|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

೬೩. ಲಕ್ಷ್ಮೀನಾರಾಯಣನ ಉಪನಯನ

ವೇಂಕಟನಾಥರ ಆಹ್ವಾನದಂತೆ ಎಲ್ಲ ಬಂಧುಬಾಂಧವರೂ ಕುಮಾರ ಲಕ್ಷ್ಮೀನಾರಾಯಣನ ಉಪನಯನಕ್ಕಾಗಿ ಆಚಾರರ ಮನೆಗೆ ಬಂದು ಸೇರಿದ್ದಾರೆ. ಎಲ್ಲರೂ ಸಂಭ್ರಮ ಸಂತೋಷಗಳಿಂದ ಉಪನಯನ ಕಾರ್ಯಾಸಕ್ತರಾಗಿದ್ದಾರೆ. ಹಜಾರದಲ್ಲಿ ಲಕ್ಷ್ಮೀನರಸಿಂಹಾಚಾರ್ಯ, ಗುರುರಾಜಾಚಾರ್ಯ, ರಾಮಚಂದ್ರಾಚಾರ್ಯ, ವಾಸುದೇವಾಚಾರ. ಆನಂದತೀರ್ಥಾಚಾರ್ಯ ದಂಪತಿಗಳು ಮತ್ತು ಹುಡುಗರು ಆಚಾರ ದಂಪತಿಗಳನ್ನು ಸುತ್ತುಗಟ್ಟಿ ಕುಳಿತು ಮಾತನಾಡುತ್ತಿದ್ದಾರೆ. ಆಗ ವೆಂಕಟಾಂಬಾದೇವಿ “ವೇಂಕಟನಾಥ ! ನಮ್ಮ ನಾರಾಯಣ ನಿನ್ನ ಕೀರ್ತಿ ಪ್ರತಿಷ್ಠೆಗಳನ್ನು ಕೇಳಿ ಮಾವನಲ್ಲೇ ನಾನು ಓದಬೇಕೆಂದು ಹಟಹಿಡಿದಿದ್ದಾನೆ” ಎಂದರು. 

ಕಮಲಾದೇವಿ : ಮೈದುನರು ಕುಮಾರ ವೆಂಕಟನಾರಾಯಣನಿಗೆ ಪಾಠ ಹೇಳುವುದಾಗಿ ಹಿಂದೆ ಹೇಳಿದ್ದನ್ನು ನೆನೆದು ಚಿಕ್ಕಪ್ಪನಲ್ಲಿ ಓದಲು ಕಳಿಸು ಎಂದು ದಿನಾ ಯಜಮಾನರೊಡನೆ ಜಗಳವಾಡುತ್ತಿದ್ದಾನೆ.

ರಾಮಚಂದ್ರಾಚಾರ್ಯ : ಆಚಾರ್ಯರೇ, ಒಂಭತ್ತು ವರ್ಷಗಳ ಹಿಂದೆ ಮಧುರೆಯಲ್ಲಿ ಪೂಜ್ಯ ವಿಜಯೀಂದ್ರರು ನನ್ನ ಮಗ ಕೃಷ್ಣ ನಿಮ್ಮ ಶಿಷ್ಯನಾಗಬೇಕೆಂದು ಆಜ್ಞಾಪಿಸಿದ್ದರು. ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ! 

ಸರಸ್ವತಮ್ಮ : ಸ್ವಾಮಿ, ನಮ್ಮ ಚಿರಂಜೀವಿಗೂ ಉಪನಯನವಾಗುತ್ತಲೇ ಪ್ರವಚನ ಪ್ರಾರಂಭಿಸಬೇಕು. 

ಗುರು : ಅಹುದು ವೇಂಕಟನಾಥ, ಈ ನಾಲ್ವರು ಶಿಷ್ಯರಿಗೂ ನೀನೇ ಪಾಠ ಹೇಳಬೇಕಪ್ಪ. 

ವೇಂಕಟನಾಥರು ನಗುತ್ತಾ ಇದೇನು ಹುಡುಗರೆಲ್ಲರೂ ನಾನೇ ಗುರುವಾಗಬೇಕೆಂದು ಹಟಹಿಡಿದಂತಿದೆಯಲ್ಲಾ?” ಎಂದಾಗ ಎಲ್ಲ ಹುಡುಗರೂ “ಅಹುದು ಮತ್ತೆ, ನಿನ್ನಂತೆ ನಾವೂ ಪಂಡಿತರಾಗಬೇಡವೇ ?” ಎಂದರು. ವೆಂಕಟನಾಥರು “ಸ್ವಲ್ಪ ನಿಧಾನಿಸಿ. ಇನ್ನು ಆರುತಿಂಗಳು ತಡೆಯಿರಿ. ಆನಂತರ ನಾನೇ ನಿಮ್ಮೆಲ್ಲರನ್ನು ಕರೆಸಿಕೊಂಡು ಪಾಠ ಹೇಳಿ ಪಂಡಿತರನ್ನಾಗಿ ಮಾಡುತ್ತೇನೆ. ಸದ್ಯ ಈಗ ಭೋಜನವಾಗಲಿ” ಎಂದು ನಕ್ಕರು. 

ಶ್ರೀಶಾಲಿವಾಹನಶಕ ೧೫೪೩ ನೇ ದುರ್ಮತಿ ಸಂವತ್ಸರದ ಮಾಘ ಬಹುಳ ಸಪ್ತಮೀ (ಕ್ರಿ.ಶ. ೧೬೨೧) ದಿವಸ ಆಚಾರ್ಯರ ಮನೆಯಲ್ಲಿ ವಿಶೇಷ ಸಂಭ್ರಮ, ಬೆಳಗ್ಗಿನಿಂದ ವೇಂಕಟನಾಥಚಾರ್ಯರು ದೇವರ ಸಮಾರಾಧನಾ ಪ್ರಯುಕ್ತ ಪುಣ್ಯಾಹ, ನಾಂದಿ, ಕುಲದೇವತಾಪೂಜೆ, ನವಗ್ರಹಪೂಜೆ, ಹವನಹೋಮಗಳನ್ನು ನೆರವೇರಿಸಿ ಬ್ರಾಹ್ಮಣ ಸುವಾಸಿನಿಯರಿಗೆ ಮೃಷ್ಟಾನ್ನ ಭೋಜನಮಾಡಿಸಿದರು. 

