ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
೬೦. ಸನ್ಯಾಸಕ್ಕೆ ಕರೆ
ಮಧ್ವನವಮೀ ಕಾಠ್ಯಕ್ರಮಗಳೆಲ್ಲ ಮುಗಿದು ಅಂದು ರಾತ್ರಿ ಮಾಲಿಕಾಮಂಗಳಾರತಿ-ಮಂತ್ರಾಕ್ಷತಾ ಪ್ರದಾನಗಳಾದ ಮೇಲೆ ಶ್ರೀಸುಧೀಂದ್ರಗುರುಗಳು ಆತ್ಮೀಯ ಪಂಡಿತರೊಡನೆ ಮಾತನಾಡುತ್ತಾ ವೇಂಕಟನಾಥರ ಗ್ರಂಥರಚನೆ, ಅವರ ಅನುವಾದ ಚಾತುರಾದಿಗಳನ್ನು ಕಂಡು ತಮಗಾದ ಆನಂದವನ್ನು ಹೇಳಿ ವೇಂಕಟನಾಥರನ್ನು ಅಭಿನಂದಿಸಿ ಕಳುಹಿಸಿ ವಿಶ್ರಾಂತಿ ಪಡೆದರು.
ಅಂದು ರಾತ್ರಿ ಮುಗಿದು ದಶಮಿ ಬೆಳಗಿನಝಾವ ಶ್ರೀಸುಧೀಂದ್ರರು ಒಂದು ಸ್ವಪ್ನವನ್ನು ಕಂಡರು. ಸ್ವಪ್ನದಲ್ಲಿ ಶ್ರೀಮೂಲರಾಮಚಂದ್ರದೇವರು ಪ್ರತ್ಯಕ್ಷರಾಗಿ “ಸನ್ಯಾಸಿಕುಲತಿಲಕ ! ನಿನ್ನ ಸೇವೆಯಿಂದ ಸುಪ್ರೀತನಾಗಿದ್ದೇನೆ. ನಿನ್ನ ಪ್ರಿಯಶಿಷ್ಯ ವೆಂಕಟನಾಥನು ನನ್ನ ಪರಮಭಕ್ತ, ನನ್ನ ಪೂಜೆಗಾಗಿಯೇ ಅವನು ಅವತರಿಸಿದ್ದಾನೆ ! ಅವನು ಬಹುಲೋಕಕಲ್ಯಾಣ ಮಾಡಬೇಕಾಗಿದೆ. ಅವನಿಗೆ ಪರಮಹಂಸಾಶ್ರಮವನ್ನು ಕರುಣಿಸಿ ನನ್ನ ಹೆಸರಿಟ್ಟು ಅನುಗ್ರಹಿಸು” ಎಂದು ಆಜ್ಞಾಪಿಸಿ ಅದೃಶ್ಯನಾದನು. ಆ ಕೂಡಲೇ ಜಟಾ(ಜೂಟ)ಧಾರಿಗಳಾಗಿ ಯೋಗದಂಡ-ಕಮಂಡಲುಗಳಿಂದ ಅಲಂಕೃತರಾದ ಶ್ರೀವೇದವ್ಯಾಸ ದೇವರು ಶ್ರೀಯವರಿಗೆ ದರ್ಶನವಿತ್ತು “ನೀನು ಮಾಡುತ್ತಿರುವ ವೇದಾಂತಶಾಸ್ತ್ರ ಪ್ರಸಾರದಿಂದ ನಾವು ಮುದಿಸಿದ್ದೇವೆ. ವೆಂಕಟನಾಥನಿಂದ ನಮ್ಮ ವೇದಾಂತವು ಜಗತ್ತಿನಲ್ಲಿ ಬೆಳಗಬೇಕಾಗಿದೆ. ಅವನಲ್ಲಿ ನಾವು ಸದಾ ಸನ್ನಿಹಿತರಾಗಿದ್ದೇವೆ. ಅವನು ಜ್ಞಾನಪ್ರಸಾರಕ್ಕಾಗಿಯೇ ಪ್ರವೃತ್ತವಾದ ನಮ್ಮ ಹಂಸವಂಶದೀಪಕನಾಗಿ ಬೆಳಗಬೇಕಾಗಿದೆ. ಅವನ ಅವತಾರವಾ ಅದಕ್ಕಾಗಿಯೇ ಆಗಿದೆ. ನೀನು ಅವನಿಗೆ ಪರಮಹಂಸಾಶ್ರಮವನ್ನು ದಯಪಾಲಿಸು” ಎಂದು ಸೂಚಿಸಿ ಅದೃಶ್ಯರಾದರು. ಸ್ವಪ್ನದಲ್ಲಿಯೇ ಉಭಯರೂಪದ ಶ್ರೀಹರಿಯ ದರ್ಶನದಿಂದ ಆನಂದಿಸುತ್ತಿದ್ದ ಸುಧೀಂದ್ರರಿಗೆ ಶ್ರೀಮಧ್ವಾಚಾರೈರ ದರ್ಶನವಾಯಿತು.
ದ್ವಾತ್ರಿಂಶಲ್ಲಕ್ಷಣೋಪೇತವಾದ ಆದಿಗುರುಗಳಾದ ಶ್ರೀಮದಾನಂದತೀರ್ಥ ಭಗವತ್ಪಾದರ ದರ್ಶನದಿಂದ ರೋಮಾಂಚಿತವಾಗಿ ಸಾಷ್ಟಾಂಗವೆರಗಿನಿಂದ ಸುಧೀಂದ್ರರನ್ನು ಕಂಡು ಮಂದಹಾಸಬೀರುತ್ತಾ ಆಚಾರರು “ಪ್ರೀತ್ಯಾಸ್ಪದರೇ, ನಮ್ಮ ವಿದ್ಯಾ ಸಿಂಹಾಸನದಲ್ಲಿ ಮಂಡಿತರಾದ ನೀವು ಪರವಾದಿ ದಿಗ್ವಿಜಯ, ಗ್ರಂಥರಚನೆ, ಪಾಠ ಪ್ರವಚನ, ಸಿದ್ಧಾಂತ ಸ್ಥಾಪನಾದಿಗಳಿಂದ ನಮ್ಮನ್ನು ಬಹುವಾಗಿ ಸೇವಿಸುತ್ತಿದ್ದೀರಿ, ನಿಮ್ಮ ಶಿಷ್ಯ ವೇಂಕಟನಾಥನೂ ನಮ್ಮ ಮಹಾಪೀಠದಲ್ಲಿ ರಾಜಿಸಿ, ಅಸದೃಶ ಟೀಕಾ-ಟಿಪ್ಪಣಿಗಳಿಂದ ದೈತಸಿದ್ಧಾಂತವು ಆಚಂದ್ರಾರ್ಕಸ್ಥಾಯಿಯಾಗುವಂತೆ ಮಾಡಲೆಂದೇ ಅವತರಿಸಿದ್ದಾನೆ. ಅವನಲ್ಲಿ ನಾವು ಸದಾ ಸನ್ನಿಹಿತರಾಗಿ ಅನುಗ್ರಹಿಸುತ್ತಿದ್ದೇವೆ. ಅವನು ನಮ್ಮ ವಿಜಯವನ್ನು ವಿವರಿಸಿ ಗ್ರಂಥರಚಿಸಿ, ಅನುವಾದಮಾಡಿ ಅಪಾರ ಸೇವೆ ಸಲ್ಲಿಸಿದ್ದಾನೆ. ಅದಕ್ಕಾಗಿ ಅವನನ್ನು ನಮ್ಮ ವೇದಾಂತ ಸಾಮ್ರಾಜ್ಯದಲ್ಲಿ ಮೆರೆಯಿಸಲು ಸಂಕಲ್ಪಿಸಿದ್ದೇವೆ. ಅವನಿಗೆ ನೀವು ಶೀಘ್ರವಾಗಿ ತುರಾಶ್ರಮವನ್ನು ಕೊಟ್ಟು ನಮ್ಮ ಮಹಾಸಂಸ್ಥಾನವನ್ನು ಒಪ್ಪಿಸಿಕೊಡಬೇಕು” ಎಂದು ಆಜ್ಞಾಪಿಸಿ ಕಣ್ಮರೆಯಾದರು.
