|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

೬೪. ಸನ್ಯಾಸಾಶ್ರಮ ಪ್ರದಾನ

ಶ್ರೀಸುಧೀಂದ್ರತೀರ್ಥರು ಶ್ರೀವೇಂಕಟನಾಥಾಚಾರರಿಗೆ ರಾಜಸಭೆಯಲ್ಲಿ ಸನ್ಯಾಸಾಶ್ರಮ ನೀಡುವರೆಂಬ ವಾರ್ತೆಯು ಎಲ್ಲೆಡೆ ಹರಡಿ ತಂಜಾಪುರದ ಸುತ್ತಮುತ್ತಲಿನಿಂದ ಕವಿ, ಗಾಯಕ, ವಿದ್ವಾಂಸ ಧರ್ಮಾಭಿಮಾನಿಗಳು ಸಾವಿರಾರು ಜನರು ತಂಜಾವೂರಿಗೆ ಬಂದು ಸೇರಿದ್ದಾರೆ. ರಘುನಾಥಭೂಪಾಲನ ಅಪ್ಪಣೆಯಂತೆ ಅರಮನೆ ಮತ್ತು ನಗರವನ್ನು ಸುಂದರವಾಗಿ ಅಲಂಕರಿಸಲಾಗಿದೆ. ಎಲ್ಲೆಲ್ಲಿಯೂ ಸಂಭ್ರಮದ ವಾತಾವರಣ. 

ತಂಜಾವುರಾಧಿಪತಿಯು 'ರಾಜಗುರು'ಗಳು ತಮ್ಮ ಉತ್ತರಾಧಿಕಾರಿಗಳನ್ನು ನೇಮಿಸಿ ಸಾಮ್ರಾಜ್ಯಾಭಿಷೇಕವನ್ನು ನೆರವೇರಿಸಲು ಸಮಸ್ತ ವ್ಯವಸ್ಥೆಗಳನ್ನೂ ಮಾಡಿ ಶ್ರೀಯವರನ್ನು ಸ್ವಾಗತಿಸಲು ಸಕಲವೈಭವದಿಂದ ಕಾದು ನಿಂತಿದ್ದಾನೆ. ಶ್ರೀಸುಧೀಂದ್ರತೀರ್ಥರ ಸವಾರಿ ಚಿತ್ತೈಸಿದ ಕೂಡಲೇ ಎದುರುಗೊಂಡು ಸ್ವಾಗತಿಸಿ ಭವ್ಯಮಂದಿರದಲ್ಲಿ ಬಿಡಾರಮಾಡಿಸಿದನು.

ಶ್ರೀಶಾಲೀವಾಹನಶಕೆ ೧೪೫೩ ನೇ ದುರ್ಮತಿ ಸಂವತ್ಸರದ ಫಾಲ್ಗುಣ ಶುದ್ಧ ಪಾಡ್ಯ ಪ್ರಾತಃಕಾಲ ಶ್ರೀಮಠದಲ್ಲಿ ಅಸಾಧ್ಯ ಜನಸಂದಣಿ, ಸನ್ಯಾಸಾಶ್ರಮ ಪ್ರದಾನ ಸಮಾರಂಭನಿರೀಕ್ಷಣ ಕುತೂಹಲದಿಂದ ಸಹಸ್ರಾರು ಜನ ವಿದ್ವಾಂಸರು ಧಾರ್ಮಿಕರು. ಭೂಸುರರು, ಪುರಪ್ರಮುಖರು,ರಾಜ್ಯದ ಮಂತ್ರಿ, ಸೇನಾನಿ ರಾಜಕೀಯ ದುರಂಧರರು, ಮಹಾರಾಜ ರಘುನಾಥನಾಯಕ, ಆಸ್ಥಾನಪುರೋಹಿತರೇ ಮೊದಲಾಗಿ ಎಲ್ಲರೂ ತಮತಮಗೆ ವಿಹಿತಾಸನಗಳಲ್ಲಿ ಮಂಡಿಸಿದ್ದಾರೆ. ಶ್ರೀಯವರ ಎಡಬಲ ಪಾರ್ಶ್ವಗಳಲ್ಲಿ ಶ್ರೀಮಠದ ಪಂಡಿತಮಂಡಲಿಯೊಡನೆ ವೆಂಕಟನಾಥಾಚಾರ್ಯ, ಲಕ್ಷ್ಮೀನರಸಿಂಹಾಚಾರ, ರಾಮಚಂದ್ರಾಚಾರ ಪ್ರಧೃತಿ ಆತ್ಮೀಯರು ಕುಳಿತಿದ್ದಾರೆ. 

