋ ವಾಂಛಿತೇಷ್ಟಪ್ರದಃ |
ಅರ್ಥ೦ ಕಿಂ ವಿಧನ್ಯ ಯುಯುತ್ಸುರಥ ಕೋ ಕಾ ಬ್ರಹ್ಮಪಶುಭಾ |
ಪೂಜ್ಯಃ ಕೋSತ್ತರ ಪ್ರಾಥಮಾಕ್ಷರಯುತಮಧ್ವಪೀಠಾಧಿಪಃ ||
ವಿಷ್ಣುವಿನ ಹೃದಯಕಮಲದಲ್ಲಿರುವವಳು ಯಾರು ? ದುರ್ಯೋಧನನ ಮಿತ್ರನಾರು ಹೇಳು. ನಿರ್ಮಲ ಜಲವನ್ನು ಯಾವುದು ವರ್ಷಿಸುವುದು ? ಕಲಿಯುಗದಲ್ಲಿ ಅಪೇಕ್ಷಿತಾರ್ಥಪ್ರದನಾರು ? ದರಿದ್ರರಿಂದ ಪ್ರಾರ್ಥನೀಯವಾದುದೇನು ? ಬ್ರಹ್ಮದೇವರ ಶೋಧನೀಯಳಾದ ಪತ್ನಿಯಾರು ? ಮೇಲಿನ ಪ್ರಶ್ನೆಗಳ ಉತ್ತರಗಳ ಮೊದಲಕ್ಷರಗಳಿಂದ ಪೂಜ್ಯರಾದ ಶ್ರೀಮಧ್ವಪೀಠಾಧಿಪತಿಗಳಾರು ? ಎಂಬುದು ಶ್ಲೋಕಾರ್ಥ. ಏಳು ಪ್ರಶ್ನೆಗಳಿಗೆ ಉತ್ತರ ಹೀಗಿವೆ. ೧) ಶ್ರೀರಮಾ, ೨) ರಾಧೇಯಃ, ೩) ಘನಂ, ೪) ವೇಂಕಟೇಶಃ, ೫) ದ್ರವಿಣಂ, ೬) ಯೋದ್ಘಾ, ೭) ಗೀರ್ವಾಣೀ, ಈ ಏಳು ಉತ್ತರದ ಮೊದಲಕ್ಷರಗಳನ್ನು ಸೇರಿಸಿದರೆ ಶ್ರೀರಾಘವೇಂದ್ರಯೋಗೀ ಎಂದಾಗುವುದು. ಇಂಥಾ ಶ್ರೀರಾಘವೇಂದ್ರಯೋಗಿಗಳು ಶ್ರೀಮದ್ಧಪೀಠಾಧೀಶ್ವರರು ಎಂದು ಭಾವ. ಭೂಪಾಲನು ಅದನ್ನು ವಿವರಿಸಿ ನಿರೂಪಿಸಿದಾಗ ವಿದ್ವಜ್ಜನರು ಹರ್ಷಧ್ವನಿಮಾಡಿ ಭೂಪಾಲನನ್ನು ಪ್ರಶಂಸಿದರು.
ತರುವಾಯ ತಂಜಾಪುರದ ಶ್ರೇಷ್ಠಕವಿಗಳೂ ಶ್ರೀಸುಧೀಂದ್ರತೀರ್ಥರ ಶಿಷ್ಯರೂ ಆದ ಕೃಷ್ಣಯಜ್ಜ ಮಹಾಕವಿಗಳು ಹೀಗೆ ಹಾಡಿದರು.
