ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
೫೭. ಭಟ್ಟಾಚಾರ್ಯ ಪ್ರಶಸ್ತಿ
ಆಗ ಯಜ್ಞನಾರಾಯಣದೀಕ್ಷಿತರು ಸಂಭ್ರಮಾನಂದದಿಂದ ಮೇಲೆದ್ದು “ಧರ್ಮಾಭಿಮಾನಿಗಳೇ ! ನೀವು ನಿಜವಾಗಿ ಭಾಗ್ಯಶಾಲಿಗಳು ! ಶತಶತಮಾನಗಳಿಗೊಮ್ಮೆ ಕಾಣಬಹುದಾದ ಅಪೂರ್ವವಾದವೈಖರಿಯನ್ನು ಕಂಡ ಅದೃಷ್ಟಶಾಲಿಗಳು ನೀವು. ಇದೊಂದು ಅಪೂರ್ವಯೋಗ, ಸಮಕಾಲಿನ ವಿದ್ವನ್ಮಂಡಲಿಯಲ್ಲಿ ಈ ಶತಮಾನದ ಅದ್ವಿತೀಯ ಪ್ರತಿಭಾಶಾಲಿ ಪಂಡಿತರಾದ ವೆಂಕಟನಾಥಾಚಾರರ ಈ ವಾದ ವಿಜಯದಲ್ಲಿ ಪಾಲ್ಗೊಳ್ಳುವ ಭಾಗ್ಯ ನಮಗೆ, ನಿಮಗೆ ಲಭಿಸಿದೆ ! ಆಚಾರ್ಯರು 'ಸಕಲಾಕಲಾವಲ್ಲಭ' ರೆಂಬ ತಮ್ಮ ಬಿರುದನ್ನು ಸಾರ್ಥಕಗೊಳಿಸಿಕೊಂಡು ನಮಗೆಲ್ಲ ಅಪಾರ ಆನಂದವನ್ನುಂಟುಮಾಡಿದ್ದಾರೆ. ವೇಂಕಟನಾಥಾಚಾರರಿಗೆ ನಮ್ಮೆಲ್ಲರ ಹಾರ್ದಿಕ ಧನ್ಯವಾದಗಳನ್ನು ಸಮರ್ಪಿಸುತ್ತೇನೆ ! (ಕರತಾಡನ) ಪ್ರಕೃತ 'ಪಣಬಂಧದಂತೆ ವಿಬುಧಾನಂದರು ತಮ್ಮ ಭಟ್ಟಾಚಾರ ಬಿರುದನ್ನು ಆಚಾರರಿಗೆ ಸಮರ್ಪಿಸಬೇಕೆಂದು ಸೂಚಿಸುತ್ತೇನೆ” ಎಂದು ಹೇಳಿ ಕುಳಿತರು.
ಆಗ ವೇಂಕಟನಾಥರು ಮೇಲೆದ್ದು “ಜಯಾಪಜಯಗಳು ಈಶಾಧೀನ, ಮತ್ತು ಆಯಾಕಾಲಗಳಲ್ಲಿ ಪಂಡಿತರ ಮನೋಧರ್ಮ, ಸ್ಫೂರ್ತಿ, ಪ್ರತಿಭೆ, ವಾದಚಾತುರಗಳನ್ನವಲಂಬಿಸಿ ಜಯಾಪಜಯಗಳು ಜರಗುವುವು. ಶ್ರೀವಿಬುಧಾನಂದರು ಶ್ರೇಷ್ಠ ಪಂಡಿತರು ಮಾತ್ರವಲ್ಲ, ಗುಣಗ್ರಾಹಿಗಳೂ ಆಗಿದ್ದಾರೆ. ಇಂಥ ಮಹಾಪಂಡಿತರೊಡನೆ ವಾದಿಸುವುದೇ ಒಂದು ಮಹಾನಂದ ! ಪಣಬಂಧದಂತೆ ಅವರು 'ಭಟ್ಟಾಚಾರ' ಬಿರುದನ್ನು ತ್ಯಜಿಸಬೇಕಾಗಿಲ್ಲ” ಎಂದರು.
