|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

೬೧. ವೈಚಾರಿಕ ಕ್ರಾಂತಿ !

ವೇಂಕಟನಾಥರು ಕಾವೇರಿಯ ಸೋಪಾನಪಂಕ್ತಿಯಲ್ಲಿ ಕುಳಿತು ಯೋಚಿಸುತ್ತಿದ್ದು ನಂತರ ಸಂಧ್ಯೆಯನ್ನಾಚರಿಸಿ ಮನೆಗೆ ಬಂದು ಮಡಿಯುಟ್ಟು ದೇವರಿಗೆ ಮಂಗಳಾರತಿ ಮಾಡಿ ನೇರವಾಗಿ ತಮ್ಮ ಕೊಠಡಿಗೆ ತೆರಳಿದರು. 

ಮಠಕ್ಕೆ ನಗುತ್ತಾ ಹೋದ ಪತಿಗಳು ಉದ್ವಿಗ್ನರಾಗಿ, ಚಿಂತಾಕ್ರಾಂತ ಮುಖಮುದ್ರೆಯಿಂದ ಬಂದು ಮೌನವಾಗಿ ಮಂಗಳಾರತಿಮಾಡಿ ಊಟಕ್ಕೂ ಏಳದೆ ಕೊಠಡಿಗೆ ತೆರಳಿದ್ದನ್ನು ಗಮನಿಸಿ ಸರಸ್ವತಮ್ಮ ಪತಿಯ ಚಿಂತೆಗೆ ಕಾರಣವನ್ನರಿಯಲಾಗದೆ ತಳಮಳಗೊಂಡು ಪತಿಯತ್ತ ನಡೆತಂದು “ಸ್ವಾಮಿ, ಬಹಳ ಹೊತ್ತಾಗಿದೆ. ಭೋಜನಕ್ಕೆ ಬಡಿಸಲೇ” ಎಂದರು. ಆಚಾರ್ಯರು “ಸರಸ್ವತಿ, ನೀನು, ಲಕ್ಷ್ಮೀನಾರಾಯಣ ಭೋಜನಮಾಡಿ ವಿಶ್ರಮಿಸಿರಿ, ನನಗೆ ಹಸಿವಿಲ್ಲ” ಎಂದುಸುರಿದರು.367 ಪತಿಗೆ ಪ್ರತಿಹೇಳಲಾರದೆ ಸರಸ್ವತಮ್ಮ ಮಗನಿಗೆ ಭೋಜನಮಾಡಿಸಿ ಮಲಗಿದರು. ಪತಿಯ ಶಯನಗೃಹದಿಂದ ವೀಣೆಯ ಝೇಂಕಾರ ಕೇಳಿಬಂತು. ಸರಸ್ವತಮ್ಮ ಹಣ್ಣು-ಹಾಲಿನೊಡನೆ ಬಂದು “ಸ್ವಾಮಿ, ಭೋಜನವನ್ನೂ ಮಾಡಲಿಲ್ಲ. ಈ ಹಣ್ಣು-ಹಾಲುಗಳನ್ನಾದರೂ ಸ್ವೀಕರಿಸಿ” ಎಂದು ಬೇಡಿದರು. 

ವೇಂಕಟನಾಥರು “ಬೇಡ ಸರಸ್ವತಿ, ನೀನು ವಿಶ್ರಮಿಸು” ಎಂದು ವೀಣಾವಾದನದಲ್ಲಿ ಮಗ್ನರಾದರು. ಪತಿಯು ಭೋಜನಮಾಡಲಿಲ್ಲವೆಂದು ಸರಸ್ವತಮ್ಮನೂ ಉಣದೆ, ಒಂದು ಮೂಲೆಯಲ್ಲಿ ಹಾಸಿಗೆ ಹಾಸಿಕೊಂಡು ಗೋಡೆಗೊರಗಿ ಕುಳಿತು ಪತಿಯ ಮುಖವನ್ನೇ ನೋಡುತ್ತಾ ನಿಟ್ಟುಸಿರುಬಿಟ್ಟರು. 