ನಿರ್ಹತ್ಯರ್ಹನ್ನಿರುಕ್ತಿಂ ಹರತಿ ಪರಿಣತಿಂ ಬುದ್ಧಧೀ ಪದ್ಧತೀ ನಾಮ್ |
ಕಾಣಾದೋಕ್ತಿಪ್ರನಾಡೀಂ ಕ್ಷಪಯತಿ ಪದವೀಮಾಕ್ಷಿಪತ್ಯಾಕ್ಷಪಾದೀಮ್ ||
ಧಾತುರ್ನಿತಿಂ ಧುನೀತೇ |
ಪಯತಿ ಕಪಿಲಾಲಾವಲೀಲಾಕಲಾಪಮ್ |
ಧೀರಸಯಂತತತ ಸ್ಥಿತಿಮುಪಚಿನುತೇ ರಾಘವೇಂದ್ರೋಯತೀಂದ್ರಃ ||
ಶ್ರೀರಾಘವೇಂದ್ರಯತೀಂದ್ರರ ಮಹಿಮೆ ಅಸಾಧಾರಣವಾದುದು. ಜೈನಾಚಾರ್ಯರಾದ ಅರ್ಹಂತರ ಸಪ್ತಭಂಗಿವಾದವನ್ನು ನಿರಾಕರಿಸುತ್ತಲಿರುವ, ಬೌದ್ಧರು ಮಾಡುವ ಹಲವು ಪ್ರಕಾರದ ಆಶಂಕೆಗಳ ಪರಿಣತಿಯನ್ನು ನಿರಾಕರಿಸುತ್ತಲಿರುವ, ಕಾಣಾದಮನಿಪ್ರಣೀತವಾದ ನ್ಯಾಯಶಾಸ್ತ್ರದ ಪ್ರನಾಡಿಯನ್ನೂ ಮತ್ತು ಅಕ್ಷಪಾದರ ಶಾಸ್ತ್ರಸರಣಿಯನ್ನೂ ಆಕ್ಷೇಪಿಸುತ್ತಲಿರುವ (ಕ್ಷಯಗೊಳಿಸುತ್ತಿರುವ), ಕಾಮಂದಕೀ ನೀತಿಶಾಸ್ತ್ರಕಾರರ ನೀತಿಯನ್ನು ಕೇರಿಬಿಡುತ್ತಿರುವ (ನಡುಗಿಸುತ್ತಿರುವ), ಕಪಿಲಮುನಿ ಪ್ರಣೀತ ಸಾಂಖ್ಯಶಾಸ್ತ್ರದ ವಾದಕ್ರೀಡೆಯ ಚಾತುರ್ಯವನ್ನು ಬಾಡಿಸುತ್ತಿರುವ ಜ್ಞಾನಿಶ್ರೇಷ್ಠರಾದ ಶ್ರೀರಾಘವೇಂದ್ರಯತೀಂದ್ರರು ದೈತವೇದಾಂತ ತತ್ವಗಳನ್ನು ಅಭಿವೃದ್ಧಿಗೊಳಿಸುತ್ತಿದ್ದಾರೆ. ಇಂಥ ಗುರುವರ್ಯರ ಮಹಿಮೆಯನ್ನು ಮನಮುಟ್ಟಿಸ್ತುತಿಸಿ, ಮಹಾಕವಿ ಕೃಷ್ಣಯಜ್ಜರು ಸಭಿಕರನ್ನು ಆನಂದಗೊಳಿಸಿದರು.
ಆನಂತರ ಮಧುರೆಯ ಆಸ್ಥಾನ ಮಹಾಪಂಡಿತರೂ, ಷಡರ್ಶನಪಾರಂಗತರೂ ಆದ ಲಕ್ಷ್ಮೀನರಸಿಂಹಾಚಾರ್ಯರು ಹೀಗೆ ವರ್ಣಿಸಿ ಸ್ತುತಿಸಿದರು -
ವ್ಯಾಖ್ಯಾ ವಿಖ್ಯಾತಕೀರ್ತಿಭ್ರಜಕಜನಚಯೋದ್ದಾರ ಕಾರುಣ್ಯಮೂರ್ತಿಃ |
ಸ್ಫೂರ್ತಿಸ್ಟಾನಾದಶೀ ತೇ ನಿಖಿಲನಿಗಮಷಡ್ಡರ್ಶನಾದಿಷ್ಟಜಸ್ರಮ್ |
ವೈರಾಜದ್ರಾಘವೇಂದ್ರಾ ಪ್ರತಿಹತ ವಿಭವದಾರ ಗಾಂಭೀರ್ಯಶಾಲೀ |
ಪ್ರಾಚೀನಾಚಾರಪೀಠಪ್ರಭುರಖಿಲಗುಣೈಃ ಕೋಸ್ತಿ ಧನ್ಯಸದನಃ ||
ಸ್ವಾಮಿ, ವಾಖ್ಯಾನ-ಪ್ರವಚನಗಳಲ್ಲಿ ಪ್ರಸಿದ್ಧ ಕೀರ್ತಿಯುಳ್ಳವರೂ, ಆಶ್ರಿತ ಭಜಕಜನ ಸಮುದಾಯವನ್ನುದರಿಸುವುದರಲ್ಲಿ ಕಾರುಣ್ಯಮೂರ್ತಿಗಳೂ, ವೇದ ವೇದಾಂಗಷಡ್ವರ್ಗನಗಳಲ್ಲಿ ಅನನ್ಯ ಸಾಧಾರಣ ಸ್ಫೂರ್ತಿಯುಳ್ಳವರೂ, ಅತ್ಯಂತವಾಗಿ ರಾರಾಜಿಸುವ (ಶ್ರೀರಾಘವೇಂದ್ರ) ಶ್ರೀರಾಮಚಂದ್ರನಂತೆ ಅಪ್ರತಿಹತ ವೈಭವ ಔದಾರ್ಯ-ಗಾಂಭೀರ್ಯಗಳಿಂದ ಶೋಧಿಸುವವರೂ ಆದ ಹೇ ಶ್ರೀರಾಘವೇಂದ್ರಗುರುಸಾರ್ವಭೌಮರೇ! ಪ್ರಾಚೀನಾಚಾರ್ಯರ ಅಂದರೆ ಶ್ರೀಹಂಸನಾಮಕಪರಮಾತ್ಮ ಪ್ರವರ್ತಿತ ಜ್ಞಾನಪೀಠಾಧೀಶ್ವರರಾದ ಶ್ರೀಮಧ್ವ-ಜಯಮುನಿ-ಕವೀಂದ್ರ-ವಿಬುಧೇಂದ್ರ-ವಿಜಯೀಂದ್ರ-ಸುಧೀಂದ್ರರು ಮಂಡಿಸಿದ ಮಹಾಪೀಠದಲ್ಲಿ ವಿರಾಜಿಸುವ ನಿಮಗಿಂತ ಭಿನ್ನರಾದ ಧನ್ಯರು ಬೇರಾರಿದ್ದಾರೆ! ಯಾರೂ ಇಲ್ಲವೆಂದೂ ಭಾವ.