ಶ್ರೀಗಳವರು ತಟ್ಟನೆ ಮೇಲೆದ್ದು ಸ್ವಷ್ಟಾರ್ಥವನ್ನು ಮಥಿಸಹತ್ತಿದರು. ಅವರ ದೇಹ ರೋಮಾಂಚನಗೊಂಡಿತು. ಕಣ್ಣಿನಿಂದ ಆನಂದಬಾಷ್ಪ ಹರಿಯಿತು. “ನಾನೆಂಥ ಭಾಗ್ಯಶಾಲಿ ! ಶ್ರೀಮೂಲರಘುಪತಿ, ಶ್ರೀವೇದವ್ಯಾಸದೇವರು, ಶ್ರೀಮದಾಚಾರರ ದರ್ಶನಭಾಗ್ಯ ಪಡೆದೆನಲ್ಲ ! 'ಸಿದ್ಧಂ ನಃ ಸಮೀಹಿತು' ಗುರು ಪಾದರಾದ ಶ್ರೀವಿಜಯೀಂದ್ರರು ನನಗೆ ಆಜ್ಞಾಪಿಸಿದ್ದನ್ನೇ ಶ್ರೀಹರಿವಾಯುಗಳೂ ಅಪ್ಪಣೆ ಮಾಡಿದ್ದಾರೆ ! ನಿಜ, ನಮ್ಮ ಗುರುಗಳ ಮಾತು ಸತ್ಯ ! ಲೋಕಕಲ್ಯಾಣ ಮಾಡುತ್ತಾದೈತಸಿದ್ಧಾಂತದ ವಿಜಯವೈಜಯಂತಿಯನ್ನು ಜಗತ್ತಿನಲ್ಲೆಲ್ಲಾ ಮೆರೆಸಲೆಂದು ಅವತರಿಸಿರುವ ದೇವಾಂಶ ಸಂಭೂತರೇ ನನ್ನ ಪ್ರಿಯಶಿಷ್ಯರು. ಅತಿ ಬೇಗ ಅವರಿಗೆ ಪರಮಹಂಸಾಶ್ರಮವಿತ್ತು ಶ್ರೀಸರ್ವಜ್ಞರ ವೇದಾಂತಸಾಮ್ರಾಜ್ಯದಲ್ಲಿ ಅವರು ಮರೆಯುವುದನ್ನು ನೋಡಿ ಆನಂದಿಸಬೇಕು” ಎಂದು ನಿಶ್ಚಯಿಸಿ, ಶಯ್ಕೆಯಿಂದೆದ್ದು ನಿತ್ಯಕರ್ಮಗಳಲ್ಲಿ ಆಸಕ್ತರಾದರು.
ಮಾಘ ಶುಕ್ಲ ದ್ವಾದಶೀ ಅನಧ್ಯಯನವಾದ್ದರಿಂದ ವೇಂಕಟನಾಥಚಾರರು ತಮ್ಮ ಶಯನಗೃಹದಲ್ಲಿ ಪವಡಿಸಿದ್ದಾರೆ. ಆಗತಾನೇ ಜೊಂಪು ಹತ್ತಿದೆ. ಸರಸ್ವತಮ್ಮ ಹಣ್ಣು-ಹಾಲಿನೊಡನೆ ಒಳಗೆ ಬಂದು ಪತಿ ನಿದ್ರೆಯಲ್ಲಿರುವುದನ್ನು ಗಮನಿಸಿ ಹಣ್ಣು-ಹಾಲುಗಳನ್ನು ಮಂಚದ ಪಕ್ಕದ ಪೀಠದ ಮೇಲಿಟ್ಟು ಪತಿಯ ಹತ್ತಿರ ಕುಳಿತರು. ಈಗ ಹತ್ತಾರು ದಿನಗಳಿಂದ ಅವರಿಗೆ ಅದೇನೋ ಅನಿವರ್ಚನೀಯ ಸಂತೋಷ-ಉಲ್ಲಾಸಗಳಾಗುತ್ತಿವೆ. ಪತಿಯ ಗ್ರಂಥರಚನೆ, ಅನುವಾದ, ಗುರುಗಳು, ಪಂಡಿತರು ಪತಿಯನ್ನು ಪ್ರಶಂಸಿಸಿದ್ದು, ಗೌರವಿಸಿದ್ದು - ಇವೆಲ್ಲ ಅವರ ಈ ಉಲ್ಲಾಸ-ಆನಂದ-ತೃಪ್ತಿಗಳಿಗೆ ಕಾರಣವಾಗಿದೆ.
ಸರಸ್ವತಮ್ಮನವರ ಹೃದಯಪಟಲದಲ್ಲಿ ಹಿಂದಿನ ಮಧುರ ನೆನಪುಗಳು ಒಂದಾದ ಮೇಲೊಂದರಂತೆ ಚಲಿಸತೊಡಗಿದವು. ಆಚಾರರೊಡನೆ ತಮ್ಮ ವಿವಾಹಃ ಅದರ ಸಡಗರ, ವೈಭವ, ಸಂಭ್ರಮಗಳು, ಗೃಹಪ್ರವೇಶ, ಕಾವೇರಿಪಟ್ಟದಲ್ಲಿನ ತಮ್ಮ ಮಧುರ ದಾಂಪತ್ಯ ಜೀವನ; ಸಂಸಾರದ ರಸನಿಮಿಷಗಳು, ಪತಿಯು ಮಾಡುತ್ತಿದ್ದ ಅಪಾರಪ್ರೇಮ, ಅವರ ಪಾಂಡಿತ್ಯ-ಪ್ರತಿಭೆ, ವೀಣಾವಾದನಚಾತುರ, ಲಕ್ಷ್ಮೀನಾರಾಯಣ ಜನನ, ದಾರಿದ್ರಾನುಭವ ಬಡತನದ ಕಹಿನೆನಪುಗಳು, ಆಚಾರರ ಭಗವದ್ಭಕ್ತಿ, ಶ್ರದ್ಧೆ, ನಿಷ್ಕಾಮಕರ್ಮದೀಕ್ಷೆ, ಅವರ ಉಪದೇಶಗಳು, ಬಡತನದಲ್ಲಿಯೂ ಪತಿಯ ಪ್ರೇಮದಲ್ಲಿ ತಾವು ಸಂತೋಷದಿಂದ ನಲಿಯುತ್ತಿದ್ದುದು, ಭಗವಂತನ ಅನುಗ್ರಹ, ಗುರುಸುಧೀಂದ್ರರ ಸನ್ನಿಧಿಗೆ ಆಗಮನ, ಪತಿಯು ವಿದ್ಯಾಭ್ಯಾಸ, ಪಾಠಪ್ರವಚನ, ದೇಶಸಂಚಾರ, ವಾದಿನಿಗ್ರಹದಿಂದ ಪತಿಗೆ ದೊರೆತ ಅಪಾರಕೀರ್ತಿ, ಸನ್ಮಾನಗಳು ಇವೆಲ್ಲ ಸರಸ್ವತಿಯವರ ನೆನಪಿನ ಸುಳಿಯಲ್ಲಿ ನಲಿಯಹತ್ತಿದವು.
ಸರಸ್ವತಮ್ಮ ಪತಿಯ ಸುರಸುಂದರ ಮುಖವನ್ನು ಅವಲೋಕಿಸುತ್ತಾ ಮೈಮರೆತು ಕುಳಿತಿದ್ದಾರೆ. ಪತಿಯ ವದನದಲ್ಲಿ ದರಹಾಸ ಮಿನುಗುತ್ತಿದೆ. ಆ ಮನಮೋಹಕ, ಸುರಸುಂದರ ವದನಾರವಿಂದವನ್ನು ಎಷ್ಟು ನೋಡಿದರೂ ತೃಪ್ತಿಯಿಲ್ಲ. ಪತಿಯ ಸೌಂದರ್ಯವನ್ನೆಲ್ಲಾ ತಮ್ಮ ನೇತ್ರಗಳಿಂದ ಹೀರುತ್ತಾ ರೋಮಾಂಚಿತರಾಗಿ ಅಮುದಾನಂದವಾರಿಧಿಯಲ್ಲಿ ಮುಳಿಗೇಳುತ್ತಾ ಹೊರಗಿನ ಪರಿವೆಯಿಲ್ಲದೆ ಕುಳಿತಿದ್ದಾರೆ ಸರಸ್ವತಮ್ಮ ! ಆಗ ಮೆಲ್ಲನೆ ಕಣ್ಣೆರೆದು ನಗುಮೊಗದಿಂದ ಆಚಾರರು “ತೃಪ್ತಿಯಾಯಿತೆ ?” ಎಂದರು. ತಮ್ಮ ಭಾವನಾಪರವಶತೆಯನ್ನು ಪತಿಗಳು ಅರಿತರೆಂದು ಆ ಸಾಧಿ ನಸುನಾಚಿದರು.