ಅವರ ಮಾತನ್ನಾಲಿಸಿ ಸಮಸ್ತಸಭಾಸದರೂ ಆಚಾರರ ಉದಾರಮನಸ್ಸು ವಿದ್ವಜ್ಜನರಲ್ಲಿನ ಆದರ, ಆದರ್ಶಗಳನ್ನು ಕಂಡು ಆಶ್ಚರಚಕಿತರಾದರು. ವೇಂಕಟನಾಥರ ಮಾತುಕೇಳಿ ವಿಬುಧಾನಂದರ ಕಣ್ಣುಗಳಿಂದ ಆನಂದಾಶ್ರು ಹರಿಯತೊಡಗಿತು. ಮೇಲೆದ್ದು ಆಚಾರ್ಯರನ್ನು ಆಲಂಗಿಸಿ “ಮಹಾನುಭಾವ, ನಿಮ್ಮ ಹೃದಯವೆಷ್ಟು ವಿಶಾಲ ! ಮಹಾಪಂಡಿತರಾಗಿರುವಂತೆ ಉದಾರಗುಣಪೂರ್ಣರೂ ಆಗಿದ್ದೀರಿ. ನಿಮ್ಮಂಥ ಸಹೃದಯರೊಡನೆ ವಾದಿಸಿ ಪರಾಜಿತರಾಗುವುದೂ ಒಂದು ಭಾಗ್ಯ ! ನಾನು ಸ್ವಸಂತೋಷದಿಂದ ಅರ್ಪಿಸುವ “ಭಟ್ಟಾಚಾರ” ಪ್ರಶಸ್ತಿಯನ್ನೂ ಅದರ ಲಾಂಛನವಾದ ಈ ಸುವರ್ಣಸಿಂಹಲಲಾಟ ಕಂಕಣವನ್ನೂ ಸ್ವೀಕರಿಸಬೇಕು” ಎನಲು ವೇಂಕಟನಾಥರು ಅವರನ್ನಾಲಂಗಿಸಿ “ನಿಮ್ಮ ಪ್ರೀತಿಯ ಮಾತು. ಈ ಆಲಿಂಗನವೇ ನನಗೆ ಸಾಕು !” ಎಂದರು.
ಆಗ ರಘುನಾದ ಭೂಪಾಲರು ದೀಕ್ಷಿತರೊಡನೆ ಏಕಾಂತವಾಗಿ ಮಾತನಾಡಿ ಗುರುಗಳಲ್ಲಿ ತಮ್ಮಾಶಯವನ್ನು ವ್ಯಕ್ತಪಡಿಸಿ ಅವರ ಅನುಮತಿ ಪಡೆದು ದರ್ಬಾರಿನ ಪ್ರಮುಖ ಅಧಿಕಾರಿಯ ಕಿವಿಯಲ್ಲಿ ಏನೋ ಹೇಳಿದರು. ಆತ ಅಲ್ಲಿಂದ ನಿಷ್ಟ್ರಮಿಸಿ ಮತ್ತೆ ಒಬ್ಬ ದೂತನಿಂದ ಒಂದು ತಟ್ಟೆಯನ್ನು ಹೊರಿಸಿಕೊಂಡು ಬಂದು ಪ್ರಭುಗಳ ಮುಂದಿಟ್ಟು ನಿಂತ.