ಮಾಘ ಬಹುಳ ನವಮೀದಿವಸ ಆಚಾರದಂಪತಿಗಳು ಹಸೆಮಣೆಯ ಮೇಲೆ ಕುಳಿತು ಕುಮಾರ ಲಕ್ಷ್ಮೀನಾರಾಯಣನ ಉಪನಯನಕಾರ್ಯವನ್ನು ಸಂತೋಷೋತ್ಸಾಹದಿಂದ ನೆರವೇರಿಸುತ್ತಿದ್ದಾರೆ. ಬ್ರಹ್ಮಪದೇಶಕ್ಕೆ ಪೂರ್ವಭಾವಿಯಾಗಿ ಪ್ರಮುಖ ಕರ್ತವ್ಯವೊಂದನ್ನು ವಟುವಿನತಂದೆ ನೆರವೇರಿಸುವ ಸಂಪ್ರದಾಯವಿದೆ. ಉಪನೀತನಾದ ಪುತ್ರನನ್ನು ರಕ್ಷಣೆಗಾಗಿ ದೇವತೆಗಳಿಗೆ ಸಮರ್ಪಿಸುವ ಕಾವ್ಯವನ್ನು ಔಪಚಾರಿಕವಾಗಿ ನೆರವೇರಿಸಬೇಕು. ತಂದೆತಾಯಿಗಳೇ ರಕ್ಷಕರಾಗಿರುವುದರಿಂದ ದೇವತೆಗಳಿಗೆ ಅರ್ಪಿಸುವುದು ಗೌಣ. ಆದರೆ ವೆಂಕಟನಾಥರು ತಾವು ಸನ್ಯಾಸಿಗಳಾಗುವುದರಿಂದ ಕುಮಾರನಿಗೆ ರಕ್ಷಕರಿಲ್ಲದಾಗುವುದೆಂಬ ವಿಚಾರ ಮನಸ್ಸಿನಲ್ಲುಂಟಾಗಿ ಅವರಿಗೆ ಸಂಕಟವಾಯಿತು. ಪುರೋಹಿತರು ಪತ್ರನನ್ನು ಸೋಮಾದಿದೇವತೆಗಳಿಗರ್ಪಿಸುವ ಮಂತ್ರಗಳನ್ನು ಹೇಳಹತ್ತಿದರು-ಆಚಾರರೂ ಅಗ್ನಿಯೇ ತ್ವಾ ಪ್ರದದಾಮಿ” (ನಿನ್ನನ್ನು ರಕ್ಷಣೆಗಾಗಿ ಅಗ್ನಿಗೆ ಒಪ್ಪಿಸುತ್ತೇನೆ). “ಸವಿತ್ರೇ ತ್ವಾ ಪ್ರದದಾಮಿ” (ಸೂರ್ಯನಿಗೆ ಅರ್ಪಿಸುತ್ತೇನೆ) “ಸೋಮಾಯ ತ್ವಾ ಪ್ರದದಾಮಿ” (ಚಂದ್ರನಿಗೆ ನಿನ್ನನ್ನು ಅರ್ಪಿಸುತ್ತೇನೆ) ಮುಂತಾದ ಮಂತ್ರಗಳನ್ನು ಉಚ್ಚರಿಸುತ್ತಾ, ಲಕ್ಷ್ಮೀನಾರಾಯಣವನ್ನು ರಕ್ಷಣಾರ್ಥವಾಗಿ ದೇವತೆಗಳಿಗೆ ಸಮರ್ಪಿಸುವಾಗ ಮನದಲ್ಲಿ” ನಾನು ಸನ್ಯಾಸಿಯಾದಮೇಲೆ ನೀನು ಅನಾಥನಾಗುತ್ತೀಯೆ! “ದೇವತಾ ಏವ ರಕ್ಷಕಾ ನಾನೇ”-ನಿನಗೆ ದೇವತೆಗಳೇ ನಿಜವಾಗಿ ರಕ್ಷಕರು - ಬೇರೊಬ್ಬರಿಲ್ಲ!” ಎಂದು ಚಿಂತಿಸುತ್ತಿರುವಾಗ ಆಚಾರರ ಕಣ್ಣುಗಳಿಂದ ದುಃಖಾಶ್ರು ಹರಿಯಿತು. ಅವರ ಆಂತರ, ಕಣ್ಣೀರಿನ ಕಾರಣ ಯಾರಿಗೂ ಅರ್ಥವಾಗಲಿಲ್ಲ. ಅವರೆಲ್ಲರೂ 'ಪಾಪ, ವೇಂಕಟನಾಥರು, ಗೌಣವಾಗಿ ಪುತ್ರನನ್ನು ದೇವತೆಗಳಿಗೆ ರಕ್ಷಣಾರ್ಥವಾಗಿ ಅರ್ಪಿಸುವುದನ್ನೂ ಸಹಿಸಲಾಗದೇ ಕಣ್ಣೀರಿಡುತ್ತಿದ್ದಾರೆ' ಎಂದು ಭಾವಿಸಿ ಬಂಧುಬಾಂಧವರಾದಿಯಾಗಿ ಸಕಲರೂ ದುಃಖಿಸಿ ಕಣ್ಣೀರಿಟ್ಟರು.

ಆನಂತರ ಆಚಾರರು ಮಗನಿಗೆ ಗಾಯತ್ರಿ ಉಪದೇಶ ಮಾಡಿದರು. ಅದೇ ಸಮಯಕ್ಕೆ ದಯಮಾಡಿಸಿದ ಶ್ರೀಸುಧೀಂದ್ರತೀರ್ಥರನ್ನು ಗುರುರಾಜಾಚಾರಾದಿಗಳು ಗೌರವದಿಂದ ಸ್ವಾಗತಿಸಿ ಕರತಂದು ಪೀಠದಲ್ಲಿ ಕುಳ್ಳಿರಿಸಿದರು. ಆಚಾರರು ಚಿರಂಜೀವಿ ಲಕ್ಷ್ಮೀನಾರಾಯಣನು ಮಾಡುವ ಪಾದಪೂಜೆಯನ್ನು ಸ್ವೀಕರಿಸಿ ಗುರೂಪದೇಶವನ್ನು ಅನುಗ್ರಹಿಸಬೇಕು” ಎಂದು ಪ್ರಾರ್ಥಿಸಿದರು. ಆಗ ಶ್ರೀ ಸುಧೀಂದ್ರರು - “ಆಚಾರ್ಯ ಅದಕ್ಕೆ ಮೊದಲು ನೀವು ಮತ್ತು ಸೌಭಾಗ್ಯವತಿ ಸರಸ್ವತಿಯಿಂದ ನಾವು ಪಾದಪೂಜಾ ಮಾಡಿಸಿಕೊಳ್ಳಲು ಆಶಿಸಿದ್ದೇವೆ!” ಎಂದರು. ಆಗ ಗುರುಗಳ ಕಣ್ಣಿನಿಂದ ನಾಲ್ಕು ಹನಿ ನೀರುದರಿತು ! ಗುರುಗಳು ತಾನು ಪತ್ನಿಯೊಡನೆ ಮಾಡಬಹುದಾದ ಗೃಹಸ್ಥಾಶ್ರಮದ ಕರ್ತವ್ಯ ಈ ಪಾದಪೂಜೆಯೊಂದೇ ಕೊನೆಯದೆಂಬ ಕನಿಕರದಿಂದ ಅಪ್ಪಣೆ ಮಾಡಿದ್ದಾರೆಂದು ಆಚಾರರು ಅರಿತರು. ಆಗವರ ಕಣ್ಣಿನಿಂದ ದಳದಳ ನೀರು ಹರಿಯಿತು. ಮುಗ್ಧ ಸ್ವಭಾವದ ಸರಸ್ವತಮ್ಮನವರಿಗೆ ಪರಮಾನಂದವಾಯಿತು. ಅವರು ಪತಿಯೊಡನೆ ಸಡಗರ-ಸಂಭ್ರಮಾನಂದದಿಂದ ಶ್ರೀಗಳವರಿಗೆ ಪಾದಪೂಜೆ ಮಾಡಿದರು. ಪಾಪ! ಅವರೇನು ಬಲ್ಲರು, ಪತಿಯೊಡನೆ ತಾನು ಗುರುಗಳಿಗೆ ಮಾಡುವ ಪಾದ ಪೂಜೆ ಇದೇ ಕೊನೆಯದೆಂದು! ಶ್ರೀಗಳವರು ಮಂತ್ರಮುದ್ರಾಧಾರಣ ಮಾಡಿ ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿ ನಂತರ ಲಕ್ಷ್ಮೀನಾರಾಯಣನಿಂದ ಪಾದಪೂಜೆ ಸ್ವೀಕರಿಸಿ ಗುರೂಪದೇಶ ಮಾಡಿ ಫಲಮಂತ್ರಾಕ್ಷತಾ ಅನುಗ್ರಹಿಸಿದರು, ತರುವಾಯ ಫಲಪೂಜೆ ಮಾಡಿ ಗುರುಗಳಿಗೆ ಮರಾದೆ ಸಲ್ಲಿಸಿದ ಮೇಲೆ ಶ್ರೀಗಳವರು ಆಚಾರ ದಂಪತಿಗಳಿಗೆ, ಲಕ್ಷ್ಮೀನಾರಾಯಣನಿಗೆ ಅಮೂಲ್ಯ ಉಡುಗೊರೆಗಳನ್ನಿತ್ತು ಆಶೀರ್ವದಿಸಿ ಶ್ರೀಮಠಕ್ಕೆ ತೆರಳಿದರು. 