ವೇಂ : ಇದೇನು ತನ್ಮಯತೆ ಸರಸ್ವತಿ ? ನನ್ನ ಮುಖವನ್ನೆಂದೂ ನೋಡಿಲ್ಲದವಳಂತೆ ತದೇಕದೃಷ್ಟಿಯಿಂದ ಪರಿಕಿಸುತ್ತಿರುವೆ? ಸರ : ಪ್ರಾಣನಾಥ, ನಿಮ್ಮ ಕರಪಿಡಿದ ದಿನದಿಂದಲೂ ಇದು ಬೆಳೆದುಬಂದ ಹವ್ಯಾಸ !
ವೇಂ : ಓಹೋ, ಹಾಗೇನು, ಸರಿ, ನನ್ನ ಮುಖದಲ್ಲಿ ಅದೇನು ಕಂಡಿತು ಎಂದು ಅವಲೋಕಿಸುತ್ತಿದ್ದೀಯೆ? ಸರ : ಲೋಕದ ಸಕಲಸೌಂದರಸಾರವೇ ನಿಮ್ಮ ಮುಖಕಮಲದಲ್ಲಿ ಅಡಗಿದೆ! ಸ್ವಾಮಿ, ಈ ಸುರಚಿರರೂಪರಸಾದನ ಮಾಡಿದಂತೆಲ್ಲಾ ಪ್ರೇಮಮತ್ತಳಾಗಿ ನನ್ನನ್ನು ನಾನೇ ಮರೆತುಬಿಡುವಂತಾಗುವುದು!
ವೇಂ : (ನಗುತ್ತಾ) ಸರಸ! ಬರಬರುತ್ತಾ ನಿನಗೆ ಪ್ರೇಮದಹುಚ್ಚು ಅಧಿಕವಾಗುತ್ತಾ ಬಂತು. ಇಷ್ಟು ತನ್ಮಯತೆ ಒಳಿತಲ್ಲ.
ಸರ : ಹಾಗೇಕೆ ಹೇಳುವಿರಿ, ಎನ್ನಿನಿಯ! ಓರ್ವ ಸತಿಯು ಪತಿಯನ್ನು ಪ್ರೀತಿಸುವುದು ತಪ್ಪೆ?
ವೇಂ : ತಪ್ಪಲ್ಲ ಸರಸ್ವತಿ ! ಅದಕ್ಕೆ ಒಂದು ಮಿತಿಯಿರಬೇಕು.
ಸರ : ಪ್ರೀತಿಯು ದಿನೇ ದಿನೇ ವರ್ಧಿಸಬೇಕು. ಪ್ರೇಮವೇ ಜೀವಿತದ ಸರ್ವಸ್ವವಾಗಬೇಕೆಂದು ಶಾಸ್ತ್ರಗಳೂ ಸಾರುವುದಿಲ್ಲವೇ ?
ವೇಂ : ನಿಜ. ಅದು ಭಗವಂತನಲ್ಲಿರಬೇಕಾದ ಭಕ್ತಿಯನ್ನು ಕುರಿತಾಗಿದೆ.
ಸರ : ಸರ್ವಜ್ಞಕಲ್ಪರಾದ ಶ್ರೀಜಯಮುನಿಗಳಂಥ ತಪಸ್ವಿಗಳೂ “ಈಶ್ವರ ಭಕ್ತಿರ್ನಾಮ ನಿರವಧಿಕಾನಂತಾನವದ್ಯಕಲ್ಯಾಣ- ಗುಣತ್ವಜ್ಞಾನಪಾರ್ವಕಃ ಸ್ವಾತವಾತ್ಮೀಯ ಸಮಸ್ತವಸ್ತುಭೋಪನೇಕಗುಣಾಧಿಕಃ ಅಂತರಾಯಸಹಸ್ರೇಣಾಪ್ರಪ್ರತಿಬದ್ಧ ನಿರಂತರ ಪ್ರೇಮ ಪ್ರವಾಹಃ” ಎಂದು ಹೇಳಿರುವುದಾಗಿ ಮೊನ್ನೆ ತಾವು ಅಣುಮಧ್ವವಿಜಯ' ಮಂಗಳಕಾಲದಲ್ಲಿ ಹೇಳಿದಿರಲ್ಲವೇ ಸ್ವಾಮಿ ?
ವೇಂ : (ಸತಿಯ ಮಾತಿನ ಮರ್ಮವರಿತು) ಅದು ಪರಮಾತ್ಮ ವಿಷಯಕವಾದುದು. ಅದಕ್ಕೂ ನಿನ್ನ ನಡವಳಿಕೆಗೂ
ಮಹದಂತರವಿದೆ !
ಸರ : ನಿಜ, 'ನ ಹಿ ದೃಷ್ಟಾಂತೇ ಸರ್ವಸಾಮ್ಯಂ'! ಭಕ್ತಿಯೆಂದರೆ ಪ್ರೇಮವಷ್ಟೆ? ಅದು ಹೇಗಿರಬೇಕು? ವೇಂ : “ಮಾಹಾತ್ಮ ಜ್ಞಾನಪೂರ್ವಸ್ತು ಸುದೃಢಸ್ತರ್ವತೋಧಿಕಃ | ಸ್ನೇಹೋ ಭಕ್ತಿರಿತಿ ಪ್ರೋ ಮುಕ್ತಿರ್ನಚಾನ್ಯಥಾ ' ಭಗವಂತನಲ್ಲಿ ಮಹಾತ್ಮ ಜ್ಞಾನಪೂರ್ವಕವಾಗಿ, ಎಲ್ಲದರಕ್ಕಿಂತಲೂ ಅಧಿಕವೂ ದೃಢವಾ ಆದ ಸ್ನೇಹ (ಪ್ರೇಮ್)ವನ್ನು ಮಾಡಬೇಕು. ಅದರಿಂದಲೇ ಜೀವರ ಮುಖ್ಯ ಗುರಿಯಾದ ಮೋಕ್ಷವು (ಶಾಶ್ವತಸುಖವು ಲಭಿಸುವುದು. ಅದಕ್ಕೆ ಭಗವಂತನ ಪ್ರೇಮವೇ ಕಾರಣವಾದ್ದರಿಂದ ಅದು ಮುಖ್ಯ!
ಸರ : (ನಸುನಕ್ಕು) ಸರಿ. ಜೀವರ ಗುರಿ ಮೋಕ್ಷ. ಅಂದರೆ ಶಾಶ್ವತಾನಂದಾನುಭವ! ಅಲ್ಲವೇ ?
ವೇಂ : ಅಹುದು.
ಸರ : ಆ ಶಾಶ್ವತಾನಂದಾನುಭವವೇ ಸರ್ವಜೀವರ ಗುರಿಯಾಗಿರುವಾಗ ಅವರಲ್ಲೊಬ್ಬಳಾದ ನಾನು ಅದಕ್ಕಾಗಿ ಹಂಬಲಿಸುವುದು ತಪ್ಪೇ ? ಸತಿಗೆ ಪತಿಯೇ ದೇವರೆಂದು ದೊಡ್ಡವರು ಹೇಳುವರು. ಪತಿರೂಪದ ದೇವರನ್ನು ಒಲಿಸಿಕೊಂಡು ತನ್ನ ಮೂಲಗುರಿಯಾದ ಶಾಶ್ವತಸುಖಸಾಧನೆii ಸತಿಯು ಹೇಗೆ ವರ್ತಿಸಬೇಕು ? ಪತಿಯ ಸದ್ಗುಣಾದಿರೂಪ ಮಹಿಮೆಗಳನ್ನರಿತು ತನಗೆ ಪ್ರಿಯವಾದ ಮನೆ, ಮಗ - ಮುಂತಾದ ಸಮಸ್ತ ವಸ್ತುಗಳಲ್ಲಿ ಮಾಡುವ ಪ್ರೀತಿಗಿಂತ ಅತ್ಯಧಿಕವಾಗಿ, ಎಷ್ಟೇ ಅಡ್ಡಿ ವಿಡೂರಗಳು ಬಂದೊದಗಿದರೂ ಅದಕ್ಕೆ ಕುಗ್ಗದೆ ತನ್ನ ಪ್ರೀತಿಯಹೊಳೆಯನ್ನು ಪತಿಯತ್ತ ಹರಿಸುವುದೇ ಸತಿಯ ಶಾಶ್ವತಾನಂದಕ್ಕೆ ಮುಖ್ಯವಾದ್ದರಿಂದ - ಶಾಸ್ಪೋಕ್ತವಾದ ಈ ಉಪದೇಶವನ್ನೇ ನಾನು ತಪ್ಪದೇ ಅನುಸರಿಸಲು ಯತ್ನಿಸುತ್ತಿದ್ದೇನೆ. ಅಷ್ಟೆ !