ವೀಣೆಯ ಮೇಲೆ ಆಚಾರ್ಯರ ಬೆರಳಾಡುತ್ತಿದ್ದಂತೆ ಕರುಣಾರಸವನ್ನು ಹೊರಸೂಸುವ ರಾಗವಾಹಿನಿ ವೀಣೆಯಿಂದ ಹೊರಹೊಮ್ಮಹತ್ತಿತು. ಎಂಥವರ ಮನಸನ್ನೂ ಕರಗಿಸುವ ಆ ಕರುಣಾಪೂರ್ಣವಾಹಿನಿ ಅಲೆಅಲೆಯಾಗಿ ಹರಿದು ಭರದಿಂದ ಆ ಶಯ್ಯಾಗೃಹದಲ್ಲೆಲ್ಲಾ ತುಂಬಿಹೋಯಿತು. ಇಂದು ಪತಿದೇವರ ಮನದಲ್ಲಿ ಅದಾವುದೋ ಚಿಂತೆಯುಂಟಾಗಿದೆ' ಎಂದರಿವಾಯಿತು ಸರಸ್ವತಮ್ಮನವರಿಗೆ ಮನಸ್ಸನ್ನು ಕಲಕುವ ಆ ವೀಣಾವಾದನದ ಮಿಡಿತ ಅವರನ್ನು ತಳಮಳಗೊಳಿಸಿತು. ಮನದಲ್ಲೇ ಮರುಗುತ್ತಾ, ದುಃಖಿಸುತ್ತಾ ಕುಳಿತ ಅವರ ಕಣ್ಣಿಂದ ದುಃಖಾಶ್ರು ಹರಿಯಲಾರಂಭಿಸಿತು. ಹಾಗೆಯೇ ಗೋಡೆಗೊರಗಿ ಪತಿಮುಖವನ್ನೀಕ್ಷಿಸುತ್ತಾ ಕುಳಿತು ಬಿಟ್ಟರು. ಬರಬರುತ್ತಾ ವೀಣಾವಾದನವು ದ್ರುತಗತಿಗೇರಿ ವಿವಿಧ ತಾನಗಳು ಹೊರಹೊಮ್ಮಿದವು. ಆಚಾರ್ಯರು ತಮ್ಮ ಮನದ ದುಃಖವನ್ನೆಲ್ಲಾ ವೀಣೆಯ ಮೂಲಕ ತೋಡಿಕೊಳ್ಳುತ್ತಿರುವಂತೆ ಭಾಸವಾಗುತ್ತಿತ್ತು ! ಬಹಳ ಹೊತ್ತು ಹೀಗೆಯೇ ಸಾಗಿತು ವೀಣಾವಾದನ! ಪಾಪ, ಸರಸ್ವತಮ್ಮನವರಿಗೆ ಆ ದುಃಖಾನುಭೂತಿಯಲ್ಲೂ ಜೊಂಪು ಹತ್ತಿನಿದ್ರಾಪರವಶರಾದರು. 

ಆಚಾರರ ವೀಣಾವಾದನ ನಿಂತಿತು. ನೀರವ ಮೌನ ಅವರನ್ನು ಸ್ವಾಗತಿಸಿತು. ಅವರ ಉದ್ವೇಗ-ದುಃಖಗಳ ಆವೇಗ ಸ್ವಲ್ಪ ಶಮನವಾದಂತಾಯಿತು. ಮನಸ್ಸು ಒಂದು ಸ್ಥಿಮಿತಕ್ಕೆ ಬಂದಿತು. ಆಚಾರ್ಯರು ವೀಣೆಯನ್ನು ಪೀಠದ ಮೇಲೆರಿಸಿ ಪತ್ನಿಯತ್ತ ದೃಷ್ಟಿಹರಿಸಿದರು. ಪಾಪ, ಸರಸ್ವತಮ್ಮ ನಿದ್ರಾವಶರಾಗಿದ್ದಾರೆ. ಕಣ್ಣಿಂದ ಹರಿದ ನೀರು ಗಲ್ಲದ ಮೇಲಿನ್ನೂ ತೇವವಾಗಿದೆ. ಅದನ್ನು ಗಮನಿಸಿದ ಆಚಾರ್ಯರು ಪತ್ನಿಯತ್ತ ಬಂದು ಮೆಲ್ಲನೆ ಸರಸ್ವತಮ್ಮನವರನ್ನು ಶಯ್ಕೆಯಲ್ಲಿ ಮಲಗಿಸಿ, ಶಾಲು ಹೊದ್ದಿಸಿ ತಮ್ಮ ಶಯ್ಕೆಗೆ ಬಂದು ಕುಳಿತರುಳ. “ಪಾಪ, ಕೋಮಲ ಹೃದಯದ ಪತ್ನಿ ತಮ್ಮ ಉದ್ದಗ್ನತೆ-ತೊಳಲಾಟಗಳನ್ನು ಕಂಡು ತಮಗಾಗಿ ತಾನೂ ದುಃಖಿಸುತ್ತಿದ್ದಾಳೆ! ಅವಳ ಮನವೆಷ್ಟು ಮೃದು, ತಮಗಾಗಿ ತಳಮಳಿಸುತ್ತಿರುವ ಈ ಹೆಣ್ಣು ಎಂಥ ಸಾಧಿ, ಪತಿಪರಾಯಣಿ ! ನನ್ನನ್ನೆಷ್ಟು ಪ್ರೀತಿಸುತ್ತಿರುವಳು. ಇಂಥ ಅನುಕೂಲಳೂ, ಗುಣವತಿಯೂ ಆದ ಸರಸ್ವತಿಯನ್ನು ತ್ಯಜಿಸಿ ನಾನು ಸನ್ಯಾಸಿಯಾಗಬಲ್ಲೆನೇ?” ಎಂದಾಲೋಚಿಸುತ್ತಿರುವ ವೆಂಕಟನಾಥರ ಮನಸ್ಸಿನಲ್ಲಿ ವೈಚಾರಿಕ ಕ್ರಾಂತಿಯುಂಟಾಯಿತು! 