ಅನಂತರ ಸರ್ವರಿಗೂ ಗಂಧ, ಪುಷ್ಪ, ಫಲತಾಂಬೂಲ, ದಕ್ಷಿಣಾಪ್ರದಾನವಾಗಿ ಮಧ್ಯಾಹ್ನ ಬ್ರಾಹ್ಮಣ-ಸುವಾಸಿನಿಯರಿಗೆ ಮೃಷ್ಟಾನ್ನಭೋಜನ-ತಾಂಬೂಲ-ದಕ್ಷಿಣಾ-ಪ್ರದಾನಾದಿಗಳಾದ ಮೇಲೆ ಉಪನಯನ ಸಮಾರಂಭವು ಸಾಂಗವಾಯಿತು. 

ಏಕಾದಶಿ ದಿವಸ ಸರಸ್ವತಮ್ಮನವರು ಶ್ರೀಮಠಕ್ಕೆ ಹೋಗಿಬರುವಾಗ ಕೆಲ ಹೆಂಗಸರು “ವೇಂಕಟನಾಥರಿಗೆ ಆಶ್ರಮವಾಗುವುದಂತೆ! ಅದಕ್ಕೆ ಈಗ ಮಗನಿಗೆ ಉಪನಯನ ಮಾಡಿದರಂತೆ!” ಮುಂತಾಗಿ ಗುಜುಗುಜು ಮಾತನಾಡಿಕೊಂಡು ವಿಚಾರವು ಕರ್ಣಾಕರ್ಣಿಯಾಗಿ ಸರಸ್ವತಮ್ಮನವರಿಗೆ ತಿಳಿದು ವಜ್ರಾಘಾತವಾದಂತಾಯಿತು. ಹೃದಯ-ಕಿವಿಗಳಿಗೆ ಶೂಲ ಇರಿದಂತಾಯಿತು. ಕರುಳು ಕತ್ತರಿಸಿ ಬಂದಂತಾಯಿತು. ಅವರ ಕಣ್ಣಿನಿಂದ ಧಾರಕಾರವಾಗಿ ದುಃಖಾಶ್ರು ಹರಿಯಿತು. ಅದು ಪತಿವಿಯೋಗ ವಿರಹಾಗ್ನಿಗೆ ತಮ್ಮ ದೇಹವೆಂಬ ಹವ್ವದ್ರವ್ಯವನ್ನು ನೀಡಲು ಕಣ್ಣೀರೆಂಬ ಜಲದಿಂದ ಪ್ರೋಕ್ಷಣಮಾಡುತ್ತಿರುವರೋ ಎಂಬಂತೆ ಸರಸ್ವತಮ್ಮನವರು ದುಃಖಾಶ್ರುವನ್ನು ಸುರಿಸಿದಂತೆ ಕಾಣುತ್ತಿತ್ತು! 380 ಮನೋದೌರ್ಬಲ್ಯಕ್ಕೊಳಗಾಗಿ ತಮ್ಮ ಮನದಳಲನ್ನು ಮೇಲೆ ತೋರ್ಪಡಿಸಿಕೊಳ್ಳದೇ ಅಂದಿನ ದಿನವನ್ನು ಸರಸ್ವತಮ್ಮ ಹೇಗೋ ಕಳೆದರು. 

ದ್ವಾದಶೀ ಮಧ್ಯಾಹ್ನ ಉಪನಯನಕ್ಕೆ ಬಂದವರೆಲ್ಲರನ್ನೂ ಉಡುಗೊರೆಯಿಂದ ಸಂತೋಷಪಡಿಸಿ ಕಳುಹಿಸಿ ಆಚಾರರು ಅಕ್ಕ-ಭಾವ, ಅಣ್ಣ ಗುರುರಾಜಾರರೊಡನೆ ಮಾತನಾಡುತ್ತಾ ಕುಳಿತಿದ್ದರು. ಸಾಯಂಕಾಲ ಸರಸ್ವತಮ್ಮ, ಕಮಲಾದೇವಿ, ಲಕ್ಷ್ಮೀನಾರಾಯಣ ಮತ್ತು ಹುಡುಗರೊಡನೆ ಕುಂಭೇಶ್ವರ, ಸಾರಂಗಪಾಣಿದೇವರ ದರ್ಶನ ಮಾಡಿ ಸೇವೆ ಸಲ್ಲಿಸಿ ಬರಲು ಹೊರಟರು. 

ಆಗ ವೇಂಕಟನಾಥರು ಶ್ರೀಸುಧೀಂದ್ರ ಗುರುಗಳು ತಮಗೆ ಪರಮಹಂಸಾಶ್ರಮವಿತ್ತು ತಮ್ಮ ಉತ್ತರಾಧಿಕಾರಿಗಳನ್ನಾಗಿ ಮಾಡಿಕೊಳ್ಳಲಿರುವ ವಿಚಾರವನ್ನು ಸಾದ್ಯಂತವಾಗಿ ತಿಳಿಸಿ 'ಸರಸ್ವತಿ, ಲಕ್ಷ್ಮೀನಾರಾಯಣರ ರಕ್ಷಣೆಯಭಾರ ಇನ್ನು ಹಿರಿಯರಾದ ನಿಮಗೇ ಸೇರಿದ್ದು' ಎಂದು ಹೇಳಿದರು. ಅದನ್ನಾಲಿಸಿ ಸರ್ವರಿಗೂ ಆಶ್ಚರ್ಯ ಆನಂದಗಳುಂಟಾದವು. ಭಾವ-ಅಣ್ಣಂದಿರು- 'ವೆಂಕಟನಾಥ, ನೀನೆಂಥ ಭಾಗ್ಯಶಾಲಿ! ಶ್ರೀಮದಾಚಾರ್ಯರ ವೇದಾಂತಸಾಮ್ರಾಜ್ಯಾಧೀಶ್ವರನಾಗುವ ಸುಕೃತಶಾಲಿ ನೀನು. ಶ್ರೀವಿಜಯೀಂದ್ರರು, ಮತ್ತು ಅಪ್ಪ ಹೇಳುತ್ತಿದ್ದುದಿಂದು ಸತ್ಯವಾಯಿತು” ಎಂದರು.