ಮಹಾಕವಿಗಳ ಕವಿತಾಸ್ವಾರಸ್ಯದಿಂದ ಮುದಿತರಾದ ವಿದ್ವಜ್ಜನರು ಕವಿಗಳು ಕರತಾಡನದಿಂದ ಆನಂದವನ್ನು ವ್ಯಕ್ತಪಡಿಸಿದರು. ಆನಂತರ ಪಂಡಿತಮಾರ್ತಾಂಡ ವೀರರಾಘವಾಚಾರ್ಯರು ಹೀಗೆ ಸ್ತುತಿಸಿದರು -
ಕರ್ನಾಟಾವನಿ ರತ್ನಪೀಠವಿಲಸಚ್ಚಿ ವ್ಯಾಸಯೋಗೀ ಯಥಾ |
ಶ್ರೀಕೃಷ್ಣಾಖ್ಯ ನರೇಂದ್ರಸೇವಿತಪದಾಂಭೋಜೋ ವ್ಯರಾಜತುರಾ||
ಚಿತ್ರಂ ಶ್ರೀಗುರುರಾಘವೇಂದ್ರಯತಿಸಚಕ್ರೇಶ್ವರಃ ಕೀರ್ತಿಮಾನ್ |
ಭಾತಿ ಶ್ರೀರಘುನಾಥ ಭೂಮಿಪತಿನಾ ಸಂಸೇವ್ಯಮಾನೋಧುನಾ ||
ಕರ್ನಾಟಕ ರತ್ನಸಿಂಹಾಸನದಲ್ಲಿ ವಿರಾಜಿಸಿದ್ದ ಶ್ರೀವ್ಯಾಸರಾಜಯೋಗೀಂದ್ರರು ಪೂರ್ವದಲ್ಲಿ ಶ್ರೀಕೃಷ್ಣದೇವರಾಯ ಸಾರ್ವಭೌಮನಿಂದ ರತ್ನಾಭಿಷೇಕಾದಿಗಳಿಂದ ಸಂಸೇವಿತರಾದಂತೆ ಈಗ ಕೀರ್ತಿಶಾಲಿಗಳಾದ ಶ್ರೀರಾಘವೇಂದ್ರಯತಿಸಾರ್ವಭೌಮರು ಶ್ರೀರಘುನಾಥಭೂಪಾಲನಿಂದ ಸಂಸೇವ್ವರಾಗಿ ಪ್ರಕಾಶಿಸುತ್ತಿದ್ದಾರೆ. ಇದು ಅತ್ಯಂತ ಆಶ್ಚರ್ಯಕರವು - ಸಭಾಸದರು ಕರತಾಡನ ಮಾಡುತ್ತಿರಲು ಶಂಭುದಾಸ ಕವಿಗಳು ಹೀಗೆ ಹಾಡಿದರು -
ವಾದಸಂಗರಕಲಾಕುಶಲೋಯಂ ಮೋದತೀರ್ಥಮತಸಾರಸಹಂಸಃ |
ಭೇದವಾದಮತರಕ್ಷಣಶೀಲಃ ರಾಘವೇಂದ್ರಯತಿರಾಟ್ ಸಮೇಧತಾಮ್ ||
ವಾದಯುದ್ಧಕಲೆಯಲ್ಲಿ ಕುಶಲರಾದ ಶ್ರೀಮಧ್ವಮತವೆಂಬ ಸರೋವರದಲ್ಲಿ ವಿಹರಿಸುವ ರಾಜಹಂಸರಾದ, ದೈತಸಿದ್ಧಾಂತ ರಕ್ಷಣೆಯಲ್ಲಿ ಆಸಕ್ತರಾದ ಶ್ರೀರಾಘವೇಂದ್ರಯತಿರಾಜರು ಅಭಿವೃದ್ಧಿಸಲಿ !