ವೇರಿ :
: (ಪತ್ನಿಯ ವಾದವೈಖರಿಯಿಂದ ವಿಸ್ಮಿತರಾಗಿ, ಮಂದಹಾಸ ಬೀರುತ್ತಾ) ಸರಿ, ಸರಿ ! ನಿನ್ನೀಹುಚ್ಚಿಗೆ ಮದ್ದಿಲ್ಲ !
ಸರ : (ನಗುತ್ತಾ) ನನ್ನೀ ಪ್ರೇಮೋಪಾಸನೆಯನ್ನು ನೀವು ಹೇಗೆ ಬೇಕಾದರೂ ತಿಳಿಯಿರಿ. ಸ್ವಾಮಿ, ನವವಿಧಪ್ರೇಮ (ಭಕ್ತಿ)ದಲ್ಲಿ ಕೊನೆಯದಾದ ಆತ್ಮನಿವೇದನೆಯಲ್ಲಿ ಮಾತ್ರ ನನಗೆ ಅಧಿಕಾರ ! ಚರಣದಾಸಿಗೆ ತನ್ನ ಸರ್ವಸ್ವವನ್ನೂ ಪ್ರೇಮದಿಂದ ಪತಿಯ ಪದತಲದಲ್ಲಿ ಅರ್ಪಿಸುವುದಕ್ಕಿಂತ ಹೆಚ್ಚಿನಭಾಗ್ಯ ಮತ್ತಾವುದಿದೆ ?
ವೇಂ : ಸರಸ ! ನಿನ್ನ ಪ್ರೇಮದ ಪರಾಕಾಷ್ಟತೆಯನ್ನು ಕಂಡು ನನಗೆ ಸಂತೋಷವಾಗಿದೆ ! ಆದರೂ ಎಲ್ಲದಕ್ಕೂ ಮಿತಿಯಿರಬೇಕು. ಅತಿಸರ್ವತ್ರ ವರ್ಜಯೇತ್ !
ಸರ : ಇದು ಅತಿಶಯವೇನಲ್ಲ ಸ್ವಾಮಿ ! ನನ್ನ ಹೃದಯಾಂತರಾಳದಿಂದ ಹೊರಹೊಮ್ಮುವ ಪ್ರೇಮವನ್ನು ಸರಿಯಾಗಿ ಅರ್ಪಿಸುತ್ತಿಲ್ಲವೆಂಬ ನೋವು ನನ್ನನ್ನು ಬಾಧಿಸುತ್ತದೆ !
ವೇಂ : ಸರಸ ! ನಿನ್ನೀ ಪ್ರೇಮೋನ್ಮಾದ ನಿನ್ನನ್ನು ಅದಾವ ಸಂಕಟಕ್ಕೆ ಗುರಿ ಪಡಿಸುವುದೋ ಎಂದು ನಾನು ಹೆದರುತ್ತಿದ್ದೇನೆ.
ಸರ : ನಿಮ್ಮ ಪ್ರೇಮವೊಂದು ಸದಾ ನನಗೆ ದೊರಕುತ್ತಿದ್ದರೆ, ಎಂತಹ ಸಂಕಟ-ಕಷ್ಟ-ನಷ್ಟಗಳು ಬಂದರೂ ನಾನು ಎದುರಿಸಲು ಸಿದ್ಧ ಸ್ವಾಮಿ !
ವೇಂ : ಸರಸ್ವತಿ ! ದೈವದುರ್ವಿಪಾಕದಿಂದ ಒಂದು ವೇಳೆ ನನ್ನ ವಿಯೋಗವು ನಿನಗುಂಟಾದರೆ....ಆಗ ಪ್ರೇಮೋನ್ಮಾದಿನಿಯಾದ ನಿನ್ನ ಗತಿಯೇನು ?
ಸರ : (ಕಳವಳದಿಂದ) “ನಾಶೀಲಂ ಕೀರ್ತಯೇತ್-ಶಾಂತಂ ಪಾಪಂ ಕೆಟ್ಟ ನುಡಿಲಗಳನ್ನಾಡಿದಿರಿ ನನ್ನೊಡೆಯ !
ವೇಂ : ಬೆಂಕಿ ಎಂದಾಕ್ಷಣ ಬಾಯಿ ಸುಡುವುದಿಲ್ಲ! ಅಂಥ ಪ್ರಸಂಗ ಬಂದರೆ ನೀನು ಮಹಾದುಃಖಕ್ಕೆ ಗುರಿಯಾಗಬೇಕಾದೀತಲ್ಲ - ಎಂದು ನಾನು ಮರುಗುತ್ತಿದ್ದೇನೆ ಅಷ್ಟೇ.
ಸರ : (ದೃಢಸ್ಥರದಲ್ಲಿ ನನ್ನ ದೇವರೇ! ಒಂದು ವೇಳೆ ತಮ್ಮ ವಿಯೋಗದ ವಿರಹ ದುಃಖವನ್ನನುಭವಿಸಬೇಕಾದ ಸಂದರ್ಭ ಬಂದರೆ, ಆ ತಕ್ಷಣವೇ ನನ್ನ ಶರೀರದಲ್ಲಿ ಪ್ರಾಣವಿರಲಾರದು ! ಆ ದುಃಖವನ್ನೆದುರಿಸುವ ಮೊದಲೇ ಪ್ರಾಣತ್ಯಾಗ ಮಾಡಿಬಿಡುತ್ತೇನೆ. ಇದು ಸತ್ಯ !
ವೇಂ : (ಕನಿಕರದಿಂದ ಅವಳ ಬಾಯಿಯ ಮೇಲೆ ಕರವಿರಿಸಿ) ಛೇ, ಛೇ, ಅಭದ್ರ ನುಡಿಯದಿರು ಸರಸ್ವತಿ !
ಸರ : (ಕಣ್ಣೀರು ಸುರೀಸುತ್ತಾ) ನಿಮ್ಮನ್ನಗಲಿ ನಾನು ಜೀವಿಸಲಾರೆ ಸ್ವಾಮಿ.
ವೇಂ : ಸರಸ್ವತಿ, ಅಂಥ ಅವಿವೇಕಕ್ಕೆ ಮನಗೊಡದಿರು. “ಸಹಸಾ ವಿಧಧೀತ ನ ಕ್ರಿಯಾಮವಿವೇಕಃ ಪರಮಾಪದಾಂಪದು ಎಂಬ ಭಾರವಿಯ ಉಕ್ತಿಯನ್ನು ನೀನರಿಯೆಯಾ? ಸರಸ್ವತಿ, ಕೇಳು - ನೀನು ನನ್ನನ್ನು ಎಷ್ಟು ಗಾಢವಾಗಿ ಪ್ರೀತಿಸುವೆಯೋ, ನಿನ್ನನ್ನು ನಾನು ಅಷ್ಟೇ ಹೃದಯಾಂತರಾಳದಿಂದ ಪ್ರೇಮಿಸುತ್ತಿದ್ದೇನೆ ! ಇದು ನಿನಗೆ ಗೊತ್ತಿಲ್ಲವೇ ?
ಇಂತು ಹೇಳಿ ಆಚಾರರು ಸರಸ್ವತಿಯನ್ನು ಹತ್ತಿರ ಕೂಡಿಸಿಕೊಂಡು ಅವಳ ಮುಂಗುರುಳು ಸವರಿ, ಗಲ್ಲಹಿಡಿದು ತಮ್ಮ ಪ್ರೀತಿಯನ್ನು ತೋರಿದರು. ಪತಿಯ ಈ ಒಂದೇ ಪ್ರೀತಿಯ ನುಡಿ, ಕ್ರಿಯೆ ಅವಳನ್ನು ಪುಳಕಗೊಳಿಸಿತು. ಸರಸ್ವತಮ್ಮ ಇದೊಂದೇ ಮಾತು ಸಾಕು! ಧನ್ಯಳಾದೆ ಸ್ವಾಮಿ, ನಿಮ್ಮಿ ನುಡಿ ನನ್ನನ್ನು ಪರವಶಗೊಳಿಸಿ ಆನಂದತುಂದಿಲಳನ್ನಾಗಿಸುತ್ತಿದೆ!” ಎಂದು ಮುದಿಸಿದರು.
ವೇಂ : (ನಕ್ಕು) ಸರಸ್ವತಿ ! ಬರೇ ಪ್ರೇಮಾಲಾಪದಲ್ಲಿ ಮಗ್ನಳಾಗಿರುವೆಯೋ ಅಥವಾ ಹಸಿದಿರುವ ನನಗೇನಾದರೂ ನೀಡುವೆಯೋ?