ವೆಂಕಟಾಂಬಾದೇವಿ ಕಣ್ಣೀರುಡುತ್ತಾ ವೇಂಕಟನಾಥ, ಇದೊಂದು ಅಪೂರ್ವ ಘಟನೆ, ನೀನೊಬ್ಬ ಮಹಾಪುರುಷ, ನಮ್ಮ ವಂಶದ ಕೀರ್ತಿ ನಿನ್ನಿಂದ ಲೋಕವಿಖ್ಯಾತವಾಗುವುದು, ಸಂತೋಷ, ಆದರೆ.... ಸಹೋದರ, ಪಾಪ, ಸರಸ್ವತಿಯನ್ನು ನೆನೆದರೆ ನನಗೆ ಅತೀವ ವೇದನೆಯಾಗುತ್ತದೆ. ಕೇವಲ ಇಪ್ಪತ್ತೂರು ವಸಂತಗಳನ್ನು ದಾಟಿರುವ ಆ ಸುಮಕೋಮಲೆ, ಈ ಆಘಾತವನ್ನು ಸಹಿಸಬಲ್ಲಳೆ ? ಹೂವಿನಂತೆ ಮೃದುವಾದ ಅವಳ ಹೃದಯ ಒಡೆದುಚೂರಾಗುವುದು. ತಮ್ಮಾ, ಅವಳ ಬಹಿಃಪ್ರಾಣವೇ ನೀನಾಗಿರುವೆ, ಅಬ್ಬಾ, ಅವಳ ಪತಿಭಕ್ತಿ, ನಿನ್ನಲ್ಲಿರುವ ಪ್ರೇಮ, ಅದೆಷ್ಟೆಂದು ವರ್ಣಿಸಲಿ ? ನಿನ್ನ ವಿಯೋಗವಿರಹವನ್ನು ಅವಳು ಖಂಡಿತ ಸಹಿಸಲಾರಳು. ವೆಂಕಟನಾಥ, ನಿಮ್ಮ ಪುಟ್ಟ ಸುಖೀಸಂಸಾರವು ದುಃಖದ ಆಗರವಾಗುವುದನ್ನು ನನಗೇ ಸಹಿಸಲಾಗದಂತಿರುವಾಗ ಪಾಪ, ಸರಸ್ವತಿಯ ಗತಿಯೇನಪ್ಪಾ? ಲಕ್ಷ್ಮಿನಾರಾಯಣನ ಅಭ್ಯುದಯವೆಂತಾದೀತು - ಹಾಯ್, ನನಗೇನೂ ತೋರದಂತಾಗಿದೆಯಪ್ಪಾ” ಎಂದು ಅಳ ಹತ್ತಿದರು. 

ವೇಂಕಟ : ಅಕ್ಕಾ, ನೀನೇ ಹೀಗೆ ಧೃತಿಗೆಟ್ಟರೆ ಸರಸ್ವತಿಗೆ ಸಮಾಧಾನ ಹೇಳುವವರಾರು ? ಅವಳದೇ ನನಗೆ ಚಿಂತೆಯಾಗಿದೆ. ನನ್ನ ಪ್ರೇಮದ ವಿನಃ ಅವಳಿಗೆ ಜಗತ್ತೇ ಶೂನ್ಯ, ಭಾವ, ಅಕ್ಕ, ಅಣ್ಣ, ನೀವೇ ಅವಳ ಮನ ಒಲಿಸಿ ತುರ್ಯಾಶ್ರಮಕ್ಕೆ ಸಮ್ಮತಿಕೊಡಿಸಬೇಕು. 

ಆಚಾರರ ಈ ಮಾತು ಕೇಳಿ ಮೂವರೂ “ಛೇ ಛೇ, ಈ ಕಾರ ನಮ್ಮಿಂದಾಗದಪ್ಪ, ಅದು ನಿನ್ನ ಕರ್ತವ್ಯ, ಧರ್ಮ' ಎಂದರು. ಆಚಾರೈರು “ಸರಿ, ನಾನೇ ಪ್ರಯತ್ನಿಸುತ್ತೇನೆ. ದೇವರೇ ಅವಳ ಮನಸ್ಸನ್ನು ಪರಿವರ್ತಿಸಿ ಸಮ್ಮತಿ ಕೊಡಿಸಬೇಕು. ಅದಿರಲಿ, ಭಾವ, ಅಣ್ಣ, ನಾಳೆಯೇ ತಂಜಾವಾರಿಗೆ ಶ್ರೀಗಳೊಡನೆ ಹೊರಡಬೇಕು. ಫಾಲ್ಗುಣ ಶುಕ್ಲಪಾಡ್, ಸನ್ಯಾಸಕ್ಕೆ ಫಲಮಂತ್ರಾಕ್ಷತೆ ಅನುಗ್ರಹಿಸುವರು. ಬಿದಿಗೆ ರಾಜಾಸ್ಥಾನದಲ್ಲಿ ಸಾಮ್ರಾಜ್ಯಪಟ್ಟಾಭಿಷೇಕ ನೆರವೇರುವುದು. ಭಾವ, ನೀವು ನನ್ನ ಜೊತೆಗಿರಬೇಕು. ಅಣ್ಣ, ನೀವು, ಅತ್ತಿಗೆ ಇಲ್ಲಿಯೇ ಇದ್ದು ಸರಸ್ವತಿಯನ್ನು ಸಂಬಾಳಿಸಬೇಕು. ಇನ್ನು ಮುಂದೆ ಈ ಮನೆ, ಲಕ್ಷ್ಮೀನಾರಾಯಣ-ಎಲ್ಲ ಭಾರವೂ ನಿಮಗೆ ಸೇರಿದ್ದು, ನೀವು ನನಗೆ ಸನ್ಯಾಸಕ್ಕೆ ಅನುಮತಿಕೊಟ್ಟು ಆಶೀರ್ವದಿಸಿರಿ” ಎಂದು ಕಣ್ಣೀರುಸುರಿಸುತ್ತಾ ಭಾವ ಅಣ್ಣ, ಅಕ್ಕಂದಿರಿಗೆ ನಮಸ್ಕರಿಸಿದರು. ಎಲ್ಲರೂ ಆಚಾರರನ್ನು ತಬ್ಬಿ ಆನಂದಾಶ್ರುಸುರಿಸಿದರು. 

ಸ್ವಲ್ಪ ವೇಳೆಗೆ ಸರಸ್ವತಮ್ಮನವರು ಎಲ್ಲರೊಡನೆ ಗುಡಿಯಿಂದ ಮರಳಿದರು. ವೆಂಕಟಾಂಬಾದೇವಿ ದುಃಖವನ್ನು ನುಂಗಿಕೊಂಡು ಬಲಾತ್ಕಾರದ ನಗುವನ್ನು ತಂದುಕೊಂಡು ಅವರನ್ನು ಸ್ವಾಗತಿಸಿದರು. 