ಆಗ ರಾಮಾಚಾರ್ಯ ಕವಿಗಳು ಹೀಗೆ ವರ್ಣಿಸಿದರು -
ಯಥಾ ಮಧ್ವಾರ ಸಂಸೇವೋ ಬದರಾಂ ಬಾದರಾಯಣಃ |
ತಥಾ ಭಾತಿ ಸುಧೀಂದ್ರಾರ್ಯ ರಾಘವೇಂದ್ರಾರ್ಚಿತೋSಧುನಾ
ಬದರಿಕಾಶ್ರಮದಲ್ಲಿ ಶ್ರೀಮಧ್ವಾಚಾರ್ಯರಿಂದ ಸೇವಿತರಾದ ಶ್ರೀವೇದವ್ಯಾಸದೇವರಂತೆ ಈಗ ಶ್ರೀರಾಘವೇಂದ್ರರಿಂದ ಪೂಜಿತರಾದ ಶ್ರೀಸುಧೀಂದ್ರತೀರ್ಥರು ಬೆಳಗುತ್ತಿದ್ದಾರೆ.
ಆನಂತರ ಅಸ್ಥಾನ ಕವಿಯತ್ರಿಯಾದ ಮಧುರವಾಣಿಯು -
ರಾಜತೈರಾವತಸ್ಕಂಧೇ ರಾಘವೇಂದ್ರ ಪುರಂದರಃ |
ತ್ರಿಲೋಕರಕ್ಷಣಾಸಕ ಸುಧೀಂದ್ರಪೇಂದ್ರವರ್ಧಿತಃ ||
ತ್ರಿಲೋಕರಕ್ಷಕನಾದ ದೇವೇಂದ್ರನು ಉಪೇಂದ್ರನ ಅನುಗ್ರಹದಿಂದ ಐರಾವತದ ಮೇಲೆ ರಾರಾಜಿಸುವಂತೆ, ಶ್ರೀಸುಧೀಂದ್ರರೆಂಬ ಉಪೇಂದ್ರನಿಂದ ವರ್ಧಿತರಾದ ಶ್ರೀರಾಘವೇಂದ್ರರೆಂಬ ಇಂದ್ರದೇವರು ತ್ರಿಲೋಕರಕ್ಷಣೆಗಾಗಿ ಗಜಸ್ಕಂದದಲ್ಲಿ (ಆನೆಯ ಮೇಲೆ ಅಂಬಾರಿಯಲ್ಲಿ) ರಾಜಿಸುತ್ತಿದ್ದಾರೆ.
ಅನಂತರ ಮತ್ತೊಬ್ಬ ರಾಮಭದ್ರಾಂಬೆ ಎಂಬ ಕವಿಯಿತ್ರಿಯು -
ಷಡ್ವರ್ಶಿನೀವಲ್ಲಭ-ಮಧ್ವಮನೇ ಸ್ಸದ್ದರ್ಶನಸ್ಥಾಪಕ ಸಾರ್ವಭೌಮಃ | ದಿಗ್ದರ್ಶಕೋಮೋಕ್ಷಪಥಸ್ಯಯೋಲಂತದರ್ಶನಂಸರ್ವಪುಮರ್ಥದೋಸ್ತು |
ಯಾರು ಷಡ್ಡರ್ಶನಗಳಲ್ಲಿ ಪ್ರಭುಗಳೂ, ಶ್ರೀಮಧ್ವಸಿದ್ಧಾಂತ ಸ್ಥಾಪಕ ಸಾರ್ವಭೌಮರೂ ಮೋಕ್ಷಮಾರ್ಗ ದಿಗ್ದರ್ಶಕರೂ ಆಗಿರುವರೋ, ಅಂಥ ಶ್ರೀರಾಘವೇಂದ್ರ ಗುರುಗಳ ದರ್ಶನವು ನಮಗೆ ಸಕಲ ಪುರುಷಾರ್ಥಗಳನ್ನೂ ಕರುಣಿಸಲು! ಉಭಯ ಕವಿಯಿತ್ರಿಯರ ಸರಸುಂದರ ಕವಿತೆಗಳನ್ನಾಲಿಸಿ ಸರ್ವರೂ ಕರತಾಡನಮಾಡಿ ಆನಂದವನ್ನು ವ್ಯಕ್ತಪಡಿಸಿದರು.