ಅವರ ಮನದಲ್ಲಿ ಸುಧೀಂದ್ರಗುರುಗಳ ಒಂದೊಂದು ನುಡಿಯೂ ಸುಳಿದಾಡಹತ್ತಿತ್ತು. “ಗುರುಪಾದರಿಗೆ ನನ್ನಲ್ಲಿ ಅದೆಷ್ಟು ಅಭಿಮಾನ ! ನನಗೆ ಸಕಲಶಾಸ್ತ್ರಗಳ ಪಾಠಹೇಳಿ, ಎಲ್ಲದರಲ್ಲೂ ನನ್ನನ್ನೇ ಮುಂದುಮಾಡಿ, ಅಸಾಧಾರಣ ಮಾನಮಯ್ಯಾದೆ ಮಾಡುತ್ತಿದ್ದಾರೆ. ಅವರ ಶಿಷ್ಯವಾತ್ಸಲ್ಯ ಅಸಾಧಾರಣ, ಜಗನ್ಮಾನ್ಯವಾದ ಸರ್ವಜ್ಞ ಸಿಂಹಾಸನಕ್ಕೆ ಅವರ ಉತ್ತರಾಧಿಕಾರಿ ನಾನಾಗಬೇಕೆಂದು ಬಯಸುತ್ತಿರುವರಲ್ಲ! ಅವರು ನನ್ನ ಹಿತವನ್ನೇ ಬಯಸುತ್ತಿರುವ ದಯಾಳುಗಳು. ನಿಜ “ಹಿತಂ ಮನೋಹಾರಿ ಚ ದುರ್ಲಭಂ ವಚಃ !” ಈ ಸಂಸಾರ ಅಶಾಶ್ವತ, ಅದರಲ್ಲೇ ತಲ್ಲೀನರಾದರೆ ಆತ್ರೋದ್ಧಾರವಾಗುವುದೆಂತು ? ನಾನು ಶ್ರೇಷ್ಠ `ಗ್ರಂಥಕಾರನಾಗಬೇಕು, ದೈತಸಿದ್ಧಾಂತಸ್ಥಾಪಕನಾಗಬೇಕೆಂದವರು ಇಚ್ಛಿಸುತ್ತಿದ್ದಾರೆ. ವಿಚಾರಮಾಡಿದರೆ ಪರಮಹಂಸನಾಗೆಂದು ನನಗವರು ಹಿತವಾದುದನ್ನೇ ಉಪದೇಶಿಸಿದ್ದಾರೆ. ಆದರೆ ನನಗದು ಮನೋಹರವೆನಿಸುತ್ತಿಲ್ಲ ! ಹಿತವಾದುದು ಎಂದಿಗೂ ಮನೋಹರವಾಗಿರಲಾರದು. ಮನೋಹರವಾದುದು, ನಿಜವಾದ ಹಿತವಾಗಲಾರದು. ಅವರು ಹೇಳಿದ್ದರಲ್ಲಿ ತಪ್ಪೇನಿದೆ? ನಾನಿಂದು ಒಂದು ಸಣ್ಣ ವರ್ತುಲದಲ್ಲಿದ್ದೇನೆ. ಅದೇ ಸರ್ವಸ್ವವೆಂದು ಭಾವಿಸಿದ್ದೇನೆ ! ಅವರು ಈ ಸಣ್ಣ ವರ್ತುಲದಿಂದ ನನ್ನನ್ನು ವಿಶಾಲವಾದ ವ್ಯಾಪಕವಾದ ವರ್ತುಲದಲ್ಲಿ ಮೆರೆಸಬಯಸಿದ್ದಾರೆ ! ನನಗೇಕೆ ಅವರ ಮಾತು ರುಚಿಸುತ್ತಿಲ್ಲ ? ಅದಕ್ಕೆ ಸಂಸಾರದಲ್ಲಿನ ಮೋಹ ಕಾರಣವೇ ? ಇನ್ನೂ ನನ್ನಲ್ಲಿ ವೈರಾಗ್ಯವು ಮನೆಮಾಡದಿರುವುದು ಕಾರಣವೋ? ಅಥವಾ ಸರಸ್ವತಿಯ ರೂಪಲಾವಣ್ಯ ಅವಳ ಅಪಾರವಾದ ಪ್ರೇಮವೇ ಕಾರಣವೋ ? 