ಆಗ ಸರಸ್ವತಮ್ಮ ನಾಚಿ ನಾನೆಂಥ ಹುಚ್ಚಿ, ಹಾಲು-ಹಣ್ಣು ತಂದಿರುವುದನ್ನು ಕೊಡದೆ ಕುಳಿತಿರುವೆನಲ್ಲ !' ಎಂದುದ್ಧರಿಸಿದರು, ಆಚಾರರು ಕೈಕಾಲು ತೊಳೆದು ಬಂದು ಸರಸ್ವತಿ ನೀಡಿದ ಹಣ್ಣು-ಹಾಲು ಸ್ವೀಕರಿಸಿ ಸಂಧ್ಯೆಗೆ ಕಾವೇರಿಯತ್ತ ನಡೆದರು.
ಶ್ರೀಗಳವರ ಅಪ್ಪಣೆಯಂತೆ ದ್ವಾರಪಾಲಕನು ವೆಂಕಟನಾಥಾಚಾರ್ಯರನ್ನು ಶ್ರೀಯವರಿದ್ದ ಏಕಾಂತಮಂದಿರಕ್ಕೆ ಕರೆದುತಂದು ಬಿಟ್ಟು ಹೊರಟನು. ಆಚಾರೈರು ಶ್ರೀಯವರಿಗೆ ನಮಸ್ಕರಿಸಿದರು. ಗುರುಗಳು. “ಬನ್ನಿ ಆಚಾರರೇ” ಎಂದು ಅವರನ್ನು ಹತ್ತಿರ ಕೂಡಿಸಿಕೊಂಡರು. ಆಚಾರರು ಅಪ್ಪಣೆಯಾಯಿತಂತೆ” ಎಂದರು. ಶ್ರೀಗಳವರು “ನಿಜ, ನಿಮ್ಮೊಡನೆ ಏಕಾಂತವಾಗಿ ಒಂದು ಮಹತ್ವವಿಚಾರ ಮಾತನಾಡಬೇಕಾಗಿದೆ” ಎಂದಾಗ ಆಚಾರರು “ಅಪ್ಪಣೆಯಾಗಲಿ” ಎಂದು ವಿಜ್ಞಾಪಿಸಿದರು.
ಶ್ರೀಸುಧೀಂದ್ರರು ಹಿಂದೆ ಶ್ರೀವಿಜಯೀಂದ್ರರು ತಮಗೆ ಅಪ್ಪಣೆ ಮಾಡಿದ್ದ ವಿಚಾರ, ಶ್ರೀಮೂಲರಾಮ, ವೇದವ್ಯಾಸ, ಶ್ರೀಮದಾಚಾರರು ಸ್ವಪ್ನದಲ್ಲಿ ತಮಗೆ ಆಜ್ಞಾಪಿಸಿದ ವಿಚಾರಗಳನ್ನು ತಿಳಿಸಿ “ಆಚಾರ! ನೀವು ಮಹಾಸುಕೃತಶಾಲಿಗಳು. ಶ್ರೀಹರಿವಾಯು-ಗುರುಪಾದರ ವಿಶೇಷಾನುಗ್ರಹಕ್ಕೆ ಪಾತ್ರರು. ನೀವು ನಮ್ಮಿಂದ ಪರಮಹಂಸಾಶ್ರಮವನ್ನು ಸ್ವೀಕರಿಸಿ, ನಮ್ಮ ಉತ್ತರಾಧಿಕಾರಿಗಳಾಗಿ ಆಚಾರ್ಯರ ವೇದಾಂತ ಸಾಮ್ರಾಜ್ಯವನ್ನು ಪರಿಪಾಲಿಸಬೇಕು.358 ಎಂದು ಆಚಾರರಿಗೆ ಸನ್ಯಾಸಕ್ಕೆ ಕರೆನೀಡಿದರು. ಗುರುಗಳ ಮಾತು ಕೇಳಿ ವೇಂಕಟನಾಥರು ಮೂಕವಿಸ್ಮಿತರಾದರು. ಹೃದಯ ಕಂಪಿಸಿತು. ಮೈ ಬೆವರಿತು, ಸ್ವಲ್ಪ ಹೊತ್ತು ಏನೂ ಹೇಳಲು ತೋಚದೆ ಕುಳಿತಿದ್ದು ಅನಂತರ ಗುರುಗಳಲ್ಲಿ ವಿಜ್ಞಾಪಿಸಿದರು.
ವೇಂಕಟ : ಗುರುದೇವ ! ಪರಮಾಶ್ಚರ್ಯ ಸಂಗತಿಯನ್ನು ಹೇಳೋಣವಾಯಿತು. ಜ್ಞಾನಪ್ರಸಾರಕ್ಕಾಗಿ ಶ್ರೀಹಂಸನಾಮಕ ಪರಮಾತ್ಮನಿಂದ ಪ್ರವೃತ್ತವಾಗಿ, ಜೀವೋತ್ತಮರಾದ ಪವಮಾನಾವತಾರರಾದ ಶ್ರೀಮಧ್ವಾಚಾರರು; ಇಂದ್ರಾಂಶರೂ, ಸರ್ವಜ್ಞಕಲ್ಪರೂ ಆದ ಜಯತೀರ್ಥಮುನಿಗಳು; ದೇವಾಂಶರೂ, ಜಗಜೇತಾರರೂ ಆದ ಶ್ರೀಕವೀಂದ್ರ-ವಿಬುಧೇಂದ್ರತೀರ್ಥರ; ತಪಸ್ವಿಗಳಾದ ಶ್ರೀಸುರೇಂದ್ರತೀರ್ಥರು; ಜ್ಞಾನಿನಾಯಕರೂ, ಅಜಯ್ಯರೂ ಆದ ಶ್ರೀಮಧ್ವಜಯೀಂದ್ರತೀರ್ಥರು ಮತ್ತು ತಮ್ಮಂಥ ಜ್ಞಾನಿಕುಲತಿಲಕರಾದ ಮಹನೀಯರು ಅಲಂಕರಿಸಿದ ಈ ವೇದಾಂತ ಸಾಮ್ರಾಜ್ಯವೆಲ್ಲಿ? ಸಾಮಾನ್ಯನಾದ ನಾನೆಲ್ಲಿ? ತ್ರಿಲೋಕಮಾನ್ಯವಾದ ಇಂಥ ವೇದಾಂತಸಾಮ್ರಾಜ್ಯಕ್ಕೆ ನಾನು ಅಧಿಪತಿಯಾಗುವುದೇ? ಮೇಲಾಗಿ ಷಡ್ಡರ್ಶನಾಚಾರರೂ, ಚತುಷಷ್ಟಿಕಲಾಪ್ರವೀಣರೂ ಅನಿತರ ಸಾಧಾರಣ ಪ್ರಬಂಧ ಪ್ರಣಯನ ಪಟುಗಳಾದ ನಿಮ್ಮ ಜ್ಞಾನ (ವಿದ್ಯೆ)ವೆಲ್ಲಿ? ಅಲ್ಪನಾದ ನಾನೆಲ್ಲಿ? ಅದಕ್ಕೂ ನನಗೂ ಅಜಗಜಾಂತರ ವ್ಯತ್ಯಾಸವಿದೆ. ಅದನ್ನು ಕನಸಿನಲ್ಲಿ ನೆನೆಯುವುದೂ ಅವಿವೇಕವಾದೀತು! ಆ ಮಹಾಭಾರವನ್ನು ಹೊರಲು ನಾನು ಸಮರ್ಥನಲ್ಲ ಸಾಮಾನ್ಯ ಝರಿಯನ್ನು ದಾಟಲಾಗದವನು. ಅಸಾಧ್ಯ ಭಾರವನ್ನು ಹೊತ್ತು ಅಪಾರ ಸಮುದ್ರವನ್ನು ದಾಟಲು ಪ್ರಯತ್ನಿಸಿದಂತೆ ಹಾಸ್ಯಾಸ್ಪದವಾಗುವುದಿಲ್ಲವೇ ? ಯಾವ ವಿವೇಕಿಯು ತಾನೇ ಇಂಥ ಸಾಹಸಮಾಡಿಯಾನು.