ತದನಂತರ ಪ್ರಖ್ಯಾತರಾದ ಕುಲಶೇಖರ ಭಟ್ಟಾಚಾರ್ಯರು -
ಭಕ್ತ ಶ್ರೀಹರೀಂದ್ರಪಾದಕಮಲೇ ಪ್ರಹ್ಲಾದರಾಜೇವ ನೋ |
ಶಕ್ತ ರಾಜತಿ ನಂದನಂದನರತೋ
ಬಾಹೀಕಭೂಮೀಂದ್ರವತ್ ||
ಕೀರ್ತ್ ವ್ಯಾಸಯತೀಂದ್ರವತ್ಸು ಮಹಿಮಾ ವೈರಾಗ್ಯಭಾಗ್ಯ ಜಯ- ತ್ಯದ ಶ್ರೀಗುರುರಾಘವೇಂದ್ರಸುರಗೌ ಮಧ್ವಾದಸಿಂಹಾಸನೇ ||
ಶ್ರೀನೃಸಿಂಹದೇವರ ಪಾದಕಮಲಗಳಲ್ಲಿ ಭಕ್ತಿಮಾಡುವುದರಲ್ಲಿ ಶ್ರೀಪ್ರಹ್ಲಾದರಾಜರಂತೆಯೂ, ಶಕ್ತಿಯಲ್ಲಿನಂದಕುಮಾರನಾದ ಶ್ರೀಕೃಷ್ಣನಲ್ಲಿರತರಾದ ಬಾಕರಾಜರಂತೆಯೂ, ಅಸದೃಶ ಕೀರ್ತಿ ಮತ್ತು ಮಹಿಮಾ-ವೈರಾಗ್ಯಭಾಗ್ಯಗಳಲ್ಲಿ ಶ್ರೀವ್ಯಾಸರಾಜರಂತೆಯೂ, ಈಗ ಶ್ರೀರಾಘವೇಂದ್ರತೀರ್ಥರೆಂಬ ಕಾಮಧೇನುವು (ಮತ್ತು ಪ್ರಕಾಶವೂ ಹಾಗೂ ಅವರ ವಾಕ್ಯವೂ) ಶ್ರೀಮದಾಚಾರ್ಯರ ಮುಖ್ಯ ವಿದ್ಯಾಸಿಂಹಾಸನದಲ್ಲಿ ಜಯಶೀಲರಾಗಿ ರಾಜಿಸುತ್ತಿದ್ದಾರೆ.
ಸಂಭ್ರಮ-ಸಡಗರ-ಕರತಾಡನಗಳ ಮಧ್ಯೆ ಮೇಲೆದ್ದು ನಿಂತ, ತರುಣರೂ, ಕವಿ ಕುಲಾವತಂಸರೂ ಆದ ನಾರಾಯಣಾಚಾರ್ಯರು ಆನಂದಬಾಷ್ಪವು ಹರಿಯುತ್ತಿರಲು ಗದ್ಗದಕಂಠದಿಂದ ಇಂತು ಬಣ್ಣಿಸಿದರು.
ಯೇ ನಿತ್ಯಂ ಗುರುರಾಘವೇಂದ್ರ ಚರಣಾಂಭೋಜಂ ಭಜಂತ್ಪಾದರಾ- ತತ್ಕಾರುಣ್ಯಭರೇಣ ಸರ್ವಸುಕಲಾಪಾರೀಣತಾಂ ಮಂಗಲಂ |
ವಾದೇ ವೈರಿಸುಧೀಜಯಂ ಶ್ರುತಿಮತಸೋತ್ಕರ್ಷಣೇ ಧಿಷ್ಠತಾಂ
ಮೊದಂತೇ ಭುವನೇ ಸುಕೀರ್ತಿಲಸಿತಾವಾಪ್ತಕಾಮಾ ಧ್ರುವಮ್ ||
ಯಾರು ಪ್ರತಿದಿನವೂ ಗುರುವರರಾದ ಶ್ರೀರಾಘವೇಂದ್ರಸ್ವಾಮಿಗಳ ಪಾದಕಮಲಗಳನ್ನು ಭಕ್ತಿಯಿಂದ ಭಜಿಸುವರೋ, ಅಂಥವರು ಶ್ರೀಗುರುವರರಕಾರುಣ್ಯಾತಿಶಯದಿಂದ ಸಕಲವಿದ್ಯೆಗಳಲ್ಲಿ ಪ್ರಾವೀಣ್ಯವನ್ನೂ, ಮಂಗಳವನ್ನೂ, ವಾದದಲ್ಲಿ ಪ್ರತಿವಾದಿ ದಿಗ್ವಿಜಯವನ್ನೂ, ವೈದಿಕಮತವನ್ನು ಉತ್ಕರ್ಷಿಸುವ ವಿಷಯದಲ್ಲಿ ಪಾಂಡಿತ್ಯವನ್ನೂ ಪಡೆದು ಸರ್ತಿವಿರಾಜಿತರಾಗಿ ಜಗತ್ತಿನಲ್ಲಿ ತಮ್ಮೆಲ್ಲ ಮನೋಭೀಷ್ಟಗಳನ್ನೂ ಹೊಂದಿ ಸುಖಿಸುತ್ತಾರೆ. ಇದು ನಿಶ್ಚಿತವು!