ಆಗ ಶ್ರೀಶ್ರೀಪಾದಂಗಳವರು ಶ್ರೀಮೂಲರಘುಪತಿ ವೇದವ್ಯಾಸರು ಸ್ವಪ್ನದಲ್ಲಿ ನೀಡಿದ ಆದೇಶಾದಿಗಳನ್ನು ವಿವರಿಸಿ, ತಮ್ಮ ಪ್ರಿಯಶಿಷ್ಯರೂ, ಮಹಾಪಂಡಿತರೂ, ಷಾತ್ವಿಕಕುಲಭೂಷಣರೂ ಆದ ಶ್ರೀವೆಂಕಟನಾಥಾಚಾರ್ಯರನ್ನು ತಮ್ಮ ಉತ್ತರಾಧಿಕಾರಿಗಳನ್ನಾಗಿ ನೇಮಿಸಿ ಅವರನ್ನು ಶ್ರೀಮದಾಚಾರ್ಯರ ವೇದಾಂತಸಾಮ್ರಾಜ್ಯದಲ್ಲಿ ಕೂಡಿಸಿ ಸಾಮ್ರಾಜ್ಯಾಭೀಷೇಕಮಾಡುವ ವಿಚಾರವನ್ನು ಹೇಳಿ ಶ್ರೀಸುಧೀಂದ್ರತೀರ್ಥರು ಬಂಗಾರದ ತಟ್ಟೆಯಲ್ಲಿ ಎರಡು ಪೂರ್ಣಫಲಗಳನ್ನಿಟ್ಟು ವೆಂಕಟನಾಥಾಚಾರ್ಯರನ್ನು ಹತ್ತಿರ ಕರೆದು ಅವರಿಗೆ ಸನ್ಯಾಸಸ್ವೀಕಾರಕ್ಕೆ ಫಲಮಂತ್ರಾಕ್ಷತಾ ಪ್ರಧಾನಮಾಡಿದರು. ಆಗ ದುಂದುಭಿ ಮಂಗಳವಾದ್ಯಗಳು ಮೊಳಗಿದವು. ಸಮಸ್ತರೂ ಹರ್ಷದಿಂದ ಜಯ ಧ್ವನಿಮಾಡಿದರು. ವೇಂಕಟನಾಥರು “ಗುರುಗಳ ಆಜ್ಞೆಯನ್ನು ಶಿರಸಾ ಧರಿಸಿದ್ದೇನೆ” ಎಂದು ವಿಜ್ಞಾಪಿಸಿದರು. ಆಗ ರಾಮಚಂದ್ರಾಚಾರರು ಉತ್ತರಾಧಿಕಾರನೇಮಕದ ಶ್ರೀಮುಖವನ್ನು ಓದಿ ವೇಂಕಟನಾಥರಿಗೆ ನೀಡಿದರು. ಅನಂತರ ಕಾರ್ಯಕ್ರಮ ಮುಗಿಯಿತು. 