ಸುಧೀಂದ್ರರು : (ಮಂದಹಾಸದಿಂದ) ಆಚಾರ ! ವೇದಾಂತ ಸಾಮ್ರಾಜ್ಯವಾಳುವುದು ಸಮುದ್ರತರಣದಂತೆ ಕಷ್ಟಸಾಧ್ಯವೆಂದು ಭಾವಿಸಬೇಕಾಗಿಲ್ಲ, ನೌಕೆಯ ಸಹಾಯದಿಂದ ಸಮುದ್ರತರಣವು ಸುಲಭವಾಗುವುದಷ್ಟೆ? ಶಮ, ದಮ, ಧೈರ್ಯ ಮತ್ತು ಪಾಂಡಿತ್ಯವೆಂಬ ನಾವೆಗಳಿವೆ. ಅದಕ್ಕೆ ನಮ್ಮ ಅನುಗ್ರಹ ರೂಪದ ಶ್ರೇಷ್ಠ ಧ್ವಜ (ಪಟ)ವಿದೆ! ಅಂದಮೇಲೆ ಸಮುದ್ರ ದಾಟುವಂತೆ ವೇದಾಂತಸಾಮ್ರಾಜ್ಯವೆಂಬ ಸಮುದ್ರತರಣ ಸುಗಮವಾಗುವುದು. ನೀವು ಚಿಂತಿಸದೆ ತುರಾಶ್ರಮ ಸ್ವೀಕರಿಸಿ ಶ್ರೀಮದಾಚಾರರ ವಿದ್ಯಾಸಾಮ್ರಾಜ್ಯವನ್ನು ಪರಿಪಾಲಿಸಿರಿ.
ವೇಂಕಟ : (ಅಧೀರರಾಗಿ) ಮಹಾಸ್ವಾಮಿ, ಆಶ್ರಮಗಳಲ್ಲಿ ತುರಾಶ್ರಮವು ಶ್ರೇಷ್ಠವಾದುದು, ಅದಕ್ಕೆ ಅರ್ಹತೆ ಬೇಕು. ವೈರಾಗ್ಯವಿರಬೇಕು! “ಯದಾ ವಿರಕ್ತಃ ಪುರುಷಃ ಪ್ರಜಾಯತೇ | ತದ್ಭವ ಸನ್ಯಾಸನಿಬದ್ಧನಿಶ್ಚಯಃ ” - ಮಾನವನು ವಿರಕ್ತನಾದಾಗ ಮಾತ್ರ ಸನ್ಯಾಸಧರ್ಮವನ್ನು ಸ್ವೀಕರಿಸಲು ಯೋಗ್ಯನಾಗುತ್ತಾನೆ - ಎಂದು ಪ್ರಮಾಣವಿದೆ. ನನಗಿನ್ನೂ ವೈರಾಗ್ಯ ಬಂದಿಲ್ಲ!
ಆಚಾರರ ಮಾತು ಕೇಳಿ ಸುಧೀಂದ್ರರು ಅವರಿಗೆ ಬಹುವಿಧವಾಗಿ ಉಪದೇಶಮಾಡಿ ಸನ್ಯಾಸವನ್ನು ಸ್ವೀಕರಿಸಬೇಕೆಂದು
ತಿಳಿಸಿದರು.
ವೇಂಕಟ : ಸ್ವಾಮಿ, ನಾನಿನ್ನೂ ಸಂಸಾರಿ, ತರುಣ, ನನ್ನ ಪತ್ನಿ ಸರಸ್ವತಿಯು ಇನ್ನು ಸಣ್ಣವಳು. ಬಾಲಕನಾದ ಲಕ್ಷ್ಮೀನಾರಾಯಣನಿಗೆ ಇನ್ನೂ ಉಪನಯನವೂ ಆಗಿಲ್ಲ. ಸನ್ಯಾಸಿಯಾಗಲು ನನಗಿಷ್ಟವಿಲ್ಲ. ಆದರಿಂದ ದಯವಿಟ್ಟು ಬಲಾತ್ಕರಿಸಬಾರದಾಗಿ ಬೇಡುತ್ತೇನೆ.
ಸುಧೀಂದ್ರರು : ಜ್ಞಾನ-ಭಕ್ತಿಸಂಪನ್ನರಾದ ನೀವು ಹೀಗೆ ಹೇಳಬಹುದೇ? ವೈರಾಗ್ಯವು ನಿಮ್ಮಲ್ಲಿದೇ ಇದೆ. ಆದ್ದರಿಂದ ಪರಮಹಂಸಾಶ್ರಮವನ್ನು ಸ್ವೀಕರಿಸಿರಿ.
ವೇಂಕಟ : ಗುರುದೇವ, ಪೂಜ್ಯ ವಿಜಯೀಂದ್ರರು ಮತ್ತು ನೀವು ನಿಮ್ಮ ಪೂರ್ವಾಶ್ರಮ ವಂಶೀಕಳಾದ ಸರಸ್ವತಿಯೊಡನೆ ನನ್ನ ವಿವಾಹಮಾಡಿಸಿದಿರಿ, ನಾವು ಚೆನ್ನಾಗಿ ಬಾಳುತ್ತಿದ್ದೇವೆ. ಈಗ ತಾವೇ ನಮ್ಮ ಮಧುರ ಸಂಸಾರವನ್ನು ಮುರಿಯಬಹುದೇ ?
ಸುಧೀಂದ್ರರು : ಆಚಾರ, ಸಂಸಾರವೇ ಜೀವನದ ಇತಿಮಿತಿಯಲ್ಲ, ಸಂಸಾರದ ಉದ್ದೇಶವೇನು? ಪುನ್ನಾಮಕ ನರಕ ಭಯದಿಂದ ಪಾರಾಗಲು ವಂಶೋದ್ಧಾರಕ ಪುತ್ರ ಪ್ರಾಪ್ತಿಯೇ ಅಲ್ಲವೇ ? ನೀವು ಸಂಸಾರಿಗಳಾಗಿ ವಂಶದೀಪಕ ಪುತ್ರನನ್ನು ಪಡೆದಿದ್ದೀರಿ. ಇನ್ನೂ ಸಂಸಾರದಲ್ಲೇ ತೊಳಲುವುದು ನಿಮ್ಮಂಥ ಜ್ಞಾನಿಗಳಿಗೆ ಭೂಷಣವಲ್ಲ !
ವೇಂಕಟ : ಸ್ವಾಮಿ, ಇರಬಹುದು, ನನ್ನ ಪತ್ನಿ ಸರಸ್ವತಿಯು ನನ್ನನ್ನು ತನ್ನ ಬಹಿಃಪ್ರಾಣವೆಂದೇ ತಿಳಿದಿದ್ದಾಳೆ. ಅತಿಯಾಗಿ ನನ್ನನ್ನು ಅಗಲಿ ಜೀವಿಸಲಾರಳು. ಕ್ಷಮಿಸಿ. ನನಗೆ ಸನ್ಯಾಸ ಬೇಡ. ನೀವು ಹೆಚ್ಚು ನಿರ್ಬಂಧಿಸಿದರೆ, ಪಾಠಪ್ರವಚನಮಾಡಿಕೊಂಡು ತಮ್ಮ ಸೇವೆ ಮಾಡುವ ಸೌಭಾಗ್ಯ ನನಗಿಲ್ಲವೆಂದು ತಿಳಿದು ಮಠವನ್ನು ಬಿಟ್ಟು ಹೋಗಬೇಕಾಗುತ್ತದೆ.