ಆ ಸಂಜೆ ವೆಂಕಟಾಂಬಾ ಕಮಲಾದೇವಿಗೆ ಎಲ್ಲ ವಿಚಾರಗಳನ್ನು ಏಕಾಂತವಾಗಿ ತಿಳಿಸಿದಾಗ ಮೈದುನ ಮಹಾಸಂಸ್ಥಾನಾಧೀಶ್ವರರಾಗುವರೆಂದು ಒಂದು ಕಡೆ ಸಂತೋಷ ಸರಸ್ವತಿಯ ಮೇಲಾಗುವ ದುಷ್ಪರಿಣಾಮ, ದುಃಖಗಳ ನೆನಪಾಗಿ ಮತ್ತೊಂದು ಕಡೆ ದುಃಖ ಹೀಗೆ ಕಮಲಾದೇವಿ ತೊಳಲಾಡಿದರು. 

ಅಂದು ರಾತ್ರಿ ಬಹಳ ಹೊತ್ತಾದರೂ ಯಾವುದೋ ಕಾರಮಗ್ನರಾಗಿದ್ದ ಸರಸ್ವತಮ್ಮನವರನ್ನು ವೆಂಕಟಾಂಬಾ- ಕಮಲಾದೇವಿಯರು ಬಲಾತ್ಕಾರವಾಗಿ ವಿಶ್ರಮಿಸಲು ಪತಿಯಶಯ್ಯಾಗೃಹಕ್ಕೆ ಕಳುಹಿಸಿದರು. ಆಚಾರರು ಶಯ್ಕೆಯಲ್ಲಿ ಕುಳಿತು ಯೋಚಿಸುತ್ತಿದ್ದರು. ಪತ್ನಿ ಬಂದುದನ್ನು ಗಮನಿಸಿದ ಆಚಾರ್ಯರು ನಗೆಯನ್ನು ಹೊರಸೂಸಿ “ಬಾ ಸರಸ್ವತಿ, ಇಷ್ಟೇಕೆ ತಡಮಾಡಿದೆ?” ಎಂದು ಪ್ರಶ್ನಿಸಿ ಪತ್ನಿಯ ಕರಪಿಡಿದು ಪಕ್ಕದಲ್ಲಿ ಕೂಡಿಸಿಕೊಂಡು ಸ್ವಲ್ಪಕಾಲ ಉಪನಯನ ವಿಚಾರವಾಗಿ ಮಾತನಾಡುತ್ತಿದ್ದು ನಂತರ ಮುಖ್ಯವಿಚಾರವನ್ನು ಪ್ರಸ್ತಾಪಿಸಲು ಧೈರ್ಯಮಾಡಿದರು. ಸರಸ್ವತಮ್ಮನ ಕಳೆಗುಂದಿದ ಮುಖವನ್ನು ನೋಡಿ, ಕನಿಕರದಿಂದ ಪತ್ನಿಯ ಮುಂಗುರುಳನ್ನು ಸವರುತ್ತಾ ಕಂಠಬಿಗಿದು ಮಾತನಾಡಲಾಗದಂತಿದ್ದರೂ ಹೇಗೋ ಅತಿಪ್ರಯಾಸದಿಂದ “ಸರಸ್ವತಿ” ಎಂದು ಮೆಲ್ಲನೆ ನುಡಿದರು. ಸರಸ್ವತಮ್ಮನವರು ಪತಿಯ ಮುಖವನ್ನು ನಿಟ್ಟಿಸಿನೋಡಿ “ಏನು ಸ್ವಾಮಿ ?” ಎಂದರು. 

ವೇಂಕಟ : (ಪತ್ನಿಯ ಗಲ್ಲ ಹಿಡಿದು ಸರಸ್ವತಿ! ನನ್ನ ಮಾತೊಂದನ್ನು ನಡೆಸಿಕೊಡುವೆಯಾ?

ಸರಸ್ವತಿ : (ತಲೆತಗ್ಗಿಸಿ) ಸ್ವಾಮಿ, ಒಬ್ಬ ಪತ್ನಿಯನ್ನು ಪತಿಯು ಕೇಳುವ ಮಾತಾಗಿದ್ದರೆ....ಆಗಬಹುದು. 

ವೇಂಕಟ : ಜಗತ್ತಿನ ಹಿತದೃಷ್ಟಿ, ಧಾರ್ಮಿಕಜನತೆಯ ಆಶೋತ್ತರ. ವಿದ್ದದ್ದಂದದ ಆಕಾಂಕ್ಷೆ, ನನ್ನ ಪಾರಮಾರ್ಥಿಕಸಾಧನೆ, ಇವೆಲ್ಲವೂ ನಿನ್ನ ಉತ್ತರವನ್ನವಲಂಬಿಸಿದೆ. 

ಸರಸ್ವತಿ : ನೀವೇ ನನ್ನ ಜಗತ್ತು, ಲಕ್ಷ್ಮೀನಾರಾಯಣನೇ ನನ್ನ ಧಾರ್ಮಿಕ ಜನತೆ! ವಿದ್ದದ್ದರೇಣ್ಯರಾದ ತಾವೇ ನನ್ನ ಪಂಡಿತವೃಂದ, ನಿಮ್ಮ ಪ್ರೀತಿಯೇ ನನ್ನ ಪಾರಮಾರ್ಥಿಕ ಸಾಧನೆ! ಇದಕ್ಕೆ ಅನುಕೂಲಕರವಾದ ಯಾವ ಮಾತನ್ನಾದರೂ ನಾನು ನಡೆಸಿಕೊಡುತ್ತೇನೆ - ಸ್ವಾಮಿ. 

ವೇಂಕಟ : ಸರಸ್ವತಿ ! ಇಂದೇಕೆ ನೀನು ನನ್ನ ಎಲ್ಲ ಮಾತನ್ನೂ ಶಂಕಿಸುತ್ತಿರುವೆ? 

ಸರ : 'ಅತಿಸ್ನೇಹಃ ಪಾಪಶಂಕೀ!' ಅಲ್ಲವೇ ಸ್ವಾಮಿ? 

ವೇಂ : ಇದೇನು ಮಾತು ಸರಸ! ನನ್ನ ಮಾತನ್ನು ನಡೆಸಿಕೊಡುವೆಯೋ ಇಲ್ಲವೋ ಹೇಳು. 

ಸರ : (ಉದ್ವಿಗ್ನಳಾಗಿ, ತಲೆತಗ್ಗಿಸಿ) ನಾನು ನಿಮ್ಮ ಚರಣದಾಸಿ! ನಿಮ್ಮ ಅಪ್ಪಣೆಯಂತೆ ವರ್ತಿಸುವುದೇ ನನ್ನ ಧರ್ಮ!, ಕರ್ತವ್ಯ, ಜೀವಿತದ ಧೈಯ! 