ಎಲ್ಲರೂ ಹೊರಟುಹೋದಮೇಲೆ ಶ್ರೀಸುಧೀಂದ್ರತೀರ್ಥರು ಸನ್ಯಾಸಾಶ್ರಮ ಸ್ವೀಕಾರಕ್ಕೆ ಅವಶ್ಯವಾದ ಸಮಸ್ತ ಸಾಮಗ್ರಿಗಳನ್ನೂ ಸಿದ್ಧಪಡಿಸಿ ವೇದವಿದ್ಯಾವಿಶಾರದರೂ ಪ್ರಯೋಗಶಾಸ್ತ್ರಕುಶಲರೂ, ಸಂಪ್ರದಾಯಾಭಿಜ್ಞರೂ ಆದ ನಾಲ್ಕು ಜನ ಪಂಡಿತರು. ರಾಮಚಂದ್ರಾಚಾರ, ಲಕ್ಷ್ಮೀನರಸಿಂಹಾಚಾರರ ಮೇಲ್ವಿಚಾರಣೆಯಲ್ಲಿ ಸನ್ಯಾಸಾಶ್ರಮಸ್ವೀಕಾರಕ್ಕಾಗಿ ವೇಂಕಟನಾಥಚಾರರನ್ನು ಕಳುಹಿಸಿಕೊಟ್ಟರು. ಶ್ರೀಗಳವರ ಅಪ್ಪಣೆ ಪಡೆದು ಸಕಲರೂ ಕಾವೇರಿ ನದಿಯ ಪ್ರದೇಶಕ್ಕೆ ತೆರಳಿದರು. ಅಲ್ಲಿ ಅರಮನೆಯ ಸೇವಕರು ಕಾವೇರಿತಟದ ಮಂಟಪದ ಸುತ್ತಮುತ್ತ ಮತ್ತಾರೂ ಬಾರದಂತೆ ಪಹರೆ ಕಾಯುತ್ತಿದ್ದರು. ತರುವಾಯ ರಾಮಚಂದ್ರಾಚಾರ್ಯಾದಿಗಳು ನೇತೃತ್ವದಲ್ಲಿ ವಿದ್ಯುಕ್ತರೀತಿಯಿಂದ ಸನ್ಯಾಸಾಶ್ರಮಸ್ವೀಕಾರ ಕಾರ್ಯವು ಪ್ರಾರಂಭವಾಯಿತು. 

ಸನ್ಯಾಸ ಮತ್ತು ಅದರ ಭೇದಗಳ ವಿಚಾರವಾಗಿ ತಿಳಿಯುವುದು ಅವಶ್ಯವಾದ್ದರಿಂದ ಈಗ ಅದರ ಮಹತ್ವವನ್ನು ಇಲ್ಲಿ ನಿರೂಪಿಸಲು ಪ್ರವರ್ತಿಸಿದ್ದೇವೆ. 

ಜ್ಞಾನಯೋಗಕ್ಕೆ ಸನ್ಯಾಸ ಪ್ರಶಸ್ತವಾದದ್ದು. ಭಗವಂತನನ್ನು ಜ್ಞಾನ-ಭಕ್ತಿಗಳಿಂದ ಒಲಿಸಿಕೊಂಡು ಮೋಕ್ಷವನ್ನು ಪಡೆಯಲು ಸನ್ಯಾಸಿಯು ಉತ್ತಮಾಧಿಕಾರಿಯೆಂದು ಪ್ರಮಾಣಗಳು ಸಾರುವವು. ಬ್ರಹ್ಮಚರ್ಯಾದಿ ನಾಲ್ಕು ಆಶ್ರಮಗಳಲ್ಲಿ ಸನ್ಯಾಸವು ಬಹು ಶ್ರೇಷ್ಠವಾದುದು, “ಯದಹರೇವ ವಿರಜೇತ್ ತದಹರೇವ ಪ್ರವ್ರಜೇತ್” ಮುಂತಾದ ಶ್ರುತಿಗಳು “ಯದಾ ವಿರಕ್ತಃ ಪುರುಷಃ ಪ್ರಜಾಯತೇ । ತದೇವ ಸನ್ಯಾಸ ಇತಿ ಶ್ರುತೌ ಶ್ರುತಃ” ಎಂಬ ಮಧ್ವವಿಜಯ ಪ್ರಮಾಣಗಳು ಮಾನವನು ವಿರಕ್ತನಾದಾಗಲೇ ಸನ್ಯಾಸವನ್ನು ಸ್ವೀಕರಿಸಬೇಕೆಂದು ನಿರೂಪಿಸುವವು. “ಆಬ್ರಹ್ಮಸ್ತಂಭಪರ್ಯಂತು ಅಸಾರಂಚಾಪ್ರನಿತಕು/ ವಿಜ್ಞಾಯ ಜಾತವೈರಾಗ್ಯೂ ವಿಷ್ಣುಪಾದೈಕ ಸಂಶ್ರಯಃ || ಸ ಉತ್ತಮೋಧಿಕಾರಿ ಸ್ಯಾತ್ ಸನ್ಯಸ್ವಾಖಿಲಕರ್ಮ ವಾನ್ ||”- ಬ್ರಹ್ಮದೇವರಿಂದಾರಂಭಿಸಿ ತೃಣಜೀವ ಪರ್ಯಂತವಾಗಿ ಸಕಲವೂ ನಿಸ್ಸಾರ-ಅಶಾಶ್ವತವೆಂದರಿತು ಪರಮಾತ್ಮನ ಪಾದಕಮಲಗಳಲ್ಲಿ ಸಕಲ ಕರ್ಮವನ್ನೂ ಸಮರ್ಪಿಸಿ ವೈರಾಗ್ಯಶಾಲಿಯಾದವನೇ (ಸನ್ಯಾಸಿ) ಮೋಕ್ಷಜನಕ ಬ್ರಹ್ಮಜ್ಞಾನಕ್ಕೆ ಉತ್ತಮಾಧಿಕಾರಿಯೆಂದು 'ಭಾಗವತ ತಂತ್ರವು ಹೇಳುತ್ತದೆ. ಸನ್ಯಾಸಾಶ್ರಮದ ಹಿರಿಮೆ, ಅವುಗಳ ಭೇದಕ್ರಮಗಳನ್ನು ಮನು, ಯಾಜ್ಞವಲ್ಕ, ಅಂಗೀರಸ, ಯಮ, ವ್ಯಾಸ, ಪರಾಶರ, ಕಾತ್ಯಾಯನ, ಪೌಲಸ್ಯ, ಬೋಧಾಯನ ಮುಂತಾದ ಸ್ಮೃತಿಕಾರರು, ಧರ್ಮಸಿಂಧು, ನಿರ್ಣಯಸಿಂಧು, ಸ್ಮೃತಿಮುಕ್ತಾವಳಿ ಮೊದಲಾದ ಧರ್ಮಶಾಸ್ತ್ರನಿಬಂಧನಕಾರರು ನಿರೂಪಿಸಿದ್ದಾರೆ. ಆಶ್ರಮಧರ್ಮಗಳಾದ ಬ್ರಹ್ಮಚರ್ಯ, ಗಾರ್ಹಸ್ಥ, ವಾನಪ್ರಸ್ಥ - - ಈ ಆಶ್ರಮಗಳ ನಂತರ, ಆಯುಷ್ಯದ ಮೂರನೆಯ ಭಾಗವನ್ನು ಸನ್ಯಾಸಕ್ಕಾಗಿ ಮೀಸಲಿರಿಸಿ, ಒಂದಾದ ಮೇಲೊಂದರಂತೆ ಆಶ್ರಮಗಳನ್ನು ಸ್ವೀಕರಿಸಿ ತರುವಾಯ ಸರ್ವಸಂಗ ಪರಿತ್ಯಾಗಮಾಡಿ, ಹತಹೋಮನೂ, ಜಿತೇಂದ್ರಿಯನೂ, ಭಿಕ್ಷಾಬಲಿಪರಿಶ್ರಾಂತನೂ ಆಗಿ ಪರಿವ್ರಾಜಕನಾಗಬೇಕು, ಸನ್ಯಾಸವು ನಾಲ್ಕು ವಿಧವಾಗಿವೆ. ೧) ಕುಟೀಚಕ, ೨) ಬಹೂದಕ, ೩) ಹಂಸ, ೪) ಪರಮಹಂಸ ಎಂದು. ಈ ನಾಲ್ಕರಲ್ಲಿ ಪರಮಹಂಸಾಶ್ರಮವೇ ಅತಿಶ್ರೇಷ್ಠ ಹಾಗೂ ಪ್ರಧಾನವೆಂದು ಐತರೇಯಶ್ರುತಿಯು ಘೋಷಿಸುವುದು. “ಅಥ ಪರಿವ್ರಾಡೇಕಶಾಟೀ ಪರ ಹಿತೋ ಮುಖೋದರ ಪಾತ್ರಃ | ಅರಣ್ಯ ನಿಲಯಃ | ಭಿಕ್ಷಾರ್ಥಂ ಗ್ರಾಮಂ ಪ್ರವಿಶೇದಾಸಾಯಂ | ಪ್ರದಕ್ಷಿಣೇನ ಅತಿಚಿಕಿತ್ಸಾರ್ವವರ್ಣಿಕಂ ಭೈಕ್ಷಾಚರ್ಯಂ ಅಭಿಶಪ್ತಪತಿತವರ್ಜಮ್ | ಅಯಜ್ಯೋಪವೀತೀ ಶೌಚನಿಷ್ಠ | ಕಾಮಮೇಕಂ ವೈಣವಂ ದಂಡವಾದೀತ ” ಎಂಬ ಶ್ರುತಿಯಂತೆ ಪರಮಹಂಸ ಸನ್ಯಾಸವೇ ವಿಹಿತವಾದುದು. 