ವೇಂಕಟನಾಥರ ಮಾತು ಕೇಳಿ ಸುಧೀಂದ್ರರು ದಿನ್ಮೂಢರಾದರು. ಆಚಾರರಿಗೆ ಸಂಸಾರದ ಇತಿ-ಮಿತಿಗಳನ್ನು ತಿಳಿಸಲಾಶಿಸಿ ಹೀಗೆ ಉಪದೇಶಿಸಿದರು -
“ಆಚಾರರೇ, ಮೋಕ್ಷಸಾಧನ ಸಹಾಯಕವಲ್ಲದ ಗೃಹಸ್ಥಾಶ್ರಮದಲ್ಲಿ ನಿಮಗೆ ಇದೆಂತಹ ಅನುರಾಗ ! ಜ್ಞಾನಿಯಾದ ಪುರುಷನಿಗೆ ಹೆಂಡತಿ ಯಾರು ? ಮಗನಾರು ? ಸಂಪರ್ಕವು ದುಃಖದಾಯಕವೇ ಅಹುದು. ಇದಕ್ಕೆ ಕಪಿರಾಜ ವಾಲಿ, ಧರ್ಮರಾಜರು ಉದಾಹರಣೆಯಾಗಿದ್ದಾರೆ ! ಇದು ನಿಮಗೆ ತಿಳಿಯದೇ ?363 ಹೆಂಗಸರಿಗಾಗಿ ಅವಳನ್ನು ಸಂತೋಷಪಡಿಸಲು ಪತಿಯು ಧನ ಯಾಚಿಸಲು ಧನಿಕಾಭಾಸನ ಮನೆಗೆ ಹರಿಹಾಯ್ದು ಅವನ ದೋಷಗಳನ್ನೇ ಗುಣವೆಂದು ಸ್ತುತಿಸಬೇಕಾಗುವುದು. ಒಕ್ಕಣ್ಣನನ್ನು ಕಾರ್ಣಾಂತಾಯತಲೋಚನನೆಂದೂ, ಕೃಷಣನಿಧಿಯನ್ನು ಔದಾರಾಶ್ರಯ ದಾನಶೂರನೆಂದೂ, ಸಂಧ್ಯೆಯನ್ನೇ ಆಚರಿಸದವನನ್ನು ಯಜ್ಞಯಾಗಾದಿರತನೆಂದೂ, ಅನಾಚಾರಿಯನ್ನು ಸದಾಚಾರಿತನೆಂದೂ ಸ್ತುತಿಸಬೇಕಾಗುವುದು. ಭಯಂಕರನಾದ ಮನುಷ್ಯನಲ್ಲಿಗೆ ಹೋಗಿ ಅವನನ್ನು ಶಮಗುಣಸಂಪನ್ನನೆಂದೂ, ವಿಷಯಲಂಪಟನನ್ನು ವೈರಾಗ್ಯ ನಿಧಿಯೆಂದೂ, ಕಾರಾಕಾರಜ್ಞಾನಹೀನನನ್ನು ಸುಂದರನೆಂದೂ, ವೃದ್ಧನನ್ನು ತರುಣನೆಂದೂ, ದೋಷಪೂರ್ಣನನ್ನು ಸಾಧುವೆಂದೂ, ಅವಿನೀತನನ್ನು ವಿನೀತನೆಂದೂ, ಕುರೂಪಿಯನ್ನು ಸಲ್ಲಕ್ಷಣಶೋಭಿತನೆಂದೂ ಹೊಗಳಬೇಕಾಗುವುದು.364
ಅಷ್ಟೇ ಅಲ್ಲ; ಓಂಕಾರಜ್ಞಾನವೂ ಇಲ್ಲದವನನ್ನು ಸಕಲವೇದಶಾಸ್ತ್ರನಿಪುಣನೆಂದೂ, ದ್ವೇಷಭೂಯಿಷ್ಟನನ್ನು ಅಧಿಕ ಸ್ನೇಹಪೂರ್ಣನೆಂದೂ, ಅತ್ಯಂತದಡ್ಡನನ್ನು ಜ್ಞಾನಿಶ್ರೇಷ್ಠನೆಂದೂ, ಮನಬಂದಂತೆ ಬಡಬಡಿಸುವ ಭಂಡನನ್ನು ಅತಿಗಂಭೀರ ಭಾವವುಳ್ಳವನೆಂದೂ ಹೊಗಳಬೇಕಾಗುವುದು. ಹೋಗಬಾರದವರಲ್ಲಿಗೆ ಹೋಗಿ, ಅನರ್ಹರನ್ನು ಪೂಜಿಸುತ್ತಾ, ಹೊಗಳುತ್ತಾ, ಅವರು ಮಾಡುವ ಅಗೌರವವನ್ನು ಸಹಿಸಿಕೊಂಡು ತನ್ನ ಮನಸ್ಸನ್ನು ಕೇಶಪಡಿಸಿ, ಆ ಅಯೋಗ್ಯರು ನೀಡಿದ ಅಲ್ಪಹಣವನ್ನು ತಂದುಕೊಟ್ಟರೂ ಹೆಂಗಸರಿಗೆ ತೃಪ್ತಿಯಿಲ್ಲ. ಆದ್ದರಿಂದ ಈ ಸ್ತ್ರೀಮೋಹದಲ್ಲಿ ಮುಳುಗಿರುವುದು ನಿಮಗೆ ತರವಲ್ಲ.
ಹೀಗೆ ಸಂಸಾರದಲ್ಲಿಯೇ ಅತ್ತಿತ್ತ ಸುಳಿದಾಡುತ್ತಾ, ಅದರಲ್ಲೇ ಮಗ್ನರಾಗಿರುವ ನಿಮಗೆ ವೇದಾರ್ಥಸಂಪತ್ತು ಹೇಗೆ ದೊರೆತೀತು ? ಸಂಸಾರಿಗೆ ವೇದಾಂತ ಕಾಲಕ್ಷೇಪವು ದುರ್ಘಟವಾಗುವುದು. ಆದ್ದರಿಂದ ಆ ತರುಣಿಯಲ್ಲಿನ ಮೋಹ ಬಿಡಿರಿ ! ಬೇಗ ಲಕ್ಷ್ಮೀನಾರಾಯಣನಿಗೆ ಉಪನಯನಮಾಡಿ ಸನ್ಯಾಸಕ್ಕೆ ಸಿದ್ಧರಾಗಿರಿ.
ವೇಂಕಟ : “ಮಹಾಸ್ವಾಮಿ, ನನ್ನ ಧರ್ಮಪತ್ನಿಯಾದ ಸರಸ್ವತಿಯು ತಾವು ಹೇಳಿದ ಸಾಮಾನ್ಯಸ್ತ್ರೀಯರಂತೆ ಆಶಾಪಿಶಾಚ ಗ್ರಸ್ತಳಲ್ಲ! ಅವಳಿಗೆ ಧನಕನಕವಸ್ತ್ರವಡವೆಗಳ ಮೋಹವಿಲ್ಲ! ತ್ಯಾಗಶೀಲಳವಳು. ಉದಾರಗುಣಸಂಪನ್ನಳು. ಭಾರತದ ಆರನಾರಿಯಲ್ಲಿರಬೇಕಾದ ಸದ್ಗುಣಗಳೆಲ್ಲ ಅವಳಲ್ಲಿ ಕಂಗೊಳಿಸುತ್ತಿವೆ! ಗುರುದೇವ, ಇದುವರೆಗೆ ಯಾರಿಗೂ ತಿಳಿಸದ ಒಂದು ವಿಷಯವನ್ನು ಅರಿಕೆಮಾಡುತ್ತೇನೆ ಕೇಳಿರಿ” ಎಂದು ಹೇಳಿ ತಾವು ಕಾವೇರೀ ಪಟ್ಟಣದಲ್ಲಿರುವಾಗ ಅನುಭವಿಸಿದ ಕಡುಬಡತನದ ಬವಣೆಗಳನ್ನೂ ಆ ಕಾಲದಲ್ಲಿ ಸರಸ್ವತಿಬಾಯಿಯವರು ತೋರಿದ ಸಹನೆ, ಶಾಂತಿ, ತ್ಯಾಗಗಳನ್ನೂ ವಿವರವಾಗಿ ವಿಜ್ಞಾಪಿಸಿ “ಸ್ವಾಮಿ, ಇಂತಹ ತ್ಯಾಗಶೀಲಗಳೂ, ಪತಿಪ್ರೇಮರತಳೂ ಆದ ಸರಸ್ವತಿಯನ್ನು ತ್ಯಾಗಮಾಡಲು ಸಾಧ್ಯವೇ?” ಎಂದು ಕೇಳಿದರು. ವೇಂಕಟನಾಥರ ಮಾತು ಕೇಳಿ ಸುಧೀಂದ್ರತೀರ್ಥರಿಗೆ ದಿಗ್ಧಮೆಯಾಯಿತು. ಆಚಾರ ದಂಪತಿಗಳನುಭವಿಸಿದ ದಾರಿದ್ರವಿಚಾರವರಿತು ಅವರ ಕರಳು ಕತ್ತರಿಸಿ ಬಂದಂತಾಯಿತು. ದುಃಖದಿಂದ ಕಣ್ಣೀರುದುರಿತು. ಗದ್ಗದಕಂಠದಿಂದ “ನಿಮ್ಮ ಕಷ್ಟವನ್ನು ನಮಗೇಕೆ ತಿಳಿಸಲಿಲ್ಲ? ಆ ದುಃಖವನ್ನೆಂತು ಸಹಿಸಿದಿರಿ?” ಎಂದರು.