ಆಗ ಎಲ್ಲರೂ “ಸಾಧು, ಸಾಧು” ಎಂದು ತರುಣಕವಿಯನ್ನು ಶ್ಲಾಘಿಸಿ ಗುರುಗಳ ಜಯಕಾರಮಾಡಿದರು. ಅನಂತರ ಅನೇಕ ಕರ್ನಾಟಕಾಂಧ್ರ ದ್ರವಿಡ ಭಾಷಾ ಕವಿಗಳು ಗುರುಗಳನ್ನು ವಿವಿಧ ರೀತಿಯಿಂದ ಬಣ್ಣಿಸಿ ಕೊಂಡಾಡಿದರು.
ಆಗ ಸಕಲಸಭಾಸದರೂ ಪರಮಾನಂದದಿಂದ ಗುರುವರರನ್ನು ಸ್ತುತಿಸುತ್ತಾ ಭಕ್ತಿಪರವಶರಾಗಿ ಜಯಧ್ವನಿಗೈಯುತ್ತಿರಲು ನೂತನ ಜಗದ್ಗುರುಗಳು ರಾಜಾಧಿರಾಜರು ತಮಗರ್ಪಿಸಿದ ಸುವರ್ಣರತ್ನಾದಿಗಳನ್ನು ಪಂಡಿತರು, ಕವಿಗಳು, ಸಾಹಿತಿಗಳು ಕಲೆಗಾರರು, ವೈದಿಕಭೂಸುರರಿಗೆ ದಾನಮಾಡಿದರು. ಶ್ರೀಯತೀಂದ್ರರ ವಿದ್ವಜ್ಜನ ಪಕ್ಷಪಾತ ಔದಾರಾದಿಗಳನ್ನು ಸಜ್ಜನರು ಮುಕ್ತಕಂಠದಿಂದ ಕೊಂಡಾಡಿದರು.
ಆ ತರುವಾಯ ನೂತನ ಜಗದ್ಗುರುಗಳು ವಿದ್ದತ್ತೂರ್ಣವಾಗಿ, ಸಕಲವೇದಾದಿ ಶಾಸ್ತ್ರಪ್ರಮಾಣೋದಾಹರಣ ಪೂರ್ವಕವಾಗಿ ಅಚ್ಚಲಿತವಾಣಿಯಿಂದ “ವಿಷ್ಟೋ ಸರ್ವೋತ್ತಮತ್ವಂ ಚ ಸರ್ವದಾ ಪ್ರತಿಪಾದಯ” ಎಂಬ ಆದಿಗುರುಗಳ ಅಪ್ಪಣೆಯನ್ನು ಅನುಸರಿಸಿ ಶ್ರೀಹರಿಸರ್ವೋತ್ತಮತ್ವವನ್ನು ಎತ್ತಿಹಿಡಿದು ಉಪನ್ಯಾಸಮಾಡಿದರು. ಗಂಗಾಪ್ರವಾಹದಂತೆ ಗುರುಗಳ ವದನಾರವಿಂದದಿಂದ ಹೊರಹೊಮ್ಮಿದ ಶ್ರೀಮದಾನಂದತೀರ್ಥ ಭಾಗೀರಥಿಯಲ್ಲಿ ಮಿಂದು ಸಮಸ್ತಸಭಿಕರೂ ಪರಮಾನಂದದಿಂದ ಗುರುವರ್ಯರನ್ನು ಸ್ತುತಿಸಿದರು. ಆನಂತರ ರಾಜರು-ರಾಜಪ್ರತಿನಿಧಿಗಳು, ದರ್ಬಾರಿನ ಶ್ರೀಮಠದ ಪ್ರಮುಖ ಪಂಡಿತರಿಗೆ ಫಲಮಂತ್ರಾಕ್ಷತೆಯನ್ನು ಅನುಗ್ರಹಿಸಿ ಶ್ರೀರಾಘವೇಂದ್ರತೀರ್ಥ ಗುರುವರ್ಯರು ರಘುನಾಥಭೂಪಾಲನ ಪ್ರಾರ್ಥನೆಯಂತೆ, ಗುರುಪಾದರ ಅಪ್ಪಣೆಯಂತೆ ಆನೆಯ ಮೇಲೆ ಅಲಂಕೃತ ಅಂಬಾರಿಯಲ್ಲಿ ಕುಳಿತು ಸಮಸ್ತ ರಾಜಮರ್ಯಾದೆ, ಬಿರುದಾವಲಿ, ವಾದ್ಯವೈಭವಗಳೊಡನೆ ರಾಜಬೀದಿಗಳಲ್ಲಿ ಮೆರವಣಿಗೆ ಬಂದು ಸಹಸ್ರಾರು ಪುರಜನರಿಗೆ ದರ್ಶನವಿತ್ತು ಅನುಗ್ರಹಮಾಡಿ ಶ್ರೀಮಠದ ಬಿಡಾರಕ್ಕೆ ದಯಮಾಡಿಸಿದರು. ಅಲ್ಲಿ ಶ್ರೀಸುಧೀಂದ್ರರು-ಪ್ರಿಯಶಿಷ್ಯರನ್ನು ಸ್ವಾಗತಿಸಿದರು. ಸುಮಂಗಲೆಯರು ಕದಲಾರತಿ ಮಾಡಿದರು. ಸಕಲರೂ ಗುರುಗಳ ಜಯಜಯಕಾರ ಮಾಡುತ್ತಿರಲು ನೂತನ ಶ್ರೀಪಾದಂಗಳವರು ಶ್ರೀಮಠವನ್ನು ಪ್ರವೇಶಿಸಿದರು.
ಸ್ವಲ್ಪಕಾಲ ವಿಶ್ರಾಂತಿ ಪಡೆದ ಮೇಲೆ ಗುರುಗಳ ಜೊತೆಗೆ ಸ್ನಾನ-ಆತ್ಮೀಕ ಜಪತಪಾದನುಷ್ಠಾನಗಳನ್ನು ಪೂರೈಸಿ ಗುರುಪಾದರ ಅಪ್ಪಣೆಯಂತೆ ಪ್ರಪ್ರಥಮವಾಗಿ ಮಹಾಸಂಸ್ಥಾನ ಪೂಜೆಗೆ ತೊಡಗಿ ಶ್ರೀಮೂಲರಾಮಚಂದ್ರದೇವರನ್ನು ಭಕ್ತಿ-ಶ್ರದ್ಧೆಗಳಿಂದ ಆರಾಧಿಸಿದರು. ಶ್ರೀಯವರ ಆ ಪೂಜಾವೈಭವ, ತಲ್ಲೀನತೆ, ಶ್ರೀಹರಿ ಭಕ್ತಿಯಪರಾಕಾಷ್ಠತೆಗಳನ್ನು ಕಂಡು ನಿಖಿಲವಿದ್ದನ್ಮಂಡಲಿ, ಮಹಾರಾಜ, ಧರ್ಮಾಭಿಮಾನಿಗಳು ವಿಸ್ಮಯಾನಂದಭರಿತರಾದರು. ಶ್ರೀಸುಧೀಂದ್ರರ ಆನಂದವತವರ್ಣನಾತೀತ. ಆ ತರುವಾಯ ಸರ್ವಬ್ರಾಹ್ಮಣಸುವಾಸಿನಿಯರಿಗೆ ಶ್ರೀಯವರು ತೀರ್ಥ-ಪ್ರಸಾದಗಳನ್ನು ಕರುಣಿಸಿದ ಮೇಲೆ ಸಹಸ್ರಾರು ಜನರಿಗೆ ಭಕ್ಷ್ಯಭೋಜ್ಯ ಸಹಿತವಾಗಿ ಮೃಷ್ಟಾನ್ನಭೋಜನ-ದಕ್ಷಿಣಾಪ್ರದಾನಾದಿಗಳು ಅದ್ದೂರಿಯಿಂದ ಜರುಗಿತು.