ಪರಿವ್ರಾಜಕರು ಒಂದು ಕಾಷಾಯ ವಸ್ತ್ರವನ್ನು ಧರಿಸಿ, ಪರಹಿತರತನಾಗಿ, ಕಮಂಡಲುಧಾರಿಯಾಗಿ, ಅರಣ್ಯದಲ್ಲಿ ಗುರುಕುಲವನ್ನು ಸ್ಥಾಪಿಸಿ, ಭಿಕ್ಷೆಗಾಗಿ ಸಾಯಂಕಾಲದವರೆಗೆ ಗ್ರಾಮವನ್ನು ಪ್ರವೇಶಿಸಿ, ಪ್ರದಕ್ಷಿಣಾಕಾರವಾಗಿ ಗ್ರಾಮದಲ್ಲಿ ಸಂಚರಿಸಿ ಚಿಕಿತ್ಸಕ ಬುದ್ದಿಯಿಲ್ಲದ ಚಾತುರ್ವಣ್ಯ್ರದವರು ನೀಡುವ ಭಿಕ್ಷಾಸಾಮಗ್ರಿ (ಪದಾರ್ಥ) ಗಳನ್ನು ಪಡೆಯಬೇಕು. ಶಾಪಗ್ರಸ್ತರು, ಪತಿತರಲ್ಲಿ ಭಿಕ್ಷೆ ಸ್ವೀಕರಿಸಬಾರದು. ಯತಿಯು ಯಜ್ಯೋಪವೀತರಹಿತನಾಗಿ, ಬಾಹ್ಯಾಂತರ ಶೌಚನಿಷ್ಠನಾಗಿ, ಒಂದು ವೇಣು (ಬಿದರು)ವಿನ ದಂಡವನ್ನು ಧರಿಸಬೇಕು- ಇದು ಮೇಲಿನ ಶ್ರುತಿಯ ಅರ್ಥ. 

ಪರಿವ್ರಾಜಕನು ಸ್ವಾತಂತ್ಯದಿಂದ ಸರ್ವಕರ್ಮಗಳನ್ನೂ ನಾನು ಮಾಡುವೆನೆಂಬ ಭಾವನಾರಹಿತನಾಗಿ, ಫಲಾನುಸಂಧಾನವಿಲ್ಲದೆ ಮಾಡುವ ಸಮಸ್ತ ಸನ್ಯಾಸಾಶ್ರಮ ಕರ್ಮಗಳನ್ನು ಭಗವತ್ಸರ್ವಕರ್ತೃತ್ವ ಕಾರಯಿತ್ವಾದನುಸಂಧಾನಪೂರ್ವಕವಾಗಿ ಭಗವದರ್ಪಣ ಬುದ್ಧಿಯಿಂದ ಆಚರಿಸಬೇಕು - ಎಂದು ಶ್ರುತ್ಯಾದಿಗಳು ಉಪದೇಶಿಸುವವು. ಬೋಧಾಯನರು ಒಂದು ದಂಡ, ಸರ್ವಸಂಗ ಪರಿತ್ಯಾಗ, ಶಿಖಾ, ಯಜೋಪವೀತವಿಲ್ಲದೆ ಕಾಷಾಯಧಾರಿಯಾಗಿರುವುದು 'ಪರಮಹಂಸ ಲಕ್ಷಣ'ವೆಂದು ಹೇಳುವರು, ಪರಮಹಂಸರು - ದೇವಪೂಜಾ, ವಾದಮಾಡುವಾಗ, ದಂಡಧಾರಿಗಳಾಗಿರುವುದು ನಿತ್ಯ ಧರ್ಮ, ಅವರು ದಂಡ, ಶಿಖಾ, ಆಚ್ಛಾದನವಿಟ್ಟುಕೊಂಡು ಚರಿಸುವರೆಂದು ಒಂದು ಶ್ರುತಿ ಹೇಳುವುದು. ಇದು ತ್ರಿದಂಡಿ ಸನ್ಯಾಸಿಗಳ ವಿಚಾರ. 