ವೇಂ : (ನಸುನಕ್ಕು) ನಿನ್ನೀ ಮನೋದಾರ್ಢ ಶ್ಲಾಘನೀಯ! ಸರಸ್ವತಿ, ಈ ಮನೋಧೈ ನನ್ನ ಮಾತುಕೇಳಿದಮೇಲೂ 

ಉಳಿದರೆ.....ಸಂತೋಷ! 

ಸರ : (ವ್ಯಾಕುಲದಿಂದ) ಪತಿಯವಾಕ್ಯವನ್ನು ಉಲ್ಲಂಘಿಸುವಂಥ ಪಾಪಿಯೇ ನಾನು ? 

ವೇಂ : ನೀನು ಪರಮಸಾಧಿ, ನನ್ನ ಮಾತೇ ನಿನಗೆ ವೇದವಾಕ್ಯ, ಅದೆಲ್ಲವನ್ನೂ ನಾನು ಬಲ್ಲೆ ಆದರೆ.... 

ಸರ : (ಕಾತರದಿಂದ) ಆದರೇನು ಸ್ವಾಮಿ? 

ವೇಂ : ನನ್ನ ಮಾತಿನಿಂದ ನಿನಗೆ ನೋವಾಗಬಹುದು. ಸರಸ! ಆಗಲೂ ನೀನು ನಗುಮುಖದಿಂದ ನನ್ನ ಮಾತು ನಡಿಸಿದೆಯಾದರೆ....ಆಗ ನಿನ್ನ ಪತಿಭಕ್ತಿ ಆದರ್ಶವೆನಿಸುವುದು! 

ಸರ : ನೀವು ನನ್ನ ದೇವರು ! ಈ ಪಾದದಾಸಿಗೆ ತನ್ನದೆಂಬುದು ಪ್ರತ್ಯೇಕವಾಗಿ ಯಾವುದಿದೆ? ನಿಮ್ಮನ್ನಗಲಿ ಜೀವಿಸುವುದಕ್ಕಿಂತ ತಮ್ಮ ಪಾದದಡಿಯಲ್ಲಿ ಮರಣವೇ ನನಗೆ ಸೌಭಾಗ್ಯ! ಅಪ್ಪಣೆಮಾಡಿ ಸ್ವಾಮಿ. 

ವೇಂ : (ದಯದಿಂದ ಪತ್ನಿಯ ತುಟಿಯ ಮೇಲೆ ಕೈಯಿಟ್ಟು) ಛೇ, ಅಭದ್ರ ನುಡಿಯಬೇಡ ಸರಸ ! ನನ್ನ ಮಾತು ನಡೆಸುವುದಾಗಿ ವಚನಕೊಡು. 

ಸರ : (ದೀನಳಾಗಿ, ದುಃಖದುಮ್ಮಾನಗಳಿಂದ) ಓ ಎನ್ನರಸ! ತಮ್ಮ ಪಾದದಾಣೆ, ನಡೆಸುವೆನು ತಂನುಡಿಯ! ಪೇಳಿ ಬೇಗಲದೇನು ? 

ಪತ್ನಿಯ ಮಾತು ಕೇಳಿ ಆಚಾರರು ಶ್ರೀಸುಧೀಂದ್ರರಿಗಾದ ಕನಸುಗಳು, ಗುರುಗಳು ತಮ್ಮನ್ನು ಕರೆಸಿಕೊಂಡು ಸನ್ಯಾಸ ಸ್ವೀಕರಿಸುವಂತೆ ಹೇಳಿದ್ದು, ಅದಕ್ಕೆ ತಾವು ಒಪ್ಪದೇ ಮನೆಗೆ ಬಂದದ್ದು. ಅದೇ ಚಿಂತೆಯಲ್ಲಿ ನಿದ್ರಿಸದೆ ಕುಳಿತಿರುವಾಗ ಬೆಳಗಿನ ಝಾವ ಸಾಕ್ಷಾತ್ ಸರಸ್ವತೀದೇವಿಯು ಪ್ರತ್ಯಕ್ಷಳಾಗಿ ಉಪದೇಶಮಾಡಿ ಮಂತ್ರೋಪದೇಶಮಾಡಿ ಅದೃಶ್ಯಳಾದುದೇ ಮೊದಲಾದ ಸಮಸ್ತ ವಿಚಾರವನ್ನೂ ಒಂದೊಂದಾಗಿ ಹೇಳಿದರು. ಪತಿಗಳ ಒಂದೊಂದು ಮಾತು ಸರಸ್ವತಮ್ಮನವರ ಹೃದಯವನ್ನು ಶೂಲದಂತೆ ಇರಿಯಹತ್ತಿತು. ಯಾವ ಭಯದಿಂದ ತಾವು ತತ್ತರಿಸುತ್ತಿದ್ದರೋ ಅದು ಸತ್ಯವಾಗುವ ಕಾಲ ಸನ್ನಿಹಿತವಾಯಿತೆಂಬ ಭಯದಿಂದ ಅವರು ಕಂಪಿಸಿದರು. ಆದರೂ ಅದನ್ನು ಹತ್ತಿಕ್ಕಿ ಪತಿಯ ಮುಖ ನೋಡುತ್ತಾ ಪ್ರಶ್ನಿಸಿದರು - 

ಸರ : ಅದೆಲ್ಲಾ ಸರಿ ಸ್ವಾಮಿ, ಈಗ ನನ್ನಿಂದೇನಾಗಬೇಕು ? 

ವೇಂ : (ದುಃಖವಾದರೂ ದೃಢಸ್ಥರದಲ್ಲಿ ಶ್ರೀಮೂಲರಘುಪತಿ ವೇದವ್ಯಾಸದೇವರು, ಶ್ರೀಮದಾಚಾರರುಗಳ ಆದೇಶ. ಶ್ರೀವಿಜಯೀಂದ್ರ ಗುರುಗಳ ಅಪ್ಪಣೆ; ಶ್ರೀಸುಧೀಂದ್ರರ ಕಟ್ಟಪ್ಪಣೆ!, ವಾಗ್ಗೇವಿಯ ಕಟ್ಟಳೆ!! ಕರ್ತವ್ಯದಕರೆ! ಸರಸ್ವತಿ... ನಾನು.......ಸನ್ಯಾಸ........ ಸ್ವೀಕರಿಸಲು ನೀನು ಅನುಮತಿ........ಕೊಡಬೇಕು! 

ಆಚಾರರ ಮಾತುಕೇಳಿ ಸರಸ್ವತಮ್ಮ ಕುಸಿದುಬಿದ್ದರು. ತಲೆಯ ಮೇಲೆ ವಜ್ರಾಘಾತವಾದಂತಾಯಿತು. ಅವರ ಮೃದು ಹೃದಯವೇ ಒಡೆದುಹೋಯಿತು. ತುಟಿಗಳು ಅದುರಿದವು. ಮಾತು ಹೊರಡದಂತಾಯಿತು. ಕಣ್ಣೀರಿನ ಕೋಡಿ ಹರಿಯಿತು ದುಃಖ-ಆವೇಗ-ಸಂಕಟಗಳಿಂದ ಉಸುರಿದರು.. “ಹಾ, ಸನ್ಯಾಸ! ಸ-ನ್ಯಾ-ಸವೇ ಸ್ವಾಮಿ? 