ಅಂದಿನಿಂದ ಮೂರು ದಿನಗಳವರೆಗೆ ಸಾಮ್ರಾಜ್ಯ ಪಟ್ಟಾಭಿಷೇಕೋತ್ಸವಾಂಗವಾಗಿ ವಿದ್ಧತ್ತಭೆಯು ನೆರವೇರಿತು. ಪ್ರತಿದಿನ ಬೆಳಿಗ್ಗೆ - ಸಾಯಂಕಾಲ ವಾಕ್ಯಾರ್ಥ, ವಿಚಾರಗೋಷ್ಠಿ, ಪಂಡಿತರ ಉಪನ್ಯಾಸ, ಸಂಗೀತ, ಹರಿಕಥೆ, ಭಜನೆ, ಕವಿತಾಸ್ಪರ್ಧೆ, ಅಷ್ಟಾವಧಾನ, ಶತಾವಧಾನಗಳು ನಡೆಯುತ್ತಿದ್ದು, ಫಾಲ್ಗುಣ ಶುಕ್ಲ ಚತುರ್ಥಿ ದಿವಸ ಸಮಾರೋಪ ಸಮಾರಂಭವು ವೈಭವದಿಂದ ಜರುಗಿತು. ತಂಜಾಪುರಾಧೀಶ್ವರನು ಖುದ್ದು ನಿಂತು ಸಮಸ್ತ ಪಂಡಿತರು, ಕವಿ-ಗಾಯಕರು, ವೈದಿಕ-ಲೌಕಿಕ ರಾಜಕೀಯ ಪ್ರಧಾನ ಪುರುಷರುಗಳಿಗೆ ಉದಾರವಾಗಿ ರಜತ-ಸುವರ್ಣ-ವಸ್ತ್ರ-ಪೀತಾಂಬರ-ಶಾಲು ಮತ್ತು ಸಂಭಾವನೆಗಳನ್ನು ನೂತನ ಜಗದ್ಗುರುಗಳಿಂದ ಕೊಡಿಸಿ ಸರ್ವರನ್ನೂ ಆನಂದಪಡಿಸಿ ಕೀರ್ತಿ ಗಳಿಸಿದನು. ಶ್ರೀಸುಧೀಂದ್ರಗುರುಗಳು ಪ್ರಿಯಶಿಷ್ಯನಾದ ರಘುನಾಥ ಭೂಪಾಲನಿಗೆ “ಸದ್ಧರ್ಮ-ವಿದ್ವಜ್ಜನಾಶ್ರಯ” ಎಂಬ ಪ್ರಶಸ್ತಿಯನ್ನು ಮುಕ್ತಾಮಾಲೆ ಪೀತಾಂಬರಗಳೊಡನೆ ನೂತನ ಜಗದ್ಗುರುಗಳ ಅಮೃತಹಸ್ತದಿಂದ ಕೊಡಿಸಿ ಸನ್ಮಾನಿಸಿದರು. ಹೀಗೆ ಅತ್ಯಂತ ವೈಭವ-ಸಂಭ್ರಮ-ಶಾಸ್ತೋಕ್ತಪ್ರಕಾರವಾಗಿ ವೇದಾಂತಸಾಮ್ರಾಜ್ಯಾಭಿಷೇಕ ಮಹೋತ್ಸವವು ಯಶಸ್ವಿಯಾಗಿ ನೆರವೇರಿ ಸಾಂಗವಾಯಿತು.
ಮರುದಿನ ಮಹಾಸಂಸ್ಥಾನದೊಡನೆ-ಪ್ರಿಯವರಕುಮಾರರಿಂದೊಡಗೂಡಿ ರಘುನಾಥಭೂಪಾಲನಿಂದ ಬೀಳ್ಕೊಂಡು ಹೊರಟು ಶ್ರೀಸುಧೀಂದ್ರತೀರ್ಥರು ಕುಂಭಕೋಣಕ್ಕೆ ದಿಗ್ವಿಜಯ ಮಾಡಿಸಿದರು. ಕುಂಭಕೋಣದ ಸಕಲ ದೇವಾಲಯದವರು, ಪುರಜನರು, ಪೂರ್ಣಕುಂಭ, ವಾದ್ಯವೈಭವ-ಬಿರುದುಬಾವಲಿಗಳೊಡನೆ ನೂತನ ಪೀಠಾಧೀಶರನ್ನು ಸ್ವಾಗತಿಸಿ ಸುವರ್ಣ ಪಾಲಕಿಯಲ್ಲಿ ಮೆರವಣಿಗೆಯಿಂದ ವಿದ್ಯಾ ಮಠಕ್ಕೆ ಕರತಂದರು. ಬೀದಿಬೀದಿಗಳಲ್ಲಿ ಸ್ತ್ರೀಪುರುಷರು ಅತ್ಯಂತ ತೇಜಸ್ವಿಗಳಾದ ನೂತನ ಪೀಠಾಧೀಶ್ವರರ ದರ್ಶನಮಾಡಿ-ಪುಷ್ಪವೃಷ್ಟಿ ಜಯಜಯಕಾರಗಳಿಂದ ಭಕ್ತಿಯನ್ನು ಸಲ್ಲಿಸಿ ಕೃತಾರ್ಥರಾದರು.