ಪರಮಹಂಸಾಶ್ರಮದಲ್ಲೂ ಎರಡೂ ಬಗೆಯಿದೆ. ಸಾಮಾನ್ಯ ಪರಮಹಂಸರಿಗೆ ಯಾವ ವೈಭವಗಳೂ ಇರುವುದಿಲ್ಲ. ಆದರೆ ಶ್ರೀಹಂಸನಾಮಕ ಪರಮಾತ್ಮನಿಂದ ಪ್ರವೃತ್ತವಾದ ಜ್ಞಾನ ಪರಂಪರೆಯಲ್ಲಿ ಬಂದ ಪೀಠಾಧೀಶ್ವರರು ಪರಮಹಂಸ ಕುಲತಿಲಕರಾದುದರಿಂದ “ವೈಭವೋ ರಾಜವಸ್ಕೃತಃ” ಮುಂತಾದ ಪ್ರಮಾಣಗಳಂತೆ ಅವರಿಗೆ ರಾಜಾಧಿರಾಜರಿಗಿರುವಂತೆ ಅಂಬಾರಿ, ಸ್ವರ್ಣ-ರಜತಪೀಠಗಳು, ಛತ್ರ, ಚಾಮರ, ಪಾಲಕಿ, ದಿವಟಿಕೆ, ಸುವರ್ಣ ರಜತ-ದಂಡಧಾರಿಗಳು, ತಾಳಸ್ತುತಿ ಪಾಠಕರು, ವಾದ್ಯವೈಭವ ಮುಂತಾದ ಗೌರವ, ಬಿರುದಾವಳಿಗಳೂ ಉಕ್ತವಾಗಿವೆ. ಈ ಪಾರಿವ್ರಾಜಕ ಪೀಠಾಧೀಶ್ವರರು ದೇವಪೂಜಾ, ತೀರ್ಥಕ್ಷೇತ್ರಯಾತ್ರಾದಿ ಕಾಲಗಳಲ್ಲಿ ದಂಡಧಾರಿಗಳಾಗಿರಬೇಕು. ಪರಮಹಂಸ ಪೀಠಾಧಿಪತ್ಯವು ಜ್ಞಾನ-ಭಕ್ತಿ-ವೈರಾಗ್ಯಾಭಿವೃದ್ಧಿ- ಗಾಗಿಯೂ, ಸ್ವಾಶ್ರಮೋಚಿತ ಜಪ-ತಪಾದನುಷ್ಠಾನ, ಪಾಠ-ಪ್ರವಚನ ಅತತ್ವಾವೇದಕಗಳಾದ ದುರ್ಮತಗಳ ನಿರಸನಪೂರ್ವಕ ಅನಾದ್ಯವಚ್ಛಿನ್ನ ಪರಂಪರಾಪ್ರಾಪ್ತ ವೈದಿಕ ಸದೈಷ್ಣವಸಿದ್ಧಾಂತ ಪ್ರತಿಷ್ಠಾಪನ, ತತ್ವ-ಧರ್ಮೋಪದೇಶ, ಮಂತ್ರಮುದ್ರಾಧಾರಣ- ಗುರೂಪದೇಶದ್ವಾರಾ ಶಿಷ್ಯ-ಭಕ್ತಜನೋದ್ದಾರ, ಲೋಕಕಲ್ಯಾಣ, ಪರಹಿತಸಾಧನೆ, ಶ್ರವಣ-ಮನನ ನಿದಿಧ್ಯಾಸನಪೂರ್ವಕವಾಗಿ ಭಗವದಪರೋಕ್ಷಸಿದ್ಧಿಗಾಗಿ ಮತ್ತು ತಪೋನಿಷ್ಠಾನ-ಜ್ಞಾನಪ್ರಸಾರಕ್ಕಾಗಿಯೇ ಇರುವುದರಿಂದ ಸಕಲ ರಾಜವೈಭವವೂ ಅವರ ಅಂತರ್ಗತರಾದ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಲಕ್ಷ್ಮೀನಾರಾಯಣನಿಗಾಗಿಯೇ ಎಂಬ ಅನುಸಂಧಾನ ಮಾಡುತ್ತಾ ಎಲ್ಲ ವೈಭವಯುಕ್ತರಾಗಿ ಜಗತ್ಕಲ್ಯಾಣ ಮಾಡಲೆಂದೇ ಶ್ರೀಹಂಸ ಪರಂಪರೆಯು ಪ್ರವೃತ್ತವಾಗಿರುವುದರಿಂದ ಅದು ಅವರಿಗೆ ವಿಹಿತವೇ ಆಗಿರುತ್ತದೆ.