ವೇಂ : ಅಹುದು. ಸರಸ ! ಸನ್ಯಾಸ ! 

ಸರ : (ಬಿಕ್ಕಳಿಸುತ್ತಾ) ಅಯ್ಯೋ ದುರ್ವಿಧಿಯೇ, ಸ-ನ್ಯಾ-ಸ-ಹೂಂ, ನನ್ನ ಸರ್ವನಾಶ ! (ಪತಿಯ ಪಾದಗಳನ್ನು ಹಿಡಿದು) ಸ್ವಾಮಿ, ನನ್ನ ದೇವರೆ! ನಿಮ್ಮನ್ನಗಲಿ ನಾನು ಜೀವಿಸಲಾರೆ! 

ವೇಂ : (ಕನಿಕರದಿಂದ) ಸಮಾಧಾನತಂದುಕೋ ಸರಸ್ವತಿ. 

ಸರ : ಸಮಾಧಾನ ! ಇನ್ನೆಲ್ಲಿಯ ಸಮಾಧಾನ? ಸ್ವಾಮಿ, ಹೃದಯದಲ್ಲಿ ಹಾಲಹಲ ಹರಿಯುತ್ತಿರುವಾಗ, ನನ್ನ ಜೀವನವೇ ಮುಳುಗಿಹೋಗುತ್ತಿರುವಾಗ ಸಮಾಧಾನವೆಲ್ಲಿ ಬಂದೀತು ಸ್ವಾಮಿ? ಪ್ರೇಮಲಸ್ವಭಾವದ ನನ್ನ ಪ್ರೀತಿಯ ಪತಿಗಳಾದ ನೀವೇ ಹೀಗೆ ಹೇಳುತ್ತಿರುವಿರಾ? ನೀವು ನನ್ನ ಕರಪಿಡಿದಾಗ “ಧರ್ಮೇ ಚ ಅರ್ಥೇ ಚ ಕಾಮೇ ಚ ನಾತಿ ಚರಾಮಿ!” ಎಂದು ಅಂದುಮಾಡಿದ ಪ್ರಮಾಣವೇನಾಯಿತು.? 

ವೇಂ : (ಗಂಭೀರವಾಗಿ ಆ ನನ್ನ ಪ್ರಮಾಣ ಯಶಸ್ವಿಯಾಯಿತು! ಧರ್ಮ-ಅರ್ಥ-ಕಾಮಗಳಲ್ಲಿ ನಾನು ನಿನ್ನನ್ನು ಎಂದಿಗೂ ಅತಿಕ್ರಮಿಸಿ ನಡೆದಿಲ್ಲ! ಭಾರತೀಯರಾದ ನಮ್ಮ ವೈವಾಹಿಕ ಜೀವನದ ಉದ್ದಿಶ್ಯ ವಂಶಾಭಿವೃದ್ಧಿ! ಲಕ್ಷ್ಮೀ ನಾರಾಯಣನ ಜನನದಿಂದ ಅದು ಸಫಲವಾಗಿದೆ. ಅವನು ವಂಶದೀಪಕನಾಗಿದ್ದಾನೆ. ನನ್ನ ಕರ್ತವ್ಯ ಮುಗಿದಿದೆ ಸರಸ! 

ಸರ : ಹಾಗಾದರೆ-ತಮ್ಮ ಪ್ರೇಮವೇನಾಯಿತು ಸ್ವಾಮಿ? 

ವೇಂ : ಅದೀಗ ವೈರಾಗ್ಯದಲ್ಲಿ ಪರವಸಾನಹೊಂದಿ, ಪ್ರೇಮಕ್ಕೆ ಉತ್ತಮ ಪಾತ್ರನಾದ ಪರಮಾತ್ಮನತ್ತ ಪ್ರವಾಹ ರೂಪವಾಗಿ ಹರಿಯುತ್ತಿದೆ ! ನಿನ್ನ ಅನುಮತಿಗಾಗಿ ಕಾದಿದ್ದೇನೆ ಸರಸ್ವತಿ! 

ಸರ : (ಅಳುತ್ತಾ) ನನ್ನ ದೇವರೇ ! ನನ್ನನ್ನು ತ್ಯಜಿಸಿರಿ, ಸನ್ಯಾಸಿಗಳಾಗಿರಿ ಎಂದು ನನ್ನೀಬಾಯಿಂದಲೇ ಹೇಳಿ ಅನುಮತಿ ನೀಡಬೇಕೇ ? 

ವೇಂ : (ನೊಂದು) ಅನಿವಾರ್ಯ, ಸರಸ್ವತಿ ! ನಿನ್ನ ಮನದಳಲು ನನಗೆ ಗೊತ್ತಿದೆ. ನಿಜ. ನನ್ನ ವಿಯೋಗ ವಿರಹ ದುಃಖವನ್ನು ನೀನು ಸಹಿಸಲಾರೆ! ಅದನ್ನು ಬಲ್ಲೆ! ಜಗತ್ತಿನ ಕಲ್ಯಾಣದ ದೃಷ್ಟಿಯಿಂದ ನೀನೀಗ ಸಮ್ಮತಿ ನೀಡಲೇಬೇಕು. ಆ ಉದಾತ್ತ ದೃಷ್ಟಿಯಿಂದ ನಿನ್ನ ತ್ಯಾಗದ ಮಹತ್ವವನ್ನು ಅರಿತೆಯಾದರೆ....... ನೀನಿಂತು ದುಃಖಿಸಲಾರೆ. ಜಗತ್ತು ನಿನ್ನನ್ನು ತ್ಯಾಗಮಯಿಯೆಂದು ಗೌರವಿಸುವುದು. ಸರಸ್ವತಿ, ಕೇಳಿಲ್ಲಿ ನನ್ನ ನಿರ್ಧಾರ ಅಚಲ ! ಅದನ್ನಾರೂ ಬದಲಿಸಲಾರರು. ಇನ್ನು ಉಳಿದಿರುವುದು ನಿನ್ನ ಒಪ್ಪಿಗೆ ಮಾತ್ರ ! ಹೂಂ, ಪ್ರಿಯೆ, ಹೇಳು. ಹೃತ್ತೂರ್ವಕವಾಗಿ ಒಪ್ಪಿರುವೆನೆಂದು ಹೇಳು-ಹೇಳು ಸರಸ್ವತಿ.

ಸರ : (ಕಣ್ಣೀರು ಸುರಿಸುತ್ತಾ ಗದ್ಗದ ಕಂಠದಿಂದ) “....ನೀವೇ ನಿರ್ಧರಿಸಿ ಬಿಟ್ಟಿರುವಾಗ ನಾನೇನು ಹೇಳಬಲ್ಲೆ ಸಾಮಿ ? ನಾನು ಅಬಲೆ, ನಿಮ್ಮ ಪಾದದಾಸಿ, ನೀವು ನನ್ನ ಪ್ರಭುಗಳು! ಸ್ವತಂತ್ರರು ! ಸರಿ, ನಿಮ್ಮ ಚಿತ್ತ. ನಿಮ್ಮ ಪಾದಸೇವೆ ಮಾಡುವ ಭಾಗ್ಯ ನನಗೆ ಇನ್ನಿಲ್ಲವಾಯಿತು, ನಾನು ಪಾಪಿಷ್ಟೆ, ಹೂಂ, ಸ್ವಾಮಿ, ನಿಮ್ಮ ಮನಸ್ಸಿಗೆ ಬಂದಂತೆ...ಮಾಡಿರಿ” ಎಂದು ಪತಿಯ ಚರಣಗಳ ಮೇಲೆ ಶಿರವಿರಿಸಿ ಕಣ್ಣೀರಿನಿಂದ ಪತಿಯ ಪಾದವನ್ನು ತೊಳೆಯುತ್ತಾ ನಿಶ್ಚಲರಾಗಿ ಕುಳಿತುಬಿಟ್ಟರು. 