ಇಲ್ಲ ನಾನು ಸರಸ್ವತಿಯ ಬಾಹ್ಯಸೌಂದರ್ಯದಿಂದ ಮೋಹಿತನಾಗಿಲ್ಲ. ಅದು ಅಶಾಶ್ವತ, ಎಂದಾದರೊಂದುದಿನ ಅದು ಕಣ್ಮರೆಯಾಗಿ ವೃದ್ಧಾಪ್ಯ ತಲೆದೋರುವುದು ಅನಿವಾರ್ಯ ! ಅವಳ ಬಾಹ್ಯಸೌಂದರ್ಯಕ್ಕೆ ನಾನು ಮರುಳಾಗಿಲ್ಲ, ಅದಕ್ಕಿಂತ ಅವಳ ಹೃದಯಸೌಂದರ್ಯ, ನಿಷ್ಕಳಂಕ ಪ್ರೇಮ, ಶೀಲ, ಸಚ್ಚಾರಿತ್ರಗಳು ನನ್ನನ್ನು ಅವಳತ್ತ ಸೆಳೆಯುತ್ತಿವೆ. ಪ್ರೇಮಿಸುವುದು ತಪ್ಪೇ ? ಹೂಂ, ಸರಸ್ವತಿಯೂ ಹಿಂದೊಮ್ಮೆ ಇದೇ ಪ್ರಶ್ನೆಯನ್ನು ಕೇಳಿದಳು ! ಇದು ಯುಗಯುಗಗಳಿಂದಲೂ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ ! ಇದಕ್ಕೆ ಉತ್ತರವೇನು ? 

ಪ್ರೇಮವೆಂದರೇನು ? ನಿರ್ಮಲವಾದ ಪ್ರೀತಿ, ಸ್ನೇಹ, ಭಕ್ತಿಗಳೇ ಪ್ರೇಮವೆನಿಸುವುದು. ಪ್ರೇಮವನ್ನು ಯಾರಲ್ಲಿ ಹೇಗೆ ಮಾಡಬೇಕು ? ಅದರ ಪರಿಪೂರ್ಣತೆಯು ಅದರಿಂದುಂಟಾಗುವ ಫಲಗಳನ್ನವಲಂಬಿಸಿದೆ. ಪ್ರೇಮಕ್ಕೆ ಉತ್ತಮ ಪಾತ್ರವಾವುದು ? ಮಾಧವನೇ, ಮಾನಿನಿಯೇ? ಮಡದಿಯಲ್ಲಿ ಮಾಡುವದು ಪ್ರೇಮವೇ, ಕಾಮವೇ? ಪವಿತ್ರಪ್ರೇಮಕ್ಕೆ ಪತ್ನಿಯು ಸರಿಯಾದ ಪಾತ್ರಳೆನಿಸುವಳೆ ? ನಾವು ಪ್ರೇಮವೆಂದು ಕರೆದರೂ ಅದು ಪತ್ನಿಯಲ್ಲಿ ಕಾಮವಾಗಿಯೇ ಪರಿಣಮಿಸುವುದಲ್ಲವೇ ? ಪ್ರೇಮಕ್ಕೆ ಪಾತ್ರವಾದುದು ಉತ್ತಮವಾಗಿರಬೇಕು. ಪರಿಪೂರ್ಣವಾದುದಾಗಿರಬೇಕು. ಸರ್ವಶಕ್ತವಾಗಿರಬೇಕು, ಅವಿನಾಶಿಯಾಗಿಬೇಕು. ಪ್ರೇಮಮಾಡಿದವನನ್ನು ಸಲಹಲು - ಉದ್ದರಿಸಲು ಸಮರ್ಥವಾಗಿರಬೇಕು. ಅಂದಮೇಲೆ ಅಶಾಶ್ವತವಾದ ಪಾಂಚಭೌತಿಕದೇಹ ವಿಶಿಷ್ಟಳಾದ ಪತ್ನಿಯು ಅಂಥ ನಿಷ್ಕಾಮಪ್ರೇಮಕ್ಕೆ ಪಾತ್ರಳಾಗಲು ಸಾಧ್ಯವೇ ? ನಾನು, ನನ್ನದು, ನನ್ನ ಮನೆ, ನನ್ನ ಮಗ, ನನ್ನ ಮಡದಿ ಎಂದು ತಿಳಿದಿರುವ ಇದ್ಯಾವುದೂ, ನಾನು ಸಹ ಶಾಶ್ವತವಲ್ಲವಷ್ಟೇ ? ಅಂದಮೇಲೆ ಅಶಾಶ್ವತಪಾತ್ರದಲ್ಲಿ ಪ್ರೇಮವು ವಿಹಿತವಾದೀತೇ ? ಹೀಗೆ ಅಶಾಶ್ವತವಾದ ಪಾತ್ರದಲ್ಲಿ ಮಾಡುವ ಪ್ರೇಮವು ಅದು ನಷ್ಟವಾದ ಮೇಲೆ ಆ ಪ್ರೇಮವೇ ದುಃಖರೂಪತಾಳಿ ಪ್ರೇಮಮಾಡಿದವನನ್ನು ಅಗಾಧದುಃಖದಲ್ಲಿ ಮುಳುಗಿಸಿಬಿಡುವುದು. ಅದರಿಂದ ಪ್ರೇಮಮಾಡಿದವನ ಉದ್ಧಾರವೆಂದಿಗೂ ಆಗದು. ಅಂತೆಯೇ ಶಾಸ್ತ್ರಗಳು ಪ್ರೇಮಕ್ಕೆ ಉತ್ತಮ ಪಾತ್ರ ಭಗವಂತನೆಂದು ಸಾರುವುವು.