ಇಂಥ ಪಾವನವಾದ ಪರಮಹಂಸಾಶ್ರಮವನ್ನು ದುರುಪಯೋಗಪಡಿಸುವುದು, ಅನರ್ಥಕಾರಕವೆಂದು ಪ್ರಮಾಣಗಳು ಸಾರುವವ, ವೈರಾಗ್ಯವಿಲ್ಲದೆ, ಜೀವಿಕಾನಿರ್ವಹಣಕ್ಕಾಗಿಯೇ ಸನ್ಯಾಸಸ್ವೀಕರಿಸಿದರೆ ನರಕಾದ್ಯನರ್ಥಗಳಿಗೆ ಗುರಿಯಾಗಬೇಕಾಗುವುದೆಂದು ಸ್ಮೃತಿಗಳು ಹೇಳುತ್ತವೆ. “ಏಕದಂಡು ಸಮಾಶ್ರಿತ್ಯ ಜೀವಂತಿ ಬಹವೋ ನರಾಃ | ನರಕೇ ಗೌರವೇ ಘೋರೇ ಕರ್ಮತ್ಯಾಗಾತ್ವತಂತಿ ತೇ ॥”, “ವೈರಾಗ್ಯಂವಿನಾ ಜೀವನಾದ್ಯರ್ಥಂ ಸನ್ಯಾಸೇ ತು ನರಕಾಃ”, “ಕಾಷ್ಠದಂಡೋ ಧೃತೋ ಯೇನ ಸರ್ವಾಶೀ ಜ್ಞಾನವರ್ಜಿತಃ | ಸಯಾತಿ ನರಕಾನ್ ಘೋರಾನ್ ||” ಇತ್ಯಾದಿ ಪ್ರಮಾಣಗಳು ಕೇವಲ ಒಂದು ಬಿದರಿನ ಕೋಲನ್ನು ಹಿಡಿದು, ಕಾವಿಬಟ್ಟೆಧರಿಸಿ, ಎಲ್ಲ ಬಗೆಯ ಆಶೆ-ಆಕಾಂಕ್ಷೆಗಳಿಂದ ಪೂರ್ಣನಾಗಿ, ವೈರಾಗ್ಯ-ಜ್ಞಾನ-ಭಕ್ತಿಶೂನ್ಯನಾಗಿ ತಪಸ್ಸೆಂದರೇನೆಂಬುದನ್ನೇ ಅರಿಯದ ಅಜ್ಞಾನಿಯಾಗಿ, ಧನ-ಕನಕಾಭರಣ-ಧರಣಿಗಳನ್ನು ತನ್ನ ಮಡದಿ ಮಕ್ಕಳಿಗಾಗಿ ಸಂಪಾದಿಸಿ ಕೊಡುತ್ತಾ, ಡಾಂಭಿಕತನದಿಂದ ಮಹಾಜ್ಞಾನಿ, ವಿರಕ್ತ, ತಪಸ್ವಿಯಂತೆ ನಟಿಸುತ್ತಾ, ಸಿಕ್ಕ ಸಿಕ್ಕಲ್ಲಿ ಸಿಕ್ಕಿದ್ದನ್ನು ತಿನ್ನುತ್ತಾ ಜಿಹ್ವಾ ಚಾಪಲ್ಯದಿಂದ ಭೋಜನಪ್ರಿಯನಾಗಿ, ಅಸೂಯಾ, ಈರ್ಷಾ, ದ್ವೇಷಾದಿಗಳಿಂದ ತುಂಬಿತುಳುಕುತ್ತಾ ಜ್ಞಾನಲವಲೇಶವಿಲ್ಲದ ಸನ್ಯಾಸಿಯು ವೇಷಧಾರಿಯೇ ವಿನಃ ಅವನೆಂದಿಗೂ, ಪರಮಹಂಸಪದಾರೂಢನಾಗಿದ್ದರೂ, ಪರಮಹಂಸನಾಗಲಾರ - ಮಾತ್ರವಲ್ಲ ಘೋರನರಕಾದಿಗಳಿಗೆ ಪಾತ್ರನಾಗು- ತ್ತಾನೆಂದು ಇದರಿಂದ ಸ್ಪಷ್ಟವಾಗಿ ವ್ಯಕ್ತವಾಗುವುದು. 