ವೇಂಕಟ : (ನಿಟ್ಟುಸಿರು ಬಿಟ್ಟು) ಗುರುವರ್ಯ, ಮೊದಲಿನಿಂದಲೂ ನಾನು ಭಾವನಾಜೀವಿ. ಯಾವುದಕ್ಕೂ ಯಾರಿಗೂ ಕೈವೊಡ್ಡಿದವನಲ್ಲ ! ಪರಮಾತ್ಮ ನೀಡಿದ್ದನ್ನೇ ಸ್ವೀಕರಿಸಿ, ಯದೃಚ್ಛಾಲಾಭಸಂತುಷ್ಟಿಯಿಂದ ಜೀವಿಸುತ್ತಾ ಆ ದಾರಿದ್ರಾನುಭವವು ಭಗವತ್ಸಂಕಲ್ಪವೆಂದರಿತು ಯಾರ ಮುಂದೂ ಹೇಳಿಕೊಳ್ಳದೆ ಅನುಭವಿಸಿದೆನು. ನೀವು ನನ್ನ ಗುರುಗಳು, ಶಿಷ್ಯವತ್ಸಲರಾದ್ದರಿಂದ ಇಂದು ಬಾಯಿಬಿಟ್ಟೆ, ಕ್ಷಮಿಸಿ.
ಸುಧೀಂದ್ರರು : 'ಗತಂ ನ ಶೋಚಯೇತ್ಪಾಜ್ಞ' ಕಳೆದುದನ್ನು ನೆನೆದು ದುಃಖಿಸಬಾರದು. ಅದೆಲ್ಲಾ ಶ್ರೇಯಸ್ಸಿಗೆಂದೇ ಭಾವಿಸಿರಿ, ನಮ್ಮ ಆಶೆಯನ್ನು ಪೂರೈಸುವುದಿಲ್ಲವೇ?
ವೇಂಕಟ : ಸ್ವಾಮಿ, ನನ್ನ ಹೃದಯವನ್ನೇ ಬಿಚ್ಚಿ ತೋರಿಸಿದ್ದೇನೆ. ಹೆಚ್ಚೇನು ಹೇಳಲಿ ? ತುರಾಶ್ರಮದಲ್ಲಿ ನನಗಿಚ್ಛೆಯಿಲ್ಲ. ಶಿಷ್ಯನನ್ನು ಕ್ಷಮಿಸಬೇಕು.
ಸುಧೀಂದ್ರರು : ಆಚಾರ್ಯ, ಹಿಂದನೇಕ ವೇಳೆ ನೀವು ಸಕಲ ವೇದಗಳು ಶ್ರೀಹರಿಸರ್ವೋತ್ತಮತ್ವಾದಿ ದೈತಸಿದ್ಧಾಂತವನ್ನೇ ಬೋಧಿಸುವುದೆಂದು ತೋರಿಸಲು ವೇದಗಳಿಗೆ ಭಾಷ್ಯರಚನಮಾಡಬೇಕೆಂದೂ, ಆಚಾರ್ಯರ ಭಾಷ್ಟ್ರಗಳಿಗೆ ಶ್ರೀಜಯಮುನಿಗಳು ರಚಿಸಿರುವ ಟೀಕೆಗಳ ಸರಿಯಾದ ಭಾವವನ್ನು ಪ್ರಕಟಿಸುವ ಟಿಪ್ಪಣಿಗಳನ್ನು ರಚಿಸಿ ದೈತಸಿದ್ಧಾಂತವನ್ನು ಸುಭದ್ರಗೊಳಿಸಬೇಕು ! ಭಾರತೀಯ ಭವ್ಯ ಸಂಸ ತಿ, ಸನಾತನ ಧರ್ಮ, ಸದಾಚಾರಗಳ ಮಹತ್ವವವನ್ನು ತಿಳಿಸಿಕೊಟ್ಟು ಸಜ್ಜನರಿಗೆ ಮಾರ್ಗದರ್ಶನ ಮಾಡಬೇಕೆಂದು ನಿಮಗಿರುವ ಆಶೆಯನ್ನು ಹೇಳಿದಿರಲ್ಲವೇ ?
ವೇಂಕಟ : ಅಹುದು ಸ್ವಾಮಿ, ಇಂದಿಗೂ ನನಗಾ ಆಶೆಯಿದೆ !
ಸುಧೀಂದ್ರರು : (ನಸುನಕ್ಕು ನೀವು ಆಶಿಸಿರುವುದನ್ನು ನೆರವೇರಿಸಲು ಪರಮಹಂಸಾಶ್ರಮಿಗಳಾಗುವುದು ಅತಿಮುಖ್ಯ.
ವೇಂಕಟ : (ನಸುನಕ್ಕು) ಅದೇಕೆ ಸ್ವಾಮಿ? ಈ ಎಲ್ಲ ಕಾರ್ಯವನ್ನೂ ಗೃಹಸ್ಥಾಶ್ರಮಿಯಾಗಿದ್ದೇ ನೆರವೇರಿಸಬಹುದಲ್ಲ ! ಶಾಸ್ತ್ರಗಳೂ “ಧಮ್ಮೋಗೃಹಸ್ಥಾಶ್ರಮೀ” ಎಂದು ಸಾಧನೆಗೆ ಗೃಹಸ್ಥಾಶ್ರಮವೇ ಶ್ರೇಷ್ಠವೆಂದು ಸಾರುವುದಲ್ಲ ! ತಮ್ಮ ಅನುಗ್ರಹವಾದಲ್ಲಿ ತಮ್ಮ ಪಾದದ ಸನಿಹದಲ್ಲಿ ಕುಳಿತು ಆ ಎಲ್ಲ ಕಾರ್ಯಗಳನ್ನೂ ಮಾಡಿ ಪುನೀತನಾಗುತ್ತೇನೆ. ಸನ್ಯಾಸಿಯಾಗೆಂದು ಮಾತ್ರ ನಿರ್ಬಂಧಿಸಬೇಡಿ !
ಶ್ರೀಸುಧೀಂದ್ರರು ವೇಂಕಟನಾಥರ ದೃಢನಿಲುವನ್ನು ಮನದಲ್ಲೇ ಮೆಚ್ಚಿದರು - “ನಾವು ಸನ್ಯಾಸ ವಿಚಾರವಾಗಿ ಇವರಲ್ಲಿ ಪ್ರಸ್ತಾಪಿಸಿದ ವೇಳೆ ಸರಿಯಿಲ್ಲ, ನಾವೀಗ ನಿರಾಶರಾಗಬಾರದು. ಮತ್ತೊಂದು ಶುಭಮುಹೂರ್ತದಲ್ಲಿ ಪ್ರಸ್ತಾಪಿಸದರೆ ಅದು ಸಫಲವಾಗಬಹುದು” ಎಂದಾಲೋಚಿಸಿ, “ಆಚಾರ್ಯ ! ಇದು ನಮ್ಮ ನಿರ್ಬಂಧವಲ್ಲ ! ಶ್ರೀಮೂಲರಘುಪತಿ ವೇದವ್ಯಾಸ-ಆಚಾರ್ಯ ಶ್ರೀಮಧ್ವರ-ಗುರುಪಾದರ ಆದೇಶ ! ಅದನ್ನು ಪಾಲಿಸುವುದು ನಿಮ್ಮ ಧರ್ಮ, ಸಾವಧಾನವಾಗಿ ವಿಚಾರಮಾಡಿ ಹೇಳಿ. ಅವಸರವಿಲ್ಲ” ಎಂದಾಕ್ಲಾಪಿಸಿದರು.
ವೆಂಕಟನಾಥರೂ ನಗುತ್ತಲೇ 'ನನ್ನ ಧರ್ಮವೇನೆಂದು ಆಗಲೇ ವಿಜ್ಞಾಪಿಸಿದ್ದೇನೆ' ಎಂದರುಹಿ, ಶ್ರೀಯವರ ಮಾತನ್ನು ಕೇಳಿಯೂ ಕೇಳದವರಂತೆ ಶ್ರೀಯವರ ಅಪ್ಪಣೆ ಪಡೆದು ಮನದಲ್ಲಿ ಅಪಾರ ಚಿಂತೆಯಿಂದ ಬಳಲುತ್ತಾ ಮನೆಗೆ ಮರಳಿದರು. ಶ್ರೀಸುಧೀಂದ್ರರು ವೆಂಕಟನಾಥರು ತಮಗೆ ತಿಳಿಸದೇ ಊರುಬಿಟ್ಟು ಹೋಗಿಬಿಟ್ಟಾರು ಎಂಬ ಭಯದಿಂದ ಆತ್ಮೀಯರಾದ ಒಬ್ಬಿಬ್ಬರನ್ನು ಅವರ ಮೇಲೆ ಕಣ್ಣಿಟ್ಟು ಕಾಯುವಂತೆ ವ್ಯವಸ್ಥೆ ಮಾಡಿದರು.