ಪರಮಾತ್ಮನು ದೋಷದೂರನಾಗಿದ್ದಾನೆ. ಅನಂತಕಲ್ಯಾಣಗುಣಮಂದಿರನಾಗಿದ್ದಾನೆ. ಸರ್ವಸ್ವತಂತ್ರನೂ, ಅಚಿಂತ್ಯಾದ್ಭುತಶಕ್ತನೂ, ಜಗಜ್ಜನ್ಮಾದಿಕಾರಣನೂ, ಪರಿಪೂರ್ಣನೂ, ಭಕ್ತವತ್ಸಲನೂ, ಅನಿಮಿತ್ತಬಂಧುವಾ, ಕರುಣಾಸಮುದ್ರನೂ, ಅಪ್ರತಿಹತಮಹಿಮಾಶಾಲಿಯೂ ಶಶ್ವದೇಕಪ್ರಕಾರನೂ, ಸರ್ವಮುಮಕ್ಷಪಾಸ್ಯನೂ ಸರ್ವೋತ್ತಮನೂ ಆಗಿದ್ದಾನೆ. ಆದ್ದರಿಂದ ಶ್ರೀಹರಿಪರಮಾತ್ಮನೇ ಪ್ರೇಮ(ಭಕ್ತಿ)ಕ್ಕೆ ಉತ್ತಮ ಪಾತ್ರ, ಅವನಲ್ಲಿ ಮಾಡುವ ನಿಷ್ಕಾಮ ಪ್ರೇಮವು ಶಾಶ್ವತನಾದ ಆ ದಯಾಮಯನಲ್ಲೇ ನೆಲೆಸಿ, ಅಭಿವೃದ್ಧಿಸಿ, ಅವನ ಕಾರುಣ್ಯ, ಪ್ರಸಾದಗಳಿಂದ ಸಫಲತೆಯನ್ನು ಪಡೆದು, ಪ್ರೇಮಮಾಡಿದ ಮಾನವನನ್ನು ಸರ್ವವಿಧದಿಂದ ರಕ್ಷಿಸಲು ಸಮರ್ಥವಾಗುವುದು. ಜನನಮರಣರೂಪದ ಸಂಸಾರಚಕ್ರದಲ್ಲಿ ಸಿಲುಕಿ ಕಷ್ಟಪಡುವ ಶರಣಾಗತ ಭಕ್ತರನ್ನು ಉದ್ದರಿಸಿ, ಜೀವನಿಷ್ಠ ಸ್ವರೂಪಾನಂದಾವಿರ್ಭಾವರೂಪ ಶಾಶ್ವತಸುಖ ಆನಂದಗಳನ್ನಿತ್ತು ಕಾಪಾಡುವ ಮಹಾಪ್ರಭುವಿನಲ್ಲಿ ಮಾಡುವ ಪ್ರೀತಿಯೇ ಸಕಲ ಜೀವರ ಶ್ರೇಯಃಪ್ರೇಯಗಳಿಗೆ ಕಾರಣವಾಗಿದೆ! ಹಾಗಾದರೆ ಜಗತ್ತಿನಲ್ಲಿ ಮಡದಿ, ಮಕ್ಕಳು, ತನ್ನದು ಎಂಬ ಅಭಿಮಾನವನ್ನೇಕೆ ಹುಟ್ಟಿಸುವನು ಆ ಸ್ವಾಮಿ? ಆನ್ನೋದ್ದಾರದ ಉತ್ತಮ ಮಾರ್ಗವಾವುದು ? 

ಹೂಂ, ಅದು ಏನಾದರಾಗಲಿ ಈಗ ನನ್ನ ಕರ್ತವ್ಯವೇನು ? ಮನೆಯೇ, ಮಠವೇ ? ನನಗೇಕೆ ಇನ್ನೂ ಸಂಸಾರದಲ್ಲಿನ ಮೋಹ ತೊಲಗಲಿಲ್ಲ! ಗುರುಪಾದರೇಕೆ ನನ್ನನ್ನು ಸನ್ಯಾಸಿಯನ್ನಾಗಿ ಮಾಡಲು ಯತ್ನಿಸುತ್ತಿದ್ದಾರೆ? ನಾನೀಗ ಏನುಮಾಡಲಿ ? ಇಲ್ಲಿ ಇರೋಣವೆಂದರೆ ಒಂದು ಒಂದು ದಿನ ಗುರುವರರು ನನ್ನನ್ನು ಸನ್ಯಾಸಿಯನ್ನಾಗಿಸುವರು. ಇದ್ದರೆ.... ಸನ್ಯಾಸಿಯಾಗ- ಬೇಕಾಗುವುದು, ಇಲ್ಲಿಂದ ಹೊರಟುಹೋಗೋಣವೆಂದರೆ.... ಕಳ್ಳನಂತೆ ಗುರುಗಳನ್ನು ಧಿಕ್ಕರಿಸಿ ಓಡಿಹೋದನೆಂದು ಜನ ನಿಂದಿಸುವರು, ಗುರುಗಳು ಕೋಪಗೊಂಡು ಶಾಪಕೊಡುವರು ! ಸ್ತೋತ್ತಮರ ದ್ರೋಹ, ಶಾಪ, ನನ್ನನ್ನು ಸುಮ್ಮನೆ ಬಿಡುವುದೇ? ಹಾಯ್, ಹಾಯ್ ! ಇದೆಂತಹ ಕಷ್ಟಪರಿಸ್ಥಿತಿ ಬಂದೊದಗಿತು? ಇರಲೂ ಸಾಧ್ಯವಿಲ್ಲ. ಹೋಗಲೂ ಸಾಧ್ಯವಿಲ್ಲ! ಈಗ ನಾನೇನು ಮಾಡಲಿ ? ಮುಂತಾಗಿ ಚಿಂತೆಗೊಳಗಾದ ವೇಂಕಟನಾಥರು ಚಟಪಟಿಸಹತ್ತಿದರು.