ಇಂದು ಜಗತ್ತಿನಲ್ಲಿ ಇಂಥವರೇ ಹೆಚ್ಚಾಗಿ ಕಂಡುಬರುತ್ತಿರುವುದರಿಂದ “ಏಕಃ ಪಾಪಾನಿ ಕುರುತೇ ಫಲಂ ಭುಕ್ತ ಮಹಾಜನಾಃ ॥” ಎಂಬಂತೆ ನಿಜವಾದ ಪರಮಹಂಸರಿಗೆ ಇಂಥವರಿಂದ ಅಗೌರವವಾಗುತ್ತಿರುವುದು, ದೇಶದ, ಆ ಪವಿತ್ರ ಸ್ಥಾನದ ದೌರ್ಭಾಗ್ಯವಾಗಿದೆ. ಆದರೆ ನಮ್ಮ ಶ್ರೀವೆಂಕಟನಾಥಾಚಾರರಾದರೋ - “ನನಗೆ ವೈರಾಗ್ಯ ಬಂದಿಲ್ಲ, ನಾನು ತರುಣ, ಪತ್ನಿ ಸಣ್ಣವಳು, ಮಗನಿಗೆ ಉಪನಯನವಾಗಿಲ್ಲ, ನನಗೆ ಪರಮಹಂಸಾಶ್ರಮದಲ್ಲಿ ಇಷ್ಟವಿಲ್ಲ-ನನಗೆ ಸನ್ಯಾಸಬೇಡ!” ಎಂದು ಹೇಳಿ ತಾನಾಗಿ ದೊರಕಿದ, ಮಹಾವೈಭವವನ್ನು ತಿರಸ್ಕರಿಸಿದ ಧೀರಾಗ್ರಣಿಗಳು ! ಆದರೆ ಪರಮಾತ್ಮ, ವಾಯುದೇವರು, ಕೊನೆಗೆ ವಿದ್ಯಾದೇವಿಯರೇ ಅವರ ಅವತಾರದ ಉದ್ದಿಶ್ಯವನ್ನು ಜ್ಞಾಪಿಸಿಕೊಟ್ಟು, ಪರಮಹಂಸನಾಗಿ ಮಹತ್ಕಾರ ಮಾಡಲೇಬೇಕೆಂದು ಉಪದೇಶಿಸಿ ಸನ್ಯಾಸದತ್ತ ವೇಂಕಟನಾಥರ ಮನಸ್ಸನ್ನು ತಿರುಗಿಸಬೇಕಾಗಿ ಬಂದಿತು! ಇಂಥವರಲ್ಲವೇ ಜಗದುದ್ಧಾರಕ ಜಗದ್ಗುರುಗಳಾಗಲು ಅರ್ಹರು ? 

ಶ್ರೀವೇಂಕಟನಾಥಾಚಾರರು ಶ್ರೀಮದಾಚಾರಪರಂಪರಾಪ್ರಾಪ್ತ ಸಂಪ್ರದಾಯದಂತೆ ವಿದ್ಯುಕ್ತವಾಗಿ ಪರಮಹಂಸಾಶ್ರಮವನ್ನು ಸ್ವೀಕರಿಸಿ, ಕಾಷಾಯಾಂಬರ ದಂಡಕಮಂಡಲುಧಾರಿಗಳಾಗಿ ಗುರುಸನ್ನಿಧಿಗೆ ಕರೆದೊಯ್ಯಲು ಸಿದ್ಧವಾಗಿದ್ದ ಸುವರ್ಣಪಾಲಕಿಯಲ್ಲಿ ಕುಳಿತರು. ಆಗ ಅವರು ಉದಯಿಸುತ್ತಿರುವ ಸೂರ್ಯನಂತೆ ಪ್ರಕಾಶಿಸುತ್ತಿದ್ದರು. ಆಗ ಶ್ರೀಮಠದ ಸಮಸ್ತ ಬಿರುದಾವಳಿ, ವಾದ್ಯವೈಭವ, ಸುವರ್ಣ-ರಜತ ದಂಡಧಾರಿಗಳು, ಪಂಡಿತಮಂಡಲಿಯವರು ನೂತನ ಯತಿವರ್ಯರನ್ನು ವೈಭವದಿಂದ ಶ್ರೀಮತ್ಸುಧೀಂದ್ರತೀರ್ಥ ಗುರುಪಾದರ ಸನ್ನಿಧಿಗೆ ಕರೆದುಕೊಂಡು ಹೊರಟರು.