ಆಗ ರಘುನಾಥ ಭೂಪಾಲನು ಮೇಲೆದ್ದು “ಧರ್ಮಾಭಿಮಾನಿಗಳೇ ! ವೆಂಕಟನಾಥಾಚಾರ್ಯರು ಇಂದು ಅಮೋಘ ವಿಜಯವನ್ನು ಸಾಧಿಸಿದ್ದು ಮಾತ್ರವಲ್ಲದೆ, ನಿಜವಾದ ವಿದ್ವಾಂಸರು ಹೇಗೆ ವರ್ತಿಸಬಹುದೆಂದು ತೋರಿಕೊಟ್ಟು ಆದರ್ಶರಾಗಿದ್ದಾರೆ. ಪಣಬಂಧದಂತೆ ಶ್ರೀವಿಬುಧಾನಂದರೇ ತಮ್ಮ ಪ್ರಶಸ್ತಿಯನ್ನು ಕೊಟ್ಟು ಗೌರವಿಸಲು ಸಿದ್ಧರಾದರೂ ಸ್ವೀಕರಿಸದೆ, ಇವರು ರಾಜಸಭೆಯ ಗೌರವವನ್ನೂ ರಕ್ಷಿಸಿದ್ದಾರೆ ! ಆಚಾರರೇನೋ ಆ ಪ್ರಶಸ್ತಿ ಬೇಡವೆಂದು ಬಿಟ್ಟರು. ಆದರೆ ತಂಜಾಪುರರಾಜಾಸ್ಥಾನದ ಕೀರ್ತಿಯನ್ನು ಉಳಿಸಿಕೊಳ್ಳುವುದು, ವಿಜಯಿಗಳನ್ನು ಗೌರವಿಸುವುದೂ ನಮ್ಮ ಕರ್ತವ್ಯವಾದ್ದರಿಂದ ನಾವು ಪರಮಸಂತೋಷದಿಂದ ಶ್ರೀವೆಂಕಟನಾಥಾಚಾರರಿಗೆ ಅದೇ “ಭಟ್ಟಾಚಾರ್ಯ” ಎಂಬ ಪ್ರಶಸ್ತಿಯನ್ನು ಸ್ವೀಕರಿಸಿ ನಮ್ಮನ್ನು ಕೃತಾರ್ಥರನ್ನಾಗಿ ಮಾಡಬೇಕೆಂದು ಪ್ರಾರ್ಥಿಸುತ್ತೇವೆ” ಎಂದು ಘೋಷಿಸಿದರು.
ಶ್ರೀಸುಧೀಂದ್ರರು ರಘುನಾಥಭೂಪಾಲನ ಪ್ರಾರ್ಥನೆಯಂತೆ ವೆಂಕಟನಾಥರ ಕರಗಳಿಗೆ ಸುವರ್ಣತೋಡೆಗಳನ್ನು ತೊಡಿಸಿ “ವೆಂಕಟನಾಥಾಚಾರ್ಯರೇ ! ಇಂದಿನಿಂದ ನೀವು “ಮಹಾಭಾಷ್ಯ-ಭಟ್ಟಾಚಾರ್ಯ” ವೆಂಕಟನಾಥಾಚಾರ್ಯರೆಂಬ ಬಿರುದಿನಿಂದ ವಿಖ್ಯಾತರಾಗಿರಿ” ಎಂದು ಆಶೀರ್ವದಿಸಿದರು. ಮಹಾರಾಜರು ಶಾಲು ಜೋಡಿ, ಸಂಭಾವನೆಗಳನ್ನು ನೀಡಿದರು. ದೀಕ್ಷಿತರು ಪುಷ್ಪಹಾರ ಹಾಕಿ “ಇಂಥ ನೂರಾರು ವಿಜಯಮಾಲಿಕೆಗಳು ನಿಮಗೆ ದೊರಕಲಿ” ಎಂದು ಹಾರೈಸಿದರು. ಪಂಡಿತಮಂಡಲಿ “ಮಹಾಭಾಷ್ಯಾಚಾರ, ಸಕಲಕಲಾವಲ್ಲಭ, ಭಟ್ಟಾಚಾರ ಬಿರುದಾಂಕಿತ ಶ್ರೀವೆಂಕಟನಾಥರಿಗೆ ಜಯವಾಗಲಿ” ಎಂದು ಜಯಘೋಷ ಮಾಡಿದರು. ಸಭಾಸದರು ಕರತಾಡನದಿಂದ ತಮ್ಮ ಆನಂದವನ್ನು ವ್ಯಕ್ತಪಡಿಸಿದರು. ಆನಂತರ ಪ್ರಭುಗಳು ಗುರುಗಳಿಂದ ವಿಬುಧಾನಂದರಿಗೂ ಶಾಲುಜೋಡಿ ಹೊದ್ದಿಸಿ ಸಂಭಾವನ ಕೊಡಿಸಿದರು. ತರುವಾಯ ವೆಂಕಟನಾಥರು ವಿಬುಧಾನಂದರು ಸೂಕ್ತರೀತಿಯಿಂದ ತಮ್ಮ ಕೃತಜ್ಞತೆಯನ್ನು ಸಲ್ಲಿಸಿ ಶ್ರೀಗುರುಪಾದರಿಗೆ ನಮಸ್ಕರಿಸಿದರು. ಆನಂತರ ಹರ್ಷದ ವಾತಾವರಣದಲ್ಲಿ ಸಭೆಯ ಕಾರಕ್ರಮವು ಮುಕ್ತಾಯವಾಯಿತು.