ವೇಂಕಟನಾಥರು ಒಮ್ಮೆ ಸಮಾಧಾನದ ಉಸಿರುಬಿಟ್ಟು, ಪತ್ನಿಯ ಮುಂಗುರುಳು ಬೆನ್ನುಗಳನ್ನು ಸವರುತ್ತಾ, ನಾನಾವಿಧವಾಗಿ ಸಮಾಧಾನಮಾಡಹತ್ತಿದರು. ಹೀಗೆ ದುಃಖ-ಕಣ್ಣೀರಿನಿಂದಲೇ ಪತಿ-ಪತ್ನಿಯರು ಅಂದಿನ ರಾತ್ರಿ ಕಳೆದರು. ಅತ್ತು-ಅತ್ತು ಸರಸ್ವತಮ್ಮನವರ ಕಣ್ಣೀರು ಬತ್ತಿಹೋಯಿತು. ಸೂರೋದಯವಾಗುತ್ತಿರುವುದನ್ನು ಗಮನಿಸಿ ಆಚಾರರು ಅತಿಕಷ್ಟದಿಂದ ಪತ್ನಿಯು ಬಿಗಿಯಾಗಿ ಹಿಡಿದಿರುವ ತಮ್ಮ ಕಾಲನ್ನು ಬಿಡಿಸಿಕೊಂಡು ಹೊರಹೊರಟರು. ಸರಸ್ವತಮ್ಮ “ಸ್ವಾಮಿ, ನನ್ನ ದೇವರೇ, ನನ್ನ ಕೈಬಿಡಬೇಡಿ” ಎಂದು ಕೂಗಿ ಎಚ್ಚರತಪ್ಪಿಬಿದ್ದರು. ಹೊರಬಂದು ಅಳುತ್ತಾನಿಂತಿರುವ ಅಕ್ಕ, ಅತ್ತಿಗೆಯರನ್ನು ಕಂಡು ಆಚಾರರು ಕಣ್ಣಂಚಿನಲ್ಲಿ ಮಿಡಿದ ಕಣ್ಣೀರನ್ನು ಒರೆಸಿಕೊಂಡು ಅಕ್ಕ-ಅತ್ತಿಗೆಯರಿಗೆ “ಸರಸ್ವತಿಯನ್ನು ಗಮನಿಸಿರಿ” ಎಂದಿಷ್ಟೇ ಹೇಳಿ ಸ್ನಾನಾಕಗಳಲ್ಲಿ ಮಗ್ನರಾದರು. 

ಬೆಳಿಗ್ಗೆ ಒಂಭತ್ತು ಘಂಟೆಯ ಸಮಯದಲ್ಲಿ ರಾಮಚಂದ್ರಾಚಾರ್ಯರು ಆಚಾರರನ್ನು ಮಠಕ್ಕೆ ಕರೆದೊಯ್ಯಲು ಬಂದರು. ವೇಂಕಟನಾಥರು ಸನ್ಯಾಸ ಸ್ವೀಕರಿಸಲು ಗುರುಗಳೊಡನೆ ತಂಜಾಪುರಕ್ಕೆ ಹೊರಡುವ ವಿಚಾರ ತಿಳಿದು ಎಲ್ಲರೂ ಆಚಾರರನ್ನು ಸುತ್ತುಗಟ್ಟಿ ನಿಂತರು. ಸರಸ್ವತಮ್ಮ ಮೈಮೇಲೆ ಪ್ರಜ್ಞೆ ಇಲ್ಲದವರಂತೆ ಓಡೋಡಿ ಬಂದು ಪತಿಯ ಪಾದ ಹಿಡಿದು “ಸ್ವಾಮಿ, ನನ್ನನ್ನು ಅನಾಥಳನ್ನಾಗಿ ಮಾಡಬೇಡಿ, ಬಾಲಕ ಲಕ್ಷ್ಮೀನಾರಾಯಣನಿಗೆ ಇನ್ನಾರು ದಿಕ್ಕು, ಅಯ್ಯೋ, ನಾನೀ ದುಃಖವನ್ನು ಎಂತು ಸಹಿಸಲಿ ? ನನ್ನ ದೇವರೇ, ನಿಮ್ಮ ಹೃದಯವೇಕಿಷ್ಟು ಕಠಿಣವಾಯಿತು ? ನಿಮ್ಮ ದಾಸಿಗೆ ಪಾದಸೇವೆಯ ಭಾಗ್ಯ ತಪ್ಪಿಸಿಹೋಗುವಿರಾ ? ನಾನಿನ್ನು ಜೀವಿಸಿರಲಾರೆ, ಸ್ವಾಮಿ, ಈ ಅಭಾಗಿನಿಯ ಅಂತ್ಯ ನಮಸ್ಕಾರ ಸ್ವೀಕರಿಸಿರಿ !” ಎಂದು ಹೇಳುತ್ತಾ ಮೂರ್ಛ ಹೋದರು. ಅದನ್ನು ಕಂಡು ಎಲ್ಲರ ಕಣ್ಣಿನಲ್ಲೂ ನೀರು ಹರಿಯಿತು. ಅಳುತ್ತಾ ನಿಂತ ಲಕ್ಷ್ಮೀನಾರಾಯಣನ ತಲೆಸವರಿ ಆಚಾರರು ಅವನ ಕರಗಳನ್ನು ಅಣ್ಣ ಗುರುರಾಜಾಚಾರರ ಕರದಲ್ಲಿಟ್ಟು “ಇನ್ನು ಮುಂದೆ ಇವನ ಸಂರಕ್ಷಣೆಯ ಭಾರ ನಿಮಗೆ ಸೇರಿದೆ. ಸರಸ್ವತಿಯನ್ನು ಸರಿಯಾಗಿ ನೋಡಿಕೊಳ್ಳಿರಿ” ಎಂದರು. ಆಗ ಅವರಿಗೆ ಅರಿವಾಗದಂತೆಯೇ ಕಣ್ಣೀರು ಸುರಿಯಿತು. ಎಲ್ಲರೂ ದುಃಖ-ಆವೇಗ, ಭಾವನಾಪರವಶರಾಗಿ ಆಚಾರರನ್ನು ಬೀಳ್ಕೊಟ್ಟರು. ರಾಮಚಂದ್ರಾಚಾರರು, ಲಕ್ಷ್ಮೀನರಸಿಂಹಾಚಾರ್ಯ- ರೊಡನೆ ವೆಂಕಟನಾಥರು ಶ್ರೀಮಠಕ್ಕೆ ತೆರಳಿದರು.